ಉತ್ತರ ಕರ್ನಾಟಕದ ಭಾಗದಲ್ಲಿ ವಿಶೇಷವಾಗಿ ಹಡದಿ ಸೇವೆ ಕಂಡುಬರುತ್ತದೆ. ಪಲ್ಲಕ್ಕಿ ಪರಸೆ ನಡೆದಾಗ, ಗುಗ್ಗಳದ ಕೊಡಗಳು ಹೊರಟಾಗ, ಮಠದಯ್ಯಗಳ ಶವ ಮೆರವಣಿಗೆ, ಜಾತ್ರೆ, ಆಚರಣೆ ಉತ್ಸವಗಳಲ್ಲಿ ಅಗಸರು ಅವುಗಳ ಅಡಿಯಲ್ಲಿ ಸೀರೆಯನ್ನು ಹಾಕಿ ಸಲ್ಲಿಸುವ ಸೇವೆಗೆ ಹಡದಿ ಸೇವೆ ಎಂದು ಕರೆಯುತ್ತಾರೆ.

ವಂಶ ಪಾರಂಪರ್ಯವಾಗಿ ಈ ಹಡದಿ ಸೇವೆ ಅಗಸರಿಗೆ ಬಂದಿದೆ. ಅಗಸರಿಗೆ ಏಕೆ ಬಂತು ಎನ್ನುವುದಕ್ಕೆ ಅವರು ನೀಡುವ ವಿವರವೇ ಬೇರೆ; ಧಾರ್ಮಿಕವಾದ ಬದುಕಿಗೆ ಹೆಸರಾದ ಕಾಲದಲ್ಲಿ ಉತ್ಸವ ಆಚರಣೆಗಳು ಮಡಿಯಿಂದ ನಡೆಯುತ್ತಿದ್ದವು. ಹಡದಿಯ ಮೇಲೆ ನಡತೆಗೆಟ್ಟವರಿಗೆ, ಮುಡಿಚೆಟ್ಟಾದವರಿಗೆ, ಸ್ನಾನ ಮಾಡದವರಿಗೆ, ಪಾದರಕ್ಷೆ ಮೆಟ್ಟಿದವರಿಗೆ ಪ್ರವೇಶ ವಿರಲಿಲ್ಲ. ಹೀಗಿರುವಾಗ ಉತ್ಸವವೊಂದು ಹೊರಟಿತ್ತು. ಅಲ್ಲಿಗೆ ಮುಡಿಚೆಟ್ಟಾದವಳ ಪ್ರವೇಶದಿಂದಾಗಿ ಉತ್ಸವಕ್ಕೆ ಕಳಂಕ ಬಂದು ಶಾಸ್ತ್ರ ಹಾಕುವಾಗ ರಕ್ತ ಸುರಿಯಿತು. ಹೆಜ್ಜೆ ಹಾಕುವಾಗ ಕಾಲಲ್ಲಿ ನೋವು, ಕಣ್ಣು ಕತ್ತಲು ಆಯಿತಂತೆ. ಇದಕ್ಕೆ ಮುಡಿಚೆಟ್ಟಾದವಳ ಪ್ರವೇಶವೆಂದು ತಿಳಿದ ಮಠದಯ್ಯ ಸಿಟ್ಟಾದರಂತೆ. ಮುಡಿಚೆಟ್ಟಾದ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡು, ಬಟ್ಟೆ ಒಗೆಯು ವುದರೊಂದಿಗೆ ಜೀವಮಾನವಿಡೀ ಹಡದಿ ಸೇವೆ ಮಾಡುತ್ತೇನೆಂದು ಪರಿಪರಿಯಾಗಿ ಬೇಡಿದರೂ ಮಠದಯ್ಯ ಶಾಂತರಾಗಲಿಲ್ಲವಂತೆ. ಆಗ ಅಲ್ಲಿ ನೆರೆದ ಅವಳ ಜನಾಂಗದ ಪುರುಷರು ಇನ್ನು ಮುಂದೆ ಈ ಕಾಯಕವನ್ನು ನಾವೇ ಮಾಡುತ್ತೇವೆ ಎಂದು ವಿನಂತಿಸಿಕೊಂಡಾಗ ಅದಕ್ಕೆ ಸಮ್ಮತಿ ಸಿಕ್ಕಿತಂತೆ. ಆದ್ದರಿಂದ ಆವತ್ತಿನಿಂದ ಇವತ್ತಿನವರೆಗೆ ಅಗಸರ ಸ್ತ್ರೀಯರು ಸೀರೆ ಗಂಟನ್ನು ಹಿಡಿದಿದ್ದಾರೆ. ಅವರ ಪುರುಷರು ಪಲ್ಲಕ್ಕಿ ಉತ್ಸವಗಳ ಅಡಿಯಲ್ಲಿ ಸೀರೆಯನ್ನು ಹಾಸಿ ಹಡದಿ ಸೇವೆ ಸಲ್ಲಿಸುವುದನ್ನು ಕಾಣಬಹುದು.

ಹಡದಿ ಸೇವೆಯ ಹಿಂದಿನ ದಿನ ಉತ್ಸವ ಮೆರವಣಿಗೆ ಮಾಡಿಸುವವರು ಮೇಳದೊಂದಿಗೆ ಅಗಸರ ಮನೆಗೆ ಭಂಡಾರ ಕೊಟ್ಟು ಹಡದಿ ಸೇವೆಗೆ ಬರಲು ಹೇಳುತ್ತಾರೆ. ಭಂಡಾರವನ್ನು ಪಡೆದ ಅಗಸರು ಆಚರಣೆ ನಡೆಯುವ ಮುಂಜಾನೆ ಇಬ್ಬರು ಹೆಂಗಸರು ಇಬ್ಬರು ಗಂಡಸರು ಮಡಿಯಲ್ಲಿ ಬರುತ್ತಾರೆ. ಬರುವಾಗ ಹತ್ತಾರು ಮಡಿ ಮಾಡಿಕೊಂಡ ಸೀರೆಗಳನ್ನು ತರುತ್ತಾರೆ. ಉತ್ಸವದ ಮುಂದೆ ಅಗಸ ಮಡಿ ಸೀರೆಗಳನ್ನು ಹಾಸಿ ಹಡದಿ ಸೇವೆ ಸಲ್ಲಿಸುತ್ತಾ ನಡೆಯುತ್ತಾನೆ. ಹಿಂದೆ ಅಗಸರ ಹೆಣ್ಣು ಮಗಳು ಅದನ್ನು ಮಡಚುತ್ತಾ ಬರುತ್ತಾಳೆ. ಹೀಗೆ ಹಡದಿ ಸೇವೆ ಮೆರವಣಿಗೆ ಗುಡಿಯನ್ನು ತಲುಪುವವರೆಗೆ ನಡೆಯುತ್ತದೆ. ನಂತರ ಹಡದಿ ಸೇವೆಗೆ ನೀಡಿದ ದಕ್ಷಿಣೆ ಪಡೆದು ಹೊರಡುತ್ತಾರೆ.

ಹಡದಿ ಸೇವೆಗಳನ್ನು ದ್ಯಾಮಪ್ಪನ ಚಾಳೇವು, ಬಸವಣ್ಣ ಜಯಂತಿ, ಪುರಾಣ ಮಂಗಲ ಪಲ್ಲಕ್ಕಿ, ಕುಂಭಮೇಳ, ಪೀಠಾಧೀಶರ ಮೆರವಣಿಗೆ, ವೈಯಕ್ತಿಕವಾಗಿ ವೀರಭದ್ರೇಶ್ವರ ಗುಗ್ಗಳ, ಗಂಗೆಸ್ಥಳ ಅಲ್ಲದೆ ಶವದ ಮೆರವಣಿಗೆಯಲ್ಲೂ ಕಾಣಬಹುದಾಗಿದೆ. ಹಿಂದೆ ಈ ಬಗೆಯ ಕೆಲಸಗಳಿಗಾಗಿ ‘ಆಯ’ ನಿಗದಿ ಮಾಡಿರಲಾಗುತ್ತಿತ್ತು. ಈಚೆಗೆ ಈ ಬಗೆಯ ಸೇವೆಗಳನ್ನು ಅಗಸ ಜನಾಂಗದವರು ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ.