ವಿದುರಾಶ್ವತ್ಥ ಗೌರಿಬಿದನೂರಿನ ಒಂದು ಪುಟ್ಟ ಊರು. ಸಾವಿರಾರು ನಾಗಮೂರ್ತಿ ಹಾಗೂ ಅಶ್ವತ್ಥ ಮರದಿಂದ ಪ್ರಸಿದ್ದಿಗೆ ಬಂದಿದೆ. ಅಲ್ಲದೇ ಚಾರಿತ್ರಿಕ ಹಿನ್ನೆಲೆಯ ಈ ಗ್ರಾಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಪ್ರೇಮಿಗಳ ಗುಂಪೊಂದು ದೇವಾಲಯದ ಸಮೀಪದ ಬಯಲಿನಲ್ಲಿ ಶಾಂತಿಯುತ ಸಭೆ ನಡೆಸುತ್ತಿದ್ದಾಗ ಪೊಲೀಸರು ಹಾರಿಸಿದ ಹಲವು ಸುತ್ತು ಗುಂಡಿನ ಮಳೆಯಿಂದ ಅಸುನೀಗಿದರು. ಇದು ಜಲಿಯನ್ ವಾಲಾಬಾಗ್ ಮಾರಣಹೋಮವನ್ನು ನೆನಪಿಗೆ ತರುತ್ತದೆ. ಅದರಿಂದಾಗಿ ಚರಿತ್ರೆಯ ಪುಟಗಳಲ್ಲಿ ಈ ಊರು ಸ್ಥಾನ ಪಡೆದುಕೊಂಡಿದೆ.

ಅಶ್ವತ್ಥ ವೃಕ್ಷವನ್ನು ಮಹಾಭಾರತದ ವಿದುರ ನೆಟ್ಟಿದ್ದರಿಂದ  ಈ ಪ್ರದೇಶಕ್ಕೆ ವಿದುರಾಶ್ವತ್ಥ ಎನ್ನುವ ಹೆಸರಿಗೆ ಕಾರಣ ಎನ್ನಲಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹತ್ತು ಹಲವು ಸೇವೆ, ಹರಕೆ ಗಳನ್ನು ಮಾಡುತ್ತಾರೆ. ಭಕ್ತರು ನಾಗಮೂರ್ತಿಯ ಕಲ್ಲೊಂದನ್ನು ಅಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿ, ಹರಕೆ ಸಲ್ಲಿಸುತ್ತಾರೆ. ಹೀಗಾಗಿ ಇಲ್ಲಿ ದೃಷ್ಟಿ ಹಾಯಿಸಿದಷ್ಟು ದೂರ ಕಾಣುವುದು ನಾಗಕಲ್ಲುಗಳೇ. ಅಶ್ವತ್ಥ ವೃಕ್ಷದ ಕೆಳಗೆ ಭಕ್ತರು ಸರಳ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಮದುವೆಯಾಗುವುದು, ನಾಗಮೂರ್ತಿ ಅರ್ಪಿಸುವುದು ಇತ್ಯಾದಿಗಳಿಂದ  ಭಕ್ತರಿಗೆ ಅನುಕೂಲಗಳಾಗಿವೆ ಎಂದು ಹೇಳುತ್ತಾರೆ.