ಸುಗ್ಗಿಯ ಕಾಲದಲ್ಲಿ ಆಚರಿಸುವ ಹಬ್ಬ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ಹಾಗೂ ತೀರ್ಥಹಳ್ಳಿಯ ಕೆಲವು ಭಾಗಗಳಲ್ಲಿ ಸುಗ್ಗಿ ಹಬ್ಬ ಆಚರಣೆಯಲ್ಲಿದೆ. ಇದು ಊರೊಟ್ಟಿನ ಹಬ್ಬವಾಗಿದ್ದು, ಮಲೆನಾಡಿನ ಕಣಬ್ಬವನ್ನು ಭಾಗಶಃ ಹೋಲುತ್ತದೆ.

ಗ್ರಾಮಸ್ಥರೆಲ್ಲ ಸೇರಿ ಸುಗ್ಗಿ ಹಬ್ಬವನ್ನು ಹನ್ನೊಂದು ದಿನ ನಡೆಸುತ್ತಾರೆ. ಹಬ್ಬಕ್ಕೆ ಮೊದಲು ಮನೆ, ಅಂಗಳ, ಕಣ ಇತ್ಯಾದಿಗಳನ್ನು ಸಾರಿಸಿ ಶುಚಿಗೊಳಿಸುತ್ತಾರೆ. ಎಲ್ಲರೂ ಸೇರಿ ದೇವರ ಬನ ಹಾಗೂ ಸುತ್ತಮುತ್ತ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ಸಗಣಿಯಿಂದ ಸಾರಿಸಿ, ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ನಿಗದಿತ ಮನೆಯವರು ಗ್ರಾಮದೇವತೆಗಳ ಪೂಜಾಕಾರ್ಯಗಳನ್ನು ನಿರ್ವಹಿಸಬೇಕೆಂಬ ನಿಯಮವಿದೆ. ಈ ಮನೆಯವರನ್ನು ‘ಮೊದಲ ಮನೆಯವರು’ ಎಂದು ಕರೆಯುತ್ತಾರೆ. ಹಬ್ಬದ ದಿನವನ್ನು ಗೊತ್ತು ಮಾಡುವುದರಿಂದ ಹಿಡಿದು ಸುಗ್ಗಿ ಹಬ್ಬ ಮುಗಿಯುವರೆಗೆ ಈ ಮೊದಲ ಮನೆಯರೇ ಪ್ರಧಾನವಾಗಿರುತ್ತಾರೆ.

ಹಬ್ಬಕ್ಕೆ ಮೊದಲು ಗ್ರಾಮದೇವತೆಯ ವಿಗ್ರಹವನ್ನು ಯಾರಿಗೂ ತಿಳಿಯದಂತೆ ಮೊದಲ ಮನೆಯವರು ತಮ್ಮ ಮನೆಯ ಮಾಳಿಗೆಯಲ್ಲಿಟ್ಟಿರುತ್ತಾರೆ. ಹಬ್ಬದ ದಿನ ವಿಗ್ರಹವನ್ನು ದೇವರ ಬನದಲ್ಲಿಟ್ಟು ಮೊದಲು ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಅಂದಿನ ದಿನ ಇಡೀ ಊರಿನ ಜನ ಸ್ನಾನ ಮಾಡಿ, ಮಡಿಯುಟ್ಟು ಉಪವಾಸವಿರುತ್ತಾರೆ. ಆರಂಭದ ದಿನದಿಂದ ‘ಅಕ್ಕಿ ಮಡೆ’ ಐದು ದಿನಗಳವರೆಗೆ ನಡೆಯುತ್ತದೆ. ಹೊಸ ಭತ್ತವನ್ನು ನದಿಯಲ್ಲಿ ತೊಳೆದು ದೇವರ ಬನದಲ್ಲಿ ಒಣಗಿಸುತ್ತಾರೆ. ಸ್ನಾನ ಮಾಡಿ ಮಡಿಯಿಂದ ಭತ್ತವನ್ನು ಕುಟ್ಟಿ, ಅಕ್ಕಿ ಮಾಡಿ ಮೂರು ಮಣ್ಣಿನ ಮಡಕೆಗಳಿಗೆ ತುಂಬುತ್ತಾರೆ. ತುಂಬಿದ ಮಡಕೆಗಳನ್ನು ಒಂದರ ಮೇಲೆ ಒಂದರಂತೆ ಇಟ್ಟು ಮೇಲಿನ ಮಡಕೆಗೆ ಮಣ್ಣಿನ ಮುಚ್ಚಳ ಮುಚ್ಚಿ ಅದರ ಮೇಲೆ ಬಾಳೆಹಣ್ಣುಗಳನ್ನು, ಅಡುಗೆ ವಸ್ತುಗಳನ್ನು ಹಾಗೂ ವಿಭೂತಿ ಗಟ್ಟಿಗಳನ್ನು ಇರಿಸುತ್ತಾರೆ. ಅಕ್ಕಿಮಡೆಯನ್ನು ನೈವೇದ್ಯ ಅರ್ಪಿಸಿ, ಅದರಿಂದಲೇ ಅಡುಗೆ ಮಾಡಿ, ಎಲ್ಲರೂ ಸೇರಿ ಊಟ ಮಾಡುತ್ತಾರೆ.

ಆರನೆಯ ದಿನ ಗ್ರಾಮದ ಬ್ರಾಹ್ಮಣರಿಂದ ದೇವರಿಗೆ ವಿಶೇಷ ಪೂಜೆ ಮಾಡಿಸಿ, ಅಭಿಷೇಕ ಮಾಡಿಸುತ್ತಾರೆ. ಆರನೇ ದಿನದ ಪೂಜಾಕಾರ್ಯವನ್ನು  ‘ಚೌತ’ ಎಂದು ಕರೆಯುತ್ತಾರೆ. ಏಳನೇ ದಿನ ನಡೆಯುವ  ‘ಬೈರೆ ಚೌತ’ದಲ್ಲಿ ದೇವತೆಗೆ ಶೂಲದ ಪೂಜೆ ಮಾಡಿ,  ‘ಅಕ್ಕಿಮಡೆ’ಯ ನೈವೇದ್ಯ ಅರ್ಪಿಸಿ, ಅನ್ನ ಸಂತರ್ಪಣೆ ಮಾಡುತ್ತಾರೆ.

ಕಚ್ಚೆಪಂಚೆ, ಬಿಳಿ ಅಂಗಿ, ಸೊಂಟಕ್ಕೆ ಸೊಂಟದ ಪಟ್ಟಿ ತಲೆಗೆ ಪೇಟ ಧರಿಸಿದ ಆರು ಅಥವಾ ಎಂಟು ಮಂದಿ ನೇಮನಿಷ್ಠೆಯಿಂದ ದೇವರ ಪಲ್ಲಕ್ಕಿ ಹೊತ್ತು ಹೊಳೆಯ ಕಡೆ ಮೆರವಣಿಗೆಯಲ್ಲಿ ಸಾಗುತ್ತಾರೆ. ಹೊಳೆಯಲ್ಲಿ ಉತ್ಸವಮೂರ್ತಿಯನ್ನು ಚೆನ್ನಾಗಿ ಬೆಳಗಿ, ವಸ್ತ್ರಾಭರಣಗಳಿಂದ ಅಲಂಕರಿಸಿ ಮತ್ತೆ ಪಲ್ಲಕ್ಕಿಯ ಮೇಲೆ ಕೂರಿಸಿ ಪೂಜಿಸುತ್ತಾರೆ. ‘ಅಕ್ಕಿಮಡೆ’ ಹೊತ್ತವರು ಮೇಲಿನ ಮುಚ್ಚಳದಲ್ಲಿಟ್ಟ ಬಾಳೆಹಣ್ಣು ಇತ್ಯಾದಿ ವಸ್ತುಗಳು ಕೆಳಗೆ ಬೀಳದಂತೆ ಜಾಗರೂಕತೆಯಿಂದ ನಡೆಯುತ್ತಾರೆ. ಉತ್ಸವ ಹೊಳೆಯಿಂದ ಬನಕ್ಕೆ ಬಂದ ಮೇಲೆ ಅಕ್ಕಿ ಮಡೆಯಿಂದಲೇ ಅನ್ನ ಮಾಡಿ ಎಡೆ ಅರ್ಪಿಸುತ್ತಾರೆ. ನಂತರ ಎಡೆ ವಿಸರ್ಜಿಸಿ, ಅಲ್ಲಿ ಸೇರಿದ ಎಲ್ಲರಿಗೂ ‘ಚರ್ಪು’ ಹಂಚುತ್ತಾರೆ. ಮೊದಲ ಮನೆಯವರನ್ನುಳಿದು ಉಳಿದವರೆಲ್ಲ ಮನೆಯ ಕಡೆಗೆ ನಡೆಯುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ಇದ್ದ ಮೊದಲ ಮನೆಯವರು, ಎಲ್ಲರೂ ಹೋದ ನಂತರ ಮನೆಗೆ ಬರುತ್ತಾರೆ. ಮನೆಯಲ್ಲಿ ಆಗಲೇ ಸಿದ್ಧಪಡಿಸಿದ ಅಡುಗೆಯನ್ನು ಮನೆಯ ಜಕಣಿಗಳಿಗೆ ಎಡೆ ಇಟ್ಟು ಪೂಜಿಸಿ, ಎಲ್ಲರೂ ಕುಳಿತು ಊಟ ಮಾಡುತ್ತಾರೆ. ಈ ಎಲ್ಲ ಕಾರ್ಯಗಳು ಎಂಟನೆ ದಿನ ನಡೆದರೆ, ‘ದೇವರ ಮದಾಸ್ತಿಕೆ’ ಒಂಬತ್ತು ಮತ್ತು ಹತ್ತನೆ ದಿನ ನಡೆಯುವುದು ವಿಶೇಷ. ದೇವರು ಕೂರಿಸುವ ಮರದ ಕೆಳಗಿನ ಕಟ್ಟೆಗಳ ಗದ್ದುಗೆಗೆ ‘ಮದಾಸ್ತಿಕೆ’ ಎಂದು ಕರೆಯುತ್ತಾರೆ. ಪಲ್ಲಕ್ಕಿಯವರು ದೇವರನ್ನು ಗದ್ದುಗೆಯಲ್ಲಿ ಕೂರಿಸಿ ಹಣ್ಣು, ಕಾಯಿ ಇತ್ಯಾದಿಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಇದನ್ನು ‘ಬಾರೆಯ ಮೇಲೆ ಬರುವುದು’ ಎಂದು ಕರೆಯುತ್ತಾರೆ.

ಹನ್ನೊಂದನೆಯ ದಿನ ದೇವರ ಅಂಗಳದಲ್ಲಿ ಕೊಂಡ ಹಾಯುವ ಸೇವಾಕಾರ್ಯ ನಡೆಯುತ್ತದೆ. ಇದನ್ನು ‘ಹಗಲು ಸುಗ್ಗಿ’ ಎಂದು ಕರೆಯುತ್ತಾರೆ. ಉಪವಾಸವಿದ್ದ ಪಲ್ಲಕ್ಕಿ ಹೊತ್ತವರು ರಾತ್ರಿಯಲ್ಲಿ ಪಲ್ಲಕ್ಕಿ ಹೊತ್ತು ನೃತ್ಯ ಮಾಡುತ್ತಾರೆ. ಜೊತೆಯಲ್ಲಿರುವ ಕೆಲವರು ಕೋಲು ಪದಗಳನ್ನು ಹಾಡುತ್ತಾ ಕೋಲು ಹೊಯ್ಯುತ್ತಾರೆ. ರಾತ್ರಿಯಲ್ಲಿ ಉತ್ಸವ ನಡೆದು ಬೆಳಗಿನ ಜಾವದಲ್ಲಿ ಪಲ್ಲಕ್ಕಿಯವರು ಮೊದಲು ಕೊಂಡ ಹಾಯುತ್ತಾರೆ. ನಂತರ ಹರಕೆ ಹೊತ್ತವರು ಕೊಂಡ ಹಾಯುತ್ತಾರೆ. ಊರಿನ ಹಿರಿಯರ ಸಮ್ಮುಖದಲ್ಲಿ ಮೊದಲ ಮನೆಯವರು ಹಗಲು ಸುಗ್ಗಿಯ ಮಾರನೆಯ ದಿನ ಉತ್ಸವಮೂರ್ತಿಯನ್ನು ಪೂಜಿಸಿ, ಗುಡಿ ತುಂಬಿಸುತ್ತಾರೆ.  ನಂತರ ಉತ್ಸವ ಮೂರ್ತಿಯನ್ನು ಹೊತ್ತು ತಮ್ಮ ಮನೆಯ ಮಾಳಿಗೆಯಲ್ಲಿ ಇಡುತ್ತಾರೆ. ಹೀಗೆ ಇಟ್ಟ ಮೂರ್ತಿಯನ್ನು ಮುಂದಿನ ಸುಗ್ಗಿ ಹಬ್ಬದಲ್ಲಿಯೇ ಹೊರ ತೆಗೆಯುವುದು.