ಉತ್ತರ ಕರ್ನಾಟಕದ ಭಾಗದಲ್ಲಿ ವಧುವಿಗೆ ಮದುವೆ ವೇಳೆ ತವರಿನವರು ನೀಡುವ ಉಡುಗೊರೆ ಸಂಪ್ರದಾಯದಲ್ಲಿ ಸಂಸಾರಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳಿರುತ್ತವೆ. ಉಡುಗೆ, ತೊಡುಗೆ, ಆಭರಣ, ಹಣ, ಅಡುಗೆ ವಸ್ತುಗಳು, ಮಲಗುವ ಮಂಚ ಹಾಗೂ ಹಾಸಿಗೆ, ಕಪಾಟುಗಳು ಕನ್ನಡಿ, ಬಾಚಣಿಗೆ, ಉಲನ್‌ನಿಂದ ಮಾಡಿದ ದುಬುಟಿ, ಬಾಗಿಲು, ಕಿಟಕಿಗಳ ಪರದೆಗಳು, ಕೈ ಕಸೂತಿ ಬಟ್ಟೆಗಳು ಅಲ್ಲದೇ ಇನ್ನೂ ಮುಂತಾದ ಅಲಂಕಾರಿಕ ವಸ್ತುಗಳು ‘ಸುರುಗಿ’ಯಲ್ಲಿ ಸೇರಿಕೊಂಡಿರುತ್ತವೆ. ಹಿಟ್ಟಿನಿಂದ ತಯಾರಿಸಿದ ಅಲಂಕಾರಿಕ ವಸ್ತುಗಳಾದ ಮುರುಗಿ ಗೌಲಿ, ಮಲ್ಲಿಗೆ ಹೂ, ತೊಗರಿ ಬೆಳೆ, ಗಿರಿಚಿಪ್ಪು, ಸೋವೆ ಬೀಜ, ಪಗಡಿ ಹೂ, ಯಾಲಕ್ಕಿ, ಅವರೆ ಹೂ, ಎಲೆ, ಅಡಕೆ, ಸುರುಳಿ ಹೋಳಿಗೆ, ಕಂಚಿಕಾಯಿ, ನರಿಹಪ್ಪಳ ವಿವಿಧ ಬಗೆಯ ಸಂಡಿಗೆಗಳು, ಶಾವಿಗೆ, ಜಡಿ ಶಾವಿಗೆ ಇತ್ಯಾದಿಗಳು ಸೇರಿರುತ್ತವೆ.

ಮದುವೆ ಸಮಾರಂಭದ ಸಂಜೆ ವಿಶೇಷವಾಗಿ ಸುರುಗಿ ಕುಂಭವನ್ನು ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆಯಲ್ಲಿ ವಾದ್ಯಮೇಳ, ಸುರುಗಿ ಹೊತ್ತ ಹೆಣ್ಣುಮಕ್ಕಳು ಹಾಗೂ ಸುರುಗಿ ಕುಂಭ ಹೊತ್ತ ಸುಮಂಗಲಿಯರು ಹಾಗೂ ಮದುವೆಗೆ ಬಂದವರು ಸೇರಿರುತ್ತಾರೆ. ಮೆರವಣಿಗೆಯಲ್ಲಿ ಕುಂಭ ಹೊತ್ತ ಸುಮಂಗಲೆಯರಿಗೆ, ಸೀರೆ ಕುಪ್ಪಸ ಕೊಟ್ಟು, ಕುಂಭವನ್ನು ಇಳಿಸಿಕೊಳ್ಳುತ್ತಾರೆ. ಕುಂಭದಲ್ಲಿ ಬೆಲೆಬಾಳುವ ಸುರುಗಿಯ ಸಣ್ಣ ವಸ್ತು ತುಂಬುತ್ತಾರೆ. ದೊಡ್ಡ ದೊಡ್ಡ ವಸ್ತುಗಳನ್ನು ಹೊತ್ತು, ಗಾಡಿಯಲ್ಲಿ ಕೆಲವು ವಸ್ತುಗಳನ್ನು ಇಟ್ಟು ಮೆರವಣಿಗೆ ಮಾಡುತ್ತಾರೆ.  ಹಾಗೆ ಸುರುಗಿ ವಸ್ತುಗಳನ್ನು ಹೊತ್ತು ತಂದವರಿಗೆ ಖುಷಿಗಾಗಿ ಹಣ ಅಥವಾ ಉಡುಗೊರೆ ನೀಡುವ ಪದ್ಧತಿ ಇದೆ.

ಹೆಂಗಸರು ಉತ್ತರ ಕರ್ನಾಟಕದ ಬೋರಮಾಳ, ವಂಕಿ, ಬಿಲವಾರ, ಬಾಜುಬಂದ,  ಗುನಗಡಗಿ, ಕಾಲುಂಗುರ, ತಾಳಿ, ಕಾಲಿನ ಚೈನು, ಬೆಂಡಾಲಿ ಇತ್ಯಾದಿ ಆಭರಣಗಳನ್ನು ತೊಟ್ಟು ಮೆರವಣಿಗೆಯ ಅಂದವನ್ನು ಹೆಚ್ಚಿಸುತ್ತಾರೆ. ವಿಶೇಷವಾಗಿ ಸುರುಗಿ ಮೆರವಣಿಗೆಯಲ್ಲಿ ತುಪ್ಪದ ಚರಿಗೆ ಹಾಗೂ ಶಾವಿಗೆ ಮಣೆ ಹೊತ್ತು ತಂದವರಿಗೆ ಅವರು ಕೇಳಿದಷ್ಟು ಹಣವನ್ನು ಕೊಟ್ಟು ಸಂತೋಷಪಡಿಸುತ್ತಾರೆ. ಹೆತ್ತವರು ಮಗಳಿಗೆ ಸುರುಗಿ ರೂಪದಲ್ಲಿ ಕೊಡುವ ಈ ಪದ್ಧತಿಯಲ್ಲಿ ಹೆಣ್ಣಿನ ಬಗೆಗಿನ ಕಾಳಜಿ, ಪ್ರೀತಿ ಎದ್ದು ತೋರುತ್ತದೆ. ಅರ್ಥಪೂರ್ಣವೂ, ಜೀವ ಪೋಷಕವೂ ಆದ ಈ ಆಚರಣೆಯಲ್ಲಿ ತಮ್ಮ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಎನ್ನುವ ಆಶಯವಿದೆ. ತವರಿನ ಪ್ರೀತಿ, ವಾತ್ಸಲ್ಯಗಳೇ ಈ ಆಚರಣೆಯನ್ನು ಇನ್ನೂ ಜೀವಂತವಾಗಿರಿಸಿವೆ.