ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಮೊದಲ ದಿನ. ಯುಗಾದಿ ಹಬ್ಬದಂದು ರೈತರು ಸಂಭ್ರಮ ಸಡಗರದಿಂದ ‘ಹೊನ್ನಾರು’ ಉಳುಮೆ ಆರಂಭಿಸಿ ‘ಹೊನ್ನಿನ ಬೆಳೆ ನೀಡು’ ಎಂದು ಭೂದೇವಿಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಇದು ಸಾಮೂಹಿಕವಾಗಿ ಆಚರಿಸುವ ಆಚರಣೆ. ಹೊನ್ನಾರು ವೈಶಿಷ್ಟ್ಯಪೂರ್ಣವಾದ ಆಚರಣೆಯಾಗಿದ್ದು, ಹೊಸ ವರ್ಷದ ಆರಂಭದ ಯುಗಾದಿ ಹಬ್ಬದಂದೇ ನಡೆಯುತ್ತದೆ.

ಮೈಸೂರು ಹಾಗೂ ಹಾಸನ ಜಿಲ್ಲೆಗಳು ಸಂಸ್ಕೃತಿ ಹಾಗೂ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡಿರುವ ಕೊಡಗಿನ ಗಡಿಭಾಗದ ಕಾವೇರಿ ಹೊಳೆ ಸಾಲಿನ ಗ್ರಾಮಗಳಾದ ಮುಳ್ಳುಸೋಗೆ, ಕೂಡಿಗೆ, ಕಣಿವೆ, ಹುಲಸೆ, ಹೆಬ್ಬಾಲೆ, ತೊರೆನೂರು, ಮಣಜೂರು, ಶಿರಂಗಾಲ ಹಾಗೂ ಮೂಡಲು ಕೊಪ್ಪಲುಗಳಲ್ಲಿ ಕಾಣಬಹುದು.

ಯುಗಾದಿ ಹಬ್ಬದ ಮೊದಲ ದಿನ ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಆ ವರ್ಷ ‘ಹೊನ್ನಾರು’ ಯಾವ ರೈತನ ಹೆಸರಿನಲ್ಲಿ ಬರುತ್ತದೆಂದು ಪಂಚಾಂಗದ ಮೂಲಕ ನೋಡಿ ತಿಳಿದುಕೊಂಡು ಆ ರೈತನಿಂದಲೇ ‘ಹೊನ್ನಾರು’ ಹೂಡಿಸುವ ನಿರ್ಧಾರ ಮಾಡುತ್ತಾರೆ. ಅಂದು ಹಬ್ಬದ ಮುಂಜಾನೆ ಎದ್ದ ರೈತರು ತಮ್ಮ ಹಸು, ಕರು, ಎತ್ತುಗಳನ್ನು ಕೆರೆಕಟ್ಟೆ ಗಳಲ್ಲಿ ತೊಳೆದು, ಸಿಂಗರಿಸಿ ಪೂಜಿ ಸುತ್ತಾರೆ. ಕೃಷಿ ಕಾರ್ಯಗಳಿಗೆ ಉಪ ಯೋಗಿಸುವ ನೇಗಿಲು, ನೊಗ, ಉಳುಮೆ ಕೋಲು ಮತ್ತಿತರ ಪರಿಕರ ಗಳನ್ನು ಒಪ್ರೋಅವು ಗಳನ್ನು ಬೇವಿನಸೊಪ್ಪು ಹಾಗೂ ಹೊಂಗಿನದಾರಗಳಿಂದ ಅಲಂಕರಿಸಿ ಸಾಂಪ್ರದಾಯಿಕವಾಗಿ ಪೂಜಿಸುತ್ತಾರೆ. ‘ಹೊನ್ನಾರು’ ಎಡೆಗಾಗಿ ಮನೆಯಲ್ಲಿ ಹೆಂಗಸರು ಹೋಳಿಗೆ ಮತ್ತಿತರ ಭಕ್ಷ್ಯಗಳನ್ನು ತಯಾರಿಸಿ, ಕೃಷಿ ಉಪಕರಣಗಳಿಗೆ ಎಡೆ ತೋರಿಸುತ್ತಾರೆ. ಅಂದು ಮನೆಮಂದಿಯೆಲ್ಲ ಹೊಸ ಬಟ್ಟೆ ತೊಟ್ಟು ‘ಹೊನ್ನಾರು’ ಉಳುಮೆಗೆ ಸಿದ್ಧತೆ ನಡೆಸುತ್ತಾರೆ.

ಮನೆಯ ಮುಂದೆ ಎತ್ತು ಹಾಗೂ ಜಾನುವಾರುಗಳನ್ನು ಸಿಂಗರಿಸಿದ ರೈತರು ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಸೇರುತ್ತಾರೆ. ದೇವಸ್ಥಾನಕ್ಕೆ ಸೇರಿದ ಜಮೀನನ್ನು ‘ಹೊನ್ನಾರು’ ರೈತ ಮೊದಲು ಪ್ರವೇಶ ಮಾಡುವ ಮೂಲಕ ಪೂಜಿಸಿ, ಆ ವರ್ಷದ ‘ಹೊನ್ನಾರು’ ಉಳುಮೆಗೆ ಚಾಲನೆ ನೀಡುತ್ತಾನೆ. ನಂತರ ಅಲ್ಲಿಂದ ರೈತರು ತಮ್ಮ ತಮ್ಮ ಜಮೀನಿಗೆ ಎತ್ತುಗಳೊಂದಿಗೆ ತೆರಳಿ ಅಲ್ಲಿ ಸಾಂಕೇತಿಕವಾಗಿ ನೇಗಿಲು ಮೂಲಕ ‘ಹೊನ್ನಾರು’ ಹೂಡಿ ಉಳುಮೆ ಆರಂಭಿ ಸುತ್ತಾರೆ.