ಹಾಸನಾಂಬ ದೇವಿ ಹಾಸನದ ಅಧಿದೇವತೆ. ವರ್ಷಕ್ಕೆ ಒಂದು ಸಲ ಮಾತ್ರ ದರ್ಶನ ಪಡೆಯಲು ಅವಕಾಶವಿರುತ್ತದೆ. ೧೩ನೇ ಶತಮಾನದಲ್ಲಿ ಚನ್ನಪಟ್ಟಣದ ಪಾಳೇಗಾರನಾದ ಕೃಷ್ಣಪ್ಪನಾಯಕ ಈ ಗುಡಿಯನ್ನು ಕಟ್ಟಿಸಿದ. ಗುಡಿಯ ಒಳಗೆ ಮೂರ್ತಿ ಇಲ್ಲ. ಅಲ್ಲೊಂದು ಹುತ್ತವಿದೆ ಅದನ್ನೆ ಶೃಂಗರಿಸುತ್ತಾರೆ. ಈಕೆ ಉಗ್ರದೇವತೆಯಾದರೂ ಪ್ರಾಣಿ ಬಲಿ ಇಲ್ಲ. ಪಕ್ಕಾ ಸಸ್ಯಹಾರಿ. ಬಲಿಗೆ ಬದಲಾಗಿ ಬಾಳೆ ಕಂದನ್ನು ಕತ್ತರಿಸುವ ಪದ್ಧತಿ ಇದೆ.

ಪ್ರತಿ ವರ್ಷದ ನವೆಂಬರ್ ತಿಂಗಳ ಅಶ್ವೀಜ ಹುಣ್ಣಿಮೆಯ ನಂತರದ ಗುರು ವಾರ ದೇವಿಯ ಉತ್ಸವ ನಡೆ ಯುತ್ತದೆ. ವರ್ಷಪೂರ್ತಿ ಮುಚ್ಚಿದ ದೇವಾಲಯದ ಬಾಗಿಲನ್ನು ಅಂದು ತೆರೆಯಲಾಗುತ್ತದೆ. ಬಾಗಿಲು ತೆರೆಯುವ ದಿನವೇ ಅದ್ದೂರಿ ಜಾತ್ರೆ ನಡೆಯುತ್ತದೆ. ಆ ನಂತರ ಅಮವಾಸ್ಯೆಯ ಎರಡನೇ ದಿನ ಬಾಗಿಲು ಮುಚ್ಚಿದರೆ ಮತ್ತೆ ಮುಂದಿನ ಆಶ್ವೀಜ ಮಾಸದವರೆಗೂ ಭಕ್ತರು ಹೊರಗಿನಿಂದಲೇ ಕೈಮುಗಿಯಬೇಕು. ಬಾಗಿಲು ಮುಚ್ಚುವ ಮುನ್ನ ಹಚ್ಚಿದ ದೀಪ ವರ್ಷವಿಡೀ ಉರಿಯುತ್ತಿರುತ್ತದೆ ಎಂದು ಹೇಳುತ್ತಾರೆ.

ಉತ್ಸವದ ಮರುದಿನ ‘ಮಘಾರ’ ಎನ್ನುವ ಕಾರ್ಯಕ್ರಮ ನಡೆಯುತ್ತದೆ. ಸಪ್ತ ಮಾತೃಕೆಯರು ಕಾಶಿಯಿಂದ ಬಂದು ಅಲ್ಲಿಯೇ ಸುತ್ತ ತಳವೂರಿದ್ದಾರೆ ಎಂದು ನಂಬಲಾಗಿದೆ. ಅವುಗಳಿಗೆ ಪೂಜೆಸಲ್ಲಿಸಿ, ಹೊರಗೆ ಉತ್ಸವ ಆರಂಭವಾಗುತ್ತದೆ. ಇಲ್ಲಿಯ ಸೋಜಿಗದ ಸಂಗತಿ ಎಂದರೆ ಸಿದ್ಧೇಶ್ವರ ಸ್ವಾಮಿ ಗುಡಿಯೂ ಜೊತೆಗೆ ‘ಕಳ್ಳರ ಗುಡಿ’ಯೂ ಇದೆ. ಆಭರಣ ಕದ್ದೂ ಹಾಸನಾಂಬಳ ಮಹಿಮೆ ಪರೀಕ್ಷಿಸಲು ಬಂದು ಕಲ್ಲಾದ ನಾಲ್ವರ ಗುಡಿ. ಕಳ್ಳರಿಗೂ ಇಲ್ಲಿ ದೇವಾಲಯವಿದೆ