ಬಿಳಿಗಿರಿರಂಗನ ಬೆಟ್ಟದ ಸೋಲಿಗರ ವಾರ್ಷಿಕ ಹಬ್ಬ. ಕ್ಯಾತೇ ದೇವರ ಗುಡಿ ಹತ್ತಿರದ ಕಲ್ಲುಕೆರೆ ಹಳ್ಳದ ಬಳಿ ರೊಟ್ಟಿಪರ ನಡೆಯುತ್ತದೆ. ಬೆಲ್ಲತ್ತ, ಕತ್ತೆಕಲ್, ಫೋಡು, ಬೂದಿ ಪಡಗ, ಇತ್ಯಾದಿ ಹಾಡಿಗಳ ಸೋಲಿಗರು ಸೇರಿ ಆಚರಿಸುತ್ತಾರೆ. ನೇರಳೆ ಸೊಪ್ಪಿನ ಗುಡಿ ಮಾಡಿ ಅದರಲ್ಲಿ ಮಾದೇಶ್ವರನ ಪ್ರತೀಕವಾದ ತ್ರಿಶೂಲ, ಗಂಡುಗೊಡಲಿ, ಪಾದುಕೆ ಇತ್ಯಾದಿಗಳನ್ನು ಇಟ್ಟು ಪೂಜಿಸುತ್ತಾರೆ.

ಕೊಂಡವೊಂದನ್ನು ನಿರ್ಮಿಸಿ ಅದರಲ್ಲಿ ರಾಗಿರೊಟ್ಟಿಗಳನ್ನು ಮಾಡುತ್ತಾರೆ. ಅಲ್ಲಿ ಮಾಡುವ ರೊಟ್ಟಿಯು ವಿಶೇಷವಾಗಿರುತ್ತದೆ. ಮಾಮೂಲಿಯಂತೆ ರೊಟ್ಟಿಯನ್ನು ಹಂಚಿನಲ್ಲಿ ಬೇಯಿಸದೆ, ಕೆಂಡದ ಮೇಲೆ ಬೇಯಿಸುವುದು ವಿಶೇಷ. ರೊಟ್ಟಿ ಮಾಡಲು ಸಿದ್ಧ ಮಾಡಿಕೊಂಡ ರಾಗಿಹಿಟ್ಟನ್ನು ಮುತ್ತುಗದ ಎಲೆಯಮೇಲೆ ಇಟ್ಟು ಅದರ ಮೇಲೆ ಇನ್ನೊಂದು ಎಲೆಯನ್ನು ಮುಚ್ಚಿ, ಅಂಗೈಗಳಿಂದಲೇ ತೆಳ್ಳಗೆ ತಟ್ಟಿ ಕೆಂಡದ ಮೇಲೆ ಹಾಕುತ್ತಾರೆ. ಹೀಗೆ ಕೆಂಡದ ಮೇಲೆ ಹಾಕಿದ ರೊಟ್ಟಿಗಳನ್ನು ಕೊಕ್ಕೆ ಕೋಲು ಗಳಿಂದ ಹದ ನೋಡಿಕೊಂಡು ತಿರುವಿ ಹಾಕಿ ಬೇಯಿಸುತ್ತಾರೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಬೆಂದ ರೊಟ್ಟಿಗಳ ಎರಡೂ ಭಾಗದ ಎಲೆಗಳನ್ನು ತೆಗೆಯುವ ಕಾಯಕದಲ್ಲಿ ನಿರತರಾಗಿ ರುತ್ತಾರೆ. ಮತ್ತೆ ಕೆಲವರು ಅನ್ನ, ಸಾರು ಇತ್ಯಾದಿ ಸಿದ್ಧತೆಯ ಕೆಲಸ ಮಾಡುತ್ತಾರೆ.

ರೊಟ್ಟಿ ಹಬ್ಬಕ್ಕೆ ಎಲ್ಲರೂ ಬರಬೇಕೆಂದು ತಮಟೆ  ಹೊಡೆದು ಸಾರಿರುತ್ತಾರೆ. ಅಂದು ಸಂಜೆಯ ವೇಳೆಗೆ ಹಾಡಿಗಳಿಂದ ಹೆಂಗಸರು, ಮಕ್ಕಳು ಎಲ್ಲರೂ ಅಲ್ಲಿ ಬಂದು ಸೇರುತ್ತಾರೆ. ದೇವರಿಗೆ ಕೈ ಮುಗಿದು, ಹಣೆಗೆ ವಿಭೂತಿ ಇಟ್ಟು ಊಟಕ್ಕೆ ಕೂರುತ್ತಾರೆ.

ದೇವರಿಗಾಗಿ ಮಾಡಿದ ಅನ್ನವನ್ನು ಮುತ್ತುಗದ ಎಲೆಗಳ ಮೇಲೆ ಹರಡಿ, ಗಟ್ಟಿಯಾಗುವಂತೆ ತಟ್ಟಿ, ಆಯತಾಕಾರದ ಬಿಲ್ಲೆಗಳಾಗಿ ಕತ್ತರಿಸಿ, ಪಚ್ಚಡಿಗಳನ್ನಾಗಿ ಮಾಡುತ್ತಾರೆ. ಬಟ್ಟೆ ಪರದೆಯನ್ನು ನಿರ್ಮಿಸಿಕೊಂಡ ಪೂಜಾರಿಯು ಒಳಗೆ ಎಲೆಯ ಮೇಲೆ ರೊಟ್ಟಿ, ಕಾಳು ಪಲ್ಯ, ಅನ್ನದ ಪಚ್ಚಡಿ, ಬಾಳೆಹಣ್ಣು ಇತ್ಯಾದಿಗಳನ್ನು ಎಡೆಹಾಕಿ ಪೂಜೆ ಸಲ್ಲಿಸುತ್ತಾನೆ. ಪಂಕ್ತಿಯಲ್ಲಿ ಕುಳಿತ ಎಲ್ಲರಿಗೂ ಹಿರಿಯರ ಅನುಮತಿಯಂತೆ ಎಲೆ ಹಾಕಿ ರೊಟ್ಟಿ, ಅನ್ನ, ಸಾರು ಬಡಿಸುತ್ತಾರೆ. ಪೂಜಾರಿಯು ತೀರ್ಥ ಹಾಕಿ, ಧೂಪಾರತಿಯನ್ನು ಪಂಕ್ತಿಗೆ ತೋರಿದ ಮೇಲೆಯೇ ಅವರು ಊಟ ಮಾಡುತ್ತಾರೆ.

ತಮಗೆ ಫಸಲು ನೀಡಿದ, ದೇವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಆಚರಣೆಯನ್ನು ಮಾಡುತ್ತಾರೆ. ಪ್ರತೀ ವರ್ಷ ಅಂತಹ ಸಮೃದ್ದಿ ತರುವಂತೆ ಮಾಡು ಎಂಬ ಕೋರಿಕೆಯ ಆಶಯವಿದೆ. ಹಬ್ಬ ಮಾಡದಿದ್ದರೆ ಕಾಡಾನೆಗಳಿಂದ ಬೆಳೆ ನಾಶವಾಗುತ್ತದೆಂಬ ನಂಬಿಕೆ ಇದೆ.