‘ಕರ್ನಾಟಕದ ನಾಥಪಂಥ’ ಕೃತಿಯನ್ನು ಕನ್ನಡದ ಓದುಗ ಲೋಕವು ಸ್ವೀಕರಿಸಿದ ಪರಿ ನನಗೆ ಅಪಾರ ಸಂತೋಷವನ್ನು ಕೊಟ್ಟಿದೆ. ಈ ಹಿಂದೆ ಕರ್ನಾಟಕ ಸೂಫಿಗಳ ಮೇಲೆ ನಾನು ಮಾಡಿದ ಅಧ್ಯಯನವನ್ನು ಸಹ ಓದುಗರು ಹೀಗೆಯೇ ಸ್ವೀಕರಿಸಿದ್ದರು. ಸಾಹಿತ್ಯ ವಿಮರ್ಶೆ ಮತ್ತು ಕಾವ್ಯಮೀಮಾಂಸೆ ಮೇಲೆ ನಾನು ಮಾಡಿದ ಕೆಲಸಗಳಿಗಿಂತ ಪಂಥ ಮತ್ತು ದರ್ಶನಗಳ ಮೇಲಿನ ಈ ಕೆಲಸವು ಅವರಿಗೆ ಯಾಕಷ್ಟು ಪ್ರಿಯವಾಗಿದೆಯೊ ಅರಿಯೆ. ಆದರೆ ಜನರ ಈ ಸ್ವೀಕಾರವು ಕೆಲಸ ಮಾಡಲು ನನಗೆ ಮತ್ತಷ್ಟು ಆತ್ಮವಿಶ್ವಾಸವಂತೂ ಕೊಟ್ಟಿದೆ. ಸೂಫಿಗಳ ಅಧ್ಯಯನ ಮಾಡಮಾಡುತ್ತ ಅದರ ಹೊಟ್ಟೆಯೊಳಗಿಂದ ನಾಥರ ಹೊಳಹನ್ನು ಹುಟ್ಟಿತು; ಈಗ ನಾಥರನ್ನು ಅಧ್ಯಯನ ಮಾಡುತ್ತ ಶಾಕ್ತಪಂಥದ ಹೊಳಹು ಹುಟ್ಟಿದೆ. ಕರ್ನಾಟಕದ ಶಾಕ್ತಪಂಥದ ಲೋಕವನ್ನು ಹುಡುಕುವ ಮತ್ತು ಅರಿಯುವ ಯತ್ನ ಆರಂಭಿಸಿರುವೆ. ಮೂರು ವರ್ಷಗಳ ಬಳಿಕ ಅದು ಪ್ರಕಟವಾಗಬಹುದು. ಕರ್ನಾಟಕದಲ್ಲಿದ್ದ ಹಾಗೂ ಬೇರೆ ರೂಪಗಳಲ್ಲಿ ಈಗಲೂ ಇರುವ ದರ್ಶನ ಹಾಗೂ ಪಂಥಗಳ ಮೇಲೆ ಕೆಲಸ ಮಾಡುವುದು ಎಂದರೆ, ಪರೋಕ್ಷವಾಗಿ ನಮ್ಮ ನಾಡಿನ ಜನಸಮುದಾಯಗಳ ಮತಧರ್ಮಗಳನ್ನು ಮತ್ತು ಈ ಮತಧರ್ಮಗಳು ಪ್ರಭಾವ ಬೀರಿ ರೂಪಿಸಿರುವ ಲೋಕದೃಷ್ಟಿಯನ್ನು ಅರಿಯುವ ಕೆಲಸವೇ ಆಗಿದೆ. ಇದು ಅಂತಿಮವಾಗಿ ನಮ್ಮ ಸಮಾಜದ ಒಳಗೆ ನಡೆದಿರುವ ಚಲನೆಗಳನ್ನು ಅರಿಯುವ ಕೆಲಸವೂ ಆಗಿದೆ. ಜನರನ್ನು ಹೊರಗಿಟ್ಟು ಶೋಧಿಸುವ ಯಾವುದೇ ಜ್ಞಾನಕ್ಕೆ ಯಾವ ಸಾಂಸ್ಕೃತಿಕ ಮಹತ್ವವೂ ಇಲ್ಲ.

ಓದುಗರ ಬೇಡಿಕೆಯ ದೆಸೆಯಿಂದ ಈಗ ‘ಕರ್ನಾಟಕದ ನಾಥಪಂಥ’ದ ಎರಡನೇ ಆವೃತ್ತಿಯು ಪ್ರಕಟವಾಗುತ್ತಿದೆ. ಇದು ಪರಿಷ್ಕೃತ ಆವೃತ್ತಿ. ನನ್ನ ತಿರುಗಾಟದಲ್ಲಿ ಸಿಕ್ಕ ಹೊಸ ಸಂಗತಿಗಳನ್ನೂ ಅಧ್ಯಯನದಲ್ಲಿ ಕಂಡ ಹೊಸ ಹೊಳಹುಗಳನ್ನೂ ಇಟ್ಟುಕೊಂಡು ಪರಿಷ್ಕಾರ ಮಾಡಿದ್ದೇನೆ. ಅವರಸರದ ಕಾರಣದಿಂದಾಗಿ ಮೊದಲನೇ ಮುದ್ರಣದಲ್ಲಿ ಶಾನೇ ದೋಷಗಳು ಉಳಿದಿದ್ದವು. ಅವನ್ನೆಲ್ಲ ತಿದ್ದಿ ನೇರ್ಪುಗೊಳಿಸಿದ್ದೇನೆ. ಎರಡನೇ ಆವೃತ್ತಿ ಯನ್ನು  ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಕೋರುತ್ತೇನೆ. ಇದೇ ಹೊತ್ತಲ್ಲಿ ಪಂಥಗಳ ಅಧ್ಯಯನಕ್ಕೆ ಬೇಕಾದ ತಿರುಗಾಟಗಳಿಗೂ ಅಧ್ಯಯನಕ್ಕೂ ಬೇಕಾದ ಸಮಸ್ತ ಅನುಕೂಲ ಮತ್ತು ಸ್ವಾತಂತ್ರ್ಯವನ್ನು ಕೊಡಮಾಡಿರುವ ಪ್ರೀತಿಯ ಕನ್ನಡ ವಿಶ್ವವಿದ್ಯಾಲಯವನ್ನು  ನೆನೆಯುತ್ತೇನೆ. ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪನವರು ನನಗೆ ಕೆಲಸ ಮಾಡಲು ಎಲ್ಲ ಬಗೆಯ ಉತ್ತೇಜನವನ್ನು ನೀಡಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಡಾ.ಮೋಹನ ಕುಂಟಾರ್, ಸಹಾಯಕ ನಿರ್ದೇಶಕರಾದ ಸುಜ್ಞಾನಮೂರ್ತಿ ಹಾಗೂ ಮುಖಪುಟ ವಿನ್ಯಾಸ ಮಾಡಿದ ಕೆ.ಕೆ.ಮಕಾಳಿ ಅವರು ಈ ಪುಸ್ತಕವನ್ನು ಈ ರೂಪದಲ್ಲಿ ಪ್ರಕಟವಾಗಲು ನೆರವಾಗಿದ್ದಾರೆ. ಇವರೆಲ್ಲರಿಗೂ ನಮಸ್ಕರಿಸುತ್ತೇನೆ.

ರಹಮತ್ ತರೀಕೆರೆ