ಮಲೆನಾಡಿನ ಒಕ್ಕಲಿಗರ ಕೃಷಿಸಂಬಂಧೀ ಆಚರಣೆ. ವ್ಯವಸಾಯವನ್ನು ಮೊದಲ ಬಾರಿಗೆ ಆರಂಭ ಮಾಡುವಾಗಿನ ಆಚರಣೆ. ಶಕುನ ನೋಡಿ ಕಟ್ಟುವುದಕ್ಕೆ ಶಕ್ಳುದಾರ ಎಂದು ಕರೆಯುತ್ತಾರೆ. ಯುಗಾದಿಯ ನಂತರದ ಗುರುವಾರ ಅಥವಾ ಭಾನುವಾರಗಳಂದು ಗ್ರಾಮದೇವತೆಗೆ ಹಣ್ಣುಕಾಯಿ ಕೊಟ್ಟು, ಪುರೋಹಿತ ಸೂಚಿಸಿದ ಸಮಯಕ್ಕೆ ಸರಿಯಾಗಿ ಎತ್ತುಗಳನ್ನು ಮೂಡುಮುಖವಾಗಿ ನಿಲ್ಲಿಸಿ, ನೇಗಿಲು ಕಟ್ಟುತ್ತಾರೆ. ಎತ್ತುಗಳ ಕಾಲು ತೊಳೆದು ಅರಿಶಿಣ, ಕುಂಕುಮ, ಹೂಗಳಿಂದ ಶೃಂಗರಿಸಿ, ಹಾಲು ಎರೆದು, ಕಾಯಿ ಒಡೆದು ಆರತಿ ಬೆಳಗುತ್ತಾರೆ. ಜೊತೆಗೆ ನೇಗಿಲು ಹಾಗೂ ನೊಗವನ್ನು ಪೂಜಿಸುತ್ತಾರೆ. ನೇಗಿಲನ್ನು ಹಿಡಿದ ವ್ಯಕ್ತಿ ತಲೆಗೆ ಟೆವಲ್ ಸುತ್ತಿಕೊಂಡು ಗದ್ದೆಯನ್ನು ಮೂರು ಸುತ್ತು ಊಳುತ್ತಾನೆ. ಶಕ್ಳುದಾರ ಆಚರಣೆ ನಂತರ ಯಾವಾಗ ಬೇಕಾದರೂ ವ್ಯವಸಾಯ ಆರಂಭಿಸಬಹುದು.

ಮಳೆ ಬಿದ್ದ ನಂತರ ಮಣ್ಣಿನ ಹದ ನೋಡಿಕೊಂಡು ಗದ್ದೆ ಉಳುಮೆ ಆರಂಭಿಸುತ್ತಾರೆ. ಬಿತ್ತನೆಗಾಗಿ ಗದ್ದೆಗಳನ್ನು ಸಿದ್ಧಪಡಿಸುವುದಕ್ಕೆ ‘ಮಾಗಿ ಹೂಟಿ’ ಎಂದು ಕರೆಯುತ್ತಾರೆ. ಗದ್ದೆಗಳಿಗೆ ಗೊಬ್ಬರ ಚೆಲ್ಲಿ, ಉಳುಮೆ ಮಾಡುತ್ತಾರೆ. ಸರಿಸುಮಾರು ಮೇ ತಿಂಗಳಲ್ಲಿ ನಡೆಯುವ, ಸ್ಥಳೀಯ ದೇವತೆಗೆ ಅರುಣಗಿರಿಯ ವೆಂಕಟರಮಣನ ರಥೋತ್ಸವದಂದು. ಬೀಜ ಮುಹೂರ್ತ ಮಾಡುತ್ತಾರೆ. ಗದ್ದೆಯ ಮೂಲೆಯನ್ನು ಕೆತ್ತಿ, ಹದ ಮಾಡಿದ ಸ್ಥಳವನ್ನು ಪೂಜಿಸಿ, ಗೊಬ್ಬರದೊಂದಿಗೆ ಬೆರೆಸಿದ ಬೀಜವನ್ನು ಭೂಮಿಗೆ ಹಾಕುತ್ತಾರೆ. ಭೂಮಿಗೆ ಬೀಜ ಹಾಕುವ  ಮುನ್ನ, ಮನೆಯಿಂದ ತಂದ ಬೀಜದ ಕುಕ್ಕೆಯನ್ನು ಸಗಣಿಯ ಗಣಪನೊಂದಿಗೆ ಪೂಜಿಸುತ್ತಾರೆ. ಬೀಜ ಮುಹೂರ್ತ ಮಾಡಿದ ಅನಂತರದ ದಿನಗಳಲ್ಲಿ ಬೀಜ ಹಾಕುವ ಕೆಲಸ ನಡೆಸುತ್ತಾರೆ.