ಮುತ್ತತ್ತಿರಾಯನ ಉತ್ಸವಮೂರ್ತಿಯನ್ನು ಹುಲಿಯ ಗೊಂಬೆಯ ಮೇಲೆ ಇರಿಸಿ, ಮೆರವಣಿಗೆ ಮಾಡುವುದೇ ಹುಲಿವಾಹನ ಸೇವೆಯಾಗಿದೆ. ಮುತ್ತತ್ತಿ ಜಾತ್ರೆಯಂದು ನಡೆಯುವ ಈ ಸೇವೆಯನ್ನು ಭಕ್ತರು ತಮಗೆ ಅನುಕೂಲವಾದ ದಿನಗಳಲ್ಲಿಯೂ ಮಾಡುತ್ತಾರೆ. ಸಾಮಾನ್ಯವಾಗಿ ಜಾತ್ರೆಯಲ್ಲದೇ ಶನಿವಾರ ಹಾಗೂ ಶ್ರಾವಣ ಶನಿವಾರ ಸೇವೆ ಮಾಡಲು ಬಹಳ ಶ್ರೇಷ್ಠದಿನವೆಂದು ನಂಬುತ್ತಾರೆ. ಭಕ್ತರು ಎರಡು ವಿಧದಲ್ಲಿ ಈ ಸೇವಾ ಕಾರ್ಯವನ್ನು ಕೈಗೊಳ್ಳುತ್ತಾರೆ. ಹುಲಿಯ ಗೊಂಬೆಯ ಮೇಲೆ ಕೂರಿಸಿದ ಮುತ್ತತ್ತಿರಾಯನ ಉತ್ಸವಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಿ ಸುವುದು ಒಂದು ಬಗೆಯಾದರೆ, ಹೊಳೆಯ ದಡದವರೆಗೆ ಮೆರವಣಿಗೆಯಲ್ಲಿ ತೆರಳಿ ಮತ್ತೆ ಗುಡಿಗೆ ಬರುವುದು ಇನ್ನೊಂದು ಬಗೆಯಾಗಿದೆ. ಮೇಲಿನ ಯಾವ ಸೇವೆ ಮಾಡಿದರೂ ಅದನ್ನು ಹುಲಿವಾಹನ ಸೇವೆ ಎಂದೇ ಕರೆಯಲಾಗುತ್ತದೆ. ಪವಿತ್ರ ದಿನದ ಅನುಕೂಲ ವೇಳೆಯಲ್ಲಿ ಸೇವೆ ಕೈಗೊಳ್ಳುವ ಅವಕಾಶವಿದೆ.

ದೇವರಿಗೆ  ‘ವಾಹನವನ್ನು ಎತ್ತಿಸುತ್ತೇವೆ’ ಎಂದು ಹರಕೆ ಹೊತ್ತ ಭಕ್ತರು ವಾಹನ ಸೇವೆ ಮಾಡುತ್ತಾರೆ. ಮೆರವಣಿಗೆಯಲ್ಲಿ ಹುಲಿವಾಹನ ಹೊತ್ತವರ ಕಾಲು ತುಳಿತಕ್ಕೆ ಒಳಗಾಗುವುದು ಶ್ರೇಷ್ಠ ಎಂದು ನಂಬುತ್ತಾರೆ. ಭಕ್ತರು ತಮ್ಮ ಮಕ್ಕಳನ್ನು ಹುಲಿವಾಹನ ಹೊತ್ತವರಿಂದ ತುಳಿಸುತ್ತಾರೆ. ಈ ಬಗೆಯ ಆಚರಣೆಗಳನ್ನು ಸಿದ್ಧಪ್ಪಾಜಿ ಹಾಗೂ ಮಲೆಮಾದೇಶ್ವರನ ದೇವಾಲಯಗಳಲ್ಲೂ ಕಾಣಬಹುದಾಗಿದೆ.