ತೆಂಗಿನ ಗಿಡಗಳಲ್ಲಿ ಮೊದಲ ಸಾರಿ ಫಸಲು ಬರುವಾಗ, ಮೈದುಂಬಿದಾಗ ಮಾಡುವ ಆಚರಣೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಈ ಆಚರಣೆಯನ್ನು ಕಾಣಬಹುದು. ಅಂದು ಹಬ್ಬದ ವಾತಾವರಣ. ಮನೆಯನ್ನು ಸುಣ್ಣ, ಬಣ್ಣ ರಂಗೋಲಿಯಿಂದ ಅಲಂಕರಿಸುತ್ತಾರೆ. ಮರಕ್ಕೆ ಸೀರಿಕಾರ್ಣಿ ಮಾಡುವ ಮನೆಯವರು ಊರಿನವರೆಲ್ಲರನ್ನು ಹಾಗೂ ಬಂಧುಗಳನ್ನು ಆಹ್ವಾನಿಸಿರುತ್ತಾರೆ. ಅಂದು ಮನೆಯ ಮುಂದಿನ ತೆಂಗಿನ ಗಿಡಕ್ಕೆ ಹೊಸ ರೇಶ್ಮೆ ಸೀರೆ ಉಡಿಸಿ, ಕುಪ್ಪಸ, ಚಿನ್ನಾದಾಭರಣ ಇತ್ಯಾದಿಗಳನ್ನು ತೊಡಿಸುತ್ತಾರೆ. ಹೂ ಹಣ್ಣು, ಫಲ, ಪುಷ್ಪಗಳಿಂದ ಅಲಂಕರಿಸಿ, ನೈವೇದ್ಯ ಅರ್ಪಿಸುತ್ತಾರೆ. ಮುತ್ತೈದೆಯರೆಲ್ಲ ಆರತಿ ಎತ್ತಿ, ಅಕ್ಷತೆ ಹಾಕುತ್ತಾರೆ. ಗೋಧಿ ಹುಗ್ಗಿಯು ಅಂದಿನ ವಿಶೇಷ ಅಡುಗೆಯಲ್ಲಿ ಒಂದು. ಊಟದೊಂದಿಗೆ ಅಂದಿನ ತೆಂಗಿನ ಮರದ ಸೀರಿಕಾರ್ಣಿ ಆಚರಣೆ ಮುಗಿಯುತ್ತದೆ.

ಪೂಜೆಯ ನೆಪದಲ್ಲಿ ಮರಕ್ಕೆ ನೀರು, ಹಾಲು, ಬೆಣ್ಣೆ, ಹುಗ್ಗಿ ಇತ್ಯಾದಿ ನೈವೇದ್ಯಗಳ ಮೂಲಕ ಮಣ್ಣು ಸೇರಿ ಹದವಾಗಿ, ಗೊಬ್ಬರ ಒದಗುತ್ತದೆ. ಗಿಡಗಳಿಗೆ ಕಾಲಕಾಲಕ್ಕೆ ಅದರಲ್ಲೂ ಫಸಲು ಬರುವಾಗ ನೀರು, ಗೊಬ್ಬರ ನೀಡುವುದನ್ನು ಮರೆಯದಿರಲೆಂದು ಈ ಆಚರಣೆಯನ್ನು ಜಾರಿಗೆ ತಂದಿರಬಹುದು.