ಸತ್ತ ಹಂದಿ ಹಾಗೂ ಕುರಿಯ ಮದುವೆ ಸಂಪ್ರದಾಯ. ಹಂದಿಯ ಹೆಸರು ಲಕ್ಯಾ. ಕುರಿಯ ಹೆಸರು ಲಕ್ಕಿ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾಸ್ಯೆಹಳ್ಳಿ ಮುಂತಾದ ಊರುಗಳಲ್ಲಿ ಈ ಆಚರಣೆಯನ್ನು ಕಾಣಬಹುದು. ಲಕ್ಕವ್ವ ಸಾಸ್ಯೆಹಳ್ಳಿ ಗ್ರಾಮದ ದೇವತೆ. ಲಕ್ಯಾಲಕ್ಕಿ ಮದುವೆಯ ಹಿಂದಿನ ಮೂರು ದಿನಗಳಿಂದಲೂ ದೇವಿಗೆ ವಿಶೇಷ ಪೂಜೆ ನಡೆಸಿ, ವಿವಿಧ ಬಗೆಯ ಹೋಮ, ಹವನ, ಬಾಳೆಹಣ್ಣಿನ ಪೂಜೆ ಅರ್ಪಿಸಿ, ಮೆರವಣಿಗೆ ಮಾಡುತ್ತಾರೆ. ಲಕ್ಯಾ ಎಂದು ಕರೆಯುವ ಗಂಡು ಹಂದಿಯನ್ನು ವಿಶೇಷವಾಗಿ ಮದುವೆ ಸಂಪ್ರದಾಯಕ್ಕಾಗಿಯೇ ಬೆಳೆಸಿರುತ್ತಾರೆ.

ಲಕ್ಕವ್ವನ ಗುಡಿಯ ಎದುರು ಮೂರ ರಿಂದ ನಾಲ್ಕು ಅಡಿ ಆಳದ ಹೊಂಡವನ್ನು ನಿರ್ಮಿಸಿ, ನೀರಿನಿಂದ ತುಂಬುತ್ತಾರೆ. ಹೊಂಡ ಸುತ್ತ ಬಿಳಿ ಬಟ್ಟೆಯನ್ನು ಸುತ್ತಿ ಮರೆಮಾಡಿರುತ್ತಾರೆ. ಲಕ್ಯಾನ ಮದುವೆಯ ದಿನ ಹಂದಿ ಹಾಗೂ ಕುರಿಯನ್ನು ಹೊಂಡದ ನೀರಿನಲ್ಲಿ ಮುಳುಗಿಸಿ, ಸಾಯಿಸುತ್ತಾರೆ. ಸತ್ತ ಹಂದಿ ಹಾಗೂ ಕುರಿಗಳನ್ನು ಬೆಂಕಿಯಲ್ಲಿ ಸುಟ್ಟು, ಸ್ನಾನ ಮಾಡಿಸಿ, ವಿವಿಧ ಬಗೆಯ ಹೂಗಳಿಂದ ಶೃಂಗರಿಸಿ, ಅರಿಶಿಣ, ಕುಂಕುಮಗಳಿಂದ ತಿಲಕವಿರಿಸಿ, ವಸ್ತ್ರಾಭರಣಗಳಿಂದ ಅಲಂಕರಿಸುತ್ತಾರೆ. ಭಕ್ತರೆಲ್ಲ ಆರತಿ ಬೆಳಗಿ, ಅಕ್ಷತೆ ಹಾಕಿ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಅಲಂಕಾರಗೊಂಡ ವಧುವರರ ಬಳಿ ನಿಂತು ಛಾಯಾಚಿತ್ರ ತೆಗೆಸಿಕೊಂಡು ಸಂಭ್ರಮಿಸುತ್ತಾರೆ. ಮದುವೆ ಊಟವಾಗಿ ಹಂದಿ, ಕುರಿಗಳ ಬಾಡೂಟವಿರುತ್ತದೆ. ಈ ಆಚರಣೆಯಿಂದ ಸಾಂಕ್ರಾಮಿಕ ರೋಗಗಳು ಬರುವುದಿಲ್ಲವೆಂದು ನಂಬುತ್ತಾರೆ.