ನವೆಂಬರ್ ಮೂರರಂದು ಕ್ರೈಸ್ತರು ಮೃತರ ಆತ್ಮಶಾಂತಿಗಾಗಿ ಆಚರಿಸುವ ಹಬ್ಬ. ಕ್ರೈಸ್ತರಿಗೆ ತುಂಬಾ ಆಪ್ತವಾದ ಹಬ್ಬ. ‘ಸಮಾಧಿ ಹಬ್ಬ’ ಹಿಂದೂಗಳ ಮಹಾಲಯ ಅಮವಾಸ್ಯೆಯ ಪಿತೃಪೂಜೆಯನ್ನು ನೆನಪಿಗೆ ತರುತ್ತದೆ. ಮೃತರ ಆತ್ಮಗಳು ಅಂದು ನ್ಯಾಯ ವಿಚಾರಣೆಗೆ ಒಳಪಡುತ್ತವೆಂದು ಕ್ರೈಸ್ತರು ನಂಬುತ್ತಾರೆ. ನ್ಯಾಯ ವಿಚಾರಣೆಯ ನಂತರ ಭೂಲೋಕದಲ್ಲಿ ಮೃತರು ಮಾಡಿದ ಪುಣ್ಯ ಮತ್ತು ಪಾಪಕರ್ಮಗಳ ಫಲಾಫಲಗಳ ಪರಿಣಾಮವಾಗಿ ಸ್ವರ್ಗಕ್ಕೂ ನರಕಕ್ಕೂ ಹೋಗುತ್ತಾರೆ. ಸ್ವರ್ಗಕ್ಕೆ ಹೋದವರು ಸರ್ವೇಶ್ವರನ ದಿವ್ಯ ಸನ್ನಿಧಿಯಲ್ಲಿ ನಿತ್ಯ ಆನಂದವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಈ ನ್ಯಾಯ ವಿಚಾರಣೆಯ ಸ್ಥಳವನ್ನು ಆತ್ಮಗಳು ಉತ್ತರಿಸುವ ಸ್ಥಳ ಅಥವಾ ಆತ್ಮಗಳ ಶುದ್ದೀಕರಣದ ಸ್ಥಳ ಎಂದು ನಂಬುತ್ತಾರೆ.

ಸಮಾಧಿ ಹಬ್ಬದ ಹಿಂದಿನ ದಿನ ಸಮಾಧಿಯನ್ನು ಸ್ವಚ್ಛಗೊಳಿಸಿ, ಅಲ್ಲಿಯ ಶಿಲುಬೆ ಇತ್ಯಾದಿಗಳಿಗೆ ಬಣ್ಣ ಬಳಿದು, ಮೊಂಬತ್ತಿಗಳನ್ನು ಇಡಲು ಗೂಡುಕಟ್ಟುತ್ತಾರೆ. ಹಬ್ಬದ ದಿನ ಸಹಸ್ರಾರು ಸಂಖ್ಯೆಯಲ್ಲಿ ಸಮಾಧಿಯ ಬಳಿ ಸೇರುತ್ತಾರೆ. ಸಮಾಧಿಗಳನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಿ, ಮೇಣದಬತ್ತಿ ಉರಿಸಿ, ಹಣ್ಣು, ಎಡೆ ಇಡುವುದರ ಮೂಲಕ ಪೂಜೆ ಸಲ್ಲಿಸುತ್ತಾರೆ. ಮನವಿ ಓಲೆಯನ್ನು ಓದಿ, ಆತ್ಮಗಳಿಗೆ ನಿತ್ಯ ಆನಂದ ಭಾಗ್ಯವನ್ನು ಕರುಣಿಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಅಲ್ಲಿ ನೆರೆದ ಬಂಧುಗಳಿಗೆ ಪುರಿ ಹಂಚುತ್ತಾರೆ. ಪುರಿ ಹಂಚುವುದು ಮತ್ತು ಸ್ವೀಕರಿಸುವುದು ತುಂಬಾ ಪವಿತ್ರವಾದ ಕೆಲಸ ಎಂದು ನಂಬುತ್ತಾರೆ. ಸಂಜೆಯವರೆಗೂ ಜನ ಜಾತ್ರೆಯೋಪಾದಿಯಲ್ಲಿ ನೆರೆದಿರುತ್ತಾರೆ. ಅಂದು ಇಡೀ ಸಮಾಧಿ ದೀಪದಾರತಿಗಳಿಂದ ಮಿನುಗುತ್ತಿರುತ್ತದೆ.