ಕೃಷಿಸಂಬಂಧೀ ಸಮೃದ್ದಿಯ ಹಬ್ಬ. ದೇಶದಾದ್ಯಂತ ಆಚರಣೆಗೊಳ್ಳುವ ದೊಡ್ಡ ಹಬ್ಬ. ಪ್ರತಿವರ್ಷ ಮಾರ್ಗಶಿರ ಪುಷ್ಯ ಮಾಸದ ಚತುರ್ಥಿಯಂದು ಆಚರಿಸುತ್ತಾರೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನವನ್ನು, ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಹಬ್ಬವನ್ನು ವೈಯಕ್ತಿಕ ಹಾಗೂ ಊರೊಟ್ಟಿನ  ಹಬ್ಬವಾಗಿಯೂ ಆಚರಿಸುವ ಪದ್ಧತಿ ಇದೆ. ಊರಿಗೆ ಊರೇ ಆಚರಿಸುವ ಈ ಹಬ್ಬದಲ್ಲಿ ಜಾತಿ ಮತ ಕುಲಗೋತ್ರಗಳ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ, ಸಮೂಹದ ಕ್ಷೇಮ, ಹಿತಗಳಿಗಾಗಿ ಬೇಡಿ ಕೊಳ್ಳುತ್ತಾರೆ. ಮಕರ ಸಂಕ್ರಾತಿ ಯಂದು ಸ್ವರ್ಗದ ಬಾಗಿಲು ತೆರೆದು ಕೊಳ್ಳುತ್ತದೆಂಬ ನಂಬಿಕೆ ಇದೆ.

ಸುಗ್ಗಿಯ ಸಂಭ್ರಮದಿಂದ ಎಲ್ಲರ ಚಿಂತೆ ದೂರವಾಗಿ ಮನೆಮನೆಗಳಲ್ಲೂ ಹೊಸ ಬೆಳೆ ತುಂಬಿ ತುಳುಕಾಡುವ ಕಾಲವದು. ಬಗೆ ಬಗೆಯ ದವಸ ಧಾನ್ಯಗಳು ತುಂಬಿ, ಎಲ್ಲರೂ ಸಂತಸದಲ್ಲಿ ಸಂಭ್ರಮಿಸುತ್ತಾರೆ. ಈ ಸನ್ನಿವೇಶದಲ್ಲಿ ಕೃಷಿ ಕುಟುಂಬಗಳಿಗೆ ಸ್ವಲ್ಪ ಬಿಡುವು ದೊರೆತು; ಮನೆ ಕಟ್ಟುವುದು, ಮದುವೆ ಮಾಡುವುದು, ಹೆಣ್ಣು-ಗಂಡಿನ ಹುಡುಕಾಟಕ್ಕೆ ಆರಂಭಿಸುವುದು, ಭೂಮಿ ಇತ್ಯಾದಿ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಕೈ ಹಾಕುತ್ತಾರೆ. ಈ ಕಾಲಕ್ಕಾಗಿ ಸಂಕ್ರಾಂತಿಯನ್ನು ಜನಪದರು ಎದುರು ನೋಡುತ್ತಿರುತ್ತಾರೆ ಎನ್ನುವುದಕ್ಕೆ ಈ ಮಾತು ಸಾಕ್ಷಿ ನೀಡಿದೆ. “ಮೂಗೂರು ಮೂಲ, ಸಂಕ್ರಾಂತಿ ಕಾಟ” ಕಳೆಯಲಿ. ಸಂಕ್ರಾಂತಿಯ ದಿನಗಳಲ್ಲಿ ಚಳಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಎನ್ನುವುದನ್ನು “ಸಂಕ್ರಾಂತಿ ಹೊತ್ತಿಗೆ ಶಂಖಿನ ಗಾತ್ರ ಕಡಿಮೆಯಾಗಿ, ಶಿವರಾತ್ರಿ ಹೊತ್ತಿಗೆ ಶಿವ ಶಿವ ಅಂತ ಮಾಯವಾಯ್ತೆ” ಎಂಬ ಮಾತು ಧ್ವನಿಸಿದೆ.

ಸಂಕ್ರಾಂತಿಯಲ್ಲಿ ದನಕರುಗಳಿಗೆ ಕಿಚ್ಚು ಹಾಯಿಸುವ ಆಚರಣೆ, ಆ ದಿನ ಎಲ್ಲರೂ ಮಾಡುವುದು ಸಾಮಾನ್ಯವಾದ ಸಂಗತಿಯಾದರೂ, ಉಳಿದ ಆಚರಣೆಗಳು ಸಂಕ್ರಾಂತಿ ಆರಂಭವಾದ ದಿನದಿಂದ ಒಂದು ತಿಂಗಳವರೆಗೂ ಅನುಕೂಲ ದಿನಗಳಲ್ಲಿ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ “ಕೀಳ್ಗೆಟ್ಟ ಸಂಕ್ರಾಂತಿ ಊರಿಗೊಂದು ದಿನ” ಎಂದು ಗಾದೆ ಉದಯಿಸಿದೆ. ಬಗೆ ಬಗೆಯ ಧಾನ್ಯಗಳನ್ನು ಒಕ್ಕಲು ಮಾಡಿ ಮನೆ ತುಂಬುವ, ರೈತ ಜೀವನದ ಉಸಿರಾದ ದನಕರುಗಳ ಹಬ್ಬವಾದ ಈ ದಿನಗಳಲ್ಲಿ ಸೂರ್ಯ ಸಂಕ್ರಾಂತಿಯಿಂದ ಶಿವರಾತ್ರಿಯವರೆಗೆ ಹುಲ್ಲೆ ಕರುವಿನ ಮೇಲೆಯೂ, ಶಿವರಾತ್ರಿಯಿಂದ ಗೌರಿಹಬ್ಬದವರೆಗೆ ಬಸವನ ಮೇಲೆಯೂ ಪ್ರಯಾಣ ಮಾಡುತ್ತಾನೆಂದು  ನಂಬುತ್ತಾರೆ.

ಸಂಕ್ರಾಂತಿಗೆ ಒಂದು ತಿಂಗಳು ಮೊದಲು ಧನುರ್ಮಾಸ ಆರಂಭದಿಂದ ಊರಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭವಾಗುತ್ತವೆ. ಪ್ರತಿ ದಿನ ಒಂದೊಂದು ಮನೆಯವರು ದೇವರ ನೈವೇದ್ಯಕ್ಕಾಗಿ ಹೊಸ ಅಕ್ಕಿಯನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ಪ್ರತಿ ದಿನ ಬೆಳಗಿನ ಜಾವ ದೇವಸ್ಥಾನದ ದೇವರ ಅಡುಗೆ ಮನೆಯಲ್ಲಿ ಹರಕೆ ಭತ್ತದಿಂದ ನೈವೇದ್ಯ ತಯಾರಿಸಿ, ದೇವತೆಯನ್ನು ಪೂಜಿಸಿ, ಕಿಚಡಿ ನೈವೇದ್ಯವನ್ನು ಅರ್ಪಿಸುತ್ತಾರೆ. ಒಂದು ತಿಂಗಳ ಕಾಲ ತಮಟೆ ವಾದ್ಯಗಳ ಸಹಿತ ವಿಶೇಷ ಪೂಜೆ ಮಾಡಿ, ನೈವೇದ್ಯ ಅರ್ಪಿಸುವುದನ್ನು ‘ತಳಿಗೆ ಸೇವೆ’ ಎಂದು ಕರೆಯುತ್ತಾರೆ. ತಳಿಗೆ ಸೇವೆಯನ್ನು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಕಾಣಬಹುದು.

ಊರಿಗೆ ಊರೇ ಸಂಕ್ರಾತಿಯ ಸಂದರ್ಭದಲ್ಲಿ ಸಿಂಗಾರಗೊಂಡಿರುತ್ತದೆ. ಪ್ರತಿ ಮನೆ ಮನೆಗಳೂ, ಗುಡಿ ಗೋಪುರಗಳು, ಬೀದಿಗಳೂ ಬಾವಿಕಟ್ಟೆಗಳೂ ಸುಣ್ಣಬಣ್ಣಗಳಿಂದ ಕಂಗೊಳಿಸುತ್ತವೆ. ಅಂಗಳವನ್ನು ಸಗಣಿಯಿಂದ ಸಾರಿಸಿ, ರಂಗವಲ್ಲಿಗಳಿಂದ ಅಲಂಕರಿಸಲಾಗುತ್ತದೆ. ವ್ಯವಸಾಯ ಸಂಬಂಧೀ ವಸ್ತುಗಳಾದ ಕುಂಟೆ, ಕೊರಡು, ನೇಗಿಲು, ನೊಗ ಇತ್ಯಾದಿಗಳನ್ನು ತೊಳೆದು, ಮನೆಯ ಬಾಗಿಲನ್ನು ಬಿಡದೆ ಮಾವಿನ ತಳಿರುತೋರಣಗಳಿಂದ ಸಿಂಗರಿಸುತ್ತಾರೆ. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ದನಗಳಿಗೆ ಮೇವು ಎನ್ನುವ ದೋಣಿ, ಬೀಸುವ ಕಲ್ಲು, ಹೊಸಲು, ಬಲೆತೋಳು ಮರಮಟ್ಟುಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಹಾಗೂ ಕೆಂಪು ಮಣ್ಣಿನ ಪಟ್ಟಿಯನ್ನು ಹಾಕುತ್ತಾರೆ.  ನಂತರ ಮಾವಿನ ಸೊಪ್ಪು, ಉತ್ತರಾಣಿಕಡ್ಡಿ ಸೇರಿಸಿ ಮಾಡಿದ ‘ಪತ್ರೆ’ಗಳನ್ನು ಸ್ವಚ್ಛಗೊಳಿಸಿದ ವಸ್ತುಗಳಿಗೆ ಸಿಕ್ಕಿಸುತ್ತಾರೆ. ಅಲ್ಲದೇ ಮನೆಯ ಸೂರು, ಧಾನ್ಯದ ಮಡೆಯನ್ನು ಬಿಡದೇ ಪತ್ರೆ ಸಿಕ್ಕಿಸುತ್ತಾರೆ.

ಹೆಂಗಸರು ಹಬ್ಬದ ಅಡುಗೆಗಳನ್ನು ತಯಾರಿಸುತ್ತಿದ್ದರೆ, ಗಂಡಸರು ದನಕರು, ಎತ್ತು, ಎಮ್ಮೆ, ಕುರಿ, ಮೇಕೆಗಳನ್ನು ಕೆರೆಯಲ್ಲೊ, ಹೊಳೆಯಲ್ಲೂ ತೊಳೆದು ಅವುಗಳ ಕೋಡುಗಳಿಗೆ ಗೋಪಿಚಂದನ ಬಳಿದು, ಬಣ್ಣದ ಬ್ಯಾಗಡೆ ಅಂಟಿಸಿ, ತುದಿಗೆ ಕಿತ್ತಳೆ ಹಣ್ಣು ಪೋಣಿಸುತ್ತಾರೆ. ಮೈಗೆ ಗೌಸು ಹೊದಿಸಿ, ಕೊರಳಿಗೆ ಗಂಟೆ, ಹೂಮಾಲೆ ಹಾಕಿ ಅಲಂಕರಿಸುತ್ತಾರೆ. ಹೀಗೆ ಸರ್ವಾಲಂಕಾರ ಮಾಡಿದ ರಾಸುಗಳನ್ನು ಹೊಲದ ನಿಗದಿತ ಸ್ಥಳಕ್ಕೆ ಹೊಡೆದುಕೊಂಡು ಹೋಗುತ್ತಾರೆ. ಅಲ್ಲಿ ಒಲೆಯೊಂದನ್ನು ಮಾಡಿ, ಮನೆಯಿಂದ ಒಯ್ದು ಪಾತ್ರೆ, ಅಕ್ಕಿ ಇತ್ಯಾದಿಗಳಿಂದ ಕಿಚಡಿ ತಯಾರಿಸುತ್ತಾರೆ. ಹೊಲದ ಬಳಿಯಲ್ಲಿರುವ ಹುತ್ತಕ್ಕೆ ಹಾಲು ತುಪ್ಪ ಸುರಿದು, ನಾಗಪ್ಪನ ಪೂಜೆ ಮಾಡುತ್ತಾರೆ. ನಂತರ ರಾಸುಗಳನ್ನು ಪೂಜಿಸಿ, ಅವುಗಳ ಮೈನಲ್ಲಿರುವ ನಾಲ್ಕು ಉಣ್ಣೆಗಳನ್ನು ಸ್ವಲ್ಪ ಕಿಚಡಿಗೆ ಸೇರಿಸಿ ಎಲ್ಲ ರಾಸುಗಳ ಮೇಲೆ ಎರಚುತ್ತಾರೆ. ರಾಸುಗಳಿಗೆ ನೈವೇದ್ಯವಾಗಿ ಕಿಚಡಿಯನ್ನು ತಿನ್ನಿಸುತ್ತಾರೆ. ಕೆಲವು ಭಾಗಗಳಲ್ಲಿ ಉನ್ನಿಕೋಟೆ ದೇವತೆಗಳ ಗುಡಿಯ ಮುಂದೆ ಪೂಜೆ ಸಲ್ಲಿಸಿದ ನಂತರ ಹಿಟ್ಟಿನಿಂದ ರೊಟ್ಟಿ ತಯಾರಿಸಿ, ದನಗಳ ಮೈಮೇಲಿನ ಉಣ್ಣೆಗಳನ್ನು ರೊಟ್ಟಿಯೊಂದಿಗೆ ಸೇರಿಸಿ ಬೇಯಿಸುತ್ತಾರೆ. ಈ ರೊಟ್ಟಿಯನ್ನೇ ನೈವೇದ್ಯ ಮಾಡುತ್ತಾರೆ. ನೈವೇದ್ಯ ಮಾಡಿದ ಉಣ್ಣೆರೊಟ್ಟಿಯನ್ನು ಪಂಜು ಹಿಡಿದ ಹುಡುಗರು ತಮ್ಮ ಊರಿನ ಗಡಿಗೆ ತೆಗೆದುಕೊಂಡು ಹೋಗಿ, ಪಂಜಿನೊಂದಿೆ ಉಣ್ಣೆಯ ರೊಟ್ಟಿಯನ್ನು ಸುಟ್ಟು ‘ನೆರೆಯ ಊರಿನ ಗೌಡನ ಮಗ ಸತ್ತೋದ’ ಎಂದು ಹೇಳುತ್ತಾ ಊರ ಕಡೆಗೆ ಓಡಿ ಬರುತ್ತಾರೆ. ರಾಸುಗಳು ತಿಂದು ಬಿಟ್ಟ ಎಂಜಲನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ಅಂದು ತೀರ್ಥವಾಗಿ ಅವುಗಳ ಗಂಜಲನ್ನು ಸ್ವೀಕರಿಸುತ್ತಾರೆ. ಒಟ್ಟು ಈ ಪದ್ಧತಿಯನ್ನು ‘ಆಟಗುಳಿ’ ಎಂದು ಕರೆಯುತ್ತಾರೆ.

ಕಿಚ್ಚು ಹಾಯಿಸಲು ಸಿಂಗಾರಗೊಂಡ ಊರಿನ ಎಲ್ಲಾ ರಾಸುಗಳನ್ನು ತಂದು ನಿಲ್ಲಿಸುತ್ತಾರೆ. ವಾದ್ಯ ವಿಶೇಷಗಳ ಸದ್ದು ಆನಂದದ ವಾತಾವರಣ ಸೃಷ್ಟಿಸುತ್ತದೆ. ಊರಿನ  ದೇವರ ವಾಹನ ಬಸವನನ್ನು ಮೈತೊಳೆದು, ಮೈಗೌಸು ಹೊದಿಸಿ, ವಿವಿಧ ಬಗೆಯ ಗಂಟೆ ಸರ, ಹೂ ಹಾರಗಳೊಂದಿಗೆ ಸಿಂಗರಿಸಿ, ಕೋಡುಗಳಿಗೆ ಸುನೇರಿಹಚ್ಚಿ, ಕೋಡುಹಣಸು ಹಾಕಿರುತ್ತಾರೆ. ಸಿಂಗರಿಸಿದ ಬಸವನನ್ನು ರಾಸುಗಳ ಮುಂದೆ ಊರಿಗೆ ಎದುರಾಗಿ ನಿಲ್ಲಿಸಲಾಗುತ್ತದೆ. ಬಸವನ ಮುಂದೆ ದಾರಿಗೆ ಅಡ್ಡಲಾಗಿ ಮೂರು ಸಾಲುಗಳಲ್ಲಿ ಕಬ್ಬಿನ ತರಗು ಅಥವಾ ಹುಲ್ಲುರಾಶಿ ಹಾಕಿ ಬೆಂಕಿ ಹಚ್ಚುತ್ತಾರೆ. ದಗದಗಿಸುವ ಜ್ವಾಲೆಯನ್ನು ವಾದ್ಯಮೇಳದವರು ನಂತರ ಬಸವ ಆನಂತರ ಇತರ ರಾಸುಗಳು ಕಿಚ್ಚುಹಾಯ್ದು, ಊರ ಮುಂದಿನ ರಂಗಸ್ಥಳವನ್ನು ರಾಸುಗಳೊಂದಿಗೆ ಬಂದು ಸೇರುತ್ತಾರೆ. ಊರ ದೇವತೆಯನ್ನು ಪೂಜಿಸಿದ ಪೂಜಾರಿ ತೀರ್ಥವನ್ನು ರಾಸುಗಳಿಗೆ ಕೊಡುತ್ತಾನೆ. ತೀರ್ಥ ಸ್ವೀಕರಿಸಿದ ರಾಸುಗಳನ್ನು ತಮ್ಮ ತಮ್ಮ ಮನೆಗೆ ಕರೆತರುತ್ತಾರೆ. ಕೊಟ್ಟಿಗೆ ಪ್ರವೇಶಕ್ಕೆ ಮುನ್ನ ಮನೆಯ ಹೆಂಗಸರು ರಾಸುಗಳ ಕಾಲು ತೊಳೆದು ಪಾದಗಳಿಗೆ ಕುಂಕುಮ ವಿಭೂತಿ ಹಚ್ಚಿ, ಪೂಜಿಸಿ, ಬರಮಾಡಿಕೊಳ್ಳುತ್ತಾರೆ. ಕೆಲವು ಭಾಗಗಳಲ್ಲಿ ಒನಕೆಯನ್ನು ಬಾಗಿಲಲ್ಲಿ ಅಡ್ಡ ಇಟ್ಟು ಅದರ ಮೇಲೆ ದಾಟಿಸುವ ಪದ್ಧತಿ ಇದೆ. ಮಲೆನಾಡಿನಲ್ಲಿ ದೀಪಾವಳಿಯ ಗೋಪೂಜೆಯಲ್ಲಿ ರಾಸುಗಳನ್ನು ಒನಕೆ ದಾಟಿಸುವ ಪದ್ಧತಿ ಇದೆ. ಕೊಟ್ಟಿಗೆ ಪ್ರವೇಶಿಸಿದ ರಾಸುಗಳನ್ನು ನಿಗದಿತ ಸ್ಥಳದಲ್ಲಿ ಕಟ್ಟಿ ನಂತರ ಕೊಟ್ಟಿಗೆಯ ತುಂಬಾ ಉಗನಿ ಹೂವು  ಹರಡುತ್ತಾರೆ. ಕೊಟ್ಟಿಗೆಯ ಗೂಡಿನಲ್ಲಿ ದೀಪ ಉರಿಸಿ, ರಾಸುಗಳನ್ನು ಪೂಜಿಸಿ, ಎಡೆ ತೋರಿಸುತ್ತಾರೆ. ಎಡೆಯಲ್ಲಿ ಹಬ್ಬದ ಅಡುಗೆಯ ಎಲ್ಲಾ ತಿನಿಸುಗಳು ಇರುತ್ತವೆ. ನೈವೇದ್ಯದ ನಂತರ ಎಡೆಯನ್ನು ರಾಸುಗಳಿಗೆ ತಿನ್ನಿಸುತ್ತಾರೆ. ಕೆಲವು ಭಾಗಗಳಲ್ಲಿ ಅಕ್ಕಿ, ಬೆಲ್ಲ ತಿನ್ನಿಸುವುದುಂಟು. ಶೃಂಗಾರಗೊಂಡ ರಾಸುಗಳಿಗೆ ‘ಕಣ್ಣಾಸ್ರ’ ಆಗದಿರಲೆಂದು “ಸುವ್ವಿರೊ ಸಂಗಯ್ಯ ಸುವ್ವಿರೂ ಲಿಂಗಯ್ಯ, ಸುಲ್ವೆಂದು ಬಾರೋ ಬಸವಯ್ಯ ನೀನು, ಸುಲ್ವೆಂದು ಬಾರೋ ಬಸವಯ್ಯ’ ಎಂದು ಹಾಡುತ್ತಾ ಕಪ್ಪು, ಕೆಂಪು ಓಕಳಿ ನಿವಾಳಿಸುತ್ತಾರೆ.

ಸಂಕ್ರಾಂತಿಯ ಕಿಚ್ಚು ಹಾಯಿಸುವುದು ಹಾಗೂ ಇತರ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಶಿವಮೊಗ್ಗ ಜಿಲ್ಲೆಯ ಭಾಗಗಳಲ್ಲಿ ಊರಿನ ತಳವಾರನು ಪ್ರತಿ ಮನೆಯಿಂದಲೂ ಅಕ್ಕಿ, ಬೆಲ್ಲ, ಹಿಟ್ಟು, ಎಣ್ಣೆ, ಮೆಣಸಿನಕಾಯಿ, ಉಪ್ಪು ಇತ್ಯಾದಿಗಳನ್ನು ಸಂಗ್ರಹಿಸಿ, ಅದರಲ್ಲಿ ಅರ್ಧಭಾಗ ತಾನಿಟ್ಟುಕೊಂಡು ಉಳಿದ ಭಾಗವನ್ನು ಊರಿನ ಯಜಮಾನರ ಮನೆಗೆ ಕೊಡುತ್ತಾನೆ. ತಳವಾರ ನೀಡಿದ ವಸ್ತುಗಳನ್ನು ಕಡಾಯಿಯೊಂದರಲ್ಲಿ ಹಾಕಿ ಬೇಯಿಸಿ ‘ಚರಗ’ ಸಿದ್ಧಪಡಿಸುತ್ತಾನೆ.

ಕಿಚ್ಚು ಹಾಯಿಸುವ ದಿನ ಊರು ದನಗಾಹಿಯೊಬ್ಬ ಕಾಡಿನಲ್ಲಿ ಸಿಗುವ ವಿವಿಧ ಜಾತಿಯ ಹೂಗಳನ್ನು ಸಂಗ್ರಹಿಸಿ, ಎಲ್ಲರ ಮನೆ ಹಾಗೂ ಕೊಟ್ಟಿಗೆಗಳ ಬಾಗಿಲಿಗೆ ‘ಹೆಚ್ಚಲಿ ಹೋಲಿಗ್ಯ’ ಎಂದು ಹೇಳಿ ಮೂರು ಹಿಡಿ ಹೂ ಹಾಕುತ್ತಾನೆ. ಕಿಚ್ಚು ಹಾಯಿಸುವ ನಿಗದಿತ ಸ್ಥಳದ ಪಕ್ಕದಲ್ಲಿ ‘ಉನ್ನಿಕೋಟೆ’ ಎಂಬ ಎರಡು ಸಣ್ಣ ಹಾಗೂ ದೊಡ್ಡ ದೇವತೆಗಳ ಗುಡಿಗಳನ್ನು ತಯಾರಿಸಿ, ಹರಳೆಣ್ಣೆ ದೀಪ ಊರಿಸುತ್ತಾರೆ. ಕೆಲವು ಭಾಗಗಳಲ್ಲಿ ‘ಗೊಲ್ಲತವ್ವ’ ಎಂದು ಕರೆಯುವ ಉನ್ನಿಕೋಟೆ ದೇವತೆಯನ್ನು ಮಣ್ಣಿನಿಂದ ಮಾಡಿ, ಹುಲ್ಲಿನಿಂದ ನಿರ್ಮಿಸಿದ ಗುಡ್ಲಿನಲ್ಲಿ ಇಟ್ಟು ಪೂಜಿಸಿ, ಮೊಸರನ್ನ ಜೊತೆಗೆ ಹಬ್ಬಕ್ಕಾಗಿ ಮಾಡಿದ ತಿಂಡಿತಿನಿಸುಗಳ ನೈವೇದ್ಯ ಮಾಡುತ್ತಾರೆ. ನಂತರ ದನಗಾಹಿಗಳಿಗೆ ಎಣ್ಣೆ ಮಜ್ಜನ ಮಾಡಿಸಿ, ಬಾಳೆಹಣ್ಣು ತಿನ್ನಿಸುತ್ತಾರೆ. ಆಗಲೇ ಸಿದ್ಧಪಡಿಸಿದ ಚರಗ, ಪಂಜುಗಳನ್ನು ಹಿಡಿದ ಯುವಕರು, ರಾಸುಗಳ ಸುತ್ತಲೂ ‘ಹೆಚ್ಚಲಿ, ಹೋಲಿಗ್ಯ’ ಎಂದು ಹೇಳುತ್ತಾ ಚರಗ ಚೆಲ್ಲುತ್ತಾರೆ. ದೊಂದಿ ಹಿಡಿದವನೊಬ್ಬ ಗುಡ್ಲಿಗೆ ಬೆಂಕಿ ಇಟ್ಟು, ರಾಸುಗಳನ್ನು ಕಿಚ್ಚು ಹಾಯಿಸುತ್ತಾರೆ. ಉರಿ ತೀಕ್ಷ್ಣವಾಗಿರದೇ ರಾಸುಗಳ ಮೈಯನ್ನು ಸುಡಲಾರದು, ಧನುರ್ಮಾಸದ ಕುಳಿರ್ಗಾಳಿಗೆ ಮುದುಡಿದ ರಾಸುಗಳ ದೇಹಕ್ಕೆ ಬೆಚ್ಚಗಿನ ಅನುಭವ ನೀಡುತ್ತದೆ. ರಾಸುಗಳ ಮೈಮೇಲಿನ, ಹೊಟ್ಟೆ ಭಾಗದಲ್ಲಿ ಅಂಟಿಕೊಂಡ ಹುಳು ಹುಪ್ಪಟೆಗಳು, ಚಿಗಟ, ಉಣ್ಣೆಗಳು ಬೆಂಕಿಯ ಉರಿಗೆ ಉದುರಿ ದನಕರುಗಳ ಮೈ ಹಗುರಾಗಲಿ ಎನ್ನುವ ಆಶಯವಿದೆ. ಆ ದಿನ ಎತ್ತುಗಳನ್ನು ವ್ಯವಸಾಯಕ್ಕಾಗಲಿ, ಗಾಡಿ ಎಳೆಸುವುದಕ್ಕಾಗಲಿ ಬಳಸುವಂತಿಲ್ಲ. ಹಸುಗಳಿಂದ ಹಾಲು ಕರೆಯ ಬಾರದೆಂಬ ನಿಯಮವಿದೆ.

ಹಬ್ಬಕ್ಕೆ ಒಂದು ವಾರ ಮೊದಲು ಪ್ರತಿ ಮನೆಗೆ ಒಬ್ಬರಂತೆ ಕಾಡಿಗೆ ಹೋಗಿ ಬೇಟೆಯಾಡುವ ಪದ್ಧತಿ ಇದೆ. ಬೇಟೆಯಲ್ಲಿ ಕೈಗೆ ಸಿಕ್ಕ ಪ್ರಾಣಿಗಳನ್ನು ಜೀವಂತ ಹಿಡಿದು ತರುತ್ತಾರೆ. ಸಂಕ್ರಾಂತಿಯಂದು ಮೆರವಣಿಗೆ ಹೊರಟ ದೇವತೆಗಳ ಮುಂದೆ ಹಿಡಿದು ತಂದ ಪ್ರಾಣಿಗಳ ಬಾಲ ಅಥವಾ ಕಿವಿಯನ್ನು ಕತ್ತರಿಸಿ ಹಾಕುತ್ತಾರೆ. ಕತ್ತರಿಸಿಕೊಂಡ ಪ್ರಾಣಿಗಳು ಜನಸಮೂಹ ಹಾಗೂ ನೋವಿನ ಸಂಕಟ ತಾಳಲಾರದೇ ಓಡಿ ಹೋಗುತ್ತವೆ. ಹೀಗೆ ಮಾಡುವುದರಿಂದ ತಮ್ಮ ದನಕರುಗಳಿಗೆ ಕಾಡು ಪ್ರಾಣಿಗಳಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಂಬುತ್ತಾರೆ. ಮಲೆನಾಡು ಹಾಗೂ ಕೊಡಗಿನ ಕಡೆ ‘ಬೇಟೆ ಹಬ್ಬ’ ಎಂದೇ ಕರೆಯುವ ಹಬ್ಬವನ್ನು ಮಾಡುತ್ತಾರೆ.  ಅಂದು ಸಾಮೂಹಿಕವಾಗಿ ಬೇಟೆಗೆ ಪ್ರಾಣಿಗಳನ್ನು ಜೀವಂತವಾಗಿ ಇಲ್ಲ ಕೊಂದು ತಂದು, ಗ್ರಾಮದೇವತೆಗೆ ಬಲಿಕೊಟ್ಟು, ಮಾಂಸದ ಅಡುಗೆಯ ನೈವೇದ್ಯ ಅರ್ಪಿಸಿ, ಪೂಜಿಸುತ್ತಾರೆ. ಹಸಿಮಾಂಸವನ್ನು ಹಂಚಿಕೊಂಡು ಮನೆ ಮನೆಯಲ್ಲೂ ಅಡುಗೆ ಮಾಡಿ ಎಡೆ ಇಟ್ಟು ಪೂಜಿಸುವ ಪದ್ಧತಿ ಇದೆ.

ಎಳ್ಳು ಬೀರುವುದು ಸಂಕ್ರಾಂತಿಯಲ್ಲಿ ಮುಖ್ಯವಾದ ಆಚರಣೆಗಳಲ್ಲಿ ಒಂದು. ಎಳ್ಳು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ಎಳ್ಳನ್ನು ಹದವಾಗಿ ಹುರಿದು, ಸಿಪ್ಪೆ ತೆಗೆದ ಶೇಂಗಾ, ಅಂದವಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲದಚ್ಚು, ಸಕ್ಕರೆ ಅಚ್ಚು, ಹುರಿಗಡಲೆ ಮಿಶ್ರಣ ಜೊತೆಗೆ ಕಬ್ಬಿನ ತುಂಡುಗಳನ್ನು ಸಿದ್ಧಪಡಿಸಿಕೊಂಡು, ಮನೆಯ ದೇವರಿಗೆ ಎಳ್ಳುಬೆಲ್ಲದ ನೈವೇದ್ಯ ಮಾಡಿ, ಎಳ್ಳುಬೀರಲು ಸಿದ್ಧರಾಗುತ್ತಾರೆ. ಹೆಣ್ಣು ಹೆತ್ತವರ ಪಾಲಿಗೆ ಇದು ವಿಶೇಷ ಸಂಪ್ರದಾಯ. ಹೊಸ ಉಡುಗೆ ತೊಟ್ಟ ಹೆಣ್ಣುಮಕ್ಕಳನ್ನು ಹಸೆಯ ಮೇಲೆ ಕೂರಿಸಿ ಆರತಿ ಮಾಡುವುದು ವಾಡಿಕೆ. ಎಳ್ಳು ಫಲವಂತಿಕೆಯ ಸಂಕೇತವಾಗಿಯೂ, ಕಬ್ಬು ಸಂಪತ್ತಿನ ಸಂಕೇತವಾಗಿ ಕಂಡುಬರುತ್ತದೆ. ಅಂದು ಶನಿಯ ಕಾಟವನ್ನು ತೊಲಗಿಸಲು ಎಳ್ಳನ್ನು ಶನಿದೇವರೆಂದು ಭಾವಿಸಿ, ಗುಡಿಗಳಲ್ಲಿ ಎಳ್ಳಿನ ದೀಪವನ್ನು ಹಚ್ಚಿ ಶನಿಯನ್ನು  ದೂರ ಮಾಡುತ್ತಾರೆ. ಹೆಂಗಸರು ತಮ್ಮ ಅಖಂಡ ಸೌಭಾಗ್ಯದ ಪ್ರಾಪ್ತಿಗಾಗಿಯೂ ‘ಎಳ್ಳಿನ ವ್ರತ’ವನ್ನು ಮಾಡುವ ಪದ್ಧತಿ ಇದೆ. ಕೆಲವು ಭಾಗಗಳಲ್ಲಿ ಎಳ್ಳುಬೆಲ್ಲಗಳ ಮಿಶ್ರಣವನ್ನು ಮಕ್ಕಳ ತಲೆಯ ಮೇಲೆ ಸುರಿದು ಆರತಿ ಮಾಡುತ್ತಾರೆ. ಎಳ್ಳುಬೆಲ್ಲದ ಮಿಶ್ರಣ ಹಾಗೂ ಕಬ್ಬಿನ ತುಂಡನ್ನು ಎಲ್ಲರಿಗೂ ನೀಡಿ, ಎಳ್ಳುಬೆಲ್ಲದಂತಿರೋಣ ಎಂದು ಹಾರೈಸುತ್ತಾರೆ.

ಸಂಕ್ರಾಂತಿಯ ಪುರುಷ ಯಾವ ವಾಹನದ ಮೇಲೆ ಪ್ರಯಾಣ ಮಾಡುತ್ತಾನೆ ಎಂಬುದನ್ನು ಪಂಚಾಂಗಗಳಿಂದ ತಿಳಿದು ಆ ವರ್ಷದ ಮಳೆ, ಬೆಳೆ ಇತ್ಯಾದಿಗಳನ್ನು ಲೆಕ್ಕ ಹಾಕುತ್ತಾರೆ. ಸಂಕ್ರಾಂತಿ ಪುರುಷ ಮೂರು ತಲೆಗಳನ್ನು ಹೊಂದಿದ್ದು, ಎರಡು ಮುಖ, ಐದು ಬಾಯಿ, ಮೂರು ಕಣ್ಣು, ಜೋಲಾಡುವ ಕಿವಿ, ಹುಬ್ಬು, ಕೆಂಪು ಹಲ್ಲು, ಉದ್ದನೆಯ ಮೂಗು, ಎರಡು ಕಾಲು, ಅರ್ಧಭಾಗ ಹೆಣ್ಣು ಅರ್ಧ ಭಾಗ ಗಂಡು ಆಗಿದ್ದು, ಕಪ್ಪು ಬಣ್ಣದಿಂದ ಕೂಡಿದ ವಿಕಾರ ಸ್ವರೂಪ ಹೊಂದಿರುತ್ತಾನೆ. ಗಂಗಾನದಿಯಲ್ಲಿ ಸ್ನಾನ ಮಾಡಿ, ಕಾವೀ ಅಚ್ಚಾದನ ತೊಟ್ಟು, ರಕ್ತ ಚಂದನದ ಲೇಪನ ಹೊಂದಿ, ಸುರಹೊನ್ನೆಯ ಪುಷ್ಪ ಮುಡಿದು, ರುದ್ರಭೂಷಣ, ಹವಳದ ಆಭರಣ ತೊಟ್ಟು, ಕ್ಷೀರಾನ್ನ ತುಂಬಿದ ತಲೆ ಬುರುಡೆ ಕೈಯಲ್ಲಿ ಹಿಡಿದು ಯಾವ ಪ್ರಾಣಿಯ ಮೇಲೆ ಸವಾರಿ ಮಾಡುತ್ತಾನೋ ಆ ಪ್ರಾಣಿಗೆ ಆ ವರ್ಷ ಕಷ್ಟ ತಪ್ಪಿದ್ದಲ್ಲ ಎನ್ನುವ ಲೆಕ್ಕಾಚಾರವಿದೆ.

ಸಂಕ್ರಾಂತಿಯಲ್ಲಿ ವಿಶೇಷವಾಗಿ ಆ ವರ್ಷ ಬೆಳೆದ ಧಾನ್ಯಗಳಿಂದ ಹಾಗೂ ಕಾಡಿನಲ್ಲಿ ದೊರೆಯುವ ಗೆಣಸು, ಅವರೆಕಾಳು ಇತ್ಯಾದಿಗಳಿಂದ ಅಡುಗೆ ತಯಾರಿಸುತ್ತಾರೆ. ಅವರೆಕಾಳಿನ ಪಲ್ಯ, ಕಿಚಡಿ, ಗೆಣಸಿನ ಕಡಬು, ಪಾಯಸ ಇತ್ಯಾದಿಗಳನ್ನು ತಯಾರಿಸುತ್ತಾರೆ. ಕಡಬನ್ನು ಹೊಲ, ಗದ್ದೆಗಳ ಮೆದೆಗಳಲ್ಲಿ ಬಚ್ಚಿಡುವ ಸಂಪ್ರದಾಯವಿದೆ. ಮಲೆನಾಡಿನ ಕಡೆ ಭೂಮಿ ಹುಣ್ಣಿಮೆ ದಿನ ಅಕ್ಕಿಯಿಂದ ಮಾಡಿದ ಕೊಟ್ಟೇ ಕಡುಬನ್ನು ಭೂಮಿಪೂಜೆ ನಂತರ ಗದ್ದೆಯಲ್ಲಿ ಹೂತು ಬರುವುದನ್ನು ಇಲ್ಲಿ ನೆನಪಿಸಬಹುದು. ಹೀಗೆ ಹೂತ ಕಡುಬನ್ನು ಬೆಳೆ ಕಟಾವು ಆದ ನಂತರ ಕಿತ್ತು ತಂದ ಪಾಯಸ ಮಾಡಿ, ಮನೆ ದೇವರಿಗೆ ಎಡೆ ಮಾಡಿ, ಊಟ ಮಾಡುತ್ತಾರೆ.

ಉತ್ತರ ಕರ್ನಾಟಕ ಭಾಗಗಳಲ್ಲಿ ಸಂಕ್ರಾಂತಿಯ ಮುನ್ನಾ ದಿನದ ರೊಟ್ಟಿ ಹಬ್ಬದಲ್ಲಿ, ಜೋಳ ಕುಟ್ಟಿ, ಬೇಯಿಸಿ, ಮೊಸರು ಸೇರಿಸಿ ಮಾಡಿದ ಬಾನ, ಅವರೆಕಾಯಿ, ಕಡಲೆಕಾಯಿಗಳ ಪಲ್ಯ, ಬದನೆಕಾಯಿ ಎಣ್ಣೆಗಾಯಿ, ಬದನೆಕಾಯಿ, ಕುಂಬಳಕಾಯಿ ಬರ್ತಾ, ಕೆಂಪುಮೆಣಸಿನ ಕಾಯಿ ಚಟ್ನಿ, ಕರಿಂಡಿ, ರಂಜಕ, ಅಗಸಿ, ಶೇಂಗಾ, ಪುಟಾಣಿ, ಗುರೆಳ್ಳು ಚಟ್ನಿಗಳು, ಗಟ್ಟಿ ಮೊಸರು, ಎಳ್ಳು ಹಚ್ಚಿದ ಕಟಕು ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಎಳೆ ಸೌತೆಕಾಯಿ ಗಜ್ಜರಿ, ಮೂಲಂಗಿ ಪಚ್ಚಡಿ ಹಾಗೂ ಮಾದಲಿ ಹುಗ್ಗಿ ಮಾಡುತ್ತಾರೆ. ಮಾದಲಿಯನ್ನು ದನಕರುಗಳಿಗೆ ತಿನ್ನಿಸಿ, ತಾವು ತಿನ್ನುತ್ತಾರೆ. ಅಂದು ತಯಾರಿಸಿದ ಎಲ್ಲಾ ಅಡುಗೆಗಳನ್ನು ಬುಟ್ಟಿಯೊಂದರಲ್ಲಿ ತುಂಬಿಕೊಂಡು, ಪೂಜಾ ಸಾಮಾಗ್ರಿಗಳೊಂದಿಗೆ ತಮ್ಮ ತಮ್ಮ ಹೊಲದ ಕಡೆ ಹೋಗುತ್ತಾರೆ. ಭೂಮಿತಾಯಿಯನ್ನು ಸಿಂಗರಿಸಿ, ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ. ನಂತರ ನೈವೇದ್ಯವನ್ನು ತಮ್ಮ ಹೊಲಗಳಿಗೆ ಎರಚಿ ಬರುತ್ತಾರೆ. ಇದನ್ನು ಚರಗ ಚೆಲ್ಲುವುದು ಎಂದು ಕರೆಯುತ್ತಾರೆ. ತಾನು ಬೆಳೆದಿದ್ದನ್ನು ಭೂಮಿತಾಯಿ ಹಾಗೂ ಪಶು, ಪಕ್ಷಿಗಳಿಗೆ ಹಂಚುವ ಸಂಕೇತವಾಗಿ ಕಂಡುಬರುತ್ತದೆ. ಸಂಕ್ರಾಂತಿಯ ಮರುದಿನವನ್ನು ಕರಿ ದಿನವನ್ನಾಗಿ ಆಚರಿಸುತ್ತಾರೆ. ಕರಿ ಕೆಟ್ಟ ದಿನವೆಂದೇ ಕರೆಯುತ್ತಾರೆ. ಆ ದಿನ ಪ್ರತಿಯೊಬ್ಬರ ಮನೆಯಲ್ಲೂ ದೋಸೆ ಮಾಡುತ್ತಾರೆ. ಮಾಡಿದ ಮೊದಲ ದೋಸೆಯನ್ನು ಮನೆಯ ಹಿರಿಯ ಮಗನ ಬೆನ್ನ ಮೇಲೆ ಬಡಿದು ಮನೆಯ ಮೇಲೆ ಎಸೆಯುತ್ತಾರೆ. ಕಾಗೆ, ಗುಬ್ಬಿಗಳು ತಿನ್ನಲಿ ಎನ್ನುವ ಆಶಯವಿದ್ದಂತೆ ತೋರುತ್ತದೆ.

ಆಹಾರ ಪದ್ಧತಿಯಲ್ಲಿ ಭಿನ್ನತೆಯಿದ್ದು, ಅವುಗಳಲ್ಲಿ ವೈಜ್ಞಾನಿಕ ಕಾರಣಗಳನ್ನು ನೋಡ ಬಹುದು. ಹಬ್ಬದ ಅಡುಗೆ ಹವಾಮಾನ ಹಾಗೂ ಬೆಳೆಗಳಿಗೆ ನೇರ ಸಂಬಂಧವಿರುತ್ತದೆ. ಮಲೆನಾಡು ಹಾಗೂ ಕೊಡಗು ಭಾಗಗಳಲ್ಲಿ ಸಂಕ್ರಾಂತಿಯಂದು ನೈವೇದ್ಯಕ್ಕಾಗಿ ಕ್ರಮವಾಗಿ ಮೀನುಸಾರು, ಕೋಳಿಸಾರು ಮತ್ತು ಕಡುಬು, ಪೊಂಗಲು ಇರುತ್ತವೆ. ಇವು ಚಳಿ ಪ್ರದೇಶಗಳಾಗಿದ್ದುದರಿಂದ ಶರೀರದ ಶಾಖೋತ್ಪತ್ತಿಗೆ ಮೇಲಿನ ಆಹಾರ ಅಗತ್ಯವಾಗಿದೆ. ಮಂಡ್ಯ, ಹಾಸನ ಮುಂತಾದ ಪ್ರದೇಶಗಳಲ್ಲಿ ಅವರೆಕಾಳು, ಹಿತ್ತಲವರೆ, ಮರಗೆಣಸು, ಹಸಿಗೆಣಸು ಇತ್ಯಾದಿಗಳನ್ನು ಹಬೆಯಲ್ಲಿ ಬೇಯಿಸಿ ನೈವೇದ್ಯಕ್ಕೆ ಇಡುವುದು ಸಾಮಾನ್ಯ. ಇವು ಶರೀರಕ್ಕೆ ತಂಪನ್ನು ನೀಡುವ ಆಹಾರ ಪದಾರ್ಥಗಳಾಗಿವೆ. ಈ ಅಂಶವನ್ನು ಉತ್ತರ ಕರ್ನಾಟಕ ಭಾಗದ ಆಹಾರ ಪದಾರ್ಥಗಳಲ್ಲಿ ಕಾಣಬಹುದು.

ಸಂಕ್ರಾಂತಿ ಸೂರ್ಯಾರಾಧನೆ, ರಾಸುಗಳ ಆರಾಧನೆ, ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಬೆಳೆಗಳ ಆರಾಧನೆಯಾಗಿದ್ದು, ಕೃಷಿಕರ ಪಾಲಿಗೆ ದೊಡ್ಡ ಹಬ್ಬವಾಗಿದೆ. ರಾಸುಗಳಲ್ಲಿ ದೇವತೆಗಳನ್ನು ಕಂಡ ಜನಪದ ಮನಸ್ಸು ಕಾಮಧೇನು ಎಂದು ಗೌರವಿಸಿ, ಪೂಜೆಗೆ ಆಯ್ಕೆ ಮಾಡಿಕೊಂಡಿದೆ. ಈಶ್ವರನ ವಾಹನವಾಗಿಸಿ, ದೈವತ್ವಕ್ಕೇರಿಸಿದೆ. ಗೋವಿನ ಕಥನವು ರಾಸುಗಳ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಗೋವಿನ ಕಥೆಯಲ್ಲಿ ಬರುವ ಹುಲಿರಾಯ ಪುಣ್ಯಕೋಟಿಯನ್ನು ತಿನ್ನದೇ ಬಿಟ್ಟ ದಿನದ ನೆನಪಿಗಾಗಿ ಸಂಕ್ರಾಂತಿಯನ್ನು ಉತ್ತರ ಭಾರತದವರು ಆಚರಿಸುತ್ತಾರೆ.

ಸೂರ್ಯ ಕೇಂದ್ರಿತವಾದ ಈ ಆರಾಧನೆಯಲ್ಲಿ ಸೂರ್ಯನನ್ನು ಸರ್ವಾಶಕ್ತನೆಂದು, ಚೈತನ್ಯದಾಯಕ ಶಕ್ತಿಯೆಂದು, ಸಂಪತ್ತಿನ ಒಡೆಯನೆಂದು, ಕ್ಷೇಮಪರಿಪಾಲಕನೆಂದು ಸತ್ಯದ ಸಂಕೇತವೆಂದೂ, ಸಪ್ತದೇವತೆಗಳ ಪ್ರಮುಖನೆಂದೂ, ಸೂರ್ಯನಿಲ್ಲದೇ ಸೃಷ್ಟಿ ಅಸಾಧ್ಯ, ಸಕಲ ಸಮೃದ್ದಿಗೆ ಸೂರ್ಯನೇ ಮೂಲವೆಂದು ಅವನನ್ನು ಉತ್ತರಾಯಣ ಪುಣ್ಯಕಾಲದಲ್ಲಿ ‘ಮಕರ ಸಂಕ್ರಮಣ’ದ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ. ಎಕ್ಕ ಗಿಡದಲ್ಲಿ ಸೂರ್ಯನು ನೆಲೆಸಿದ್ದಾನೆಂದು ಜನಪದರು ನಂಬಿ, ಎಕ್ಕದ ಎಲೆಯ ಸ್ನಾನ ಮಾಡುತ್ತಾರೆ.