ಬೆಂಗಳೂರಿನ ಉತ್ತರ ಹಳ್ಳಿಯ ಶಿಲುಬೆ ಬೆಟ್ಟದ ಅನ್ನಮ್ಮ ಕನ್ನಡ ಕ್ಯಾಥೋಲಿಕ್ ಕ್ರೈಸ್ತ ಜನಪದ ದೈವವಾಗಿ ನೆಲೆಯಾಗಿದ್ದಾಳೆ. ಸುಮಾರು ಎರಡು ಶತಮಾನಗಳಿಂದ ಶಿಲುಬೆ ಬೆಟ್ಟದ ಅನ್ನಮ್ಮ ದೈವದ ಆರಾಧನೆ ನಡೆದುಕೊಂಡು ಬರುತ್ತದೆ. ಬೆಂಗಳೂರಿನ ಕೆಂಪೇಗೌಡ ವೃತ್ತದ ಅಣ್ಣಮ್ಮ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ಅಣ್ಣಮ್ಮ ದೇವತೆಗಳಿಗೂ ಕನ್ನಡ ಕ್ಯಾಥೋಲಿಕ್ ಕ್ರೈಸ್ತ ಜನಪದ ಅನ್ನಮ್ಮ ದೇವತೆಗೂ ಸಂಬಂಧವಿಲ್ಲ. ಶಿಲುಬೆ ಬೆಟ್ಟದ ಅನ್ನಮ್ಮ ಬೇರೆ ಎಂಬುದನ್ನು ಕ್ರೈಸ್ತರಲ್ಲಿರುವ ಜನಪದ ಕತೆಗಳು ಸ್ಪಷ್ಟಪಡಿಸುತ್ತವೆ. ಒಂದು ಕತೆಯ ಪ್ರಕಾರ  : ಅನ್ನಮ್ಮ ಒಬ್ಬ ಐತಿಹಾಸಿಕ ವ್ಯಕ್ತಿ ಎಂದು ತಿಳಿಯಲಾಗಿದೆ. ಟಿಪ್ಪುವಿನ ಆಳ್ವಿಕೆಯ ದಿನಗಳಲ್ಲಿ ಉತ್ತರ ಹಳ್ಳಿಯ ಬೆಟ್ಟದ ತಪ್ಪಲಲ್ಲಿ ಸಾತ್ವಿಕ ಅನ್ನಮ್ಮ ವಾಸವಾಗಿದ್ದಳು. ಅವಳು ಯೇಸುವಿನ ಪರಮಭಕ್ತಳಾದ ಅವಳು ಶೀಲವತಿಯೂ, ಸತ್ಯವತಿಯೂ ಆಗಿದ್ದಳು. ಒಮ್ಮೆ ಟಿಪ್ಪುಸುಲ್ತಾನನ ಸೇನೆಯು ಬೆಟ್ಟದ ಹತ್ತಿರ ಬೀಡುಬಿಟ್ಟಿತ್ತು. ಅದರಲ್ಲಿಯ ಕೆಲ ಕಾಮಾಂಧ ಸೈನಿಕರು ಸಂಗ ಬಯಸಿ ಅವಳ ಮನೆಗೆ ಬಂದಾಗ ಅವಳು ನಿರಾಕರಿಸಿ, ಓಡಿ ಬೆಟ್ಟ ಹತ್ತಿದಳು. ಸೈನಿಕರು ಅಲ್ಲಿಯೂ ಬಂದಾಗ ಅವಳು ಬೆಟ್ಟದಿಂದ ಕೆಳಗೆ ಹಾರಿ ಪ್ರಾಣಬಿಟ್ಟಳು. ಸಾಧ್ವಿಯ ಸಾವಿಗೆ ಕಾರಣವಾದೆವಲ್ಲ ಎಂದು ಮರುಗಿದ ಆ ಸೈನಿಕರು ಅವಳ ಸಮಾಧಿ ಕಟ್ಟಿದರು. ಬೆಟ್ಟದ ಮೇಲೊಂದು ದೊಡ್ಡದಾದ ಶಿಲುಬೆ ನೆಟ್ಟರು. ಈ ಬಗೆಯ ಪಾಠಾಂತರ ಕತೆಗಳು ದೊರೆಸಾನಿ ಪಾಳ್ಯ, ಕಮ್ಮನಹಳ್ಳಿ, ಬೆಂಗಳೂರು, ನಾಗೇನಹಳ್ಳಿ ಮುಂತಾದ ಕಡೆಗಳಲ್ಲಿ ಪ್ರಚಲಿತದಲ್ಲಿವೆ. ಆನಂತರದ ದಿನಗಳಲ್ಲಿ ಸುತ್ತಲಿನ ರೈತಾಪಿ ಕ್ರೈಸ್ತ ಜನರು ಆಕೆಯ ಸಮಾಧಿಗೆ ಧೂಪ, ದೀಪ ಉರಿಸಿದರು. ಕ್ರಮೇಣ ಇದು ಶಿಲುಬೆ ಬೆಟ್ಟದ ಅನ್ನಮ್ಮ ಜಾತ್ರೆ ರೂಪ ಪಡೆಯಿತು ಎನ್ನಲಾಗಿದೆ.

ಯುಗಾದಿಯ ಮರುದಿನ ವರ್ಷ ತೊಡಕು ದಿನ ಶಿಲುಬೆ ಬೆಟ್ಟದಲ್ಲಿ ಅನ್ನಮ್ಮ ಜಾತ್ರೆ ನಡೆಯುತ್ತದೆ. ಕನ್ನಡ ಕ್ಯಾಥೋಲಿಕ್ ಕ್ರೈಸ್ತರಿಗೆ ಚರ್ಚ್‌ನಲ್ಲಿರುವ ದೈವಗಳು ಶಿಷ್ಟ ದೈವಗಳಾಗಿ ಕಂಡರೆ, ಚರ್ಚ್‌ನ ಹೊರಗಿದ್ದು, ಬಯಲಲ್ಲೇ ಇರುವ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ ರಕ್ಷಕ ಗ್ರಾಮದೈವವಾಗಿದ್ದಾಳೆ. ಆ ದಿನ ಶಿಲುಬೆಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಸೇರುತ್ತಾರೆ. ತಮ್ಮ ಬೇಕು – ಬೇಡಗಳನ್ನು ಸಲ್ಲಿಸಿ, ಧೂಪ ದೀಪ ಉರಿಸಿ ಆರಾಧಿಸುತ್ತಾರೆ. ಪಾದ್ರಿಗಳ ಅನುಪಸ್ಥಿತಿಯಲ್ಲಿ ಕ್ರೈಸ್ತ ಕುಟುಂಬಗಳ ಆಧ್ಯಾತ್ಮಿಕ ಬೇಕು – ಬೇಡಗಳಿಗೆ ಸ್ಪಂದಿಸುವ ಉಪದೇಶಿಯಿಂದ ಶಿಲುಬೆ ಹಾದಿ ಆರಂಭವಾಗಿರಬೇಕು. ನಂತರದ ದಿನಗಳಲ್ಲಿ ಗೋರಿಪಾಳ್ಯದಿಂದ ಪಾದ್ರಿಗಳು ಬಂದು ಜನರಿಗಾಗಿ ಶಿಲುಬೆ ಹಾದಿ ಧಾರ್ಮಿಕ ವಿಧಿಯ ನೇತೃತ್ವವಹಿಸಿ, ಕ್ರಮೇಣ ಶಿಲುಬೆ ಬೆಟ್ಟದ ಮೇಲೆ ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳನ್ನು ಗುರುತಿಸುವ ಜಾಗದಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ನೆಟ್ಟಿದ್ದಾರೆ ಎನ್ನಲಾಗಿದೆ.

ರೈತಾಪಿ ಜನರು ಬರಗಾಲದಲ್ಲಿ ಮಳೆಗಾಗಿ ಅನ್ನಮ್ಮಳ ಮೊರೆ ಹೋಗುತ್ತಾರೆ. ಅಲ್ಲದೆ ದನಕರುಗಳು ರೋಗರುಜಿನಗಳಿಂದ ಬಸವಳಿದಾಗ ಅನ್ನಮ್ಮಳ ಸಮಾಧಿಗೆ ಬಂದು ಹರಕೆ ಒಪ್ಪಿಸುತ್ತಾರೆ. ಸಮಾಧಿ ಸ್ಥಳದ ಮಣ್ಣನ್ನು ಜಾತಿಮತ ಭೇದವಿಲ್ಲದೆ ಸಕಲರೂ ನೆತ್ತಿಯ ಮೇಲೆ ಹಾಕಿಕೊಳ್ಳುತ್ತಾರೆ. ಸಾವಿರಾರು ಹೆಣ್ಣುಮಕ್ಕಳು ಸಾಂಬ್ರಾಣಿ ಹಾಗೂ ಮೇಣದ ಬತ್ತಿಗಳನ್ನು ಉರಿಸುತ್ತಾರೆ. ಹರಕೆ ಒಪ್ಪಿಸಿ, ಶಿಲುಬೆ ಹಾದಿ ಮಾಡಿ, ಬಲಿ ಪೂಜೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿ ಪುನೀತರಾಗುತ್ತಾರೆ.