ಯಾತ್ರೆ ಮುಗಿಸಿ ಬಂದವರಿಗೆ ಮಾಡುವ ಪೂಜೆ. ಮಲೆನಾಡಿನ ವೈಷ್ಣವ ಒಕ್ಕಲಿಗರಲ್ಲಿ ರೂಢಿಯಲ್ಲಿದೆ. ಈಗ ಹರಿಸೇವೆ ಆಚರಣೆ ಅಷ್ಟಾಗಿ ಕಂಡುಬರುತ್ತಿಲ್ಲ. ಹತ್ತಾರು ವರ್ಷಗಳಿಂದ ಹರಕೆ ಹೊತ್ತುವರು ಹರಕೆ ಸಲ್ಲಿಸಲು ತಿರುಪತಿ, ಕಾಶಿ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗಿ ಬರುತ್ತಿದ್ದರು. ಸನ್ನಿಧಾನಕ್ಕೆ ಹೋದವರು ‘ಮುಡಿ’ಸಲ್ಲಿಸಿ ಮುದ್ರೆಯೊತ್ತಿಸಿಕೊಂಡು ಬರುತ್ತಿದ್ದರು. ಯಾತ್ರೆಯಿಂದ ಬರುವಾಗ ತೀರ್ಥ ಪ್ರಸಾದಗಳೊಂದಿಗೆ ಬರುತ್ತಿದ್ದರು. ಹಾಗೆ ಸುರಕ್ಷಿತವಾಗಿ ಬಂದವರನ್ನು ಮನೆ ಅಂಗಳದಲ್ಲಿ ನಿರ್ಮಿಸಿದ ಹಸಿರು ಚಪ್ಪರದಲ್ಲಿ ಉಳಿಸಿ, ಹರಿಸೇವೆಗೆ ದಿನವೊಂದನ್ನು ಗೊತ್ತು ಮಾಡಿ, ಊರಿನವರನ್ನು, ಬಂಧುಬಳಗ ಹಾಗೂ ಮಿತ್ರರನ್ನು ಆಹ್ವಾನಿಸುತ್ತಾರೆ.

ಹರಿಸೇವೆ ಶನಿವಾರವೇ ನಡೆಸಬೇಕೆಂಬ ನಿಯಮವಿದೆ. ದಾಸಯ್ಯನನ್ನು ಹರಿಸೇವೆಗೆ ಬರುವಂತೆ ಮೊದಲೇ ಆಹ್ವಾನಿಸಿರುತ್ತಾರೆ. ನಿಗದಿತ ದಿನ ದಾಸಯ್ಯ ತನ್ನ ಪೂಜಾ ಸಾಮಾಗ್ರಿಗಳೊಂದಿಗೆ ‘ಹರಿಸೇವೆ’ ನಡೆಸುವವರ ಮನೆಗೆ ಬಂದು, ಅಂಗಳದ ತುಳಸಿ ಕಟ್ಟೆಯನ್ನು  ತೊಳೆದು ಅರಿಶಿಣ, ಕುಂಕುಮ ತಿಲಕವಿಟ್ಟು, ವಿವಿಧ ರೀತಿಯ ಹೂಗಳಿಂದ ಅಲಂಕರಿಸುತ್ತಾನೆ. ತುಳಸಿಗೆ ಹಣ್ಣು ಕಾಯಿಗಳಿಂದ ಅರ್ಚಿಸಿ, ಪೂಜಿಸಿದ ದಾಸಯ್ಯನು ಪೂಜಾ ಸಾಮಾಗ್ರಿಗಳೊಂದಿಗೆ, ಯಾತ್ರೆ ಮುಗಿಸಿ ಬಂದವರೊಡಗೂಡಿ ‘ಗೌರಿ ಮಗೆ’ಯಲು ಹೊಳೆಗೆ ಹೋಗುತ್ತಾರೆ. ಆಗಲೇ ನಿರ್ಮಿಸಿದ ಗದ್ದುಗೆಯ ಮೇಲೆ ಕಲಶ ಪ್ರತಿಷ್ಠಾಪಿಸಿ, ಹೂವುಗಳಿಂದ ಅಲಂಕರಿಸಿ, ಹೊಸ ಮರಿಗೆಯಲ್ಲಿ ಹೊಳೆಯ ನೀರನ್ನು ಐದು ಸಾರಿ ಮೊಗೆಯುತ್ತಾ ಗೋವಿಂದಿಕ್ಕುತ್ತಾರೆ. ದಾಸಯ್ಯ ಹಣ್ಣು ಕಾಯಿ ಅರ್ಪಿಸಿ, ಪೂಜಿಸಿದ ಬಳಿಕ ಎಲ್ಲರೂ ಕೈಮುಗಿಯುತ್ತಾರೆ. ನಂತರ ಕಲಶವನ್ನು ಹೊತ್ತು ತಂದು ಮನೆಯ ಅಂಗಳದ ತುಳಸಿಕಟ್ಟೆಯಲ್ಲಿಡುತ್ತಾರೆ.

ದಾಸಯ್ಯ ಹೊಳೆಯ ಪೂಜಾ ಗದ್ದುಗೆಯಿಂದ ಹೊರೆಸಿಕೊಂಡು ಬಂದ ‘ಹೊಳೆದೀವಿಗೆ’ ಯನ್ನು ಕಲಶದ ಪಕ್ಕ ಇಡುತ್ತಾನೆ. ತುಳಸಿಯನ್ನು ದಾಸಯ್ಯ ಮತ್ತೊಮ್ಮೆ ಹಣ್ಣು ಕಾಯಿಗಳಿಂದ ಪೂಜಿಸುತ್ತಾನೆ. ಹರಕೆ ಹೊತ್ತ ಭಕ್ತರು ಮಡಿ ಒದ್ದೆ ಬಟ್ಟೆಯುಟ್ಟು ತುಳಸಿಯ ಸುತ್ತಾ ಗೋವಿಂದಿಕ್ಕುತ್ತಾ ಉರುಳುಸೇವೆ ಮಾಡುತ್ತಾರೆ. ಇದನ್ನು “ಮಡಿ ಉಲ್ಡಿಸಿ ಕೊಡ್ತುವುದು” ಎಂದು ಕರೆಯುತ್ತಾರೆ.

ಕಲಶವನ್ನು ಮನೆಯ ಒಳಗೆ ಸ್ಥಾಪಿಸಿ, ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಪೂಜಿಸುತ್ತಾರೆ. ಎಡೆಗಾಗಿ ಯಾತ್ರೆಗೆ ಹೋಗಿ ಬಂದವರು ತಯಾರಿಸಿದ ಹನ್ನೊಂದು ಬಗೆಯ ಪಲ್ಯ, ಪರಮಾನ್ನ, ಕಜ್ಜಾಯ, ಅನ್ನ ಸಾರುಗಳ ಮೀಸಲು ಅಡುಗೆಯನ್ನು ಹನ್ನೊಂದು ಎಲೆಯ ಮೇಲೆ ಬಡಿಸಿ ಧೂಪ ಹಾಕುತ್ತಾರೆ. ದಾಸಯ್ಯನೂ ಮಹಾಮಂಗಳಾರತಿ ಪೂಜೆ ಮಾಡಿದ ನಂತರ ಎಲ್ಲರನ್ನು ಒಂದೇ ಪಂಕ್ತಿಯಲ್ಲಿ ಕೂರಿಸಿ, ತೀರ್ಥ ಪ್ರಸಾದ ನೀಡಿ, ಊಟ ನೀಡುತ್ತಾರೆ. ತಿರುಪತಿಯ ಕಾಲಭೈರವ ದೇವರಿಗೆ ಸಂಬಂಧಿಸಿದ ರಾಶಿಪೂಜೆಯನ್ನು ಹರಿಸೇವೆಯ ಮಾರನೇ ದಿನ ಮಾಡುತ್ತಾರೆ. ಅಂಗಳದ ಮೂಲೆಯೊಂದರಲ್ಲಿ ಅಕ್ಕಿ ರಾಶಿ ಹಾಕಿ, ಕಲಶ ಸ್ಥಾಪಿಸಿ, ಹೂ, ಹಣ್ಣುಗಳಿಂದ ಅಲಂಕರಿಸಿ, ಪೂಜಿಸಿ, ‘ಚರು’ ಹಾಕಿ ಕೋಳಿ, ಕುರಿಗಳನ್ನು ಬಲಿ ಕೊಡುತ್ತಾರೆ. ತದನಂತರ ಮಾಂದಡುಗೆ ಮಾಡಿ, ಎಡೆ ಸಲ್ಲಿಸಿ, ನಂಟರಿಷ್ಟರೊಂದಿಗೆ ಸಹ ಭೋಜನ ಮಾಡುತ್ತಾರೆ. ಪೂಜೆಗೆ ಬಂದ ಭಕ್ತರಿಗೆ ಪರಮಾನ್ನ ಹಾಗೂ ಕಜ್ಜಾಯಗಳನ್ನು ಕೊಟ್ಟು ಕಳುಹಿಸುತ್ತಾರೆ.

ಹರಿಸೇವೆಯ ನಂತರ ಯಾತ್ರೆಯಿಂದ ಬಂದವರು ಕೆಲವು ನಿಯಮ ನಿಷ್ಠೆಗಳನ್ನು ಪಾಲಿಸುತ್ತಾರೆ. ಒಪ್ಪೊತ್ತು ಆಚರಿಸುವ ದಿನಗಳಲ್ಲಿ ಕುಂಕುಮದ ಜೊತೆಗೆ ಗಂಧವನ್ನು ತೊಡೆ, ಹೊಟ್ಟೆ ತೋಳು ಭುಜ ಎದೆ ಭಾಗದಲ್ಲಿ ಮುದ್ರೆ ಲೇಪಿಸಿಕೊಂಡು ತುಳಸಿ ಪೂಜೆ ಮಾಡುತ್ತಾರೆ. ಪ್ರತಿ ಶನಿವಾರ ಅಭ್ಯಂಜನ ಮಾಡಿ ತುಳಸಿ ಎದುರು ಮಣೆ ಹಾಕಿ ಕುಳಿತು ಪೂಜಿಸುತ್ತಾರೆ. ತುಳಸಿ ಎಲೆಯನ್ನು ಅಂಗೈಯಲ್ಲಿರಿಸಿಕೊಂಡು ನೀರನ್ನು ‘ತೀರ್ಥ’ವೆಂದು ಕುಡಿಯುತ್ತಾರೆ.