ಮಲೆನಾಡಿನ ಒಕ್ಕಲಿಗರು ಹೊಸ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಹಬ್ಬ. ಪ್ರತಿ ವರ್ಷ ಕಾರ್ತಿಕ ಅಮವಾಸ್ಯೆ ಒಂದು ಶುಭ ದಿನವನ್ನು ಜೋಯಿಸರಿಂದ ತಿಳಿದು, ಗೊತ್ತು ಮಾಡುತ್ತಾರೆ. ಹಬ್ಬಕ್ಕೆ ಬಂಧುಬಾಂಧವರನ್ನು ಆಹ್ವಾನಿಸುತ್ತಾರೆ. ಹೊಸತು ಆಚರಣೆಯಲ್ಲಿ ಪ್ರತಿಯೊಂದು ಹೊಸದಾಗಿರಬೇಕೆಂದು ನಿಯಮವಿದೆ. ನೆಲಕ್ಕೆ ಹೊಸ ಮಣ್ಣು ಹಾಕಿ, ಸಗಣಿಯಿಂದ ಸಾರಣೆ ಮಾಡುತ್ತಾರೆ. ಮನೆಯ ಕಸ ಗುಡಿಸಿ, ಗೋಡೆಗಳಿಗೆ ಸುಣ್ಣಬಣ್ಣಗಳಿಂದ ಅಲಂಕರಿಸುತ್ತಾರೆ. ಮನೆ ಮಂದಿಗೆಲ್ಲ ಹೊಸ ಬಟ್ಟೆಗಳನ್ನು ತರುವುದಲ್ಲದೇ ಅಂದಿನ ಅಡುಗೆಗಾಗಿ ಹೊಸ ಪಾತ್ರೆ ಇತ್ಯಾದಿಗಳನ್ನು ತರುತ್ತಾರೆ.

ಅಂದು ಮನೆ, ಚಪ್ಪರ, ತುಳಸಿಕಟ್ಟೆ ಇತ್ಯಾದಿಗಳನ್ನು ತಳಿರುತೋರಣಗಳಿಂದ ಅಲಂಕರಿಸಿರುತ್ತಾರೆ. ಹೆಂಗಸರು ಹೊಸ ಗಡಿಗೆಯಿಂದ ನೀರು ತಂದು ಅಡುಗೆಗೆ ಸಿದ್ಧತೆ ನಡೆಸುತ್ತಾರೆ. ಗಂಡಸರು ಮನೆ, ಇತ್ಯಾದಿ ಸ್ಥಳಗಳಲ್ಲಿ ಚಪ್ಪರ ಹಾಗೂ ತೋರಣ ಕಟ್ಟುವ ಕೆಲಸದಲ್ಲಿ ತೊಡಗಿರುತ್ತಾರೆ. ಅಲ್ಲದೇ ಗದ್ದೆಯಲ್ಲಿ ನಿಗದಿತ ಸ್ಥಳವನ್ನು ಗೊತ್ತು ಮಾಡಿ ಬಾಳೆಕಂಬ, ಕಬ್ಬಿನ ಕೋಲು ಹಾಗೂ ಮಾವಿನ ತೋರಣಗಳಿಂದ ಅಲಂಕರಿಸುತ್ತಾರೆ. ನಂತರ ಮಡಿಯುಟ್ಟು, ಪೂಜಾ ಸಾಮಗ್ರಿಯನ್ನು ಹಿಡಿದು ಮೆರವಣಿಗೆಯಲ್ಲಿ ಹೊಸತು ತರಲು ಗದ್ದೆಗೆ ಹೋಗಿ, ಆಗಲೇ ಸಿಂಗರಿಸಿದ ಸ್ಥಳದಲ್ಲಿ ಹಣ್ಣುಕಾಯಿಗಳಿಂದ ಪೂಜಿಸಿ, ಐದು ಬೆಳೆಯ ಬುಡಗಳನ್ನು ಒಟ್ಟು ಮಾಡಿ, ಒಂದು ಎಸಳಿನಿಂದ ಗಂಟು ಹಾಕಿ ಪೂಜೆ ಮಾಡುತ್ತಾರೆ. ನಂತರು ಹಾಲು, ತುಪ್ಪ ಅರ್ಪಿಸಿ ಒಟ್ಟು ಮಾಡಿ ಗಂಟು ಹಾಕಿದ ಬೆಳೆಯನ್ನು ಕೊಯಿಲುಗತ್ತಿಯಿಂದ ಕೊಯ್ದು ಹಾಲಿನ ತಂಬಿಗೆಯಲ್ಲಿರಿಸಿ, ಹೊತ್ತು ಮೆರವಣಿಗೆಯಲ್ಲಿ ಮನೆಯ ಅಂಗಳಕ್ಕೆ ಬರುತ್ತಾರೆ. ಭತ್ತದ ತೆನೆಗಳನ್ನು ತುಳಸಿ ಕಟ್ಟೆಯಲ್ಲಿರಿಸಿ, ಹಾಲು, ಹಣ್ಣಿನಿಂದ ಪೂಜಿಸಿ ನಂತರ ಮನೆಯ ಮಾಣಗಿಯೊಳಗೆ ಆಗಲೇ ಸಿದ್ಧಪಡಿಸಿದ ಮಣೆಯ ಮೇಲಿನ ಸಗಣಿ ಗಣಪ ಹಾಗೂ ಕಲಶಗಳ ಪಕ್ಕದಲ್ಲಿಟ್ಟು ಪೂಜಿಸುತ್ತಾರೆ.

ಹೊಸ ಭತ್ತದ ತೆನೆಗಳಿಂದ ಬಾಗಿಲ ತೋರಣ ಮಾಡಿ, ಬಾಗಿಲು ಹಾಗೂ ತುಳಸಿ ಕಟ್ಟೆಗೆ ಹಾಕುತ್ತಾರೆ. ಅಂದಿನ ಅಡುಗೆಗೆ ಹೊಸ ಭತ್ತವನ್ನು ಬಿಡಿಸಿ ಹಾಕುತ್ತಾರೆ. ಅಂದಿನ ನೈವೇದ್ಯಕ್ಕೆ ಹೊಸ ಬೆಳೆಯಿಂದ ಮಾಡಿದ ಪಾಯಸ ಇರಬೇಕು. ಅಡುಗೆಯನ್ನು ಉಂಡು ತೇಗುವಂತಿಲ್ಲ ಎಂಬ ನಿಷೇಧವಿದೆ. ತೇಗುವುದು ಲಯದ ಸಂಕೇತವೆಂದು ತಿಳಿಯುತ್ತಾರೆ. ತುಳಸಿ, ಗ್ರಾಮದೇವತೆ, ಬಾವಿ, ತೆಂಗಿನಮರ, ಕೊಟ್ಟಿಗೆ, ಪಣತ, ಕಡಗೋಲು ಕಂಬ, ನಾಗರಬನ, ಭೂತದ ಬನ, ಕಣ, ಗೊಬ್ಬರ ಗುಂಡಿ ಇತ್ಯಾದಿ ಕಡೆಗಳಲ್ಲಿ ಒಂದೊಂದು ತೆನೆಯನ್ನು ಇಟ್ಟು ಕೈ ಮುಗಿಯುತ್ತಾರೆ.

ದೇವರಿಗೆ ಮುಡಿಪು ಕಟ್ಟುವುದಕ್ಕೆ ಮನೆಯ ಅಂಗಳದಲ್ಲಿ ಸೇರುತ್ತಾರೆ. ಮನೆಯ ಮಹಡಿಯ ಮೇಲೆ ಕಟ್ಟಿದ ಕಾಣಿಕೆ ಗಂಟನ್ನು ಗೋಮೂತ್ರ ಸಿಂಪಡಿಸಿ, ಇಳಿಸಿಕೊಂಡು ಅಂಗಳಕ್ಕೆ ಬರುತ್ತಾರೆ. ದಾಸಯ್ಯ ಮುಂದಿನ ಪೂಜೆಗೆ ಸಿದ್ಧಪಡಿಸಿಕೊಂಡಿರುತ್ತಾನೆ. ದಾಸಯ್ಯನ ಮುಂದೆ ಗಂಟನ್ನು ಬಿಚ್ಚಿ ತಾವು ನಡೆದುಕೊಳ್ಳುವ ಎಲ್ಲ ದೈವಗಳಿಗೆ ಶಕ್ತಾನುಸಾರ ಹಣ ಹಾಗೂ ಕಾಳುಮೆಣಸು ಹಾಕಿ ಕೈಮುಗಿಯುತ್ತಾರೆ. ಮನೆ ಮಂದಿಯೆಲ್ಲ ಹಣ ಹಾಕಿದ ನಂತರ ಗಂಟನ್ನು ಪೂಜಿಸಿ, ಮತ್ತೆ ಮಹಡಿಯಲ್ಲಿ ಕಟ್ಟುತ್ತಾರೆ. ನಂತರ ಮಾಳಿಗೆಯಲ್ಲಿ ಜಕ್ಕಣಿಗಳಿಗೆ ಎಡೆ ಇಟ್ಟು ಅಂದಿನ ಎಲ್ಲಾ ಅಡುಗೆಗಳನ್ನು ಬಡಿಸಿ, ದೀಪ ಉರಿಸಿ, ಧೂಪ ಹಾಕಿ, ಪೂಜಿಸುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ.