ಪೂಜಾರಿಯು ದೇವರ ಆಯುಧವನ್ನು ಜಳಪಿಸುತ್ತ ತನ್ನ ಮೈಕೈ ಬೆನ್ನು ತೋಳು ತೊಡೆಗಳಿಗೆ ಬಡಿದುಕೊಳ್ಳುತ್ತಾ ಭಕ್ತಿಪರವಶವಾಗುತ್ತಾನೆ. ಇದನ್ನು ‘ಹತಾರ ಸೇವೆ’ ಎಂದು ಕರೆಯುತ್ತಾರೆ. ಬಾಗಲಕೋಟೆ ಜಿಲ್ಲೆಯ ಹುನುಗುಂದ ತಾಲೂಕಿನ ತಿಮ್ಮಾಪುರ ಹಾಗೂ ಸುತ್ತಲಿನ ಊರುಗಳಲ್ಲಿನ ಜನ ಮಾರುತೇಶ್ವರ ಮತ್ತು ಬಸವೇಶ್ವರ ಜಾತ್ರೆಗಳಲ್ಲಿ ಭಕ್ತಿಭಾವ ಪರವಶರಾಗಿ ಮೇಲಿನ ‘ಸೇವೆ’ಯಲ್ಲಿ ಭಾಗಿಯಾಗುತ್ತಾರೆ.

ಜಾತ್ರೆಯಲ್ಲಿ ‘ಹತಾರ ಸೇವೆ’ ‘ಸುತಗಾಯಿ ಸೇವೆ’ ‘ಹೇಳಿಕೆ ಇತ್ಯಾದಿಗಳ ಸುತ್ತ ಜನ ಕೇಂದ್ರಿಕೃತರಾಗಿರುತ್ತಾರೆ. ಉತ್ತರೆ ಮಳೆಯ ಆರಂಭದ ಮೊದಲ ಭಾನುವಾರ ಜಾತ್ರೆ ನಡೆಯುತ್ತದೆ. ಆದರೆ ಹುಬ್ಬೆ ಮಳೆ ಆರಂಭದೊಂದಿಗೆ ಜಾತ್ರೆಯ ವಾತಾವರಣಕ್ಕೆ ಚಾಲನೆ ದೊರೆಯುತ್ತದೆ. ಉತ್ತರೆ ಮಳೆಯ ಪ್ರಾರಂಭವಾದ ಮೊದಲ ಶನಿವಾರ ಅಧಿಕೃತವಾಗಿ ಜಾತ್ರೆ ಆರಂಭವಾಗುತ್ತದೆ. ಅಂದು ರಾತ್ರಿ ಎಂಟು ದೇವರುಗಳ ಪೂಜಾರಿಗಳು, ದಾಸರು, ಸಾರ್ವಜನಿಕರು, ಡೊಳ್ಳು, ಭಜನೆ, ಕರಡಿ ಮಜಲು ಮುಂತಾದ ಮಂಗಳವಾದ್ಯಗಳೊಂದಿಗೆ ದೇವರ ಪಲ್ಲಕ್ಕಿ, ಕಳಶ, ಹತಾರಗಳೊಂದಿಗೆ ಕಿರಸೂರ ಮಾರ್ಗವಾಗಿ ಸಮೀಪದ ಮಲಪ್ರಭಾ ನದಿಗೆ ಹೋಗುತ್ತಾರೆ. ಮಡಿಯ ನಂತರ ಪಲ್ಲಕ್ಕಿಯನ್ನು ಶುಚಿಗೊಳಿಸುತ್ತಾರೆ. ನಂತರ ಹಡಗಲಿ ಸಮೀಪದ ಕರೆಕಲ್ಲ ಮಠದಲ್ಲಿ ಪೂಜೆ ನಡೆಯುತ್ತದೆ. ಅದಾದ ನಂತರ ಸರಿ ಸುಮಾರು ಬೆಳಗಿನ ನಾಲ್ಕು ಗಂಟೆಗೆ ಪೂಜಾರಿಯವರು ಆ ವರ್ಷದ ಭವಿಷ್ಯವಾಣಿ ನುಡಿಯುತ್ತಾರೆ. ಭವಿಷ್ಯವಾಣಿ ಕೇಳಲು ಸುತ್ತಲಿನ ಸಾವಿರಾರು ಜನ ನೆರೆದಿರುತ್ತಾರೆ.

ಭವಿಷ್ಯವಾಣಿಯ ನಂತರ ಪಲ್ಲಕ್ಕಿ ಹೊತ್ತ ಭಕ್ತರು ತಿಮ್ಮಾಪುರದ ಕಡೆಗೆ ಬರುತ್ತಾರೆ. ಊರಿನ ಸಮೀಪದ ಹೊಲದಲ್ಲಿ ಪಲ್ಲಕ್ಕಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಗ್ರಾಮದ ದೇವಸ್ಥಾನದ ಆವರಣಕ್ಕೆ ಬರುತ್ತಾರೆ. ಅಲ್ಲಿ ಪೂಜಾರಿಯವರು ಗುಡಿಯ ಪ್ರದಕ್ಷಿಣೆ ಹಾಕುತ್ತಾ ಕೈಯಲ್ಲಿರುವ ಹತಾರದಿಂದ ತೊಡೆ, ತೋಳು, ಎದೆ, ಬೆನ್ನು ಮುಂತಾದವುಗಳಿಗೆ ಬಡಿದುಕೊಳ್ಳುವ ‘ಹತಾರ ಸೇವೆ’ ಮಾಡುತ್ತಾರೆ.

ಸಂಜೆ ಗುಡಿಯ ಮುಂದೆ ಸುತಗಾಯಿ ಸೇವೆ ನಡೆಯುತ್ತದೆ. ಜಾತ್ರೆಗೆ ಬಂದ ಪ್ರತಿ ಮನೆಯವರು, ಸಂಬಂಧಿಕರು ಕನಿಷ್ಠ ೫ ರಿಂದ ೧೦೧ ತೆಂಗಿನಕಾಯಿ ಒಡೆಯುವುದು ಕಡ್ಡಾಯ. ಅಂದು ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ಕಾಯಿಗಳನ್ನು ಒಡೆಯಲಾಗುತ್ತದೆ. ಜೊತೆಗೆ ಹತಾರ ಸೇವೆಯು ನಡೆಯುತ್ತಿರುತ್ತದೆ. ನಂತರ ಜಾತ್ರೆಯ ಕೇಂದ್ರಬಿಂದು ಎಂದೇ ಹೆಸರಾದ ‘ಹೇಳಿಕೆ’ ನಡೆಯುತ್ತದೆ. ಪೂಜಾರಿ ಹೇಳಿಕೆ ಹೇಳಿ ಮುಗಿಸುತ್ತಾನೆ. “ಉತ್ತರಿ ಹಸ್ತ ಬಂಗಾರ ಮಳೆ‑ಬಂಗಾರ ಬೆಳೆ, ಹತ್ಯಾಗ ಮುತ್ತ ಇಟ್ಟೈತಿ, ಸಿಕ್ಕವರಿಗೆ ಸಿಕ್ತು, ಸಿಗದವರಿಗೆ ಇಲ್ಲ” ಮುಂತಾದ ಗೂಡಾರ್ಥದ ಹೇಳಿಕೆ ನುಡಿಯುತ್ತಾರೆ. ಅದನ್ನು ನೆರೆದ ಭಕ್ತ ಸಮೂಹ ಆ ವರ್ಷದ ಮಳೆ ‑ಬೆಳೆ‑ಸುಖ‑ದುಃಖ ಇತ್ಯಾದಿಗಳ ಹಿನ್ನೆಲೆಯಲ್ಲಿ ಒಳಿತು, ಕೆಡುಕುಗಳ ಲೆಕ್ಕಾಚಾರ ಹಾಕುತ್ತಾರೆ. ಇದು ಮೈಲಾರದ ಕಾರಣಿಕವನ್ನು ನೆನಪಿಗೆ ತರುತ್ತದೆ. ಕರ್ನಾಟಕದಲ್ಲಿ ಈ ಬಗೆಯ ಕಾರಣಿಕಗಳು ಈಗಲೂ ಜೀವಂತವಾಗಿವೆ.