ಹಂಪಿಯಲ್ಲಿದ್ದ ತಿಮ್ಮಣ್ಣ ಕವಿಯ ಭಾರತದಲ್ಲಿ ಒಂದು ವಿಶೇಷ ಪ್ರಸಂಗವಿದೆ. ಮಹಾಭಾರತದ ಯುದ್ಧವೆಲ್ಲ ಮುಗಿದು, ಕೃಷ್ಣನು ದ್ವಾರಕೆಗೆ ಹೊರಟು ನಿಂತಾಗ, ಅರ್ಜುನ ಬಂದು, ‘ಕೃಷ್ಣಾ ರಣರಂಗದಲ್ಲಿ  ಯೋಗರಹಸ್ಯ ಹೇಳಿದೆ. ಆ ಕ್ಷೋಭೆಯಲ್ಲಿ ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಈಗ ವಿರಾಮದಲ್ಲಿದ್ದೇನೆ. ಹೇಳು’ ಎಂದು ಕೇಳುತ್ತಾನೆ. ಅದಕ್ಕೆ ಕೃಷ್ಣ ‘ಅಯ್ಯ, ನನಗಾದರೂ ಇದು ಸರಿಯಾಗಿ ತಿಳಿದಿಲ್ಲ. ನಾನು ದ್ವಾರಕೆಗೆ ಬಂದಿದ್ದ ಒಬ್ಬನಿಂದ ಅದನ್ನು ಕಲಿತೆ. ಅವನು ಕಶ್ಯಪನಿಂದ ಕಲಿತನಂತೆ. ಆ ಕಶ್ಯಪನಿಗೆ ಈ ಯೋಗರಹಸ್ಯವನ್ನು ಯಾರೋ ಒಬ್ಬ ಸಿದ್ಧ ಹೇಳಿದನಂತೆ’ ಎನ್ನುತ್ತಾನೆ. ಭಾರತದ ಸಿದ್ಧಪರಂಪರೆಯಲ್ಲಿ ಅನಾಮಿಕರಾದ ಸಿದ್ಧರು ಎಲ್ಲಿಂದಲೊ ಬರುವುದು, ತಕ್ಕ ಶಿಷ್ಯರು ಸಿಕ್ಕರೆ ವಿದ್ಯೆಯನ್ನು ಕೊಡುವುದು  ಮುಂತಾದ ನೂರಾರು ಪ್ರಸಂಗಗಳಿವೆ.

ಸಿದ್ದಿ ಎಂದರೆ ಸಾಧನೆಯಲ್ಲಿ ಎತ್ತರದ ಹಂತ ಮುಟ್ಟಿದವರು ಎಂದರ್ಥ. ಆ ಸಿದ್ದಿ ಯೋಗಸಾಧನೆಯಲ್ಲಿ ಇರಬಹುದು. ವೈದ್ಯ ರಸವಿದ್ಯೆ ಮೊದಲಾದ ಕ್ಷೇತ್ರದಲ್ಲಿ ಗಳಿಸಿದ  ಜ್ಞಾನ ಮತ್ತು ಪರಿಣತಿ ಇರಬಹುದು. ಗುರುಪಂಥಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಜ್ಞಾನ ಮತ್ತು ಕುಶಲತೆ ಸಾಗುವುದರಿಂದ ಅದನ್ನು  ಗುಪ್ತವಾಗಿ ಇಡಲಾಗುತ್ತಿತ್ತು. ಹೀಗಾಗಿ ಸಿದ್ದಿಗಳನ್ನು ಅಲೌಕಿಕ ಶಕ್ತಿಗಳಂತೆಯೂ ಅವುಗಳ ಪ್ರದರ್ಶನವನ್ನು ಪವಾಡವೆಂದೂ ಜನ ಭಾವಿಸಿದರು. ಈ ಪವಾಡಗಳು ಸಿದ್ಧರ ವಿಶೇಷ ಜ್ಞಾನ ಮತ್ತು ಸಾಧನೆಗಳ ಉತ್ಪ್ರೇಕ್ಷಿತ ರೂಪಗಳು. ಭಾರತದಲ್ಲಿ ಒಂದು ವಿಶಾಲ ಸಿದ್ಧ ಪರಂಪರೆಯಿದೆ. ಅದರಲ್ಲಿ ಒಂದು ಸಿದ್ಧಪಂಥವಿಲ್ಲ. ಹಲವಾರಿವೆ. ಈ ಹಲವು ಪಂಥಗಳಲ್ಲಿ ಸಿದ್ಧರ ಪರಿಕಲ್ಪನೆಯಿದೆ. ಕಾಪಾಲಿಕ ಸಿದ್ಧ, ರಸಸಿದ್ಧ, ಶೈವಸಿದ್ಧ,  ಜೈನಸಿದ್ಧ, ಬೌದ್ಧಸಿದ್ಧ, ಆರೂಢಸಿದ್ಧ, ವೀರಶೈವ ಸಿದ್ಧ, ಸೂಫಿಸಿದ್ಧ, ಶಾಕ್ತಸಿದ್ಧ, ಕೌಳಸಿದ್ಧ, ದತ್ತಸಿದ್ಧ, ವಜ್ರಯಾನ ಸಿದ್ಧ, ನಾಥಸಿದ್ಧ ಹೀಗೆ.  ನಾಗಾರ್ಜುನನು ಮಹಾಯಾನಿ  ಬೌದ್ಧ ಸಿದ್ಧನಾಗಿದ್ದನು; ತೀರ್ಥಂಕರನಾದ ವೃಷಭನಾಥನು  ಜೈನಸಿದ್ಧನಾಗಿ ದ್ದನು. ಣಮೊ ಸಿದ್ಧಾಣಾಂ ಎಂಬುದು ಜೈನರ ಪವಿತ್ರ ಮಂತ್ರ. ತೀರ್ಥಂಕರರ ಹೆಸರುಗಳೆಲ್ಲ ಆದಿನಾಥ ನೇಮಿನಾಥ ಪಾರ್ಶ್ವನಾಥ ಎಂದು ಕೊನೆಗೊಂಡರೂ ಅವಕ್ಕೂ ನಾಥಪಂಥಕ್ಕೂ ಸಂಬಂಧವಿಲ್ಲ. ಆದರೆ ನಾಥರಲ್ಲಿ ನೇಮಿನಾಥ ಆದಿನಾಥ ಚಂದ್ರನಾಥ ಹೆಸರಿನ ನಾಥರು ಇದ್ದಾರೆ. ಕನ್ನಡದ ಜೈನಕವಿ ರತ್ನಾಕರವರ್ಣಿ ತನ್ನನ್ನು ಸಿದ್ಧನೆಂದು ಕರೆದುಕೊಂಡಿದ್ದನು. ತನ್ನ ಕಥಾನಾಯಕ ಭರತೇಶನನ್ನೂ ಸಿದ್ಧನನ್ನಾಗಿ ಚಿತ್ರಿಸುವನು. ಹರಿಹರನ ಪ್ರಕಾರ ರೇವಣ, ಅಲ್ಲಮ ಹಾಗೂ ಸಿದ್ಧರಾಮರು ಸಿದ್ಧರು. ತೋಂಟದ ಸಿದ್ಧಲಿಂಗನು ವೀರಶೈವ ಸಿದ್ಧನಾಗಿದ್ದನು. ರೇವಣಸಿದ್ಧನು ಶೈವಸಿದ್ಧನಾಗಿದ್ದನು. ಯೋಗ ಸಾಧನೆ ಮಾಡುವ ಎಲ್ಲ ಪಂಥಗಳಲ್ಲೂ ಸಿದ್ಧರಿದ್ದಾರೆ.

ಹೀಗೆ ಸಿದ್ಧ ಪರಂಪರೆಯು ಒಂದು ದೊಡ್ಡಮರವಾಗಿದ್ದು, ನಾಥವು ಅದರ ಒಂದು ಶಾಖೆ. ನಾಥವು ಸಿದ್ಧದ ಪರ್ಯಾಯ ಶಬ್ದವಾಗಿದೆ. ನಾಥಪಂಥಕ್ಕೆ  ಸಿದ್ಧಪಂಥ ಎಂಬ ಹೆಸರೂ ಇದೆ. ನಾಥರ ಅನೇಕ ಮಠಗಳು ಸಿದ್ಧಪೀಠ ಎಂಬ ಹೆಸರಲ್ಲಿವೆ. ನಾಥರು ತಮ್ಮ ಆಚರಣೆಗಳಲ್ಲಿ  ಸಿದ್ಧರಿಗೆ ಜಯಘೋಷ ಹಾಕುತ್ತಾರೆ. ಚೌರಾಸಿ ಸಿದ್ಧರ ಪಟ್ಟಿಯಲ್ಲಿ ಅನೇಕ ನಾಥರು ಬರುತ್ತಾರೆ. ಗೋರಖ ಮಚೇಂದ್ರರು ಪ್ರಸಿದ್ಧ ಸಿದ್ಧರಾಗಿದ್ದರು.

ಕರ್ನಾಟಕದಲ್ಲಿ ನಾಥವಲ್ಲದ ಸಿದ್ಧರ ಸಂಖ್ಯೆ ದೊಡ್ಡದಾಗಿದೆ. ಅಲ್ಲಮಪ್ರಭು, ಸೊನ್ನಲಿಗೆ ಸಿದ್ಧರಾಮ, ಮರುಳಸಿದ್ಧ, ರೇವಣಸಿದ್ಧ, ಕೊಲ್ಹಾಪುರದ ಕಾಡಸಿದ್ಧ, ಅಮೋಘ ಸಿದ್ಧ, ಮಂಟೆಸ್ವಾಮಿ, ಅವನ ಶಿಷ್ಯ ಸಿದ್ಧಪ್ಪಾಜಿ ಇವರೆಲ್ಲ ಸಿದ್ಧರೆಂದೇ ಹೆಸರಾಗಿದ್ದಾರೆ. ಇವರ ಜತೆ ಅವಧೂತರು ಆರೂಢರು ಯೋಗಿಗಳು ಎನ್ನಲಾಗುವ ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಕೂಡಲೂರು ಬಸವಲಿಂಗ, ತಿಂತಿಣಿ ಮೋನಪ್ಪ, ಕೊಡೇಕಲ್ ಬಸವಣ್ಣ, ಬಾಲಲೀಲಾ ಮಹಾಂತಯೋಗಿ, ಗರಗದ ಮಡಿವಾಳಪ್ಪ, ಸರ್ಪಭೂಷಣ ಶಿವಯೋಗಿ, ಶಿಶುನಾಳದ ಶರೀಫ, ಕಳಸದ ಗೋವಿಂದಭಟ್ಟ, ಕೊಲ್ಹಾರದ ಮಹಿಪತಿರಾಯ, ಕನಕಗಿರಿಯ ಚಿದಾನಂದ ಅವಧೂತ, ಮಹಲಿಂಗರಂಗ, ನಿರಂಜನಾವಧೂತ,  ರಾಂಪುರದ ಪರಪ್ಪಸ್ವಾಮಿ, ಮೋಟ್ನಳ್ಳಿ ಹಸನಸಾಬ, ಚನ್ನೂರು ಜಲಾಲಸಾಬ, ಗೂಗಲ್ಲು ಪರಪ್ಪಯ್ಯ,  ಅವಧೂತ ಶಿವಯೋಗಿ, ಹೇರೂರ ವಿರುಪನಗೌಡ, ಸಿರಗಾಪುರದ ಬಂಡೆಪ್ಪ, ಸೊಂಡೇಕೊಪ್ಪದ ಚೆನ್ನಾರೂಢ, ಹುಬ್ಬಳ್ಳಿಯ ಸಿದ್ಧಾರೂಢ, ನವಲಗುಂದ ನಾಗಲಿಂಗಯತಿ, ಸಿಂದಗಿಯ ಜಕ್ಕಪ್ಪಯ್ಯ, ಶಿಲವೇರಿಯ ಶಿವಪ್ಪ, ಚಿಪ್ಪಗಿರಿಯ ಭಂಭಂ ಬಾಬಾ, ಕೈವಾರದ ನಾರೇಣಪ್ಪ, ಹೊಳಗುಂದಿ ಸಾಹಿಬಣ್ಣತಾತ, ಬೋಳನಹಳ್ಳಿ ಮುಕುಂದೂರುಸ್ವಾಮಿ, ಅಲ್ಲೀಪುರದ ಮಹದೇವತಾತ,  ಗಬ್ಬೂರ ಹಂಪಣ್ಣ, ಚೆಳ್ಳಗುರ್ಕಿಯ ಯರ‌್ರಿತಾತ. ಈ ಸಿದ್ಧರದೊಂದು ದೊ್ಡ ಜಗತ್ತು.

ಇವರೊಂದಿಗೆ ನೂರೊಂದು ವಿರಕ್ತರೂ ಬರುತ್ತಾರೆ. ಇವರು ಮಧ್ಯಕಾಲದ ಯಾವುದೋ ಒಂದು ಘಟ್ಟದಲ್ಲಿ ಕರ್ನಾಟಕ್ಕೆ ಆಗಮಿಸಿದರು ಎಂಬ ಗ್ರಹಿಕೆಯಿದೆ. ಇವರು ತಮಿಳು ನಾಡಿನಿಂದ ಹಂಪಿಗೆ ಬಂದರು ಎನ್ನಲಾಗುತ್ತದೆ. ಇವರು ಯಾರು, ಯಾಕೆ ಬಂದರು, ಎಲ್ಲಿಗೆ ಹೋದರು ಈ ಬಗ್ಗೆ ಸ್ಪಷ್ಟ ದಾಖಲೆಯಿಲ್ಲ. ಎಂ.ಎಂ.ಕಲಬುರ್ಗಿಯವರ ಪ್ರಕಾರ ಇವರು ನಾಥಪಂಥೀಯರು.

[1] ಇದಕ್ಕೆ ಆಧಾರವಾಗಿ ಅವರು ಅವಧೂತ ಕಾವ್ಯವನ್ನು ಬರೆದ ಸಪ್ತಕಾವ್ಯದ ಗುರುಬಸವನನ್ನು ಹೆಸರಿಸುತ್ತಾರೆ. ಚಾರಣ ಮಾಡಿಕೊಂಡು ಬಂದ ಈ ಗುಂಪನ್ನು ಕಂಡರೆ, ತ್ರ್ಯಂಬಕದಿಂದ ಕರ್ನಾಟಕಕ್ಕೆ ಪ್ರತಿ ೧೨ ವರುಷಕ್ಕೊಮ್ಮೆ ಬರುವ ನಾಥರ ಝುಂಡಿಯು, ಲುಂಕೆಮಲೆಗೆ ಬಂದು ಮರಳಿ ಹೋಗುವಾಗ, ಹಂಪಿಯನ್ನು ಹಾದು ಹೋಗಿರಬಹುದೇ ಎಂಬ ಶಂಕೆ ಬರುತ್ತದೆ.

ಮೇಲ್ಕಾಣಿಸಿದ ಹಲವು ಸಿದ್ದರನ್ನು  ನಾಥರ ಹಾಗೆ ನಿರ್ದಿಷ್ಟ  ಪಂಥಕ್ಕೆ ಲಗತ್ತಿಸುವುದು ಕಷ್ಟ. ಚೌರಾಸಿ ಸಿದ್ಧರಲ್ಲಿ ನಾಥರ ಜತೆ ಗಣಿಸಲ್ಪಡುವ ಅಲ್ಲಮನನ್ನೇ ಹಾಗೆ ನಿರ್ದಿಷ್ಟ ಪಂಥಕ್ಕೆ ಸೇರಿಸುವುದು ಕಷ್ಟ. ಅಲ್ಲಮ ಶರಣನೂ ಹೌದು. ಶರಣರಲ್ಲಿ  ಭಿನ್ನಮತೀಯನಂತೆ ಕಾಣುವ ಸಿದ್ಧ ಪರಂಪರೆಯ ದಾರ್ಶನಿಕನೂ ಹೌದು. ಸಿದ್ಧರಾಮನು ಶರಣನಾಗುವ ಮುನ್ನ ಶೈವಸಿದ್ಧನಾಗಿದ್ದವನು. ಅವನೊಬ್ಬ ನಾಥನೆಂಬ ವಾದವೂ ಇದೆ. ಹುಬ್ಬಳ್ಳಿಯ ಸಿದ್ಧಾರೂಢರ ಶಿಷ್ಯನಾದ ಗುರುನಾಥರು ನಾಥರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿದೆ. ಆದರೂ ನಾಥ ಎಂಬ  ಹೆಸರಿನ ಮೇಲೆ ನಾಥಪಂಥೀಯ ಎಂದು ಹೇಳುವುದು ಅವಸರವಾಗುತ್ತದೆ. ಹೆಚ್ಚಿನ ಅವಧೂತರು ಜೀವನದಲ್ಲಿ ಆಕಸ್ಮಿಕವಾಗಿ  ತಮಗೆ ಸಿಕ್ಕ ಗುರುವಿನಿಂದ ಬೋಧ ತೆಗೆದು ಕೊಂಡವರು. ಶರಣರಂತೆ ಒಂದು ಸಮೂಹ ಚಳುವಳಿಗೆ ಸೇರಿದವರಲ್ಲ. ನಾಥರಂತೆ ಜೋಗಿದೀಕ್ಷೆ ಪಡೆದು, ಕುಂಡಲ ಹಾಕಿ, ಒಂದು ಸಂಘಟಿತ ವ್ಯವಸ್ಥೆಗೆ ಜೋಡಣೆ ಪಡೆದವರಲ್ಲ. ಮೇಲೆ ಕಾಣಿಸಿದ ಸಿದ್ಧರಲ್ಲಿ ಅನೇಕರು  ನಾನಾ ಕಾರಣಗಳಿಗೆ ಗೋರಖ ಮಚೇಂದ್ರರ ಪ್ರಸ್ತಾಪ ಮಾಡುತ್ತಾರೆ. ಈ ಸಿದ್ಧರಿಗೂ ನಾಥರಿಗೂ ಪರೋಕ್ಷವಾಗಿಯಾದರೂ ಇದ್ದ ಸಂಬಂಧದ ಸ್ವರೂಪವನ್ನು ತಿಳಿಯಲು ಇಲ್ಲಿ ಯತ್ನಿಸಬಹುದು.

ಈ ಬಹುರೂಪಿ ಸಿದ್ಧರು ವಿಭಿನ್ನ ದಾರ್ಶನಿಕ ಧಾರೆಗಳಿಗೆ ಸೇರಿದವರು. ಚಿದಾನಂದ ಅವಧೂತ, ಗೋವಿಂದಭಟ್ಟ, ಶಿಶುನಾಳ, ಸಿಂಧಗಿಯ ಭೀಮಾಶಂಕರ ಮುಂತಾದವರು ಶಾಕ್ತ ಪರಂಪರೆಯ ಸಿದ್ಧರು. ಮರಾಠಿ ನಾಥ ಹಿನ್ನೆಲೆಯಿಂದ ಬಂದ ಸಿದ್ಧನೊಬ್ಬನಿಂದ ಭೀಮಾಶಂಕರನು ದೀಕ್ಷೆ ಪಡೆಯುತ್ತಾನೆ. ಇವರಲ್ಲಿ ಅನೇಕ ಯೋಗಿನಿಯರೂ ಇದ್ದಾರೆ. ಇವರನ್ನೆಲ್ಲ ಬೆಸೆಯುವ ಸಮಾನ ತಾತ್ವಿಕ ಕೊಂಡಿಯೆಂದರೆ ಯೋಗಸಾಧನೆ. ಇವರ ಸಮಾನ ಲಕ್ಷಣಗಳೆಂದರೆ, ತನ್ನತಾನರಿಯುವ ತತ್ವ, ಸನ್ಯಾಸಕ್ಕೆ ಆದ್ಯತೆ, ಗುರುವಿಗೆ  ಮಹತ್ವ, ಗುಪ್ತವಿದ್ಯೆಯನ್ನು ಕಾಪಾಡುವುದು, ಬೆಡಗಿನ ಭಾಷೆಯಲ್ಲಿ ತಮ್ಮ ಅನುಭವ ಹೇಳಿಕೊಳ್ಳುವುದು, ಜಾತಿ ಹಾಗೂ ವರ್ಣ ವ್ಯವಸ್ಥೆಯನ್ನು ಒಪ್ಪದಿರುವುದು, ಗುಡಿಸಂಸ್ಕೃತಿ ಹಾಗೂ ಮೂರ್ತಿಪೂಜೆ ಇಲ್ಲದಿರುವುದು, ವೇದ ಆಗಮ ಹಾಗೂ ಶಾಸ್ತ್ರಗಳನ್ನು ಮಾನ್ಯ ಮಾಡದಿರುವುದು, ಯಜ್ಞಸಂಸ್ಕೃತಿಯನ್ನು ವಿರೋಧಿಸುವುದು.  ಈ ಗುರುಪಂಥಿಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸುವ ಶಂಬಾ, ಸಿದ್ಧರು ತಮ್ಮ ಈ ನಿಲುವಿನ ಕಾರಣಕ್ಕಾಗಿ ಹೇಗೆ ವೈದಿಕರ ಹಲ್ಲೆಗೆ ಒಳಗಾದರು ಎಂಬುದನ್ನು ವಿವರಿಸುತ್ತಾರೆ.[2]

ಈ ಬಹುಪಂಥೀಯ ಮೂಲದ ಸಿದ್ಧರು ೧೫ರಿಂದ ೨೦ನೇ ಶತಮಾನದವರೆಗೆ ಕರ್ನಾಟಕದ  ಬೇರೆಬೇರೆ ಕಾಲದಲ್ಲಿ ಮೂಡಿದವರು. ಹೆಚ್ಚಾಗಿ ೧೮-೧೯ನೇ ಶತಮಾನದಲ್ಲಿ ಕಾಣಿಸುವವರು. ಅಲ್ಲೀಪುರದ ಮಹದೇವತಾತ, ಮುಕಂದೂರುಸ್ವಾಮಿ ಇವರೆಲ್ಲ ೨೦ನೇ ಶತಮಾನದವರು.  ಹಂಪಿಯ ಸದಾಶಿವಯೋಗಿ ಈಗಲೂ ಇದ್ದಾರೆ. ಇವರೆಲ್ಲ ಗ್ರಾಮೀಣ ಪ್ರದೇಶದವರು.  ಊರಾಚೆಯ ಬೆಟ್ಟಗುಡ್ಡದ ಗುಹೆಗಳಲ್ಲಿ ಅಥವಾ ಊರೊಳಗಿನ ಸಣ್ಣ ಪುಟ್ಟ ಮಠಗಳಲ್ಲಿ ಇದ್ದವರು. ತಾವಿದ್ದ ಪರಿಸರದ ಬದುಕಿನ  ಲಯದ ಭಾಗವಾಗಿದ್ದವರು. ಇವರ ಗದ್ದುಗೆಗಳು ಗ್ರಾಮೀಣ ಭಾಗಗಳಲ್ಲಿವೆ. ಇವರು ಎಷ್ಟು ಸ್ಥಳೀಕರಣಗೊಂಡರು ಎಂದರೆ, ಜನ ಇವರನ್ನು  ಇವರ ಮೂಲ ಹೆಸರು ಬಿಟ್ಟು ಮುಕಂದೂರುಸ್ವಾಮಿ, ಕೈವಾರದ ತಾತಯ್ಯ ಎಂದು ಊರ ಹೆಸರಲ್ಲೇ ಗುರುತಿಸುತ್ತಾರೆ. ಆರೂಢರು ಸಾಮಾನ್ಯವಾಗಿ ತಮ್ಮ ಪಂಥೀಯ, ಪ್ರಾದೇಶಿಕ ಹಾಗೂ ಪೂರ್ವಾಶ್ರಮದ ಮೂಲಗಳನ್ನು ಹೇಳಿಕೊಳ್ಳುವುದಿಲ್ಲ. ಸಿದ್ಧಾರೂಢ, ಮುಕುಂದೂರು ಸ್ವಾಮಿ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಇವರು ಸಂಸಾರದಲ್ಲಿ ಯಾವುದೊ ಆಘಾತಕ್ಕೆ ಒಳಗಾಗಿ ವಿರಕ್ತಿಯಿಂದ ಸನ್ಯಾಸಿಗಳಾದವರು. ಕೆಲವರು ತಮ್ಮ ಹುಚ್ಚು ಎನಿಸುವ ವರ್ತನೆಗಳಿಂದಲೂ ಜನಪ್ರಿಯರಾಗಿದ್ದರು. ಸ್ವತಂತ್ರ ಪ್ರವೃತ್ತಿಯವರೂ ಅಹಂಕಾರಿಗಳೂ ಆದ ಇವರು, ಒಂದೆಡೆ ನೆಲೆನಿಲ್ಲುವ ಮುಂಚೆ ದೊಡ್ಡ ತಿರುಗಾಟ ಮಾಡಿದವರು. ಇಂತಹ ಕೆಲವು ಯೋಗಿಗಳ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಯವರೂ ಎಚ್.ಎಸ್.ಶಿವ್ರಕಾಶರೂ ಬರೆಯುತ್ತಾರೆ.[3]

ಚಂಚಲ ಮನಸ್ಸನ್ನು ಸ್ಥಿರಗೊಳಿಸಿ ವಾಯು ನಿರ್ಬಂಧ ಮಾಡಿ, ಅದನ್ನು ಮೇಲ್ಮುಖ ವಾಗಿ ಕಳಿಸಿ, ಯೋಗಸಮಾಧಿಯಲ್ಲಿ ಆನಂದ ಅನುಭವಿಸುವುದೇ ಮೋಕ್ಷ ಎಂದು ಹೇಳುವ ಸಿದ್ಧಪಂಥಗಳು ಒಂದು ಬಗೆಯಲ್ಲಿ ವ್ಯಕ್ತಿವಾದಿಯಾದವು. ಈ ಯೋಗ ಸಾಧನೆಯು ವರ್ತಮಾನದ  ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡ ಕಂಪನಗಳನ್ನು ಹುಟ್ಟಿಸುವುದಿಲ್ಲ. ಆದರೆ ಆಧ್ಯಾತ್ಮಿಕವಾದ ಹಕ್ಕುಗಳನ್ನು ಕೆಳವರ್ಗಕ್ಕೆ ಕೊಡುವ ಕಾರಣದಿಂದಲೇ ಕೆಳಸ್ತರದ ಸಮುದಾಯಗಳು ಇವುಗಳತ್ತ ಚಲಿಸಿದವು. ವ್ಯಕ್ತಿವಾದಿ ಯೋಗಪಂಥವೊಂದು ಸಾಮಾಜಿಕ ಚಲನಶೀಲತೆಯಲ್ಲಿ ಪಾತ್ರವಹಿಸುವುದು ಭಾರತೀಯ ದರ್ಶನಗಳ ಸಮಾಜಶಾಸ್ತ್ರೀಯ ಆಯಾಮವಾಗಿದೆ. ಮಾತ್ರವಲ್ಲ, ದೈಹಿಕ ದುಡಿಮೆ ಮತ್ತು ಕಾಯವನ್ನು ಅಪಮಾನಿಸುವ ಚಿಂತನೆಗಳಿರುವ ದೇಶದಲ್ಲಿ, ಕಾಯವಾದಿಯಾದ ಸಿದ್ಧಪಂಥಗಳಿಗೂ ಸಮುದಾಯಗಳ ಆರ್ಥಿಕ ಚಟುವಟಿಕೆಗಳಿಗೂ ಒಂದು ಸಂಬಂಧ ಏರ್ಪಟ್ಟಿತು. ಭಾರತದ ಮಧ್ಯಕಾಲೀನ ಚಿಂತನೆಗೆ ದಲಿತರು ಕೊಟ್ಟ ಕೊಡುಗೆಯನ್ನು ಚರ್ಚಿಸುವ ಶಂಕರ ಮೊಕಾಶಿ ಪುಣೇಕರರು, ಗೋರಖನು ತನ್ನ ‘ಸಿದ್ಧಸಿದ್ಧಾಂತ ಪದ್ಧತಿ’ಯಲ್ಲಿ ೬೪ ಕಲೆ ಮತ್ತು ಕಸುಬುಗಳಲ್ಲಿ ಪರಿಣತರಾದವರು ಚತುರ್ವರ್ಣದ ಆಚೆಯಿರುವ ಪಂಚಮಾಶ್ರಮಿಗಳು ಎನ್ನುತ್ತಾನೆ. ಇದು ಹರಿಜನರನ್ನೆ ಉದ್ದೇಶಿಸಿ ಮಾಡಿದ ಹೇಳಿಕೆ ಎಂದು ಪ್ರತಿಪಾದಿಸುತ್ತಾರೆ.[4]  ಈ ಚರ್ಚೆಯಲ್ಲಿ ಹರಿಜನ ಎಂಬುದು ಸಿದ್ಧಪಂಥಗಳು ಒಳಗೊಂಡ ನೂರಾರು ಕಸುಬುದಾರ ಜಾತಿ ಹಾಗೂ ವರ್ಗಗಳ ಮಹಾಸೇರಿಕೆಯನ್ನು ಸೀಮಿತಗೊಳಿಸುತ್ತದೆ. ಬಹುತೇಕ ಅವಧೂತರು ಚಿನ್ನ, ಕಬ್ಬಿಣ, ನೇಕಾರಿಕೆ, ಪಿಂಜಾರಿಕೆ ಇತ್ಯಾದಿ ಕಾಯಕ ಮಾಡುವ ವರ್ಗದಿಂದ ಬಂದವರು. ಸಾಮಾಜಿಕವಾಗಿ ಅಬ್ರಾಹ್ಮಣ ಜಾತಿಯವರು. ಮರುಳಸಿದ್ಧನು ದಲಿತರವನು; ನಾಥರ ವಿಷಯದಲ್ಲಿ ತಮ್ಮ ವಿಶೇಷ ತಿಳಿವಳಿಕೆಯನ್ನು ನನ್ನೊಡನೆ ಹಂಚಿಕೊಂಡ ತಿಪ್ಪೂರಿನ ನೀಲಕಂಠಸ್ವಾಮಿ ಸಹ ದಲಿತರು. ಸೊಂಡೆಕೊಪ್ಪದ ಚೆನ್ನಾರೂಢರು ದಲಿತರು. ಸಾಮಾಜಿಕವಾಗಿ ಅವಧೂತ ಪಂಥಗಳಲ್ಲಿರುವ ನಿರ್ಜಾತೀಕರಣ ಪ್ರಕ್ರಿಯೆಯು ದಲಿತ ಮತ್ತು ಕೆಳಜಾತಿಗಳಲ್ಲಿ ಈ ಪಂಥಗಳ ಜನಪ್ರಿಯತೆಗೆ ಕಾರಣವಾಗಿದ್ದರಲ್ಲಿ  ಸಂಶಯವಿಲ್ಲ.  ಗೋರಖನು ತನ್ನ ದರ್ಶನಗಳಲ್ಲಿ ಅವಧೂತರು ವರ್ಣಪದ್ಧತಿಗೆ ಅತೀತರು ಎಂದು ಮತ್ತೆಮತ್ತೆ ಹೇಳುವುದನ್ನು ಕಂಡರೆ, ಸಿದ್ಧಪಂಥಗಳು ತಮ್ಮ ಕಾಲದ ಪ್ರಬಲ ಆರ್ಥಿಕ ರಾಜಕೀಯ ಸಂಘಟನೆಯಾಗಿದ್ದ ವರ್ಣಪದ್ಧತಿಯ ಮೇಲೆ ದೊಡ್ಡ ಹೋರಾಟ ಮಾಡಿದವು ಎಂದು ತಿಳಿಯುತ್ತದೆ. ಕರ್ನಾಟಕದ ಆರೂಢ ಸಿದ್ಧರು ಇಲ್ಲಿನ ಸಾಮಾಜಿಕ ಆರ್ಥಿಕ ಆಧ್ಯಾತ್ಮಿಕ ಬದುಕಿನಲ್ಲಿ ವಹಿಸಿರುವ ಪಾತ್ರದ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ.

ಸಂಕರಶೀಲ ಸಿದ್ಧಕ್ಷೇತ್ರಗಳು

ಕರ್ನಾಟಕದ ಸಿದ್ಧಕ್ಷೇತ್ರಗಳಲ್ಲಿ ಸಿದ್ಧರಬೆಟ್ಟ, ಸಿದ್ಧರಗುಡಿ ಮತ್ತು ಸಿದ್ಧರಮಠಗಳೂ ಸೇರುತ್ತವೆ.  ಇವು ನಾಥವೂ  ಒಳಗೊಂಡಂತೆ ಇತರ ಪಂಥಗಳಿಗೆ ಸೇರಿದವಾಗಿವೆ. ಪಂಥಗಳ ಚರಿತ್ರೆಯಲ್ಲಿ ಒಬ್ಬರ ಜಾಗಗಳು ಮತ್ತೊಬ್ಬರದಾಗುವುದು ಸಾಮಾನ್ಯ. ಅದರಲ್ಲೂ ಕಾಪಾಲಿಕರು ಮತ್ತು ನಾಥರಲ್ಲಿ ಈ ಅದಲುಬದಲು ಹೆಚ್ಚು ಸಂಭವಿಸಿದೆ. ನಾಥರ ಪಂಥೀಯ ದೈವವಾದ ಭೈರವನು ಸಿದ್ಧೇಶ್ವರನೂ ಆಗಿರುವ ಕಾರಣ, ಹೆಚ್ಚಿನ ಸಿದ್ಧಕ್ಷೇತ್ರ ಗಳು ಭೈರವಾರಾಧನೆಯ ತಾಣಗಳಾಗಿವೆ. ಕಾಪಾಲಿಕ ಸಮುದಾಯಗಳು ವಾಸವಿರುವ ಲುಂಕೆಮಲೆ, ಹೇಮಾವತಿ ಹಾಗೂ ವದ್ದಿಕೆರೆಗಳಲ್ಲಿ ಭೈರವನನ್ನು ಸಿದ್ಧೇಶ್ವರ ಎಂದೇ ಕರೆಯಲಾಗುತ್ತದೆ.  ಕೆಲವೊಮ್ಮೆ ತ್ರಿಶೂಲವೊ ಭೈರವ ಮೂರ್ತಿಯೊ ಇದ್ದ ಕಡೆ ಶಿವಲಿಂಗವೂ ಬಂದಿದೆ. ಕಟಗಾರು (ತೀರ್ಥಹಳ್ಳಿ) ಸಿದ್ಧೇಶ್ವರ ಗುಡಿಯು, ಹಿಂದೆ  ಭೈರವಾ ರಾಧನೆಯ ಜಾಗವಾಗಿತ್ತು. ಅಲ್ಲಿ  ನಾಥಮಠ ಇದ್ದ ಎಲ್ಲ ಲಕ್ಷಣಗಳೂ ಇವೆ. ಈಗದು ಶಿವನ ಗುಡಿಯಾಗಿದೆ. ಚುಂಚನಗಿರಿಯಲ್ಲಿ ಕಾಳಭೈರವನಲ್ಲದೆ ಬೇರೊಂದು ಸಿದ್ಧೇಶ್ವರನ ಗುಡಿಯಿದೆ. ಅದು ಆಗಮೋಕ್ತ ಪೂಜೆ ಇರುವ  ಶಿವಲಿಂಗ. ಭೈರವನನ್ನು ಒಪ್ಪಲಾಗದ ಸನ್ನಿವೇಶ ಬಂದಾಗ ಲಿಂಗಾಯತ ಸಮುದಾಯಗಳು ಇಂತಹ ಪರ್ಯಾಯ ಗುಡಿಗಳನ್ನು ಸೃಷ್ಟಿಸಿಕೊಂಡಿರುವುದು ಉಂಟು.

ವಿಶಾಲ ಸಿದ್ಧಪಂಥದಲ್ಲಿ ನಡೆದ ಸಂಕರಶೀಲತೆಯನ್ನು ಅರಿಯಲು ತುಮಕೂರು ಆಸುಪಾಸಿನ ಸಿದ್ಧರ ಸಿದ್ಧರಬೆಟ್ಟಗಳನ್ನು ಗಮನಿಸಬಹುದು. ಸಿದ್ಧರಬೆಟ್ಟವು (ಕೊರಟಗೆರೆ) ನಾಥಪಂಥಕ್ಕೆ ಸೇರಿದಂತೆ ತೋರುತ್ತದೆ. ಕ್ಯಾತ್ಸಂದ್ರದಲ್ಲಿ (ತುಮಕೂರು) ಸಿದ್ದಗಂಗೆಯ ಬೆಟ್ಟ ಹಾಗೂ ಮಠವಿದ್ದು, ಇವು ಎಡೆಯೂರು ಸಿದ್ಧಲಿಂಗನ ಲಿಂಗಾಯತ  ಸಂಪ್ರದಾಯಕ್ಕೆ ಈಗ ಸೇರಿವೆ. ಇಲ್ಲಿಂದ ೧೦ ಕಿಮಿ ದೂರದಲ್ಲಿ ಸಿದ್ಧಗಿರಿ (ಮಂದರಗಿರಿ ) ಎಂಬ ಜೈನಕ್ಷೇತ್ರವಿದೆ.  ಇದು ಶ್ರವಣಬೆಳಗೊಳದ ಚಿಕ್ಕಬೆಟ್ಟದಂತೆ ಸಲ್ಲೇಖನ ವ್ರತಧಾರಿಗಳು ದೇಹತ್ಯಾಗ ಮಾಡುತ್ತಿದ್ದ ಜಾಗ. ಅಲ್ಲಿಂದ ೧೦ಕಿಮಿ ದೂರದಲ್ಲಿ ನಿಜಗಲ್ಲಿನ ಬಳಿ ಇನ್ನೊಂದು  ಸಿದ್ಧರಬೆಟ್ಟವಿದೆ. ಇದು ಯಾವುದೊ ಆರೂಢರಿಗೆ ಸೇರಿದ್ದು. ಇಲ್ಲಿಂದ ದಕ್ಷಿಣಕ್ಕೆ ರಾಮನಗರ  ಭಾಗದಲ್ಲಿ ಅನೇಕ ರಸಸಿದ್ಧರ ಹಾಗೂ ರೇವಣಸಿದ್ಧರ ಬೆಟ್ಟಗಳಿವೆ. ಇವು ಶೈವಸಿದ್ಧರ ಕ್ಷೇತ್ರಗಳು. ಹೀಗೆ ಸುಮಾರು ೪೦ ಕಿಮಿ ಫಾಸಲೆಯ ವರ್ತುಲದಲ್ಲಿ ಹಲವು ಪಂಥದ ಸಿದ್ಧರ ಸ್ಥಾನಗಳಿವೆ. ಕರ್ನಾಟಕ ಸಿದ್ಧರ ದೃಷ್ಟಿಯಿಂದ ೨ ಮಹತ್ವದ ತಾಣಗಳೆಂದರೆ, ಕೊಲ್ಲಾಪುರ ಹಾಗೂ ಸಿದ್ಧಪರ್ವತವೆಂದು ಹೆಸರಾಗಿದ್ದ ಶ್ರೀಶೈಲ. ಇಲ್ಲಿ ವಿವಿಧ ಸಿದ್ಧರ ಮುಖಾಮುಖಿಯ ನೂರಾರು ಕಥನಗಳು ಸಿಗುತ್ತವೆ.

೧. ಶ್ರೀಶೈಲವು ಚಾಮರಸನ (‘ಪ್ರಭುಲಿಂಗಲೀಲೆ’) ಪ್ರಕಾರ ‘‘ನಿಧಿಯ ಚಿಂತಾಮಣಿಯ ದಿವ್ಯೌಷಧಿಯ ಪರುಷದ ಕಣಿಯ ಸುಲಲಿತ ಸುಧೆಯ ಬಿಲಗಳ ಸಿದ್ಧರಸ ಪಾದುಕೆಯನಂಜನವ ವಿಧಿವಿಧಾನದ ವಸ್ತುಗಳ ತಮ್ಮಿದಿರಲರಸುವ ಸಾಧಕರ ತವನಿಧಿ’’; ತೋಂಟದ ಸಿದ್ಧಲಿಂಗ ಪರಂಪರೆಯಲ್ಲಿ ಬರುವ ಸಿದ್ಧವೀರ ದೇಶಿಕೇಂದ್ರನ ವಚನವೊಂದರಲ್ಲಿ,  ಶ್ರೀಶೈಲವು ಗೋರಖ ಮಚೇಂದ್ರ ಹಾಗೂ ಗುರುಶಾಂತರು ಯೋಗಸಿದ್ದಿಯನ್ನು ಪಡೆಯುವ   ಜಾಗ. ‘ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ, ಮಾಡಿದನೊಬ್ಬ ಮತ್ಸ್ಯೇಂದ್ರನಾಥ, ಮಾಡಿದರೆಮ್ಮ ವಂಶದ ಶ್ರೀಗುರುಶಾಂತ ದೇವರು’ಎಂದು ಆತ ನುಡಿಯುತ್ತಾನೆ.

೨. ಕೊಲ್ಲಾಪುರವು ದೇವಕವಿ (ಕ್ರಿಶ.೧೬) ಮಾಡುವ ವರ್ಣನೆಯಂತೆ ಹೀಗಿದೆ.  ಆದಿನಾಥನು ಮೀನನಾಥನು. ಸೌರಗರೆನಿಪನಾದಿ ವಾಗದ್ವೈತ ಗೋರಕಾ ಸಿದ್ಧರೀವರೀ ಧರೆಯೊಳತ್ಯಧಿಕರು. ನಾದಮಯನುಂ ಪೆಸರ್ವಡೆದ ವಿರೂಪಾಕ್ಷ ಮಿಗಿಲಾದವನು ಮೇಘನಾಥನು ಕ್ಷಣಕನೆಂಬುವನು ವಾದ ಪ್ರಸಂಗದೊಳಧಿಕ ನಾಗಾರ್ಜುನಂ ಮುಂತಾದ ಸಿದ್ಧರೆಸೆಯೆ, ಸಿದ್ದಿಯಂ ಪಡೆದ ಸಾಧಕರೆಸೆದುದಾ ಪುರದಿ ಸಿದ್ಧ ಸಾಧಕರ್ನೆರೆದನಲ್ಲಾಳ ಸಿದ್ಧ ಮಿಗಿಲ್ಬುದ್ದಿಯಾತ್ಮನ ಪಡೆದ ಬಲ್ಲಾಳ ಸಿದ್ಧ ನೆಲೆಮದ್ದಿನೊಳು ಕುಟಿಲಸಿದ್ಧ ಯುದ್ಧಕೋಲಾಹಲಸಿದ್ಧ ನಂಜಿನ ಸಿದ್ಧರಿದ್ದರಾ ನಗರದೊಳು. ರೇವಣಸಿದ್ಧ ಬಹುಸಿದ್ಧರಿಂಗಧಿಪ ಗೋರಕಸಿದ್ಧ ನವನಾಥಸಿದ್ಧದೆಸೆಯೊಳೊಪ್ಪಿ ಮೆರೆಯೆ (ಮರುಳಸಿದ್ಧಕಾವ್ಯ ೨.೩೮)

ಇಲ್ಲಿನ ಸಿದ್ಧರ ಪಟ್ಟಿಯಲ್ಲಿ ಸಾಕಷ್ಟು ಗೋಜಲಿದೆ. ಆದರೆ ಶ್ರೀಶೈಲ ಹಾಗೂ ಕೊಲ್ಲಾಪುರಗಳು ಹಲವು ಬಗೆಯ ಸಿದ್ಧರಿದ್ದ ಕೇಂದ್ರಗಳೆಂಬುದನ್ನು ಇವು ದೃಢಪಡಿಸುತ್ತಿವೆ.  ನಾಥಸಿದ್ಧರು ಇತರೆ ಸಿದ್ದರ ಜತೆಯಲ್ಲಿ ಈ ಜಾಗಗಳಲ್ಲಿ ಸಹಬಾಳುವೆ, ಸಂವಾದ, ಜಗಳ ಮಾಡುತ್ತ ಇದ್ದರು. ಇದೇ ಪರಿಸ್ಥಿತಿಯು ಕರ್ನಾಟಕದ ಸಿದ್ಧರಬೆಟ್ಟಗಳಲ್ಲೂ ಇತ್ತೆಂದು ತೋರುತ್ತದೆ. ಅಂತಹ ಕೆಲವು ಬೆಟ್ಟಗಳನ್ನು ಇಲ್ಲಿ ಪರಿಶೀಲಿಸಬಹುದು.

. ಸಿದ್ಧರ ಹಾಗೂ ಜೋಗಿಯ ಬೆಟ್ಟಗಳು

ನಾಥಪಂಥಕ್ಕೂ ಬೆಟ್ಟ ಕಣಿವೆ ಗುಹೆಗಳಿಗೂ ಆಪ್ತ ಸಂಬಂಧ. ಬಹುತೇಕ ನಾಥರ ನೆಲೆಗಳು ದುರ್ಗಮವೂ ನಿರ್ಜನವೂ ಆದ ಬೆಟ್ಟಗಳಲ್ಲಿವೆ. ಅವರು ಯೋಗ ಸಾಧನೆಗಳಿಗೆ ಇಂತಹ ಜಾಗಗಳನ್ನು ಉದ್ದೇಶಪೂರ್ವಕವಾಗಿ ಆರಿಸಿಕೊಂಡಂತಿದೆ. ಹಲವೇರಿ, ಹಂಡಿಬಡಂಗನಾಥ, ಲುಂಕೆಮಲೆ, ಎಲ್ಲಮ್ಮನಗುಡ್ಡ, ಚಂದ್ರಗುತ್ತಿ ಎಲ್ಲವೂ ದುರ್ಗಮ ಜಾಗಗಳೇ. ಕದ್ರಿ ಹಾಗೂ ವಿಟ್ಲಗಳು ಜನವಸತಿಯಿಂದ ಆವರಿಸಲ್ಪಡುವ ಮುನ್ನ ಕೂಡ ಹೀಗೇ ದುರ್ಗಮವಾಗಿ ಇದ್ದವು. ನಾಥರ ಬೆಟ್ಟಗಳು ಆಯಾ ಪರಿಸರದಲ್ಲಿ ಸಿದ್ಧರಬೆಟ್ಟಗಳೆಂದೇ ಖ್ಯಾತವಾಗಿವೆ.  ನೇಪಾಳದಲ್ಲಿ ಗೋರಖ ಬೆಟ್ಟದ ಹೆಸರು ಸಿದ್ಧಾಚಲ. ಲುಂಕೆಮಲೆಯು ಅಲ್ಲಿನ ಸ್ಥಳಪುರಾಣದಲ್ಲಿ ಸಿದ್ಧಮಲೆಯಾಗಿದೆ. ಸಿದ್ಧ ಸಂಬಂಧವುಳ್ಳ ಬೆಟ್ಟ ಹಾಗೂ ಕೊಳ್ಳಗಳು  ಕರ್ನಾಟಕದ ಉದ್ದಗಲಕ್ಕೂ ಇವೆ.

ಇವುಗಳಲ್ಲಿ ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟವು ಹೆಚ್ಚು ಹೆಸರಾಗಿದೆ. ಇದನ್ನು ಬೂದಗಾವಿ ಸಿದ್ಧರಬೆಟ್ಟವೆಂದೂ ಕರೆಯುವರು. ಬೂದಗಾವಿಯು ಬಹುಶಃ ಬೂದಿಗವಿಯ ಆಡುರೂಪ. ಗವಿಗಳಲ್ಲಿ ಧುನಿ ಹಾಕಿಕೊಂಡು ಭಸ್ಮಧಾರಿಗಳಾದ ಸಿದ್ಧರು ಇದ್ದ ಕಾರಣ ಈ ಹೆಸರು ಬಂದಿದೆ. ಬೆಟ್ಟದ ಮೇಲಿರುವ ಗುಹೆಯಲ್ಲಿ ಗೋಸಲ ಸಿದ್ಧೇಶ್ವರನ ಸಮಾಧಿಯಿದೆ. ಸಿದ್ಧರಬೆಟ್ಟವು ಔಷಧಿ ಸಸ್ಯಗಳಿಗಾಗಿ ಪ್ರಸಿದ್ಧ. ಔಷಧಿ ಜ್ಞಾನವು ವಿಶಾಲ  ಸಿದ್ಧಪರಂಪರೆಯ ಮುಖ್ಯ ಕುರುಹು. ಸಿದ್ಧರಬೆಟ್ಟದ ಕೆಳಗೆ ಇರುವ ಜೋನಿಗರಹಳ್ಳಿಯಲ್ಲಿ (ಜೋಗೇರಹಳ್ಳಿ?) ಭೈರವ ಗುಡಿಯಿದೆ. ಸಿದ್ಧರಬೆಟ್ಟದ ಆಸುಪಾಸಿನ ಗ್ರಾಮಗಳಲ್ಲಿ ಕಾಪಾಲಿಕ ಸಮುದಾಯವಿದೆ. ಕೊಂಚ ದೂರದಲ್ಲಿ ಭೈರೇನಹಳ್ಳಿ ಇದೆ. ಈ ಹೆಸರು ಭೈರವಾರಾಧನೆಯಿಂದ ಇಲ್ಲವೆ ಈ ಪ್ರದೇಶವನ್ನು ಆಳಿದ ರಣಭೈರೇಗೌಡನಿಂದ ಬಂದಿದೆ.   ಕೊರಟಗೆರೆ ಪಾಳೇಗಾರರು ಭೈರವಾರಾಧಕರಾಗಿದ್ದರು. ಅವರ  ಹೆಸರಲ್ಲಿ ಭೈರವ ಶಬ್ದ ತಪ್ಪದೆ ಬರುತ್ತದೆ. ಈಗಲೂ ತುಮಕೂರು ಸೀಮೆಯ  ಜನರ ಜನಪ್ರಿಯ ಹೆಸರೆಂದರೆ ಸಿದ್ಧಯ್ಯ. ಇವೆಲ್ಲ ಆಧಾರಗಳು ಇದೊಂದು ಸಿದ್ಧರ ಸೀಮೆಯೆಂದು ಸಾಬೀತು ಮಾಡುತ್ತವೆ. ಆದರೆ ಈ ಸಿದ್ಧರು ಕಾಪಾಲಿಕರೊ ನಾಥರೊ ನಿಶ್ಚಯವಾಗಿ ಹೇಳಲಾಗದು. ಇಲ್ಲಿ ಚುಂಚನಗಿರಿಯಲ್ಲಿ ಇರುವಂತೆ ನಾಥಮಠವಿದ್ದ ಕುರುಹುಗಳಿಲ್ಲ. ಹಾಗೆ ಕಂಡರೆ ಈ ಪರಿಸರವು ಚುಂಚನಗಿರಿಗೆ ಬಹಳ ದೂರವಿಲ್ಲ.

ಸಿದ್ಧರಬೆಟ್ಟದ ಕೆಳಗೆ ಕಾಡಸಿದ್ಧಯ್ಯನ ಪಾಳ್ಯ ಎಂಬ ಊರಿದ್ದು ಅಲ್ಲಿ ಸಿದ್ಧಯ್ಯನ ಮಠವಿದೆ. ಅಲ್ಲೇ ಆರೂಢಿೊಎಂಬ ಹಳ್ಳಿಯಿದೆ. ಅಲ್ಲಿ ವೆಂಕಾವಧೂತ ಎಂಬ ಯೋಗಿಯಿದ್ದನು. ಸಿದ್ಧ, ಆರೂಢಿ ಅವಧೂತ ಎಲ್ಲವೂ ಒಂದೇ ಲೋಕದ ಶಬ್ದಗಳು. ಸಿದ್ಧರಬೆಟ್ಟದ ಬುಡದಲ್ಲಿರುವ ಮಠದಲ್ಲಿ ಅಮ್ಮಾಜಮ್ಮ ಎಂಬ ಯೋಗಿನಿ ಇದ್ದಳು. ಬೆಟ್ಟವು ಮೊದಲು ನಾಥರದಾಗಿದ್ದು, ನಂತರ ಸ್ಥಳೀಯ ಅವಧೂತರ ಜಾಗವಾಗಿ ಬದಲಾಗಿರಬಹುದು. ಮುಂದೆ ಈ ಪರಿಸರದೊಳಗೆ ತೋಂಟದ ಸಿದ್ಧಲಿಂಗಯತಿ ಪ್ರವೇಶಿಸಿದ ಹಾಗೆ ತೋರುತ್ತದೆ. ‘ನಿರಂಜನ ವಂಶರತ್ನಾಕರ’ ಬಣ್ಣಿಸುವಂತೆ, ಸಿದ್ಧಲಿಂಗನು ‘‘ಜೋಗಿನಾಥರು ಸಿದ್ಧರು ವೈಷ್ಣವ ಬೌದ್ಧ ಜೈನ ಚಾರ್ವಾಕ, ಕಾಳಾಮುಖ, ಮುಂತಾದವರಂ ಶಾಸ್ತ್ರಮುಖದಿಂ ಗೆಲಿದು’’, ಸೋತವರಿಗೆ ಲಿಂಗಧಾರಣೆ ಮಾಡುತ್ತ ಬರುತ್ತಾನೆ. ಚರಿತ್ರೆಯ ಒಂದು ಘಟ್ಟದಲ್ಲಿ ಪ್ರಬಲವಾಗಿ ಬೆಳೆದ ವೀರಶೈವವು ನಾಥವೆ ಮೊದಲಾದ ತಾಂತ್ರಿಕ ಯೋಗಪಂಥಗಳ ವಿಷಯದಲ್ಲಿ, ಆಕ್ರಮಣಕಾರಿಯಾಗಿ ವರ್ತಿಸಿರುವುದರಲ್ಲಿ ಯಾವ ಶಂಕೆಯೂ ಇಲ್ಲ. ಹೀಗಾಗಿ ಒಂದೇ ಸಿದ್ಧಕ್ಷೇತ್ರದಲ್ಲಿ ನಾಥ, ಕಾಪಾಲಿಕ, ಆರೂಢ ಹಾಗೂ ಶೈವ ಎಲ್ಲವೂ ಪದರ ಪದರಗಳಾಗಿ ಸಿಗುತ್ತವೆ.

ನಿಜಗಲ್ಲಿನಲ್ಲಿ(ನೆಲಮಂಗಲ) ಒಂದು ಸಿದ್ಧರಬೆಟ್ಟವಿದೆ. ಇದು ಬೂದಗಾವಿ ಸಿದ್ದರಬೆಟ್ಟಕ್ಕಿಂತ ದುರ್ಗಮ ಪ್ರದೇಶದಲ್ಲಿದೆ. ಇದು ಚುಂಚನಗಿರಿಗೆ ಸಮೀಪವಿದೆ.  ಗುಹೆಗಳಿರುವ ಈ  ಬೆಟ್ಟದಲ್ಲಿ ಯಾವ ಸಿದ್ಧರಿದ್ದರು ಎಂದು ಗೊತ್ತಾಗುವುದಿಲ್ಲ. ಇಲ್ಲಿಗೆ ದಲಿತರು ಹೆಚ್ಚಾಗಿ ಬರುತ್ತಾರೆ. ಇಲ್ಲಿ ಭೈರವಾರಾಧನೆಯಿದೆ. ಬಲಿಯಿದೆ. ಬೆಟ್ಟದ ಕೆಳಗೆ ಸೂಫಿ ದರ್ಗಾವಿದೆ. ಬೋಳನಹಳ್ಳಿಯಲ್ಲಿ (ಕಡೂರು) ಒಂದು ಸಿದ್ಧರಬೆಟ್ಟವಿದೆ. ಬೆಳಗೆರೆ ಕೃಷ್ಣಶಾಸ್ತ್ರಿಯವರು ಬರೆದ ಮುಕುಂದೂರು ಸ್ವಾಮಿಗಳ ಜೀವನ ಚರಿತ್ರೆಯಲ್ಲಿ  (‘ಯೇಗ್ದಾಗೆಲ್ಲಾ ಐತೆ’) ಇದರ ಪ್ರಸ್ತಾಪ ಬರುತ್ತದೆ. ಇಲ್ಲಿ ಗುಹೆಗಳಿದ್ದು ಅದರಲ್ಲಿ ಕೆಲವು ಸಿದ್ಧರು ಇದ್ದುದನ್ನು ಅವರು ದಾಖಲಿಸುತ್ತಾರೆ. ಚಿತ್ರದುರ್ಗದ ಬೆಟ್ಟಗಳಲ್ಲಿರುವ ಸಿದ್ಧಯ್ಯನ ಬೆಟ್ಟವು ನಾಥರಿಗೆ ಸಂಬಂಧಿಸಿದ್ದು.

ಸಿದ್ಧರಬೆಟ್ಟಗಳಂತೆ ಜೋಗಿಗುಡ್ಡ ಜೋಗಿಮಟ್ಟಿ ಜೋಗಿಕೊಳ್ಳಗಳೂ ಇವೆ. ಇವು ಹೆಚ್ಚಾಗಿ ನಾಥರಿಗೇ ಸಂಬಂಧಪಟ್ಟವು. ಇವುಗಳಲ್ಲಿ ಚಿತ್ರದುರ್ಗದ ಬೆಟ್ಟ ಶ್ರೇಣಿಯಲ್ಲಿರುವ ಜೋಗಿಮಟ್ಟಿಯೂ ಒಂದು. ಮಟ್ಟಿ ಎಂದರೆ ಎತ್ತರದ ದಿನ್ನೆ. ಆದರೂ ಜೋಗಿಮಠವೇ  ಜೋಗಿಮಟ್ಟಿ ಆಗಿರುವ ಸಾಧ್ಯತೆ ಹೆಚ್ಚಿದೆ. ಇದೇ ಶ್ರೇಣಿಯ ಒಂದು ಬೆಟ್ಟದಲ್ಲಿ  ‘ಜೋಗಜನಮಟ’ ಎಂಬ ಬರೆಹವುಳ್ಳ ಗುಹೆಯನ್ನು ಬಿ.ರಾಜಶೇಖರಪ್ಪ ಶೋಧಿಸಿದ್ದಾರೆ. ಇಲ್ಲಿನ ‘ಮಟ’ವು ಮಠದ ಸವೆರೂಪ. ಜೋಗಿಮಟ್ಟಿಯು ಎತ್ತರದ ಗುಡ್ಡವಾಗಿದ್ದು, ಅದರ ಮೇಲೆ ಜೋಗಿಯೊಬ್ಬನ ಸಮಾಧಿಯಿದೆ. ಮುಂದೆ ತ್ರಿಶೂಲವನ್ನು ನೆಡಲಾಗಿದೆ. ಅದರ ಮೇಲೊಂದು ಪ್ರಾಚೀನ ಕಲ್ಲು ಮಂಟಪವಿದೆ. ಕೆಳಗೆ ಸಿದ್ದವ್ವನಹಳ್ಳಿ ಇದೆ. ಕಾಪಾಲಿಕ ಸಮುದಾಯ ಇರುವ   ಉಪನಾಯಕನಹಳ್ಳಿ ಇದೆ.  ಆದರೆ ಜೋಗಿಮಟ್ಟಿಯ ಪರಿಸರದಲ್ಲಿ ಜೋಗಿಯ ಬಗ್ಗೆ ಜನರಲ್ಲಿ ಯಾವ ನೆನಪುಗಳೂ ಇದ್ದಂತಿಲ್ಲ.

. ಸಿದ್ಧರ ಹಾಗೂ ಜೋಗಿಯ ಮಠಗಳು

ಸಿದ್ಧರ ಬೆಟ್ಟಗಳ ಹಾಗೆ ಸಿದ್ಧರಮಠ ಹಾಗೂ ಜೋಗಿಮಠಗಳೂ ಇವೆ. ಇವುಗಳಲ್ಲಿ  ಕೊಪ್ಪದ ಹತ್ತಿರವಿರುವ ಕಲ್ಲಾರುಸುಳಿ ಸಿದ್ದರಮಠವೂ ಒಂದು. ಕಲ್ಲಾರುಸುಳಿ ಇಲ್ಲಿ ಹರಿಯುವ ಹಳ್ಳದ ಜಾಗದ ಹೆಸರೆಂದು ತೋರುತ್ತದೆ. ಈಗ ಸಿದ್ಧರಮಠ ಎಂಬುದೇ ಊರ ಹೆಸರಾಗಿದೆ. ಈ ಭಾಗದ ಜನರ ಜೀವನದಲ್ಲಿ ಸಿದ್ಧರಮಠಕ್ಕೆ ಶ್ರದ್ಧೆಯಿಂದ ನಡೆದುಕೊಳ್ಳುವ ದೊಡ್ಡ ಜನಸಂಖ್ಯೆಯಿದೆ. ಈ ಭಾಗದ ದಲಿತರಲ್ಲಿ ಸಿದ್ಧ ಭೈರ ಎಂಬ ಹೆಸರುಗಳು ಪ್ರಾಯಃ ಈ ಮಠಕ್ಕೆ ನಡೆದುಕೊಳ್ಳುವುದರಿಂದ ಬಂದವು. ಕುವೆಂಪು ಕಾದಂಬರಿಗಳಲ್ಲಿ ಕಾಯಿಲೆ ಬಿದ್ದವರಿಗೆ ಸಿದ್ದರಮಠದಿಂದ ಬೂದಿತಾಯಿತ ತರುವ, ಅಂತ್ರ ತಂದು ಕಟ್ಟುವ ಪ್ರಸ್ತಾಪ  ಬರುತ್ತದೆ. ಅದೇ ಮಠವಿದು.  ಕದ್ರಿಯ ಝುಂಡಿ ಹಾದು ಹೋಗುವ ಪಥದ ಆಸುಪಾಸಲ್ಲೆ ಈ ಸಿದ್ಧರಮಠವಿದೆ. ಕುವೆಂಪು ಕಾದಂಬರಿಗಳಲ್ಲಿ ಮನೆಬಿಟ್ಟು ಹೋದವರು ಜೋಗಿಯವರ ಜತೆ  ತಿರುಗಾಡಿಕೊಂಡಿರುವ ಪ್ರಸ್ತಾಪ ಬರುತ್ತದೆ. ಆ ಜೋಗಿಗಳು ಬಹುಶಃ ಕದ್ರಿಗೆ ಹೋಗಿಬರುತ್ತಿದ್ದ ನಾಥರು. ಜತೆಗೆ ಈ ಭಾಗದಲ್ಲಿ ಭೈರವಾರಾಧನೆಯಿದ್ದು, ಕಿನ್ನರಿಜೋಗಿಗಳು ಇದ್ದಾರೆ.

ಸಿದ್ಧರಮಠವು ಮೂಲತಃ ಒಬ್ಬ ಸಿದ್ಧನ ಸಮಾಧಿ. ಆದರೆ ಆ ಸಿದ್ಧನ ಬಗ್ಗೆ ಯಾವ ಮಾಹಿತಿಯೂ ಸಿಗದು. ಈಗ ಆ ಸಮಾಧಿಯ ಮೇಲೆ ಲಿಂಗವಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಸಮಾಧಿಯ ಮೇಲಿದ್ದ ದುಂಡನೆ ಕಪ್ಪುಕಲ್ಲೂ ಸೇರಿದಂತೆ ಅನೇಕ ವಸ್ತುಗಳನ್ನು ಹತ್ತಿರದ ಹಳ್ಳದಲ್ಲಿ ವಿಸರ್ಜನೆ ಮಾಡಲಾಯಿತು ಎಂದು ಜನ ಹೇಳುತ್ತಾರೆ. ಆದರೂ ಸಿದ್ಧರ ಚಿಹ್ನೆಗಳನ್ನು ಕಳೆಯಲು ಆಗಿಲ್ಲ. ಸಮಾಧಿ ಚಂದ್ರಾಯುಧ ಕೈಗತ್ತಿ ಖಡ್ಗ ಬೆತ್ತ ಪಾದುಕೆಗಳು ತ್ರಿಶೂಲ ನವಿಲುಗರಿ ಕಂತೆ ಹಾಗೂ ಇದರ ಮೇಲೆ ಇಟ್ಟಿರುವ ಕತ್ತರಿಸಿದ ತಲೆ (ಕಪಾಲ?)- ಇವು ಈಗಲೂ ಇವೆ. ಮಠದ ಬಗ್ಗೆ ಕೆರಗೇಸಿಯ ಸುಬ್ರಾಯರು (೮೫) ಹೇಳಿದ ಪ್ರಕಾರ, ಸಿದ್ಧರಮಠವು ಶಿವಪ್ಪನಾಯಕನ ಕಾಲದಿಂದಲೂ ಇರುವ ಲಿಂಗಾಯತರ ಮಠ. ಇದಕ್ಕೆ ಪೂಜೆ ಮಾಡುತ್ತಿದ್ದವರು ಲಿಂಗಾಯತರು. ಇಲ್ಲಿನ ಒಕ್ಕಲಿಗರೂ ದಲಿತರೂ ಇದಕ್ಕೆ ಭಕ್ತರಾಗಿದ್ದರು. ತರೀಕೆರೆ ಕಡೆಯಿಂದ ಜಂಗಮರ ಕುಟುಂಬವನ್ನು ಕರೆದುತಂದು ಪೂಜೆಗೆ ನೇಮಿಸಲಾಗುತ್ತಿತ್ತು. ಆದರೆ ಲಿಂಗಾಯತರಿಲ್ಲದ ಪರಿಸರದಲ್ಲಿ ಇಲ್ಲಿನ ಮಳೆಗಾಲವನ್ನು ತಡೆಯಲಾಗದೆ, ಆ ಕುಟುಂಬಗಳು ಬಿಟ್ಟುಹೋಗುತ್ತಿದ್ದವು. ಕೊನೆಗೆ ಜಂಗಮರನ್ನು ನೆಲೆನಿಲ್ಲಿಸಲು ಸಾಧ್ಯವಾಗದೆ ಹೋದಾಗ, ಸ್ಥಳೀಯ ಬ್ರಾಹ್ಮಣರನ್ನೇ ಪೂಜೆಗೆ ನೇಮಕ ಮಾಡಲಾಯಿತು. ಬ್ರಾಹ್ಮಣರು ಸಿದ್ಧರ ಸಮಾಧಿಗೆ ಪೂಜೆಮಾಡುವುದು ಕಷ್ಟವಾಗಲು, ಆಗಮೋಕ್ತವಾಗಿ ಲಿಂಗಪ್ರತಿಷ್ಠಾಪನೆ ಮಾಡಲಾಯಿತು. ಈಗಿರುವಂತೆ ಅದು ಸಮಾಧಿಯೂ ಹೌದು. ಲಿಂಗವೂ ಹೌದು. ನಾಥ ಮಠಗಳು ಶೈವಸಂಸ್ಕೃತಿಗೆ ಸೇರುವುದರಿಂದ ಅವನ್ನು ಲಿಂಗಾಯತೀಕರಣ ಮಾಡುವುದು ಸುಲಭ. ಇಂತಹ ಶೈವಸ್ಥಾನಗಳಲ್ಲಿ ಸ್ಮಾರ್ತಬ್ರಾಹ್ಮಣರು ಪ್ರವೇಶಿಸುವುದು ಕೂಡ ಸುಲಭ.

ಸಿದ್ಧರಮಠ ಎಂದು ಹೆಸರಾಗಿರುವ ಈ ಗುಡಿಯು, ಹೆಸರೇ ಸೂಚಿಸುವಂತೆ, ಒಂದು ಕಾಲಕ್ಕೆ ಬಹುಶಃ ನಾಥಸಿದ್ಧರಿದ್ದ ಮಠವಾಗಿತ್ತು. ಇಲ್ಲಿ ಗುಡಿ ಮತ್ತು ಮಠಗಳಿಗೆ ವ್ಯತ್ಯಾಸ ಕಡಿಮೆ. ಇಲ್ಲೇ ಇರುವ ಕಟಗಾರುಮಠ ಎಂಬಲ್ಲಿ ಇರುವುದು ಭೈರವನ ಗುಡಿ. ಬಹುಶಃ ಅದು ಹಿಂದಿದ್ದ ಇನ್ನೊಂದು ಸಿದ್ಧರಮಠವೆಂದು ಊಹಿಸಬಹುದು. ಕಲ್ಲಾರುಸುಳಿ ಸಿದ್ಧರ ಮಠವು ಹಲವು ಕೋಣೆಗಳಿರುವ ಹೆಂಚಿನ ದೊಡ್ಡ ತೊಟ್ಟಿಮನೆ. ನಟ್ಟನಡುವೆ ಸಿದ್ಧನ ಸಮಾಧಿಯಿದೆ. ಸಮಾಧಿಯಾದ ನಂತರ ಈ ಕಟ್ಟಡ ಬಂದಿರಬಹುದು. ಸಿದ್ಧರಮಠಗಳು  ಸಿದ್ಧರ ಸಮಾಧಿಯ ಜಾಗಗಳೂ ಹೌದು. ಸೂಫಿಪಂಥದಲ್ಲೂ ಸೂಫಿಗಳ ಗೋರಿ ಹಾಗೂ ಮಠಗಳು  ಜತೆಯಲ್ಲಿರುತ್ತವೆ. ಆದರೆ ನಾಥರಲ್ಲಿ ಸಾಮಾನ್ಯವಾಗಿ ಸಮಾಧಿ ಪೂಜೆಯಿಲ್ಲ. ಸಿದ್ಧರ ಮಠಕ್ಕೆ ಸಮೀಪದ ಕಾಡಿನಲ್ಲಿ ಗುಹೆಗಳಿವೆಯೆಂದೂ ಅಲ್ಲಿ  ಸಿದ್ಧರು ವಾಸಿಸುತ್ತಿದ್ದರು ಎಂದೂ, ಈಗಲೂ ಕೆಲವರು ಸಿದ್ಧರಮಠದ ಜಾತ್ರೆಯ ಹೊತ್ತಲ್ಲಿ ಆ ಗುಹೆಗಳಿಗೆ ಹೋಗಿ ಪೂಜೆ ಮಾಡಿಬರುತ್ತಾರೆಂದೂ ಸ್ಥಳೀಯರು ಹೇಳಿದರು.

ದಾಸರಹಳ್ಳಿಯಲ್ಲಿ (ಚಿಕ್ಕಮಗಳೂರು)  ಒಂದು ಸಿದ್ಧರಮಠವಿದೆ. ಇದು ಕೂಡ ಒಬ್ಬ  ಅಜ್ಞಾತ ಸಿದ್ಧನ ಸಮಾಧಿ. ಸಮಾಧಿಗೆ ಕೊಂಚ ದೂರದಲ್ಲಿ ಕೆಂಚರಾಯನ ಭೂತವಿದ್ದು ಅಲ್ಲಿ ಬಲಿ ಕೊಡಲಾಗುತ್ತದೆ. ಮಠದ ಬಾಗಿಲಲ್ಲಿ ಹಳೆಯ ತ್ರಿಶೂಲ ಇದೆ. ಸಮಾಧಿ ಹಾಗೂ ತ್ರಿಶೂಲಗಳು  ನಾಥರ  ಲಕ್ಷಣ. ದಾಸರಹಳ್ಳಿ ಸಿದ್ಧರಮಠವು ಬಾಬಾ ಬುಡನಗಿರಿ ಶ್ರೇಣೀಯಲ್ಲಿರುವ ನಿರ್ವಾಣಸ್ವಾಮಿಮಠ, ಬಿಸಗ್ನಿಮಠ, ಕಾನು ಸಿದ್ಧರಮಠ, ಫಲಾಹಾರಮಠ, ಮುಳ್ಳಯ್ಯನಗಿರಿ, ಶೀತಾಳಯ್ಯನಗುಡಿ ಮುಂತಾದ ಪ್ರಸಿದ್ಧ ಸಿದ್ಧರ ಜಾಗಗಳಿಂದ ಸುತ್ತುವರೆದಿದೆ. ಬಾಬಾಬುಡನಗಿರಿಯೂ ಸೂಫಿ ಹಾಗೂ ದತ್ತಪಂಥದ ಯೋಗಿಗಳಿದ್ದ ಜಾಗವಷ್ಟೆ. ಈ ಭಾಗದ ಸಿದ್ಧರ ಗದ್ದುಗೆಗಳಲ್ಲಿ ಜಂಗಮ ಅರ್ಚಕರಿದ್ದಾರೆ.  ಆದರೂ ಇವು ವೀರಶೈವ ಪರಂಪರೆಯ ಮಠ ಹಾಗೂ ಗದ್ದುಗೆಗಳಲ್ಲ. ಇಲ್ಲಿ ಭೈರವಾರಾಧನೆ ಇದೆ. ಶಕ್ತಿದೇವತೆಗಳಿಗೆ ಬಲಿಯಿದೆ. ಫಲಾಹಾರಮಠ, ಬಿಸಗ್ನಿಮಠ ಹಾಗೂ ನಿರ್ವಾಣಸ್ವಾಮಿ ಮಠಗಳು ಲಿಂಗಾಯತೀಕರಣ ಪಡೆದಿದ್ದರೂ, ಅವುಗಳ ಒಳಗಿಂದ ಬೇರೆ ಪಂಥದ ಲಕ್ಷಣಗಳು ಹೊರಗೆ ಇಣುಕುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ಹಲಸುಬಾಳಿನ ಫಲಾಹಾರ ಮಠದ ಶಾಸನಗಳಲ್ಲಿ  ‘‘ನವನಾಥ ಸಿಧರಕ್ಷಾ’’ ಎಂಬ ಮಾತಿದೆ. ಆದರೂ ಇದು ಪ್ರಾಸಂಗಿಕವಾಗಿ ಬರುವ ಮಾತು ಹಾಗೂ ಈ ಭಾಗದಲ್ಲಿ ನಾಥಪಂಥವು ಇದ್ದ ಆಧಾರವೇನಲ್ಲ. ಈ ಮಠವು ವೀರಶೈವ ಮಠವಾಗಿ ರೂಪಾಂತರವಾಗಿದ್ದರೂ ಇಲ್ಲಿನ ಭಕ್ತರು ದಲಿತರು, ಒಕ್ಕಲಿಗರು ಹಾಗೂ ಮರಾಠಿಗರು. ಮಾಂಸಾಹಾರಿಗಳಾದವರು. ಅವರು ಈಗಲೂ ಬಲಿಕೊಡುತ್ತಾರೆ. ಇಲ್ಲಿಗೆ ಸಮೀಪ ಇರುವ ಘಾಳಿಪೂಜಿ ಕೆಂಚರಾಯನು ಮೂಲತಃ ಭೈರವನು.  ಫಲಾಹಾರ ಮಠದ ಆವರಣದಲ್ಲಿ ನರಬಲಿಯ ಫಲಕವಿದೆ. ಈಗಲೂ ಚಿಕ್ಕಮಗಳೂರು ಸುತ್ತಮುತ್ತಲಿನ ಒಕ್ಕಲಿಗರು ಭೈರವಾರಾಧಕರು. ಇಲ್ಲಿನ ನಿರ್ವಾಣಸ್ವಾಮಿ ಮಠದಲ್ಲಿ ಕಿನ್ನರಿ ಬಾರಿಸುತ್ತಿರುವ ಭೈರವನ ಮೂರ್ತಿಯಿದೆ. ಇಲ್ಲಿಗೆ ಸಮೀಪದಲ್ಲಿ ಇರುವ ಬಿಸಗ್ನಿಮಠ ಕೂಡ ಭೈರವಾರಾಧನೆಯ ಮಠವಾಗಿತ್ತು. ಬಿಸಗ್ನಿಯು ನಾಥರ ಧುನಿಯಾಗಿರುವ ಸಾಧ್ಯತೆಯಿದೆ. ಇಲ್ಲಿ ಬಿಸಗ್ನಿಸಿದ್ಧೇಶ್ವರ ಎಂಬ ಯೋಗಿಯ ಸಮಾಧಿಯಿದೆ. ಈತ ನಿರ್ವಾಣಸ್ವಾಮಿಗೆ ಅಣ್ಣನಾಗಬೇಕು ಎನ್ನುತ್ತಾರೆ. ಮಠದ ಅವರಣ ದಲ್ಲಿ ಪ್ರಾಚೀನವಾದ ಏಕಶೂಲ ತ್ರಿಶೂಲಗಳಿವೆ. ಭೈರವ, ಆಂಜನೇಯ ಹಾಗೂ ವೀರಭದ್ರರ ಮೂರ್ತಿಗಳಿವೆ. ಇದಕ್ಕೆ ಚಿತ್ರದುರ್ಗ ದಾವಣಗೆರೆ ಚನ್ನಗಿರಿ ಕಡೆಯ ಭಾವಸಾರ ಕ್ಷತ್ರಿಯರು ಮುಖ್ಯ ಭಕ್ತರು. ಅವರು ಗದ್ದುಗೆಯನ್ನು ಪ್ರವೇಶಿಸುವ ಮುನ್ನವೆ ದ್ವಾರ ದಲ್ಲಿರುವ ಚೌಡಿಗೆ ಬಲಿಕೊಡುತ್ತಾರೆ. ಗುಡಿಯ ಮುಂದೆ ಹಸಿರಕ್ತದ ಕಲೆಗಳು ಯಾಾಗಲೂ ಇರುತ್ತವೆ. ಫಲಾಹಾರ ಮಠದಲ್ಲೂ ಮಠದ ಬಾಗಿಲಲ್ಲಿರುವ ಚೌಡಿಗೆ ಮರಾಠಾ ಭಕ್ತರು ಬಲಿಕೊಡುತ್ತಾರೆ. ಆದರೆ ಬಿಸಗ್ನಿಸಿದ್ಧನ ಗದ್ದುಗೆಯ ಪೂಜೆ ಜಂಗಮರದ್ದು. ಫಲಾಹಾರ ಮಠದಲ್ಲಿಯೂ ಜಂಗಮರದ್ದು. ಸಿದ್ಧರ ಗದ್ದುಗೆ,  ಜಂಗಮರ ಪೂಜೆ, ಮರಾಠ ಭಕ್ತರ ಬಲಿ, ಭೈರವ ಮೂರ್ತಿಗಳು ಇವೆಲ್ಲವೂ ವಿಚಿತ್ರ ಅನಿಸುತ್ತದೆ.

ಬಿಸಗ್ನಿ ಮಠದ ನಿರ್ವಾಣಯ್ಯನವರಿಗೆ ‘ನೀವು ನೋಡಿದರೆ ಜಂಗಮರು. ಇಲ್ಲಿ ಬಲಿ ಹೇಗೆ ಬಂತು?’ ಎಂದು ಕೇಳಿದಾಗ, ‘ಮೊದಲಿಂದಲೂ ನಡೆದುಬಂದಿದೆ. ಭಕ್ತರು ಮಾಡುವದನ್ನೆಲ್ಲೊಸಹಿಸಬೇಕು’ ಎಂದು ಉತ್ತರಿಸಿದರು. ಬಲಿಪದ್ಧತಿಯಿದ್ದ ಸಿದ್ಧರ ಗದ್ದುಗೆ ಗಳಿಗೆ ಜಂಗಮರ ಉಸ್ತುವಾರಿ ಹೇಗೆ ಸಾಧ್ಯವಾಯಿತು? ಬಹುಶಃ ನಾಥ ಕಾಪಾಲಿಕ ಪಂಥಗಳ ಭೈರವರಾಧನೆ ಇದ್ದ ಈ ಜಾಗಗಳು, ಕಾಪಾಲಿಕರ ಉಸ್ತುವಾರಿಯಲ್ಲಿದ್ದವು. ಮುಂದೆ ವೀರಶೈವ ಮತದ ಆಕ್ರಮಣ ಬಂದಾಗ, ಇವರೆಲ್ಲ ಲಿಂಗಾಯತರಾದರು. ಆಗ ಮೊದಲಿದ್ದ ಭೈರವನ ಜತೆ ವೀರಭದ್ರನು ಬಂದು ಸ್ಠಾಪಿತನಾದನು ಎಂದು ಊಹಿಸಬಹುದು. ದತ್ತಪಂಥದ ಮೂಲಕ ನಾಥಪಂಥಕ್ಕೆ ಲಗತ್ತಾದ ಮರಾಠಿಗರು ಮಾತ್ರ ಇವು ಲಿಂಗಾಯತೀಕರಣ ಪಡೆದರೂ ತಮ್ಮ ಮೂಲ ಆಚರಣೆಗಳನ್ನು ಕೈಬಿಟ್ಟಿಲ್ಲ.

ನಾಥಮಠಗಳನ್ನು ಸಾಮಾನ್ಯವಾಗಿ ಜೋಗಿಮಠಗಳೆಂದೇ ಕರೆಯುವ ವಾಡಿಕೆಯಿದೆ. ಕದ್ರಿ ಹಾಗೂ ವಿಟ್ಲದ ನಾಥಮಠಗಳು ಸ್ಥಳೀಯರ ಬಾಯಲ್ಲಿ ಈಗಲೂ ಜೋಗಿಮಠಗಳೇ.  ಸಿದ್ಧಾಪುರ ತಾಲೂಕಿನ ಜೋಗ ಜಲಪಾತದ ಬಳಿ, ಜೋಗಿನಮಠ ಎಂಬ ಊರಿದೆ. ಇದು ತ್ರ್ಯಂಬಕ-ಕದ್ರಿ ಪಥದಲ್ಲಿದೆ.  ಜೋಗದ ಸುತ್ತಮುತ್ತ ಇರುವ ಸಿದ್ಧಾಪುರ ಕೊಡಚಾದ್ರಿ ಚಂದ್ರಗುತ್ತಿ ಯಾಣಗಳು ನಾಥರ ಜಾಗಗಳು. ಆದರೆ ಈಗ ಜೋಗಿನಮಠದಲ್ಲಿ ಮಠವಿಲ್ಲ. ಇಲ್ಲಿ ಬೀಳುವ  ಧಾರಾಕಾರ ಮಳೆ ಹಾಗೂ ದಟ್ಟಕಾಡು ಬಹುಶಃ ಇಲ್ಲಿದ್ದ ಮಠವನ್ನು ಕಬಳಿಸಿಹಾಕಿರಬಹುದು. ಜೋಗಿನಮಠದಲ್ಲಿ ಐದಾರು ಮನೆಗಳು ಬಿಟ್ಟರೆ ಏನೂಇಲ್ಲ. ಕಾಂತೂರಿನಲ್ಲಿ(ಮಡಿಕೇರಿ) ಒಂದು ಜೋಗಿಮಠವಿದೆ.  ಅಲ್ಲಿ ಹಿಂದೆ ನಾಥಪಂಥಕ್ಕೆ ಒಕ್ಕಲು ಗಳಾಗಿದ್ದ ಒಕ್ಕಲಿಗರ ಉಸ್ತುವಾರಿಯಿದೆ ಎಂದು ಕೇಳಿ ಬಂದಿತು.

ಮಡಿಕೇರಿ ಬಳಿ ಗುಪ್ಪಿಮಠ ಅಥವಾ ಬಾವಾಜಿಮಠ ಎಂಬ ಮಠವಿದೆ. ಮಠ ಪಾಳು ಬಿದ್ದಿದ್ದು,  ಬಾವಾಜಿಗಳ ಕಲ್ಲಿನ ಗೋರಿಗಳಿವೆ ಎಂಬ ಮಾಹಿತಿ ದಕ್ಷಿಣ ಕನ್ನಡ ಜಿಲ್ಲೆಯ ‘ಸಚಿತ್ರ ಚರಿತ್ರೆ ಮತ್ತು ಇತರ ಕಥೆಗಳು’ (೧೯೨೭) ಎಂಬ ಪಠ್ಯಪುಸ್ತಕದಲ್ಲಿ ದಾಖಲಾಗಿದೆ.  ಬಾವಾಜಿಗಳು ಎಂದರೆ ನಾಥರೆ. ವಿಟ್ಲಮಠ ಹಾಗೂ ಚುಂಚನಗಿರಿ ಮಠದ ನಡುವೆ ಬರುವ ಕೊಡಗಿನಲ್ಲಿ ನಾಥರು ಇದ್ದಿರಬಹುದು. ಈ ಭಾಗದಲ್ಲಿ ಭೈರರು ಎಂಬ ಭೈರವಾರಾಧಕ ಸಮುದಾಯವೂ ಇದೆ. ಅವರು ಬಂಟವಾಳ ತಾಲೂಕಿನ ಕಾಡುಮಠದಲ್ಲಿದ್ದಾರೆ.  ಈ ಕಾಡುಮಠ ಯಾವುದು?

. ಕೆಲವು ಸಿದ್ಧರು ಹಾಗೂ ಯೋಗಿಗಳು

ಮಹಾರಾಷ್ಟ್ರದಲ್ಲಿ ನಾಥಪಂಥದ ಜತೆ ನೇರ ಪ್ರಭಾವಕ್ಕೆ ಒಳಪಟ್ಟ ವಾರಕರಿ, ಮಹಾನುಭಾವ ಹಾಗೂ ದತ್ತ ಮುಂತಾದ ಸ್ಥಳೀಯ ಪಂಥಗಳಿವೆ. ವಾರಕರಿ ಪಂಥದ ಜ್ಞಾನೇಶ್ವರನು ನಾಥಪಂಥದ ನಿಜವಾದ ವಾರಸುದಾರ ಎಂದು ವಿದ್ವಾಂಸರು ಭಾವಿಸಿದ್ದಾರೆ.  ಇಂತಹ ರೂಪಾಂತರ ಮಾದರಿಯ ಪಂಥಗಳು ಕರ್ನಾಟಕದಲ್ಲಿ ಕಡಿಮೆ.  ಮಹಾರಾಷ್ಟ್ರದಲ್ಲಿ ನಾಥಪಂಥವು ವೈಷ್ಣವೀಕರಣಗೊಂಡಿತು. ಕರ್ನಾಟಕದಲ್ಲಿ ಅದು ಶೈವರೂಪವನ್ನು ಉಳಿಸಿಕೊಂಡಿತು. ಅದು ಇಲ್ಲಿದ್ದ ಮತ್ತೊಂದು ಶೈವವಾದ ಲಿಂಗಾಯತದ ಜತೆಗೆ ಸಂಘರ್ಷ ಮಾಡಬೇಕಾಯಿತು. ೧೨ನೇ ಶತಮಾನದ ಶರಣರು ನಾಥರಿಂದ ತಾತ್ವಿಕ ಪ್ರಭಾವಕ್ಕೆ ಒಳಗಾದರು. ಆದರೆ ಅವರು ನಾಥರನ್ನು ಭೇಟಿಯಾಗುವ ಹಾಗೂ  ಸಂವಾದ ಮಾಡುವ ಕಥನಗಳೆಲ್ಲ ವಿರೋಧವನ್ನೇ ಒಳಗೊಂಡಿವೆ. ನಾಥರ ಹತ್ತಿರದ ಸಂಬಂಧಿಗಳೆಂದರೆ ಯೋಗಸಾಧನೆ ಅವಲಂಬಿಸಿರುವ ಆರೂಢರು. ರೂಪ ಬದಲಿಸಿದ ನಾಥರಂತಿರುವ ಈ ಸಿದ್ಧರಲ್ಲಿ ಕೆಲವರನ್ನು  ಪರಿಶೀಲಿಸಬಹುದು.

ಚೌರಾಸಿ ಸಿದ್ಧರಲ್ಲಿ ಒಬ್ಬನೂ ಉತ್ತರ ಭಾರತದ ನಾಥ ಪರಂಪರೆಯಲ್ಲಿ ತನ್ನ ಚರ್ಯಾಗೀತೆಗಳಿಂದ ಪ್ರಸಿದ್ಧನೂ ಆದ  ಕಣ್ಹಪಾ  (ಕ್ರಿಶ.೯) ಒಬ್ಬ ಕನ್ನಡಿಗನು ಎಂದು ಶಂಬಾ ಭಾವಿಸುತ್ತಾರೆ. ಈತ  ಸಹಜಯಾನಿ ಸಿದ್ಧನಾಗಿದ್ದು, ಚೌರಾಸಿ ಸಿದ್ಧರಲ್ಲಿ ಒಬ್ಬನಾಗಿ ಕಾಣಿಸುತ್ತಾನೆ. ಈತ ಬರೆದ ಚರ್ಯಾಪದಗಳು ಜನಭಾಷೆಯಲ್ಲಿದ್ದು ತುಂಬ ಜನಪ್ರಿಯವಾಗಿವೆ.  ಅದರಲ್ಲಿ ಕಣ್ಹಪಾ ತನ್ನನ್ನು ಕಾಪಾಲಿಕನೆಂದು ಹೇಳಿಕೊಳ್ಳುತ್ತಾನೆ.  ಬೌದ್ಧತಾಂತ್ರಿಕ ಪಂಥಗಳೂ ಕಾಪಾಲಿಕ ಪಂಥವೂ ಬಂಗಾಲದಲ್ಲಿ ಒಂದಾಗುತ್ತಿದ್ದ ಕಾಲದಲ್ಲಿ ಇವನಿದ್ದನು. ಚೌರಾಸಿ ಸಿದ್ಧರ ಪಟ್ಟಿಯಲ್ಲಿರುವ ಕರ್ನಾಟಕದ ಇನ್ನಿಬ್ಬರೆಂದರೆ, ಅಲ್ಲಮ ಹಾಗೂ ರೇವಣಸಿದ್ಧರು. ಇವರನ್ನು  ನಾಥರು ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಮನ ಗುರು ಅನಿಮಿಷಯ್ಯನು ಮಚೇಂದ್ರನಾಥ ಎನ್ನುವ ವಾದವನ್ನು ಮರಾಠಿ ಹಿನ್ನೆಲೆಯುಳ್ಳ ಕನ್ನಡ ಚಿಂತಕರು ಮಾಡುತ್ತಾರೆ. ಇವರಲ್ಲಿ ಬೇಂದ್ರೆ, ರಂಶಾ ಲೋಕಾಪುರ, ಶಂಬಾ ಸೇರಿದ್ದಾರೆ.   ಅನಿಮಿಷ ಎಂದರೆ ರೆಪ್ಪೆಯಿಲ್ಲದ್ದು, ಅಂದರೆ ಮೀನು. ಅನಿಮಿಷಯ್ಯ ಎಂದರೆ ಮಚೇಂದ್ರ ಎಂಬುದು ಈ ವಾದಗಳ ನಂಬಿಕೆಯಾಗಿದೆ. ಅನಿಮಿಷಯ್ಯನು ಮಚೇಂದ್ರನೊ ಅಥವಾ ಮಚ್ಚೇಂದ್ರ ಪರಂಪರೆಯ ಯಾವುದೋ ಒಬ್ಬ ಸಿದ್ಧನೊ ಇನ್ನೂ ಖಚಿತವಾಗಬೇಕಿದೆ.  ಹರಿಹರ ತನ್ನ  ಪ್ರಭುದೇವರ ರಗಳೆಯಲ್ಲಿ, ಅಲ್ಲಮನು ನಿಜಸಿದ್ಧನಾದ ಅನಿಮಿಷಯ್ಯನನ್ನು ಕಾಣುವ ಭಾಗವನ್ನು ಉಜ್ವಲವಾಗಿ ತರುತ್ತಾನೆ. ‘ಕೀಲಿಸಿದ ಪದ್ಮಾಸನ. ಪುಲಿದೊವಲ್. ತನುವನಾಲಿಂಗಿಸಿದ ಭಸಿತಮಳ ಸೂತ್ರ. ಇಳಿದಜೆಡೆ ರುದ್ರಾಕ್ಷಿಮಾಲೆ ಫಣಿಕುಂಡಲಂ. ಕೆಯ್ಯಶಿವಲಿಂಗ’. ವಿಶೇಷ ಎಂದರೆ ಹರಿಹರನ ಅನಿಮಿಷಯ್ಯ ಲಿಂಗಧಾರಿ.  ಗುಡಿಸಂಸ್ಕೃತಿಯ ಹರಿಹರನಿಗೆ ಗುಡಿ ಹಾಗೂ ಶಿವಲಿಂಗಗಳನ್ನು ತ್ಯಜಿಸಿದ ಸಿದ್ಧನನ್ನು ಕಲ್ಪಿಸಿಕೊಳ್ಳಲು ಕಷ್ಟವಾಗಿರಬೇಕು. ಪ್ರಶ್ನೆಯೆಂದರೆ, ಮಚೇಂದ್ರನ ಶಿಷ್ಯರೇ ಆದ  ಗೋರಖ ಹಾಗೂ ಅಲ್ಲಮರು  ಶ್ರೀಶೈಲದ ಕದಳಿವನದಲ್ಲಿ ಪರಸ್ಪರ ವಾಗ್ವಾದ ಮಾಡುವ ಕಥನವು ಹುಟ್ಟಿ ಕೊಂಡಿದ್ದು ಹೇಗೆ ಎನ್ನುವುದು. ಇದಕ್ಕೆ ಉತ್ತರ ಕೊಡುವುದು ಕಷ್ಟ. ಮರಾಠಿ ನಾಥ ಪರಂಪರೆಯ ವಿದ್ವಾಂಸರಾದ ರಂಶಾ ಲೋಕಾಪುರ ಅವರಿಗೆ,  ಅಲ್ಲಮನು  ನಾಥಯೋಗಿ ಎಂಬ ಅಂಶವನ್ನು ಕನ್ನಡದ ವಿದ್ವಾಂಸರು ಬಚ್ಚಿಡುವ ಬಗ್ಗೆ ಬಹಳ ಸಿಟ್ಟಿದೆ. ಅವರ ಪ್ರಕಾರ ‘‘ನಾಥಪಂಥದ ಸಾಧನಾ ಪದ್ಧತಿ ಕನ್ನಡನಾಡಿನ ಮಟ್ಟಿಗೆ ಅಲ್ಲಮರ ಜತೆಗೇ ಹರಿ ಗಡಿಯಿತು’’;[5] ಕಪಟರಾಳರ ಪ್ರಕಾರ, ಅಲ್ಲಮನು ನಾಥಪಂಥೀಯನಾದರೂ ಅವನ ವಚನಗಳು ಇದನ್ನು ದೃಢೀಕರಿಸುವುದಿಲ್ಲ. ಮಹಾನುಭಾವ ಪಂಥದ ಸ್ಥಾಪಕನಾದ ಚಕ್ರಧರನ (ಕ್ರಿಶ.೧೩) ಗುರು ಗುಂಡಮ ರಾವೂಳ. ರಾವೂಳ ಎನ್ನುವುದು ವಾಯುವ್ಯ ಭಾರತದಲ್ಲಿ ನಾಥರ ಜನಪ್ರಿಯ ಹೆಸರು. ಗುಂಡಮ ಎಂಬ ಶಬ್ದದ ಕೊನೆಯಲ್ಲಿರುವ ಅಮ (ಅಮ್ಮ) ಎಂದರೆ, ಕನ್ನಡದಲ್ಲಿ ಅಪ್ಪ ಎಂದರ್ಥ. ಈ ‘ಅಮ’ ಅಲ್ಲಮದಲ್ಲೂ ಇದೆ. ಆದ್ದರಿಂದ ಗುಂಡಮ ಕನ್ನಡಿಗನು ಎಂದು ಶಂಬಾ ಜೋಶಿ ಪ್ರತಿಪಾದಿಸುತ್ತಾರೆ.[6]

ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ (೧೨೭೯)ಶಾಸನದಲ್ಲಿ ಪ್ರಸಾದದೇವ ಎಂಬ ಯತಿಯ ವರ್ಣನೆಯಿದೆ. ಇದರಲ್ಲಿ ಗೋರಖನಾಥ ಚತುರಂಗಿನಾಥ ಹಾಗೂ ಕಲ್ಯಾಣದ ಶರಣರ ಉಲ್ಲೇಖವಿದೆ. ಈ ಶಾಸನದ ಆಧಾರದಿಂದ ಕಪಟರಾಳರು ಬಸವಣ್ಣನು ನಾಥ ಪಂಥದ ಅನುಯಾಯಿ ಎಂದು ಅವಸರಪಟ್ಟು ಊಹಿಸುತ್ತಾರೆ.[7] ಜಗಳೂರು ಪರಿಸರದಲ್ಲಿದ್ದ ಲುಂಕೆಮಲೆ ಹಾಗೂ ಹುಲಿಗೊಂದಿಯ ಮಠಗಳು ಹಳೆಯ ಕಾಪಾಲಿಕ ಹಾಗೂ ನಾಥರ ಕೇಂದ್ರಗಳು. ಪ್ರಸಾದದೇವ ಸಹಜವಾಗಿ ನಾಥಪಂಥದ ಪ್ರಭಾವಕ್ಕೆ ಒಳಗಾಗಿರಬಹುದು. ಆದರೆ ಅವನೊಬ್ಬ ನಾಥನೆಂಬ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಶರಣರಿಗೂ ಮಹಾನುಭಾವರಿಗೂ ನಾಥಪಂಥದ ಪ್ರೇರಣೆ ಹೇಗೆ ಆಗಿತ್ತೆಂಬ ಬಗ್ಗೆ ಬಹಳ ವಿದ್ವತ್ ಪೂರ್ಣವಾದ ಬರೆಹವನ್ನು ಮಾಡಿದವರು ಶಂಕರಮೊಕಾಶಿ ಪುಣೇಕರರು. ಅವರ ಪ್ರಮೇಯಗಳು ಆಳವಾದ ಪರಿಶೀಲನೆಗೆ ಅರ್ಹವಾಗಿವೆ.[8]

ವಡಬಾಳದ ನಾಗನಾಥನ ಸಮಾಧಿ ಮಹೋಳದಲ್ಲಿ (ಸೊಲ್ಲಾಪುರ) ಇದೆ. ಮರಾಠಿ ದತ್ತ ಪರಂಪರೆಯ ಪ್ರಕಾರ ಈತ ದತ್ತಾತ್ರೇಯನ ಶಿಷ್ಯ. ಕನ್ನಡ ಸಿದ್ಧ ಪರಂಪರೆಯ ಪ್ರಕಾರ ಈತನು ಮಾಡ್ಯಾಳ (ಆಳಂದ)ದವನು. ಮಹೋಳವು ಕನ್ನಡ ಪ್ರದೇಶವಾಗಿದ್ದು, ನಾಗನಾಥನ ಸಮಾಧಿಯನ್ನು ಲಿಂಗಾಯತರು ಪೂಜಿಸುತ್ತಾರೆ. ನಾಗನಾಥನು ಮಚೇಂದ್ರನನ್ನು ಮುಖಾಮುಖಿ ಮಾಡಿದ ಪ್ರಸಂಗವು ಮರಾಠಿಯಲ್ಲಿ ಖ್ಯಾತವಾಗಿದೆ. ಒಮ್ಮೆ ನಾಗನಾಥನು ಯೋಗಸಾಧನೆಯಲ್ಲಿ ತೊಡಗಿರುವಾಗ ಮಚೇಂದ್ರ ಆಗಮಿಸುತ್ತಾನೆ.  ದ್ವಾರಪಾಲಕರು ಅವನನ್ನು ತಡೆದು ನಿಲ್ಲಿಸುತ್ತಾರೆ. ಯೋಗಿಗಳನ್ನು ನೋಡಲು ದ್ವಾರಪಾಲರ ಅನುಮತಿ ಯಾಕೆ, ಅವರೇನು ರಾಜರೇ ಎಂಬುದು ಮಚೇಂದ್ರನ ವಾದ. ಇಬ್ಬರಿಗೂ ಘೋರ ಯುದ್ಧವಾಗುತ್ತದೆ. ನಾಗನಾಥನ ಸರ್ಪಾಸ್ತ್ರದಿಂದ ಮಚೇಂದ್ರನಿಗೆ  ನಂಜೇರುತ್ತದೆ. ಆಗ ದತ್ತಾತ್ರೇಯ ಬಂದು ನೀವಿಬ್ಬರೂ ನನ್ನ ಶಿಷ್ಯರೆ ಎಂದು ರಾಜಿ ಮಾಡಿಸುತ್ತಾನೆ. ಇನ್ನುಮುಂದೆ ಯೋಗಿಯ ದರ್ಶನಕ್ಕೆ ಜನ ತಡೆಯಿಲ್ಲದೆ ಬರುವಂತಾಗಬೇಕು ಎಂದು  ಮಚೇಂದ್ರ ವಚನ ಪಡೆಯುತ್ತಾನೆ. ಈ ಕತೆಗಳು ಯಾವ ಸಾಮಾಜಿಕ ಆಧ್ಯಾತ್ಮಿಕ ಸತ್ಯದ ರೂಪಕಗಳೊ?

ನಿರ್ವಾಣಸ್ವಾಮಿಯು ಚಿಕ್ಕಮಗಳೂರು ಪರಿಸರದಲ್ಲಿ ಬಹಳ ಜನ ನಡೆದುಕೊಳ್ಳುವ ಒಬ್ಬ ಸಂತ. ಇವನ ಹಿನ್ನೆಲೆ, ಬದುಕಿದ ಕಾಲ ಖಚಿತವಾಗಿ ತಿಳಿಯುವುದಿಲ್ಲ. ಇವನಿಗೆ ಕುರುಬರು ವಿಶೇಷವಾಗಿ ನಡೆದುಕೊಳ್ಳುವರು. ಇವನ ಗದ್ದುಗೆ ಕೈಮರದಲ್ಲಿ  (ಚಿಕ್ಕಮಗಳೂರು) ಇದೆ. ತುರುವನಹಳ್ಳಿಯಲ್ಲಿ  (ಕಡೂರು)  ನಿರ್ವಾಣಸ್ವಾಮಿ ಗುಡ್ಡವಿದ್ದು, ಇದು ಈತ ಹಿಂದೆ ನೆಲೆಸಿದ್ದ ಜಾಗ.  ಈ ಭಾಗದಲ್ಲಿ ನಿರ್ವಾಣಪ್ಪ, ಸಿದ್ದಪ್ಪ,  ಗವಿಯಪ್ಪ ಮುಂತಾದ ಹೆಸರನ್ನು ಜನ ಇಟ್ಟುಕೊಳ್ಳುತ್ತಾರೆ. ನಿರ್ವಾಣಸ್ವಾಮಿ ಹುಲಿಚಿರತೆಗಳನ್ನು ಆಡುಕುರಿಗಳಂತೆ ಆಟವಾಡಿಸು ತ್ತಿದ್ದನು ಎಂಬ ಕತೆಗಳಿವೆ. ಈಗಲೂ ಈ ಗುಡ್ಡವು ಚಿರತೆಗಳ ಜಾಗ. ಗುಡ್ಡದಲ್ಲಿ ಕೆಂಚರಾಯ ಎನ್ನಲಾಗುವ  ಕಾಲಭೈರವನ ಪ್ರಾಚೀನ ಗುಡಿಯಿದೆ. ಇಲ್ಲಿ ಹುಲಿಗದ್ದುಗೆ ಎಂಬ ಗದ್ದುಗೆಯಿದೆ. ಗುಹೆಯಲ್ಲಿ ತ್ರಿಶೂಲಗಳಿವೆ. ಇಲ್ಲಿನ ಗುಡ್ಡ, ಗುಹೆ, ಸಮಾಧಿ, ಭೈರವರಾಧನೆ, ತ್ರಿಶೂಲ, ಬಲಿಫಲಕ, ಯೋಗಸಾಧನೆಯ ಕಿರುಗೋಣೆ ಇವೆಲ್ಲವೂ ಇದೊಂದು ಸಿದ್ಧರ ತಾಣವೆಂದು ಸ್ಪಷ್ಟಪಡಿಸುತ್ತವೆ. ಕೈಮರದಲ್ಲಿರುವ ನಿರ್ವಾಣಸ್ವಾಮಿ ಸಮಾಧಿಯ ಬಳಿೊಕಿನ್ನರಿ ಹಿಡಿದು ಕುಣಿಯುತ್ತಿರುವ ಭೈರವನ ಅಥವಾ ಜೋಗಿಯ ಶಿಲ್ಪವಿದೆ. ಇದು ಈ ಮಠಕ್ಕೂ ನಾಥಪಂಥಕ್ಕೂ ಇದ್ದಿರಬಹುದಾದ ನಂಟಿನ ಮಹತ್ವದ ಸುಳಿಹು. ನಿರ್ವಾಣಸ್ವಾಮಿ ಒಳಗೊಂಡಂತೆ ಈ ಭಾಗದ ಸಿದ್ಧರು ಕಲ್ಯಾಣದಿಂದ ಬಂದರು ಎಂದು ಹೇಳಲಾಗುತ್ತದೆ. ಆದರೆ ಇವರ ಮೂಲವು ಬೇರ‌್ಯಾವುದೊ ಇದೆ. ಬಿಸಗ್ನಿ ಸಿದ್ಧೇಶ್ವರ,  ಹೊಗರೆಕಾನು ಸಿದ್ಧೇಶ್ವರ, ಮುಳ್ಳಯ್ಯಸ್ವಾಮಿ   ಮುಂತಾದವರ ಗುಹೆ ಮತ್ತು ಗದ್ದುಗೆಗಳ ಪರಿಸರದಲ್ಲಿ  ನಿರ್ವಾಣಸ್ವಾಮಿ ಗದ್ದುಗೆ ಇರುವುದು ಗಮನಾರ್ಹ.

ಕೈವಾರದ ಯೋಗಿ ನಾರೇಯಣ ಕರ್ನಾಟಕದ ಇನ್ನೊಬ್ಬ ಜನಪ್ರಿಯ ಸಂತ. ನಾರಣಪ್ಪನಿಗೆ ಬೋಧೆ ಕೊಟ್ಟ ಗುರುವಿನ ಹೆಸರು ಪರದೇಶಿಸ್ವಾಮಿ. ನಾಥಗುರುವಿಗೆ ಕನ್ನಡ ಜನಪದರು ಪರದೇಶಿ ಎಂದೇ ಕರೆಯುತ್ತಾರೆ. ಇದುೊಇವರು ನಮ್ಮ ನಾಡಿನವರಲ್ಲ ಎಂಬರ್ಥ ವನ್ನೂ ಒಳಗೊಂಡಿದೆ.  ಕೈವಾರದ ಪಕ್ಕದಲ್ಲಿರುವ ಸೀತಿಬೆಟ್ಟವು ನಾಥರು ಕಾಪಾಲಿಕರು ಇದ್ದ ಪ್ರಾಚೀನ ಕೇಂದ್ರ. ನಾರಾಯಣಪ್ಪನ ಪದಗಳಲ್ಲಿ ಗೋರಖನ ಪ್ರಸ್ತಾಪವಿಲ್ಲ. ಆದರೆ ನಾಥರ ಯೌಗಿಕ ಚಿಂತನೆಯು ಅವನಲ್ಲಿದೆ.

ನಾಯಕನಹಟ್ಟಿ (ಚಳ್ಳಕೆರೆ) ತಿಪ್ಪೇಸ್ವಾಮಿಯು ಈ ಭಾಗದ ಜನಪ್ರಿಯ ಸಂತನು. ಈತನ ಹೆಸರು ತಿಪ್ಪೆಯಲ್ಲಿ ಹುಟ್ಟಿದ ಕಾರಣದಿಂದ ಬಂತೆಂಬ ಒಂದು ವಾದವಿದೆ. ತಿಪ್ಪೆಯು ಕೃಷಿಸಂಸ್ಕೃತಿಯ ಜತೆ ಸಂಬಂಧವುಳ್ಳದ್ದು. ಗೋರಖನು ತಿಪ್ಪೆಯಲ್ಲಿ ಹುಟ್ಟಿ ಬೆಳೆದವನು. ಮಂಟೆಸ್ವಾಮಿ ಕಾವ್ಯದ ಪ್ರಕಾರ ಮಂಟೆಸ್ವಾಮಿಗೆ ಜಂಗಮರು ಕಲ್ಯಾಣಪಟ್ಟಣದ ಪ್ರವೇಶ ನಿರಾಕರಿಸಿ ತಿಪ್ಪೆಗೆ ಎಸೆಯುತ್ತಾರೆ. ಆಗ ಬಸವಣ್ಣನು ಅವನನ್ನು ತಿಪ್ಪೆಯಿಂದ ಎತ್ತಿ ಹೊರತಂದು ಮೆರವಣಿಗೆಯಲ್ಲಿ ಮನೆಗೆ ಒಯ್ಯುತ್ತಾನೆ. ಮಂಟೆಸ್ವಾಮಿಯ ಕಾವ್ಯ ಜ್ಯೋತಿಯ ವರ್ಣನೆಯಿಂದ ಆರಂಭವಾಗುತ್ತದೆ. ತಿಪ್ಪೆಯಲ್ಲಿ ಹತ್ತಿಸಿಟ್ಟರೂ ಉರಿಯುವ ಜ್ಯೋತಿಯದು ಎಂದು ವರ್ಣನೆ ಬರುತ್ತದೆ. ತಿಪ್ಪೆಯು ನಾಗರಿಕ ಲೋಕಕ್ಕೆ ಬೇಡದ ವಸ್ತುವನ್ನು ಬಿಸಾಡುವ ಜಾಗ. ಆದರೆ ಅಂತಹ ನಿರಾಕೃತ ಜಾಗದಿಂದಲೇ ಯೋಗಿಗಳು  ಹುಟ್ಟಿ ಬರುತ್ತಾರೆ. ಈ  ಕಥೆಗಳು ಸಿದ್ಧರ ದರ್ಶನದ ಸಾಮಾಜಿಕ ಆಶಯಗಳೂ ಆಗಿವೆ. ಲುಂಕೆಮಲೆಯ ಪರಿಸರದಲ್ಲಿ ಬರುವ ನಾಯಕನ ಹಟ್ಟಿಯಲ್ಲಿದ್ದ ತಿಪ್ಪೇಸ್ವಾಮಿ, ನಾಥರ ಜತೆ  ಒಡನಾಟ ಇಟ್ಟುಕೊಂಡಿರುವ ಸಾಧ್ಯತೆಯಿದೆ. ಈತನೊಗದ್ದಿಗೆಯಿರುವ ಕಟ್ಟಡದಲ್ಲಿ ಮತ್ಸ್ಯದ ಮೇಲೆ ಆರೂಢನಾಗಿರುವ ಮಚ್ಚೇಂದ್ರನಾಥ, ಕಾಲಭೈರವ ಹಾಗೂ ಯೋಗಭಂಗಿಯಲ್ಲಿ ಕುಳಿತಿರುವ ಜಟಾಧಾರಿ ಮುನಿಗಳ ಶಿಲ್ಪಗಳಿವೆ. ಇಷ್ಟರಿಂದಲೇ ತಿಪ್ಪೇಸ್ವಾಮಿಯ ನಾಥ ಸಂಬಂಧವನ್ನು ಹೇಳಲಾಗದು. ತಮ್ಮ ಪರಿಸರ ದೆವಗಳನ್ನು ಶಿಲ್ಪಿಗಳು ಸಹಜವಾಗಿ ಕಂಬಗಳ ಮೇಲೆ ಕೆತ್ತುವ ಪದ್ಧತಿಯಿತ್ತು.

ಕೊಡೇಕಲ್ಲಿನ (ಸುರಪುರ) ಬಸವಣ್ಣನು ಅವಧೂತ ಮಾರ್ಗದ ಒಬ್ಬ ಸಿದ್ಧನು.  ಅವನು ಕಾಪಾಲಿಕ ಯೋಗಿ ಎಂಬ ವಾದವಿದೆ. ಇದಕ್ಕೆ ಕೊಡಲಾಗುವ ಎರಡು ಆಧಾರಗಳೆಂದರೆ, ೧.ಕೊಡೆಕಲ್ಲು ಬಸವಣ್ಣನ ವರ್ಣನೆಗಳಲ್ಲಿ ‘ಎಲುದೊಗಲುಡಿಗೆ’ಯ ಪ್ರಸ್ತಾಪ ಬರುವುದು. ಕಾಪಾಲಿಕರು ಚರ್ಮದ ಉಡುಗೆ ಉಡುತ್ತಿದ್ದರು. ೨.ಕೊಡೆಕಲ್ಲಿನಲ್ಲಿ ಭಿಕ್ಷಕ್ಕೆ ಬಳಸುವ ಕಪ್ಪರ ಅಥವಾ ಹಂಡಿ. ಇದು ಕಪಾಲದ ಸಂಕೇತ.[9] ಆದರೆ ಕೊಡೇಕಲ್ಲಿನ ಬಸವಣ್ಣನ ಮೇಲೆ ಹುಟ್ಟಿದ ಚಾರಿತ್ರವಾದ ‘ನಂದಿಯಾಗಮಲೀಲೆ’ (೧೩.೫೨)ಯಲ್ಲಿ ಯೋಗಿ ದರುಶನದವರಿಗೆ ಜೋಳಿಗೆ, ಜೋಗಿ ದರುಶನದವರಿಗೆ ಕೈಪಾತ್ರೆ, ಶ್ರವಣರಿಗೆ ಕರದ ಪಾತ್ರೆ, ಸನ್ಯಾಸದವರಿಗೆ ಉಲುಪಿ, ಪಾಶುಪತದವರಿಗೆ ಗೋಪಾಳ,  ಕಾಳಾಮುಖದವರಿಗೆ ಕಪ್ಪರ, ಆರೂಢರಿಗೆ ಹಂಡಿ ಚಿಹ್ನೆ ಎಂದು ವಿವರಿಸುವ ಪದ್ಯವಿದೆ.  ಇದರ ಪ್ರಕಾರ  ಹಂಡಿ ಚಿಹ್ನೆ ಆರೂಢರದು. ಕೊಡೆಕಲ್ಲಿನಲ್ಲಿ ಹಂಡಿಭಿಕ್ಷವಿದೆ. ಆದ್ದರಿಂದ ಕೊಡೆಕಲ್ಲಿನ ಪರಂಪರೆ ನಾಥವಲ್ಲ ಎಂದರ್ಥವಾಗುತ್ತದೆ. ಆದರೆ ಈ ಚಾರಿತ್ರದ ಕವಿಗಳು ತಮ್ಮ ಕಥಾನಾಯಕರ ಕಾಲಕ್ಕಿಂತ ತಮ್ಮ ಸಮಕಾಲೀನ ಚಿತ್ರವನ್ನೇ ಕೊಟ್ಟಿರುವ ಸಾಧ್ಯತೆಯಿದೆ. ಕೊಡೇಕಲ್ ಬಸವಣ್ಣನ ರಚನೆಗಳಲ್ಲಿ ಗೋರಖನ ಪ್ರಸ್ತಾಪವಿದೆ. ಆದರಿದು ಕೊಡೇಕಲ್ ಬಸವಣ್ಣನು ನಾಥನಾಗಿದ್ದಕ್ಕೆ ಸಾಕ್ಷ್ಯವಲ್ಲ.

ಬಿಜಾಪುರದ ಸಿಂದಗಿಯಲ್ಲಿ ಭೀಮಾಶಂಕರ ಜಕ್ಕಪ್ಪಯ್ಯ ಮುಂತಾದ ಯೋಗಿಗಳಿದ್ದ ಒಂದು ಪರಂಪರೆ ಆಗಿಹೋಯಿತು. ಈ ಸಂಪ್ರದಾಯದ  ಮುಖ್ಯ ಯತಿಗಳೆಂದರೆ, ಭೀಮಾಶಂಕರ (೧೬೬೦-೧೭೩೧) ಹಾಗೂ ಇವನ ಶಿಷ್ಯ ಜಕ್ಕಪ್ಪಯ್ಯ (೧೬೮೫-೧೭೬೯). ಜಕ್ಕಪ್ಪಯ್ಯನನ್ನು ‘ಜೋಗಿ’ ಎಂದು ಕರೆಯಲಾಗುತ್ತಿತ್ತು. ಇವನು ತನ್ನ ಗುರು ಪರಂಪರೆ ಯನ್ನು ಆದಿನಾಥ ಗೋರಖ ಮಚೇಂದ್ರರಿಂದ ಆರಂಭಿಸಿ, ಜ್ಞಾನೇಶ್ವರ, ಮುಕುಂದನಾಥ, ಅಲಕ್ಷ್ಯನಾಥ, ಅಚಿಂತ್ಯನಾಥ, ಅವ್ಯಕ್ತನಾಥ, ಭಿಕ್ಷುಕನಾಥ, ರಾಮನಾಥ, ಭೃಂಗವಳ್ಳಿಯ ಗುರುಪ್ಪಯ್ಯ, ಎಂದು ಗುರುತಿಸಿಕೊಳ್ಳುತ್ತಾನೆ.[10] ಸಣ್ಣಪುಟ್ಟ ಮಠಗಳು ಖ್ಯಾತ ಸಿದ್ಧರ ಜತೆ ತಮ್ಮ ಮೂಲವನ್ನು ಗುರುಸಿಕೊಳ್ಳುವುದು ಸಾಮಾನ್ಯ. ಸದ್ಯಕ್ಕೆ ಸಿಂದಗಿ ಮಠದಲ್ಲಿ ನಾಥ ಪರಂಪರೆಯ ಯಾವ ಚಿಹ್ನೆಗಳೂ ಇಲ್ಲ. ಆದರೆ ವಾರಕರಿ ಮಹಾನುಭಾವ ಸಂಪ್ರದಾಯದ ಜತೆ ಗುರುತಿಸಿಕೊಳ್ಳುವ  ಕರ್ನಾಟಕದ ಸಿದ್ಧರು, ಗೋರಖ ಮಚೇಂದ್ರರನ್ನು ಆದರದಿಂದ ನೆನೆಯುತ್ತಾರೆ. ಭೀಮಾಶಂಕರರ ಗುರುವಾದ ಗುರಪ್ಪಯ್ಯನಿಗೆ ರಾಮನಾಥ ಎಂಬ ಸಿದ್ಧನು ಮಾಶ್ಯಾಳ ಗ್ರಾಮದಲ್ಲಿ  ಗುರುಬೋಧ ನೀಡಿ, ರಾಮಮಂತ್ರ ಹಾಗೂ  ಜ್ಞಾನೇಶ್ವರಿಯನ್ನು ಕೊಟ್ಟ ಕತೆಯಿದೆ. ಇದು ಸಿಂದಗಿಮಠಕ್ಕೆ ನಾಥವು ಜ್ಞಾನೇಶ್ವರನ ಮೂಲಕ ಬಂದುದು ಎಂಬುದರ ಆಧಾರವಾಗಿದೆ. ಜಕ್ಕಪ್ಪಯ್ಯನ ರಚನೆಗಳಲ್ಲಿ ಜ್ಞಾನೇಶ್ವರಿಯ ಉಲ್ಲೇಖ ಬಹಳ ಬರುತ್ತದೆ. ಬಹುಶಃ ಮೊದಲ ಹಂತದಲ್ಲಿ ಈ ಸಂಪ್ರದಾಯ ಸಿದ್ಧರ ಸಂಪರ್ಕದಲ್ಲಿತ್ತು. ಇದಕ್ಕೆ ಸಾಕ್ಷಿ,  ದಲಿತರಿಂದ ಮೊದಲ ಭಿಕ್ಷೆ ಪಡೆಯುವ ಸಂಪ್ರದಾಯ ವಿರುವುದು ಹಾಗೂ  ದಲಿತರು ಕೊಟ್ಟ ಜಾಗದಲ್ಲಿ ಮಠಕಟ್ಟಿರುವುದು.  ಆದರೆ  ಈ ಸಂಪ್ರದಾಯ ಮುಂದೆ ಬ್ರಾಹ್ಮಣೀಕರಣಗೊಂಡಿತು. ಚರಿತ್ರೆಯಲ್ಲಿ ಅನೇಕ ಅವಧೂತ ಸಂಪ್ರದಾಯಗಳಿಗೆ ಈ ಅವಸ್ಥೆ ಬಂದಿತು.

ಚಿಗಟೇರಿ (ಹರಪನಹಳ್ಳಿ) ಯಲ್ಲಿ ನಾರಪ್ಪ ಎನ್ನುವ ಒಬ್ಬ ಸಿದ್ಧನ ಮೂರ್ತಿಯಿದೆ. ಅದರ ಸೊಂಟಕ್ಕೆ ಸರ್ಪಬಂಧವಿದೆ. ಕೈಯಲ್ಲಿ ಖಡ್ಗವಿದ್ದ ಗುರುತಿದೆ. ಕಿವಿಗೆ ನಾಥಯೋಗಿಗಳು ತೊಡುವ ಕುಂಡಲಗಳಿವೆ. ಈತ ಯೋಗಿಯೊ ಭೈರವನೊ ಸ್ಪಷ್ಟವಾಗುವುದಿಲ್ಲ.  ಭಾರತದ ಹಠಯೋಗಿಗಳಲ್ಲಿ ಒಬ್ಬನ ಹೆಸರುೊನಾರದೇವ. ಈ ಹಿನ್ನೆಲೆಯಲ್ಲಿ ಇವನೊಬ್ಬ ಕಾಪಾಲಿಕನೊ ನಾಥಸಿದ್ಧನೊ ಇರಬಹುದು. ನಾರಪ್ಪನನ್ನು ಕುರಿತ ಹಾಡುಗಳಲ್ಲಿ ‘ಬಂದನು ಭೈರೇಶ ನಾರನ್ಮುನಿ’ ಎಂಬ ಸಾಲಿದೆ. ನಾರಪ್ಪನ ಆರಾಧನೆಯಿರುವ ಸ್ಥಳಗಳಲ್ಲಿ ಅವನನ್ನು ಭೈರಪ್ಪ ಎಂದೇ ಕರೆಯುತ್ತಾರೆ. ಹಾಗಾಗಿ ಇದು ಮೂಲತಃ ಭೈರವ ಸಂಪ್ರದಾಯಕ್ಕೆ ಸೇರಿದ ಮೂರ್ತಿ ಎನ್ನಬಹುದು. ಲುಂಕೆಮಲೆ ಪರಿಸರದಲ್ಲಿ ಬರುವ ನಾರಪ್ಪ ಸಂಪ್ರದಾಯವು, ಉಜ್ಜಿನಿ ನರಸಪ್ಪನಗುಡ್ಡ  ಮುಂತಾದ ಭೈರವಾರಾಧನೆಯ ಜಾಗಗಳಿಂದಲೂ ಕಿನ್ನರಿಜೋಗಿಗಳಿರುವ ಮತ್ತಿಹಳ್ಳಿಯಿಂದಲೂ ಸುತ್ತುವರೆದಿದೆ. ವಿಶೇಷವೆಂದರೆ, ನಾರಪ್ಪನಿಗೆ ಮಹಿಳೆಯರ ಪೂಜೆಯಿಲ್ಲದಿರುವುದು.

ಕರ್ನಾಟಕದ ನಾಥಮಠಗಳಲ್ಲಿ  ನೂರಾರು ವರುಷ ನೂರಾರು ನಾಥಯೋಗಿಗಳು  ಇದ್ದು ಆಳ್ವಿಕೆ ಮಾಡಿದರು.  ಇವರಲ್ಲಿ ಹೆಚ್ಚಿನವರು ಉತ್ತರ ಭಾರತದವರು. ಹಾಗೂ ಕರ್ನಾಟಕದ ಸಂಸ್ಕೃತಿಯ ಭಾಗವಾಗಿ ಸೇರಿಹೋದವರು ತುಂಬ ಕಡಿಮೆ. ಕರಾವಳಿ ಭಾಗದಲ್ಲಿ ಕದ್ರಿಮಠದ  ಸುಂದರನಾಥರ ಬಗ್ಗೆ ದೊಡ್ಡ ಆದರವಿದೆ. ಚುಂಚನಗಿರಿ ಸಾಹಿತ್ಯದಲ್ಲಿ  ಚಂದ್ರನಾಥ ಎಂಬ ಯೋಗಿಯ ಪ್ರಸ್ತಾಪ ಬರುತ್ತದೆ. ನಾನು ಭೇಟಿಯಾದ ಕನ್ನಡಿಗ ನಾಥರಲ್ಲಿ ಚಿದಂಬರನಾಥರು(೭೦) ಒಬ್ಬ ವಿಶಿಷ್ಟ ಯೋಗಿ. ಬೈಲಹೊಂಗಲ ಮೂಲದ ಇವರ ಪೂರ್ವಾಶ್ರಮದ ವಿವರಗಳು ಸಿಗುವುದಿಲ್ಲ. ಅವರ ಇಂಗ್ಲಿಷು ಕಂಡರೆ ಆಧುನಿಕ ಶಿಕ್ಷಣ ಪಡೆದವರು ಎಂದು ಕಾಣುತ್ತದೆ. ಇವರು ಹಂಡಿಬಡಗನಾಥ ಮಠದ ಮೂಲಕ ನಾಥರ ಸಂಪರ್ಕಕ್ಕೆ ಬಂದವರಿರಬಹುದು. ಸದ್ಯ ರಾಜಸ್ಥಾನದ ಒಂದು ಮಠದಲ್ಲಿ ಇರುತ್ತಾರೆ.  ಬಾರಾಪಂಥದವರು ಕರ್ನಾಟಕದ ಮಠಗಳ ವಿಷಯದಲ್ಲಿ ನಿರ್ಣಯ ತೆಗೆದು ಕೊಳ್ಳುವಾಗ ಸ್ಥಳೀಕರಾದ ಇವರ ನೆರವನ್ನು ಪಡೆಯುತ್ತ ಬಂದಿದ್ದಾರೆ. ದೊಡ್ಡ ವಿದ್ವತ್ತು ಉಳ್ಳವರಂತೆ ಕಾಣುವ ಚಿದಂಬರನಾಥರಿಗೆ ಧಾರವಾಡದಲ್ಲಿ ಶಿಷ್ಯರಿದ್ದಾರಂತೆ.  ಅವರು ಹೆಚ್ಚು ಮಾತನ್ನೇ ಆಡುವುದಿಲ್ಲ. ಆಡಿದರೆ ಮಾತು ಕಠಿಣವಾಗಿರುತ್ತದೆ. ಕದ್ರಿಯ ಮಠದಲ್ಲಿ ಸಿಕ್ಕಾಗ ‘ನಾಥಪಂಥದಲ್ಲಿ ಕನ್ನಡಿಗರು ತುಂಬ ವಿರಳವಾಗಿ ಇದ್ದಾರೆ. ಏನು ಕಾರಣ’ ಎಂದು ಕೇಳಿದೆ. ‘ನಿಮ್ಮ ಮಕ್ಕಳನ್ನು ಸಾಧುಗಳನ್ನಾಗಿ ಬಿಡಲು ತಯಾರಿದ್ದೀರಾ? ಇಲ್ಲವೆಂದ ಮೇಲೆ ಇಂತಹ ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ’ ಎಂದರು. ‘ನಿಮ್ಮ ಗುರು ಯಾರೆ’ಂದರೆ ‘ಅದನ್ನು ಕಟ್ಟಿಕೊಂಡು ನಿಮಗೆ ಏನಾಗಬೇಕು’ ಎಂದರು. ‘ಯಾಕೆ ಸನ್ಯಾಸಿಯಾದಿರಿ’ ಎಂದರೆ,  ‘ಕೆಲವಕ್ಕೆ ಕಾರಣಗಳೇ ಇರೋಲ್ಲ.  ನಾನು ಆಗಬೇಕೆಂದಿತ್ತು. ಆದೆ. ಎಲ್ಲ ಬಿಟ್ಟು ಬಂದವನಿಗೆ ಯಾವ ಗುರುತು ಹೇಳಬೇಕು’ ಎಂದರು. ‘ನಿಮ್ಮ ಮುಂದಿನ ಪ್ರಯಾಣ ಎಲ್ಲಿಗೆ ಎಂದಾಗ, ಅದು ಬರುವ ಗಳಿಗೆ ಬಂದಾಗ ನಿರ್ಧರಿಸುತ್ತೇನೆ’ ಎಂದರು. ಈ ಲೋಕದ ಮಂದಿಯೇ ಹೀಗೆ ವಿಚಿತ್ರ.  ನಮ್ಮ ತಾರ್ಕಿಕವಾದ ಪ್ರಶ್ನೆ ಮತ್ತು ಕುತೂಹಲಗಳು ಅವರಿಗೆ ಅಸಂಬದ್ಧ ಅನಿಸುತ್ತವೆ.

ಆಧುನಿಕ ಕಾಲದಲ್ಲಿ ನಾಥರ  ಕಾನಫಠಾ ದೀಕ್ಷೆ ಪಡೆಯದೆಯೂ ಪಂಥದ ಬಗ್ಗೆ ಅಪಾರ  ಜ್ಞಾನವುಳ್ಳ ಯೋಗಿಗಳಿದ್ದಾರೆ. ಅವರಲ್ಲಿ ತಿಪ್ಪೂರಿನ ನೀಲಕಂಠಸ್ವಾಮಿಗಳು ಒಬ್ಬರು. ಮೂಲತಃ ಶಾಕ್ತ ಸಾಧಕರಾದ ನೀಲಕಂಠಸ್ವಾಮಿ,  ನಾಥರ ಸಂಪರ್ಕವುಳ್ಳವರು. ಗೋರಖನ ದರ್ಶನವು  ಬೇರೆಲ್ಲವಕ್ಕೆ ಹೋಲಿಸಿದರೆ  ಪರಿಪೂರ್ಣ ಎಂದು ನಂಬಿದವರು. ಅವರು ಗೋರಖ ತಪೋವನವನ್ನು ಸ್ಥಾಪಿಸಿದ್ದಾರೆ. ಹಿಂದೆ  ‘ನಾಥಸಂದೇಶ’ ಎನ್ನುವ ಕನ್ನಡ ಪತ್ರಿಕೆ ಪ್ರಕಟಿಸುತ್ತಿದ್ದರು. ನಾಥಚಿಂತನೆಯನ್ನು  ಕರ್ನಾಟಕದಲ್ಲಿ  ಪ್ರಸಾರ ಮಾಡಬೇಕು ಎಂಬ  ಮಹತ್ವಾಕಾಂಕ್ಷೆ ಉಳ್ಳ ಅವರ ಸ್ವಭಾವದಲ್ಲಿ ಒಂದು ಬಗೆಯ ಭಾವನಾತ್ಮಕ ತನ್ಮಯತೆ ಇದೆ. ಗೋರಖ ದರ್ಶನವು ಕೆಳಸ್ತರದಿಂದ ಬರುವ ಸಾಧಕರಿಗೆ ಸಾಮಾಜಿಕ ಕಾರಣಕ್ಕಾಗಿಯೂ ತಮ್ಮದು ಅನಿಸುತ್ತದೆ ಎಂದು ಕಾಣುತ್ತದೆ. ಹಂಪಿಯಲ್ಲಿ ಆಶ್ರಮ ಮಾಡಿಕೊಂಡಿರುವ ಸದಾಶಿವಯೋಗಿಯವರು ಒಬ್ಬ ಶಿವಯೋಗ ಸಾಧಕರು.  ಹಿಮಾಲಯದಲ್ಲಿದ್ದಾಗ ನಾಥರ ಸಹವಾಸದಲ್ಲಿ ಇದ್ದವರು. ಸದಾಶಿವಯೋಗಿ ಅವರು ನಾಥದರ್ಶನದ ತಿಳಿವಳಿಕೆಯ ಜತೆಗೆ ಪ್ರಖರವಾದ ವೈಚಾರಿಕತೆಯನ್ನೂ ವಿದ್ವತ್ತನ್ನೂ ಆಧುನಿಕ ಮನಸ್ಸನ್ನೂ ಪಡೆದವರು. ಯೋಗಸಾಧನೆ ಕುರಿತು ಅವರು ರಚಿಸಿದ ಕೃತಿಗಳು ಪ್ರಸಿದ್ಧವಾಗಿವೆ. ಅವರ ಕೃತಿಗಳಲ್ಲಿ ದಾರಿತಪ್ಪಿದ ನಾಥರ ಕಟುಟೀಕೆ ಇರುವುದು ಗಮನಾರ್ಹ. ಅವರಿಗೆ  ನಾಥಸಿದ್ಧಾಂತದ ಬಗ್ಗೆ ಆದರವಿದೆ. ಆದರೆ ನಿರ್ದಿಷ್ಟ ನಾಥರ ಬಗ್ಗೆ ತಿರಸ್ಕಾರವಿದೆ.

೨೦ನೇ ಶತಮಾನದ ಮೊದಲರ್ಧ ಭಾಗದಲ್ಲಿದ್ದ ಮುಕುಂದೂರುಸ್ವಾಮಿ, ಒಬ್ಬ ದೊಡ್ಡ ಯೋಗಿಯಾಗಿದ್ದವರು. ಕಡೂರು ಸೀಮೆಯ ಗುಡ್ಡಬೆಟ್ಟಗಳಲ್ಲಿ ಇದ್ದ  ಇವರನ್ನು ಕುರಿತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಬರೆದಿರುವ ಜೀವನಚಿತ್ರವು  ಸ್ವಾರಸ್ಯಕರವಾಗಿದೆ.  ಸಿದ್ಧರಲ್ಲಿ ಸಾಮಾನ್ಯವಾಗಿ ಇರುವ ವಿಚಿತ್ರ  ವರ್ತನೆ ಮುಕುಂದೂರು ಸ್ವಾಮಿಯವರಲ್ಲೂ ಕಾಣುತ್ತದೆ.  ಅಸ್ಪಷ್ಟವಾಗಿ ಸಿಗುವ  ಇವರ ಪೂರ್ವಾಶ್ರಮದ ತುಣುಕು ಮಾಹಿತಿಗಳ ಪ್ರಕಾರ, ಇವರು ಕೂಲಿ ಮಾಡುವ ಕುಟುಂಬದಿಂದ ಬಂದವರು; ರೂಪಕ ಭಾಷೆಯಲ್ಲಿ ಮಾತಾಡುತ್ತಿದ್ದ ಇವರು ಸಾಮಾನ್ಯ ಜೀವನ ನಡೆಸಿದವರು. ಜಾತ್ಯತೀತ ಸ್ವಭಾವದವರು.  ನೂರಕ್ಕೂ ಹೆಚ್ಚು ವರ್ಷ ಬದುಕಿದ್ದವರು. ಅಲೆಮಾರಿಯಾಗಿದ್ದವರು. ಆದರೆ  ಯೋಗಿಗಳಲ್ಲಿ ಸಾಮಾನ್ಯವಾಗಿ ಕಾಣದ ಪೂಜೆ ಭಕ್ತಿಭಾವಗಳೂ ಅವರಲ್ಲಿದ್ದವು. ಇವರ ಜೀವನದಲ್ಲಿ ಬಹುತೇಕ ಸಂತರ ಕಥನಗಳಲ್ಲಿರುವಂತೆ ತಮ್ಮನ್ನು ತಿರಸ್ಕರಿಸುವ ಉಚ್ಚವರ್ಗದ ಜನರನ್ನು ಸೋಲಿಸುವ ಹಾಗೂ ಅವರನ್ನು ತಮ್ಮ ಶಿಷ್ಯರಾಗಿಸಿಕೊಳ್ಳುವ ಪ್ರಸಂಗಗಳಿವೆ. ತಿಮ್ಮಣ್ಣಕವಿ ಉಲ್ಲೇಖಿಸುವ ಅಜ್ಞಾತ ಸಿದ್ಧನ ಹಾಗೆ ಇರುವ ಮುಕಂದೂರು ಸ್ವಾಮಿಯವರು, ಕರ್ನಾಟಕದ ಆರೂಢಸಿದ್ಧರ ಬಹುತೇಕ ಚಹರೆಯುಳ್ಳವರು. ಈ ಲೋಕವನ್ನು ವಿಮರ್ಶಿಸುವುದಕ್ಕೆ ಬೇಕಾದ ವೈಚಾರಿಕ ಉಪಕರಣಗಳು ನಮ್ಮಲ್ಲಿವೆ. ಆದರೆ ಇವನ್ನು ಅರಿಯುವುದಕ್ಕೆ ಬೇಕಾದ ಸಾಧನಗಳನ್ನು ಇನ್ನೂ ಪಡೆಯಬೇಕಿದೆ. ಕೊಂಚ ಆಯತಪ್ಪಿದರೂ ಸಮ್ಮೋಹನಕ್ಕೆ ಒಳಗಾಗುವ ಸಾಧ್ಯತೆ ಯಿರುವ ಲೋಕವಿದು.

* * *[1]      ‘ನೂರೊಂದು ವಿರಕ್ತರು ವೀರಶೈವರೇ’?  ಮಾರ್ಗ ಸಂ.

[2]      ಶಂಬಾ ಜೋಶಿ, ಮರ‌್ಹಾಠಿ ಸಂಸ್ಕೃತಿ, ಶಂಬಾ ಕೃತಿಸಂಪುಟ, ಪು.೧೯೬-೨೨೫

[3]      ಎಚ್.ಎಸ್.ಶಿವಪ್ರಕಾಶರ ‘ತತ್ವಪದಕಾರರು: ಎಲ್ಲ ಮರಗಳ ಕಾಡು’ ಲೇಖನ ಹಾಗೂ ಬತ್ತೀಸ ರಾಗಎಂಬ ಅನುಭವ ಕಥನ; ಬೆಳಗೆರೆ ಕೃಷ್ಣಶಾಸ್ತ್ರಿಯವರ ಮುಕುಂದೂರು ಸ್ವಾಮಿಗಳ ಜೀವನಚಿತ್ರ ಯೇಗ್ದಾಗೆಲ್ಲಾ  ಐತೆ

[4]      Harijan Contribution to Medieval Indian  Thought, Pp.85

[5]      ‘ನಾಥಪಂಥ ಹಾಗೂ ಜ್ಞಾನೇಶ್ವರರ ಪಂಥರಾಜ’, ಅಂತರಂಗದ ರತ್ನ, ಪು. ೨೪೦

[6]      ಶಂಬಾ ಜೋಶಿ, ಮರ‌್ಹಾಠಿ ಸಂಸ್ಕೃತಿ, ಶಂಬಾ ಕೃತಿಸಂಪುಟ, ಪು. ೧೯೬-೨೨೫

[7]      ಕಪಟರಾಳ ಕೃಷ್ಣರಾವ್, ‘ಬಸವೇಶ್ವರನು ನಾಥ-ಸಿದ್ಧಪಂಥದ ಅನುಯಾಯಿ’, ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಪು.೧೩೪-೧೩೭

[8]      ‘ಬಸವಣ್ಣನವರ ವಚನಗಳ ಶಿಲ್ಪವಿಧಾನ’, ಬಸವಣ್ಣನ ವಚನಗಳು ಸಾಂಸ್ಕೃತಿಕ ಮುಖಾಮುಖಿ, ಪು.೧೬೬-೨೧೩

[9]      ಬಸವಲಿಂಗ ಸೂಪ್ಪಿಮಠ, ಕೊಡೇಕಲ್ಲು ಬಸವಣ್ಣ ಒಂದು ಅಧ್ಯಯನ, ಪು.೨೯೦

[10]     ಸಿಂದಗಿಯ ಬಿಂದಗಿ, ಪು.೬೧