ವರ್ಷವಿಡೀ ಶೃಂಗೇರಿಯಲ್ಲಿ ಏನಾದರೊಂದು ಉತ್ಸವಗಳು ನಡೆದೇ ಇರುತ್ತವೆ. ನವರಾತ್ರ್ಯೋತ್ಸವ ಶಿಖರಪ್ರಾಯವಾದದ್ದು. ನವರಾತ್ರಿಯ ಒಂಭತ್ತು ರಾತ್ರಿಗಳು ಜಗನ್ಮಾತೆಯನ್ನು ಭಕ್ತಿ ಗೌರವಗಳಿಂದ ಪೂಜಿಸುತ್ತಾರೆ. ದೇವಿ ಲೋಕಕಂಟಕರಾಗಿದ್ದ ಮಧು – ಕೈಟಭ, ಶುಂಭ – ನಿಶುಂಭ, ಮಹಿಷಾಸುರ ಮೊದಲಾದ ಮಹಾ ರಾಕ್ಷಸರನ್ನು ಸಂಹಾರ ಮಾಡಿದ ಸ್ಮರಣೆಯ ಹಿನ್ನೆಲೆಯಲ್ಲಿ ಈ ಆಚರಣೆ ನಡೆಯುತ್ತದೆ. ನವರಾತ್ರಿಯ ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಬಹು ವೈಭವವಾಗಿ ನಡೆಯುತ್ತವೆ. ನವರಾತ್ರಿಯ ಒಂಬತ್ತು ದಿನಗಳೂ ಶ್ರೀ ಶಾರದಾಂಬೆಗೆ ರತ್ನಾಭರಣಗಳಿಂದ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.

ನವರಾತ್ರಿಯ ಹಿಂದಿನ ದಿನ ಅಂದರೆ ಭಾದ್ರಪದ ಬಹುಳ ಅಮಾವಾಸ್ಯೆಯಂದು ಶ್ರೀಶಾರದಾಂಬೆಗೆ ಮಹಾಭಿಷೇಕ ನಡೆಯುತ್ತದೆ. ಹಲವು ಬಗೆಯ ಫಲ ಪಂಚಾಮೃತಾಭಿಷೇಕದ ನಂತರ 108 ಸಲ ಶ್ರೀಸ್ತ್ರೊಕ್ತ ಪಠಣದಿಂದ ಅಮ್ಮನವರಿಗೆ ಅಭಿಷೇಕ ನಡೆಯುತ್ತದೆ. ಅಂದು ಅಮ್ಮನವರಿಗೆ “ಜಗತ್ತ್ರಸೂತಿ” ಎಂಬ ಅಲಂಕಾರವನ್ನು ಮಾಡುತ್ತಾರೆ.

 

ನವರಾತ್ರಿ ಉತ್ಸವದಲ್ಲಿ ಶ್ರೀ ಶಾರದಾಂಬೆಗೆ ದಿನಕ್ಕೊಂದರಂತೆ ಹಂಸವಾಹನಾಲಂಕಾರ (ಬ್ರಾಹ್ಮಿ) ವೃಷಭ ವಾಹನಾಲಂಕಾರ (ಮಾಹೇಶ್ವರಿ) ಮಯೂರ ವಾಹನಾಲಂಕಾರ (ಕೌಮಾರೀ) ಗರುಡ ವಾಹನಾಲಂಕಾರ (ವೈಷ್ಣವಿ) ಇಂದ್ರಾಣೀ ಅಲಂಕಾರ, ವೀಣಾ ಶಾರದಾಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನಾಲಂಕಾರ (ಚಾಮುಂಡಿ) ಹಾಗೂ ಗಜಲಕ್ಷ್ಮಿ ಅಲಂಕಾರಗಳನ್ನು ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ವಿಶೇಷ ರಾಜ ದರ್ಬಾರನ್ನು ನಡೆಸುತ್ತಾರೆ. ಇದು ರಾಜರುಗಳ ಅರಮನೆಯ ದರ್ಬಾರನ್ನು ನೆನಪಿಗೆ ತರುತ್ತದೆ. ನವರಾತ್ರಿಯ ಹನ್ನೊಂದನೆಯ ದಿನದಂದು ಬೆಳಿಗ್ಗೆ ಶೃಂಗೇರಿಯ ರಥಬೀದಿಯಲ್ಲಿ ಮಹತ್ವಪೂರ್ಣವಾದ   ಶಾರದಾಂಬಾ ಮಹಾರಥೋತ್ಸವವು ನಡೆಯುತ್ತದೆ. ಈ ರಥೋತ್ಸವದಲ್ಲಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವವೂ ಇರುತ್ತದೆ. ಅಶ್ವಯುಜ ಹುಣ್ಣಿಮೆಯಂದು ಶಾರದಾದೇವಿಗೆ ಅಭಿಷೇಕ ಹಾಗೂ ರಾತ್ರಿ ನಡೆಯುವ ತೆಪ್ರೋನವರಾತ್ರಿಯ ಕಾರ್ಯಕ್ರಮಗಳು ಮುಗಿಯುತ್ತವೆ.