ನದಿಗೆ ಹಾಲೆರೆಯುವ ಸಂಪ್ರದಾಯ. ದಕ್ಷಿಣ ಕನ್ನಡ ಜಿಲ್ಲೆಯ ನಾಕೂರು ಬಳಿಯ ಕುಮಾರಧಾರ ನದಿಗೆ ಹಾಲೆರೆಯುವ ಪದ್ಧತಿ. ಹಾಲೆರೆಯುವುದಕ್ಕೆ ಯಾವುದೇ ನಿರ್ದಿಷ್ಟ ದಿನವಿಲ್ಲ, ಅನುಕೂಲ ದಿನಗಳಂದು ನಾಕೂರಿನ ಬಳಿ ಕುಮಾರಧಾರ ನದಿಯ ದೊಡ್ಡ ಹೊಂಡವಿದೆ. ಅದನ್ನು ‘ನಾಕೂರು ಗಯ’ ಎಂದು ಕರೆಯುತ್ತಾರೆ. ಸುಳ್ಯ ಮತ್ತು ಪುತ್ತೂರು ತಾಲೂಕಿನ ನೂರಾರು ಕೃಷಿಕರು ಈ ಬಗೆಯ ಆಚರಣೆಯನ್ನು ಮಾಡುತ್ತಾರೆ.

ಹರಕೆ ಹೊತ್ತವರು ಪೂಜಾ ಪರಿಕರಗಳೊಂದಿಗೆ ಕುಮಾರಧಾರ ನದಿಯ ನಾಕೂರು ಗಯಕ್ಕೆ ಹೋಗುತ್ತಾರೆ. ಹೊಂಡದ ಬಳಿ ಕುಳಿತು ಎರಡು ಬಾಳೆ ಎಲೆಗಳನ್ನು ಒಂದರ ಮೇಲೊಂದನ್ನು ಇರಿಸಿ, ಅದರ ಮೇಲೆ ಅಕ್ಕಿ, ತೆಂಗಿನ ಕಾಯಿ ಹಾಗೂ ದೀಪ ಉರಿಸಿ, ಎಡೆಗೆ ಹಾಲೆರೆದು, ಎಲ್ಲವನ್ನು ಸೇರಿದಂತೆ ಬಾಳೆ ಎಲೆಯನ್ನು ನೀರಿನಲ್ಲಿ ತೇಲಿಬಿಡುತ್ತಾರೆ. ನಂತರ ಪೂಜಿಸಿ, ಹಾಲನ್ನು ನದಿಗೆ ಸುರಿಯುತ್ತಾರೆ. ಹೀಗೆ ಹಾಲೆರೆದು, ಪೂಜಿಸುವುದರಿಂದ ಹಸುಗಳಲ್ಲಿ ಹಾಲು ವೃದ್ದಿಸುವುದಲ್ಲದೇ ಅವುಗಳ ಆರೋಗ್ಯವೃದ್ದಿಗೂ ಕಾರಣವಾಗುತ್ತದೆಂದು ನಂಬುತ್ತಾರೆ.