ತುಳುನಾಡಿನ ಜನ ದೀಪಾವಳಿಯಂದು ಸತ್ತವರನ್ನು ಪೂಜಿಸುವ ಹಬ್ಬ. ತುಳುವರ ಸತ್ತವರ ಹಬ್ಬ ಪಿತೃಪಕ್ಷವನ್ನು ಹೋಲುತ್ತದೆ. ಬೊಯಿಂತೆಲ್ ತಿಂಗಳ ಅಮಾವಾಸ್ಯೆಯ ಮೊದಲ ದಿನ ನಡೆಯುತ್ತದೆ. ಹಬ್ಬದ ಮೊದಲ ರಾತ್ರಿ ಹಂಡೆಗಳಿಗೆ ನೀರು ತುಂಬಿ, ಒಲೆಗೆ ಉರಿ ಹತ್ತಿಸುತ್ತಾರೆ. ಬೆಳಿಗ್ಗೆಯೆ ಎದ್ದು ಮನೆ, ಅಂಗಳ ಇತ್ಯಾದಿಗಳನ್ನು ಗುಡಿಸಿ, ಸಗಣಿಯಿಂದ ಸಾರಿಸುತ್ತಾರೆ. ಮನೆಯ ಸದಸ್ಯರೆಲ್ಲ ಮೈಕೈಗೆ ಎಣ್ಣೆ ಉಜ್ಜಿಕೊಂಡು ಸ್ನಾನ ಮಾಡುತ್ತಾರೆ. ಹೊಸ ಬಟ್ಟೆ ತೊಟ್ಟು ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಾರೆ. ಹೆಂಗಸರು ಅಂದಿನ ಎಡೆಗಾಗಿ ಅರಿಶಿಣದ ಎಲೆಯಲ್ಲಿ ಬೇಯಿಸಿದ ಸಿಹಿ ಕಡಬು (ಗೊಡ್ಡು) ಮೀನಿನ ಸಾರು, ಅಕ್ಕಿ ಬೆಲ್ಲದ ಪುಡಿ, ಕೆಸುವಿನ ಎಲೆಯ ಪಲ್ಯ ಇತ್ಯಾದಿ ಹಬ್ಬದಡುಗೆಗಳನ್ನು ತಯಾರಿಸುತ್ತಾರೆ.

ಮನೆಯಲ್ಲಿ ಸತ್ತುಹೋದ ಹಿರಿಯರ ಸಂಖ್ಯೆಗೊಂದರಂತೆ ಎಡೆ ಹಾಕುತ್ತಾರೆ. ಇದನ್ನು ತುಳುವರು ‘ಮಿಸೆಲ್’ ಎಂದು ಕರೆಯುತ್ತಾರೆ. ಅಂದು ಎಡೆಗೆ ಗೊಡ್ಡು ಕಡಬು ಇರಲೇಬೇಕು ಅಲ್ಲದೆ ಹಬ್ಬಕ್ಕೆಂದು ಮಾಡಿದ ಎಲ್ಲಾ ಅಡುಗೆಗಳನ್ನು ಬಡಿಸಿ, ಪಕ್ಕದಲ್ಲಿ ಹೊಸ ಬಟ್ಟೆ ಏರಿಸಿ, ದೀಪ ಬೆಳಗಿ, ಧೂಪ ಹಾಕಿಕೊಂಡು, ಸತ್ತವರನ್ನು ಒಳಿತಿಗಾಗಿ ಬೇಡಿಕೊಳ್ಳುತ್ತಾರೆ. ನಂತರ ಎಡೆಯೊಂದನ್ನು ಮೊರದಲ್ಲಿಟ್ಟು ಕಾಗೆಗಳಿಗಾಗಿ ಮನೆಯ ಮೇಲೆ ಇಡುತ್ತಾರೆ. ಎಡೆಯನ್ನು ಕಾಗೆಗಳು ತಿನ್ನುವುದರಲ್ಲಿ ತಮ್ಮ ಹಿರಿಯರೇ ಬಂದು ತಿಂದರೆಂದು ತಿಳಿಯುತ್ತಾರೆ. ನಂತರ ಎಲ್ಲರೂ ಕೂಡಿ ಉಣ್ಣುತ್ತಾರೆ.

ಅಂದು ಎಡೆಗೆ ಏರಿಸಿದ ಬಟ್ಟೆಗಳನ್ನು ದೀಪಾವಳಿಯ ನಂತರ ಉಪಯೋಗಿಸುತ್ತಾರೆ. ಕೆಲವೆಡೆ ಮುಂದಿನ ಸಯ್ತಿನಗಲೆ ಪರ್ಬದಂದು ಹೊಸಬಟ್ಟೆ ಮಿಸೆಲ್‌ಗೆ ಏರಿಸಿ, ಹಿಂದಿನ ವರ್ಷದ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಾರೆ.