ಲಂಕಾಧಿಪತಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವುದು. ರಾವಣ ಖಳನಾಯಕನಾದರೂ ಆತನನ್ನು ಆರಾಧಿಸುವ ಸಂಪ್ರದಾಯ ಕರ್ನಾಟಕದಲ್ಲಿದೆ. ಕೋಲಾರ ಜಿಲ್ಲೆಯ ತಾಯಲೂರು, ಮುಳಬಾಗಿಲು, ಸುಗಟೂರು, ವಕ್ಕಲೇರಿ, ಆವನಿ ಮುಂತಾದ ಊರುಗಳಲ್ಲಿ ವರ್ಷಕ್ಕೊಮ್ಮೆ ಸುಗ್ಗಿಯ ನಂತರದ ದಿನಗಳಲ್ಲಿ ಜರಗುತ್ತದೆ. ರಾವಣೋತ್ಸವದಲ್ಲಿ ಆಂಧ್ರ ಹಾಗೂ ತಮಿಳು ನಾಡಿನ ಭಕ್ತರು ಭಾಗವಹಿಸುತ್ತಾರೆ.

ಸಂಬಂಧಿಸಿದ ಊರುಗಳ ಈಶ್ವರನ ಉತ್ಸವಮೂರ್ತಿಗಳ ಜತೆ ರಾವಣನ ಮೂರ್ತಿ ಯನ್ನು ಹೊತ್ತು ಮೆರವಣಿಗೆ ಮಾಡುತ್ತಾರೆ. ಈ ಉತ್ಸವದಲ್ಲಿ ಗ್ರಾಮದೇವತೆಗಳೂ ಪಲ್ಲಕ್ಕಿಗಳಲ್ಲಿ ಸಾಗುತ್ತವೆ. ರಾವಣ ಅಪ್ರತಿಮ ಶಿವಭಕ್ತನಾದುದರಿಂದ ಈಶ್ವರನ ಜೊತೆಗೆ ಪೂಜಿಸುತ್ತೇವೆ ಎಂದು ಹೇಳುತ್ತಾರೆ.

ಉತ್ಸವದಲ್ಲಿ ರಾವಣನ ಮೂರ್ತಿಯೇ ದೊಡ್ಡದಿದ್ದು, ಹತ್ತು ತಲೆಯ ಇಪ್ಪತ್ತು ಕೈಗಳ ರಾವಣನ ತಲೆಯ ಮೇಲೆ ಈಶ್ವರ ಕುಳಿತಿರುವ ಮೂರ್ತಿಗಳನ್ನು ಕೆತ್ತಿರುತ್ತಾರೆ. ಒಂದೊಂದು ಊರಿನಲ್ಲಿ ಒಂದೊಂದು ತರಹದ ರಾವಣೋತ್ಸವ ಜರುಗುತ್ತದೆ. ಮುಳಬಾಗಿಲು ತಾಲೂಕು ತಾಯಲೂರಿನಲ್ಲಿ ಸುಂದರವಾದ ಕೆತ್ತನೆಯ ರಥದಲ್ಲಿ ದೀಪಾಲಂಕೃತ ಲಂಕೇಶ್ವರನ ಉತ್ಸವ ನಡೆದರೆ; ವಕ್ಕಲೇರಿ ಎಂಬ ಊರಿನಲ್ಲಿ ಟ್ರಾಕ್ಟರ್ ಮೇಲೆ ಕಟ್ಟಿದ ಮುತ್ತಿನ ಪಲ್ಲಕ್ಕಿಯಲ್ಲಿ ರಾವಣನ ಉತ್ಸವ ಜರುಗುತ್ತದೆ. ಸುಗಟೂರಿನಲ್ಲಿ ಕೋದಂಡರಾಮಸ್ವಾಮಿಯ ಜೊತೆಗೆ ಉತ್ಸವ ನಡೆಯುತ್ತದೆ. ಕೆಲವು ಭಾಗಗಳಲ್ಲಿ ಕುರಿ, ಕೋಳಿ ಬಲಿಕೊಡುವ ರೂಢಿ ಇದೆ. ಅಲ್ಲದೇ ಅನ್ನ ಸಂತರ್ಪಣೆಯನ್ನು ನಡೆಸುತ್ತಾರೆ.

ರಾತ್ರಿ ನಡೆಯುವ ರಾವಣೋತ್ಸವದಲ್ಲಿ ಗಂಗೆ ಶಿರಸ್ಸು ಮೆರವಣಿಗೆ ಹಾಗೂ ಹೂವಿನ ಕರಗೋತ್ಸವೂ ನಡೆಯುವುದನ್ನು ಕಾಣಬಹುದು. ಉತ್ಸವದ ಪ್ರಯಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಾಣ ಬಿರುಸುಗಳು ಇರುತ್ತವೆ.