ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮದೇವತೆ ಲಕ್ಷ್ಮಿ. ಈ ದೇವತೆಯ ರಥವನ್ನು ಹೆಣ್ಣುಮಕ್ಕಳೇ ಎಳೆಯುವುದು ವಿಶೇಷ. ಭಾರತ ಹುಣ್ಣಿಮೆಯಿಂದ ದಶಮಿವರೆಗಿನ ದಿನಗಳು ಹೆಣ್ಣುಮಕ್ಕಳ ಪಾಲಿಗೆ ಉಲ್ಲಾಸದ ದಿನಗಳು. ಆ ದಿನಗಳಲ್ಲಿ ಹೆಣ್ಣುಮಕ್ಕಳೆಲ್ಲಾ ಒಂದಾಗಿ ಬೆಳಗಿನ ಜಾವ ಆರತಿ ಮಾಡುತ್ತಾರೆ. ಗುಂಪಾಗಿ ಹೊತ್ತು ತರುವ ಗಂಡಾರತಿ, ನಸು ಬೆಳಕು ಹೊಂದಿರುವ ಗೌರಿ ಕಳಶ, ಎಲೆ-ಎಲೆ ಪೋಣಿಸಿ ಹೆಣೆದ ಲಕ್ಷ್ಮೀ ಚಟ್ಟು, ಬಂಧು-ಭಗಿನಿಯರಿಗೆ ನೀಡುವ ಬಾಗಿನ ಇತ್ಯಾದಿ ಆಚರಣೆಗಳು ನಡೆಯುತ್ತವೆ. ಪ್ರತಿಯೊಬ್ಬ ಮಹಿಳೆ ಪ್ರತಿಯೊಂದು ಆಚರಣೆಯಲ್ಲೂ ಭಾಗಿಯಾಗುತ್ತಾಳೆ. ದಶಮಿಯ ದಿನ ಜಾತ್ರೆ ನಡೆಯುತ್ತದೆ. ರಥದ ವೀಳ್ಯ ಸ್ವೀಕರಿಸಿದ ಆಕಳು ಕುಂಪೆ ಜೀರಾಳು, ಚಿಕ್ಕಡಂಕನ ಕಲ್ಲು, ಹಿರೇಡಂಕನ ಕಲ್ಲು, ನವಲಿ ಹಟ್ಟಿಯಂತಹ ಹತ್ತಾರು ಗ್ರಾಮದ ಮಹಿಳೆಯರು ಅಲಂಕೃತ ಚಕ್ಕಡಿ, ಟ್ರಾಕ್ಟರ್, ಜೀಪ್‌ಗಳಲ್ಲಿ ಬಂದು ವಡಿಕೆ ಗ್ರಾಮದ ಹೆಣ್ಣುಮಕ್ಕಳಲ್ಲಿ ಒಂದಾಗುತ್ತಾರೆ. ತಮ್ಮ ಹರೆಯದಲ್ಲಿ ಮದುವೆ ಸೀರೆ ಉಟ್ಟು ರಥ ಎಳೆದ ವೃದ್ಧರು, ಸೊಸೆ-ಮಕ್ಕಳನ್ನು ರಥದ ಹಗ್ಗ ಹಿಡಿಸಲು ಕರೆತಂದಿರುತ್ತಾರೆ. ಸೂರ್ಯ ಮುಳುಗುವ ವೇಳೆಗೆ ಕಳಶ ಹೆಂಗಸರ ಕೈಗೆ ನೀಡುತ್ತಿದ್ದಂತೆ ಹೆಂಗಸರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಸ್ತ್ರೀಯರೇ ಸೇರಿ ರಥವನ್ನು ಎಳೆಯುತ್ತಾರೆ. ಬೇಸರ ವನ್ನು ನೀಗಿಸಿಕೊಂಡು ಪುನೀತ ರಾಗುತ್ತಾರೆ. ಮನೆಯ ತಾಪತ್ರಯ, ಮಕ್ಕಳಿಗಾಗಿ, ಮದುವೆಗಾಗಿ ಇತ್ಯಾದಿ ಹೊತ್ತ ಹರಕೆ ಸಲ್ಲಿಸುತ್ತಾರೆ. ರಥೋತ್ಸವದ ನಂತರ ಕಡುಬಿನ ಕಾಳಗಕ್ಕೆ ಸಿದ್ಧರಾಗುತ್ತಾರೆ. ಅದಕ್ಕೂ ಪೂರ್ವದಲ್ಲಿ ತಮ್ಮತಮ್ಮಲ್ಲೇ ಬೀಗರಾಗಿ ಎದುರುಗೊಳ್ಳುತ್ತಾರೆ. ಹಳ್ಳಿಯ ಹೆಂಗಸರೆಲ್ಲಾ ಸೇರಿದಾಗ ಹಾಡು, ಒಗಟು, ಹಾಸ್ಯ ವಿನೋದ ಇತ್ಯಾದಿಗಳೊಂದಿಗೆ ಆತ್ಮೀಯರಾಗುತ್ತಾರೆ. ಜಾತ್ರೆ ಮುಗಿಯುತ್ತಿದ್ದಂತೆ ಬಹುತೇಕ ಬಡ ಗ್ರಾಮಸ್ಥರು ದುಡಿಮೆ ಅರಸಿ ಗುಳೆ ಹೊರಡುತ್ತಾರೆ. ಹೀಗೆ ಹೋದವರು ಮುಂದಿನ ವರ್ಷದ ಭಾರತ ಹುಣ್ಣಿಮೆಗೆ ಬರುತ್ತಾರೆ.