ಹಾಗೆ ನೋಡಿದರೆ ಮಾನವನ ಭಾವವಿಲಾಸದ ಸಂಕೇತವಾದ ಚಿತ್ರಕಲೆ ಇತಿಹಾಸಪೂರ್ವ ಕಾಲದ್ದು. ಪ್ರಾಣಿಚಿತ್ರ ಮತ್ತು ಬೇಟೆಯ ಚಿತ್ರಗಳನ್ನೊಳಗೊಂಡ ಗುಹಾಂತರ್ಗತ ಚಿತ್ರಗಳಿಂದ ಹಿಡಿದು ದೇವಾಲಯದ ಮುಚ್ಚಿಗೆ, ಗೋಡೆಗಳ ಮೇಲೆ ಅಲಂಕರಿಸಿರುವ ಚಿಕಣಿ ಹಾಗೂ ಭಿತ್ತಿ ಚಿತ್ರಗಳವರೆಗೆ ಚಿತ್ರಕಲೆಯ ಪ್ರಾಚೀನ ಇತಿಹಾಸ  ವಿಸ್ತರಿಸಿದೆ. ಇಷ್ಟದೇವತೆಗಳ ಚಿತ್ರಗಳನ್ನು ನೇಯಿಸಿ ದೇವಾಲಯಕ್ಕೆ ಸಮರ್ಪಿಸುವ ಪದ್ಧತಿಯಂತೆ, ಧಾರ್ಮಿಕ ಕಥೆಗಳನ್ನು ಸಚಿತ್ರವಾಗಿ ಹಲಗೆಯ ಮೇಲೆ ರೇಖಿಸುವ ’ಪಟಕತ’ ಅಥವಾ ಚಿತ್ರಕಥೆ ಸಂಪ್ರದಾಯವೂ ರೂಢಿಯಲ್ಲಿದೆ. ಅದರಂತೆ ಕಥಾಮಾಲಿಕೆಯನ್ನು ಬಟ್ಟೆಯನ್ನು ಬಟ್ಟೆಯ ಮೇಲೆ ಬಣ್ಣದಿಂದ ಬರೆದು ಪ್ರದರ್ಶಿಸುವ’ ಸುರಳಿ ಪಟಕಥೆ’ ಪರಂಪರೆಯೂ ಕಾರಿಬರುತ್ತದೆ. ದೈನ, ಬೌದ್ಧ ಮತ್ತು ವೈದಿಕ ಪರಂಪರೆಗಳಲ್ಲಿ ಇವು ಪ್ರಾಚುರ್ಯದಲ್ಲಿದ್ದುವೆಂಬುದಕ್ಕೆ ಆಧಾರಗಳಿವೆ.

[1]

ಜಾನಪದ ಚಿತ್ರಕಥಾ ವಿಧಾನವನ್ನನುಸರಿಸಿ ’ಮಹಾಧವಳ’ ದಂತ ಜೈನ ಧಾರ್ಮಿಕ ತಾಳೆಗರಿ ಸಂಪುಟಗಳು ರೂಪುಗೊಂಡಿವೆ. ಹಳಗನ್ನಡ ಕೃತಿ ವಡ್ಡಾರಾಧನೆಯಲ್ಲಿ, ಪಂಪನ ಆದಿಪುರಾಣದ ಪೂರ್ವಭವಾವಳಿ ಪ್ರಸಂಗದಲ್ಲಿ ಚಿತ್ರಪಟದ ಉಲ್ಲೇಕ ಬರುತ್ತದೆ.[2] ಹೀಗೆ ಚಿತ್ರಪಟವನ್ನು ಮುಂದೆ ಮಾಡಿಕೊಂಡು ’ಭಾಗವತ ವೀಣೆ’ ಹಿಡಿದು ನವರಾತ್ರಿ ಕಾಲದಿಂದ ಮೇಲ ನಡೆಸುವ ಪರಿಪಾಠ ಮಹಾರಾಷ್ಟ್ರದಲ್ಲಿ ಹಲವು ಶತಮಾನಗಳಿಂದ ರೂಢಿಯಲ್ಲಿದೆ. ರಾಜಸ್ಥಾನದ ’ಠಾಕೂರ್’ಎನ್ನುವ ಅಲೆಮಾರಿ ಜನಾಂಗ ಇದನ್ನು ಅನುವಂಶಿಕ ಕಲೆಯಾಗಿಸಿಕೊಂಡಿದೆ. ಗುಜರಾತಿನ ’ಗರೋಡ’ ಜನರು ಅರಸರ ಶಾರ್ಯ ಸಾಹಸವನ್ನು ಮತ್ತು ಜೈನ ತೀರ್ಥಂಕರರ ಮಹಿಮೆಯನ್ನು ಪ್ರಸಾರಮಾಡಲು ’ಬಾಪೂಜಿ ಕೀ ಪದ್‌ಚಿತ್ರಸರುಳಿ’ ಬಳಸಿ ಕಥೆ ಹೇಳುತ್ತಾರೆ. ಬಂಗಾಲಿ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿಯಂತೆ ಆಂಧ್ರದ ತೆಲಂಗಾಣದ ಪ್ರಾಂತದಲ್ಲೂ ೩೦ ಅಡಿ ಉದ್ದ, ೩ ಅಡಿ ಅಗಲದ ಸುಳಿ ಪಟಕತೆಗಳು ಲಭ್ಯವಾಗಿರುವುದು ಪಟಕತೆಯ ಪರಂಪರೆಯ ವ್ಯಾಪಕತೆ ಮತ್ತು ಮಹತ್ವವನ್ನು ಸಾದರ ಪಡಿಸುವಂತಿವೆ.

ಪಟಕತೆಯ ಮುಂದಿನ ಬೆಳವಣಿಗೆ ಎನ್ನುವಂತೆ ’ತೊಗಲುಗೊಂಬೆಯಾಟ’ ಕಾಣಿಸುತ್ತದೆ. ಕರ್ನಾಟಕ ಜನಪದ ರಂಗಭೂಮಿಯ ಒಂದು ಪ್ರಮುಖ ಕಲೆಯಾದರೂ ಇದು ಯಕ್ಷಗಾನ ಬಯಲಾಟ ಹಾಗೂ ಸೂತ್ರದ ಗೊಂಬೆಯಾಟಗಳಿಗಿಂತ ಭಿನ್ನವಾದುದು. ಮೂಲ ಮಹಾರಾಷ್ಟ್ರವಾದರೂ ಕರ್ನಾಟಕ, ಆಂಧ್ರ, ತಮಿಳುನಾಡುಗಳ ಕಡೆಗೆ ಅನೇಕ ಕವಲುಗಳಾಗಿ ಹಂಚಿಹೋದ ’ಚಿತ್ರಮರಾಠಿಗರು’ ಎಂಬ ಜನಾಂಗದವರ ಪಾರಂಪಾರಿಕ ಕುಶಲ ಕಲೆ ಇದು. ಕರ್ನಾಟಕದ ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಹಳೆಯ ಮೈಸೂರು ಭಾಗದಲ್ಲಿ ನೆಲಸಿರುವ ಕಲಾವಿದರು ತಮ್ಮನ್ನು ಚಿತ್ರಮರಾಠಿಜನರೆಂದೇ ಹೆಮ್ಮೆಯಿಂದ ಕರೆದುಕೊಳ್ಳುವುದನ್ನು ನೋಡಿದರೆ ಇವರು ಮೂಲ ಮಹಾರಾಷ್ಟ್ರ ವಾಸಸ್ಥರೆಂಬುದು ದೃಢಪಡುತ್ತದೆ. ಬಹುತೇಕ ಕಲಾವಿದರ ಮನೆಮಾತು ಕೂಡ ವಿಕೃತ ಮಾರಾಠಿಯೇ ಆಗಿರುವುದು ಇನ್ನಷ್ಟು ಸಮರ್ಥನೆಗೆ ಕಾರಣವಾಗಿದೆ. ಬೆಳಗಾಂ ಜಿಲ್ಲೆಯ ಗೆಜಿಟಿಯರ್[3] ಕೂಡ ಇದನ್ನು ಪ್ರಾಚೀನ ಕಾಲದಲ್ಲೇ ತಂಡತಂಡವಾಗಿ ಕನ್ನಡ ಮಾತನಾಡುವ ಪ್ರದೇಶಕ್ಕೆ ವಲಸೆ ಬಂದ ಅಲೆಮಾರಿ ಜನಾಂಗ ಎಂದು ದಾಖಲಿಸಿದೆ. ಬಿಜಾಪುರದ ಗೆಜೆಟಯರ್[4] ಪ್ರಕಾರ ಇವರ ಮೂಲಪುರಷ ಪಾಂಡವರೊಂದಿಗೆ ಸಂಚರಿಸುತ್ತಾ ದಕ್ಷಿಣ ದಿಕ್ಕಿಗೆ ಬಂದವನೆಂದೂ, ಅನಂತರ ಈ ಜನಾಂಗದವರ ಕಲಾಪ್ರೌಢಿಮೆಯನ್ನು ಮೆಚ್ಚಿ ರಾಜರು ಸನ್ನದು. ಇನಾಮ್ತಿ ಜಮೀನು ನೀಡಿ ಸಾಮಾಜಿಕ ಮಾನ್ಯತೆ ಕೊಟ್ಟಿದ್ದರೆಂಬುದಕ್ಕೆ ದಾಖಲೆಗಳು ಸಿಗುತ್ತವೆ.

ಕಿಳ್ಳೇಕ್ಯಾತ ಜನಾಂಗದ ಮೂಲಪುರುಷರು ಮಹಾರಾಷ್ಟ್ರದ ಬೇಸಾಯಗಾರರಾಗಿದ್ದರು. ಅವರ ಪೈಕಿ ಒಬ್ಬಾಕೆ ಕತ್ತಾರೆ ಕಾಳಾಚಾರಿ ಎಂಬ ’ಚಿನಿವಾರ ವಾಜನೊಡನೆ ಅನೈತಿಕ ಸಂಬಂಧ ಹೊಂದಿ ಅವನಿಂದ ೭ ಮಕ್ಕಳು ಪಡೆದಳಂತೆ ಜಾತಿಯಿಂದ ಹೊರಹಾಕಲ್ಪಟ್ಟ ಅವರಿಗೆ ತಂದೆ ಒಕ್ಕಲುತನ ಕಲಿಸದೆ, ಚರ್ಮ ಕತ್ತರಿಸಿ ಗೊಂಬೆ ಮಾಡುವ ಕಲೆಯನ್ನು ಹೇಳಿಕೊಟ್ಟನಂತೆ. ಅದನ್ನು ಸಾಧನವನ್ನಾಗಿ ಮಾಡಿಕೊಂಡು ಪದಹೇಳಿ, ಜನರನ್ನು ರಂಜಿಸುವ ಕಲೆಯಲ್ಲಿ ಪಾರಾಂಗತರಾದರು. ಕಡು ಬಡವರಾಗಿದ್ದ ಅವರ ಸೋದರಮಾವಂದಿರು  ಇವರೊಂದಿಗೆ ಇವರೊಂದಿಗೆ ಬಂದು ಸೇರಿಕೊಂಡಿದ್ದರಿಂದ ಆ ಪ್ರಾಂತಬಿಟ್ಟು ಕರ್ನಾಟಕ ಹಾಗೂ ಇತರ ದಕ್ಷಿಣ ಭಾರತದ ಭಾಗಗಳಿಗೆ ವಲಸೆ ಹೋಗಿ ಅಲ್ಲೇ ನೆಲಸಿದರೆಂಬ ಕಥೆ ಪ್ರಚಲಿತವಿದೆ.

ಮೇಲುನೋಟಕ್ಕೆ ಇದೊಂದು ರೋಚಕ ಕಥೆಯಂತೆ ಕಂಡುಬಂದರೂ ಸತ್ಯದ ಎಳೆಗಳು ಇದರೊಂದಿಗೆ ತಳಕು ಹಾಕಿಕೊಂಡಂತಿವೆ. ಮನೆಮಾತು ಮರಾಠಿಯಾಗಿರುವುದ. ಆಡುಮಾತಿನಲ್ಲಿ ಉತ್ತರ ಕರ್ನಾಟಕದ ಗ್ರಾಮ್ಯದ ಗತ್ತು ಒಡೆದು ಕಾಣುವುದು, ಬಳ್ಳಾರಿ ಮತ್ತು ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ನೆಲಸಿರುವ ತಂಡಗಳು ತಮ್ಮ ನಾಟಕಾರಂಭದಲ್ಲಿ ಗಣಸ್ತುತಿ, ಶಾರದಾಸ್ತುತಿಯೊಂದಿಗೆ ತಪ್ಪದೆ ತಮಗೆ ಹೊಸಜೀವನ ಕಲ್ಪಿಸಿಕೊಟ್ಟ ಜವಜನಿಗೆ “ಬಿರುದುವಾಳ್ಳದಿ ಭಿಕ್ಷ ಮುಮಾದಿ” (ಬಿರುದು ಆತನದು ; ಭಿಕ್ಷೆ ಮಾತ್ರ ನಮ್ಮದು) ಎಂದು ಗೌರವ ಸಲ್ಲಿಸುವ ಪರಿಪಾಠವಿರುವುದು ಈಜನಾಂಗದ ಮೂಲದ ಮೇಲೆ ಬೆಳಕು ಚೆಲ್ಲುವಂತಿದೆ.

ತೊಗಲುಗೊಂಬೆಯಾಟವನ್ನು ಬಿಜಾಪುರ ಗುಲ್ಬರ್ಗ ಜಿಲ್ಲೆಗಳಲ್ಲಿ ’ಕಟಬರಾಟ’ವೆಂದೂ ಬಳ್ಳಾರಿ. ಧಾರವಾಡ ಜಿಲ್ಲೆಗಳಲ್ಲಿ ’ಕಿಳ್ಳೇಕ್ಯಾತರಾಟ’ವೆಂದೂ, ಹಳೆಯ ಮೈಸೂರು ಪ್ರಾಂತದಲ್ಲಿ ’ಗೊಂಬೆರಾಮರಾಟ’ವೆಂದೂ, ಕೋಲಾರ ಮತ್ತು ಆಂಧ್ರ ಗಡಿಭಾಗದಲ್ಲಿ ’ತೋಲುಬೊಮ್ಮಲಾಟ’ವೆಂದೂ ಕರೆಯಲಾಗುತ್ತದೆ.ಪ್ರಾದೇಶಿಕವಾಗಿ ಕಲಾವಿದರು ಎಲ್ಲಿಯೇ ನೆಲಸಿರಲಿ ಅವರು ನಿರ್ದಿಷ್ಟವಾಗಿ ಒಂದೇ ಜನಾಂಗಕ್ಕೆ ಸೇರಿದವರು. ಗೊಂಬೆಯಾಡಿಸುವುದೇ ಇದರ  ಪೂರ್ಣಾವಧಿ ವೃತ್ತಿ. ಕಿಳ್ಳಿಕ್ಯಾತ ಅಥವಾ ಕಿಳ್ಳೇಕ್ಯಾತಗಳೆಂದರೆ ವಕ್ರರೂಪದ. ಅಸಂಸ್ಕೃತ ವ್ಯಕ್ತಿಗಳನ್ನು ಪ್ರತಿನಿಧಿಸುವಂಥ ತೊಗಲುಗೊಂಬೆಗಳೆಂದು ಹೇಳಲಾಗಿದೆ. ಒರಟುದೇಹದ. ಕಪ್ಪು ಅಥವಾ ಕೆಂಪುಬಣ್ಣದ, ಗಿಡ್ಡಮೂಗಿನ, ದೊಡ್ಡ ಹೊಟ್ಟೆಯ, ಬೋಳು ತಲೆಯ ಪಿಳ್ಳುಜುಟ್ಟಿನ ಗಂಡುಗೊಂಬೆಯೇ ಕಿಳ್ಳೇಕ್ಯಾತ. ಆಟದಲ್ಲಿ ಇವನ ಪ್ರವೇಶ ಗಣಪತಿ, ಸರಸ್ವತಿಯರ ನಿರ್ಗಮನದ ನಂತರ ಆಗುತ್ತದೆ. ಈತನ ಪ್ರೇಯಸಿಯಾದ ಬಂಗಾರಕ್ಕನೂ ಗೊಂಬೆಯಾದರೂ ಕಿಳ್ಳೇಕ್ಯಾತನಂತೆ ವಕ್ರಸ್ವರೂಪದ ಬಜಾರಿ ಹೆಣ್ಣು. ಈ ಇಬ್ಬರೂ ತಮ್ಮ ಒರಟು ಹಾಸ್ಯ. ಅಶ್ಲೀಲದ ಪರಾಕಾಷ್ಠೆಯನ್ನು ಮುಟ್ಟಿನಿಲ್ಲುವ ಶೃಂಗಾರಯುಕ್ತ ಸಂಭಾಷಣೆಯಿಂದ ಸಭಿಕರಿಗೆ ಮನರಂಜನೆ ನೀಡುತ್ತಾರೆ. ತೂಕಡಿಸುವ ಪ್ರೇಕ್ಷಕರನ್ನು ಎಚ್ಚರಿಸಿ ಮುಂದಿನ ಕಥಾಘಟನೆಗಳ ಸೂಚನೆ ಕೊಡುತ್ತಾರೆ. ಕೆಲವೊಮ್ಮೆ ರಾಜಮಹಾರಾಜರ, ಸೇನಾಧಿಪತಿಗಳು ಆಜ್ಞೆಯನ್ನು ಹೊತ್ತುಸಾಗುವ ಧೂತರಾಗಿಯೂ ಕೆಲಸ ನಿರ್ವಹಿಸುತ್ತಾರೆ. ಪ್ರದರ್ಶನ (Performance) ದಲ್ಲಿ ಪ್ರೇಕಕ್ಷರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ತರುವ ಹಾಸ್ಯ, ಕಥೆ ಉಪಕಥೆ, ಗಾದೆ, ಒಗಟುಗಳು ನಿರೀಕ್ಷಿತ ಪ್ರತಿಕ್ರಿಯೆಗಳನ್ನು (Right Response) ತರುತ್ತವೆ. ಆದರೆ ಇವಾವುವು ಮೂಲಕಥೆಯ ಅಂದ, ಸ್ವಾರಸ್ಯವನ್ನು ಕೆಡಿಸದೆ ಕಥೆಗೆ ಪೂರಕವಾಗಿರುವುದು ಮಹತ್ವದ ವಿಷಯವಾಗಿದೆ. ಇಡೀ ಪ್ರದರ್ಶನದ ಜೀವನಾಡಿಯಾಗಿ ಕಿಳ್ಳೇಕ್ಯಾತ ಬರುವುದರಿಂದ ಅದೇ ಹೆಸರಿನಿಂದ ಆಟವನ್ನು ’ಕರೇಕಲ್ಲ ಶಿಳ್ಳೇಕ್ಯಾತ’ ಎಂಬ ಹೆಸರಿನಲ್ಲಿಯೂ ಕರೆಯುವುದು ಕೆಲವೆಡೆ ರೂಢಿಯಲ್ಲಿದೆ. ಕರವುಗಲ್ಲು, ಹೆಬ್ಬಾಗಿಲುಗಳು ಒಂದು ಊರಿಗೆ ಎಷ್ಟು ಪ್ರಮುಖವೊ ಪ್ರಾಚೀನವೋ. ಗೊಂಬೆಯಾಟವೂ ಅಷ್ಟೇ ಪ್ರಾಚೀನವೆಂದು ಕಲಾವಿದರು ಇದಕ್ಕೆ ಕಾರಣಕೊಡುತ್ತಾರೆ.

ಹಾಸನ, ತುಮಕೂರು, ಮೈಸೂರು ಮುಂತಾದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಇವರನ್ನು ಗೊಂಬೆರಾಮರು ಎಂದು ಕರೆಯುವ ಹಿನ್ನೆಲೆಯಲ್ಲಿಒಂದು ಕಥೆ ಪ್ರಚಲಿತವಿದೆ. ಗೊಂಬೆರಾಮರು ಒಂದು ಕಾಲಕ್ಕೆ ಶ್ರೀರಾಮನ ನಿಷ್ಠಾವಂತ ಭಕ್ತರಾಗಿದ್ದ ಶ್ರೀರಾಮ ಐಕ್ಯವಾಗಿ ಹೋಗುವ ಸಂದರ್ಭದಲ್ಲಿ “ನಮ್ಮ ನೆಲ್ಲಾ ಕೈ ಬಿಟ್ಟು ಹೋಗುತ್ತೀಯಾ ಭಗವಂತ! ಮುಂದೆ ನಮ್ಮ ಪಾಡೇನು” ಎಂದು ದುಃಖಿಸಿದರಂತೆ. ಆಗ ಅವರಿಗೆ ಒಂದು ಚಿತ್ರಪಟ ಕೊಟ್ಟು ಆಶೀರ್ವದಿಸಿ ಇಂದರಿಂದ ಜೀವಿಸಿ ಎಂದು ಹೇಳಿ ಮಾಯವಾದನಂತೆ. ಅಂದಿನಿಂದ ಇದನ್ನೇ ವೃತ್ತಿಯನ್ನಾಗಿ ನಡೆಸಿಕೊಂಡು ಬಂದಿದ್ದರಿಂದ ’ಗೊಂಬೆರಾಮರು’ ಎಂಬ ಹೆಸರು ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ.[5]

ಕರ್ನಾಟಕದ ಕಿಳ್ಳೇಕ್ಯಾತರು ಮಹಾರಾಷ್ಟ್ರದ ಮೂಲದವರಾದರೂ ತಾವು ನೆಲೆನಿಂತ. ಸಂಚರಿಸುವ ಪ್ರಾಂತಗಳ ಭಾಷೆಯನ್ನು ಕಲಿತಿರುತ್ತಾರೆ. ಅದರಲ್ಲೇ ಕಥೆ ನಡೆಸಲು ಸಮರ್ಥರಿರುತ್ತಾರೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವಾಗಲೇ ತೊಗಲುಗೊಂಬೆಯಾಟ ಈಗಿನ ರೂಪವನ್ನು ಪಡೆದು ಬಂದಿತ್ತೆಂಬುದಕ್ಕೆ ತಕ್ಕ ಆಧಾರಗಳಿಲ್ಲ. ಅಲ್ಲಿ ನಾಟಕರೂಪವೇ ತಡವಾಗಿ ಮುಡಿ ಬಂದ ಪ್ರಕಾರವಾಗಿತ್ತು ಎಂಬುದಕ್ಕೆ ಪುರಾವೆಗಳಿವೆ.[6] ಆದ್ದರಿಂದ ಈ ಮೊದಲೇ ಕರ್ನಾಟಕಕ್ಕೆ ವಲಸೆ ಬಂದ ತೊಗಲುಗೊಂಬೆ ತಂಡದವರು ನಮ್ಮಲ್ಲಿದ್ದ ಬಯಲಾಟದ ಧಾಟಿಯನ್ನುನುರಿಸಿ ತಮ್ಮ ಕಲೆಗೆ ಜೀವತುಂಬಿಕೊಂಡರು. ಡಾ. ಜೀ. ಶಂ. ಪರಮಶಿವಯ್ಯನವರು ಅಭಿಪ್ರಾಯ ಪಡುವಂತೆ “ಗೊಂಬೆರಾಮರು ಮರಾಠಿಗರಾದರೂ ಕನ್ನಡ ಕಲೆ ಅವರ ಜೀವನೋಪಾಯಕ್ಕೆ ಮಾರ್ಗಕಲ್ಪಿಸಿದೆ. ಅಲೆಮಾರಿಗಳಾದ ಇವರು ಕರ್ನಾಟಕಕ್ಕೆ ಬಂದು ಇಲ್ಲಿ ಪ್ರಚಲಿತವಾಗಿದ್ದ ಯಕ್ಷಗಾನ ಕಲೆಗೆ ಮತ್ತೊಂದು ಹೊಸರೂಪವನ್ನು ಕೊಟ್ಟು ತಮ್ಮ ಗೊಂಬೆಗಳನ್ನು ಪ್ರಯೋಗಿಸಿದರು. ಗೊಂಬೆ ಅವರಾದರೂ ಯಕ್ಷಗಾನ ಸಂಪ್ರದಾಯ ಕರ್ನಾಟಕದ್ದಾದುದರಿಂದ ಎರಡರ ಸಾಮರಸ್ಯ ಇಲ್ಲಿ ಗಮನಿಸಬೇಕಾದುದು ಅಗತ್ಯ. ಇಂದಿಗೂ ಗೊಂಬೆರಾಯರು ತಮ್ಮ ನಾಟಕಗಳ ನಡುವೆ ಕನ್ನಡ ಗೀತೆಗಳೊಡನೆ ಮರಾಠಿ, ತೆಲುಗು ಗೀತೆಗಳನ್ನು ಹಾಡುವುದುಂಟು.[7]

ತೊಗಲುಗೊಂಬೆಯಾಟ ಕರ್ನಾಟಕದಲ್ಲಿ ಎಂದಿನಿಂದ ರೂಪುಗೊಂಡಿತು ಎಂದು ನಿರ್ಧರಿಸಲು ಖಚಿತ ಆಧಾರಗಳಿಲ್ಲ. ಆದರೂ ಅದೊಂದು ಪ್ರಾಚೀನ ಕಲಾಪ್ರಕಾರವೆಂಬುದನ್ನು ಅಲ್ಲಗೆಳೆಯುವಂತಿಲ್ಲ. ಧನಪಾಲನ ’ತಿಲಕಮಂಜರಿ’; ವಿದ್ಯಾರಣ್ಯರ ’ಪಂಚಾದಶಿ’; ಪಾಲ್ಕುರಿಕೆ ಸೋಮನಾಥನ ’ಪಂಡಿರಾಧ್ಯ ಚರಿತ’; ಭೀಮಕವಿಯ ’ಬಸವಪುರಾಣ’ ಮುಂತಾದ ಕೃತಿಗಳಲ್ಲಿ ತೊಗಲುಗೊಂಬೆಯಾಟದ ಪ್ರಸ್ತಾಪ ಬರುತ್ತದೆ. ರಾಷ್ಟ್ರಕೂಟ, ಕದಂಬ, ಚಾಳುಕ್ಯ ಮತ್ತು ಹೊಯ್ಸಳರ ಆಡಳಿತಕಾಲದಲ್ಲಿ ಈ ಕಲೆಗೆ ರಾಜಾಶ್ರಯವಿತ್ತು. ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಇವರಿಗೆ ವಿಶೇಷ ಪ್ರೋತ್ಸಾಹ ದೊರಕಿತ್ತೆಂಬುದಕ್ಕೆ ದಾಖಲೆಗಳುಸಿಗುತ್ತವೆ. ಇದರಿಂದ ಈ ಕಲಾವಿದರು ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೇ ಜನಪ್ರಿಯರಾಗಿದ್ದರೆಂಬುದು ತಿಳಿದು ಬರುತ್ತದೆ. ಹತ್ತು-ಹನ್ನೊಂದನೆಯ ಶತಮಾನದ ಕಾವ್ಯಗಳಲ್ಲಿ ’ತೊಗಲ್ಬಾವೆ’ ಎಂಬ ಪದ ಪ್ರಯೋಗಗೊಂಡಿದೆ. ನೇಮಿಚಂದ್ರನ ನೇಮಿನಾಥ ಪುರಾಣದ ಎಂಟನೆ ಆಶ್ವಾಸದಲ್ಲಿ.

ವೋರ್ಕುಳಿಯಾದಡೆ ಹರಿಯಂ
ಮಾರ್ಕೊಳ್ಳದೆ
ತೆಗೆದ ಕಯ್ಯ ಬಳುಯನೆ ಬಂದಂ
ಸೊರ್ಕಿದಿಧಪತಿಯ
ಕಯ್ಯೊಳ್
ಸಿಕ್ಕ
ತೊಗಲ್ಭಾವೆಯಂದದಿಂ ಜಾಣೂರಂ

ಎಂಬುದಾಗಿ ಬರುತ್ತದೆ.

ಚೆನ್ನ ಬಸವಣ್ಣನವರ ವಚನಗಳಲ್ಲಿ ಈ ಆಟದ ವರ್ಣನೆ ಬರುತ್ತದೆಯಲ್ಲದೆ ಕಲಕೇತ ಬೊಮ್ಮಮ್ಮ ಈ ಸಂಪ್ರದಾಯವನ್ನು ಪ್ರತಿನಿಧಿಸುತ್ತಾನೆ. ಕನಕದಾಸರಂಥ ಕವಿಗಳು ಸರ್ವೋತ್ತಮನಾದ ಕೃಷ್ಣನ ವ್ಯಕ್ತಿತ್ವವನ್ನು ಕೊಂಡಾಡುತ್ತಾ “ಬೊಂಬೆಯಾಟವ ನಾಡಿಸಿದೆ ಮಹಾಭಾರತದ ಅಂಬುಜವಾರಿ ಅಮರರು ನೋಡುತಿರಲು” ಎಂದಿದ್ದಾರೆ.

ಜನಮನ್ನಣೆಯನ್ನಷ್ಟೆ ಅಲ್ಲದೆ ಕಾವ್ಯ ಮನ್ನಣೆಯನ್ನು ದಕ್ಕಿಸಿಕೊಂಡ ಈ ಕಲೆ ಜನತೆಯ ಮೇಲೆ ಗಾಢ ಪ್ರಭಾವ ಬೀರಿದೆ. ರಾತ್ರಿ ಆಟವಾಡಿದ ಊರುಗಳಲ್ಲಿ ಕಲಾವಿದರು ಬೆಳಿಗ್ಗೆ ಮನೆಮನೆಗೆ ಹೋಗಿ ಪ್ರೀತಿಯ ಕಾಣಿಕೆ ಪಡೆಯುವುದಾಗಲಿ, ರಾಜರು ಇನಾಮು, ಸನ್ನದುಗಳನ್ನುಕೊಡುತ್ತಿದ್ದುದಾಗಲಿ ಕಲಾವಿದರ ಸಾಮಾಜಿಕ ಮಾನ್ಯತೆಯ ದ್ಯೋತಕ.

ಕಟಬರಾಟ, ಕಿಳ್ಳೇಕ್ಯಾತರಾಟ, ಗೊಂಬೆರಾಮರಾಟ, ತೋಲುಬೊಮ್ಮಲಾಟ ಇತ್ಯಾದಿ ಯಾವುದೇ ಪ್ರಾದೇಶಿಕ ಹೆಸರುಗಳಿಂದ ಕರೆದರೂ ಗೊಂಬೆಯಾಟದ ತಂತ್ರವಿಧಾನ, ರಚನಾ ವಿಧಾನ ಮತ್ತು ಉಳಿದ ಸಂಪ್ರದಾಯಗಳು ಒಂದೇ ಆಗಿವೆ. ಆದರೆ ತೊಗಲುಗೊಂಬೆಗಳ ಆಕಾರಗಳಿಂದುಂಟಾದ ರಂಗ ಪ್ರಭೇದ ಮಾತ್ರ ಎದ್ದು ಕಾಣುವಂಥದು. ಜೊತೆಗೆ ಪ್ರಾದೇಶಿಕ ಪ್ರಭಾವ ಮತ್ತು ರಂಗಪ್ರಯೋಗಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಾಣಬರುತ್ತವೆ. ಕರಾವಳಿ ಮತ್ತು ಮಲೆನಾಡು ಪ್ರದೇಶವನ್ನು ಹೊರತು ಪಡಿಸಿ ಉಳಿದೆಲ್ಲಾ ಕಡೆ ಕಾಣಬರುವ ಗೊಂಬೆಯಾಟ ಒಂದು ಕೌಟುಂಬಿಕ ಕಲೆ. ಆಂಧ್ರದಲ್ಲಿಯಂತೆ ಕರ್ನಾಟಕದ ಗೊಂಬೆಗಳು ಮಾತ್ರ ಬಹುಬಣ್ಣದವು.

ಉತ್ತರ ಕರ್ನಾಟಕ ಭಾಗದ ಗೊಂಬೆಗಳುಚಿತ್ರಕಲೆಯ ದೃಷ್ಟಿಯಿಂದ ಅಪರೂಪದ ಕಲಾಕೃತಿಗಳು. ಇಲ್ಲಿನ ಗೊಂಬೆಗಳು ಅಷ್ಟೇನೂ ದೊಡ್ಡವಲ್ಲ. ೧ ೧/೨ ಅಥವಾ ೨ ಅಡಿ ಎತ್ತರವಿರುತ್ತವೆ. ತಲೆಗೆ ಕುಲಾವಿ, ಗಡ್ಡ, ಕತ್ತಿ ಹಿಡಿದು ಆನೆ ಕುದುರೆ ಮೇಲೆ ಕುಳಿತು ಯುದ್ಧ ಮಾಡುವ ವೀರರು ಗೊಂಬೆಗಳಲ್ಲಿ ಕಾಣಿಸುತ್ತಾರೆ. ಇಲ್ಲಿನ ಗೊಂಬೆಗಳ ಮೇಲೆ ಮಹಮದೀಯ ಸಂಸ್ಕೃತಿಯ ಪ್ರಭಾವವಿರುವಂತೆ ತೋರುತ್ತದೆ. ಗೊಂಬೆಗಳಿಗೆ ಪ್ರತ್ಯೇಕ ಕೈಕಾಲಿನ ಚಲನೆ ಇಲ್ಲ. ಅವು ಅಖಂಡವಾದವು. ಇಡೀ ಗೊಂಬೆಗಳನ್ನೆ ಕುಣಿಸಲಾಗುತ್ತದೆ. ಇವುಗಳ ಒಂದು ಪ್ರಾಚೀನ ಹಾಗೂ ವಿಶಿಷ್ಟ ಸಂಗತಿಯೆಂದರೆ ಗೊಂಬೆಯಾಡಿಸುವ ಪರಿಣತ ಕಲಾವಿದ ಪರದೆಯ ಒಳಗೆ ಕುಳಿತುಕೊಳ್ಳುತ್ತಾನೆ. ಆ ಗೊಂಬೆಗಳ ಚಲನೆಯನ್ನು ಗಮನಿಸಿ ಸಂಭಾಷಿಸುವವ ಪರದೆಯ ಹೊರಗೆ ಕುಳಿತುಕೊಳ್ಳುತ್ತಾನೆ. ಆ ಗೊಂಬೆಗಳ ಚಲನೆಯನ್ನು ಗಮನಿಸಿ ಸಂಭಾಷಿಸುವವ ಪರದೆಯ ಹೊರಗೆ ಕುಳಿತುಕೊಳ್ಳುತ್ತಾನೆ. ಸಂದರ್ಭ ಬಂದಾಗ ಪ್ರೇಕ್ಷಕರಿಗೆ ಗೊಂಬೆಗಳನ್ನು ತೋರಿಸಿ ಕಥೆ ನಿರೂಪಿಸುತ್ತಾನೆ. ಹಾಡುವಾಗ ಪ್ರಮುಖ ಕಲಾವಿದರೊಂದಿಗೆ ಮಹಿಳೆಯರು ಹಿಮ್ಮೇಳವಾಗಿ ಸೇರಿಕೊಳ್ಳುತ್ತಾರೆ.

ದಕ್ಷಿಣ ಕರ್ನಾಟಕದ ಗೊಂಬೆಗಳು ಉತ್ತರ ಕರ್ನಾಟಕದ ಗೊಂಬೆಗಳಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಮಧ್ಯ ಮಾಕೃತಿಯವಾಗಿರುತ್ತವೆ. ಮುಖ್ಯ ವ್ಯತ್ಯಾಸವೆಂದರೆ ಇಲ್ಲಿನ ಗೊಂಬೆಗಳಿಗೆ ಕೈಕಾಲು ಚಾಲನೆ ಇರುತ್ತದೆ. ಗೊಂಬೆಗಳ ವೇಷಭೂಷಣಗಳ ಮೇಲೆ ಹಾಡಿನ ಮಟ್ಟಗಳ ಮೇಲೆ ಬಯಲಾಟದ ಪ್ರಭಾವ ಆಗಿರುತ್ತದೆ. ಕಲಾವಿದರೆಲ್ಲ ರಂಗದ ಒಳಗೆ ಸೇರಿಕೊಂಡಿರುತ್ತಾರೆ. ಗೊಂಬೆಗಳಿಗೆ ಅಂಗಾಂಗ ಚಾಲನೆ ಸಾಧ್ಯವಿರುವುದರಿಂದ ಚಮತ್ಕಾರ ಸಾಧ್ಯವಾಗುತ್ತದೆ. ಗೊಂಬೆಗಳ ಚಂಡು ಕತ್ತರಿಸುವ, ಬಾಣ ಪ್ರಯೋಗ ಮಾಡಿ ಕೈಕಾಲು ಛೇದಿಸುವ ತಂತ್ರ ನಡೆಸಿ ಸನ್ನಿವೇಶದಲ್ಲಿ ನೈಜತೆ ಸಾಧಿಸುತ್ತಾರೆ.

ಕರ್ನಾಟಕ-ಆಂಧ್ರದ ಗಡಿಭಾಗದ ಬೊಮ್ಮಲಾಟ ಈ ಎರಡೂ ಸಂಪ್ರದಾಯಕ್ಕಿಂತ ವೈಶಿಷ್ಟ್ಯ ಪೂರ್ಣವಾಗಿರುತ್ತದೆ. ಇವು ಅಳೆತ್ತರದ (Life size) ಗೊಂಬೆಗಳು, ಎದ್ದು ಕಾಣುವ ವರ್ಣಸಂಯೋಜನೆಯುಳ್ಳ ಇದನ್ನು ಪ್ರದರ್ಶಿಸಲು ದೊಡ್ಡ ಪ್ರಮಾಣದ ರಂಗಮಂಟಪ ಬೇಕಾಗುತ್ತದೆ. ಕಲಾವಿದರು ಗೊಂಬೆಗಳ ಹಿಂದೆ ನಾಜೂಕಾಗಿ ನಿಂತುರಸಭಂಗವಾಗದಂತೆ ಕುಣಿಸಬೇಕಾಗಿರುವುದರಿಂದ ಹೆಚ್ಚಿನ ಎಚ್ಚರ ಬೇಕು.ಕಲಾವಿದನ ಇಡೀ ದೇಹವೇ ಭಾಗಿಯಾಗುವುದರಿಂದ ಕುಣಿತದಲ್ಲಿ ಕುಶಲತೆ ಬೇಕಾಗುತ್ತದೆ. ಹೆಂಗಸರು ಗಂಡಸರಾದಿಯಾಗಿ ಕಾಲಿಗೆ ಗೆಜ್ಜೆಕಟ್ಟಿಕೊಂಡು ಕುಣಿಯುವುದರಿಂದ ಗೊಂಬೆಗಳು ಜೀವಂತವಾಗಿ ಕಾಣಿಸುತ್ತವೆ. ಸನ್ನಿವೇಶವನ್ನು ನೈಜಗೊಳಿಸಲು ಗಿಡ, ಮರ, ಹೂ, ಪಕ್ಷಿಗಳಂತಹ ನಿಸರ್ಗಸಹಜ ಗೊಂಬೆಗಳನ್ನು ಪ್ರದರ್ಶಿಸುವುದುಂಟು. ಇಲ್ಲಿ ಗೊಂಬೆಗಳನ್ನು ನಿಂತೇ ಕುಣಿಸಿದರೆ ಉಳಿದ ಭಾಗಗಳಲ್ಲಿ ಗೊಂಬೆಗಳು ಸಣ್ಣದಿರುವುದರಿಂದ ಕುಳಿತೇ ಕುಣಿಸಲಾಗುತ್ತದೆ.

ಯಕ್ಷಗಾನ ಪ್ರಸಂಗಗಳ ಪ್ರಭಾವ ತೊಗಲುಗೊಂಬೆಯಾಟದ ಮೇಲೆ ಇದ್ದರೂ ಪ್ರತ್ಯೇಕ ವೈಶಿಷ್ಟ್ಯತೆಯಿಂದಾಗಿ ಜೀವಂತಿಕೆಯನ್ನು ಸ್ಥಾಪಿಸಿಕೊಂಡಿದೆ. ಪ್ರಾಣಿಗಳ ಚರ್ಮವನ್ನು ಪಾರದರ್ಶಕಗೊಳಿಸಿಕೊಂಡು. ಪಾತ್ರಗಳನ್ನು ಅಂಕಿಸಿ, ಅದರಂತೆ ಕತ್ತರಿಸಿ, ಬಣ್ಣತುಂಬಿ ಆಟಕ್ಕೆ ಅಣೆಗೊಳಿಸಿಕೊಳ್ಳುವ ಈ ಕಲೆ ಮನೆಯ ಹೆಂಗಸರು, ಗಂಡರು, ಮಕ್ಕಳು ಎಲ್ಲಾ ಸೇರಿ ನಡೆಸುವ ಕಲೆ. ತೆಳ್ಳನೆಯ ಬಿಳಿ ತೆರೆ ಮತ್ತು ಬೆಳಕಿನ ಮಧ್ಯೆ ಗೊಂಬೆಗಳನ್ನು ಹಿಡಿದು, ತೆರೆಯ ಹೊರಗಡೆ ಕತ್ತಲೆಯಲ್ಲಿ ಕಾಣುವ ವರ್ಣನೆಯ ಯಥಾಕೃತಿಯನ್ನು ರಂಗಕಲೆಯಾಗಿ ದುಡಿಸಿಕೊಂಡಿರುವುದು ಜನಪದ ಕಲಾಜಾಣ್ಣೆಯ ಅದ್ಭುತವೆನಿಸಿದೆ. ಸೂತ್ರದ ಗೊಂಬೆಯಾಟದಲ್ಲಾಗಲಿ, ಬರುವುದರಿಂದ, ಅಲ್ಲಿಯ ಐಂದ್ರಿಯ ಸ್ಪಷ್ಟತೆ ರಸಾಸ್ವಾದನೆಗೆ ಭಂಗತರಬಹುದು. ಆದೆರೆ ತೆರೆಯ ಹಿಂದೆ ವರ್ಣಮಯ ಲೋಕವನ್ನು ಸೃಷ್ಟಿಸುವ ಈ ಕಲೆ ಸಂಪೂರ್ಣವಾಗಿ ಪ್ರೇಕ್ಷಕನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತಿರುತ್ತದೆ. ಪಾತ್ರಗಳ ನಿಷ್ಕಮಣ, ಯುದ್ಧ ಕೋಲಾಹಲ, ರಣಾವೇಶ, ಕೇಕೆ, ಕೂಗು, ಪಾವರೆ-ಡೋಲಿನ ಆರ್ಭಟದ ವಾದನದೊಂದಿಗೆ ತೀವ್ರಾನುಭವಕ್ಕೆಡೆಮಾಡುತ್ತರದೆ. ಪಾತ್ರಗಳ ನೋವು. ನಲಿವು, ಸೇಡು, ಹಠಗಳಿಗೆ ಅನುಗುಣವಾಗಿ ಗೊಂಬೆಗಳು ಬಾಗಿ, ಬಳುಕಿ ಚಲಿಸುವಂತೆ ಮಾಡುವುದರಿಂದ ಪರಿಣಾಮಕಾರಿ ವಾತಾವರಣ ನಿರ್ಮಾಣವಾಗುತ್ತದೆ. ಹಾಡು ಸಂಭಾಷಣೆಯಲ್ಲಿ ಗ್ರಾಮ್ಯಸಹಜ ಒರಟು ಕಂಡರೂ ರಾಗಭಾವಗಳ ಪ್ರಕಟಣೆಗೆ ಭಂಗ ತರುವುದಿಲ್ಲ. ತೆರೆಯ ಹಿಂದೆ ಪರೋಕ್ಷವಾಗಿ ಘಟಿಸುವ ಈ ನೆರಳು ಬೆಳಕಿನಾಟ ಉಳಿದ ಆಟಗಳಲ್ಲಿ ಅಸಾಧ್ಯವಾದದ್ದನ್ನು ಸಾಧ್ಯಮಾಡಿ ತೋರಿಸಿಬಿಡುತ್ತದೆ.

ಕರ್ನಾಟಕದ ತೊಗಲುಗೊಂಬೆಯಾಟಕ್ಕೆ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಬದುಕಿನಲ್ಲಿ ಅದರದೇ ಆಗ ಸಾರ್ವತ್ರಿಕ ಪುರಸ್ಕಾರವಿರುವಂತೆ ಹಲವು ನಂಬಿಕೆಗಳಿಗೂ ಈ ಕಲೆ ಕಾರಣವಾಗಿದೆ. ತೊಗಲುಗೊಂಬೆಯಾಟ ಆಡಿಸುವುದರಿಂದ ದೈವಾನುಗ್ರಹ ದೊರೆಯುತ್ತದೆ. ಊರಿಗೆ ಮಳೆ ಬರುತ್ತದೆ. ದನಕರುಗಳ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಸ್ವಯಂ ಪ್ರೇರಣೆಯಿಂದ ಪ್ರತಿಯೊಂದು ಊರಿನಲ್ಲೂಆಟ ಆಡಿಸಲಾಗುತ್ತಿತ್ತು. ಗೊಂಬೆಗಳನ್ನು ಮಾಡಿಸಿಕೊಡುವದರಿಂದ ಒಳ್ಳೆಯದಾಗುತ್ತದೆಂದು ರಾಮ, ಸೀತೆ, ಕೃಷ್ಣ ಮುಂತಾದ ದೇವತೆಗಳ ಗೊಂಬೆಗಳನ್ನು ತಮ್ಮ ಅಥವಾ ತಮ್ಮ ಹಿರೀಕರ ಹೆಸರಿನಲ್ಲಿ ಮಾಡಿಸಿಕೊಡಲಾಗುತ್ತಿತ್ತು. ಮಾಡಿಸಿಕೊಟ್ಟವರ ಹೆಸರುಗಳನ್ನು ಗೊಂಬೆಗಳಲ್ಲಿ ಕೆತ್ತಿಸುತ್ತಿದ್ದುದು, ಅಂಥವರನ್ನು ಕಲಾವಿದರು ಪ್ರದರ್ಶನಗಳಲ್ಲಿ ಹೊಗಳುತ್ತಿದ್ದುದು ಇನ್ನಷ್ಟು ಗೊಂಬೆಗಳ ನಿರ್ಮಾಣಕ್ಕೆ ಕಾರಣವಾಗುತ್ತಿತ್ತು.

ಒಟ್ಟಿನಲ್ಲಿ ಸೂತ್ರದ ಗೊಂಬೆಯಾಟ ಪುರಾಣೀತಿಹಾಸದ, ಜ್ಞಾನವನ್ನು ಸಾಮಾನ್ಯ ಜನತೆಯಲ್ಲಿ ಬಿತ್ತಿ ಕಲೆ ಹಾಗೂ ಸಂಸ್ಕೃತಿ ಪ್ರಸಾರದ ಮಾಧ್ಯಮವಾಗಿ ಕೆಲಸ ನಿರ್ವಹಿಸಿದೆ. ಜೀವನ ನಂಬಿಕೆ, ಮನೋರಂಜನೆಯ ಸಾಧನ ಮಾತ್ರವಲ್ಲದೆ ಆರಾಧನಾ ಕಲೆಯಾಗಿಯೂ ಜನಜೀವನದಲ್ಲಿ  ಮನ್ನಣೆ ಗಳಿಸಿದೆ.

* * *[1]  ’ಘಟಕತೆ’ ಸಂಸ್ಕೃತ ನಾಟಕಗಳಿಗಿಂತ ಹಿಂದಿನದೆಂದು ಶಿಲ್ಟಿನ್ ನಾರೀಸ್ ಎಂಬ ಫ್ರೆಂಚ್‌ವಿದ್ವಾಂಸನ ಅಭಿಮತ, ಕುವಲಯಾಮಾಲಾ ಎಂಬ ಜೈನ ಪುರಾಣದಲ್ಲಿ ಸಂಚಾರಿ ಜಯನಮುನಿಯೊಬ್ಬ ಸಂಸಾರ ಚಕ್ರದ ಸುರಳಿಯೊಮದರ ಸಹಾಯದಿಂದ ಪ್ರವಚನ ಮಾಡುತ್ತಿದ್ದ ಉಲ್ಲೇಖ ಬರುತ್ತದೆ. ಬೌದ್ಧ ಸಾಹಿತ್ಯದಲ್ಲಿ ’ಪಟಚಿತ್ರ’ದ ಸಂಗತಿಗಳು ಬರುವಂತೆ, ’ಯಮಪಟ’ದ ಕಲ್ಪನೆ ಸಂಸ್ಕೃತ ಪುರಾಣಗಳಲ್ಲಿ ವಿವರಿಸಿದೆ.

[2]  “ಪಂಡಿತೆ ಶ್ರೀವ್ರೃತಿಯಂ” ಕಂಡು ನಿನ್ನ ಬರೆದ ಪಟಮಂ ಮಹಾಪೂತ ಜಿನಾಲಯದ ಮುಮದೆ ನೇರೆದಾಗಳ್, ವಾಸವ ದುರ್ದಂತರೆಂಬರ್ ದುರ್ವಿದಗ್ದರ್ ಮೆಲ್ಲನೆ ಸಾರ್ದು ನೋಡುವಲ್ಲಿ ವಾಸವದಂ ನೀಡಂ ಭಾವಿಸಿ ನೋಡಿ…. ಆದಿಪುರಾಣ.

[3]  Pge 196. Quoted in the Mysore Tribes and casters, Vol. III, P. 517 Ed. by H.V.Nanjundaiah & L.K. Anantha Krishna Iyyar

[4]  Page 519, Ibid

[5]  The whole Exhibition has come to be known as the play of killekyata and the name has then passed to the caste itself – TMTC. Vol. III, P.16

[6]  ಸಾಂಗ್ಲಿ ಸಂಸ್ಥಾನಕ್ಕೆ ಭೇಟಿಕೊಟ್ಟ ಒಂದು ದಶಾವತಾರದ ಮೇಳದವರಿಂದ ಪ್ರೇರಣೆಗೊಂಡ ತಾವು ನಾಟಕ ರಚನೆಗೆ ತೊಡಗಿದೆವೆಂದು, ಮರಾಠಿ ಸಾಹಿತ್ಯ ಚರಿತ್ರಕಾರರು ಒಪ್ಪಿಕೊಳ್ಳುತ್ತಾರೆ. ಡಾ. ಶಿವರಾಮ ಕಾರಂತ, ಯಕ್ಷಗಾನ ಬಯಲಾಟ, ಪುಟ ೩೧.

[7]  ಡಾ.ಜೀ.ಶಂ.ಪ. ಕರ್ನಾಟಕದ ತೊಗಲು ಬೊಂಬೆಯಾಟಗಳು, ಜಾನಪದ ಕೆಲವು ಮುಖಗಳು. ಪುಟ. ೮೭.