ನಾಸಿಕ್ ತ್ರ್ಯಂಬಕೇಶ್ವರದ ಗೋರಖನಾಥ ಮಠಕ್ಕೆ ನಾನು ಹೋದಾಗ (೨೦೦೨) ಮಠದ  ಮಹಂತರಾದ  ಚೇತನ್‌ನಾಥ್ ಮಠದಲ್ಲಿ ಇರಲಿಲ್ಲ. ಗದ್ದೆಯಲ್ಲಿದ್ದರು. ಇಡೀ ಮಠವು  ಸುಮಾರು ನೂರು ಎಕರೆಯಷ್ಟು ವಿಶಾಲವಾದ ಗದ್ದೆ ಬಯಲಿನಲ್ಲಿದೆ. ಹೊಲದ ತುಂಬ ಗೋಧಿ ಬೆಳೆದು ತೆನೆಗಳು ಹಾಲುತುಂಬಿದ್ದವು. ‘ಇಷ್ಟೊಂದು ಭೂಮಿ ಮಠಕ್ಕೆ ಹೇಗೆ ಬಂತು?’ ಎಂದು ಕೇಳಿದೆ. ಇವು  ಮೊಗಲರು ಕೊಟ್ಟ ಜಹಗೀರು ಎಂದು ಚೇತನಾಥ ಹೇಳಿದರು.  ಪೇಶ್ವೆಗಳು ಕೂಡ  ಈ ಮಠಕ್ಕೆ ಉಂಬಳಿ ಹಾಕಿಕೊಟ್ಟರು.  ನಾಥಮಠಕ್ಕೆ ನೇಮಕವಾಗುವ ಯೋಗಿಯು ಈ ಜಮೀನಿನ  ಉಸ್ತುವಾರಿ ಮಾಡಬೇಕು. ಜಮೀನು ಮಠಕ್ಕೆ ದೊರಕಿದ ಬಗ್ಗೆ ಚೇತನ್ ನಾಥರು ಒಂದು ಕತೆ ಹೇಳಿದರು.  ಹಿಂದೆ ಗೋರಖನಾಥ ಮಠದ ನಾಥನಿಗೆ ಇಲ್ಲಿ ಆಳುತ್ತಿದ್ದ ಒಬ್ಬದೊರೆ ಬಂದು, ಜಾಗ ಖಾಲಿಮಾಡಬೇಕು ಎಂದನಂತೆ. ನಾಥನು  ಒಪ್ಪಲಿಲ್ಲ. ಆಗ ದೊರೆ ಒಂದು ಮಣ ಸೀಸವನ್ನು ಕಾಯಿಸಿ ಕುಡಿಯುವ ಶಿಕ್ಷೆ ಕೊಟ್ಟನು. ನಾಥನು ಸೀಸದ ರಸವನ್ನು ಕುಡಿಯಲು ದೊರೆ ಅವನ ಸಾಧನೆಗೆ ಮೆಚ್ಚಿ, ಎಷ್ಟು ಭೂಮಿ ಬೇಕು ಎಂದನು. ಆಗ ನಾಥನು ನಾನು ಮೂತ್ರ ಮಾಡಿ ಎಲ್ಲೆಕಟ್ಟು ಗುರುತಿಸುವ ಜಾಗವೆಲ್ಲ ಕೊಡಬೇಕು ಎಂದನು. ದೊರೆ ‘ಆಗಲಿ’ ಎನ್ನಲು ನಾಥನು ೧೦೦ ಎಕರೆ ಭೂಮಿ ಅಳತೆಯಲ್ಲಿ ಸೀಸರಸದ ಮೂತ್ರ ಮಾಡಿದನು.  ಅಷ್ಟು ಭೂಮಿ ಮಠಕ್ಕೆ ದೊರಕಿತು. ನಾಥರು ತಮ್ಮ ಕಾಲದ ಆಳುವ ಪ್ರಭುಗಳಿಂದ ನಾನಾ ವಿಧದಿಂದ  ಭೂಮಿ ಪಡೆದಿದ್ದಾರೆ. ಯೋಗಿಗಳು ದೊರೆ ಒಡ್ಡಿದ ಸವಾಲನ್ನು ಸ್ವೀಕರಿಸಿ ಗೆದ್ದ ಕತೆಗಳು ಭಾರತದ ತುಂಬ ಇವೆ. ಆದರೆ ಅಂತಿಮವಾಗಿ ಗೆದ್ದವರು ಇವರಿಗೆ ಸಂಪತ್ತಿನ ದಾನ ಮಾಡಿದ ರಾಜರೊ ಅಥವಾ ಸಂಪತ್ತನ್ನು ಪಡೆದ ಯೋಗಿಗಳೊ? ಇದೊಂದು ಯಕ್ಷಪ್ರಶ್ನೆ.

ಕರ್ನಾಟಕ ನಾಥಪಂಥಿ ಜೋಗಿ ಜನಾಂಗದ ಸಮ್ಮೇಳನದ ಕರಪತ್ರದಲ್ಲಿ ‘‘ಪುರಾಣ ಹಾಗೂ ಇತಿಹಾಸಗಳ ಪುಟಗಳನ್ನು ತೆರೆದು ನೋಡಿದಾಗ, ಹಿಂದೊಮ್ಮೆ ಈ ಸಮಾಜವು ಹಾಗೂ ಧರ್ಮದ ನೀತಿ ರೀತಿ ತತ್ವ ಮತ್ತು ಸಿದ್ಧಾಂತಗಳು ಚಕ್ರವರ್ತಿಗಳ ರಾಜ-ಮಹಾರಾಜರ ಹಾಗೂ ಹಲವಾರು ಪಾಳೇಗಾರರ ರಾಜಗೌರವಕ್ಕೆ ಪಾತ್ರವಾಗಿ ಸಿದ್ದಿಗೆ ಹಾಗೂ ಮೋಕ್ಷಕ್ಕೆ ದಾರಿದೀಪವಾಗಿತ್ತು’’ ಎಂಬ ಮಾತಿದೆ. ಹಿಂದುಳಿದ ಜಾತಿಗಳು ತಮ್ಮ ಮೇಲುಚಲನೆಗೆ ಬೇಕಾದ ಪರಂಪರೆ ಚರಿತ್ರೆ ಕಟ್ಟಿಕೊಳ್ಳುವಾಗ, ಭವ್ಯವಾದ ಗತವನ್ನು ಕೊಂಚ ಉತ್ಪ್ರೇಕ್ಷೆಯಿಂದಲೇ ಕಟ್ಟಿಕೊಳ್ಳುವುದು ಸಾಮಾನ್ಯ. ಕರ್ನಾಟಕದ ಮಟ್ಟಿಗೆ, ಉತ್ತರದಿಂದ ಬಂದ ನಾಥಪಂಥವು ಇಲ್ಲಿ ನೆಲೆಯೂರುವಾಗ, ಬೇರೆಬೇರೆ ಪ್ರಭುತ್ವಗಳಿಂದ ಉಪಚಾರ ಪಡೆದಿದೆ. ಆದರೆ  ಜೈನ, ಬೌದ್ಧ, ಕಾಳಾಮುಖ, ಶ್ರೀವೈಷ್ಣವ ಮತಪಂಥಗಳಿಗೆ ದೊಡ್ಡ ರಾಜಕೀಯ ಪ್ರಭುತ್ವಗಳ ಬೆಂಬಲ ಸಿಕ್ಕಂತೆ ನಾಥರಿಗೆ ಸಿಕ್ಕಂತೆ ಕಾಣುವುದಿಲ್ಲ;  ಗೇರುಸೊಪ್ಪೆ ಹಾಗೂ ಬೀಳಗಿಗಳ ಅರಸರು, ವಿಟ್ಲದ ಡೊಂಬ ಅರಸರು, ಮಾಗಡಿ, ದೇವನಹಳ್ಳಿ ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರಗಳ ಪಾಳೇಗಾರರು, ಬಾರಕೂರಿನ ವಿಟ್ಟರಸರು, ಮೈಸೂರು ಅರಸರು, ಕಾರ್ಕಳ ಕಳಸಗಳ ಭೈರರಸರು ಮುಂತಾದ ಸ್ಥಳೀಯ ತುಂಡರಸರಿಂದ ನಾಥರಿಗೆ   ಉತ್ತೇಜನ ಸಿಕ್ಕಿತು. ಹೈದರ್ ಟಿಪ್ಪು ಆಡಳಿತದಲ್ಲಿ ವಿಟ್ಲದ ಯೋಗಿಮಠಕ್ಕೆ ಇನಾಮು ಕೊಟ್ಟ ಒಂದು ದಾಖಲೆಯಿದೆ. ಬೆಂಗಳೂರು ಆಸುಪಾಸಿನ ಪಾಳೇಗಾರರ ಹಾಗೆ ನಾಥವನ್ನು ರಾಜಧರ್ಮವಾಗಿ ಸ್ವೀಕರಿಸಿದವರು ಕಡಿಮೆ. ಬಹುಸಂಖ್ಯಾತರ ಮತಗಳಿಗೆ ಮನ್ನಣೆ ಕೊಡುವುದು ಪ್ರಭುತ್ವಗಳಿಗೆ ರಾಜಕೀಯ ಅಗತ್ಯವೂ ಆಗುತ್ತದೆ. ಪುಟ್ಟ ಸಮುದಾಯದ ಪಂಥಗಳಿಗೆ ಅವು ರಾಜಧರ್ಮದ ಭಾಗವಾಗಿ ಬೆಂಬಲ ಸಾಮಾನ್ಯ ಕೊಡುತ್ತವೆ ಅಷ್ಟೆ.

 ಬದಾಮಿ ಚಾಲುಕ್ಯರ ಆಡಳಿತಕ್ಕೆ ಸೇರಿದ್ದ ಇಗತಪುರಿಯ (ನಾಸಿಕ್)  ತಾಮ್ರಶಾಸನವು (ಕ್ರಿಶ.೭) ಅಲ್ಲಿನ ಕಪಾಲೇಶ್ವರ ಗುಡಿಯಲ್ಲಿ ಗುಗ್ಗುಳಪೂಜೆ ಜರುಗಿಸಲು ಕೊಟ್ಟ ದತ್ತಿಯ ದಾಖಲೆ ಎಂದು ಎಲ್ಲ ವಿದ್ವಾಂಸರು ಉಲ್ಲೇಖಿಸುತ್ತಾರೆ. ಈ ದತ್ತಿಯನ್ನು ಒಬ್ಬ ಮಹಾವ್ರತಿ (ಕಾಪಾಲಿಕ) ಸ್ವೀಕರಿಸುತ್ತಾನೆ.  ಕಾಪಾಲಿಕರ ಸಂಗಾತಿಗಳಾದ ನಾಥರು ಆಗಿನ್ನೂ ಚರಿತ್ರೆಯಲ್ಲಿ ಕಾಣಿಸಿರಲಿಲ್ಲ. ಇಲ್ಲಿನ ಕಾಪಾಲಿಕರು ಕೇವಲ ದಾನ ಸ್ವೀಕರಿಸಲಿಲ್ಲ. ಇತರರಿಗೆ ಕೊಡುವಷ್ಟು ಪ್ರಬಲರಾಗಿದ್ದರು. ಕಲ್ಯಾಣ ಚಾಲುಕ್ಯರ ಒಂದನೇ ಸೋಮೇಶ್ವರನ ಕಾಲದ (೧೨ನೇಶತ) ಶಾಸನವೊಂದು ಆಂಧ್ರದ ಕೊಲ್ಲಿಪಾಕಿಯಲ್ಲಿ ಸಿಕ್ಕಿದೆ. ಇದು ಅಲ್ಲಿನ ಶಂಕರೇಶ್ವರ ಗುಡಿಯ ಸ್ಥಾನಾಧಿಪತಿ ಸೋಮಿಭಟ್ಟಾರಕನು ಚಂಡಮಯ್ಯ ಎಂಬುವವನಿಗೆ ಭೂದಾನ ಮಾಡಿದ್ದರ ದಾಖಲೆ. ಸೋಮಿಭಟ್ಟಾರಕನು ತನ್ನನ್ನು  ಸೋಮ ಸಿದ್ಧಾಂತಕ್ಕೆ ಅರ್ಪಿಸಿಕೊಂಡವನು, ಆರು ಮುದ್ರೆ ಉಳ್ಳವನು, ಖಟ್ವಾಂಗ ಢಮರು ಕಪಾಲ ಉಳ್ಳ ಮಹಾವ್ರತಿ ಎಂದು ಅದರಲ್ಲಿ ವರ್ಣನೆಯಿದೆ. ಇದರ ಆಧಾರದಲ್ಲಿ ಲೊರೆಂಜೈನರು ಅವನೊಬ್ಬ ಕಾಪಾಲಿಕನಾಗಿದ್ದ ಎನ್ನುತ್ತಾರೆ.

[1] ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಸೋಮೇಶ್ವರ ಗುಡಿಗಳನ್ನು ಪರಿಶೀಲಿಸಬೇಕಿದೆ.

ಕರ್ನಾಟಕದ ಆಳುವ ದೊರೆಗಳಿಂದ ಬೆಂಬಲ ಪಡೆದ ಈ ಕಾಪಾಲಿಕ ಸ್ಥಾನಗಳು ಸದ್ಯದ ಕರ್ನಾಟಕದ ಹೊರಗಿವೆ. ಇದಕ್ಕೆ ಪ್ರತಿಯಾದ ನಿದರ್ಶನವೂ ಇದೆ. ಅದೆಂದರೆ, ಕರ್ನಾಟಕದ ಕಾಪಾಲಿಕರಿಗೆ ತಮಿಳನಾಡಿನ ರಾಜರು ಕೊಟ್ಟ ಬೆಂಬಲ. ಪ್ರಸಿದ್ಧ ಕಾಪಾಲಿಕ ಕೇಂದ್ರವೂ ಭೈರವರಾಧನೆಯ ಜಾಗವೂ ಆಗಿದ್ದ ಚುಂಚನಗಿರಿಗೆ, ಶೈವರಾಗಿದ್ದ ಚೋಳರು ಪ್ರೋಕೊಟ್ಟರೆಂದು ತಿಳಿದು ಬರುತ್ತದೆ. ಚುಂಚನಗಿರಿ  ಸಾಹಿತ್ಯದಲ್ಲಿ ಚೋಳರ ಪ್ರಸ್ತಾಪ ಬರು ತ್ತದೆ. ಬೆಟ್ಟದಲ್ಲಿ ಚೋಳರ ಕಂಬವಿದೆ. ಚುಂಚನಗಿರಿಗೆ ಚುಂಚನಕೋಟೆ ಎಂಬ ಹೆಸರಿದ್ದು, ಇದು ಸಹ ಈ ರಾಜಕೀಯ ಸಂಪರ್ಕದತ್ತ ಸನ್ನೆ ಮಾಡುತ್ತಿದೆ. ಚೋಳರು ಕಾಪಾಲಿಕರಿಗೆ ದೊಡ್ಡಮಟ್ಟದ ಬೆಂಬಲ ಕೊಟ್ಟಿದ್ದು ಸೀತಿಬೆಟ್ಟದ ಭೈರವನಿಗೆ.  ಇಲ್ಲಿ ಸಿಗುವ ೬೦ಕ್ಕೂ ಹೆಚ್ಚು ತಮಿಳು ಶಾಸನಗಳು (ಕ್ರಿಶ.೧೧-೧೭)  ಭೈರವನಿಗೆ ಸಿಕ್ಕ ರಾಜಪೋಷಣೆಯ ಪರಿಯನ್ನು ವ್ಯಕ್ತಪಡಿಸುತ್ತವೆ. ಭೈರವನಿಗೆ ಈ ಶಾಸನಗಳಲ್ಲಿ ತ್ರಿಭುವನ ವಿಡಂಗ, ಕ್ಷೇತ್ರಪಾಲ ಉಡೈಯ, ಕ್ಷೇತ್ರಪಾಲ ಪಿಳ್ಳೆಯಾರ್, ಭೈರವನಾಯಾರ್ ಎಂದು ಕರೆಯಲಾಗಿದೆ. ಈ ಶಾಸನಗಳನ್ನು ಚೋಳರಲ್ಲದೆ ಅವರ ಮಾಂಡಲಿಕರಾಗಿದ್ದ ಗಂಗರೂ ಹೊಯ್ಸಳರೂ ಹಾಕಿಸಿದ್ದಾರೆ. ಇವುಗಳಲ್ಲಿ ಕೆಲವು  ಭೈರವ ದೇವರಿಗೆ ದತ್ತಿಬಿಟ್ಟ ಶಾಸನಗಳು;  ಮತ್ತೆ ಕೆಲವು ರಾಜರಿಗೆ ಜಯಸಿಗಲೆಂದು ದಾನಕೊಟ್ಟ ಹರಕೆ  ಶಾಸನಗಳು.[2] ಸೀತಿಯ ಭೈರವನ ಗುಡಿಯ ಜತೆಯಲ್ಲಿ ಕಾಪಾಲಿಕ ಮಠಗಳೂ ಇದ್ದಿರಬಹುದು. ನಂತರದ ಘಟ್ಟಗಳಲ್ಲಿ ಇಲ್ಲಿ ನಾಥರು ಬಂದು ನೆಲೆಸಿರಬಹುದು.  ನೈಸರ್ಗಿಕ ಗುಹೆಗಳನ್ನು ಒಳಗೊಂಡಿರುವ ಸೀತಿಬೆಟ್ಟವು ಜನವಸತಿಯ ಹಳ್ಳಿಗಳಿಂದ ಸುತ್ತುವರೆದಿದೆ. ಬೆಟ್ಟದ ಕೆಳಗೆ ಜೋಗಿಲಿಂಗೇಶ್ವರ ಗುಡಿಯಿದೆ. ಹೆಸರೇ ಹೇಳುವಂತೆ ಇದು ನಾಥಜೋಗಿಗಳ ತಂಗುದಾಣವೂ ಆಗಿತ್ತು. ಬೆಟ್ಟದ ಮೇಲೆ ಸಿಕ್ಕಿರುವ ಯೋಗಿಯ ಶಿಲ್ಪವೂ ಇದಕ್ಕೆ ಪೂರಕವಾಗಿದೆ. ದೊಡ್ಡ ಕಿವಿಕುಂಡಲಗಳನ್ನು ಧರಿಸಿ, ಧ್ಯಾನಮುದ್ರೆಯಲ್ಲಿ ಕುಳಿತಿರುವ ಈ  ಶಿಲ್ಪವು ಅಪೂರ್ವವಾಗಿದೆ. ಈ ಯೋಗಿಯು ನಾಥನೊ ಕಾಪಾಲಿಕನೊ ಹೇಳುವುದು ಕಷ್ಟ.   ಸಂಪತ್ತಿನಿಂದ ಕೂಡಿದ ಈ ಭೈರವಸ್ಥಾನದಲ್ಲಿ  ಯೋಗಿಗಳಾದ  ನಾಥರು ಇದ್ದರೆ ಎಂಬ ಪ್ರಶ್ನೆ ಏಳುವುದಿಲ್ಲ. ಕದ್ರಿಮಠದಲ್ಲಿ ನೋಡುವಂತೆ ರಾಜಾಶ್ರಯದ ಜತೆಯಲ್ಲಿ ಬದುಕುವುದನ್ನು ಅವರು ರೂಢಿಸಿಕೊಂಡಿದ್ದರು ಎಂದು ತೋರುತ್ತದೆ. ಮುಂದೆ ಈ ಭಾಗದಲ್ಲಿ ಬಂದ ಬಳ್ಳಾಪುರದ ಪಾಳೇಗಾರರು ಈ ಬೆಟ್ಟದ ಗುಡಿ ಮತ್ತು ಮಠಗಳಿಗೆ ತಮ್ಮ ಸೇವೆಯನ್ನು ಮುಂದುವರೆಸಿದರು.

ಹೊಯ್ಸಳರು ಬಿಟ್ಟಿದೇವನ ಕಾಲಕ್ಕೆ ರಾಮಾನುಜರ ಪ್ರಭಾವದಿಂದ ಶ್ರೀವೈಷ್ಣವರಾದರೂ, ಅನೇಕ ದೇವರುಗಳಿಗೆ ಬಿಟ್ಟಂತೆ ಭೈರವ ದೇವರಿಗೂ ದತ್ತಿ ಬಿಟ್ಟಿದ್ದರು.  ೧೨೬೯ರ ಹೊಯ್ಸಳ ಶಾಸನವು ವೀರನರಸಿಂಹರಾಜನು ಭೈರವ ದೇವರಿಗೆ ದತ್ತಿ ಬಿಟ್ಟ ದಾಖಲೆ; ದೊರೆ ವೈಷ್ಣವನಾಗಿದ್ದು ಶೈವದೇವರಿಗೆ ದತ್ತಿಬಿಟ್ಟರೆ, ಅದನ್ನು ಪರಮತ ಸಹಿಷ್ಣುತೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಪ್ರಭುತ್ವಗಳು ತಮಗೆ ಪ್ರಿಯವಾದ ಮತಕ್ಕೆ ಹೆಚ್ಚು ಆದ್ಯತೆ  ಕೊಡುವುದು ಸಹಜವಾಗಿತ್ತು. ರಾಜ್ಯದ ಎಲ್ಲ ಪ್ರಮುಖ ಸಮುದಾಯಗಳ ಧಾರ್ಮಿಕ ಕೇಂದ್ರಗಳಿಗೆ ದತ್ತಿ ಬಿಡುವುದು ಕೂಡ ಒಂದು ಸಾಮಾನ್ಯ ರಾಜಕೀಯ ಕ್ರಮವಾಗಿತ್ತು. ಅದರಲ್ಲೂ ಧರ್ಮ ಪಂಥ ಯಾವುದೇ ಇರಲಿ, ಜನಪ್ರಿಯವಾದ ದೈವಗಳಿಗೆ ಮನ್ನಣೆ ನೀಡುವುದು ಜನಬೆಂಬಲ ಪಡೆಯುವ ತಂತ್ರವೂ ಆಗಿತ್ತು. ಈ ಕ್ರಮವನ್ನು ಆಧುನಿಕ ರಾಜಕಾರಣದಲ್ಲೂ ಕಾಣಬಹುದು. ಸ್ಥಳೀಯ ಜನಸಮುದಾಯಗಳ ಜತೆ ನೇರ ಸಂಬಂಧ ಇರಿಸಿಕೊಳ್ಳಬೇಕಾದ ಮಾಂಡಲಿಕರು ಇದನ್ನು ವಿಶೇಷವಾಗಿ ಮಾಡುತ್ತಿದ್ದರು.  ೧೩೪೩ರ ಚುಂಚನಗಿರಿ ಶಾಸನವು ಹೊಯ್ಸಳರ ಮಾಂಡಲಿಕ ಯಲಹಂಕನಾಡ ಪ್ರಭು ರಣಭೈರೇಗೌಡನು, ತನ್ನ ಮನೆದೇವರಾದ ಕಾಲಭೈರವನಿಗೆ ದಾನಕೊಟ್ಟ ವಿವರವನ್ನು ಒಳಗೊಂಡಿದೆ; ೧೪೪೮ರ ಚುಂಚನಹಳ್ಳಿ ದಾನಶಾಸನ ಪಾಠವನ್ನು ಗಮನಿಸಬಹುದು:

ಚುಂಚನಭಯಿರ ದೇವರಿಗೆ ಶ್ರೀಮನ್ಮಹಾ ಮಂಡಳೇಶ್ವರ ಮೇದಿನೀ ಮೀಸೆಯರ ಗಂಡ, ಕಠಾರಿ ಸಾಳುವ ನರಸಿಂಹರಾಜ ವೊಡೆಯರ ಮನೆಯ ಪ್ರಧಾನ ವಿರುಪಾಕ್ಷದೇವ ಅಂಣಗಳು ಕೊಟ ಧರ್ಮಶಾಸನ. ಆರಣಿಯ ಸ್ಥಳದ ಚುಂಚನಹಳ್ಳಿಯ ಗ್ರಾಮವನು ಮಕರ ಸಂಕ್ರಾಂತಿ ಪುಣ್ಯದಲಿ ಸಹಿರಂಣ್ಯೋದಕ ದಾನ ಧಾರಾಪೂರ್ವ್ವಕವಾಗಿ ಧಾರೆಯನೆ ಱದು ಕೊಟೆವಾಗಿ.[3]

ಮೂಲದಲ್ಲಿ ಶೈವರಾಗಿದ್ದ ಹೊಯ್ಸಳರು ವಿಜಯನಗರದವರು ನಂತರ ಶ್ರೀವೈಷ್ಣವ ಮತದ ಪೋಷಕರಾದರಷ್ಟೆ. ಪ್ರಭುತ್ವಗಳು ನಿರ್ದಿಷ್ಟ ಮತಕ್ಕೆ ತಮ್ಮ ನಿಷ್ಠೆ ಬದಲಿಸಿದಾಗ, ಇದರ ಪರಿಣಾಮವು ವಿಭಿನ್ನ ಪಂಥಗಳ ಮೇಲೆ ಹೇಗಾಗುತ್ತಿತ್ತು ಎಂಬುದನ್ನು ಇನ್ನೂ ವಿಶ್ಲೇಷಿಸಬೇಕಿದೆ. ವಿಷ್ಣುವರ್ಧನನ ಮತಾಂತರದಿಂದ ವೈಷ್ಣವರು ರಾಜಗುರುಗಳಾದ ಬಳಿಕ, ಕಾಪಾಲಿಕ-ವೈಷ್ಣವ ಸಂಘರ್ಷಗಳು ಬೇಕಾದಷ್ಟು ನಡೆದವು. ಇದಕ್ಕಿರುವ ಒಂದು ಸಣ್ಣ ಸೂಚನೆ ಎಂದರೆ, ಚುಂಚನಗಿರಿ ಸಮೀಪದ ಮೇಲುಕೋಟೆಯಲ್ಲಿದ್ದ ರಾಮಾನುಜರು ಕಾಪಾಲಿಕರನ್ನು  ಟೀಕಿಸುವುದು. ಚುಂಚನಗಿರಿ ಭೈರವನು ಕಾವೇರಿ ತೀರದ ಚುಂಚನಕಟ್ಟೆಯನ್ನು ರಾಮನಿಗೆ ಬಿಟ್ಟುಕೊಟ್ಟು,    ‘ಅಗ್ರಾರಕ್ಕಿಂತ ಇದು ಲೇಸೆಂದು’ ಚುಂಚನಗಿರಿಗೆ ವಲಸೆ ಬರುವ ಮಿತ್ ಕೂಡ ಇದಕ್ಕೆ ಪೂರಕವಾಗಿದೆ.

ದುಡಿಕೆಯುಳ್ಳ ಕೃಷಿಕ ಸಮುದಾಯದ ಜೀವನದಲ್ಲಿ ಆಳವಾಗಿ ಬೇರು ಬಿಟ್ಟಿದ್ದ ದೈವಿಕ ಆಚರಣೆಗಳನ್ನು, ಪ್ರಭುತ್ವದ ನೀತಿಗಳಲ್ಲಾಗುವ ಏರುಪೇರುಗಳು ಸಾಮಾನ್ಯವಾಗಿ ಅಲುಗಿಸುತ್ತಿರಲಿಲ್ಲ. ಹಳೇಬೀಡಿನ ಶಾಂತಲೇಶ್ವರ ಹೊಯ್ಸಳೇಶ್ವರ ಗುಡಿಗಳ ಹೊರಗೋಡೆ ಹಾಗೂ ಗೋಪುರಗಳು, ಭೈರವ ಮೂರ್ತಿಗಳಿಂದ ತುಂಬಿಹೋಗಿವೆ. ಇದರ ಹಿಂದೆ ಚುಂಚನಗಿರಿ ಪರಿಸರದಲ್ಲಿದ್ದ ಕಾಪಾಲಿಕರ ಭೈರವಾರಾಧನೆಯ ಪ್ರಭಾವವಿದೆ. ಲೊರೆಂಜೈನ್ ಪ್ರಕಾರ, ಮೈಸೂರು ಭಾಗದಲ್ಲಿ ೮-೯ನೇ ಶತಮಾನಗಳಿಂದಲೇ ಕಾಪಾಲಿಕ ಪಂಥವು ಬಲವಾಗಿತ್ತು. ಹಾಸನ ಜಿಲ್ಲೆಯ ಶಾಸನಗಳಲ್ಲಿ ಭೈರವದೇವರಿಗೆ ದತ್ತಿಕೊಟ್ಟ ಪ್ರಸ್ತಾಪಗಳು ಬಹಳ ಇವೆ. ಈಗಲೂ ಬೇಲೂರು ಹಳೆಬೀಡು ಭಾಗದಲ್ಲಿ ಭೈರವಾರಾಧನೆ ದಟ್ಟವಾಗಿದೆ. ಇಲ್ಲಿ ನೂರಾರು ಭೈರವನ ಗುಡಿಗಳಿವೆ. ಭೈರವ ಜೋಗಿ ಸಿದ್ಧ ಹೆಸರಿನ ಹಳ್ಳಿಗಳಿವೆ. ಜನ ಮನೆಗೆ ಅಂಗಡಿಗೆ ವಾಹನಗಳ ಮೇಲೆ ಭೈರವನ ಹೆಸರನ್ನು ಬರೆಸಿರುವುದು ಕಾಣುತ್ತದೆ. ಕಾಪಾಲಿಕ ಹಾಗೂ ನಾಥಪಂಥಗಳು ದಾರ್ಶನಿಕ ಪಂಥಗಳಾಗಿ ಇರುವ ಬದಲಿಗೆ,  ಸಮುದಾಯಗಳಲ್ಲಿ ಭೈರವರಾಧನೆಯ ರೂಪದಲ್ಲಿ ಇದ್ದುದೇ ಹೆಚ್ಚು. ಅದರಲ್ಲೂ ಭೈರವಾರಾಧನೆಯ ಭಾಗವಾಗಿರುವ ಬಲಿಪದ್ಧತಿಯು ಜನರ ಆಹಾರ ಸಂಸ್ಕೃತಿಯ ಭಾಗವಾಗಿತ್ತು.

ಕುಂದಾಪುರ ಸೀಮೆಯ ಬಸರೂರಿನ ಆಸುಪಾಸಿನಲ್ಲಿ ನಾಥಪಂಥಿ ಜೋಗಿಗಳು ವ್ಯಾಪಕವಾಗಿ ಇದ್ದಾರೆ. ೧೨ನೇ ಶತಮಾನದ ಹೊತ್ತಿಗೆ ಬಸರೂರಲ್ಲಿ ನಾಥ ಪ್ರಭಾವ ಹರಡಿತ್ತು.  ಬಾರಕೂರು (ಉಡುಪಿ) ಕೇಂದ್ರದಿಂದ ಕರಾವಳಿಯನ್ನು ಆಳಿದ ಅಳುಪ ರಾಜರು (ಕ್ರಿಶ.೧೦-೧೩) ಕದ್ರಿ ಮಂಜುನಾಥನ ಭಕ್ತರು. ವಸುಧೇಂದ್ರ ಅಳುಪನು ಮಂಜುನಾಥ ದೇವರಿಗೆ ದತ್ತಿಗಳನ್ನು  ಬಿಡುತ್ತಾನೆ.  ಬಾರಕೂರಿನ ಮಣಿಗಾರಕೇರಿ ಸಿದ್ದೇಶ್ವರ ಗುಡಿಯು ಬಹುಶಃ ನಾಥಪಂಥೀಯರದ್ದು ಎಂದು ಕಾಣುತ್ತದೆ. ಅಳುಪರು ಜೋಗಿಮಠದ ನಾಥರಿಗೆ ದಾನ ಕೊಟ್ಟ ಶಾಸನಗಳಿವೆ.[4]  ಇವರು ಬಾರಕೂರಿನಲ್ಲಿ ಸದಾನಂದ ಜೋಗಿಮಠ ಎಂಬ ಮಠವನ್ನು ಕಟ್ಟಿಸಿದರು;[5] ೧೫೩೧ರ ಬಸರೂರು ಶಾಸನವು ಅಂಬಾಲ ಜೋಗಿಗೆ ಪೂಜೆ ಮಾಡಲು ದಾನ ಕೊಟ್ಟ ವಿಷಯವನ್ನು  ಒಳಗೊಂಡಿದೆ. ಬಸರೂರಿನ ೩೮೧ನೇ ಶಾಸನವು (ಕ್ರಿಶ.೧೬-೧೭) ನಾಥಪಂಥಕ್ಕೆ ಸಂಬಂಧಪಟ್ಟ ಹಲವು ಮಹತ್ವದ ವಿಚಾರಗಳನ್ನು ಒಳಗೊಂಡಿದೆ. ಬಾರಕೂರಿನ ವಿಟ್ಟರಸರ ಶಾಸನಗಳಲ್ಲಿ ಮುಖ್ಯವಾದುದು ಎಂದರೆ, ಕದ್ರಿಮಠಕ್ಕೆ ಆಗ ಅಧಿಪತಿಯಾಗಿದ್ದ ಮಂಗಲನಾಥ ಒಡೆಯರಿಗೆ ಭೂದಾನ ಕೊಟ್ಟಿದ್ದು. ಆ ಶಾಸನದ ಪಾಠವಿಂತಿದೆ:

ಶ್ರೀ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ, ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭುವೇ, ಸ್ವಸ್ತಿಶ್ರೀ ವಿಜಯಾಭ್ಯುದಯ ಶಖವರುಸ ೧೩೯೭ ವರ್ತ್ತಮಾನ ಮನ್ಮಥ ಸಂವಶ್ಚರದ ಮಾಗ ಸುದ್ದ ೧ವು ಗುರುವಾರದಲು, ಶ್ರೀ ಮಂಮಹಾರಾಜಾಧಿರಾಜ ರಾಜಪರಮೇಸ್ವರ ಶ್ರೀವೀರಪ್ರತಾಪ ಪ್ರಹುಡ ವಿರೂಪಾಕ್ಷ ಮಹಾರಾಯರು ಚತುಸಮೂದ್ರ ಮಧ್ಯ ರತ್ನಸಿಂಹಾಸನ ರೂಢರಾಗಿ ಚಿತೈಸುತಿರಲು, ಅವರ ನಿರೂಪದಿಂದೆ ಮಹಾಪ್ರಧಾನ ಸಿಂಗಂಣದಂಣಾಯ್ಕರು ಸಕಲರಾಣೆಯಗಳನು ಪ್ರತಿಪಾಲಿಸುತ್ತಿರಲು, ಅವರ ನಿರೂಪದಿಂದೆ ವಿಟರಸವೊಡೆಯರು ಮಂಗಲೂರು ಬಾರಕೂರ ರಾಜ್ಯಗಳ ಪಾಲಿಸುತಿಹ ಕಾಲದಲ್ಲಿ, ಆ ವಿಠಪ ಒಡೆಯರು ಕಟ್ಟಳೆಯವರು ಬಂಗರು ಚಉಟರು ಸಹವಾಗಿ ರಾಜ್ಯವನೂ ಆಳುವಕಾಲದಲ್ಲಿ, ಮಂಗಲೂರ ರಾಜ್ಯಕ್ಕೆ ಆದಿಸ್ತೆನವರ ಕದಿರೆಯ ಸ್ಥಾನಿಕರು, ರಾವಳ ಪಳಿಯನು ಗಣಪಂಣಾಳುವನು ರಾಯರ ಸೇನಬೋವನು ಗೊಮ್ಮಸೇನಬೋವನು ಯಿಂತೀ ನಾಲ್ವರು ಸೇನಬೋವರೂ ತಮ್ಮೊಳೇಕಸ್ತರರಾಗಿ ಮಂಗಳನಾಥವೊಡೆಯರಿಗೆ ಕೊಟ್ಟ ಭೂಮಿಯ ಶಿಲಾಶಾಸನದ ಕ್ರಮವೆಂತೆಂದರೆ, ಆ ಠಾವಿನ ಚತುಸೀಮೆಯ ವಿವರ. ಕೈವಟ್ಟಲ ಕೆಱೀಯಿಂದಂ ಮೂಡಲು ತಾವರೆಯ ಕೆಱೀಯಿಂದಂ ಪಡುವಲು ಬಡಗಣ ಬೆಟದಿಂದ ತೆಂಕಲು ಯಿಂತೀ ಚತುಸೀಮೆಯೊಳಗುಳ್ಳ ಹಿತ್ತಿಲು ನಿಧಿ ನಿಕ್ಷೇಪ ಜಲ ಪಾಷಾಣ ಆಕ್ಷೀಣಿ ಆಗಾಮಿ ಸಿಧಸಾಧ್ಯವೆಂಬ ಅಷ್ಟಭೋಗ ತೇಜಶ್ವಾಮ್ಯಸಹವಾಗಿ  ಮಂಗಳನಾತ ಒಡೆಯವರ ಪರೆಯಾಗಿ ಕದಿರೆಯಾ ಸುದ್ಧಸಿವಸ್ತನದಲಿ ಭಾಳುರೆಲ್ಲಕ್ಕು ರಾವಳು ಪಳಿಯರು ನಾಲ್ವರು ಸೇನಬೋವರು ಅಂತು ಆಯಿವರು ಆ ಭೂಮಿಯನೂ ಧಾರಾಪೂರ್ವಕವಾಗಿ ಧಾರೆಯೆಱೀದು ಕೊಟ್ಟೆವು…. ಯಿದಕ್ಕೆ ನಂಮ ಸಿಸಾಂತರ ತಪ್ಪೆಉ. ಶ್ರೀಮತು ಮಂಗಳನಾಥವೊಡೆಯರು ಮಾಡಿಸಿದ ಯೆರಡು ತೋಟದೊಳಗೆ ಚಂದ್ರನಾಥ ಒಡೆಯ ಸಿಸ್ಯರು ಮಂಗಳನಾಥ ಒಡೆಯರೂ ಯಿ ಕದಿರೆಯಲಿ ಆಳು ಆರಸುಗಳು ಯಿ ಯೆರಡು ತೋಟವನು ರಕ್ಷಿಸಿ ಆ ಫಲಭೋಗದಿಂದ ಗೋರಕ್ಷನಾಥನ ನಿವೇದ್ಯೆ ಬೆಳಕು ಚಂದ್ರನಾಥನ ನಿವೇದ್ಯೆ ಬೆಳಕು. ವರುಷಕೆ ಭಿಕ್ಷೆ ಅಯನಕ್ಕೆ ಬಂದ ಸಮೆಯಕ್ಕೆ ಒಂದು ಹೊತ್ತಿನ ಅಂನವ ಕೊಡುಉದು. ಮಂಗಳನಾಥ ಒಡೆಯರು ಮಾಡಿದ ಧರ್ಮ್ಮದಾನ ಪಾಲನ…

ಈ ಶಾಸನದ ಪ್ರಕಾರ ಮಂಗಲನಾಥನು ಕದಲಿಮಠದ ಜೋಗಿ ಅರಸನು. ಇದೇ ಕ್ರಮದಲ್ಲಿ, ಮುಂದೆ ವಿಟ್ಲದ ಡೊಂಬ ಅರಸರು ವಿಟ್ಲಮಠದ ನಾಥರನ್ನು ತಮ್ಮ ಗುರುವಾಗಿ ಸ್ವೀಕರಿಸಿ, ಮಠಕ್ಕೆ ಭೂದಾನ ಮಾಡಿದರು. ಇದರಿಂದಲೇ ವಿಟ್ಲಮಠದ ನಾಥರಿಗೆ ರಾಜಗುರು ಪದವಿ ಬಂತೆಂದು ಹೇಳಲಾಗುತ್ತದೆ. ಯೋಗಿಗಳಿಗೆ ಅವರು ಯೌಗಿಕ ಸಾಧನೆಗಳಿಗಾಗಿ ಯೋಗಿಚಕ್ರವರ್ತಿ, ಶೂನ್ಯಸಿಂಹಾಸನಾಧೀಶ ಎಂಬ ಬಿರುದುಗಳು ಇರುತ್ತಿದ್ದವು. ನಂತರ ಇವನ್ನು ಪ್ರಭುತ್ವಗಳು ಕೊಡಮಾಡುತ್ತ ಹೋದವು. ಸೂಫಿಗಳು ಕೂಡ ಮಧ್ಯಕಾಲೀನ ರಾಜರಿಂದ ದೊಡ್ಡ ಪ್ರಮಾಣದ ದೇಣಿಗೆಗಳನ್ನು ಸ್ವೀಕರಿಸಿ ರಾಜಗುರುಗಳಾದರು. ಇದು ಈ ಪಂಥಗಳಲ್ಲಿ ಗಹನವಾದ ಪರಿವರ್ತನೆಗಳನ್ನು ತರಲು ಕಾರಣವಾಯಿತು.

ಕೋಲಾರ ಸುತ್ತಮುತ್ತ ಆಳ್ವಿಕೆ ನಡೆಸಿದ ಆವತಿನಾಡಿನ ಗೌಡಪ್ರಭುಗಳು ಭೈರವಾರಾಧಕರಾಗಿದ್ದರು. ಯಲಹಂಕನಾಡಿನ ಪ್ರಭು ರಣಭೈರೇಗೌಡನು ಭೈರವದೇವರಿಗೆ ದತ್ತಿ ಬಿಡುತ್ತಾನೆ. ದೊಡ್ಡಬಳ್ಳಾಪರ ಚಿಕ್ಕಬಳ್ಳಾಪುರ ದೇವನಹಳ್ಳಿ ಹಾಗೂ ಕೊರಟಗೆರೆ ಪಾಳೇಗಾರರ ಹೆಸರಲ್ಲಿ, ಭೈರವ ಮತ್ತು ಜೋಗಿ ಎಂಬ ದೈವ ಹಾಗೂ ಪಂಥ ವಾಚಕಗಳು ಸಾಮಾನ್ಯ. ಇವರೆಲ್ಲರೂ ತಂತಮ್ಮ ಆಡಳಿತ ಭಾಗದಲ್ಲಿ ಬರುತ್ತಿದ್ದೊಕಾಪಾಲಿಕ ಯತಿಗಳನ್ನೂ ಸಿದ್ಧರಮಠಗಳನ್ನೂ ಭೈರವಗುಡಿಗಳನ್ನೂ ಪೋಷಣೆ ಮಾಡಿದವರು. ಚಿತ್ರದುರ್ಗದ  ಪಾಳೇಗಾರರು, ಅಲ್ಲಿದ್ದ ಸಿದ್ಧಪಂಥದ ಯತಿಗಳಿಗೂ ಅವರ ಮಠಗಳಿಗೂ ಆಶ್ರಯ ಕೊಟ್ಟರು. ಅನೇಕ ಪಾಳೆಯಗಾರರು ತಮ್ಮನ್ನು ಸಿದ್ಧರ ಶಿಷ್ಯರು ಎಂದೇ ಭಾವಿಸಿದ್ದರು. ಅವರು    ‘ಸಿದ್ಧರ ದಯ’ವನ್ನು ಕಳೆದುಕೊಂಡ ಕಾರಣದಿಂದಲೇ ದುರ್ಗದ ಪತನವಾಯಿತು ಎಂಬ ಹೇಳಿಕೆ, ಇಲ್ಲಿನ ಜನಪದ ಸಾಹಿತ್ಯದಲ್ಲಿ ಬರುತ್ತದೆ. ಈ ಸಿದ್ಧರು ಯಾರೂ ಆಗಿರದೆ, ಲುಂಕೆಮಲೆ ಹಾಗೂ ಚಿತ್ರದುರ್ಗದ ಹುಲಿಗೊಂದಿ ಮಠದ ನಾಥರಾಗಿದ್ದರು.

ತ್ರ್ಯಂಬಕ-ಕದ್ರಿ ಝುಂಡಿಪಥವಿರುವ ಪಶ್ಚಿಮಘಟ್ಟದಲ್ಲಿರುವ  ಯಾಣ, ಚಂದ್ರಗುತ್ತಿ, ಜೋಗ, ಸಿದ್ಧಾಪುರ, ಕೊಡಚಾದ್ರಿ, ಕಮಲಶಿಲೆ, ಬಾರಕೂರು, ಮುಂತಾದವು ನಾಥರ ತಾಣಗಳಷ್ಟೆ. ಇದೇ ಘಟ್ಟಸಾಲಿನಲ್ಲಿ ರಾಜ್ಯ ಕಟ್ಟಿ ಆಳ್ವಿಕೆ ಮಾಡಿದ,  ಬೀಳಗಿ, ಗೇರುಸೊಪ್ಪೆ,  ಕಳಸ ಕಾರ್ಕಳದ ಸಣ್ಣಪುಟ್ಟ ರಾಜರು, ತಮ್ಮ ಪರಿಸರದ ನಾಥರನ್ನೂ ಭೈರವಾರಾಧನೆಯನ್ನೂ ಬೆಂಬಲಿಸಿದರು. ಇವರಲ್ಲಿ ಬಹಳ ಜನ  ಭೈರವ ಹೆಸರಿನವರು ಅಥವಾ ಭೈರರಸರು. ಕಾರ್ಕಳದ  ದೊರೆಯ ಹೆಸರು ಭೈರವರಾಯ. ಗೇರುಸೊಪ್ಪೆಯ ರಾಣಿ ಚೆನ್ನ ಭೈರಾದೇವಿ. ಈೊಘಟ್ಟೊಭಾಗದಲ್ಲಿದ್ದ ಭೈರವಾರಾಧನೆಯನ್ನು ಇನ್ನೂ ತಪಶೀಲಾಗಿ ಶೋಧ ಮಾಡಬೇಕಿದೆ.

ಮೂಲತಃ ವೈಷ್ಣವರಾದ ಮೈಸೂರು ದೊರೆಗಳು, ಶೈವ ಪಂಥಗಳ ವಿಷಯದಲ್ಲಿ ಅಷ್ಟು ಉತ್ಸುಕತೆ ತೋರಿದಂತಿಲ್ಲ. ಆದರೂ ತಮ್ಮ ವೈಯಕ್ತಿಕ ನಂಬಿಕೆಯ ಧರ್ಮಗಳಾಚೆ ಅವರು ಉದಾರವಾದಿ ಅರಸರಾಗಿದ್ದರು.  ರಾಜಧರ್ಮದ ಭಾಗವಾಗಿ, ಎಲ್ಲ ಪಂಥದ ಗುರುಗಳನ್ನೂ ಮಠಗಳನ್ನೂ  ಅವರು ಗೌರವಿಸುತ್ತಿದ್ದರು. ನಾಥರ ದಾಖಲೆಗಳ ಪ್ರಕಾರ, ಒಡೆಯರ ಪಟ್ಟದ ಸಂದರ್ಭದಲ್ಲಿ ಚುಂಚನಗಿರಿಯ ನಾಥಯೋಗಿಯೂ ಇದ್ದು ಆರ್ಶೀವಾದ ಮಾಡುತ್ತಿದ್ದನು. ಇದಕ್ಕೆ ಪೂರಕವಾಗಿ ಅರಮನೆಯ ಚಿತ್ರಸಂಪುಟಗಳಲ್ಲಿ ಚುಂಚನಗಿರಿಯ ನಾಥರಿದ್ದಾರೆ.  ಅರಮನೆಯ ಚಿತ್ರಗಾರರಿಂದ ಒಡೆಯರು ತಮ್ಮ ಪರಿವಾರದ ವಿದ್ವಾಂಸರ ಸಂಗೀತಗಾರರ ಜಟ್ಟಿಗಳ ಅಧಿಕಾರಿಗಳ ಭಾವಚಿತ್ರಗಳನ್ನು ಬರೆಯಿಸುತ್ತಿದ್ದರು. ಇಂತಹ ಒಂದು ಚಿತ್ರಸಂಪುಟವು ಮೈಸೂರಿನ ಜಗನ್ಮೋಹಿನಿ ಮಹಲಿನಲ್ಲಿದ್ದು, ಅದರಲ್ಲಿ ‘ಚುಂಚನಗಿರಿ ಜೋಗಿ’ ‘ನಾಥರೂ’ ಎಂಬ ಕೆಳಬರೆಹವಿರುವ ಎರಡು ಅಪೂರ್ವ ಚಿತ್ರಗಳಿವೆ. ವಿಶೇಷ ವೆಂದರೆ, ಇಲ್ಲಿನ ಒಬ್ಬ ನಾಥನು ಗಡ್ಡಮೀಸೆ ಬಿಟ್ಟು, ವಜ್ರದಾಭರಣಗಳನ್ನು ಸಿಕ್ಕಿಸಿದ ಪೇಟವನ್ನು ತೊಟ್ಟಿರುವುದು. ಚುಂಚನಗಿರಿ ಜೋಗಿಯ ಕಿವಿಯಲ್ಲಿ ಕುಂಡಲಗಳು ಎದ್ದು ಕಾಣುತ್ತಿವೆ. ಇಲ್ಲೂ ಸಣ್ಣ ಆಭರಣವುಳ್ಳ ಪೇಟವಿದೆ.[6] ನಂಜನಗೂಡಿನ ವೀರಭದ್ರನು ರಚಿಸಿದ ಅರ್ಜುನಜೋಗಿ ಹಾಡಿನಲ್ಲಿ, ಅರ್ಜುನನು ಜೋಗಿಗಳಿಗೆ ಕಾಣಿಕೆ ಕೊಟ್ಟು ಗೌರವಿಸುವ ಒಂದು ಸನ್ನಿವೇಶವಿದೆ. ಅರ್ಜುನನು ಹಿರಿದಾದ ಜೋಗಿಗಳಿಗೆ ತ್ರಿಶೂಲಗಳನ್ನೂ ಬಂಗಾರದ ಶಿಂಗಿನಾಥಗಳನ್ನೂ ಗುರು ಮತ್ಸ್ಯೇಂದ್ರನಾಥರ  ಚಿತ್ರವನ್ನು ಗೇಯಿಸಿದ ಬಿರುದುಗಳನ್ನೂ ಕೊಟ್ಟು ಮನ್ನಿಸುತ್ತಾನೆ. (೨.೨೭೫) ಇದು ಮೈಸೂರು ದೊರೆಗಳು ಚುಂಚನಗಿರಿ ಜೋಗಿಗಳಿಗೆ ಕೊಟ್ಟ ಮನ್ನಣೆಯನ್ನು ನೆನಪಿಸುವಂತಿದೆ. ಆ ಕಾಲಕ್ಕೆ ಮೈಸೂರು ಅರಮನೆಯು ನಾಥರಿಗೆ ಬೇಕಾದಷ್ಟು ರಾಜಮರ್ಯಾದೆ ಮಾಡಿದ್ದುದು ಸ್ಪಷ್ಟವಾಗಿದೆ. ತಮ್ಮ ಸರ್ಕ್ಯೂಟಿನಲ್ಲಿ ರಾಜರು ಆಯಾ ಭಾಗ ಜೋಗಿಮಠಗಳಗೆ ಸೌಜನ್ಯದ ಭೇಟಿ ಕೊಡುತ್ತಿದ್ದರು. ಮೈಸೂರು ಸರಕಾರದ ಹುಕುಮಿನ ಪ್ರಕಾರ, ಅಧಿಕಾರ ಸ್ವೀಕರಿಸಿದ ಚುಂಚನಗಿರಿಯ ನಾಥರು ಸಂಚಾರದಲ್ಲಿ ಅರಮನೆ ಕೊಟ್ಟ ಬಿರುದು ಬಾವಲಿಗಳ ಸಮೇತ ಹೋಗುತ್ತಿದ್ದರು. ಅವರ ಸಂಚಾರದಲ್ಲಿ ಉಕ್ಕಡದ ಅಧಿಕಾರಿಗಳಿಗೆ ರಹದಾರಿ ಸೂಚನೆಯನ್ನು ಸರಕಾರವು ಕೊಟ್ಟಿರುತ್ತಿತ್ತು. ಈ ಸಂಬಂಧವಾದ ಒಂದು ಹುಕುಂ ಹೀಗಿದೆ:

ಶ್ರೀ ಚುಂಚನಗಿರಿ ಶ್ರೀ ಸಿದ್ಧಸಿಂಹಾಸನ ಮಠದ ಜಗದ್ಗುರು ಶ್ರೀ ಭಕ್ತನಾಥಸ್ವಾಮಿಯವರು ಶಿಷ್ಯವರ್ಗದವರ ಆಚಾರ ವಿಚಾರಕ್ಕೂ ಮತ್ತು ಶಿಷ್ಟಾರ್ಚನೆಗೂ ಮೈಸೂರು ಸೀಮೆಯಲ್ಲಿ ಸಂಚಾರ ಮಾಡುವುದರಿಂದ, ಸದರಿ ಸ್ವಾಮಿಗಳವರು ನಿಮ್ಮನಿಮ್ಮ ಗಡಿಗಳ ಮಾರ್ಗವಾಗಿ ಬಂದಲ್ಲಿ, ಉಕ್ಕಡ ಕಣಿವೆಗಳಲ್ಲಿ ಅಟಕಾಯಿಸದೆ ಬಿಟ್ಟುಬಿಡುವುದು. ಖೈದುವಾರ್ ಜಾಗದಲ್ಲಿಳಿಸಿ ಉಳಿದ ಬಳಿಯಲ್ಲಿ ರಾತ್ರಿವೇಳೆ ಕಳ್ಳಕಾಕರ ಉಪದ್ರವವಾಗದಂತೆ ಖಬರುದಾರಿ ಮಾಡಿಸಿದರ ಮಜಲಿನಲ್ಲಿಯೂ ಮರ್ಯಾದೆಯಿಂದ ನಡೆದುಕೊಂಡು ಬರುವುದು. ಇವರ ಅಮರರಹಾ ನಮೂದಿಸಿರುವ ಬಿರುದು ಬಾವಲಿಗಳಿರುತ್ತಾದ್ದರಿಂದ, ನಿಮ್ಮ ನಿಮ್ಮ ಸರಹದ್ದುಗಳಲ್ಲಿ ತಡೆಯದೆ ಬಿಡುವುದು.[7]

ಮಠವು ತಮ್ಮ ಕೈಬಿಟ್ಟು ಹೋಗುವಾಗ, ಬಾರಾಪಂಥದವರು ಮಹಾರಾಜರಿಗೆ ಮಾಡಿದ ಅಪೀಲು ಪತ್ರದಲ್ಲಿ  ‘‘ಮೆಹರ್ಬಾನ್ ದಿವಾನ್ ಸರ್ ಮಿರ್ಜಾ ಸಾಹೇಬರು ಮಠವನ್ನು ಅಭಿವೃದ್ದಿಗೆ ತರುವುದಕ್ಕೋಸ್ಕರ ೧೯೨೨ನೇ ಇಸವಿಯಲ್ಲಿ ಶ್ರೀಮನ್ ಮಹಾರಾಜರವರಿಂದ ಬಿರುದಾವಳಿಗಳನ್ನು ಮಠಕ್ಕೆ ಕೊಡಿಸಿದರು. ಅಲ್ಲದೆ ತಿಂಗಳಿಗೆ ಒಂದು ನೂರು ರೂಪಾಯಿ ಗಳನ್ನು ಮಠಕ್ಕೆ ಸರ್ಕಾರದವರು ಕೊಡುವಂತೆ ಹುಕುಂ ಮಾಡಿದರು’’ಎಂಬ ಮಾತಿದೆ.[8] ಇಷ್ಟೆಲ್ಲ ದಾಖಲೆ ಇದ್ದರೂ ಮಠವನ್ನು  ಒಕ್ಕಲಿಗರು ವಶಪಡಿಸಿಕೊಳ್ಳುವ ಕಾಲಕ್ಕೆ, ಅರಮನೆಯು ಕಾಪಾಲಿಕರ ಹಾಗೂ ನಾಥರ ಪರವಾಗಿ ನಿಲ್ಲಲಿಲ್ಲ.

‘ಮುಸ್ಲಿಂ’ ಎನ್ನಲಾಗುವ ದೊರೆಗಳು ತಂತಮ್ಮ ರಾಜ್ಯದ ಜನಮನ್ನಣೆ ಪಡೆದ ಎಲ್ಲ ಯತಿಗಳ ಬಗ್ಗೆ ಗೌರವ ತೋರಿದರು. ನಾಥಪಂಥದ ಯೋಗಿಗಳು ಸೂಫಿಗಳ ಜತೆ ಒಡನಾಟ ಇರಿಸಿಕೊಂಡಿದ್ದರು. ಬಹಮನಿಗಳು ಹಾಗೂ ನಾಥರ ಸಂಬಂಧದ ಬಗ್ಗೆ ತಿಳಿಯುವುದಿಲ್ಲ. ಆದರೆ ಬಹಮನಿಗಳಿಗೆ ಗಾಣಗಾಪುರದ ನರಸಿಂಹದತ್ತರ ವಿಷಯದಲ್ಲಿ ಬಹಳ ಆದರವಿತ್ತು. ನಾಥಪಂಥದ ಪ್ರಭಾವವುಳ್ಳ ಅವಧೂತ ಮಠವಾದ ಸಿಂಧಗಿಯ ಜಕ್ಕಪ್ಪಯ್ಯನ ಮಠಕ್ಕೆ ಆದಿಲಶಾಹಿಗಳು, ಗೋಲಕೊಂಡದ ಸುಲ್ತಾನರು ಹಾಗೂ ಮೊಗಲರ ಆಲಂಗೀರ್ ಗಾಜಿ ಈ ಮೂವರೂ ಸನದುಗಳನ್ನು ಕೊಟ್ಟರು. ಟಿಪ್ಪು ಹೈದರರ ಕಾಲದಲ್ಲಿ, ಮೈಸೂರು ಭಾಗದ ಮಠಗಳಿಗೆ ಅವುಗಳ ಪಾರಂಪರಿಕ ಇನಾಮುಗಳನ್ನು ರದ್ದುಮಾಡಿದಂತೆ ತೋರುವುದಿಲ್ಲ. ವಿಟ್ಲದ ಮಠದಲ್ಲಿರುವ ತಾಮ್ರಶಾಸನವೊಂದು  ಮೆಹರನಾಥ ಎಂಬ ಮಠದ ನಾಥನಿಗೆ ಭೂಮಿ ಇನಾಮು ಕೊಟ್ಟಿರುವುದನ್ನು ದೃಢೀಕರಿಸುತ್ತದೆ. ಶಾಸನದಲ್ಲಿ ‘ನಳಸಂವತ್ಸರ ೧೨೨೪ ಎಂದು ಶಾಲಿವಾಹನ ಶಕವರ್ಷ’ವಿದೆ. ಈ ಶಾಸನವು ಫಾರಸಿ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿದೆ. ಅದರ ಕನ್ನಡದ ಭಾಗವಿಂತಿದೆ:

ಮೇರನಾಥ ಜೋಗಿಗೆ ನಡೆಯುವ ಯಿನಾಮು ಭೂಮಿಯನ್ನು ಚಾರಿಯಾಗಿ ನಡಸುವ ಬಗ್ಗೆ ಮಂಜೇಶ್ವರ ಅಮಿಲನ ಹೆಸರ್ರಿನಲ್ಲಿ ಹಜೂರತ್ತು ಬಾ ಸನ್ನದು ಪಟ್ಟ ಸಾದರು ಆಗಿ ಯಿರುವುದರಿಂದ|    ಸನದು ಪಟ್ಟ ನಖಲು ಜಮಾ|  ಬರದುಕೊಂಡು ಸನ್ನದು ಮೊರ್ಜಿಗೆ ಜೋಗಿ ಮಚಿರುರಿಗೆ|   ನಡೆಯುವ ಯಿನಾಮನ್ನು|  ಜಾರ್ರಿಯಾಗಿ ನಡ್ಸಕೊಂಡು ಬರುವದು. ದು ಶರಿಕು೩ನೆ ಮಾಹೆರ ಬಾನಿಸಾಲಹಿರ್ಸಾತ್ತಾ ನಳಸಂವತ್ಸರ ಸಂ ಇ ೧೨೨೪ ಮಾಹಂಮದ ರಾಮೀ ಪಂದುತ್ತಮನಶಿ|  ಬರಹಾ ಗುರುತು ನೋಡಿಕೊಳುವುದು ಕಲಮು ಶುದ್ಧಾಯಂಬುದಗಿ.[9]

ಶಾಸನದಲ್ಲಿ ‘ಸುಲತ್ತಾನಲ್ಲಾ’ ಎಂಬ ಶಬ್ದವಿದೆ. ಇದು ಯಾವ ಸುಲ್ತಾನನದು ಎಂಬುದು ಇನ್ನೂ ಖಚಿತವಾಗಬೇಕಿದೆ. ಬ್ರಿಟಿಶರು ಮುಂಬೈ ಮದರಾಸುಗಳಿಂದ ನೇರ ಆಳ್ವಿಕೆ ಮಾಡುವಾಗ ಕರ್ನಾಟಕದ ಬಹುತೇಕ ನಾಥಮಠಗಳು, ಅವರ ಆಡಳಿತಕ್ಕೆ ಒಳಪಟ್ಟಿದ್ದವು. ಆಗವರು ಯಾವ ಧೋರಣೆ ತಳೆದರು ಎಂಬ ಮಾಹಿತಿ ಸಿಗುತ್ತಿಲ್ಲ. ಆದರೆ ಅವರು ತಮ್ಮ ಜನಗಣತಿ ದಾಖಲೆಗಳಲ್ಲಿ ಕಾಪಾಲಿಕರನ್ನು ಹಾಗೂ ಜೋಗಿಗಳನ್ನು ಇಡಿಯಾಗಿ ಸಮೀಕ್ಷೆ ಮಾಡಿದರು. ಆಂಗ್ಲ ಅಧಿಕಾರಿಗಳು ಮತ್ತು ವಿದ್ವಾಂಸರು ನಾಥಪಂಥದ ಬಗ್ಗೆ ತಮ್ಮ ಸಂಶೋಧನ ಗ್ರಂಥಗಳನ್ನು ಪ್ರಕಟಿಸಿದರು. ಈ ಕುರಿತು ಪ್ರಮಾಣ ಗ್ರಂಥವನ್ನು ರಚಿಸಿದ ಬ್ರಿಗ್ಸನು  ಮೂಲತಃ ಬ್ರಿಟಿಶ್ ಅಧಿಕಾರಿಯಾಗಿದ್ದವನು. ಬಹುಶಃ ಆಯುಧಧಾರಣೆ ಮಾಡುವ ನಿಗೂಢ ಆಚರಣೆಗಳುಳ್ಳ ಎಲ್ಲ ಪಂಥಗಳ ಬಗ್ಗೆ ಬ್ರಿಟಿಶರಿಗೆ ಒಂದು ಬಗೆಯ ಆತಂಕವಿತ್ತು. ತೀರ ತಮಗೆ ಕಷ್ಟಕೊಡಬಹುದಾದ ಆಚರಣೆಗಳನ್ನು ಅವರು ಮುಲಾಜಿಲ್ಲದೆ ನಿಷೇಧಿಸಿಯೂ ಇದ್ದರು. ೧೮೬೧ರಲ್ಲಿ ಕದ್ರಿಮಠದ ಅರಸರಾಗಿದ್ದ ಜ್ವಾಲಾನಾಥರಿಗೆ ಮದರಾಸು ಸರಕಾರವು ರಾಜಮರ್ಯಾದೆ ತೋರಿ, ೪ ಕೋವಿ, ೪ ಖಡ್ಗಗಳನ್ನು ಕೊಟ್ಟಿತ್ತು ಎಂದು ತಿಳಿಯುತ್ತದೆ. ಉಳಿದಂತೆ, ಬ್ರಿಟಿಶರು ತಮ್ಮ  ಆಳ್ವಿಕೆಗೆ ಯಾವ ಬಗೆಯಲ್ಲೂ ಸವಾಲು ಒಡ್ಡಿರದ ನಾಥರ ಬಗ್ಗೆ ನಿರ್ಲಿಪ್ತವಾಗಿ ಇದ್ದರೆಂದು ತೋರುತ್ತದೆ. ಆದರೆ  ಉತ್ತರ ಭಾರತದಲ್ಲಿ ಬ್ರಿಗ್ಸನಂತೆ ಇಲ್ಲಿನ ಆಂಗ್ಲ ಅಧಿಕಾರಿಗಳು ನಾಥರ ಅಧ್ಯಯನ ಮಾಡಲಿಲ್ಲ.

೧೯೪೭ರ ನಂತರದ ಆಧುನಿಕ ಸರಕಾರಗಳು ಕೂಡ ನಾಥರಿಗೆ ಮನ್ನಣೆ ನೀಡುತ್ತ ಬಂದವು.  ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಮೈಸೂರು ಸರಕಾರವು ಒಂದು ಆಜ್ಞೆ ಹೊರಡಿಸಿ (೧೯೫೬) ಚುಂಚನಗಿರಿ ಮಠಕ್ಕೆ ಸರ್ಕಾರಿ ಮರ್ಯಾದೆಗಳನ್ನು ದೊರಕಿಸಿಕೊಟ್ಟಿತು. ಅದರಲ್ಲಿ ಮಠಕ್ಕೆ ೧ ಆನೆ, ೫ ಕುದುರೆ, ೨೦ ಎತ್ತು, ೨ ಕಾರು, ೮ ಚರಪಟ್ಟಾಧಿಕಾರಿಗಳು, ೮ಸೈಕಲ್ಲು, ೮ ಅಂಗರಕ್ಷಕರು, (ಇವರಲ್ಲಿ ೪ಜನ ಸೈನಿಕರು) ನಾಲ್ಕು ಭರ್ಜಿಗಳು, ೨ ಪೆಟ್ಟಿಗೆಬಂಡಿ, ೧ ಮೇನೆ, ೧ ಮೋಟಾರು ಬಸ್ಸು, ದಾಳಗಳು, ೫ ಮಂದಿ ಆಸ್ಥಾನ ಪಂಡಿತರು, ೪ ಬಂದೂಕು, ೪ ಪಿಸ್ತೂಲು, ವಂದಿಮಾಗಧರು, ೧೦ ಜವಾನರು, ೧೦ ಚಕ್ಮಾ ಬಂಡಿಗಳು ಸೇರಿದ್ದವು. ಆಗ ಚುಂಚನಗಿರಿ ಮಠಕ್ಕೆ ನಾಥದೀಕ್ಷೆ ಪಡೆದ ಪಟ್ಟವೇರಿದ್ದ ಭಕ್ತನಾಥರೇ ಅಧಿಪತಿಯಾಗಿದ್ದರು.

ನಾಥಪಂಥಕ್ಕೆ ರಾಜರಲ್ಲದೆ ಅವರ ಮಾಂಡಲಿಕರು, ವ್ಯಾಪಾರಿಗಳು ಹಾಗೂ ಜಮೀನುದಾರರು ಸಹ ಪೋಷಣೆ ಮಾಡಿಕೊಂಡು ಬಂದರು. ವಾಣಿಜ್ಯ ಪಟ್ಟಣಗಳಾದ  ಬಾರಕೂರು ಬಸರೂರುಗಳಲ್ಲಿ ನಾಥಪಂಥವು ಅಲ್ಲಿನ ವ್ಯಾಪಾರಿಗಳಿಂದ ಪೋಷಿತವಾಗಿತ್ತು. ಚುಂಚನಗಿರಿ ಸುತ್ತಲಿನ ಭೂಮಾಲಿಕರು ನಾಥಮಠಕ್ಕೆ ನಡೆದುಕೊಳ್ಳುತ್ತಿದ್ದರು. ಮುದ್ದಪ್ಪಗೌಡನು ಚುಂಚನಗಿರಿಯಲ್ಲಿ ನಾಗಚಾವಡಿ ಕಟ್ಟಿಸುತ್ತಾನೆ. ಕರಿಗೌಡನು ಮುಖಮಂಟಪಕ್ಕೆ ಹಿತ್ತಾಳೆ ಹೊದಿಕೆ ಹಾಕಿಸುತ್ತಾನೆ. ಹಿಂದಿನ ರಾಜರ, ಮಾಂಡಲಿಕರ ಹಾಗೂ ಜಮೀನುದಾರರ ಜಾಗದಲ್ಲಿ, ಈಗ ರಾಜಕಾರಣಿಗಳು ಉದ್ಯಮಿಗಳು ಬಂದಿದ್ದಾರೆ. ಕದ್ರಿಯ ಜೋಗಿಮಠದ ಭಕ್ತರಾಗಿದ್ದ ಮಂಗಳೂರಿನ ಬೀಡಿ ಉದ್ಯಮಿ ಪುತ್ತು ವೈಕುಂಠಶೇಠರು, ಕದ್ರಿಬೆಟ್ಟದ ನವನಾಥ ಕೆರೆಗಳ ಮೇಲೆ ನಾಥರ ಬಿಡಾರಕ್ಕೆ ಛತ್ರ ಕಟ್ಟಿಸುತ್ತಾರೆ; ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷರೂ ಹುಬ್ಬಳ್ಳಿಯ ಉದ್ಯಮಿಯೂ ಆದ ಶ್ರೀಮಧೂರಕರ ಅವರು, ನಾಥ ಪಂಥದ ಬಹುತೇಕ ಚಟುವಟಿಕೆಗಳ ಹಿಂದೆ ಆರ್ಥಿಕವಾಗಿ ನಿಂತಿದ್ದಾರೆ.  ೨೦೦೩-೦೪ರ ಝುಂಡಿ ಹಂಡಿಬಡಗನಾಥಕ್ಕೆ ಬಂದಾಗ, ಅವರು ನಾಥರ ಭೋಜನದ ಖರ್ಚು ನೋಡಿಕೊಂಡರು.

ಊಳಿಗಮಾನ್ಯ ಮಠಗಳು

ತ್ರ್ಯಂಬಕದಲ್ಲಿ ನಾನು ಹೆೋದ ಹೊತ್ತಿನಲ್ಲಿ ಹೊಲದ ತುಂಬ ಗೋಧಿಬೆಳೆ ಬೆಳೆದಿತ್ತು. ಮಠಕ್ಕೆ ಕೊಟ್ಟಿಗೆ ಕೆಲಸ, ಗದ್ದೆಕೆಲಸ ಹಾಗೂ ಅಡುಗೆ ಕೆಲಸಗಳಿಗೆ ಊರಿನ ಬೇರೆಬೇರೆ ಜನ ಬರುತ್ತಾರೆ. ಮಠದ ಆಸ್ತಿಯನ್ನು ಸಂಭಾಳಿಸಲು ಅನೇಕ ವೃತ್ತಿ ಸಮುದಾಯದ ಜನರ ನೆರವು ಬೇಕಾಗುತ್ತದೆ. ಅವರು ಬದುಕಿಗಾಗಿ ಮಠವನ್ನು ಅವಲಂಬಿಸಿರುತ್ತಾರೆ ಮತ್ತು ಮಠ ಅವರ ದುಡಿಮೆಯ ಮೇಲೆ ನಿಂತಿರುತ್ತದೆ. ಹೇಮಾವತಿಯ ಸಿದ್ಧೇಶ್ವರ ಗುಡಿಯಲ್ಲಿ, ಸೇವೆ ಮಾಡುವ ಜೋಗಿಗಳಿಗೆ, ಚಮಾಳ ಬಾರಿಸುವವರಿಗೆ, ಓಕುಳಿಯಾಡುವ ಹಾಗೂ ದೇವದಾಸಿಯರಿಗೆ ಉಂಬಳಿ ಜಮೀನಿದೆ. ಮಹಾರಾಷ್ಟ್ರದ ಬತ್ತೀಸ್‌ಶಿರಾಳದ ನಾಥಮಠವು ತನಗೆ ಸೇರಿದ ದೊಡ್ಡದೊಂದು ಹೊಲಗದ್ದೆಯ ಬಯಲಲ್ಲಿದೆ. ಮಠವು ಆಸ್ತಿಯಾದಾಗ, ಆ ಆಸ್ತಿಯನ್ನು ನಾಥರು ಸಂಭಾಳಿಸಬೇಕಾಗುತ್ತದೆ. ಅದಕ್ಕೆ ಮಠಾಧಿಪತಿಯ ಆಡಳಿತ ಸಾಮರ್ಥ್ಯ, ಅಧಿಕಾರಸ್ಥರ ಜತೆಗಿನ ಸಂಪರ್ಕ ಇವೆಲ್ಲ ಮುಖ್ಯವಾಗುತ್ತವೆ. ಮಠದ ಸಂಪತ್ತಿನ ಪ್ರಮಾಣದ ಮೇಲೆ ಬಾರಾಪಂಥದವರು ಮಠದ ಮಹಂತನಿಗೆ ಕಾರಭಾರಿಯನ್ನು  ನೇಮಿಸುತ್ತಾರೆ. ಈತ ಲೆಕ್ಕಪತ್ರ ನೋಡಿಕೊಳ್ಳುವವನು. ಚಿಕ್ಕಮಠಗಳಿಗೆ ಕಾರಭಾರಿ ಇರುವುದಿಲ್ಲ. ನಾಥನೆ ಎಲ್ಲವನ್ನು ನಿರ್ವಹಿಸಿಕೊಳ್ಳಬೇಕು.  ಚಂದ್ರಗುತ್ತಿ, ಹಲವೇರಿ ಮಠಗಳು ಒಬ್ಬೊಬ್ಬ ನಾಥನಿಂದ ಕೂಡಿದ್ದು ಏಕೋಪಾಧ್ಯಾಯ ಶಾಲೆಯಂತಿವೆ. ಕದ್ರಿಮಠಕ್ಕೆ ಸುಂದರನಾಥರು ಹಾಗೂ ಜ್ವಾಲಾನಾಥರು ಮುಖ್ಯಸ್ಥರಾಗಿದ್ದಾಗ, ಸದಾ ಧ್ಯಾನದಲ್ಲಿ ಇರುತ್ತಿದ್ದರಂತೆ.  ಮಠದ ಸಂಪತ್ತಿನ ನಿರ್ವಹಣೆ ವಿಷಯದಲ್ಲಿ ನಿರಾಸಕ್ತರಾಗಿದ್ದರಂತೆ. ಆದರೆ ಕದ್ರಿಮಠದ ಸೋಮನಾಥಜಿ ೧೯೬೯ರಲ್ಲಿ ಬಂದ ಬಳಿಕ, ಮಠದ ಜಮೀನನ್ನು ಸರಕಾರಕ್ಕೆ ಮಾರಿ, ಬಂದ ೭ ಲಕ್ಷ ಹಣವನ್ನು ಬ್ಯಾಂಕಿನಲ್ಲಿಟ್ಟು, ಮಠಕ್ಕೆ ಖಾಯಂ ಆದಾಯ ಬರುವಂತೆ ಮಾಡಿದರು. ಮಠದ ಸಂಪತ್ತನ್ನು ಸಂಭಾಳಿಸುವವರು ಜನಪ್ರಿಯ ಮಠಾಧಿಪತಿಗಳಾಗಿ ಪರಿಗಣಿತರಾಗುತ್ತಾರೆ. ಈಗಿನ ಚುಂಚನಗಿರಿ ಸ್ವಾಮಿಯವರಲ್ಲಿ ಜನ ಈ ಯಶಸ್ಸನ್ನು ನೋಡಿದ್ದಾರೆ.

ಹೀಗೆ ಉದ್ದಕ್ಕೂ ಆಳುವ ದೊರೆಗಳು, ಮಾಂಡಲಿಕರು, ಅಧಿಕಾರಿಗಳು, ಜಮೀನುದಾರರು ಹಾಗೂ ಉದ್ಯಮಿಗಳು ಮಠಗಳಿಗೆ ದಾನಗಳನ್ನು ಕೊಡುತ್ತಾ ಬಂದರು. ಇದರಿಂದ ಧ್ಯಾನ ಯೋಗ ಚಟುವಟಿಕೆಯ ಈ ಸನ್ಯಾಸಿ ಮಠಗಳು ಊಳಿಗಮಾನ್ಯ ಸ್ವರೂಪವನ್ನು ಪಡೆದವು. ಮಠಗಳಿಗೆ ರಾಜಮರ್ಯಾದೆಯಾಗಿ ಪ್ರಭುತ್ವಗಳು ಮೇನೆ ಪಲ್ಲಕ್ಕಿ ಆನೆ ಕುದುರೆಗಳನ್ನು ನೀಡುತ್ತಿದ್ದವು. ಅವನ್ನು ಪಡೆದ ಮಠಗಳು ಪರ್ಯಾಯ ಪ್ರಭುತ್ವಗಳಾಗುತ್ತಿದ್ದವು. ಜನರು ಮಠವನ್ನು ಸಂಸ್ಥಾನ ಎನ್ನುವುದು, ಯೋಗಿಗಳಿಗೆ  ರಾಜಗುರು ಅರಸು ಎಂದು ಕರೆಯುವುದು, ಅವರ ಪಟ್ಟಾಭಿಷೇಕ ಮಾಡುವುದು, ಅವರು ಪಟ್ಟದ ಕತ್ತಿಯನ್ನು ಸ್ವೀಕರಿಸುವುದು, ದರ್ಬಾರು ಸಭೆ ನಡೆಸುವುದು ಇವೆಲ್ಲ ಪರ್ಯಾಯ ಪ್ರಭುತ್ವದ ಲಕ್ಷಣಗಳು. ಮಠಗಳಲ್ಲಿ ರಕ್ಷಣೆಗಾಗಿ ಕೋವಿಗಳು ಇರುತ್ತಿದ್ದವು. ಕದ್ರಿಮಠಕ್ಕೆ ಮದರಾಸು ಸರಕಾರ ತುಪಾಕಿ ಇರಿಸಿಕೊಳ್ಳಲು ಅನುಮತಿ ನೀಡಿತ್ತು. ಸನ್ಯಾಸಿಗಳು ಆಯುಧಗಳ ಬೆಂಗಾವಲಲ್ಲಿ ಓಡಾಡುವುದು ವಿಚಿತ್ರ ಅನಿಸಬಹುದು.  ಇವು ಗೌರವ ಸೂಚಕ ಮಾತ್ರವಲ್ಲದೆ, ಮಠಗಳ ಸಂಪತ್ತಿನ ರಕ್ಷಣೆಗಾಗಿ ಸಹ ಅಗತ್ಯವಾಗಿದ್ದವು. ಅದರಲ್ಲೂ ಸರ್ಕೀಟು ಹೋದಾಗ  ಮಠಗಳು ಭಕ್ತರಿಂದ ಕಾಣಿಕೆಗಳನ್ನು ಸಂಗ್ರಹಿಸಿ ತರುತ್ತಿದ್ದವು. ಆಗ ಭದ್ರತೆ ಬೇಕಾಗುತ್ತಿತ್ತು. ಕದ್ರಿಮಠದ ಸ್ವಾಮಿ ತನ್ನ ಭಕ್ತರನ್ನು ನೋಡಲು ಪ್ರವಾಸ ಹೊರಟಾಗ, ಅದರ ಸ್ವರೂಪವು ಜಿಲ್ಲಾ ಕಲೆಕ್ಟರ್ ಸರ್ಕೀಟು ಹೊರಟಂತೆಯೇ ಇರುತ್ತಿತ್ತು. ಅವರ ಜತೆ ಪಟ್ಟೆಬಿಲ್ಲೆ ಧರಿಸಿದ ಸೇವಕರೂ ದಂಡಧಾರಿಗಳೂ ಇರುತ್ತಿದ್ದರು. ಜಮಾಬಂದಿಯ ಪುಸ್ತಕ ಇರುತ್ತಿತ್ತು. ಕಂದಾಯ ವಸೂಲಿ ಮಾಡುವಂತೆ ಗ್ರಾಮಗಳಿಂದ ಕಾಣಿಕೆ ಸಂಗ್ರಹಿಸಲಾಗುತ್ತಿತ್ತು. ಹಿಂದೆ ಕದ್ರಿಯ ಅರಸರು ಕುದುರೆ ಮೇಲೆ ಸರ್ಕೀಟು ಹೊರಡುತ್ತಿದ್ದರು. ಈಗ ಬಹುತೇಕ ನಾಥಮಠಗಳಿಗೆ ವ್ಯಾನು ಜೀಪು ಕಾರುಗಳಿವೆ. ನಿರ್ಜನವೂ ದುರ್ಗಮವೂ ಆದ ಲುಂಕೆಮಲೆಯ ನಾಥಮಠದಲ್ಲಿ ಅತ್ಯಂತ ಆಧುನಿಕತೆಯ ಸಂಕೇತವಾದ ಕಾರು ವಿಚಿತ್ರವಾಗಿ ಕಾಣುತ್ತದೆ.  ನಾಥಮಠಗಳು ರಾಜರು ಹಾಗೂ ಮಾಂಡಲಿಕರು ಕೊಟ್ಟ ದತ್ತಿ ಇನಾಮುಗಳಿಂದ ಶ್ರೀಮಂತವಾದರೂ, ತಮ್ಮ ಸಮುದಾಯ ಸಂಬಂಧಗಳನ್ನು  ಕಳೆದುಕೊಳ್ಳಲಿಲ್ಲ ಎನ್ನುವುದು ಗಮನಾರ್ಹ.

ಈ ಹಿನ್ನೆಲೆಯಲ್ಲಿ ನಾಥಪಂಥವನ್ನು ಕೇವಲ ಗೋರಖನಾಥ, ಸಿದ್ಧಸಿದ್ಧಾಂತ ಪದ್ಧತಿ, ಯೋಗಸಾಧನೆಗಳ ನೆಲೆಯಲ್ಲಿ ಮಾತ್ರ ನೋಡಲು ಆಗುವುದಿಲ್ಲ. ನಾಥರಿಗೆ ವಿರಕ್ತಿ ಸನ್ಯಾಸ ಭಿಕ್ಷಾಟನೆಗಳು ಪ್ರಭುತ್ವ ಅಥವಾ ಇತರೆ ಶಕ್ತಿಕೇಂದ್ರಗಳನ್ನು ಅವಲಂಬಿಸದೆ ಬದುಕುವ ಅವಕಾಶ ಕಲ್ಪಿಸಿದ್ದವು. ಇದರಿಂದ ಪ್ರಭುತ್ವಗಳನ್ನು ವಿಮರ್ಶಿಸಲು ಬೇಕಾದ ದಿಟ್ಟತನವೂ   ಅವರಿಗೆ ಸಿಕ್ಕಿರಬಹುದು. ವಿದೇಶಿ ಪ್ರವಾಸಿಯೊಬ್ಬನಿಗೆ ಕದ್ರಿಯ ಜೋಗಿಮಠದ ನಾಥನು, ಕೆಳದಿಯ ವೆಂಕಟಪ್ಪನಾಯಕನು ಮಠದ ಆಸ್ತಿಯನ್ನು ಆನೆ ಕುದುರೆ ಪಲ್ಲಕ್ಕಿಯನ್ನು ಕಿತ್ತುಕೊಂಡಿದ್ದಾನೆ ಎಂದು ಹೇಳಿಕೊಳ್ಳುವ ದಾಖಲೆಯಿದೆ.[10] ಇದು ನಾಥಮಠಗಳಿಗೂ ಪ್ರಭುತ್ವಗಳಿಗೂ ಇದ್ದ ಸಂಘರ್ಷದ ಮುಖವನ್ನು ತೋರಿಸುತ್ತದೆ. ಆದರೆ ಮಠಗಳು ಸಂಪತ್ತನ್ನು ಪಡೆಯುತ್ತಿದ್ದಂತೆ, ತಮ್ಮನ್ನು ಪೋಷಿಸುವ ಎಲ್ಲ  ಅಧಿಕಾರಸ್ಥರಿಗೆ ಮನ್ನಣೆ ಕೊಡಬೇಕಾಗುತ್ತದೆ. ತಮ್ಮ ಧನದಿಂದ ಮಠದ ಪೋಷಣೆ ಮಾಡುವ ಉಳ್ಳವರಲ್ಲಿ ಮಠಗಳು ನೈತಿಕ ಶಕ್ತಿಯನ್ನು ತುಂಬುತ್ತವೆ. ತಮ್ಮ ಸಂಪತ್ತು ಪಂಥದ ಸೇವೆಗೆ ಬಳಕೆಯಾದರೆ ಅದು ಮಾನ್ಯ ಎಂಬ ಗ್ರಹಿಕೆಯನ್ನು ಅವರಲ್ಲಿ ಮೂಡಿಸುತ್ತವೆ. ಧರ್ಮ ಸಂಪತ್ತು ಅಧಿಕಾರಗಳು ಪರಸ್ಪರ ಹೀಗೆ ಸಹಕರಿಸಿಕೊಳ್ಳುತ್ತವೆ. ಆದರೆ ಕೊನೆಗೂ ಗೆಲ್ಲುವುದು ಲೌಕಿಕ ಅಧಿಕಾರವೇ ಹೊರತು ಧರ್ಮವಲ್ಲ ಎಂದು ಕಾಣುತ್ತದೆ.

* * *[1]      The Kapalikas and Kalamukhas, Pp.263

[2]      ಶ್ರೀಭೈರವ ಕ್ಷೇತ್ರದ ಸೀತಿಬೆಟ್ಟ, ಪು.೪೭-೮೭

[3]      ಎಪಿಗ್ರಾಫಿಯ ಕರ್ನಾಟಿಕ ಸಂ.೭, ಶಾಸನ.೧೦೮

[4]      ಈ ಅಧ್ಯಾಯದಲ್ಲಿ ಉಲ್ಲೇಖಿಸಿರುವ ಶಾಸನಗಳು ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಶನ್ಸ್ ಸಂಪುಟಗಳವು.

[5]      Vasantha Madhava, Religions in Costal Karnataka,  Pp.70

[6]      ರಾಮಚಂದ್ರರಾವ್ ಎಸ್.ಕೆ.(ಸಂ), ಶ್ರೀತತ್ವನಿಧಿ, ಕನ್ನಡ ವಿಶ್ವವಿದ್ಯಾಲಯ, ೧೯೯೨

[7]      ರಾಜೇಶ್ವರಿಗೌಡ ಕೆ., ಆದಿಚುಂಚನಗಿರಿ : ಒಂದು ಸಾಂಸ್ಕೃತಿಕ ಅಧ್ಯಯನ, ಪು.೧೭೫

[8]      ಆದಿಚುಂಚುನಗಿರಿ ಮಠದ ಸಮಸ್ಯೆ, ಪು.೧

[9]      ಕಡವ ಶಂಭುಶರ್ಮ ಕೃತಿಸಂಚಯ-೩ ಪು.೭೫೬-೭೫೭

[10]     Vasantha Madhava, Religions in Costal Karnataka,  Pp.55