ಮದುವೆ ಸಂದರ್ಭದಲ್ಲಿ ನಡೆಯುವ ಒಂದು ಆಚರಣೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಆಚರಣೆಯಲ್ಲಿದೆ. ಮಹಿಳೆಯರ ಬದುಕಿನ ಒಡನಾಡಿಯಾಗಿರುವ ಹಾಗೂ ಅವರ ಬದುಕಿನ ಸಾತ್ವಿಕ ನೆಲೆಗಳಾಗಿ ಪರಿಣಮಿಸಿರುವ ಬಾವಗೀ, ಒಳಕಲ್ಲು ಪೂಜೆ, ಅರಿಶಿಣ ಹಚ್ಚೋದು, ಐರಾಣಿ ತರೋದು, ಸಂಡಿಗೆ ಕರಿಯೋದು, ಕೂಸು ಒಪ್ಪಿ ಸುವುದು, ಬಯಕೆ ಮಾಡುವುದು, ಆಲಗಂಬ, ದಂಡಿ, ಬಾಸಿಂಗ, ದೀಡು ನಮಸ್ಕಾರದಂತಹ ಆಚರಣೆಗಳು ಸಡಗರ ಸಂಭ್ರಮದ ಪ್ರತೀಕಗಳಾಗಿವೆ. ತುಂಬಾ ವಿಶಿಷ್ಟವಾಗಿ, ಅಲಂಕೃತವಾಗಿ ಆಚರಣೆಗೊಳ್ಳುವ ಹಂದರಗೋಳು ತರುವ ಆಚರಣೆ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಮದುವೆ ಪ್ರತಿ ವ್ಯಕ್ತಿಯ ಜೀವಮಾನದ ಮಹತ್ವದ ಘಟ್ಟ. ಅದಕ್ಕಾಗಿ ಹಲವು ದಿನಗಳ ತಯಾರಿ ನಡೆಯುತ್ತದೆ. ಹೆಣ್ಣಿನ ಕಡೆಯವರು ಭಾಂಡೆ ವಸ್ತುಗಳು, ಲಗ್ನದ ಬಟ್ಟೆಗಳನ್ನು ತರುವ ತಯಾರಿ ನಡೆಸಿದ್ದರೆ, ಗಂಡಿನವರು ಹೆಣ್ಣಿನವರಂತೆ ತಯಾರಿ ನಡೆಸುತ್ತಾರೆ. ಲಗ್ನದ ಪತ್ರಿಕೆ ಕಟ್ಟಿಸುವುದು, ಜೊತೆಗೆ ಬೀಸುವ ಕಲ್ಲು, ಒಳಕಲ್ಲು ಇತ್ಯಾದಿ ಶಾಸ್ತ್ರಗಳು ನಡೆಸಿ ಬಿಡುತ್ತಾರೆ. ಗಂಡಿನವರಿಗೆ ಬಾಕಿ ಕೆಲಸವೆಂದರೆ ಹಂದರಗೋಳು ತರುವುದು ಮಾತ್ರ.

ದೇವರ ಊಟದ ಹಿಂದಿನ ದಿನ ಐದರಿಂದ ಆರು ಮಂದಿ ಯುವಕರು ಹಂದರ ಸೊಪ್ಪು ತರಲು ಸಿದ್ಧತೆ ನಡೆಸುತ್ತಾರೆ. ತಲೆಗೆ ಟವೆಲ್ ಸುತ್ತಿಕೊಂಡು, ಜುಲಾ ಹಾಕಿ ಸಿಂಗರಿಸಿ ಅಲಂಕರಿಸಿದ ಎತ್ತುಗಳನ್ನು ಬಂಡಿಗೆ ಕಟ್ಟಿ ಸೂರ್ಯೋದಯಕ್ಕೆ ಮುನ್ನ ಸಿದ್ಧರಾಗುತ್ತಾರೆ. ಬಂಡಿ ಏರಿ ಹಂದರಸೊಪ್ಪು ತರಲು ಸಿದ್ಧವಾದ ಯುವಕರಿಗೆ ಮನೆಯ ಹಿರಿಯಾಕೆ ರೊಟ್ಟಿ, ಅನ್ನ, ಮೊಸರು, ಚಟ್ನಿ, ಪಲ್ಲೆಯನ್ನೊಳಗೊಂಡ ಬುತ್ತಿಗಂಟು ಕೊಡುವುದರ ಜೊತೆಗೆ, ವಿಭೂತಿ, ಕುಂಕುಮ, ಎಲೆ, ಅಡಿಕೆ, ಊದುಬತ್ತಿ ಇತ್ಯಾದಿಗಳನ್ನು ಕೊಟ್ಟು, ದಕ್ಷಿಣೆ ಎಂಬಂತೆ ಪೂಜೆ ಸಾಮಗ್ರಿಗಳ ಚೀಲವನ್ನು ನೀಡುತ್ತಾಳೆ. ಎಲ್ಲವನ್ನು ತೆಗೆದುಕೊಂಡ ಯುವಕರ ಗುಂಪು ಹಂದರಸೊಪ್ಪು ಸಿಗುವ ಕಾಡಿನ ಕಡೆಗೆ ಧಾವಿಸುತ್ತಾರೆ.

ಕಾಡನ್ನು ಸೇರುವಷ್ಟರಲ್ಲಿ ಸೂರ್ಯೋದಯವಾಗಿರುತ್ತದೆ. ಯುವಕರು ಕುಡುಗೋಲುಗಳಿಗೆ ಪೂಜೆ ಸಲ್ಲಿಸಿ, ಬಂಡಿ ತುಂಬ ಹಂದರ ಸೊಪ್ಪನ್ನು ಕೊಯ್ದು ತುಂಬಿಸುತ್ತಾರೆ. ನಂತರ ಪ್ರತ್ಯೇಕವಾಗಿ ಐದು ಹಂದರ ಸೊಪ್ಪಿನ ಕಟ್ಟನ್ನು ಕಟ್ಟಿ ಅಲ್ಲಿಯೇ ಬುತ್ತಿಯ ಊಟವನ್ನು ಮುಗಿಸಿ ಊರ ದಾರಿ ಹಿಡಿಯುತ್ತಾರೆ. ಊರ ಅಗಸಿ ದಾಟಿದ ನಂತರ ಸಂಪ್ರದಾಯದಂತೆ ಪ್ರತ್ಯೇಕವಾಗಿ ಮಾಡಿಕೊಂಡ ಹಂದರದ ಐದು ಕಟ್ಟುಗಳನ್ನು ಮನೆ ದೇವರು ಹಾಗೂ ವೀರಭದ್ರ ದೇವರ ಹಾಗೂ ಹನುಮಪ್ಪ ಇತ್ಯಾದಿ ದೈವಗಳಿಗೆ ಅರ್ಪಿಸಿ ಬಂಡಿಯಲ್ಲಿ ತುಂಬಿದ ಹಂದರ ಸೊಪ್ಪನ್ನು ಮದುವೆ ಮನೆಯ ಹಂದರಕ್ಕೆ ಸಾಗಿಸುತ್ತಾರೆ. ಇಲ್ಲಿಗೆ ಈ ಯುವಕರ ಕೆಲಸ ಮುಗಿಯುತ್ತದೆ.

ಯುವತಿಯರು, ಕಳಶ ಹಿಡಿದ ಮುತ್ತೈದೆಯರು, ಐದು ಜನ ಮಾವಂದಿರು ಸೇರಿ ಗುಡಿಯಲ್ಲಿರಿಸಿದ ಹಂದರ ಸೊಪ್ಪನ್ನು ತರಲು ಮೆರವಣಿಗೆಯಲ್ಲಿ ಸಾಗುತ್ತಾರೆ. ಮೆರವಣಿಗೆ ದಂಡು ಊರ ಪ್ರಮುಖ ಬೀದಿಗಳನ್ನು ಹಾದು ಶ್ರೀ ವೀರಭದ್ರ ದೇವರ ಗುಡಿಯನ್ನು ತಲುಪುತ್ತದೆ. ಮುತ್ತೈದೆಯಲ್ಲಿ ಹಿರಿಯವಳು ಕಂಬಳಿ ಹಾಸುತ್ತಾಳೆ. ಇನ್ನೊಬ್ಬಳು ಅದರ ಮೇಲೆ ಅಕ್ಕಿಯಿಂದ ಪಟ್ಟಿ ಬರೆಯುತ್ತಾಳೆ. ಅದರ ಮೇಲೆ ಐದು ಮಂದಿ ಸೋದರ ಮಾವಂದಿರು ಕುಳಿತುಕೊಳ್ಳುತ್ತಾರೆ. ಐದು ಮಂದಿಗೂ ಮುತ್ತೈದೆಯೊಬ್ಬಳು ವಿಭೂತಿ, ಕುಂಕುಮ, ಕೈಗೆ ಹೂವಿನ ಸರ ಕಟ್ಟಿ ಪೂಜಿಸುತ್ತಾಳೆ. ವೀರಭದ್ರ ದೇವರಿಗೂ ಕಾಯಿ ಕರ್ಪೂರ ಅರ್ಪಿಸಿ, ಐದು ಮಂದಿ ಮುತ್ತೈದೆಯರು ಆರತಿ ಬೆಳಗುತ್ತಾರೆ. ನಂತರ ಮುತ್ತೈದೆಯರೆಲ್ಲರೂ ಹಂದರಗೋಳು ಹೊತ್ತ ಕುರಿ ಎಂದು ಹೇಳುತ್ತಾರೆ. ಯುವಕರು ಪೂಜೆ ಮಾಡಿದ ಹಂದರಗೋಳಿಗೆ ನಮಸ್ಕರಿಸಿ, ಪೆಂಡಿಗಳನ್ನು ಹೆಗಲಿಗೇರಿಸಿಕೊಂಡು ಮದುವೆ ಮನೆಯ ಕಡೆಗೆ ನಡೆಯುತ್ತಾರೆ. ಬ್ಯಾಂಡು ಮೇಳದವರ ಹಿಂದೆ ಹಂದರಗೋಳು ಹೊತ್ತ ಐದು ಮಾವಂದಿರು, ಅವರ ಹಿಂದೆ ಅಂದವಾಗಿ ಸೀರೆಯುಟ್ಟ ಮಹಿಳೆಯರು ಮೆರವಣಿಗೆಯಲ್ಲಿ ನಡೆಯುತ್ತಾರೆ. ಹಂದರ ಕಟ್ಟು ಹಿಡಿದು ಮದುವೆ ಮನೆ ಸೇರಿದ ಮಾವಂದಿರು ಹಂದರದ ಮೇಲೆ ಒಂದೇ ಸಾರಿ ಸೊಪ್ಪಿನ ಕಟ್ಟನ್ನು ಎಸೆಯುತ್ತಾರೆ. ಕಳಶ ಹಿಡಿದ ನಾರಿಯರು ಮದುವೆ ಮನೆಯನು್ನ ಸೇರುತ್ತಾರೆ. ಹೀಗೆ ಹಂದರಗೋಳು ಮದುವೆಯ ಮುಖ್ಯ ಹಾಗೂ ಆಕರ್ಷಕ ಆಚರಣೆಯಾಗಿ ನಡೆಯುತ್ತದೆ.