ಮಳೆ ತರಿಸುವ ಋಷಿಯ ಮೂರ್ತಿ. ಬೆಳಗಾವಿ ಜಿಲ್ಲೆಯ ಮುರಗೋಡ ಹಾಗೂ ಸುತ್ತಲಿನ ಊರುಗಳಲ್ಲಿ ಈ ಆಚರಣೆ ಪ್ರಚಲಿತವಿದೆ. ಊರಿನ ಮಲ್ಲಿಕಾರ್ಜುನ ದೇವರ ಗುಡಿಯ ಎದುರು ಮೂರ್ತಿ ಸ್ಥಾಪನೆ ಮಾಡಿ ಪೂಜಿಸುತ್ತಾರೆ. ಮೂರ್ತಿ ದೊಡ್ಡಗಾತ್ರದ್ದಾಗಿದ್ದು, ಸುಮಾರು ಹತ್ತಾರು ಟ್ಯಾಕ್ಟರ್ ಕೆರೆಯಮಣ್ಣು ಹಾಗೂ ಕಟ್ಟಿಗೆಯ ತುಂಡುಗಳಿಂದ ನಿರ್ಮಿತವಾಗಿರುತ್ತದೆ. ಮೂರ್ತಿಯು ಅಂದ ಕಾಣುವಂತೆ ಬಣ್ಣದಿಂದ ಅಲಂಕರಿಸಿರುತ್ತಾರೆ. ತಲೆಯ ಮೇಲೆ ಕೋಡುಗಳಿದ್ದು, ಮುಡಿ ಇರುತ್ತದೆ. ಗ್ರಾಮಸ್ಥರೆಲ್ಲ ಸೇರಿ ಟ್ಯಾಕ್ಟರ್‌ಗಳನ್ನು ಪೂಜಿಸಿ, ಹತ್ತಿರದ ಕೆರೆಗೆ ಹೋಗುತ್ತಾರೆ. ಸಂಗ್ರಹಿಸಿದ ಮಣ್ಣನ್ನು ಊರಿನ ಗುಡಿಯ ಮುಂದೆ ಹಾಕಿ, ಚೆನ್ನಾಗಿ ಮಣ್ಣನ್ನು ಹದಗೊಳಿಸುತ್ತಾರೆ. ಎಲ್ಲರೂ ಸೇರಿ ಮೂರ್ತಿ ಮಾಡುತ್ತಾರೆ. ಆದರೆ ಮೂರ್ತಿ ಗೊಂದು ನಿಶ್ಚಿತ ರೂಪ, ಕಳೆ, ಅಂದ ಬರುವಂತೆ ಮಾಡುವುದು ಊರಿನ ಬಡಿಗ. ಮೂರ್ತಿಯು ಪುಷ್ಯ ನಕ್ಷತ್ರದಲ್ಲಿಯೇ ಸ್ಥಾಪನೆಗೊಳ್ಳಬೇಕೆಂಬ ನಿಯಮ ವಿದೆ.

ಶೃಂಗಋಷಿಯ ಮೂರ್ತಿಯನ್ನು ಜನರು ಸಿಂಗ್‌ಮೂರ್ತಿ ಎಂದು ಕರೆಯುತ್ತಾರೆ. ಶೃಂಗಋಷಿಯ ಮೂರ್ತಿಯನ್ನು ವಿಧಿವತ್ತಾಗಿ ಪೂಜಿಸಿ, ನೈವೇದ್ಯ ಅರ್ಪಿಸಿ ಭಕ್ತಿ ತೋರುತ್ತಾರೆ. ಹಾಗೆ ಪೂಜಿಸಿದಂದು ಎರಡು ಹನಿ ಮಳೆಯಾದರೂ ಬರುತ್ತದೆ ಎಂದು ಹೇಳುತ್ತಾರೆ. ಮಣ್ಣಿನಮೂರ್ತಿ ಮಳೆಯಿಂದ ಕರಗಿದರೆ ಊರಿಗೆ ಒಳ್ಳೆಯದೆಂದು ನಂಬುತ್ತಾರೆ.

ಶೃಂಗಋಷಿ ಬಗೆಗೆ ಕಥೆಯೊಂದು ಪ್ರಚಲಿತವಿದೆ. ಅದರ ಪ್ರಕಾರ ವಿಭಾಂಡಕನೆಂಬ ಮುನಿಯು ಒಮ್ಮೆ ಸ್ನಾನಕ್ಕೆಂದು ಕೊಳಕ್ಕಿಳಿದಾಗ, ಊರ್ವಶಿ ದರ್ಶನವಾಗಿ, ಸ್ಖಲಿತನಾಗುತ್ತಾನೆ. ನೀರಿನಲ್ಲಿ ತೇಲುತ್ತಿರುವ ಅವನ ವೀರ್ಯವನ್ನು ಹೆಣ್ಣು ಜಿಂಕೆ ಕುಡಿದು, ಅದರಿಂದ ಈ ಶೃಂಗಮುನಿ ಜನಿಸುತ್ತಾನೆ. ಕಾಡಿನಲ್ಲಿ ಬೆಳೆದ ತನ್ನ ಮಗನಿಗೆ ವಿಭಾಂಡಕ ಮುನಿ ಸಕಲ ವಿದ್ಯೆಯನ್ನು ಕಲಿಸುತ್ತಾನೆ. ವಿಶೇಷವಾಗಿ ಅದರಲ್ಲಿ ಮಳೆ ತರಿಸುವ ವಿದ್ಯೆಯು ಒಂದು. ಸಕಲ ವಿದ್ಯಾದರನು, ಬುದ್ದಿವಂತನು ಆದ ಇವನಿಗೆ ತನ್ನ ವಿದ್ವತ್‌ನಿಂದಲೇ ತಲೆಯಲ್ಲಿ ಕೊಂಬು ಬೆಳೆದಿತ್ತು. ಈ ಕಾರಣದಿಂದ ಅವನಿಗೆ ಶೃಂಗಋಷಿ ಎಂಬ ಹೆಸರು ಬಂದಿತು. ಹೀಗಿರುವಾಗ ಒಮ್ಮೆ ಅಂಗ ದೇಶದಲ್ಲಿ ಅನಾವೃಷ್ಠಿಯಾಯಿತು. ಇದರಿಂದ ರೋಮಪಾದನೆಂಬ ಚಂದ್ರ ವಂಶದ ರಾಜನಿಗೆ ಚಿಂತೆಯಾಯಿತು. ಆತನಿಗೆ ಆಗಲೇ ಮಳೆ ತರಿಸುವ ಈ ಶೃಂಗಋಷಿಯ ಬಗೆಗೆ ತಿಳಿದಿತ್ತು. ಅವನನ್ನು ಹೇಗಾದರೂ ಮಾಡಿ ಕಾಡಿನಿಂದ ನಾಡಿಗೆ ಕರೆತರಲು ಯೋಚಿಸುತ್ತಾನೆ. ಸಾಹಸ ಮಾಡಿ ಶೃಂಗನನ್ನು ಉಪಾಯದಿಂದ ನಾಡಿಗೆ ಬರಮಾಡಿಕೊಂಡ. ಶೃಂಗ ಊರಿಗೆ ಕಾಲಿಟ್ಟ ತಕ್ಷಣ ಮಳೆ ಜೋರಾಗಿ ಸುರಿಯುತ್ತದೆ. ಸಂತಸಗೊಂಡ ರಾಜ ತನ್ನ ಸಾಕುಮಗಳು, ದಶರಥನ ಔರಸ ಪುತ್ರಿ ಶಾಂತಾದೇವಿಯನ್ನು ಕೊಟ್ಟು ಮದುವೆ ಮಾಡಿದ ಎನ್ನುವ ಕಥೆ ಮಳೆಯ ಆಚರಣೆಯ ಸುತ್ತ ಬೆಳೆದಿದೆ.