ಉತ್ತರ ಕನ್ನಡ ಅಂಕೋಲಾದ ಸುತ್ತಮುತ್ತ ದೀಪಾವಳಿಯಲ್ಲಿ ಆಚರಣೆಗೊಳ್ಳುತ್ತದೆ. ಪ್ರತಿ ಮನೆಯ ಅಂಗಳದಲ್ಲಿಯೂ ಹೊಂಡೆ ರಚಿಸುತ್ತಾರೆ. ಒಂದರಿಂದ ಒಂದೂವರೆ ಅಡಿ ಎತ್ತರದಲ್ಲಿ ಹಸಿಮಣ್ಣನ್ನು ರಾಶಿ ಹಾಕಿ ವೇದಿಕೆಯಂತೆ ಮಾಡಿ, ಅದರಲ್ಲಿ ಇಪ್ಪತ್ತು ಹಿಂಡ್ಲೆ ಕಾಯಿಗಳನ್ನು ಇರಿಸುತ್ತಾರೆ. ಹೊಂಡೆಯನ್ನು ಬಲೀಂದ್ರನ ಕೋಟೆ ಎಂದು ತಿಳಿಯಲಾಗಿದೆ. ಮನೆಯ ಒಳಗೆ ಪೂಜಾ ಸ್ಥಾನದಲ್ಲಿ ಬೋರಜ್ಜಿ ಹಾಗೂ ಬಲೀಂದ್ರನ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಾರೆ. ಪ್ರತಿದಿನ ಪೂಜೆಯ ವೇಳೆ ಬಲೀಂದ್ರನನ್ನು ಅಂಗಳದ ಹೊಂಡೆಯ ಬಳಿ ತಂದು, ಪೂಜಿಸಿ, ಮೂರು ಸಾರಿ ಹೊಂಡೆ ಸುತ್ತಿಸಿ, ಬಲೀಂದ್ರನನ್ನು ಪೂಜಾ ಸ್ಥಳಕ್ಕೆ ಒಯ್ಯುತ್ತಾರೆ. ಹಿಂಡ್ಲೆ ಕಾಯಿಗೆ ಕಾಡಿಗೆಯಿಂದ ಕಣ್ಣು, ಮೂಗು, ಮುಖಗಳನ್ನು ಬರೆದು, ವೀಳ್ಯದೆಲೆಯ ಮೇಲಿಟ್ಟು ಬಲೀಂದ್ರನೆಂದು ಪೂಜಿಸುವ ಪದ್ಧತಿಯೂ ಇದೆ.

ಮನೆಯ ಅಂಗಳವನ್ನು ಸಾರಿಸಿ, ಜೇಡಿಮಣ್ಣಿನಿಂದ ಆಯಾತಾಕಾರದ ಚೌಕಟ್ಟನ್ನು ಮಾಡಿ, ಅದರಲ್ಲಿ ಹನ್ನೆರಡು ಅಂಕಣ ಬರುವಂತೆ ಗೆರೆ ಎಳೆದು ಪ್ರತಿ ಅಂಕಣದಲ್ಲಿಯೂ ಒಂದೊಂದು ಹಿಂಡ್ಲೆ ಕಾಯಿ ಇಡುತ್ತಾರೆ. ಮನೆಯ ಜನರು ಹಾಗೂ ನೆಂಟರು ಸ್ನಾನ ಮುಗಿಸಿ, ಅಂಕಣದಲ್ಲಿರುವ ಹಿಂಡ್ಲೆಕಾಯಿ ಮೆಟ್ಟಿ ನಿಲ್ಲುತ್ತಾರೆ. ಹೊಸ ಸೀರೆಯುಟ್ಟು ಆಭರಣಗಳಿಂದ ಶೃಂಗರಿಸಿಕೊಂಡು ಮನೆಯ ಹೆಂಗಸು ಆರತಿ ತಟ್ಟೆ ಹಿಡಿದು ನಿವಾಳಿಸಿ, ಓಕುಳಿ ಮಾಡಿ, ಹಿಂಡ್ಲೆಕಾಯಿ ಮೆಟ್ಟುವಂತೆ ಸೂಚಿಸಿ, ಹಣೆಗೆ ಓಕುಳಿ ಬೊಟ್ಟು ಇಡುತ್ತಾಳೆ. ಹಿಂಡ್ಲೆಕಾಯಿ ಮೆಟ್ಟಿ ನಿಂತವರು ಅದನ್ನು ಕಾಲಿನಿಂದ ಚೂರು ಮಾಡಿ, ಅದರ ಒಂದು ಚೂರು ಬಾಯಿಗೆ ಹಾಕಿಕೊಳ್ಳುತ್ತಾರೆ.