ಮಲೆನಾಡಿನ ಕಡೆ ಕಂಡುಬರುವ ಹುಲಿದೇವರ ಹಬ್ಬ ವರ್ಷಕ್ಕೆ ಮೂರು ಅಥವಾ ನಾಲ್ಕು ಸಾರಿ ಆಚರಣೆಗೊಳ್ಳುತ್ತದೆ. ಬೆಟ್ಟಗುಡ್ಡಗಳಲ್ಲಿ ಹಸಿರು ಹುಲ್ಲು ಸಮೃದ್ಧವಾಗಿ ಚಿಗುರಿ, ದನ ಕರುಗಳು ಹಸಿ ಹುಲ್ಲನ್ನು ಮೇಯಲು ಹೋದಾಗ ಹುಲಿ ದಾಳಿ ಮಾಡದಿರಲೆಂದು ಪ್ರಾರ್ಥಿಸಿ, ಹುಲಿಯ ಸಂಕೇತದ ಒಂದು ನಿರ್ದಿಷ್ಟ ಕಲ್ಲಿಗೆ ಪೂಜೆ ಸಲ್ಲಿಸುವ ಪದ್ಧತಿ. ಮಲೆನಾಡಿನ ಕಾಡುಗಳ ಅಂಚಿನಲ್ಲಿ ಅಲ್ಲಲ್ಲಿ ಹಲವು ಕಡೆ ಹುಲಿಕಲ್ಲುಗಳನ್ನು ಕಾಣ ಬಹುದು. ಹತ್ತಾರು ಮನೆಗಳಿಗೆ ಅಥವಾ ಒಂದೆರಡು ಊರುಗಳಿಗೆ ಸೇರಿ ಒಂದೊಂದು ಹುಲಿಕಲ್ಲು ಅಥವಾ ಹುಲಿದೇವರು ಇರುತ್ತದೆ. ಹುಲಿಕಲ್ಲಿಗೆ ವರ್ಷಕ್ಕೆ ಮೂರರಿಂದ ನಾಲ್ಕು ಸಾರಿ ವಿಶೇಷವಾಗಿ ಭಕ್ತಿ ಗೌರವಗಳಿಂದ ಪೂಜೆ ಸಲ್ಲಿಸುತ್ತಾರೆ. ಎರಡುಬಾರಿ ವಿಶೇಷ ಹಬ್ಬ ಪೂಜೆ, ಒಂದು ಬಾರಿ ಕೋಳಿ‑ಕುರಿಗಳ ರಕ್ತದ ನೈವೇದ್ಯ ದೀಪಾವಳಿಯ ಗೋಪೂಜೆ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಅಂದಿನ ಹಿರಿಯರಿಗೆ ‘ಹುಲಿ’ ಕಾಡಿನ ಉಳಿದೆಲ್ಲ ಪ್ರಾಣಿಗಳಿಗಿಂತ ಭಯಾನಕ ಪ್ರಾಣಿಯಾಗಿ ಕಂಡಿರಬೇಕು. ಈ ಕಾರಣಕ್ಕಾಗಿ ಹುಲಿಗೆ ವಿಶೇಷ ಮಹತ್ವ. ಹಿರಿಯರಿಗೆ ಹುಲಿಯ ಭಯ ಹೇಗೆ ಇತ್ತೋ ಅಷ್ಟೇ ಭಕ್ತಿಯೂ ಇತ್ತು ಎನ್ನುವುದಕ್ಕೆ ಹುಲಿಗೆ ಸಿಕ್ಕ ದೇವರ ಸ್ಥಾನ ಸಾಕ್ಷಿನೀಡಿದೆ. ಗೋವಿನ ಕತೆಯಲ್ಲಿ ಹುಲಿಗೆ ಮಾನವ ಗುಣಗಳನ್ನು ಆವಾಹನೆ ಮಾಡಲಾಗಿದೆ. ಅಲ್ಲದೆ ಗಾಂಭೀರ್ಯದ, ಪೌರುಷಕ್ಕೆ ಹುಲಿಯನ್ನು ಹೋಲಿಸಲಾಗಿದೆ. ಮಲೆನಾಡಿನಲ್ಲಿ ಹುಲಿಗಳ ಯುಗ ಮುಗಿದಿದೆ. ಹುಲಿದೇವರ ಪೂಜೆ ಜೀವಂತವಾಗಿದೆ. ಹುಲಿಕಲ್, ಹುಲಿಕಟ್ಟಿ, ಹುಲಿಮನೆಗಳ ಮನೆ ಮನೆಗಳ ಮೂಲೆಯಲ್ಲಿ ಹುಲಿ ಓಡಿಸುವ ಸಾಧನಗಳು ಈಗಲೂ ಇವೆ. ಆಗಿನ ಜನ ಬೇಟೆಯಾಡಿ ಹುಲಿಯನ್ನು ಕೊಲ್ಲುವುದರ ಬದಲು ಪೂಜೆಮಾಡಿ, ಬಲಿಕೊಟ್ಟು, ಅವುಗಳನ್ನು ದೂರ ಇಟ್ಟೇ ನಿಸರ್ಗದ ಸಮತೋಲನ ಕಾಪಾಡುತ್ತಿದ್ದರು.