ಬೆಳಗಾವಿ ಜಿಲ್ಲೆಯ ಮೂಡಲಗಿಯ ಶಿವಬೋಧರಂಗರ ಪುಣ್ಯತಿಥಿಯ ಜಾತ್ರೆಯಲ್ಲಿ ಭಕ್ತರು ಸಕ್ಕರೆ ನೈವೇದ್ಯ ಮಾಡುವುದರೊಂದಿಗೆ ಹರಕೆ ತೀರಿಸುತ್ತಾರೆ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ಶುದ್ಧ ವೈಶಾಖದ ದಿನ ಜಾತ್ರೆ ಜರುಗುತ್ತದೆ. ಮೂರು ದಿನಗಳು ನಡೆಯುವ ಜಾತ್ರೆಯ ಕೊನೆಯ ದಿನ ಭಕ್ತರು ಸಕ್ಕರೆ ಹರಕೆ ಒಪ್ಪಿಸುತ್ತಾರೆ. ಹಿಂದೆ ಬೆಲ್ಲದ ಹರಕೆ ಒಪ್ಪಿಸುವ ಪದ್ಧತಿ ರೂಢಿಯಲ್ಲಿತ್ತೆಂದು, ಸಕ್ಕರೆ ಕಾರ್ಖಾನೆ ಗಳಿಂದಾಗಿ ರೈತರು ಬೆಲ್ಲದ ಗಾಣವನ್ನು  ಬಿಟ್ಟಿದ್ದರಿಂದ ಬೆಲ್ಲದ ಹರಕೆ ಮರೆಯಾಗಿ ಸಕ್ಕರೆ ಹರಕೆ ಬಂದಿದೆ ಎಂದು ಹೇಳುತ್ತಾರೆ.

ಶಿವಬೋಧರಂಗ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದರೆ ಸಕ್ಕರೆಯನ್ನು ಜಾತ್ರೆಯಲ್ಲಿ ನೈವೇದ್ಯ ಕೊಡುವುದಾಗಿ ಭಕ್ತರು ಹರಕೆ ಹೊತ್ತುಕೊಳ್ಳುತ್ತಾರೆ. ಸಾಮಾನ್ಯವಾಗಿ ಮಕ್ಕಳ ಜನನಕ್ಕೆ, ಅದರಲ್ಲೂ ಗಂಡು ಮಗುವಿನ ಜನನಕ್ಕೆ ಮೊರೆಯಿಟ್ಟ ಭಕ್ತರು ಮಗುವಿನ ತೂಕದಷ್ಟೇ ಸಕ್ಕರೆ ಅರ್ಪಿಸಿ ಸಂತಸಪಡುತ್ತಾರೆ. ಅಲ್ಲದೆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಫಸಲು ಉತ್ತಮವಾಗಿ ಬಂದರೆ, ಮಗಳಿಗೆ ಮಗನಿಗೆ ಉತ್ತಮ ಮದುವೆ ಸಂಬಂಧ ನಿಶ್ಚಿತವಾದರೆ, ಕೊಳೆವೆ ಬಾವಿಗೆ ಹೆಚ್ಚು ನೀರು ಬಂದರೆ ಇತ್ಯಾದಿ ಕೆಲಸಗಳು ಫಲಿಸಿದಾಗ ಶಿವಬೋಧರಂಗರಿಗೆ ಸಕ್ಕರೆ ನೈವೇದ್ಯ ಮಾಡುತ್ತಾರೆ. ನೈವೇದ್ಯದ ನಂತರ ಜಾತ್ರೆಗೆ ಬಂದವರಿಗೆಲ್ಲ ಸಕ್ಕರೆ ಹಂಚಿ ಪ್ರೀತಿ ತೋರುತ್ತಾರೆ. ಆತ್ಮೀಯರ ಬಾಯಿಗೆ ನೇರವಾಗಿ ಸಕ್ಕರೆಯನ್ನು ತಿನ್ನಿಸುವುದರ ಮೂಲಕ ಹತ್ತಿರವಾಗುತ್ತಾರೆ. ಅಂದಿನ ಬೆಲ್ಲದ ಜಾತ್ರೆಯನ್ನು ನೆನಪಿಸಿಕೊಂಡು ಸಕ್ಕರೆ ಜಾತ್ರೆಯ ಜೊತೆಗೆ ಹೋಲಿಸುತ್ತಾರೆ, ಚರ್ಚಿಸಿಕೊಳ್ಳುತ್ತಾರೆ.