ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ವರ್ಷಕ್ಕೊಂದು ಬಾರಿ ನಡೆಯುವ ಹೋರಿ ಓಡಿಸುವ ಆಟವೇ ‘ಹೋರಿ ಹಬ್ಬ’. ಸಂಕ್ರಾಂತಿ ಹಬ್ಬದಲ್ಲಿ ಕೊಬ್ಬಿದ ಗೂಳಿಗಳ ಕೊರಳಿಗೆ ನೋಟಿನ ಸರಮಾಲೆ ಸಿಕ್ಕಿಸಿ, ಬಣ್ಣದ ಗೌನು ಹಾಕಿ ಕೊರಳಿಗೆ ಬಣ್ಣ ಬಣ್ಣದ ಟೇಪು ಕಟ್ಟಿ ಕೊರಳಿಗೆ ಕೊಬ್ಬರಿ ಗಿಟುಕಿನ ಸರ ಕಟ್ಟಿ ಹಾರ, ತುರಾಯಿಗಳೊಂದಿಗೆ ಶೃಂಗರಿಸಿ ಓಡಿಸುತ್ತಾರೆ.

ಉತ್ತರ ಕರ್ನಾಟಕದ ರೈತ ಸಮುದಾಯದಲ್ಲಿ ಪ್ರಚಲಿತವಿರುವ ಈ ಹೋರಿ ಹಬ್ಬವು ಹಳ್ಳಿಗರ ಸಾಹಸ ಪ್ರದರ್ಶನಕ್ಕೆ ವೇದಿಕೆ ಒದಗಿಸಿದ್ದಲ್ಲದೇ ಮನರಂಜನೆಯನ್ನು ನೀಡುತ್ತದೆ. ಊರೊಳಗಿನ ಸುಮಾರು ಒಂದು ಕಿಲೋಮೀಟರ್‌ನಷ್ಟು ಉದ್ದದ ಇಕ್ಕಟ್ಟಿನ ರಸ್ತೆಯನ್ನು ಆಯ್ಕೆ ಮಾಡಿ ಹೋರಿಗಳ ಓಟಕ್ಕೆಂದು ಜಲ್ಲಿಯ ಪುಡಿ ಹರಡಿ ಸಜ್ಜುಗೊಳಿಸುತ್ತಾರೆ. ಹಿರೇಕೆರೂರಿನಲ್ಲಿ ನಡೆಯುವ ಹೋರಿ ಓಟಕ್ಕೆ ಸುತ್ತಮುತ್ತಲ ಊರಿನ ರೈತರು ಹಬ್ಬಕ್ಕಾಗಿಯೇ ಮೀಸಲಾಗಿ ಬೆಳೆಸುವ ತಮ್ಮ ಕಟ್ಟುಮಸ್ತಾದ ಭರ್ಜರಿ ಹೋರಿಗಳೊಂದಿಗೆ ಜಮಾಯಿಸುತ್ತಾರೆ.

ಆಗಲೇ ಅಲಂಕರಿಸಿದ ಹೋರಿಗಳನ್ನು ಹಿಡಿದ ಹುರಿಯಾಳುಗಳು ಹಬ್ಬದ ಉದ್ಘಾಟನೆಯನ್ನು ಎದುರು ನೋಡುತ್ತಿರುತ್ತಾರೆ. ಗೆದ್ದವರಿಗೆ ನೀಡುವ ಬಹುಮಾನಗಳಾದ ಹತ್ತು ಹಂಡೆಗಳನ್ನು ಕನ್ನಡದ ಬಾವುಟದೊಂದಿಗೆ ಊರಿನ ಗಣ್ಯರೊಂದಿಗೆ ಮೆರವಣಿಗೆಯಲ್ಲಿ ಹಬ್ಬ ನಡೆಯುವ ರಸ್ತೆಗೆ ತರುತ್ತಾರೆ. ನಂತರ ಕುಂಬಳಕಾಯಿ ಒಡೆದು ಟೇಪು ಕತ್ತರಿಸಿ ಹಬ್ಬವು ವಿದ್ಯುಕ್ತವಾಗಿ ಉದ್ಘಾಟನೆಯಾಗುತ್ತದೆ. ನಂತರದ್ದು ರೋಚಕ ಹೋರಿ ಓಡಿಸಿ, ಹಿಡಿಯುವ ಸಾಹಸ.

ಹೋರಿಗಳನ್ನು ಒಂದಾದ ಮೇಲೆ ಒಂದರಂತೆ ಓಡಿಸುತ್ತಾರೆ. ಪ್ರತಿ ಹೋರಿಯನ್ನು ನಾಲ್ಕು ಜನ ನಿಯಂತ್ರಿಸುತ್ತಾರೆ. ಸಂಕೇತ ಗೆರೆಯ ಬಳಿ ನಿಂತು ಬಾವುಟ ತೋರಿಸಿದಾಗ ನಿಯಂತ್ರಕರು ಹೋರಿಯನ್ನು ಬಿಟ್ಟುಬಿಡುತ್ತಾರೆ. ರಸ್ತೆಯ ಇಕ್ಕೆಲದಲ್ಲಿಯೂ ಕಿಕ್ಕಿರಿದು ಸೇರಿದ ಜನ ಹಾಗೂ ಮನೆಗಳ ಮೇಲೆ ನಿಂತವರು ಒಟ್ಟಾಗಿ ಹುಯಿಲೆಬ್ಬಿಸುತ್ತಾರೆ. ಪಳಗಿದ ಹೋರಿಯಾದರೆ ಯಾವುದನ್ನೂ ಲೆಕ್ಕಿಸದೇ ನೆಲ ನಡುಗುವಂತೆ ನಾಗಾಲೋಟದಲ್ಲಿ ಓಡಿ ರಸ್ತೆಯ ಇನ್ನೊಂದು ಕೊನೆಯನ್ನು ಮುಟ್ಟುತ್ತದೆ. ಹೊಸ ಹೋರಿಯಾದರೆ ಗಾಬರಿಗೊಂಡು, ಜನರ ಗುಂಪಿನೆಡೆಗೆ ನುಗ್ಗುತ್ತದೆ. ಇದು ಬಹಳ ಅಪಾಯಕಾರಿ. ಜನ ಹೆದರಿ ದಿಕ್ಕಾಪಾಲಾ ಗುತ್ತಾರೆ. ಸಾಹಸಿಗಳು ಹೋರಿಯ ಕೊರಳಿನ ಸರಗಳಿಗೆ ಕೈ ಹಾಕುತ್ತಾರೆ. ಆಯ ತಪ್ಪಿದರೆ ಹೋರಿ ಕೋಡು ಅಥವಾ ಕಾಲ್ತುಳಿತಕ್ಕೆ ಬಲಿಯಾಗಬೇಕಾಗುತ್ತದೆ. ಸಾಹಸಿ ಚಾಣಾಕ್ಷನಾದರೆ ಹೋರಿಯನ್ನು ಮಣಿಸಿ, ಅದರ ಕೊರಳ ಸರ ಹರಿದುಕೊಳ್ಳುತ್ತಾನೆ. ಜನರ ಕೇಕೆ, ಶಹಭಾಸ್‌ಗಿರಿ ಮುಗಿಲು ಮುಟ್ಟುತ್ತದೆ. ಅವನ ಕೆಚ್ಚೆದೆಗೆ ಅಭಿನಂದನೆಗಳ ಸುರಿಮಳೆಯಾಗುತ್ತದೆ.

ಇದಾದ ಕೆಲ ನಿಮಿಷದಲ್ಲಿಯೇ ಮಗದೊಂದು ಹೋರಿಯನ್ನು ಓಡಿಸಲಾಗುತ್ತದೆ. ಹಬ್ಬದ ಹೋರಿ ಯಾವ ಗದ್ದಲಕ್ಕೂ ಬೆದರದೆ ರಾಜಗಾಂಭೀರ್ಯದಿಂದ ಇಕ್ಕೆಡೆಗಳಲ್ಲಿ ನೆರೆದ ಜನರನ್ನು ಕೆಂಗಣ್ಣಿನಿಂದ ದೃಷ್ಟಿಸುತ್ತಾ ಬರುತ್ತದೆ. ಯಾರಿಗೂ ಅದನ್ನು ಮುಟ್ಟುವ ಧೈರ್ಯವಿಲ್ಲ. ಅದರ ಉಸಿರ ಬಿಸಿಗಾಳಿಗೆ ಬೆಚ್ಚಿ ಬೀಳುವವರೇ ಹೆಚ್ಚು.

ಹೋರಿಗಳನ್ನು ಎಷ್ಟು ಬಾರಿಯಾದರೂ ಓಡಿಸಬಹುದು. ಯಾವ ಯಾವ ಹೋರಿಗಳ ಕೊರಳ ಸರ ಕೀಳಲಾಗುವುದಿಲ್ಲವೋ ಅವುಗಳಿಗೆ ಬಹುಮಾನ ದೊರಕುತ್ತದೆ. ಇಲ್ಲಿ ಅವರಿಗೆ ಹಣ ಮುಖ್ಯವಲ್ಲ ‘ನನ್ನ ಹೋರಿ’ ಎನ್ನುವ ಹೆಮ್ಮೆ, ಪ್ರತಿಷ್ಠೆ ಮುಖ್ಯವಾಗುತ್ತದೆ. ಈ ಹಬ್ಬವು ಎರಡು ದಿನ ನಡೆಯುತ್ತದೆ.