ತುಮಕೂರು ತಾಲ್ಲೂಕಿನ ಗುಳೂರುನಲ್ಲಿರುವ ಗಣಪನನ್ನು ಪೂಜಿಸುವ ವಿಶಿಷ್ಟ ಪದ್ಧತಿ. ಇಲ್ಲಿಯ ವಿಶೇಷವೆಂದರೆ ಭಾದ್ರಪದ ಮಾಸದ ಚೌತಿಯಂದು ಪೂಜಿಸದೇ, ದೀಪಾವಳಿಯ ಪಾಡ್ಯದಂದು ಪೂಜಿಸಿ, ಹರಕೆ ಸಲ್ಲಿಸಲಾಗುತ್ತದೆ. ಕಾರ್ತಿಕ ಮಾಸದ ಒಂದು ತಿಂಗಳು ಗಣಪನನ್ನು ಕೂರಿಸಿ, ವೈಭವದ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದವರಲ್ಲದೇ ದೇಶವಿದೇಶ ಗಳವರೂ ಗಣಪನ ಆಚರಣೆಯಲ್ಲಿ ಭಾಗಿಯಾಗು ತ್ತಾರೆ.

ಕಥೆಯ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಭೃಗು ಮಹರ್ಷಿಗಳು ದೀಪಾವಳಿಯ ಹಬ್ಬದ ಪಾಡ್ಯ ದಂದು ಗೂಳೂರಿಗೆ ಬಂದು ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿದರಂತೆ. ಅಂದಿನಿಂದ ನಿರಂತರವಾಗಿ ಇಲ್ಲಿ ದೀಪಾವಳಿಯ ಪಾಡ್ಯದಂದು ಗಣಪತಿಯನ್ನು ಕೂರಿಸಿ ಕಾರ್ತಿಕದ ಒಂದು ತಿಂಗಳ ಕಾಲ ವೈಭವದಿಂದ ಪೂಜಿಸುವ ಪದ್ಧತಿ ಬೆಳೆದು ಬಂದಿದೆ ಎಂದು ಹೇಳುತ್ತಾರೆ.

ಭಾದ್ರಪದ ಚೌತಿಯಂದು ಊರಿನ ಮುಖಂಡರೆಲ್ಲ ಸೇರಿ ಕೆರೆಯಿಂದ ಒಂದು ನೂರಾ ಒಂದು ಮಣ್ಣಿನ ಮುದ್ದೆಯನ್ನು ದೇವಾಲಯಕ್ಕೆ ತಂದು ಪೂಜೆ ಸಲ್ಲಿಸುತ್ತಾರೆ. ಅಂದಿನಿಂದಲೇ ಗಣಪತಿಯನ್ನು ತಯಾರಿಸಲು ಆರಂಭಿಸುತ್ತಾರೆ. ದೀಪಾವಳಿ ಹಬ್ಬದ ಮುನ್ನ 20 ಅಡಿ ಉದ್ದ 20 ಅಡಿ ಅಗಲದ ನೆಲಕ್ಕೆ ಕಾಲೂರಿ ಕುಳಿತಿರುವ ಗಣೇಶನ ವಿಗ್ರಹ ರೂಪುಗೊಳ್ಳುತ್ತದೆ. ನೋಡಲು ಆಕರ್ಷಕವಾಗಿರುವ ಗಣಪನಿಗೆ ವಿಶೇಷವಾಗಿ ಅಲಂಕರಿಸುತ್ತಾರೆ. ಬೆಳ್ಳಿ ಪ್ರಭಾವಳಿ, ಮುತ್ತು, ರತ್ನಗಳಿಂದ ಕೂಡಿದ ಕಿರೀಟ, ಚಿನ್ನದ ಲೇಪನದ ಪಾದುಕೆಗೆ ಮುತ್ತು ರತ್ನಗಳ ಅಲಂಕಾರ ಹಾಗೂ ಬೆಳ್ಳಿಯ ನಾಗಾಭರಣಗಳಿಂದ ಅಲಂಕರಿಸಿ ಗಣಪನಿಗೆ ವಿಶೇಷ ಭಂಗಿ ಬರುವಂತೆ ಮಾಡುತ್ತಾರೆ. ಗಣಪನ ಈ ಬಗೆಯ ಪೂಜೆಗೆ ‘ಹರಕೆಯ ಗಣಪ’ ಎಂದು ಕರೆಯುತ್ತಾರೆ. ಹರಕೆಯ ಸಂದರ್ಭದಲ್ಲಿ ಗರಿಕೆ ಹಾರ, ಎಳ್ಳುಂಡೆ, ಕರಿಗಡಬುಗಳಿಂದ ಹಾರ, ಮೋದಕ ಇತ್ಯಾದಿ ನೈವೇದ್ಯಗಳನ್ನು ಅರ್ಪಿಸಿ, ಭಕ್ತಿ ಗೌರವಗಳಿಂದ ಹರಕೆ ಸಲ್ಲಿಸುತ್ತಾರೆ.