ದೀಪಾವಳಿಯಂದು ಜಟ್ಟಿಗಳು ಬಯಲಿನಲ್ಲಿ ನಡೆಸುವ ಆಚರಣಾತ್ಮಕ ತಾಲೀಮು. ಬಾಗಲಕೋಟೆಯ ಜಿಲ್ಲೆಯ ಸಿರೂರಿನಲ್ಲಿ ಪ್ರತಿ ದೀಪಾವಳಿಯ ಪಾಡ್ಯದ ಅಮವಾಸ್ಯೆಯ ಮಧ್ಯರಾತ್ರಿ ಜಟ್ಟಿಗಳ ತಂಡ ಒಂದೆಡೆ ಸೇರಿ ಮಾಡುತ್ತಾರೆ.

ಜಟ್ಟಿಗಳು ಗರಡಿ ಮನೆಯಲ್ಲಿ ತಾಲೀಮು ಮಾಡುವುದು ಸಾಮಾನ್ಯ. ಆದರೆ ಈ ಒಂದು ದಿನ ಜಟ್ಟಿಗಳು ಹೊರಗೆ ಬರುವುದು ಅಪರೂಪದ ವಿಷಯವಾಗಿದೆ. ಊರಿಗೆ ಹೊಂದಿಕೊಂಡ ಎರಡು ವಿಶಾಲವಾದ ಕೆರೆಗಳಿವೆ. ಕೆರೆಗಳ ಅಂಚಿಗೆ ಬರುವ ಗುಡ್ಡದ ಸಾಲಿನಲ್ಲಿ ಸಮತಟ್ಟಾದ ಕಲ್ಲುಬಂಡೆಯಿದೆ. ಅಲ್ಲಿ ಜಟ್ಟಿಗಳು ದೀಪಾವಳಿಯ ಪಾಡ್ಯದ ನಸುಕಿನಲ್ಲಿ ಬಂದು ಸೇರುತ್ತಾರೆ. ಅಮವಾಸ್ಯೆ ರಾತ್ರಿ ಸುಮಾರು ಎರಡು ಗಂಟೆಯ ವೇಳೆ ಜಟ್ಟಿಗಳೆಲ್ಲ ಆಸಕ್ತರೊಂದಿಗೆ ವಾದ್ಯ ಘೋಷಗಳೊಂದಿಗೆ ಗರಡಿ ಮನೆಯಿಂದ ಸಾಮಫಡಿ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಹನುಮಾನ್ ಧ್ವಜಗಳನ್ನು ನೆಟ್ಟು ಅದಕ್ಕೆ ಶಾಸ್ತ್ರೋಕ್ತವಾಗಿ ಪೂಜೆಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ನಂತರ ತೀರ್ಥ ಪ್ರಸಾದ ತೆಗೆದುಕೊಳ್ಳುತ್ತಾರೆ. ಊರಿನ ನಾಲ್ಕಾರು ಬೀದಿಯ ಗರಡಿ ಶಾಲೆಯ ತಂಡಗಳು ಅಲ್ಲಿ ಸೇರುವುದು ವಾಡಿಕೆ. ಒಂದು ಗರಡಿಗೂ ಇನ್ನೊಂದು ಗರಡಿಗೂ ನೇರ ಸ್ಪರ್ಧೆ ಇಲ್ಲದಿದ್ದರೂ ಪ್ರತಿಷ್ಠೆಯ ಸವಾಲು ಇರುತ್ತದೆ. ಯಾವ ತಂಡ ಅತಿ ಹೆಚ್ಚು ಸೂರ್ಯ ನಮಸ್ಕಾರ ಹಾಕುತ್ತದೆ; ಬೈಠಕ್ ಹಾಕುತ್ತದೆ .ಅದರ ಮೇಲೆ ಸ್ಥಾನಮಾನ ನಿರ್ಧಾರವಾಗುತ್ತದೆ. ಕಡಿಮೆ ಮಾಡುವ ತಂಡಕ್ಕೆ ಅವಮಾನವೆಂದು ತಿಳಿಯುತ್ತಾರೆ. ಬೈಠಕ್ ಮಾಡುವಾಗ ಪ್ರಾಸಬದ್ಧ ಹಾಡುಗಳನ್ನು ಹೇಳುತ್ತಾರೆ. “ಗರಡಿ ಮನಿ ಹುಡುಗ, ಸಾಮಸಚ್ಚೆ ಹೊಡಿಯೋ, ಸಾಧಿಸಿ ನೋಡೋ…. ವೈರಿಯ ಗಂಡ ಮುತ್ತಿನ ಚೆಂಡ. ಒಂದೇ ಮಜಲು ರಂಗಗ, ನಂದಿಕೋಲು ಚೆಂದಗ ಮೂರು ಮೂರು ಮುಕ್ಕುಂದಗಟ, ನಾಕ ರಾಮ ಶಿವಗ ಐದು ಹಣಮಂತಗ, ಆರು ಆರು ಹರಿಯಗ ಏಳು, ಏಳು ತೆಳಗ ಎಂದು ಎಂಟು ರಮಣಗ…. ಒಂಬತ್ತು ಗರಡಿ ಕೃಷ್ಣಗ, ಹತ್ತು ವಸ್ತಾದಿಗೆ, ಹನ್ನೊಂದು ಮೌಲಾಲಿಗೆ…. ಹೀಗೆ ನೂರು ಮುಗಿದ ನಂತರ ಒಬ್ಬೊರಿಗೆ ಒಂದೊಂದು ಅರ್ಪಿಸುತ್ತಾರೆ. ಜಟ್ಟಿಗಳ ಸಾಮು, ಬೈಠಕ್‌ಗಳು ಊರಿನ ಜನರಿಗೆ ತಿಳಿಯದಿರಲಿ ಎನ್ನುವ ಆಶಯ ಈ ಆಚರಣೆಯಲ್ಲಿದೆ.