ಹೋಳಿಯ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ನಡೆಯುವ ವಿಶಿಷ್ಟ ಜಾತ್ರೆ. ಬೆಳಗಾವಿ ಜಿಲ್ಲೆಯ ಶಿರಗಾಪುರದಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಕಾಮನ ಜಾತ್ರೆ ಮಾಡುತ್ತಾರೆ. ಹುಣ್ಣಿಮೆಗೆ ಮೂರು ದಿನ ಮುಂಚೆ ಗ್ರಾಮದ ಪ್ರತಿ ಮನೆಗಳಿಂದಲೂ ಹರಿದ ಬಟ್ಟೆಗಳನ್ನು ಸಂಗ್ರಹಿಸಲಾಗುತ್ತದೆ. ಸುಮಾರು ಮೂವತ್ತು ಅಡಿ ಎತ್ತರ ಹಾಗೂ ಇಪ್ಪತ್ತು ಅಡಿ ಅಗಲದ ಕಾಮನನ್ನು ಭತ್ತದ ಒಣ ಹುಲ್ಲಿನಿಂದ ಮಾಡುತ್ತಾರೆ. ಸಂಗ್ರಹಿಸಿದ ಹರಿದ ಬಟ್ಟೆಗಳನ್ನು ಹುಲ್ಲಿನ ಮೇಲೆ ಸುತ್ತಿ ಅಲಂಕರಿಸುತ್ತಾರೆ. ಮುಖವನ್ನು ಕರಿಯ ಎಳ್ಳಿನಿಂದ ತಯಾರಿಸಿ, ಅಂದ ಕಾಣುವಂತೆ ಬಣ್ಣ ಬಳಿದಿರುತ್ತಾರೆ. ಕಾಮಣ್ಣನ ದೊಡ್ಡ ಗಾತ್ರದ ದೇಹಕ್ಕೆ ಸರಿ ಹೊಂದುವಂತೆ ಹತ್ತಾರು ದರ್ಜಿಗಳು ಸೇರಿ ತಯಾರಿಸಿದ ಬಿಳಿಯ ಬಟ್ಟೆಯ ಅಂಗಿಯನ್ನು ತೊಡಿಸುತ್ತಾರೆ. ಪೂರ್ಣವಾಗಿ ಅಲಂಕರಿಸಿದ ಕಾಮಣ್ಣನನ್ನು ‘ಕಾಮಣ್ಣನ ಹಕ್ಕಲು’ ಎಂದೇ ಕರೆಯುವ ಬಯಲಿನಲ್ಲಿ ಕೂರಿಸುತ್ತಾರೆ.

ಹುಣ್ಣಿಮೆಯಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಹರಕೆ ಹೊತ್ತ ಭಕ್ತರು ಹರಕೆ ಸಲ್ಲಿಸುತ್ತಾರೆ. ಮಕ್ಕಳ ಫಲ ಬೇಡಿದವರು ಐದರಿಂದ ಆರು ವರ್ಷ ವಯಸ್ಸಿನ ಮಕ್ಕಳ ಸರಿ ತೂಕದ ತೆಂಗಿನಕಾಯಿಗಳನ್ನು ಕಾಣಿಕೆ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಕಾಮನ ಗೊಂಬೆಯ ಎದುರು ತಕ್ಕಡಿಯನ್ನು ಕಟ್ಟಿರುತ್ತಾರೆ. ಹರಕೆಯ ನಂತರ ಪೂಜಿಸಿ, ರತಿಯ ಭಾವಚಿತ್ರದೊಂದಿಗೆ ಕಾಮನಿಗೆ ಮದುವೆ ಮಾಡುತ್ತಾರೆ.

ಗಣಿ ಮೆರವಣಿಗೆ ಜಾತ್ರೆಯ ವಿಶೇಷಗಳಲ್ಲಿ ಒಂದು. ಕಾಡಿನಿಂದ ಮೂವತ್ತೈದು ಅಡಿ ಎತ್ತರದ ನೇರ ಮರವನ್ನು ಅಲಂಕರಿಸಿದ ಬಂಡಿಯಲ್ಲಿ ಹೇರಿಕೊಂಡು ಮೆರವಣಿಗೆಯ ಮೂಲಕ ಜಾತ್ರಾ ಸ್ಥಳಕ್ಕೆ ಬರುತ್ತಾರೆ. ಇದನ್ನು ‘ಗಣಿ’ ಮೆರವಣಿಗೆ ಎಂದು ಕರೆಯುತ್ತಾರೆ. ಈ ಕೆಲಸವನ್ನು ಪಾರಂಪರಿಕವಾಗಿ ಒಂದೇ ಮನೆತನ ಮಾಡ ಬೇಕೆನ್ನುವ ನಿಯಮವಿದೆ. ಅಲ್ಲದೆ ಜಾತ್ರೆಯ ಇನ್ನಿತರ ಕೆಲಸಗಳನ್ನು ಬೇರೆ ಬೇರೆ ಜನವರ್ಗ ಗಳು ಪಾರಂಪರಿಕವಾಗಿ ನಿರ್ವಹಿಸುತ್ತಾರೆ. ಕೆಲಸಕ್ಕಾಗಿ ಯಾವುದೇ ಬಗೆಯ ಹಣವನ್ನು ತೆಗೆದುಕೊಳ್ಳದೆ ನಿರ್ವಹಿಸುವುದು ಇಲ್ಲಿಯ ವಿಶೇಷ. ಮೆರವಣಿಗೆಯಿಂದ ತಂದ ಗಣಿ ಮರವನ್ನು ಜಾತ್ರಾ ಸ್ಥಳದಲ್ಲಿ ಗುಂಡಿ ತೆಗೆದು ನಿಲ್ಲಿಸುತ್ತಾರೆ. ಮುಂದೆ ಬರುವ ಯುಗಾದಿ ಹಬ್ಬದ ದಿನ ಗಣಿಯನ್ನು ನೆಲದಿಂದ ನಾಲ್ಕು ಅಡಿ ಮೇಲಕ್ಕೆ ಕತ್ತರಿಸಿ ಹಾಗೆ ಬಿಟ್ಟು, ಮುಂದೆ ಹೊಸ ಗಣಿಯನ್ನು ತಂದಾಗ, ಕತ್ತರಿಸಿದ ಹಳೆಯ ಗಣಿಯನ್ನು  ಕೀಳುತ್ತಾರೆ.

ಹುಣ್ಣಿಮೆ ಕಳೆದು ಮೂರನೇ ದಿನದಂದು ಕಾಮನಗೊಂಬೆಯನ್ನು ಮೆರವಣಿಗೆಯ ಮೂಲಕ ಸ್ಮಶಾನಕ್ಕೆ ಸಾಗಿಸುತ್ತಾರೆ. ಕೊನೆ ಯಲ್ಲಿ ಭಕ್ತಿಯಿಂದ ಪೂಜಿಸಿ, ಹರಿಜನರು ಹೊತ್ತಿಸಿದ ಬೆಂಕಿಯಿಂದ ಕಾಮನನ್ನು ಸುಡುತ್ತಾರೆ.