ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಈ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ. ಮುತ್ತತ್ತಿ ಮುತ್ತುರಾಯನ ಜಾತ್ರೆಯಲ್ಲಿ ಈ ಸೇವೆ ನಡೆಯುತ್ತದೆ. ಮಡಕೆಯೊಂದರಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆಗಳನ್ನು ಹಾಕಿ, ಮಡಕೆಯ ಕಂಠಕ್ಕೆ ಉದ್ದನೆಯ ಹಗ್ಗವನ್ನು ಕಟ್ಟಿ ಮುತ್ತತ್ತಿರಾಯ ದೇವಾಲಯದ ಆವರಣದಲ್ಲಿರುವ ಅರಳಿಮರದ ಕೊಂಬೆಗೆ ನೇತು ಬಿಡುತ್ತಾರೆ. ಹಗ್ಗದ ಇನ್ನೊಂದು ತುದಿಯನ್ನು ಒಬ್ಬನು ಹಿಡಿದು ಹಿಂದಕ್ಕೂ ಮುಂದಕ್ಕೂ ಎಳೆದಾಡುತ್ತಿರುತ್ತಾನೆ. ಮೊಸರಿನ ಮಡಕೆಯನ್ನು ಇಲ್ಲಿ ಮಾದಿಗ ಮಾತ್ರ ಒಡೆಯಲು ಅವಕಾಶ ವಿರುತ್ತದೆ. ಈ ಆಟದಲ್ಲಿ ಬೇರೆ ಜಾತಿಯ ಭಕ್ತರಿಗೆ ಅವಕಾಶ ವಿಲ್ಲ. ಇದೊಂದು ಕ್ರೀಡಾ ರೂಪದ ಆಚರಣೆಯಾಗಿದೆ. ಹಾಲು + ಅರಬಿ ಸೇರಿ ಹಾಲರಬಿ ಯಾಗಿದೆ. ಸಹಜವಾಗಿ ಗ್ರಾಮ ದೈವಗಳಿಗೆ ಹಾಲರಬಿ ಸೇವೆ ಬಹು ಪ್ರಿಯವಾಗಿವೆ. “ಹಾಲರಬಿ ಬಂದೋ ನೂರೊಂದ್ ಆಲರಬಿ ಬಂದೋ ಆಲರಬಿ ಮೇಲೊಂದೊವಿನದಂಡೆ ವಾಲಾಡಿ ಬಂದೊ” ಎನ್ನುವ ಜನಪದ ಗೀತೆಯೊಂದು ಸೃಷ್ಟಿಯಾಗಿದೆ.

ಪೂಜಿಸಿದ ಹಾಲರಬಿಯನ್ನು ತಮ್ಮಡಿಯೊಬ್ಬನು ಹಗ್ಗದ ಸಹಾಯದಿಂದ ಹಿಡಿದು ತೂಗಾಡಿಸುವ ಸಂದರ್ಭದಲ್ಲಿ ಕೆಳಗಿರುವ ಭಕ್ತರು ದೊಣ್ಣೆಯಿಂದ ಚಚ್ಚಿ ಒಡೆದು ಹಾಕುತ್ತಾರೆ.  ಮಡಕೆಯೊಡೆದು ಹಾಲೆಲ್ಲ ಕೆಳಕ್ಕೆ ಸುರಿಯುತ್ತದೆ. ಭಕ್ತರೆಲ್ಲರೂ ಅದಕ್ಕೆ ಮೈಯೊಡ್ಡಿ ನೆನೆದು, ದೈವವು ನಮಗೆ ಕೃಪಾವರ್ಷವನ್ನು ಸುರಿದನೆಂದು ಸಂತೋಷಪಟ್ಟುಕೊಳ್ಳುತ್ತಾರೆ.

ದೇವರಿಗೆ ಪ್ರಿಯವಾದ ಹಾಲು, ಮೊಸರು, ಬೆಣ್ಣೆಗಳು ಪವಿತ್ರವೆಂದು ಪೂಜಿಸಿ, ಅವುಗಳನ್ನು ಹಣೆಗೆ ಲೇಪಿಸಿಕೊಳ್ಳುತ್ತಾರೆ. ಇದರಿಂದ ತಮಗೂ ತಮ್ಮ ಕುಟುಂಬಕ್ಕೂ ಹಾಗೂ ಊರಿಗೂ ಒಳ್ಳೆಯದಾಗುತ್ತದೆಂದು ನಂಬುತ್ತಾರೆ. ಅಲ್ಲದೆ ಹಾಲರಬಿ ಬ್ರಹ್ಮರಾಕ್ಷಸನ ತಲೆ ಎಂದು ಭಾವಿಸಲಾಗಿದೆ. ಅದನ್ನು ದೇವತೆಗಳು ಒಡೆದು ವಿಜಯಿಯಾದ ದಿನದ ನೆನಪಿಗಾಗಿಯೂ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಶ್ರೀಕೃಷ್ಣನಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪಗಳೆಂದರೆ ಅತ್ಯಂತ ಪ್ರಿಯವಾದ ವಸ್ತುಗಳು. ಕೃಷ್ಣನ ಜನ್ಮದಿನವಾದ ಗೋಕುಲಾಷ್ಟಮಿಯ ವೇಳೆಗಳಲ್ಲಿ ಭಾರತದಾದ್ಯಂತ ಹಾಲರಬಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ನಡೆಯುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.