ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ನಾಗರಾಳ ಗ್ರಾಮದ ದೇವತೆ ಫಡಿಯಮ್ಮ. ವೀರ ಸಿಂಧೂರ ಲಕ್ಷ್ಮಣನ ಆರಾಧ್ಯದೈವ. ಆತನು ಕೊನೆಯಾದದ್ದು ಇಲ್ಲಿಯೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಫಡಿಯಮ್ಮನ ಉತ್ಸವ ನಡೆಯುತ್ತದೆ. ಇದೇ ವೇಳೆ ಗ್ರಾಮದ ದಿಗಂಬರೇಶ್ವರ ಮಠದಲ್ಲಿ ಪ್ರತಿ ಚೈತ್ರ ಶುದ್ಧ ಏಕಾದಶಿಯಂದು ಕಂಬ ಏರುವ ಸ್ಪರ್ಧೆ ನಡೆಯುತ್ತದೆ. ಈ ಕಂಬದ ಮೇಲಿನ ಅಟ್ಟಣಿಕೆಯಲ್ಲಿ ಕುಳಿತವನೊಬ್ಬ ಅವ್ಯಾಹತವಾಗಿ ಹಾಲು ತುಪ್ಪ ಸುರಿಯುತ್ತಾನೆ. ಜಾರುವ ಕಂಬವನ್ನು ಸಾಹಸಿ ಭಕ್ತರು ಏರಿ, ಬೆಳ್ಳಿಯ ಕಡಗ, ರುಮಾಲು, ಧೋತರ ಇತ್ಯಾದಿಗಳನ್ನು ಪ್ರಶಸ್ತಿಯಾಗಿ ಪಡೆಯುತ್ತಾರೆ. ಕಂಬದ ಮೇಲಿನಿಂದ ಹಾಲು ತುಪ್ಪಗಳನ್ನು ಸುರಿಯುವ ಇದನ್ನು ಹಾಲೋಕಳಿ ಎಂದು ಕರೆಯುತ್ತಾರೆ.

ಹಾಲೋಕಳಿ ಕಂಬವನ್ನು ನಿಲ್ಲಿಸುವುದೇ ಒಂದು ವಿಶೇಷ. ಫಡಿಯಮ್ಮನ ರಥ ಕಟ್ಟಿ, ಶೃಂಗರಿಸಿದ ನಂತರ ಹಾಲೋಕಳಿಗೆ ತಯಾರಿ ನಡೆಸುತ್ತಾರೆ. ಹರಿಯುವ ಹಳ್ಳದಲ್ಲಿ ಗುಂಡಿ ನಿರ್ಮಿಸಿ, ನಲ್ವತ್ತು ಅಡಿ ಎತ್ತರದ, ಮೂರು ಕಾಲು ಅಡಿ ಸುತ್ತಳತೆಯ ಕಂಬ ವನ್ನು ನಿಲ್ಲಿಸಿ, ಕಂಬಕ್ಕೆ ಆಧಾರವಾಗಿ ಎಂಟೂ ದಿಕ್ಕಿನಿಂದ ಹಗ್ಗಕಟ್ಟಿ ಬಿಗಿಗೊಳಿ ಸುತ್ತಾರೆ. ಕಂಬ ಜಾರುವಂತೆ ಮಾಡಲು ಗೋಧಿ ಹಿಟ್ಟಿನ ಜಿಗುಟನ್ನು ಕಂಬದ ಉದ್ದಕ್ಕೂ ಸವರಲಾಗಿರುತ್ತದೆ.

ಕಂಬದ ತುತ್ತ ತುದಿಗೆ ನಿರ್ಮಿಸಿದ ಅಟ್ಟಣಿಗೆಯನ್ನು ತಳಿರು ತೋರಣಗಳಿಂದ ಶೃಂಗರಿಸಿರುತ್ತಾರೆ. ಹಗ್ಗದ ಸಹಾಯದಿಂದ ತುತ್ತ ತುದಿಗೆ ಏರಿದ ವ್ಯಕ್ತಿಗೆ ಕೆಳಗಿನಿಂದ ಹಾಲು ತುಪ್ಪ ಮೊಸರು ಹಗ್ಗದ ಮೂಲಕ ಕಳುಹಿಸಿ ಕೊಡುತ್ತಾರೆ. ಕೆಳಗಿನಿಂದ ಎಲ್ಲಾ ವಸ್ತುಗಳು, ತಲುಪಿದ ನಂತರ ದಿಗಂಬರೇಶ್ವರ ಮಠದ ಸ್ವಾಮಿಗಳು ಕಂಬಕ್ಕೆ ಪೂಜೆ ಸಲ್ಲಿಸಿ, ಹಾಲೋಕಳಿಗೆ ಚಾಲನೆ ನೀಡುತ್ತಾರೆ.

ಪೂಜೆ ಮುಗಿಯುವುದನ್ನೇ ಎದುರು ನೋಡುತ್ತಿರುವ ಯುವ ಸಾಹಸಿಗಳು ನೀರಿಗೆ ಧುಮುಕಿ ಕಂಬವನ್ನೇರಲು ಮುಂದಾಗುತ್ತಾರೆ. ಮೊದಲೇ ಜಾರುತ್ತಿರುವ ಕಂಬ, ಅದರ ಜೊತೆಗೆ ಅಟ್ಟಣಿಗೆಯ ಮೇಲೆ ಕುಳಿತ ವ್ಯಕ್ತಿ ನಿರಂತರವಾಗಿ ಹಾಲು, ತುಪ್ಪ, ಮೊಸರುಗಳನ್ನು ಸುರಿಯುತ್ತಿರುತ್ತಾನೆ. ಕಂಬ ಏರಲು ಹೊರಟ ಅರೆದಿಗಂಬರರು ಬಾಹುಬಲಿಯಂತೆ ಕುಂಭಾಭಿಷೇಕ ಮಾಡಿಸಿಕೊಳ್ಳುವುದೇ ಮೋಜು. ಕಂಬವನ್ನು ಹಿಡಿದುಕೊಳ್ಳುವುದೇ ಕಷ್ಟವಾಗಿರುವಾಗ, ಏರುವುದಂತೂ ದೂರದ ಮಾತು. ಹೇಗೋ ಕಷ್ಟಪಟ್ಟು ಹತ್ತಿದ ವ್ಯಕ್ತಿ ಜಿಡ್ಡಿನಿಂದ ಜಾರಿದಾಗ ಕೆಳಗಿರುವ ಎಲ್ಲಾ ಸಾಹಸಿಗಳು ನೀರಿಗೆ ಬೀಳುತ್ತಾರೆ. ಬೀಳಗಿ ತಾಲ್ಲೂಕಿನ ಸುತ್ತ ಇಂಥ ಹತ್ತಾರು ಓಕಳಿಗಳು ನಡೆಯುತ್ತವೆ. ಮಹಿಳೆಯರಿಗೆ ಪುರುಷರು ನೀರು ಚೆಲ್ಲಿ ಆಡುವ ಓಕಳಿ ಒಂದು ಬಗೆಯಾದರೆ, ಗಿರಿಸಾಗರ ಗ್ರಾಮದಲ್ಲಿ ಹೆಂಗಸರೇ ಎರಡು ಗುಂಪುಗಳಾಗಿ ನಿಂತು ಪರಸ್ಪರ ಸೆಗಣಿ ಎರಚುವ ‘ಹೆಂಡಿ ಓಕಳಿ’ ಇನ್ನೊಂದು ಬಗೆ. ಹೋಳಿ ಹುಣ್ಣಿಮೆಯ ಬಣ್ಣದ ಓಕುಳಿ. ಇವುಗಳೆಲ್ಲಕ್ಕಿಂತ ನಾಗರಾಳದ ತೋಳ್ಬಲದ ಹಾಲೋಕಳಿ ಅತ್ಯಂತ ಜನಪ್ರಿಯವಾಗಿದೆ. ಇಂದಿಗೂ ಈ ಭಾಗಗಳಲ್ಲಿ ಈ ಸ್ಪರ್ಧಾ ‘ಹಾಲೋಕಳಿ’ ಆಚರಣೆಗೊಳ್ಳುತ್ತಿದೆ.