ಸುಳ್ಯ ಪರಿಸರದ  ಗೌಡ ಜನವರ್ಗದ ನೃತ್ಯ ಪ್ರಧಾನವಾದ ಆಚರಣೆ. ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ಪರಿಸರದಲ್ಲಿ ಪ್ರಚಲಿತವಿರುವ ಧಾರ್ಮಿಕ ವಿಧಿ ಕ್ರಿಯೆಯಾಗಿ ಆಚರಣೆಗೊಳ್ಳುತ್ತದೆ. ಪ್ರತಿ ವರ್ಷ ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ‘ಸಿದ್ಧವೇಶ’ ಧರಿಸಿದ ವ್ಯಕ್ತಿಗಳು ಪ್ರದರ್ಶನ ನೀಡುತ್ತಾರೆ.

ಸುಗ್ಗಿಯ ದಿನಗಳಲ್ಲಿ ತಮಗೆ ಅನುಕೂಲಕರವಾದ ದಿನವೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಊರಿನ ಹಿರಿಯನ ನಾಯಕತ್ವದಲ್ಲಿ ಆಸಕ್ತ ಗೌಡ ಯುವಕರು ಊರಿನ ಭೂತದ ಚಾವಡಿಯಲ್ಲೋ, ಪ್ರತಿಷ್ಠಿತ ಗೌಡನೊಬ್ಬನ ಮನೆ ಅಂಗಳದಲ್ಲಿಯೋ ಸೇರುತ್ತಾರೆ. ಸಿದ್ಧವೇಷ ಹಾಕುವ ಉತ್ಸಾಹಿಗಳಾದ ಆರು ಅಥವಾ ಏಳು ಗೌಡ ಯುವಕರು ಕುಣಿತಕ್ಕೆ ವೇಷ ಕಟ್ಟಲು ಸಿದ್ಧರಾಗುತ್ತಾರೆ. ಅದರಲ್ಲೊಬ್ಬ ಹಾಸ್ಯ ಪ್ರಜ್ಞೆ ಇರುವವನು ‘ಬ್ರಾಹ್ಮಣ’ ವೇಷ ಧರಿಸುತ್ತಾನೆ. ವಯಸ್ಸಾದವನೊಬ್ಬ ‘ದಾಸಯ್ಯ’ನ ಪಾತ್ರವನ್ನು, ಅತ್ಯಂತ ಉತ್ಸಾಹಿಯೂ, ಕ್ರಿಯಾಶೀಲನೂ ಆಗಿರುವ ಯುವಕನೊಬ್ಬ ‘ಸನ್ಯಾಸಿ’ಯ ವೇಷ ಹಾಕಿರುತ್ತಾನೆ. ಉಳಿದಂತೆ ತಲೆಗೆ ಕೆಂಪು ಬಣ್ಣದ ಮುಂಡಾಸನ್ನು ಭುಜಕ್ಕೆ ತಗಲುವಂತೆ ಹಾಕಿ, ದೊಗಳೆ ಅಂಗಿ ಧರಿಸಿ, ಕಚ್ಚೆ ಹಾಕಿ ಅಂಗಿಯ ಮೇಲಿಂದ ಸೊಂಟಕ್ಕೆ ಗಟ್ಟಿಯಾಗಿ ‘ದಟ್ಟಿ’ಯೊಂದನ್ನು ಬಿಗಿಯಾಗಿ ಕಟ್ಟಿರುತ್ತಾನೆ. ದಾಸ್ಯಯನ ಪಾತ್ರಧಾರಿ ಕೆಂಪು ಶಾಲು ಹೊದ್ದು, ಕೈಯಲ್ಲಿ ಶಂಖ ಮತ್ತು ಜಾಗಟೆ ಹಿಡಿದಿರುತ್ತಾನೆ. ಜುಟ್ಟು ಬಿಟ್ಟು, ಗೋಣಿ ನಾರಿನಿಂದ ಹೊಸೆದು ಮಾಡಿದ ದೊಡ್ಡ ಜನಿವಾರ ಧರಿಸಿ, ಅದರ ತುದಿಗೆ ಗಂಟು ಹಾಕಿರುತ್ತಾನೆ. ಮೈಗೆ ಗಂಧ, ಹಣೆಗೆ ನಾಮ ಹಾಗೂ ಬಿಳಿಯ ಬಣ್ಣದ ದೊಗಳೆ ಅಂಗಿ, ಕಚ್ಚೆ ಧರಿಸಿರುತ್ತಾನೆ. ಒಣಗಿದ ಬಾಳೆ ಎಲೆಗಳನ್ನು ಮೈ ತುಂಬಾ ಕಟ್ಟಿಕೊಂಡ ‘ಸನ್ಯಾಸಿ’ ವೇಷಧಾರಿ ತಲೆಗೆ ಹಾಳೆಯ ಕಿರೀಟ ಧರಿಸಿರುತ್ತಾನೆ. ಬಾಳೆ ಎಲೆಗಳಿಂದಲೇ ಮುಖದ ಸಿಂಗಾರ ಮಾಡಿಕೊಂಡಿರುತ್ತಾನೆ. ಸೊಂಟದ ಮುಂಭಾಗದಲ್ಲಿ ತಳ್ಳನೇ ಬೆತ್ತಗಳಿಂದ ಹೆಣೆದು ಮಾಡಿದ ನಿಗುರಿ ನಿಂತ ಶಿಶ್ನವನ್ನು ಕಟ್ಟಿ, ಕೈಯಲ್ಲೊಂದು ದೊಣ್ಣೆ ಹಾಗೂ ಭಸ್ಮದ ಪಾತ್ರೆಯನ್ನು ಹಿಡಿದಿರುತ್ತಾನೆ.

ಹೀಗೆ ಸಿದ್ಧವಾದ ‘ಸಿದ್ಧವೇಷ’ ತಂಡ ರಾತ್ರಿಯಾಗುತ್ತಲೇ ಊರು ಸುತ್ತಲೂ ಹೊರಡುತ್ತಾರೆ. ನಡಿಗೆಯ ಉಲ್ಲಾಸಕ್ಕಾಗಿ ‘ಡಿಂಮಿ ಸಾಲೆ’ ಎಂಬ ಹಾಡಿನ ಸೊಲ್ಲನ್ನು ಹೇಳುತ್ತಾರೆ. ಪ್ರದರ್ಶನ ನೀಡುವ ಮನೆಯ ಅಂಗಳಕ್ಕೆ ಸನ್ಯಾಸಿಯ ವೇಷದವನನ್ನುಳಿದು ಉಳಿದ ಪಾತ್ರಧಾರಿಗಳು ಮೊದಲು ಪ್ರವೇಶ ಮಾಡಿ ಮನೆ ಮಂದಿಯನ್ನು ಎಬ್ಬಿಸುತ್ತಾರೆ. ವೃತ್ತಾಕಾರವಾಗಿ ಕುಣಿಯಲು ಆರಂಭಿಸಿದ ಅವರು “ಸಿದ್ಧಲಿಂಗ ಮುದ್ದುಲಿಂಗ, ಸಿದ್ಧವೇಸೋ, ನಾವು ಯಾವೂರು ಯಾವ ತಳ, ಸಿದ್ಧವೇಸೋ, ನಾವು ಕಾಶೀಯ ತಳದವ್ರ, ಸಿದ್ಧವೇಸೋ” ಎಂದು ಹಾಡುತ್ತಿರುತ್ತಾರೆ.

‘ಶೃಂಗೇರಿ ಮಠದಿಂದ’ ಎಂಬ ಹಾಡಿನ ಸೊಲ್ಲಿನ ವೇಳೆಗೆ ಅಡಗಿ ಕುಳಿತಿರುವ ‘ಸನ್ಯಾಸಿ’ ವೇಷದ ಪಾತ್ರಧಾರಿ ಪ್ರತ್ಯಕ್ಷನಾಗಿ, ದೊಣ್ಣೆಯನ್ನು ನೆಲಕ್ಕೆ ಕುಟ್ಟುತ್ತಾ ಕುಂಟನಂತೆ ನಟಿಸುತ್ತಾನೆ. ಆ ಸಂದರ್ಭದಲ್ಲಿ ಬ್ರಾಹ್ಮಣನು ಅಂಗಳದ ಬಲಬದಿಗೂ, ದಾಸಯ್ಯನು ಅಂಗಳದ ಎಡ ಬದಿಗೂ ಬಂದು ಕುಳಿತುಕೊಳ್ಳುತ್ತಾರೆ. ನಂತರ ಎಲ್ಲರೂ ಸೇರಿ ಕುಣಿಯುತ್ತಾರೆ. ಸನ್ಯಾಸಿ ವೇಷಧಾರಿ ಬ್ರಾಹ್ಮಣ ಹಾಗೂ ದಾಸಯ್ಯನಿಗೆ ತನ್ನ ಶಿಶ್ನವನ್ನು ಮುಟ್ಟಿಸಲು ಓಡುತ್ತಾನೆ. ಶಿಶ್ನದಿಂದ ಪಾರಾಗಲು ಇಬ್ಬರು ಓಡಿ ಮರೆಯಾಗುತ್ತಾರೆ.

ಶಿಶ್ನವನ್ನು ಕೈಯಲ್ಲಿ ಹಿಡಿದುಕೊಂಡ ‘ಸನ್ಯಾಸಿ’ ‘ಎದ್ದು ನಿಂತಿದೆ…. ಸಾಟಿ ಇಲ್ಲ…. ಒಂದೇ ಕುತ್ತಿಗೆ ಒಂಬತ್ತು ಮಕ್ಕಳಾಗಬೇಕು’ ಎಂದು ಹೇಳುತ್ತಾನೆ. ಮತ್ತೆ ಸ್ವಲ್ಪ ಕುಣಿದು “ಹೊಳೆ ಬದಿಗೆ ಹೋಗಬೇಕು…. ಲಕ್ಡಿ (ಶಿಶ್ನ) ಪೂಜೆ ಮಾಡಬೇಕು” ಎಂದು ಕುಣಿಯುತ್ತಿರುತ್ತಾನೆ. ತಕ್ಷಣ ಮರೆಯಾದ ಎಲ್ಲಾ ವೇಷಗಾರರು ಕುಣಿತದಲ್ಲಿ ಸೇರಿಕೊಳ್ಳುತ್ತಾರೆ. ಕೊನೆಯಲ್ಲಿ ಮನೆಯವರು ನೀಡಿದ ಅಕ್ಕಿ, ಹಣ್ಣು ಇತ್ಯಾದಿ ವಸ್ತುಗಳನ್ನು ಪಡೆದು ಮುಂದಿನ ಮನೆಯ ಅಂಗಳಕ್ಕೆ ನಡೆಯುತ್ತಾರೆ. ಹೀಗೆ ಸಂಗ್ರಹವಾದ ಹಣ ಮತ್ತು ದವಸಧಾನ್ಯಗಳಿಂದ ನಿಗದಿತ ದಿನದಂದು ಊರಿನವರನ್ನು ಆಹ್ವಾನಿಸಿ, ‘ಪುರುಷರ’ ಪೂಜೆ ಮಾಡುತ್ತಾರೆ. ಅಂದು ಕೋಳಿ, ಕೊಟ್ಟೆ, ಹೆಂಡ ಇತ್ಯಾದಿಗಳಿಂದ ನೈವೇದ್ಯ ಅರ್ಪಿಸಿ, ಎಲ್ಲರೂ ಸಹಭೋಜನ ಮಾಡುತ್ತಾರೆ.