ಎರಡು ನದಿಗಳು ಪ್ರವಾಹ ಬಂದಾಗ ಒಂದನ್ನೊಂದು ಸೇರುವ ಸ್ಥಳದಲ್ಲಿ ನಡೆಯುವ ನದಿ ಪೂಜೆ. ವಿಶೇಷವಾಗಿ ಪ್ರವಾಹ ಬಂದಾಗ ಈ ಆಚರಣೆಯನ್ನು ಮಾಡುತ್ತಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಳ ನೆರೆ ಬಂದಾಗ ಭಕ್ತರಿಂದ ತುಂಬುತ್ತದೆ. ಸಂಗಮ ಆಚರಣೆ ನಡೆಯುತ್ತದೆ. ಕುಮಾರಧಾರ ಹಾಗೂ ನೇತ್ರಾವತಿಗಳು ಸೇರುವ ಉಪ್ಪಿನಂಗಡಿಯೇ ಸಂಗಮ ಪೂಜೆಯ ಕೇಂದ್ರ ಬಿಂದು. ಶ್ರೀಸಹಸ್ರಲಿಂಗೇಶ್ವರ ದೇವಾಲಯವಿರುವ ಉಪ್ಪಿನಂಗಡಿಯನ್ನು ‘ದಕ್ಷಿಣ ಕಾಶಿ’, ‘ಗಯಾಪದ ಕ್ಷೇತ್ರ’, ‘ಉಬಾರ್’, ‘ವಬೊರ್’ ಇತ್ಯಾದಿ ಹೆಸರು ಗಳಿಂದ ಕರೆಯುತ್ತಾರೆ.

ಪ್ರವಾಹ ಬಂದಾಗ ಉಪ್ಪಿನಂಗಡಿ ಹಾಗೂ ಸುತ್ತಲಿನ ಜನ ಸಂಭ್ರಮಿಸುತ್ತಾರೆ. ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಸಂಗಮಿಸಿ, ಶ್ರೀಸಹಸ್ರಲಿಂಗೇಶ್ವರ ದೇವಾಲಯ, ಅರ್ಧ ಮುಳುಗಿಸಿದಾಗ ಜನರ ಹರ್ಷೋದ್ಘಾರ ಮುಗಿಲು ಮುಟ್ಟುತ್ತದೆ. ಎರಡೂ ನದಿಗಳ ಪ್ರವಾಹ ಸಂಗಮ ದೃಶ್ಯದ ದರ್ಶನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಹೋ ರಾತ್ರಿ ಬಂದು ಸೇರುತ್ತಾರೆ. ದೇವಾಲಯದ ಅಂಗಳದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರು, ಸಹಸ್ರಲಿಂಗೇಶ್ವರನ ದರ್ಶನ ಮಾಡಿ ಪುನೀತರಾಗುತ್ತಾರೆ.

ನದಿಗಳ ಪ್ರವಾಹ ಸಂಗಮಕ್ಕಾಗಿ ಲಿಂಗೇಶ್ವರನಿಗೆ ವಿಶೇಷವಾಗಿ ಅಲಂಕರಿಸಿದ ಪೂಜಾರಿಗಳು ವಿವಿಧ ಬಗೆಲ್ಲಿ ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ. ಕೊನೆಯಲ್ಲಿ ಭಕ್ತರಿಗೆಲ್ಲ ಪ್ರಸಾದ ವಿನಿಯೋಗವಿರುತ್ತದೆ. ಬೇಸಿಗೆಯಲ್ಲಿ ಎರಡು ನದಿಗಳ ನೀರು ಕಡಿಮೆ ಇದ್ದು, ನೋಡಿದಷ್ಟು ದೂರ ಮರಳ ರಾಶಿ ಕಾಣುವುದು. ನೀರು ಹರಿದು ಮಾಡಿದ ವಿವಿಧಾಕೃತಿಗಳ ಕಲ್ಲು ಬಂಡೆಗಳನ್ನು ನದಿ ಪಾತ್ರದಲ್ಲಿ ಕಾಣಬಹುದು.