ಹೊಸ ಬೆಳೆಯಿಂದ ತಯಾರಿಸಿದ ಊಟವನ್ನು ಉಣ್ಣುವ ದಿನ. ತುಳುನಾಡಿನಲ್ಲಿ ಆ ವರ್ಷದ ಭತ್ತದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವುದನ್ನು ‘ಇಲ್‌ಲ್ ದಿಂಜಾವುನಿ’ ಮತ್ತು ಹೊಸತೂಟವನ್ನು ‘ಪುದ್ವಾರ್’ ಎಂದು ಕರೆಯುತ್ತಾರೆ. ‘ಪುದು’ ಎಂದರೆ ಹೊಸತು. ಬಾರ್ ಎಂದರೆ ಭತ್ತ. ಸಾಮಾನ್ಯವಾಗಿ ಈ ಆಚರಣೆಯನ್ನು ಸೆಪ್ಟೆಂಬರ್ ತಿಂಗಳು ಕನ್ಯಾ ಸಂಕ್ರಮಣದ ಮರುದಿನ ಆಚರಿಸುತ್ತಾರೆ. ಭತ್ತದ ತೆನೆಯನ್ನು ಹಿಂದಿನ ದಿನವೇ ಸಂಗ್ರಹಿಸಿ, ಹಾಲುಬರುವ ಮರದಡಿ ಇಟ್ಟು ಬರುತ್ತಾರೆ. ಮನೆ ಅಂಗಳದ ತುಳಸಿಕಟ್ಟೆಯಲ್ಲಿ ಪೊಲಿಬಳ್ಳಿ, ಇಟ್ಟೋವು, ಅಶ್ವತ್ಥ, ಮಾವು, ಹಲಸು, ಬಿದಿರು ಎಲೆ ಗಳನ್ನು ಹೂವು ಸಹಿತ ಸೌತೆಮಿಡಿ, ದಡ್ಡಲ ಮರದ ನಾರುಬಳ್ಳಿ, ಐದು ವೀಳ್ಯದೆಲೆ, ಎರಡು ಬಾಳೆಲೆ, ಒಂದು ಅಡಿಕೆ ಒಂದು ಮೊರದಲ್ಲಿ ಸಂಗ್ರಹಿಸುತ್ತಾರೆ. ಆಚರಣೆಯ ಪ್ರಾತಃಕಾಲ ಮನೆಯ ಗಂಡಸರು ಯಜಮಾನನ ಮುಂದಾಳುತನದಲ್ಲಿ ಸಂಗ್ರಹಿಸಿಟ್ಟ ತೆನೆ ತರಲು ಹೋಗುತ್ತಾರೆ. ಅಂದು ಅವರೆಲ್ಲ ಗಂಧದ ಬೊಟ್ಟಿಟ್ಟು, ವೀಳ್ಯ ಹಾಕಿ ತಲೆಗೆ ಮುಂಡಾಸು ಕಟ್ಟಿಕೊಂಡಿರುತ್ತಾರೆ. ತೆನೆಯನ್ನು ಹೊತ್ತು ಮನೆಗೆ ಮರಳಿದ ಯಜಮಾನನನ್ನು ಮನೆಯ ಒಡತಿ, ಕಾಲಿಗೆ ನೀರು ಎರೆದು ಸ್ವಾಗತಿಸುತ್ತಾಳೆ. ದೇವರ ಕೋಣೆಯಲ್ಲಿ ಆಗಲೇ ಬಿಳಿ ಮಡಿ ಬಟ್ಟೆ ಹಾಸಿ, ಸಿದ್ಧಪಡಿಸಿದ ಸ್ಥಳದಲ್ಲಿ ತೆನೆ ತುಂಬಿದ ಮೊರವನ್ನು ಇಡುತ್ತಾರೆ. ಅಂದು ದೇವರಿಗೆ ಮುಡಿಪು ಕಟ್ಟುತ್ತಾರೆ. ಮುಡಿಪು ಬಿಚ್ಚಿ ಅದಕ್ಕೆ ಹಾಲು ತುಪ್ಪ ಬೆಲ್ಲ ಹಾಗೂ ತೆಂಗಿನಕಾಯಿ ಒಡೆದು ನೀರು ಅರ್ಪಿಸಿ, ಆರತಿ ಮಾಡಿ, ಕರಿಮೆಣಸು, ನಾಣ್ಯ, ಹಾಕಿ ಮುಡಿಪನ್ನು ಕಟ್ಟುತ್ತಾರೆ. ಮನೆ ಮಂದಿಯೆಲ್ಲ ತೆನೆಯನ್ನು ಮುಟ್ಟಿ ನಮಸ್ಕರಿಸುತ್ತಾರೆ. ನಂರ ತೆನೆಯನ್ನು ಇತರ ಎಲೆಗಳಿಂದ ಬಿಗಿದು ಮನೆ ಬಾಗಿಲು, ಹಟ್ಟಿ, ಕೊಟ್ಟಿಗೆ, ಫಲ ಬಿಡುವ ಮರಗಳಿಗೆ ಕಟ್ಟುತ್ತಾರೆ. ಉಳಿಕೆಯಾದ ತೆನೆಯನ್ನು ಬಾಳೆಲೆಯಲ್ಲಿ ಹೊಂದಿಸಿ ಮುಡಿಪು ಇಡುವಲ್ಲಿ ಕಟ್ಟುತ್ತಾರೆ.

ಅಂದು ಮನೆಯ ಯಜಮಾನ ಹೊಸ ಅನ್ನವನ್ನು ತಯಾರಿಸಲು ಕೊಡವನ್ನು ಹಿಡಿದು ಇತರ ಸದಸ್ಯರ ಜೊತೆ ಸೇರಿ ನೀರು ತರಲು ಬಾವಿಗೆ ಹೋಗುತ್ತಾನೆ. ನೀರು ತರುವಾಗ ಎಲ್ಲರೂ ಪೊಲಿಯೋ ಪೊಲಿ ಪೊಲಿ ಎಂದು ಹೇಳುತ್ತಾರೆ. ಹೊಸತೂಟದ ಅನ್ನಕ್ಕೆ ನೀರನ್ನು ಇಡುತ್ತಾರೆ. ಜೊತೆಗೆ ತೆಂಗಿನಕಾಯಿಯ ಹಾಲನ್ನು ಸೇರಿಸುತ್ತಾರೆ. ಹಳೆಯ ಬಿಳಿ ಅಕ್ಕಿಯ ಜೊತೆಗೆ ಹೊಸ ತೆನೆಯ ಅಕ್ಕಿಯ ಕಾಳುಗಳನ್ನು ಸೇರಿಸಿ ಅನ್ನ ತಯಾರಿಸುತ್ತಾರೆ. ಅಂದಿನ ಎಡೆಗೆ ವಿವಿಧ ಬಗೆಯ ಮೇಲೋಗರಗಳನ್ನು ತಯಾರಿಸುತ್ತಾರೆ. ಉಪ್ಪು ಶುಂಠಿಯ ಚಟ್ನಿ ಹಾಗೂ ಕೆಸು ಮತ್ತು ಹರವೆ ಮಿಶ್ರಣದ ಪದಾರ್ಥ ಇರಲೇಬೇಕು. ಅಡುಗೆ ಸಿದ್ಧವಾದ ತರುವಾಯ ಪುದ್ವಾರ್ ಕರವನ್ನು ಹಾಗೂ ಇತರ ಮಡಿಕೆಗಳನ್ನು ಗಂಧ ಮತ್ತು ಸುಣ್ಣದಿಂದ ವಿನ್ಯಾಸಗೊಳಿಸಿ ಅಲಂಕರಿಸುತ್ತಾರೆ. ಇದಕ್ಕಾಗಿ ಅಲ್‌ಂಬುಡ ಗಿಡದ ಎಲೆಯನ್ನು ನಿರ್ದಿಷ್ಟ ವಿನ್ಯಾಸಕ್ಕೆ ಕತ್ತರಿಸಿ ಉಪಯೋಗಿಸುತ್ತಾರೆ.

ಪುದ್ವಾರ್ ಊಟ, ವೀಳ್ಯೆ ಅಡಿಕೆ ಇತ್ಯಾದಿಗಳನ್ನು ಬಾಳೆಲೆಯಲ್ಲಿಟ್ಟು ಪತ್ನಿಯೊಂದಿಗೆ ಯಜಮಾನ ಒಲೆಯ ಬೆಂಕಿಗೆ ಅರ್ಪಿಸುತ್ತಾನೆ. ಇದನ್ನು ಅಗ್ಗಿಷ್ಟಿಕೆ ಅಗ್ನಿ ಇಷ್ಟ ಎಂದು ಕರೆಯುತ್ತಾರೆ. ಅಂದಿನ ಹೊಸತೂಟಕ್ಕೆ ನೆರೆಹೊರೆಯವರು, ನೆಂಟರುಗಳನ್ನು ಆಹ್ವಾನಿಸಿರುತ್ತಾರೆ.

ತಲೆಗೆ ಮುಂಡಾಸು ಸುತ್ತಿಕೊಂಡು ಮನೆಯ ಗಂಡಸರು ಅಡುಗೆ ಮನೆಯಲ್ಲಿ ಮೊದಲು ಊಟ ಮುಗಿಸುತ್ತಾರೆ. ಪುದ್ವಾರ್ ಸಟ್ಟುಗದಲ್ಲಿ ಮೂರು ಸಲ ಬಡಿಸಿಕೊಂಡು, ಪ್ರತಿ ಸಾರಿಯು ಮುಟ್ಟಿ ನಮಸ್ಕಾರ ಮಾಡುತ್ತಾರೆ. ನಂತರ ಒಂದು ಮುಷ್ಟಿ ಅನ್ನವನ್ನು ಮುಂದೆ ಮಾಡಿ ಪಿಂಡಾರ್ಥದಲ್ಲಿ ಎಲೆಯಲ್ಲಿಡುತ್ತಾರೆ. ‘ಪುದ್ವಾರ್ ಉಣ್ಣೋಣವೇ’ ಎಂದು ಪರಸ್ಪರ ಮಾತಾಡಿಸಿಕೊಂಡು ಊಟ ಮುಗಿಸುತ್ತಾರೆ. ಮಗು ಹುಟ್ಟಿದ ವರ್ಷ ಪುದ್ವಾರನ್ನು ವಿಶೇಷವಾಗಿ ಆಚರಿಸುತ್ತಾರೆ. ನವಜಾತ ಶಿಶುವಿಗೆ ಅನ್ನ ಕೊಡುವ ಶಾಸ್ತ್ರ ಮಾಡುತ್ತಾರೆ. ಕುಟುಂಬದ ಎಲ್ಲಾ ಸದಸ್ಯರು ಅನ್ನದ ಅಗಳನ್ನು ಮಗುವಿನ ಬಾಯಿಗಿಡುತ್ತಾ ತುಳುವಿನಲ್ಲಿ “ಈ ನುಪ್ಪು ಉಂಡ್‌ದ್ ನುಪ್ಪುದ ಬೇರ್‌ನ್ಲ ಗರ್ಪುಲ ಬಾಲೆ” (ಈ ಅನ್ನವನ್ನು ಉಂಡು ಅನ್ನದ ಬೇರನ್ನು ಅಗೆ ಮಗುವೆ) ಎಂದು ಶುಭ ಹಾರೈಸುತ್ತಾರೆ.

ಆಚರಣೆಯ ಹಿನ್ನೆಲೆಯಲ್ಲಿ ಹಲವು ಗಾದೆ, ನಂಬಿಕೆ, ಕಥೆಗಳು ಹುಟ್ಟಿಕೊಂಡಿವೆ. ಹೊಸತೂಟದಲ್ಲಿ ಕಲ್ಲು ಸಿಕ್ಕಿದ ಹಾಗೆ. ನೀರು ಕುಡಿಯಲು ಬಂದವನಿಗೆ ಹೊಸತೂಟ ಸಿಕ್ಕಿದ ಹಾಗೆ (ಗಾದೆ) ಮನೆ ತುಂಬಿಸಿದ ದಿನ ಸಾವು ಸಂಭವಿಸಬಾರದು. ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಆ ಮನೆಯ ‘ಪೊಲ್ಸು’ ರೂಪದಲ್ಲಿ ಹೋಗುತ್ತದೆ. ಅಂದು ಸಂಪತ್ತು, ವಸ್ತು, ಹಣದ ರೂಪದಲ್ಲಿ ಹೋಗಬಾರದು. ಮನೆಯ ಬಾಗಿಲು ಮುಚ್ಚುವಂತಿಲ್ಲ. ‘ಪುದ್ವಾರ್ ಮಡಕೆ’ ಒಡೆಯಬಾರದು. ಸಾವು ಸಂಭವಿಸಿದರೆ ಆ ವರ್ಷ ಆಚರಣೆ ನಡೆಯುವುದಿಲ್ಲ.