ಹುನಗುಂದ ತಾಲೂಕಿನ ಗುಡೂರಿನ ಗ್ರಾಮದೈವ ಹುಲ್ಲಪ್ಪ. ಪ್ರತಿ ವರ್ಷ ಆಗಿ ಹುಣ್ಣಿಮೆಯ ಮುನ್ನಾದಿನ ಹುಲ್ಲಪ್ಪನ ಜಾತ್ರೆ, ಮತಬೇಧದ ಸೋಂಕಿಲ್ಲದೆ ನಡೆಯುತ್ತದೆ. ಜಾತ್ರೆಯಲ್ಲಿ ‘ಸೂಚು ನುಡಿ’ ಸರಪಳಿ ಪವಾಡದ ಪ್ರತ್ಯಕ್ಷ ದರ್ಶನದ ಆಧಾರದಿಂದ ಮುಂದಿನ ವರ್ಷಾದಲ್ಲಾಗುವ ಸ್ಥಿತ್ಯಂತರ, ಒಳಿತು ಕೆಡುಕುಗಳ ಲೆಕ್ಕಾಚಾರ ಹಾಕುವ ಪರಂಪರೆ ಇದೆ.

ಹುಲ್ಲಪ್ಪ ಗುಡಿಯಲ್ಲಿ ಕುದುರೆಮೂರ್ತಿ, ಪಗಡಿ, ಗರಿಕಳಶ, ಪಂಚಕಳಶ, ನಂದಿಕೋಲು, ತ್ರಿಶೂಲ, ಮುಳ್ಳಾವುಗೆ, ಬಿಲ್ಲುಬಾಣ, ಬೆತ್ತಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಅಂದು ಸಂಜೆ ಗುಡೂರು ಸುತ್ತಲಿನ ಜನ ಸಾಗರೋಪಾದಿಯಲ್ಲಿ ಗುಡಿಯ ಬಳಿ ಬಂದು ಸೇರುತ್ತಾರೆ. ಮಳ್ಳಯ್ಯಜ್ಜ ಸೂಚು ನುಡಿ ಹೇಳುವ ವ್ಯಕ್ತಿ. ಶಂಖ, ತ್ರಿಶೂಲಗಳನ್ನು ಹಿಡಿದು ಹಣೆಗೆ ಢಾಳವಾಗಿ ಭಂಡಾರ ಬಳಿದುಕೊಂಡ ಅಜ್ಜ ತ್ರಿಶೂಲ ಚಿತ್ತಾರದ ಕಂಬಳಿ ನಿಲುವಂಗಿಯನ್ನು ಧರಿಸಿ, ನೆರೆದ ಭಕ್ತರನ್ನು ಸಮ್ಮೋಹಿಸುತ್ತಾನೆ. ಗುಡಿಯ ಪೂಜಾರಿಯ ಸೂಚನೆಯ ಮೇರೆಗೆ ಮಳ್ಳಯ್ಯಜ್ಜನನ್ನು ಡೊಳ್ಳು ಬಾರಿಸುತ್ತಾ ಕಂಚಾವೀರರು ಬಹುಪರಾಕು  ಹಾಕುತ್ತಾ ಗುಡಿಯೊಳಗೆ ಕರೆದೊಯ್ಯುತ್ತಾರೆ. ಗುಡಿಯ ಮೂಲೆಯಲ್ಲಿ ಕಂಬಳಿಯ ಗದ್ದುಗೆ ಮೇಲೆ ಕುಳಿತ ಮುಳ್ಳಯ್ಯಜ್ಜನಿಗೆ ಬಹುಪರಾಕು ಹಾಗೂ ಡೊಳ್ಳಿನ ತಾರಕದ ಸ್ವರಗಳು ಮಾಂತ್ರಿಕ ಶಕ್ತಿಯನ್ನು ತುಂಬುತ್ತದೆ. ಆ ಕ್ಷಣದಲ್ಲಿ ಅವರು ಭಂಡಾರ ಹೊಂಡದ ಸೂಚು ಮಾಡಿ, ಕೈಯಲ್ಲಿ ಭಂಡಾರ ಹಾಕಿಕೊಂಡು ಅದನ್ನು ಒಂದು ಕೆರೆಯಂತೆ ಮಾಡಿ ಅದರಲ್ಲಿ ನೀರು ಹಾಕಿ ಕಲಕುತ್ತಾ ಹೋಗುತ್ತಾರೆ. ಭಂಡಾರದ ನೀರು ಯಾವ ದಿಕ್ಕಿಗೆ ಬಡಿದು ಹೋಗುತ್ತದೋ ಆ ದಿಕ್ಕಿಗೆ ಸಮೃದ್ದಿ ಬೆಳೆ ಎಂದು ಭಕ್ತ ಸಮೂಹ ಲೆಕ್ಕಹಾಕುತ್ತದೆ.

ಹಿರೇಮಠದಲ್ಲಿನ ಬಿಲ್ಲು-ಬಾಣ ಧರಿಸಿದ ಮುಳ್ಳಯ್ಯನವರು ರಾತ್ರಿ ಎರಡರವರೆಗೆ ಬೇಟೆ ಆಡುತ್ತಾ ಊರಪಕ್ಕದ ಗಂಚಿಹಾಳದ ಹೊಲದಲ್ಲಿನ ಸೂಚಿನ ಮರದತ್ತ (ಬಸರಿಮರ) ಧಾವಿಸುತ್ತಾರೆ. ಮುಳ್ಳಯ್ಯನೊಂದಿಗೆ ಪಂಜಿನವರು, ಡೊಳ್ಳಿನವರು ಪರಾಕು ಹಾಕುವವರು, ಕೊಂಬಿನವರು ಅಲ್ಲದೇ ಸಾವಿರಾರು ಸಂಖ್ಯೆಯ ಭಕ್ತರು ಇರುತ್ತಾರೆ. ಅಲ್ಲಿ ಇಟ್ಟಿರುವ ಮುಳ್ಳಾವುಗೆಗಳನ್ನು ಡೊಳ್ಳು ಶಂಖ, ಪರಾಕಿಯೊಂದಿಗೆ ಸಾಂಪ್ರದಾಯಿಕವಾಗಿ ಪೂಜಿಸುವಾಗ ಮುಳ್ಳಯ್ಯ ಮೊದಲು ಇಟ್ಟಕಾಲು ಬಲಗಾಲೋ, ಎಡಗಾಲೋ ಎಂದು ಕಾತರಿ ಮಾಡಿಕೊಳ್ಳುತ್ತಾರೆ. ಮುಳ್ಳಾವುಗೆ ಮೇಲೆ ಬಲಿಗಾಲಿಟ್ಟರೆ ಶುಭ. ಎಡಗಾಲಿಟ್ಟರೆ ಅಶುಭವೆಂದು ಅರ್ಥೈಸುತ್ತಾರೆ.

ಜಾತ್ರೆಯ ಮರುದಿನ ನಡೆಯುವ ‘ನುಡಿ’ ಸರಪಳಿ ಪವಾಡಗಳು ತುಂಬಾ ಮಹತ್ವ ಪಡೆದುಕೊಂಡಿವೆ. ಹುಣ್ಣಿಮೆಯ ದಿನ ಸಂಜೆ ಬಹು ಪರಾಕು, ಡೊಳ್ಳಿನ ವಾದನದಿಂದ ಉಗ್ರರೂಪ ತಾಳಿದರೂ ಮುಳ್ಳಯ್ಯ, ಸಿಂಗ್ರಿಯರ ಹೊಲದಲ್ಲಿನ ನುಡಿಮರದತ್ತ ಧಾವಿಸುತ್ತಾನೆ. ಮರದ ಸುತ್ತಲೂ ಸಾವಿರಾರು ಸಂಖ್ಯೆಯ ಭಕ್ತರು ಸೇರಿ ಮುಂದೆ ನಡೆಯುವ ನುಡಿಯನ್ನು ಕೇಳಲು ಕಾತರದಿಂದ ಕಾಯುತ್ತಾರೆ. ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಮುಳ್ಳಯ್ಯ ಮರವೇರಿ ‘ಹೊಯ್ತು’ ಎಂದು ಕೂಗುತ್ತಾನೆ. ತಕ್ಷಣ ಭಕ್ತ ಸಮೂಹ ನಿಶ್ಯಬ್ದವಾಗುತ್ತದೆ. ಮರದ ಮೇಲಿಂದ ಮುಳ್ಳಯ್ಯಜ್ಜ ‘ಹಿಂಗಾರಿ ಮುಂಗಾರಿ ತಟಕ್ ಮಸನ’ ಅಥವಾ ‘ಮುಂಗಾರಿ ಹಿಂಗಾರಿ ತಟಕ್ ಮಸನ’ ಎಂದು ಜೋರಾಗಿ ನುಡಿದು ಇಳಿದುಬಿಡುತ್ತಾನೆ. ಮೊದಲು ಯಾವ ಬೆಳೆಯನ್ನು ನುಡಿಯುವರೋ ಆ ಬೆಳೆ ಸಮೃದ್ದಿಯೆಂದು ನಂಬುತ್ತಾರೆ.

ನಂತರ ಗುಡಿಯ ಮುಂದೆ ಕಲ್ಲಿನ ಕಂಬಕ್ಕೆ ಕಟ್ಟಿದ ಸರಪಳಿಯನ್ನು ಮುಳ್ಳಯ್ಯನ ಸಹಾಯಕರಾದ ಗೋರ್ರಯ್ಯಗಳು ಜಗ್ಗಿ ಹರಿಯುತ್ತಾರೆ. ಸರಪಳಿ ಎಷ್ಟು ತುಂಡಾಗುತ್ತದೋ ಅದನ್ನು ಆಧರಿಸಿ ಆ ವರ್ಷದ ಭವಿಷ್ಯ ನಿರ್ಧರಿಸಿಕೊಳ್ಳುತ್ತಾರೆ. ಬೆಸಸಂಖ್ಯೆಯ ಪ್ರಯತ್ನಕ್ಕೆ 1, 2, 5 ಸರಪಳಿ ಹರಿದರೆ ಉತ್ತಮ. ಹರಿದ ಸರಪಳಿಯ ಕೊಂಡಿ ಸಿಕ್ಕವರಿಗೆ ಶುಭ. ಸರಪಳಿ ಕಂಬದ ಬುಡಕ್ಕೆ ಹರಿದರೆ ಅನಾಹುತ. ಆವೇಶಗೊಂಡ ಮುಳ್ಳಯ್ಯಜ್ಜ ಶಂಖದಿಂದ ಯಾರಿಗಾದರೂ ಗುದ್ದಿದರೆ ಅವರಿಗೆ ವಿನಾಶ. ಮುಗಿಲು ದಿಟ್ಟಿಸಿದರೆ, ಬರಗಾಲ, ಎತ್ತು ನೋಡಿದರೆ ದನಕರುಗಳಿಗೆ ಆಪತ್ತೂ ಎಂದು ಅರ್ಥೈಸುತ್ತಾರೆ. ಕೇವಲ ಸಂಕೇತಗಳಿಂದಲೇ ಆ ವರ್ಷದ ಭವಿಷ್ಯವನ್ನು ನಿರ್ಧರಿಸಿಕೊಳ್ಳುವ ಜಾತ್ರೆಗೆ ಸುತ್ತಲಿನ ಊರುಗಳ ಜನರಲ್ಲದೇ ಬಿಜಾಪುರ, ಕೊಪ್ಪಳ, ಕಾರವಾರ, ಧಾರವಾಡ, ರಾಯಚೂರು, ಮಹಾರಾಷ್ಟ್ರದಿಂದಲೂ ಜನ ಆಗಮಿಸಿ ಆ ವರ್ಷದ ಭವಿಷ್ಯವನ್ನು ತಿಳಿದುಕೊಂಡು ಹೋಗುತ್ತಾರೆ.