ಉತ್ತರ ಕನ್ನಡದ ಗೌಳಿಗರು ವಿಜಯದಶಮಿಯಂದು ಆಚರಿಸುವ ಹಬ್ಬ. ಹನ್ನೊಂದು ದಿನ ನಡೆಯುವ ಈ ಆಚರಣೆಯಲ್ಲಿ ಹಾಲು, ಮೊಸರು, ಬೆಣ್ಣೆಗಳದ್ದೆ ಕಾರುಬಾರು. ಕಾಡಿನೊಳಗೆ ಗೌಳಿಗರದು ಬಾಗಿಲುಗಳೇ ಇಲ್ಲದ, ಬಿದಿರ ನೇಯ್ಗೆಯ ಗೋಡೆಗಳ ಮನೆಗಳು. ಐವತ್ತು ವರ್ಷದ ಹಿಂದೆ ಮಹಾರಾಷ್ಟ್ರ ಭಾಗದಿಂದ ವಲಸೆ ಬಂದವರು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ, ಯಲ್ಲಾಪುರಗಳಲ್ಲಿ ವಾಸವಾಗಿದ್ದಾರೆ. ಅವರ ಮುಖ್ಯ ಕಸುಬು ಹೈನುಗಾರಿಕೆ. ಪ್ರತಿ ವರ್ಷ ಮಹಾಲಯ ಅಮವಾಸ್ಯೆಯಿಂದ ಹಬ್ಬದ ಆಚರಣೆ ಆರಂಭವಾಗುತ್ತದೆ. ಅಂದು ಪೂಜಾರಿಯು ಮನೆ ಮನೆಗೂ ಹೋಗಿ ಎಲೆ ಅಡಿಕೆ ಕೊಟ್ಟು ಹಬ್ಬಕ್ಕೆ ಆಹ್ವಾನ ನೀಡುತ್ತಾನೆ. ಎಲ್ಲರೂ ಒಂದು ಗೊತ್ತಾದ ಸ್ಥಳದಲ್ಲಿ ಸೇರಿ ಹಬ್ಬ ಆಚರಿಸುತ್ತಾರೆ. ಇವರಿಗೆ ಯಾವುದೇ ಗುಡಿ ಅಥವಾ ದೇವಾಲಯವಿಲ್ಲ, ಪೂಜಾರಿಯ ಮನೆಯ ಮುಂದೆ ಸಾಮಾನ್ಯವಾಗಿ ಹಬ್ಬ ನಡೆಯುತ್ತದೆ. ಒಂದೊಂದು ದಿನ ಒಂದೊಂದು ಊರಿನ ಗೌಳಿಗರು ಸಂಬಂಧಿಸಿದ ಪೂಜಾರಿಯ ಮನೆಯ ಮುಂದೆ ಹಬ್ಬ ಆಚರಿಸುತ್ತಾರೆ.

ಅಂದು ಬೆಳಿಗ್ಗೆ ಸ್ನಾನ ಮಾಡಿ, ಮನೆ ಸಾರಿಸಿ, ಶುದ್ಧ ಮಾಡಿ, ದನದ ದೊಡ್ಡಿಯನ್ನು ಶುದ್ಧ ಮಾಡುತ್ತಾರೆ. ನಂತರ ಮಡಿಯಲ್ಲಿ ಹಾಲು ಹಿಂಡುತ್ತಾರೆ. ಆಗತಾನೇ ಕರೆದ ಹಾಲನ್ನು ಬಿಸಿ ಮಾಡಿ, ‘ಹೆಪ್ಪು’ ಹಾಕಿ ಗಟ್ಟಿ ಮೊಸರು ಮಾಡುತ್ತಾರೆ. ದರ್ಬೆ ಹುಲ್ಲು ಹಾಕಿದ ಮೊಸರಿನ ಗಡಿಗೆಯನ್ನು ಬಿಳಿ ವಸ್ತ್ರದಿಂದ ಕಟ್ಟಿ, ಪ್ರತಿ ಮನೆಯ ಮಹಿಳೆಯರು ಹೊತ್ತು ಮೆರವಣಿಗೆಯ ಮೂಲಕ ಪೂಜಾರಿ ಮನೆಯ ಪೂಜಾ ಸ್ಥಳದಲ್ಲಿ ಸೇರುತ್ತಾರೆ. ಮೆರವಣಿಗೆಯಲ್ಲಿ ಅಬಾಲವೃದ್ಧರಾಗಿ ಸಮಸ್ತರು ಭಾಗವಹಿಸಿರುತ್ತಾರೆ.

ಒಂದು ವಿಶಿಷ್ಟ ಬಗೆಯ ಬಿಳಿ ಬಟ್ಟೆಯನ್ನು ಧರಿಸಿ ನರ್ತಿಸುತ್ತಾರೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ಕುಣಿತವಿರುತ್ತದೆ. ಉಳಿದ ದಿನಗಳಲ್ಲಿ ವೇಷವೂ ಇಲ್ಲ, ಕುಣಿತವೂ ಇಲ್ಲ. ಪ್ರತಿ ಮನೆಯಲ್ಲಿಯು ಶಿವಾಜಿ ಮಹಾರಾಜರ ಖಡ್ಗ ಎಂದು ಕರೆಯುವ ಕತ್ತಿಯನ್ನು ಹಿಡಿದು ನರ್ತಿಸುತ್ತಾರೆ. ಅಲ್ಲಿಯೇ ‘ಕೊಬ್ಬರಿ’ ದೇವರನ್ನು ಪೂಜಿಸುವ ಪದ್ಧತಿ ಇದೆ. ಖಡ್ಗದಿಂದ ‘ಆಪ್ಟಾ’ ಎಂಬ ಮರದ ಟೊಂಗೆಯನ್ನು ಕತ್ತರಿಸಿ, ಅದರ ಎಲೆಗಳನ್ನು ಪ್ರತಿ ಮನೆಗಳಲ್ಲೂ ಪೂಜಿಸುತ್ತಾರೆ. ಈ ಆಚರಣೆಯಲ್ಲಿ ಮಾಂಸಹಾರ ನಿಷಿದ್ಧ, ಹಾಲು, ಮೊಸರು, ಮೊಸರನ್ನ, ಈರುಳ್ಳಿಗಳಿಂದ ಮಾಡಿದ ಆಹಾರ ಪದಾರ್ಥಗಳು ಹಬ್ಬದ ಅಡುಗೆ ಹಾಗೂ ನೈವೇದ್ಯಗಳಾಗಿವೆ. ‘ಕಣಗಲು’ ಎಂಬ ಮರದ ಎಲೆಯಲ್ಲಿ ಹಬ್ಬದ ಊಟ ಮಾಡುವುದು ಸಂಪ್ರದಾಯವಾಗಿದೆ.