ಬಳ್ಳಾರಿ ಜಿಲ್ಲೆಯ ಕೊಡ್ಲಿಗಿಯ ಕೊಟ್ಟೂರಿನಲ್ಲಿ ನಡೆಯುವ ದುರುಗಮ್ಮ ದೇವಿಯ ರಥೋತ್ಸವದಲ್ಲಿ ಹಾರಿಸುವ ಹರಕೆ ಕೋಳಿ. ಕೊಟ್ಟೂರಿನ ಮೇಗಳಗೇರಿ ದುರುಗಮ್ಮ ದೇವಿಯ ರಥೋತ್ಸವ ಪ್ರತಿವರ್ಷ ಆಗಿ ಹುಣ್ಣಿಮೆ ಮತ್ತು ಬೌದ್ಧ ಪೂರ್ಣಿಮೆಯ ದಿನ ನಡೆಯುತ್ತದೆ. ಆರಂಭವಾದ ಕೆಲವೆ ಗಂಟೆಗಳಲ್ಲೆ ಮುಗಿದು ಹೋಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಸುತ್ತಮುತ್ತಲಿನ ಊರು-ಹಳ್ಳಿಗಳಿಂದ ಸಾವಿರಾರು ಜನ ಸೇರುತ್ತಾರೆ. ದೇವಿಯ ರಥವನ್ನು ಎಳೆದು ತಮ್ಮ ಹರಕೆಯಂತೆ ಕೋಳಿಗಳನ್ನು ರಥದ ಮೇಲೆ ಎಸೆಯುತ್ತಾರೆ. ವಿಶಾಲವಾದ ಕೆರೆ ಯಂಗಳದಲ್ಲಿ ಸಂಸಾರ ಸಮೇತರಾಗಿ ಕುಳಿತು ಮಂಡಕ್ಕಿ, ಮೆಣಸಿನಕಾಯಿ, ಅತ್ತಿಕಾಯಿ ಇತ್ಯಾದಿ ಸೇವಿಸುತ್ತಾರೆ. ಇದನ್ನು ಪಳಾರ ಸೇವನೆ ಎಂದು ಕರೆಯುತ್ತಾರೆ. ಈ ಪಳಾರ ಸೇವನೆಯ ಆನಂದವನ್ನು ಸವಿದೇ ನೋಡಬೇಕು ಎಂದು ಹೇಳುತ್ತಾರೆ. ಕತ್ತಲಾಗುವ ಮುನ್ನ ಭಕ್ತಾದಿ ಗಳೆಲ್ಲ ತಮ್ಮ ತಮ್ಮ ಮನೆ ಸೇರಿಕೊಳ್ಳುತ್ತಾರೆ.

ರಥಕ್ಕೆ ಹಾರುಗೋಳಿಯ ಹರಕೆ ಸೇರಿದಂತೆ ವಿಭಿನ್ನ ಹಾಗೂ ವಿಶಿಷ್ಟ ಬಗೆಯ ಹರಕೆಗಳನ್ನು ಭಕ್ತರು ಅರ್ಪಿಸುತ್ತಾರೆ. ರಥ ಎಳೆಯುವ ಪ್ರದೇಶದಲ್ಲಿ ದೇವಿಯ ಗುಡಿಯಿದ್ದು ಅಲ್ಲಿ ದೇವಿಯ ಮೂರ್ತಿ ಇರುವುದು ಹನ್ನೆರಡು ದಿನ ಮಾತ್ರ. ವಿಶೇಷ ಆಚರಣೆಯಾದ ಶಿಬಿರಕ್ಕಿ ಎಣ್ಣೆ ಎರೆದು ಮರುದಿನ ದೇವಿಯನ್ನು ಊರ ಗುಡಿಯಿಂದ ಕರೆಯಂಗಳದಲ್ಲಿರುವ ಗುಡಿಗೆ ತರುತ್ತಾರೆ. ನಂತರ ಒಂಭತ್ತನೇ ದಿನಕ್ಕೆ ರಥ ಎಳೆಯಲಾಗುತ್ತದೆ. ರಥ ಎಳೆದ ಎರಡು ದಿನಗಳ ನಂತರ ದುರುಗಮ್ಮ ದೇವಿಯನ್ನು ಊರಲ್ಲಿರುವ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ತರುತ್ತಾರೆ. ಅಂದು ದೇವಿಯ ಹೆಸರಿನಲ್ಲಿ ದಾಸೋಹ ನಡೆಸಲಾಗುತ್ತದೆ. ದೇವಿಯ ಮೆರವಣಿಗೆ ಗುಡಿ ಸೇರಿದ ದಿನ ಹಾಗೂ ಮರುದಿನ ಊರಿಗೆ ಊರೇ ಹಣ್ಣು, ಹೂವು, ಕಾಯಿ ಇತ್ಯಾದಿಗಳಿಂದ ಪೂಜಿಸುತ್ತದೆ. ಜಾತ್ರೆಯ ಊಟಕ್ಕಾಗಿ ಅಂದು ಹೋಳಿಗೆ ಹಾಗೂ ಮಾವಿನ ಸೀಕರಣೆ ಮಾಡುತ್ತಾರೆ. ರಥೋತ್ಸವದ ದಿನ ಹಾರಿಸಿದ ಕೋಳಿಗಳನ್ನು ಹಿಡಿದ ಭಕ್ತರು ಅವುಗಳನ್ನು ಕತ್ತರಿಸದೇ ಸಾಕುತ್ತಾರೆ. ಸಿಕ್ಕ ಕೋಳಿಗಳಿಂದ ತೃಪ್ತರಾದ ಭಕ್ತರು ದೇವಿಯ ಕೃಪೆ ಎಂದು ತಿಳಿದು ಜೋಪಾನ ಮಾಡಿ, ಅವುಗಳಿಂದ ಬಂದ ಮರಿಗಳನ್ನು ಮುಂದಿನ ರಥೋತ್ಸವದಲ್ಲಿ ಹಾರಿಸಿ ಹರಕೆ ಸಲ್ಲಿಸುತ್ತಾರೆ.

ದೇವಿಯ ರಥದ ಕಳಸವನ್ನು ನವದಂಪತಿಗಳು ನೋಡಿದರೆ ಶುಭವಾಗುತ್ತದೆಂದು, ಜಾತ್ರೆಗೆ ಅಧಿಕಸಂಖ್ಯೆಯಲ್ಲಿ ನವದಂಪತಿಗಳು ಸೇರಿಸುತ್ತಾರೆ. ಜಾತ್ರೆಯಲ್ಲಿ ಎಲ್ಲ ಮತ ಧರ್ಮದವರು ಸೇರಿರುವುದು ವಿಶೇಷವಾಗಿದೆ.