ಹಾಸನದ ಸುಬ್ರಹ್ಮಣ್ಯ ದೇವರಿಗೆ ಪ್ರತಿವರ್ಷ ಷಷ್ಠಿಯಂದು ಹದಿನಾರು ಬಗೆಯ ತರಕಾರಿ ಗಳ ನೈವೇದ್ಯ ಮಾಡುತ್ತಾರೆ. ಜಾತ್ರೆಯಂದೇ ಕತ್ತರಿಸಿದ ತರಕಾರಿಗಳು ಸಿಗುತ್ತವೆ. ವಿವಿಧ ಬಗೆಯ ತರಕಾರಿಗಳನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸುವುದರಿಂದ ಅದನ್ನು ತರಕಾರಿ ಹಬ್ಬವೆಂದು ಕರೆಯುತ್ತಾರೆ. ಸುಬ್ರಹ್ಮಣ್ಯ ದೇವರನ್ನು ಪ್ರೀತಿಯಿಂದ ಸುಬ್ರಾಯ ಎಂದು ಕರೆಯುತ್ತಾರೆ. ಭಕ್ತರು ಜಾತ್ರೆಯನ್ನು ಎಲ್ಲಾ ರೀತಿಯ ತರಕಾರಿಗಳ ಭಕ್ಷ್ಯಭೋಜ್ಯಗಳನ್ನು ಮಾಡಿ ಸಮರ್ಪಿಸುವ ಮೂಲಕ ಆಚರಿ ಸುತ್ತಾರೆ. ಹಬ್ಬಕ್ಕೆ ಒಂದು ದಿನ ಹಾಸನ ಮಾರುಕಟ್ಟೆಯ ತುಂಬಾ ತರಕಾರಿಗಳ ರಾಶಿಯೇ ರಾಶಿ. ಎಲ್ಲಾ ಬಗೆಯ ತರಕಾರಿಗಳನ್ನು ಅಂದು ನೋಡಬಹುದು. ಎಲ್ಲಾ ಬಗೆಯ ಹಸಿರು ಕಾಳು, ಸೊಪ್ಪು ಇತ್ಯಾದಿ ತರಕಾರಿಗಳು ಎಲ್ಲರ ಕಣ್ಮನ ತಣಿಸುತ್ತವೆ.

ಸುಬ್ಬರಾಯನ ಹಬ್ಬದ ಇನ್ನೊಂದು ವೈಶಿಷ್ಟ್ಯ ಎಂದರೆ ತರಕಾರಿಗಳನ್ನು ಹೆಚ್ಚಿ ತುಂಡು ಮಾಡಿ ಅವುಗಳನ್ನು ಮಿಶ್ರ ಮಾಡಿ, ನಂತರ ಮಾರುವುದು. ಭಕ್ತಾದಿಗಳು ಅಂದು ಬಿಡಿ ತರಕಾರಿಗಳನ್ನು ಖರೀದಿಸದೇ ಹೆಚ್ಚಿಟ್ಟ ತರಕಾರಿ ಮಿಶ್ರಣವನ್ನೇ ಖರೀದಿಸುತ್ತಾರೆ. ಖರೀದಿಸಿದ ತರಕಾರಿ ಮಿಶ್ರಣವನ್ನು ಷಷ್ಠಿಯ ದಿನ ಎಣ್ಣೆ ತುಪ್ಪ ಬೆರಸದೆ ಬೇಯಿಸಿ ಕೂಟು ತಯಾರಿಸುತ್ತಾರೆ. ಜೊತೆಗೆ ಅರಿಶಿಣ ಹುಗ್ಗಿ, ಸುಬ್ರಹ್ಮಣ್ಯ ದೇವರಿಗೆ ನೈವೇದ್ಯವಾದ ನಂತರ ಪರಿಚಯದವರಿಗೆ ಬಂಧು ಮಿತ್ರರಿಗೆ ಕೂಟು, ಹುಗ್ಗಿಯನ್ನು ವಿತರಿಸುತ್ತಾರೆ. ಅದೇ ರೀತಿ ಅವರ ಪಾಲು ಇವರ ಮನೆ ಸೇರುತ್ತದೆ. ತರಕಾರಿ ಹಬ್ಬ ಹಂಚುಣ್ಣುತ್ತಿದ್ದ ದಿನಗಳನ್ನು ನೆನಪಿಗೆ ತರುತ್ತದೆ.