ನಾಗರ ಪಂಚಮಿಯ ದಿನ ನಿಪ್ಪಾಣಿ, ನಾಗನೂರು ಸುತ್ತಲಿನ ಊರುಗಳಲ್ಲಿ ಜೀವಂತ ಹಾವುಗಳಿಗೆ ಪೂಜೆ ಸಲ್ಲಿಸಿ, ಹಾಲು ಎರೆಯುವ ಆಚರಣೆ ನಡೆಯುತ್ತದೆ. ನಾಗರ ಪಂಚಮಿಗೆ ಒಂದು ತಿಂಗಳ ಮೊದಲೇ ಊರಿನ ಯುವಕರು ಮತ್ತು ಮಕ್ಕಳು ಹಾವುಗಳನ್ನು ಹಿಡಿದು ಗಡಿಗೆಯಲ್ಲಿ ತುಂಬಿಸಿ, ಅವುಗಳಿಗೆ ಕಪ್ಪೆ ಇತ್ಯಾದಿ ಆಹಾರಗಳನ್ನು ಹಾಕಿ, ನಾಗರ ಪಂಚಮಿಯವರೆಗೆ ಜತನ ಮಾಡುತ್ತಾರೆ. ಪೂಜೆಗಾಗಿ ನೂರಾರು ಬಗೆಯ ಹಾವುಗಳನ್ನು ಹಿಡಿಯುತ್ತಾರೆ. ಅವರು ಹಿಡಿಯುವ ಹಾವುಗಳೆಂದರೆ ನಾಗರಹಾವು, ಮಿಡಿನಾಗರಹಾವು, ದಾಮಿನಿ, ಕಪ್ಪುದಾಮಿನಿ, ಫರಡು, ಚಾಪಡೆ, ಗೋನ್, ಮನ್ಯಾರ್ ಇತ್ಯಾದಿ ಹಾವುಗಳನ್ನು ಹೆಸರಿಸಬಹುದು. ಈ ಜೀವಂತ ಹಾವುಗಳ ಆಚರಣೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಒತ್ತೀಸ್ ಶಿರಾಳದಲ್ಲಿ ಹಲವು ವರ್ಷ ಗಳಿಂದ ನಡೆದುಕೊಡು ಬರುತ್ತಿದ್ದು, ಅಲ್ಲಿಂದ ಗಡಿ ಭಾಗದ ಜನ ಪ್ರೇರಿತರಾಗಿ ನಾಗರಪಂಚಮಿ ದಿನ ನಿಜ ಹಾವುಗಳಿಗೆ ಪೂಜೆ ಸಲ್ಲಿಸುವ ಆಚರಣೆ ಆರಂಭವಾಗಿದೆ.

ನಾಗರಪಂಚಮಿ ದಿನ ಬೆಳಿಗ್ಗೆ ಗಡಿಗೆಯೊಳಗೆ ಇರಿಸಿದ್ದ ಹಾವುಗಳಿಗೆ ಮಹಿಳೆಯರು ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ. ಟ್ರಾಕ್ಟರ್ ಟ್ರಾಲಿಯ ಮೇಲೆ ವಿಶೇಷವಾಗಿ ತಯಾರಿಸಿ ಸಿಂಗರಿಸಿದ ಮಂಟಪದ ಮಧ್ಯೆ ಬಂಗಾರದ ಮೂಗುತಿ ಚುಚ್ಚಿದ ಹಾವುಗಳನ್ನು ಹರಿ ಬಿಡುತ್ತಾರೆ. ಝಗಮಗಿಸುವ ವಿದ್ಯುದ್ದೀಪಾಲಂಕೃತ ಮಂಟಪದಲ್ಲಿ ಹಾವುಗಳು ಹೆಡೆ ಬಿಚ್ಚಿ ಹೊಯ್ದ ಡುತ್ತಿದ್ದಂತೆ ಅಲ್ಲಿ ನೆರೆದಿರುವ ಜನರು ವಾದ್ಯಮೇಳಗಳ ನೀನಾದದೊಂದಿಗೆ ನರ್ತಿಸುತ್ತಿರುತ್ತಾರೆ. ಅಂದು ಹಾವುಗಳು ಯಾರನ್ನೂ ಕುಟುಕದಿರುವುದು ಸೊಜಿಗದ ಸಂಗತಿಯಾಗಿದೆ. ಊರಿನ ಬೀದಿಗಳಲ್ಲಿ ಮೆರವಣಿಗೆ ಮುಗಿಸಿದ ನಂತರ ಹಾವುಗಳನ್ನು ಕಾಡಿಗೆ ಬಿಟ್ಟುಬಿಡುತ್ತಾರೆ.