ಕರ್ನಾಟಕದ ಸೂಫಿಗಳ ಅಧ್ಯಯನ ಮಾಡುವಾಗ ನನಗೆ ಅದರ ಕರುಳ ಬಳ್ಳಿಗಳು ನಾಥ, ದತ್ತ, ಮುಂತಾದ ಪಂಥಗಳ ಒಳಗೆ ಇರುವುದು ಗೋಚರಿಸಿತು. ಅಲ್ಲಿಕಂಡ ಎಳೆಗಳನ್ನು ಇಟ್ಟುಕೊಂಡು ನಾಥಪಂಥದ ಮೇಲೆ ಸ್ವತಂತ್ರವಾದ ಅಧ್ಯಯನ ಮಾಡಬೇಕೆಂಬ ಹಂಬಲ ಮೊಳೆಯಿತು. ಅದರ ಪರಿಣಾಮವೇ ಈ ಕೃತಿ. ಸೂಫಿಗಳ ಅಧ್ಯಯನ ನನ್ನನ್ನು ಹಳ್ಳಿಮೂಲೆಗಳಿಗೆ ಕರೆದೊಯ್ದಿತ್ತು. ನಾಥರ ಅಧ್ಯಯನವು ಬೆಟ್ಟಗುಡ್ಡ ಗುಹೆ ಕಂದರಗಳಂತಹ ದುರ್ಗಮ ಜಾಗ ಗಳಿಗೆ ಕರೆದೊಯ್ಯಿತು. ಸಾಮಾನ್ಯವಾಗಿ ನಾಥಕ್ಷೇತ್ರಗಳು ಇರುವುದೇ ಅಂತಹ  ತಾಣಗಳಲ್ಲಿ. ಕರ್ನಾಟಕದ ನಾಥಪಂಥವು ಅಖಿಲ ಭಾರತೀಯವೂ ಆದ ಕಾರಣ,   ಹಿಮಾಲಯದ ಜ್ವಾಲಾಮುಖಿ, ಮಹಾರಾಷ್ಟ್ರದ ನಾಸಿಕ್, ತ್ರ್ಯಂಬಕೇಶ್ವರ, ಕೊಲ್ಲಾಪುರ, ಬತ್ತೀಸ್‌ಶಿರಾಳ, ಆಳಂದಿ, ಪುಣೆ, ಆಂಧ್ರದ ಹೇಮಾವತಿ, ಶ್ರೀಶೈಲಗಳಿಗೆ ಹೋಗಬೇಕಾಯಿತು. ಆದರೆ ಹರಿದ್ವಾರ, ಗೋರಖಪುರ, ನೇಪಾಳಗಳಿಗೆ ಹೋಗಲು ಆಗಲಿಲ್ಲ. ನೇಪಾಳವು ನಾಥಪಂಥದ ಪ್ರಮಥನಾದ ಗೋರಖನ ನಾಡು.  ಅಲ್ಲಿಯ ಜನ ನಿರಂಕುಶ ರಾಜಪ್ರಭುತ್ವದ ವಿರುದ್ಧ ರಾಜಕೀಯ ಸಂಘರ್ಷವನ್ನು ಆರಂಭಿಸಿದ್ದರು. ಪ್ರಕ್ಷುಬ್ಧ ಪರಿಸರವಿತ್ತು. ಎಷ್ಟೇ ತಿರುಗಾಟ ಮಾಡಲಿ, ಹೋಗಲಾಗದ ಜಾಗಗಳು ಉಳಿದುಬಿಡುತ್ತವೆ. ನಾಡು ಅಪಾರ. ತಿರುಗಾಡಿಗೆ ಮಿತಿಯಿದೆ. ಆದರೆ ಈ ಚಾರಣ, ಜನರ ಮುಖಾಮುಖಿ, ಅದರಲ್ಲೂ ವಿಚಿತ್ರ ಸ್ವಭಾವದ  ನಾಥಯೋಗಿಗಳ ಜತೆಗಿನ ಮಾತುಕತೆ, ನನ್ನಲ್ಲಿ ಹೊಸ ಅನುಭವವನ್ನು ಎರೆಯಿತು.

ಹರಿದು ಹಂಚಿಹೋದ ದಾಖಲೆಯ ತುಣುಕುಗಳನ್ನು ಹೆಕ್ಕಿ ಜೋಡಿಸಿ, ಚರಿತ್ರೆಯ ಗತಕಾಲದ ಚಿತ್ರವನ್ನು ಬಿಡಿಸುವ ಒಂದು ವಿಧಾನವು ಕನ್ನಡ ಸಂಶೋಧನೆಯಲ್ಲಿ ಇದೆಯಷ್ಟೆ. ನಾಥದಂತಹ ಬಹು ಪರಿಚಿತವಲ್ಲದ ಪಂಥದ ಚರಿತ್ರೆಯನ್ನು ಸಹ ಹೀಗೆ ಪುನಾರಚಿಸಿ ನೋಡುವ  ಅಗತ್ಯವಿದೆ. ಕರ್ನಾಟಕದ ಶಾಸನ, ಸಾಹಿತ್ಯ, ಶಿಲ್ಪ, ವಾಸ್ತು, ಆಚರಣೆ, ಜಾನಪದ, ರಾಜಕೀಯ ಚರಿತ್ರೆ ಇಟ್ಟುಕೊಂಡು ಈ ಪುಸ್ತಕದ ಮೊದಲ ಭಾಗದಲ್ಲಿ ನಾನೂ ಅದನ್ನು ಮಾಡಿದ್ದೇನೆ.  ಆದರೆ ಗತದ ಪುನಾರಚನೆ ಮಾಡುವ ಈ ವಿಧಾನದಲ್ಲೊಂದು ಸಮಸ್ಯೆಯಿದೆ. ಅದು ತಾನು ರಚಿಸುವ ಚಿತ್ರವು ವರ್ತಮಾನದ ನಿಷ್ಠುರ ಸಾಮಾಜಿಕ ರಾಜಕೀಯ ಆರ್ಥಿಕ ಸನ್ನಿವೇಶಗಳಲ್ಲಿ ಹೇಗೆ ಬದಲಾಗುತ್ತಿದೆ ಹಾಗೂ ಸಮುದಾಯಗಳ ಚಲನಶೀಲ ಬದುಕಿನಲ್ಲಿ  ಸಿಕ್ಕು ಯಾವೆಲ್ಲ ರೂಪಾಂತರ ಪಡೆಯುತ್ತಿದೆ ಎಂದು ನೋಡುವುದಕ್ಕೆ, ಅಷ್ಟೊಂದು  ಆಸಕ್ತಿ ತೋರುವುದಿಲ್ಲ. ಸಮುದಾಯಗಳ ಒಡನಾಟದಿಂದ, ಅವರ ಬದುಕಿನ ಆಧಾರವಾಗಿರುವ ದುಡಿಮೆಯ ಮುಖಾಂತರ, ಅವರ ಬದುಕಿನ ಅಭಿವ್ಯಕ್ತಿಗಳಾಗಿರುವ  ಸಾಹಿತ್ಯ ಕಲೆ ಆಚರಣೆಗಳ ಮುಖಾಂತರ, ಅವರ  ದುಗುಡ ಸಂತಸ ಸಂಕಟಗಳ ಮುಖಾಂತರ, ಈ ರೂಪಾಂತರಗಳನ್ನು ನೋಡಬೇಕಾಗುತ್ತದೆ. ಪುಸ್ತಕದ ಉತ್ತರಾರ್ಧದಲ್ಲಿ  ಈ ಕೆಲಸ ಮಾಡಲು ಯತ್ನಿರುವೆ. ಈ ಕಾರಣಕ್ಕಾಗಿ ಇದು ನಾಥಪಂಥದ ಕೇವಲ ಗತದ ಚಿತ್ರವೂ ಅಲ್ಲ. ಕೇವಲ  ವರ್ತಮಾನದ ವರದಿಯೂ ಅಲ್ಲ. ಅವೆರಡನ್ನೂ ಬೆರೆಸಿದ ಸಂಸ್ಕೃತಿ ಕಥನ. ಚರಿತ್ರೆಯ ಗತವೂ ವರ್ತಮಾನದ ಪಲ್ಲಟವೂ ಹಾಗೆ ಬೇರೆಯಾಗಿರಲು ಸಾಧ್ಯವಿಲ್ಲವಷ್ಟೆ. ಅವು ಒಂದರೊಳಗೆ ಒಂದು ಬೆಸೆದಿರುತ್ತವೆ. ಈ ಬೆಸತದಲ್ಲಿ ‘ಮೊಳೆಯದಲೆಗಳ ಮೂಕ ಮರ್ಮರ’ದ ಹಾಗೆ ಭವಿಷ್ಯದ ನಕ್ಷೆಗಳೂ ಅಡಗಿರುತ್ತವೆ.

ಈ ಪುಸ್ತಕದ ಸಿದ್ಧತೆಯಲ್ಲಿ ಕದ್ರಿಮಠದ ಜತೆಗೆ ನಿಡುಗಾಲದ ಸಂಬಂಧವನ್ನೂ ನಾಥಪಂಥದ ಬಗ್ಗೆ ಅಪಾರ ತಿಳಿವಳಿಕೆಯನ್ನೂ ಪಡೆದಿರುವ ಮಂಗಳೂರಿನ ಶ್ರೀ ಜೋಗಿ ಆನಂದನಾಥರ ಸಹಾಯ ದೊಡ್ಡದು. ಅವರು ನನ್ನ ಜತೆಗೂಡಿ ಹಲವೇರಿ, ವಿಟ್ಲ, ಹಂಡಿಬಡಗನಾಥ, ನಾಸಿಕ್, ತ್ರ್ಯಂಬಕೇಶ್ವರಗಳಿಗೆ ಬಂದರು. ಬೇಕಾದ ಪುಸ್ತಕ ಲೇಖನ ಹಾಗೂ ದಾಖಲೆಗಳನ್ನು ಒದಗಿಸಿದರು. ಈ ಪುಸ್ತಕದ ಹಸ್ತಪ್ರತಿಯನ್ನು ಓದಿ ಸಲಹೆ ಕೊಟ್ಟರು. ಅವರ ವಿಶ್ವಾಸ ಹಾಗೂ ಸಹಾಯ ಇಲ್ಲದಿದ್ದರೆ, ನಾನು ಇಷ್ಟು ಕೆಲಸ ಮಾಡಲು ಸಾಧ್ಯವಿರಲಿಲ್ಲ.  ನಾಥಪಂಥದ ಮೇಲೆ ಚರ್ಚೆಯ ಮೂಲಕ ನನ್ನ ಅರಿವನ್ನು ವಿಸ್ತರಿಸಿದವರು ಶ್ರೀಯುತರಾದ ಎಂ.ಎಂ.ಕಲಬುರ್ಗಿ, ತಿಪ್ಪೂರು ಗೋರಖ ಆಶ್ರಮದ ಶ್ರೀನೀಲಕಂಠಸ್ವಾಮಿ, ನಾಸಿಕದ ಆರ್. ಎಚ್.ರಾಥೋಡ್, ಕದ್ರಿಯ ಕೇಶವನಾಥ, ಮುದೇನೂರಿನ ಸಂಗಣ್ಣ, ನೇಪಾಲದ ನಾಥರ ಬಗ್ಗೆ ಕೆಲಸ ಮಾಡಿರುವ ಫ್ರಾನ್ಸಿನ ವೆರೋನಿಕಾ ಅವರು. ನಾನು ಇಷ್ಟಪಡುವ ಚರಿತ್ರೆ ವಿದ್ವಾಂಸರಲ್ಲಿ ಒಬ್ಬರಾದ ರಾಜಾರಾಮ ಹೆಗಡೆಯವರು ಪುಸ್ತಕದ ಹಸ್ತಪ್ರತಿಯನ್ನು ಪರಿಶೀಲಿಸಿ ಉಪಯುಕ್ತ ಸೂಚನೆಗಳನ್ನು ಕೊಟ್ಟಿದ್ದಾರೆ. ಕಿರಿಯಮಿತ್ರ ಅರುಣ ಜೋಳದಕೂಡ್ಲಿಗಿ ಹಸ್ತಪ್ರತಿ ಓದಿ ಪ್ರತಿಕ್ರಿಯೆ ಮಾಡಿದ್ದಾರೆ. ನನ್ನ ಕೆಲಸಗಳ ಬಗ್ಗೆ  ವಿದ್ವಾಂಸರೂ ಕುಲಪತಿಯವರೂ ಆದ ಡಾ.ಬಿ.ಎ.ವಿವೇಕ ರೈಯವರು ಯಾವತ್ತೂ ತೋರುತ್ತ ಬಂದಿರು ವಿಶ್ವಾಸವು ನನಗೆ ನೈತಿಕ ಶಕ್ತಿಯಾಗಿದೆ. ಈ ಅಧ್ಯಯನದಲ್ಲಿ ನನಗೆ ಅನೇಕ ಬಗೆಯಲ್ಲಿ ಸಹಾಯ ಮಾಡಿದವರು, ಬಸವರಾಜ ಮಲಶೆಟ್ಟಿ, ಕಲೀಮ್‌ಉಲ್ಲ,  ಎಚ್.ಜಿ.ಶ್ರೀಧರ, ಎಸ್.ಎಸ್.ಹಿರೇಮಠ, ವಿ.ಎಸ್. ಮಾರುತಿ,  ಸತೀಶ್ ಪಾಟೀಲ, ಎ.ಎಸ್. ಪ್ರಭಾಕರ, ರಾಜಪ್ಪ ದಳವಾಯಿ, ಐಸಿಎಚ್‌ಆರ್‌ನ ಎಸ್. ಕೆ. ಅರುಣಿ, ಕೆ. ಕೆ. ಮಕಾಳಿ, ಬಿ.ಸಿ. ನಾಗೇಂದ್ರಕುಮಾರ್, ಸುಜ್ಞಾನಮೂರ್ತಿ, ಶ್ರೀಮತಿ ರಶ್ಮಿಕೃಪಾಶಂಕರ್ ಅವರು. ಅಧ್ಯಯನಾಂಗದ ಟಿ. ಅರ್.ಚಂದ್ರಶೇಖರ್ ಅವರೂ  ವಿಭಾಗದ ಮಿತ್ರರೂ  ಎಂದಿನಂತೆ ಉತ್ತೇಜನ ಕೊಟ್ಟಿದ್ದಾರೆ. ಪುಸ್ತಕವನ್ನು ಪ್ರಸಾರಾಂಗದ ಮಲ್ಲೇಪುರಂ ಜಿ. ವೆಂಕಟೇಶ ಅವರು ಮುತುವರ್ಜಿಯಿಂದ ಪ್ರಕಟಿಸುತ್ತಿದ್ದಾರೆ. ಎಲ್ಲರನ್ನು ಗೌರವದಿಂದ ನೆನೆಯುತ್ತೇನೆ. ನಾನು ಮಾಡಿರುವ ಈ ಕಥನವನ್ನು ಸ್ವೀಕರಿಸಬೇಕು, ಇದರೊಳಗೆ ಇರುವ ಮಿತಿಗಳನ್ನು ತಿಳಿಸಬೇಕು, ಎಂದು ಓದುವ ಕನ್ನಡಿಗರನ್ನು ಬೇಡುತ್ತೇನೆ.

ರಹಮತ್ ತರೀಕೆರೆ
ನವೆಂಬರ್, ೨೦೦೬