ಕರ್ನಾಟಕದಾದ್ಯಂತ ಕಂಡುಬರುವ ಭಯಾನಕ ಆಚರಣೆ. ಮಲೆನಾಡಿನ ಭಾಗದಲ್ಲಿ ಗಂಡಸರು ಮಾತ್ರ ಸಿಡಿ ಆಡಿದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಹೆಂಗಸರೂ ಕೂಡ ಸಿಡಿ ಆಡುತ್ತಾರೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ನಿರ್ದಿಷ್ಟ ದೈವಕ್ಕೆ ಹೊತ್ತ ಹರಕೆ ಸಲ್ಲಿಕೆಯ ಜನಪದ ಉಗ್ರ ಸಂಪ್ರದಾಯಗಳಲ್ಲಿ ಒಂದು. ಈ ಸಂಪ್ರದಾಯ ಶಾಕ್ತೀಯ ಪಂಥದ ಪ್ರಭಾವದಿಂದ ರೂಢಿಗೆ ಬಂದಂತೆ ತಿಳಿಯುತ್ತದೆ. ಸಿಡಿ ಆಡುವುದು ನಿರ್ದಿಷ್ಟ ದೇವತೆಯ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ. ಈ ಸಂಪ್ರದಾಯವಿರುವ ಎಲ್ಲ ದೇವತೆಗಳೂ ಮಾರಿ, ದುರ್ಗಿ, ಊರಮ್ಮಗಳೇ ಆಗಿರುವುದು ಕುತೂಹಲದ ಸಂಗತಿ. ಸಿಡಿಯಲ್ಲಿ ಮುಖ್ಯವಾಗಿ ಬೆನ್ನು ಸಿಡಿ, ಬಟ್ಟೆ ಸಿಡಿ ಎಂಬ ಎರಡು ವಿಧಗಳಿವೆ. ಸಿಡಿಯಾಡುವುದರ ಜೊತೆಗೆ ಹಿಂದೆ ಸಿಡಿದೆಲೆ ಕೊಡುವ ಸಂಪ್ರದಾಯವೂ ಕರ್ನಾಟಕದಲ್ಲಿ ರೂಢಿಯಲ್ಲಿದ್ದುದಕ್ಕೆ ಶಾಸನಾಧಾರವಿದೆ. ಸಿಡಿದೆಲೆಯಾಗುವ ಹರಕೆ ಹೊತ್ತ ಜನ ಸಿಡಿಕಂಬಕ್ಕೆ ಕಟ್ಟಿರುತ್ತಿದ್ದ ಹಸಿಬಿದಿರಿನ ತುದಿಯನ್ನು ಬಗ್ಗಿಸಿ ತಮ್ಮ ತಲೆಯನ್ನು ಅದಕ್ಕೆ ಕಟ್ಟಿಸಿಕೊಂಡು ಕತ್ತನ್ನು ಕತ್ತರಿಸುವಂತೆ ಮಾಡಿ, ತಮ್ಮ ವೀರಭಕ್ತಿ, ಸ್ವಾಮಿನಿಷ್ಠೆಯನ್ನು ಮೆರೆಯುತ್ತಿದ್ದರು. ಅಂಥವರನ್ನು ಕುರಿತು ಶಾಸನಗಳು ಪ್ರಶಂಸೆ ಮಾಡಿವೆ. ಇತರ ಜನತೆ ವೀರದೀಕ್ಷೆ ತೊಡುವಂತೆ ಪ್ರೇರೇಪಿಸಿವೆ.

ಮಲೆನಾಡಿನ ಆಗುಂಬೆ ತಪ್ಪಲಿನ ಊರು ತಲ್ಲೂರಂಗಡಿ. ಇಲ್ಲಿನ ಗ್ರಾಮದೇವತೆ ದುರ್ಗಾಪರಮೇಶ್ವರಿ. ಈ ದೇವತೆಗೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಸಿಡಿ ಏರಿ ಹರಕೆ ಸಲ್ಲಿಸುವ ಪದ್ಧತಿ ಬಹುಹಿಂದಿನಿಂದಲೂ ನಡೆದುಕೊಂಡು ಬಂದಿತ್ತು.ಆದರೆ ಕಾರಣಾಂತರಗಳಿಂದ ಈ ಭಯಾನಕ ಆಚರಣೆಗೆ ಹೆದರಿ, ಸಿಡಿಯಾಡುವವರೇ ಇಲ್ಲದಾಗಿ ಸಿಡಿ ನಿಂತುಹೋಗಿತ್ತು ಎನ್ನುವುದನ್ನು ಕ್ಷೇತ್ರಕಾರ್ಯ ಸಂದರ್ಭದಲ್ಲಿ ಭಕ್ತರು ಹೇಳಿದ್ದಾರೆ. ಈಗ ಸಿಡಿ ಆರಂಭವಾಗಿದೆ. ಆದರೆ ಸಣ್ಣ ಬದಲಾವಣೆ ಸಿಡಿ ಆರಂಭವಾಗಿದೆ. ಈಗ ಹರಕೆ ಹೊತ್ತವರು ಸಿಡಿಯಾಡಬೇಕಿಲ್ಲ. ಅದರ ಬದಲಾಗಿ ಬೇರೊಬ್ಬ ಸಿಡಿಕಂಬ ಏರಬಹುದು. ಆದರೆ ಹರಕೆ ಹೊತ್ತ ಭಕ್ತ ಆ ದಿನದ ಖರ್ಚುವೆಚ್ಚಗಳನ್ನು ನೋಡಿಕೊಳ್ಳಬೇಕು. ಆ ದಿನ ನಡೆಯುವ ಪೂಜೆ, ಅನ್ನ ಸಂತರ್ಪಣೆ ಖರ್ಚುಗಳನ್ನೆಲ್ಲ ಭರಿಸಬೇಕು.

ದುರ್ಗಾಪರಮೇಶ್ವರಿ ಎದುರು ನಿಂತ ಸಿಡಿ ಏರುವ ವ್ಯಕ್ತಿಯ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಚುಚ್ಚಿ ಸಿಡಿ ಪೀಠಕ್ಕೆ ಕರೆತಂದು ಸಿಡಿಗಂಬದ ತುದಿ ಕೊಕ್ಕೆಗೆ ನೇತು ಹಾಕುತ್ತಾರೆ. ನಂತರ ನಿಧಾನವಾಗಿ ಮೇಲಕ್ಕೇರುವ ಸಿಡಿಗಂಬವನ್ನು ತಿರುಗಿಸಲಾಗುತ್ತದೆ. ತಕ್ಕಡಿಯಂತೆ ನೇತಾಡುತ್ತಿರುವ ಸಿಡಿ ಹರಕೆಯ ವ್ಯಕ್ತಿ ‘ದೇವಾ ದೇವಾ’ ಎಂಬುದಾಗಿ ಹೇಳುತ್ತಿರುತ್ತಾನೆ. ಸಿಡಿ ಏರಿದವನ ಶಕ್ತಿಗನುಗುಣವಾಗಿ ಸಿಡಿಕಂಬ ಮೇಲಮೇಲಕ್ಕೆ ಏರಿಸುವುದಲ್ಲದೇ ಸಿಡಿ ಪೀಠದ ಸುತ್ತಾ ಮೂರೋ, ಆರೋ ಸುತ್ತು ಸುತ್ತಿಸಲಾಗುತ್ತದೆ. ಸಿಡಿಯಾಡುವವರು ಮೂರು ದಿನಗಳಿಂದ ದಾಂಪತ್ಯ ಮಾಡುವಂತಿಲ್ಲ. ಹಣ್ಣು ಹಾಲುಗಳನ್ನಲ್ಲದೇ ಬೇರೆ ಏನನ್ನು ತಿನ್ನುವಂತಿಲ್ಲ. ಮೂರು ದಿನವೂ ಊರವರು ಸಿದ್ಧಪಡಿಸಿದ ನಿರ್ದಿಷ್ಟ ಸ್ಥಳದಲ್ಲಿದ್ದು, ದಿನವೂ ನದಿಯ ಸ್ನಾನ ಮಾಡಿ ದೇವಿಯನ್ನು ಪೂಜಿಸುತ್ತಿರಬೇಕು. ಈ ಎಲ್ಲ ಕಟ್ಟುನಿಟ್ಟನ್ನು ಪಾಲಿಸಿದವರಿಗೆ ಸಿಡಿ ಆಡುವಾಗ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಭಕ್ತರೇ ಹೇಳುತ್ತಾರೆ. ಸಿಡಿ ಆಡಿದ ನಂತರ ಭಕ್ತರು ಅವರನ್ನು ದೈವಗಳ ಪ್ರತಿನಿಧಿಗಳೆಂದೇ ತಿಳಿಯುತ್ತಾರೆ. ಅವರ ಕಾಲುಗಳಿಗೆ ಭಕ್ತಿಯಿಂದ ನಮಸ್ಕರಿಸುತ್ತಾರೆ.

ಸಿಡಿಯಾಡುವ ಸಂದರ್ಭದಲ್ಲಿ ಇತ್ತ ದೇವಸ್ಥಾನದಲ್ಲಿ ಹರಕೆ ಹೊತ್ತ ಮಹಿಳೆಯರು ತಮ್ಮ ಬೆತ್ತಲೆ ಮೈಗೆ ಸೊಪ್ಪಿನ ಉಡುಗೆ ಸುತ್ತಿಕೊಂಡು ಹರಕೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ಕೆಂಡ ಸೇವೆಯನ್ನು ಮಾಡುತ್ತಾರೆ. ಹೀಗೆ ವಿವಿಧ ಬಗೆಯ ಹರಕೆಗಳನ್ನು ಅರ್ಪಿಸಿದರೆ ಕಷ್ಟ ಕಾರ್ಪಣ್ಯಗಳು ಕಳೆಯುತ್ತವೆ ಎಂಬ ನಂಬಿಕೆ ಇದೆ. ಸಿಡಿ ನಡೆದ ನಂತರ ನೂರಾರು ಕುರಿ ಕೋಳಿಗಳ ಬಲಿಯಾಗುತ್ತದೆ.