ಎಲ್ಲರೂ ಸೇರಿ ಆಚರಿಸುವ ಬುತ್ತಿ ಮೇಳ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ಹೋಳಿ ಹುಣ್ಣಿಮೆಯ ಮರುದಿನ ಅಂದರೆ ಪಾಡ್ಯದಂದು ನಡೆಯುವ ಬುತ್ತಿ ಆಚರಣೆ ಯಲ್ಲಿ ಉತ್ತರ ಕರ್ನಾಟಕದ ಶೈಲಿಯ ಎಲ್ಲಾ ಬಗೆಯ ಆಹಾರ ಪದಾರ್ಥಗಳಿರುತ್ತವೆ. ಕುಷ್ಟಗಿ ತಾಲೂಕು ತಳುವಗೇರಾ ಗ್ರಾಮದಲ್ಲಿ ನಡೆಯುವ ಈ ಬುತ್ತಿ ಮೇಳದಲ್ಲಿ ತೋಪಲಕಟ್ಟೆ ನಿಡಶೇಶಿ, ವಣಗೇರಿ, ಚಳಗೇರಾ, ಹನುಮಸಾಗರ, ಕುಷ್ಟಗಿ, ಅಡವಿಭಾವಿ, ಕ್ಯಾದಿಗುಪ್ಪ, ಬೋದೂರು ಅಲ್ಲದೇ ಸುತ್ತಮುತ್ತಲ ಗ್ರಾಮದ ಜನರು ಭಾಗವಹಿಸುತ್ತಾರೆ.

ಹಬ್ಬಕ್ಕೆ ಮೊದಲೇ ಗ್ರಾಮದ ಪ್ರತಿ ಮನೆಗಳು ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡಿರುತ್ತವೆ. ವನಕಾಂಡಕ್ಕಾಗಿ ಎಳ್ಳುಚ್ಚಿದ ಸಜ್ಜೆರೊಟ್ಟಿಗಳನ್ನು ಮಾಡಿ ಸಂಗ್ರಹಿಸಿಕೊಳ್ಳುತ್ತಾರೆ. ರುಚಿಯಾದ ತುಂಬುಗಾಯ ಬದನೆಕಾಯಿ ಪಲ್ಲೆ, ತರಾವರಿ ಉಸುಳಿಗಳು, ಅಂಬಲಿ, ಭರಣಿ, ಮೊಸರು ಇತ್ಯಾದಿ ತಿನಿಸುಗಳನ್ನು ತಯಾರಿಸಿಕೊಳ್ಳುತ್ತಾರೆ. ಅಂದು ಸಂಜೆ ಗ್ರಾಮದ ಶರಪ್ಪನ ಗುಡಿಯ ಮುಂದೆ ಕರಡಿ ಮಜಲು ಆರಂಭವಾಗುತ್ತದೆ. ಅದನ್ನು ಕೇಳಿದ ಹೆಂಗಸರು ಬಣ್ಣ ಬಣ್ಣದ ಬುಟ್ಟಿಗಳಲ್ಲಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು, ತುಂಬಿಸಿ, ಹೊಸ, ಹೊಸ ವಸ್ತ್ರಗಳನ್ನು ತೊಟ್ಟು ಗುಡಿಗೆ ಬಂದು ಸೇರುತ್ತಾರೆ. ಮೊದಲೇ ಮೇಳ ನಡೆಯುವ ಊರಿನ ಹೊರಗಿನ ಬೈಲನ್ನು ಸ್ವಚ್ಛ ಮಾಡಿ, ದೀಪ, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಸಿದ್ಧಪಡಿಸಿ ಕೊಳ್ಳಲಾಗಿರುತ್ತದೆ.

ಗುಡಿಯಿಂದ ಎಲ್ಲರೂ ಮೆರವಣಿಗೆಯ ಮೂಲಕ ಬುತ್ತಿ ಜಾತ್ರೆಯ ಸ್ಥಳಕ್ಕೆ ಬರುತ್ತಾರೆ. ಮೆರವಣಿಗೆಯಲ್ಲಿ ಬಂದ ಶರಪ್ಪನ ಮೂರ್ತಿಗೆ ಪೂಜೆ ಸಲ್ಲಿಸಿದ ಪೂಜಾರಿ “ದಾಸೋಹ ಆರಂಭ ಮಾಡ್ರಿ” ಎಂದು ಹೇಳಿದ ನಂತರ ಬುತ್ತಿ ಊಟಕ್ಕೆ ಚಾಲನೆ ದೊರೆಯುತ್ತದೆ. ಮೇಲುಕೀಳು ಎನ್ನದೆ ಈ ಬುತ್ತಿಯೂಟದಲ್ಲಿ ಭಾಗವಹಿಸುವುದು ಸಮಾನತೆಯ ಸಂಕೇತವಾಗಿದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ವೈಮನಸ್ಸು ಕಳೆದು ಸ್ನೇಹ ವೃದ್ದಿಸುವ ಇದು ನಿಜಕ್ಕೂ ಅರ್ಥಪೂರ್ಣ ವಾಗಿದೆ.