ಕರ್ನಾಟಕದ ನಾಥಪಂಥಕ್ಕೆ ಅನೇಕ ಜನ ಸಮುದಾಯಗಳು ಅನುಯಾಯಿ ಗಳಾಗಿದ್ದಾರೆ. ಇವರಲ್ಲಿ ಮುಖ್ಯರಾದವರು ಜೋಗಿಗಳು, ರಾವುಳರು ಹಾಗೂ ಕಾಪಾಲಿಕರು. ಇವರು ಅಧಿಕೃತ ಅನುಯಾಯಿಗಳು. ಇವರ ಜತೆಗೆ ತಮ್ಮ ಪರಿಸರದ ಪ್ರಭಾವಶಾಲಿ ಪಂಥವಾಗಿರುವ ಕಾರಣದಿಂದ, ಅನೇಕ ಜಾತಿ ಸಮುದಾಯಗಳು ಪರೋಕ್ಷವಾಗಿ ನಾಥಪಂಥೀಯ ಆಚರಣೆಗಳನ್ನು ಮಾಡುತ್ತವೆ. ಬೇರೆಬೇರೆ ಸಮುದಾಯಗಳ ಸಾಮಾಜಿಕ ಧಾರ್ಮಿಕ ಬದುಕಿನಲ್ಲಿ  ನಾಥಪಂಥವು ಬದುಕಿರುವ  ಈ ಪರಿ ಸ್ವಾರಸ್ಯಕರವಾಗಿದೆ. ಈ ನೇರ ಮತ್ತು ಪರೋಕ್ಷ ನಾಥಪಂಥೀಯ ಸಮುದಾಯಗಳನ್ನು ಇಲ್ಲಿ ಪ್ರತ್ಯೇಕವಾಗಿ ಪರಿಶೀಲಿಸಬಹುದು.

 

ಭಾಗ

ಕಾಪಾಲಿಕಜೋಗಿರಾವುಳರು

ಕರ್ನಾಟಕದಲ್ಲಿ ೨ ಲಕ್ಷದಷ್ಟು  ಜೋಗಿಗಳು ಇದ್ದಾರೆ. ಇವರನ್ನು ಜೋಗಿ, ಜೋಗೇರ, ಭಿಲ್,  ಬಿಲ್‌ಜೋಗಿ, ಹಣಗಿ, ಬುವ, ರಾವಲ್‌ಬಿಲ್, ಕಪಾಲಿ, ಬ್ರಹ್ಮಕಪಾಲಿ, ಬ್ರಹ್ಮಕಪಾಲಿ ಕ್ಷತ್ರಿಯ, ಕಪಾಲಿಕ್ಷತ್ರಿಯ, ನಾಥಪಂಥಿ, ನಾಥಪಂಥಿ ಜೋಗಿ, ರಾವಳ, ರಾವಳೀಯ, ರಾವಳಜೋಗಿ, ಮಠಪತಿ, ಶಿವಜೋಗಿ, ಬಳೆಗಾರಜೋಗಿ, ಕಟ್ಲೇರಿ ಜೋಗೊ, ನೇಕಾರ ಜೋಗಿ, ಮರಾಠಿಜೋಗಿ, ಕಿನ್ನರಿಜೋಗಿ- ಮುಂತಾದ ಹೆಸರಲ್ಲಿ ಗುರುತಿಸಲಾಗುತ್ತದೆ. ಕೊನೆಯವರಾದ ಕಿನ್ನರಿ ಜೋಗಿಗಳಲ್ಲಿ ಹಂಡಿಜೋಗಿ, ಮಣಿಜೋಗಿ, ಎಣ್ಣೆಜೋಗಿ, ಡಬ್ಬಾಜೋಗಿ ಮುಂತಾದ ಒಳ ಪಂಗಡಗಳಿವೆ. ಕರ್ನಾಟಕ ಸರಕಾರವು ಹಿಂದುಳಿದ ಜಾತಿಗಳ ಮೀಸಲಾತಿಗಾಗಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಜೋಗಿ ಎಂಬ ಒಂದು ವಿಭಾಗವಿದೆ.  ಅದರಲ್ಲಿ ಗಂಟೆಜೋಗಿ ಗೊರವ ಮುಂತಾದ ಉಪ ಪಂಗಡಗಳಿವೆ; ಕರ್ನಾಟಕದ ಬುಡಕಟ್ಟು ಅಲೆಮಾರಿ, ಅರೆಅಲೆಮಾರಿ ಜನಸಮುದಾಯದ ಪಟ್ಟಿಯಲ್ಲಿ ಜೋಗಿ, ಜೋಗರ್, ಜೋಗೆರ್, ಜೋಗತಿನ್, ಸಾನ್‌ಜೋಗಿ, ಬ್ರಹ್ಮಕಪಾಲಿ, ಕಪಾಲಿ, ರಾವಲ್, ರಾವಾಲಿಯಾ, ಸನ್ಯಾಸಿ ಎಂಬ ಪಂಗಡಗಳಿವೆ. ಇವು ಒಂದಲ್ಲಾ ಒಂದು ವಿಧದಲ್ಲಿ  ನಾಥಪಂಥಕ್ಕೆ ಸೇರಿದ ಸಮುದಾಯಗಳೇ. ಆದರೆ ಬಳ್ಳಾರಿ ಹಾಗೂ ಬೆಂಗಳೂರು ಭಾಗದಲ್ಲಿ ಇರುವ ಹಂದಿಜೋಗಿಗಳು ಮೂಲತಃ ತೆಲುಗು ಮೂಲದವರಾಗಿದ್ದು, ಅವರಿಗೂ ನಾಥಪಂಥಕ್ಕೂ ಸಂಬಂಧ ಕಾಣುವುದಿಲ್ಲ. ಜನಗಣತಿ ಮಾಡಿದ ವಸಾಹತುಶಾಹಿ ಆಡಳಿತ ಗಾರರಿಗೆ, ಜೋಗಿಗಳ ಧಾರ್ಮಿಕ ಹಾಗೂ  ಪಂಥೀಯ ಹಿನ್ನೆಲೆಗಿಂತ  ಮುಖ್ಯವಾಗಿದ್ದು, ಅವರ ಸಾಮಾಜಿಕ ಸ್ಥಾನಮಾನ. ಇದನ್ನು ಆಧರಿಸಿ ಅವರು ಜೋಗಿಗಳನ್ನು ಸಾಮಾಜಿಕವಾಗಿ ಕೆಳಸ್ತರದವರು ಎಂದು ವಿಂಗಡಿಸಿದರು. ಕೆಲವೆಡೆ  ಫಕೀರ ಹಾಗೂ ಜೋಗಿಗಳನ್ನು ಅವರು ‘ಡಿಸ್ ರೆಪ್ಯೂಟಬಲ್ ವಾಗ್ರಂಟ್ಸ್’ ಎಂದು ನಮೂದಿಸಿದರು.

[1]  ಫಕೀರ, ದಾಸ, ಮುಂತಾದ ಧಾರ್ಮಿಕ ಭಿಕ್ಷಾಟನೆ ಮಾಡುವ ಬಹುತೇಕ ಗುರುಪಂಥದ ಸಮುದಾಯಗಳಿಗೆ ಈ ಅವಸ್ಥೆ ಬಂದಿದೆಯಷ್ಟೆ. ಜೋಗಿ ಶಬ್ದವು ನಾಥಪಂಥಕ್ಕೆ ಸಂಬಂಧವಿಲ್ಲದ ಸಮುದಾಯಗಳಿಗೂ ಬಳಕೆಯಾಗುತ್ತದೆ. ಉದಾ. ಹಂಡಿಜೋಗಿಗಳು ನಾಥಪಂಥಿಗಳಲ್ಲ. ಸವದತ್ತಿ ಎಲ್ಲಮ್ಮನ ದೀಕ್ಷೆ ಪಡೆದವರನ್ನು ಜೋಗಪ್ಪ ಎನ್ನಲಾಗುತ್ತದೆ. ಫಲಾಹಾರ ಮಠದ ಶಾಸನವೊಂದು (ಕ್ರಿಶ.೧೭೦೨) ಜೆಡೆಜೋಗಿಗಳನ್ನು ಈ ಮಠದ ಶಿಷ್ಯರು ಎಂದು ಹೇಳುತ್ತದೆ. ಇಲ್ಲಿಗೆ ಸಮೀಪದ ಹಿರೇಮಗಳೂರಿನಲ್ಲಿ ಜೆಡೆಮುನಿ ಎನ್ನಲಾಗುವ ವಿಶಿಷ್ಟ ಮೂರ್ತಿಯಿದೆ. ಈ ಜಡೆಜೋಗಿಗಳು ನಾಥರೇ ಎಂದು ಖಚಿತವಾಗುವುದಿಲ್ಲ.

ಇಂದ್ರಜಾಲ ಮಾಡುವವರಿಗೂ ಜೋಗಿ ಎನ್ನಲಾಗುತ್ತದೆ. ನೇಮಿಚಂದ್ರನ ‘ಲೀಲಾವತಿ ಪ್ರಬಂಧ’ದಲ್ಲಿ ಮಾಯಾ ಭುಜಂಗನೆಂಬ ಜೋಗಿಯೂ ಅವನ ಜೋಗಿಣಿಯರೂ ಬರುತ್ತಾರೆ. ಮಾಟ ಮದ್ದು ಮಾಡುವವರಿಗೂ ಜೋಗಿ ಎನ್ನಲಾಗುತ್ತದೆ. ಜಗಳೂರಿನ ಒಂದು ಶಾಸನದಲ್ಲಿ (ಕ್ರಿಶ.೧೨೭೯) ಒಬ್ಬ ಸಿದ್ಧನನ್ನು ‘ಮಹೇಂದ್ರಜಾಲ ಹರಮೇಖಳಾದಿ ಪ್ರಪಂಚ ವಿದ್ಯಾಸಿದ್ಧನುಂ’ ಎಂದು ವರ್ಣಿಸುವಿಕೆ ಇದೆ. ಟಿಬೇಟಿನ ಪಠ್ಯಗಳಲ್ಲಿ ನಾಥರು ಮಹೇಂದ್ರಜಾಲ ಮಾಡುತ್ತಿದ್ದವರು ಎಂಬ ದಾಖಲೆಯಿದೆ. ಜನಪದ ಹಾಲುಮತ ಮಹಾಕಾವ್ಯದಲ್ಲಿ ಬರುವ ಗೋರಖನು ತನ್ನ ಶಿಷ್ಯನಿಗೆ ಮಾಟವಿದ್ಯೆಯನ್ನು ಕಲಿಸುತ್ತಾನೆ. ನಾಥರು ಮಂತ್ರಮಾಟದ ವಿದ್ಯೆ ಕಲಿತಿದ್ದರು ಎಂದು  ನಿಜಗುಣ ಶಿವಯೋಗಿಯ ‘ವಿವೇಕ ಚಿಂತಾಮಣಿ’ ಅಭಿಪ್ರಾಯ ಪಡುತ್ತದೆ. ಬಳ್ಳಾರಿ ಜಿಲ್ಲೆಯ ದರೋಜಿ ಈರಮ್ಮ ಹಾಡಿದ ‘ಕೃಷ್ಣಗೊಲ್ಲರ ಮಹಾಕಾವ್ಯ’ ದಲ್ಲಿ ಬರುವ ರಾಮಜೋಗಿ ಒಬ್ಬ ಮಾಟಗಾರ. ಬಹುಶಃ ಕೆಲವು ಯೋಗಿಗಳು ಸಾಧನೆ ಮಾಡಿ ಕಲಿತ ಕಣ್ಕಟ್ಟು ವಿದ್ಯೆಯನ್ನು ಸಾರ್ವಜನಿಕವಾಗಿ ಮಾಡಿ ತೋರುತ್ತಿದ್ದರು ಎಂದು ಕಾಣುತ್ತದೆ. ಯೋಗಸಾಧನೆಗಳ ಸಾರ್ವಜನಿಕ ಪ್ರದರ್ಶನವನ್ನು ಗೋರಖನು ಖಂಡಿಸುತ್ತಾನೆ. ಆದರೂ ಇಂದ್ರಜಾಲ, ಮಾಟ, ಮಂತ್ರ, ಔಷಧ ಜ್ಞಾನಗಳಿಗೂ ಜೋಗಿಗಳಿಗೂ ಸ್ಪಷ್ಟವಾಗದ ಸಂಬಂಧಗಳಿವೆ.

ನಾಥಪಂಥದ ಚರ್ಚೆಯಲ್ಲಿ ಬರುವ ‘ಜೋಗಿ’ ಶಬ್ದವು ಮೂಲತಃ ಯೋಗಿಯ ತದ್ಭವವಾಗಿದೆ. ಬಾರಕೂರಿನಲ್ಲಿ ನಾಥಪಂಥದ ಒಂದು ವರ್ಗದ ಜೋಗಿಗಳಿಗೆ ‘ಜೊರಡರು’ ಎಂಬ ಹೆಸರಿದೆ. ಹಾಗೆಂದರೇನು? ಕಾಸರಗೋಡು ಭಾಗದಲ್ಲಿ ಜೋಗಿಗೆ ‘ಪುರುಷ’ ಎಂಬ ಪರ್ಯಾಯ ಶಬ್ದವಿದೆ. ಕೇಶವಪುರುಷ ಎಂದರೆ ಕೇಶವಜೋಗಿ ಎಂದರ್ಥ. ಕೆಲವೊಮ್ಮೆ ಎರಡೂ ಕೂಡಿ ಜೋಗಿ ಪುರುಷರು (ತುಳು=ಜೋಗಿಪುರುಸೆರ್) ಎಂದೂ ಆಗುತ್ತವೆ. ಹೇಮಗಿರಿಯ ವಾಡೆಭೈರವ ಬೆಟ್ಟದಲ್ಲಿರುವ ಭೈರವನ ಪೂಜಾರಿಗಳಿಗೆ ‘ಜೋಗಿ ಪುರುಸಪ್ಪನೋರು’ ಎನ್ನುವರು. ಚುಂಚನಗಿರಿಯಲ್ಲಿ ‘ಪುರುಷಪ್ಪ ದೇವರು’ ಎಂಬ ಬಳಕೆಯಿದೆ.[2] ಜೋಗಿಗಳಿಗೆ ಪುರುಷರು ಎಂದು ಬರಲು ಏನು ಕಾರಣ? ವೀರ್ಯಸ್ಥಂಭನ ಮಾಡಿ ಬ್ರಹ್ಮಚರ್ಯ ಪಾಲಿಸುವ ಯೋಗಿಗಳು ನಿಜವಾದ ಪುರುಷರು ಎಂದೇ?  ಇದಕ್ಕೆ ತಕ್ಕಂತೆ ಸುಳ್ಯ ಸೀಮೆಯಲ್ಲಿ ಸಿದ್ಧವೇಷ ಅಥವಾ ಪುರುಷರ ಮಕ್ಕಳ ಕುಣಿತವಿದೆ. ಇದರಲ್ಲಿ ಸಿದ್ಧವೇಷ ಹಾಕಿದವನು ದೊಡ್ಡದೊಂದು ಕೃತಕವಾದ ಶಿಶ್ನವನ್ನು ಸೊಂಟಕ್ಕೆ ಕಟ್ಟಿಕೊಂಡು  ಕುಣಿಯುವ ರಿವಾಜಿದೆ.[3] ಜೋಗಿಗಳು ಪುರುಷ ಸಂತಾನ  ಕರುಣಿಸುವವರು ಎಂಬರ್ಥದಲ್ಲಿ ಪುರುಷ ಶಬ್ದ ಬಂದಿರಬಹುದು ಎಂಬ ಊಹೆಯನ್ನು ಕೆಲವರು ಮಾಡುವುದುಂಟು. ಜೆೋಗಿಗಳಲ್ಲಿ ಸಂತಾನ ಬೇಡುವ ಬಹುತೇಕ ಹಾಡುಗಳು ಗಂಡುಸಂತಾನ ಅಪೇಕ್ಷೆಯುಳ್ಳವು. ಆದರೂ ಈ ಊಹೆ ಒಪ್ಪುವುದು ಕಷ್ಟ. ಒಂದರ್ಥದಲ್ಲಿ ನಾಥವು ಪುರುಷ ಪ್ರಧಾನ ಪಂಥವಾಗಿದೆ. ಸ್ತ್ರೀಯರಿಗೆ ಇಲ್ಲಿ ಸ್ಥಾನ ಕಡಿಮೆ.

ಕಾಸರಗೋಡು ಸೀಮೆಯ ಮಂಜೇಶ್ವರ ಹಾಗೂ ಬದಿಯಡ್ಕದ ಕಡೆ, ಮಲೆಯಾಳ ಮಾತಿನ ಪುರುಷರಿದ್ದಾರೆ. ಅವರಿಗೆ ಜೋದಿಕನ್ನದು ಜೋಯಿನ್ನದು ಅಂದರೆ ಬೇಡುವವರು ಎಂದೂ  ಕರೆಯುತ್ತಾರೆ.  ಜೋಯಿ (ಜೋಗಿ) ಸಂಪ್ರದಾಯದಲ್ಲಿ ಗಂಡುಹೆಣ್ಣು ಇಬ್ಬರೂ ಜೋಳಿಗೆ ದಂಡ ಭಸ್ಮ ಧರಿಸಿ ಭಿಕ್ಷೆ ಬೇಡುತ್ತಾರೆ. ಹಿಂದೆ ಕೇರಳದ ಕಾಂಞಾಗಾಡಿನಲ್ಲಿ ನಾಥಮಠವಿತ್ತಂತೆ. ಆದರೆ ಈಗ ಕದ್ರಿಯಲ್ಲಿರುವಂತೆ ಜೀವಂತ ನಾಥಮಠಗಳು ಅಲ್ಲಿಲ್ಲ. ಕುಂಬಳೆ ಬಳಿಯ ಪೊಸೂಡಿಗುಂಪೆ ಗುಡ್ಡದ ಗವಿಯು ನಾಥರದ್ದು ಎಂದು ಹೇಳಲಾಗುತ್ತದೆ. ೧೯೨೧ರಲ್ಲಿ ಪಾಂಡಿಚೇರಿಯ ಒಬ್ಬ ಫ್ರೆಂಚ್ ವಿದ್ವಾಂಸನು ಕೇರಳದ ಗುಡ್ಡಗಳಲ್ಲಿ ತಿರುಗಾಡುವಾಗ, ಮುರದ ಕಲ್ಲಿನಿಂದ ಕಟ್ಟಿದ ಗುಹೆಗಳನ್ನು ಹಾಗೂ ಅದರಲ್ಲಿದ್ದ ಬೆಂಕಿಕೊಂಡ, ತ್ರಿಶೂಲ, ಚಿಮಟ ಕತ್ತಿಗಳನ್ನು ದಾಖಲಿಸಿದ್ದನು. ಕರಾವಳಿಯ ಇತಿಹಾಸಜ್ಞರಾದ ಗಣಪತಿ ಐಗಳ ಪ್ರಕಾರ ಇವು ನಾಥರ ಗುಹೆಗಳು.[4]

ಹೀಗೆ ನಾಥಪಂಥೀಯ ಸಮುದಾಯಗಳು ಹಲವು ಹೆಸರುಗಳಲ್ಲಿ ಮಾತ್ರವಲ್ಲದೆ, ಹಲವಾರು ಪಂಗಡ,  ಭಾಷೆ, ವೃತ್ತಿ ಹಾಗೂ ವರ್ಣದ ಆಧಾರದಲ್ಲಿ ವಿಂಗಡಣೆ ಆಗಿವೆ.  ಭಾಷಿಕವಾಗಿ ಹೇಳುವುದಾದರೆ, ಕನ್ನಡ, ತುಳು, ಮರಾಠಿ ಹಾಗೂ ಮಲೆಯಾಳ ಮನೆಮಾತಿನ ಜೋಗಿಗಳು ಇದ್ದಾರೆ. ಕನ್ನಡ ಜೋಗಿಗಳು ಬೆಂಗಳೂರು ಹಾಸನ ಮಂಡ್ಯ, ತುಮಕೂರು, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ;  ತುಳುಜೋಗಿಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ; ಮರಾಠಿ ಜೋಗಿಗಳು ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳಲ್ಲಿ; ಮಲೆಯಾಳದವರು ಕಾಸರಗೋಡು ಭಾಗದಲ್ಲಿ ಇದ್ದಾರೆ. ಸಾಂಸ್ಕೃತಿಕ ದೃಷ್ಟಿಯಿಂದ, ಜೋಗಿಗಳನ್ನು ಆಯಾ ಮಠದ ಸೀಮೆಯ ಸಂಪ್ರದಾಯಗಳ ಆಧಾರದಲ್ಲಿ ಚುಂಚನಗಿರಿ ಸೀಮೆಯ ಜೋಗಿಗಳು, ಕದ್ರಿಸೀಮೆಯ ಜೋಗಿಗಳು ಎಂದು  ನೋಡುವುದು ಹೆಚ್ಚು ಉಪಯುಕ್ತ. ಇದರಿಂದ ಆಯಾ ಮಠಗಳ ವ್ಯಾಪ್ತಿಯಲ್ಲೇ ರೂಪುಗೊಂಡ ನಾಥಪಂಥದ ಅನನ್ಯತೆಯನ್ನು ಕೂಡ ಗಮನಿಸಬಹುದು.

ಚುಂಚನಗಿರಿ ಸೀಮೆಯ ಕಾಪಾಲಿಕರು

ಆದಿಚುಂಚನಗಿರಿ ಸೀಮೆಯ ಹಳ್ಳಿಗಳಲ್ಲಿ ಕಾಪಾಲಿಕರು, ಬ್ರಹ್ಮಕಾಪಾಲಿಕರು ಎಂದು ತಮ್ಮನ್ನು ಕರೆದುಕೊಳ್ಳುವ ಸಮುದಾಯವಿದೆ. ಪರಿಸರದ ಜನ ಇವರನ್ನು ಜೋಗಿಗಳು ಎಂದೇ ಗುರುತಿಸುತ್ತಾರೆ. ಇವರು ಮುಖ್ಯವಾಗಿ ಚುಂಚನಹಳ್ಳಿ, ಕೆಂಚನಹಳ್ಳಿ, (ನಾಗಮಂಗಲ), ಕಾಳೇನಹಳ್ಳಿ, ಮೋಕಳಿ, ರಾಮನಾಥಪುರ, ಹೊಸನಗರ (ಅರಕಲಗೂಡು), ಜೋಗೇರಹಳ್ಳಿ (ಮಾಗಡಿ) ಜೋಗೇನಹಳ್ಳಿ (ಪಿರಿಯಾಪಟ್ಟಣ) ಅರಕೆರೆ (ಹಾಸನ) ರಾವುತನಹಳ್ಳಿ (ಬೆಂಗಳೂರು) ಗಳಲ್ಲಿ ಇದ್ದಾರೆ. ಇವರು ಚುಂಚನಗಿರಿ ಮಠಕ್ಕೆ ನಡೆದುಕೊಳ್ಳುವವರು. ಇವರಿಗೆ ಲುಂಕೆಮಲೆ ಸೀಮೆಯ ಕಾಪಾಲಿಕರ ಜತೆ ವೈವಾಹಿಕ ಕೊಡುಕೊಳು ಇದೆ.

ಸಣ್ಣರೈತರೂ ಕೃಷಿ ಕಾರ್ಮಿಕರೂ ಆಗಿರುವ ಕಾಪಾಲಿಕರಲ್ಲಿ ಬಹಳ ಬಡತನವಿದೆ.  ಕದ್ರಿ ಸೀಮೆಯ ಜೋಗಿಗಳಿಗೆ ಹೋಲಿಸಿದರೆ, ಇವರಲ್ಲಿ ಸಾಮಾಜಿಕ ಎಚ್ಚರ ಹಾಗೂ ಪಂಥೀಯ  ಅರಿವು ಕಡಿಮೆ. ಕೆಲವರು  ಕದ್ರಿಯ ಜೋಗಿಗಳಲ್ಲೂ ಲುಂಕೆಮಲೆಯ ಕಾಪಾಲಿಕರಲ್ಲೂ ನಂಟಸ್ತಿಕೆ ಮಾಡಿದ್ದಾರೆ.  ಹಿರಿಯರು ಚುಂಚನಗಿರಿ ಮಠದ ಕೊನೆಯ ಬಾರಾಪಂಥದ  ಪ್ರತಿನಿಧಿಯಾದೊತೇಜನಾಥರನ್ನು ಕಂಡಿದ್ದಾರೆ. ಉಳಿದವರು ನಾಥ ಯೋಗಿಗಳನ್ನೇ ತಮ್ಮ ಜೀವನದಲ್ಲಿ ನೋಡಿಲ್ಲ. ಚುಂಚನಗಿರಿ ಮಠವು ಕೈಬಿಟ್ಟ ಬಳಿಕ ನಾಥರೂ ಇತ್ತ ಸುಳಿದಿಲ್ಲ. ಹೊಸ ತಲೆಮಾರಿನ ಅನೇಕರಿಗೆ ನಾಥಪಂಥ ಎಂಬ ಹೆಸರೇ ಹೊಸತಾಗಿತ್ತು. ಇಲ್ಲಿನ ಕಾಪಾಲಿಕರಲ್ಲಿ ಬಾರಾಪಂಥದ ನಟೇಶ್ವರಿ ಧರ್ಮನಾಥ ಸತ್ಯನಾಥಿ ಒಳಪಂಗಡಗಳಿಗೆ ಸೇರಿದವರೇ ಹೆಚ್ಚಿದ್ದಾರೆ.

ಕಾಪಾಲಿಕರ ಮನೆಗಳು ಕಾಳೇನಹಳ್ಳಿಯಲ್ಲಿ ೨೫, ಮೋಕಳಿಯಲ್ಲಿ ೨೦ ಇವೆ. ಇವರು ತಂಬಾಕು, ಆಲೂಗೆಡ್ಡೆ, ರಾಗಿ  ಬೆಳೆಯುತ್ತಾರೆ. ಆಧುನಿಕ ವಿದ್ಯಾಭ್ಯಾಸ ತೀರ ಕಡಿಮೆ. ಕಾಪಾಲಿಕರಲ್ಲಿ ಅತ್ಯಂತ ಹೆಚ್ಚಿನ ವಿದ್ಯಾವಂತರು ಉಪನಾಯಕನ ಹಳ್ಳಿಯಲ್ಲಿದ್ದರೆ, ಅತ್ಯಂತ ಕಡಿಮೆ ವಿದ್ಯಾವಂತರು ಹಾಗೂ ಬಡವರು ಜೋಗೇರಹಳ್ಳಿಯಲ್ಲಿ ಇದ್ದಾರೆ. ಇವರಲ್ಲಿ ದೊಡ್ಡ ಸಿರಿವಂತರೆಂದರೆ, ಉದ್ಯಮಪತಿ ಗಂಗಾಧರ್ ಎಂಬುವರು. ಕಾಳೇನಹಳ್ಳಿ ಮೂಲದಿಂದ ಬಂದು ಬೆಂಗಳೂರಿನಲ್ಲಿರುವ  ಇವರ ಬಗ್ಗೆ ಬಹಳಷ್ಟು ಕಾಪಾಲಿಕರಿಗೆ  ಹೆಮ್ಮೆಯಿದೆ. ತೇಗದ ಮರ ಬೆಳೆಸುವ ಉದ್ಯಮವನ್ನು ಮಾಡುತ್ತಾರಾಗಿ, ಇವರಿಗೆ ಗುರುಟೀಕ್ ಗಂಗಾಧರ ಎಂದೇ ಹೆಸರು ಬಿದ್ದಿದೆ. ಆದರೆ ಗಂಗಾಧರ್ ಅವರಲ್ಲಿ ಹುಬ್ಬಳ್ಳಿಯ ಉದ್ಯಮಿ ಮಧೂರಕರ್ ಅವರಿಗೆ ಹೋಲಿಸಿದರೆ ಸಾಮಾಜಿಕ ಕಾಳಜಿ ಕಡಿಮೆ. ಅವರ ಸಂಬಂಧ ಸಮುದಾಯದ ಜತೆ ಅಷ್ಟು ಗಾಢವಾಗಿಲ್ಲ. ಬಡವರು ತುಂಬಿರುವ ಕಾಳೇನಹಳ್ಳಿಯಲ್ಲಿ ಅವರ ದೊಡ್ಡಮನೆ ತೋಟಗಳು ಸಾಂಕೇತಿಕವಾಗಿ ಎಂಬಂತೆ ಊರಹೊರಗಿವೆ.

ಲುಂಕೆಮಲೆ ಸೀಮೆಯ ಕಾಪಾಲಿಕರು

ಲುಂಕೆಮಲೆ ಸೀಮೆಯ ಕಾಪಾಲಿಕರು ಚಿತ್ರದುರ್ಗ ತುಮಕೂರು ಅನಂತಪುರ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದಾರೆ. ಅವರಿರುವ ಊರುಗಳೆಂದರೆ ಉಪನಾಯಕನಹಳ್ಳಿ (ಚಿತ್ರದುರ್ಗ), ವದ್ದಿಕೆರೆ (ಹಿರಿಯೂರು), ಹೇಮಾವತಿ (ಮಡಕಶಿರಾ), ಶಿರಾ ಪಡಗಲಬಂಡೆ (ಚಳ್ಳಕೆರೆ), ಕಾರೆಹಳ್ಳಿ ದುಗಡಿಹಳ್ಳಿ (ಚಿಕ್ಕನಾಯಕನಹಳ್ಳಿ), ಕೊಂಡಾಪುರ (ಹೊಸದುರ್ಗ), ಬುಳಸಾಗರ (ಚೆನ್ನಗಿರಿ), ಕರಿಸಿದ್ಧಯ್ಯನಪಾಳ್ಯ, ಕರಿಕೆರೆ (ತುಮಕೂರು), ಬಿಳಿಗೆರೆ (ಘಿ=್ಜಓ್ಟರು), ಪಾಪೇನಹಳ್ಳಿ (ಹೊಳಲಕೆರೆ), ಮಧುಗಿರಿ ನಿಂಗೇನಹಳ್ಳಿ ವೇಣಕಲ್‌ಗುಡ್ಡ(ಮಧುಗಿರಿ), ಕೊಟ್ಟ (ಶಿರಾ). ಬಾರಾಪಂಥದ ವಿಭಿನ್ನ ಒಳಪಂಥಗಳಿಗೆ ಸೇರಿದವರಾದ ಕಾರಣ,  ಇವರು ಬೇರೆಬೇರೆ ಭೈರವಸ್ಥಾನಗಳ ಒಕ್ಕಲಾಗಿದ್ದಾರೆ. ಉಪನಾಯಕನ ಹಳ್ಳಿಯಲ್ಲಿರುವ ಕಾಪಾಲಿಕರಲ್ಲಿ ನಟೇಶ್ವರಿ ಪಂಥಿಗಳು ಹುಲಿಗೊಂದಿ ಭೈರವನಿಗೆ, ಸತ್ಯನಾಥಿಗಳು ವದ್ದಿಕೆರೆ ಸಿದ್ಧಪ್ಪನಿಗೆ, ಗಂಗಾನಾಥಿಗಳು ಪಡಗಲಬಂಡೆ ಭೈರವನಿಗೆ, ಧರ್ಮನಾಥಿಗಳು ಹೇಮಾವತಿಯ ಹೆಂಜೇರು ಸಿದ್ಧೇಶ್ವರನಿಗೆ ನಡೆದುಕೊಳ್ಳುವರು.

ಸ್ವಾರಸ್ಯವೆಂದರೆ, ಇವರಲ್ಲಿ ಬಹಳ ಜನ ತಮ್ಮ ಪಂಥೀಯ ಕೇಂದ್ರವಾದ ಲುಂಕೆಮಲೆ ಯನ್ನು ನೋಡಿಲ್ಲದಿರುವುದು. ಇವರ ಹಳ್ಳಿಗಳಿಗೆ ಲುಂಕೆಮಲೆ ಬಾವಾಜಿ ಬರುವುದೇ ಕಡಿಮೆ. ೨೦೦೩ರಲ್ಲಿ ಲುಂಕೆಮಲೆಗೆ ಝುಂಡಿ ಬಂದು ಹೊಸನಾಥನಿಗೆ ಪಟ್ಟಗಟ್ಟುವಾಗ,  ಅದರ ಪಾರಂಪರಿಕ ಶಿಷ್ಯರಾದ ಕಾಪಾಲಿಕರಿಗಾಗಲಿ ಅದರ ಶಾಖಾ ಮಠಗಳಿಗಾಗಲಿ, ಸುದ್ದಿಯೇ ಹೋಗಿಲ್ಲ. ನಾಥಮಠ ಹಾಗೂ ಅದರ ಸಮುದಾಯಗಳ ಈ ಶಿಥಿಲ ಸಂಬಂಧವು ಸಾಮಾನ್ಯವಾಗಿ ಕಾಣುತ್ತಿತ್ತು. ಇದರ ಬಗ್ಗೆ ಬಹಳ ಜನರಲ್ಲಿ ವ್ಯಥೆಯೂ ಇಲ್ಲ.

ಕರ್ನಾಟಕದಲ್ಲಿ ಕಾಳೇನಹಳ್ಳಿ ಜೋಗೇರಹಳ್ಳಿಗಳು ಇಡಿಯಾಗಿ ಕಾಪಾಲಿಕರ ಊರುಗಳು. ಉಪನಾಯಕನ ಹಳ್ಳಿಯಲ್ಲಿ ಕೆಲವು ಗೊಲ್ಲರ ಮನೆ ಹೊರತು ಪಡಿಸಿದರೆ, ಕಾಪಾಲಿಕರು ಬಹುಸಂಖ್ಯಾತರು. ಉಳಿದಂತೆ ಊರಿಗೊಂದು ಎರಡು ಕಾಪಾಲಿಕರ ಮನೆಯಿರುವ ಹಳ್ಳಿಗಳು ಹೆಚ್ಚಿವೆ. ಕೊಟ್ಟ ಹಾಗೂ ಪಡಗಲಬಂಡೆಗಳಲ್ಲಿ ತಲಾ ಒಂದೊಂದು ಮನೆಯಿದೆ. ಕಾಪಾಲಿಕರು ಬಹುಸಂಖ್ಯಾತರಾಗಿರುವಲ್ಲಿ ಅವರೊಳಗೆ ಮದುವೆ ನಡೆಯುತ್ತದೆ. ಅಲ್ಪಸಂಖ್ಯಾತ ಆಗಿರುವಲ್ಲಿ ಮಿಶ್ರಣವಾಗುತ್ತದೆ. ಕಾಪಾಲಿಕ ಹುಡುಗರು ಬೇರೆಜಾತಿಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾದಾಗ, ಅವರನ್ನು ಜಾತಿಯೊಳಗೆ ಬಿಟ್ಟುಕೊಳ್ಳುವ ಪದ್ಧತಿ ಇದೆ. ಬೇರೆಜಾತಿಯವರನ್ನು ತಮ್ಮ ಹುಡುಗಿಯರು ಮದುವೆಯಾದಾಗ, ಮೊದಲು ಪ್ರತಿಭಟಿಸಿದರೂ ನಂತರ ತಂದೆತಾಯಿಗಳು ಹೋಗಿಬರುವುದು ಮಾಡುತ್ತಿದ್ದಾರೆ.  ಜಾತಿಯ ಕಟ್ಟುಪಾಡುಗಳು ಆಮಟ್ಟಿಗೆ ಸಡಿಲವಾಗಿವೆ.  ಯಾವ ಸಮುದಾಯವೂ ತನ್ನ ಪ್ರಾಚೀನ ಕಟ್ಟುಪಾಡುಗಳ ಜತೆಗೆ ಈಗ ಬದುಕಲು ಸಾಧ್ಯವಿಲ್ಲ.  ‘‘ದಕ್ಷಿಣ ಕರ್ನಾಟಕದ ಒಂದು ಗುಂಪಿನ ಜನ, ತಮ್ಮಲ್ಲಿ ಕಾಪಾಲಿಕಾಚರಣೆಗಳು ಯಾವುವೂ ಇಲ್ಲದಿದ್ದರೂ, ತಾವು ಮಾತ್ರ ಕಾಪಾಲಿಕ ಮತಕ್ಕೆ ಸೇರಿದವರೆಂದು ಭಾವಿಸುತ್ತಾರೆ’’ ಎಂದು ವಿದ್ವಾಂಸರು ಹೇಳುವುದುಂಟು.[5] ಇದಕ್ಕೆ ಕಾರಣ, ಕನ್ನಡದ ಪಂಥೀಯ ಸಂಶೋಧನೆಯು, ಕಾಪಾಲಿಕರ ಬಗ್ಗೆ ಚರಿತ್ರೆಯಲ್ಲಿ ಸಿಗುವ ಚಿತ್ರಗಳಿಂದ ಬಿಡಿಸಿಕೊಳ್ಳದೆ ಇರುವುದು ಹಾಗೂ ಸಮುದಾಯಗಳು ಆಧುನಿಕ ಕಾಲದಲ್ಲಿ ಪಡೆವ ರೂಪಾಂತರಗಳನ್ನು ಗಮನಿಸಿದೆ ಇರುವುದು ಎಂದು ಅನಿಸುತ್ತದೆ.

ಲುಂಕೆಮಲೆ ಕಾಪಾಲಿಕರು ತಮ್ಮನ್ನು ಪೂಜಾರಿಗಳು, ಐನೋರು ಎಂದು ಕರೆದುಕೊಳ್ಳುತ್ತಾರೆ. ಅವರು ಕೆಳಜಾತಿಯವರಿಗೆ ಜೋಗಿದೀಕ್ಷೆ ಕೊಡುತ್ತಾರೆ. ಬ್ರಾಹ್ಮಣರು ಹಾಗೂ ಮುಸ್ಲಿಮರನ್ನು ಬಿಟ್ಟು ಉಳಿದೆಲ್ಲ ಜಾತಿಯವರಿಗೂ ತಾವು ಜೋಗಿದೀಕ್ಷೆ ಕೊಟ್ಟಿರುವುದಾಗಿ ಉಪನಾಯಕನ ಹಳ್ಳಿ ಜಯಣ್ಣ ಹೇಳಿದರು. ಇವರಲ್ಲಿ ಅನೇಕರು ಪೂಜಾರಿಕೆ ಮಾಡುತ್ತಾರೆ.  ಹಿರಿಯೂರಿನ ಜೋಗಿ ಕುಟುಂಬವು ದುರ್ಗಮ್ಮನ ಪೂಜೆ ಮಾಡುತ್ತದೆ. ಬೆಂಗಳೂರಿನಲ್ಲಿ ಕೂಡ ಕೆಲವು ಕಾಪಾಲಿಕರು ಭೈರವನ ಅರ್ಚಕರು. ಉಪನಾಯಕನಹಳ್ಳಿಯ ಅನೇಕರು ಸರಕಾರಿ ನೌಕರಿಗಳಲ್ಲಿದ್ದು ಖ್ಯಾತರಾಗಿದ್ದಾರೆ. ಕೆಲವರು ಅಧ್ಯಾಪಕರೂ ವೈದ್ಯರೂ ಆಗಿದ್ದಾರೆ. ಹೆಚ್ಚಿನವರು ಸ್ಕೂಲು ಶಿಕ್ಷಕರು. ಈ ಸಮುದಾಯದಲ್ಲಿ ಹೈಕೋರ್ಟಿನಲ್ಲಿ ಲಾಯರ್ ಆಗಿರುವ ನಾಗರಾಜ್ ಪ್ರಸಿದ್ಧರಾಗಿದ್ದಾರೆ. ಅವರಲ್ಲಿ ನಾಯಕತ್ವಕ್ಕೆ ಬೇಕಾದ ಗುಣಗಳಿವೆ.  ಲುಂಕೆಮಲೆ ಮಠವನ್ನು ಸರ್ಕಾರ ವಶಪಡಿಸಿಕೊಂಡಾಗ  ಇವರು ಹೋರಾಡಿ ಉಳಿಸಿದವರು.  ‘ನಾಥಜ್ಯೋತಿ’ ಎಂಬ ಪತ್ರಿಕೆ ತರುವ ಹಂಬಲವುಳ್ಳವರು. ಏಕಕಾಲಕ್ಕೆ ಆಧುನಿಕ ವೃತ್ತಿಗಳಿಗೂ ಪ್ರಾಚೀನವಾದ ಪಂಥವೊಂದಕ್ಕೂ ಸಂಬಂಧ ಏರ್ಪಡಿಸಿಕೊಳ್ಳುವ  ತೊಳಲಾಟ  ಶಿಕ್ಷಿತ ವರ್ಗದಲ್ಲಿ ಕಾಣುತ್ತದೆ. ಆದರೆ ಹೊಟ್ಟೆಪಾಡಿಗಾಗಿ ನಿತ್ಯ ಯುದ್ಧ ಮಾಡುವ ಜನರಲ್ಲಿ  ಈ ತೊಳಲಾಟವಿಲ್ಲ. ಹೇಮಾವತಿಯ ಕಾಪಾಲಿಕ ಕುಟುಂಬಗಳು ಬೀಡಿಕಟ್ಟುವ ಕೆಲಸದಲ್ಲಿ ಸಂತೋಷದಿಂದ ತೊಡಗಿಕೊಂಡಿದ್ದವು.  ಕಾರಣ ಅವರ ಹೊಲಗಳು ಅವರನ್ನು ಸಾಕುತ್ತಿಲ್ಲ.

ಹಂಡಿಬಡಗನಾಥ ಸೀಮೆಯ ರಾವೂಳರು

ಬೆಳಗಾವಿ ಬಾಗಲಕೋಟ  ಜಿಲ್ಲೆಗಳಲ್ಲಿರುವ ರಾವುಳರು ಹಂಡಿಬಡಗನಾಥ ಮಠದ ಶಿಷ್ಯರು. ಈ ಮಠದ ಮೂಲ ಪುರುಷನು ಆಫಘಾನಿಸ್ಥಾನದವನು. ಆಫಘಾನಿಸ್ಥಾನದ ಗೋಲಪುರವು ರಾವುಳ ಪಂಥದ ಮೂಲ.  ರಾವುಳರು ಹಿಂದೆ ಜನಗಣತಿಯಲ್ಲಿ  ಕಾಪಾಲಿ, ರಾವೂಳಜೋಗಿ,  ಜಾಡರು ಎಂದೆಲ್ಲ ಬರೆಸಿದ್ದಾರೆ. ಈಗ ಸಂಘಟನೆಯ ಸಭೆಗಳಿಗೆ ಹೋಗಿ ಬಂದ ನಂತರ, ನಾಥಪಂಥಿ ಎಂದು ಬರೆಸುತ್ತಿದ್ದಾರೆ. ಅವರನ್ನು ಪರಿಸರದ ಜನ ರಾವೂಳರೆಂದೂ ಹಣಗಿಯವರೆಂದೂ ಗುರುತಿಸುತ್ತಾರೆ. ಗಂಡಸರ ಹೆಸರಿಗಷ್ಟೆ ರಾವೂಳ ವಿಶೇಷಣವು ಬರುತ್ತದೆ. ಕಾರವಾರ ಸಮೀಪದ ಚಿತಾಕುಲದಲ್ಲಿ ರಾವಳನಾಥನ ಗುಡಿಯಿದ್ದು ಅದು ಇವರಿಗೆ ಸಂಬಂಧಪಟ್ಟಿದೆಯೇ ಪರಿಶೀಲಿಸಬೇಕು.

ಹಣಿಗೆ ಅಥವಾ ಹಣಗಿ ಎಂದರೆ, ನೇಯುವ ಮಗ್ಗಕ್ಕೆ ಹಾಸಿದ ನೂಲುಗಳು ಹಾದುಹೋಗುವ ದಾರದಿಂದ ಮಾಡಿದ ಒಂದು ಚೌಕಟ್ಟು. ಅದಕ್ಕೆ ಬಾಚಣಿಗೆಗೆ (ಬಾಚುವ ಹಣಿಗೆ=ಬಾಚಣಿಗೆ) ಇರುವಂತೆ ಕಿಂಡಿಗಳು ಇರುತ್ತವೆ.  ‘‘ ನಾವು ಹಣಿಗೆ ಕಟ್ಟುವಾಗ ಮೇಲ್ ಮಲರ್ ಕಟ್ಟತೀವಿ.  ತೆಳಗಿಂದ ನೂಲುತಕ್ಕೊಂಡು ಮೇಲೆ ತಂದು ಕಟ್ಟತೀವಿ. ಇದು ಮಚೇಂದ್ರನಾಥನ ಜಾಲ ಇದ್ದಂಗೆ. ಎಲ್ಲರಿಗೂ ಬರಂಗಿಲ್ಲ’’ ಎಂದು ಬನಹಟ್ಟಿಯ ಲಕ್ಷ್ಮಣ ರಾವೂಳ ಹೇಳಿದರು. ಹಣಿಗೆ ಕಟ್ಟುವ ಕೆಲಸದಲ್ಲಿ ಏಕಸ್ವಾಮ್ಯ ಸಾಧಿಸಿದ್ದ ರಾವೂಳರು ಅದನ್ನು ತಮ್ಮ ಧಾರ್ಮಿಕ ಕ್ರಿಯೆಯನ್ನಾಗಿಯೂ ಮಾಡಿಕೊಂಡಿದ್ದರು. ಹಣಿಗೆಯು ಏಕಕಾಲಕ್ಕೆ ಅವರ ದುಡಿಮೆಯ ಹಾಗೂ ಧಾರ್ಮಿಕ ಬದುಕಿನ ಕುರುಹು ಆಗಿತ್ತು. ‘‘ಮಡಕೆ ದೈವ, ಮೊರದೈವ, ಬೀದಿಯ ಕಲ್ಲುದೈವ, ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೊ!’’ ಎಂದು ಜನಪದ ದೈವಗಳನ್ನು ವಿಡಂಬಿಸುವ ಬಸವಣ್ಣನ ಒಂದು ವಚನವಿದೆ. ಇಲ್ಲಿರುವ ಹಣಿಗೆದೈವ ಬಹುಶಃ ನಾಥಪಂಥದ ಹಣಿಗೆಯೆ ಇರಬಹುದು.

ಬಾಗಲಕೋಟ ಬೆಳಗಾವಿ ಕೊಲ್ಲಾಪುರ ಸೊಲ್ಲಾಪುರ ಜಿಲ್ಲೆಗಳಿಗೆ ಸೇರಿದ, ಜಮಖಂಡಿ ಗುಳೇದಗುಡ್ಡ ಮೀರಜ ಇಚಲಕರಂಜಿ ಬನಹಟ್ಟಿ ರಬಕವಿಗಳಲ್ಲಿ ರಾವುಳರು ಇದ್ದಾರೆ. ಮುಖ್ಯವಾಗಿ ನೇಕಾರಿಕೆ ಇರುವ ಊರುಗಳಲ್ಲಿ ಅವರ ನೆಲೆಯಿದೆ. ಜಮಖಂಡಿ ತಾಲೂಕಿನ ಬನಹಟ್ಟಿ ರಾಮಪುರ ರಬಕವಿಗಳಲ್ಲಿ ತಲಾ ೪೦, ೧೦, ೨೦ ರಾವುಳರ ಮನೆಗಳಿವೆ. ಕೈಮಗ್ಗಗಳು ಇದ್ದಾಗ ಹಣಿಗೆ ಕೆಲಸ ಇತ್ತು. ಈಗಿಲ್ಲ. ಹೀಗಾಗಿ ರಾವುಳರು ನೇಕಾರಿಕೆಗೆ ಕೆಲವರು ಕೃಷಿಗೆ ವ್ಯಾಪಾರಕ್ಕೆ ಹೊರಳಿಕೊಂಡರು. ಇದಕ್ಕಿದ್ದಂತೆ ತಮ್ಮ ಕುಲಕಸುಬು ಕಳೆದುಕೊಂಡ ಮೇಲೆ ಹೊಸ ಕೆಲಸಕ್ಕೆ ಹೊರಳಿಕೊಳ್ಳುವ ಪ್ರಕ್ರಿಯೆ ಬೇಗ ಮುಗಿಯುವುದಿಲ್ಲ. ಈ ಹೊರಳಿಕೆಯ ಬಿಕ್ಕಟ್ಟು ಅವರನ್ನು ಚಿಂತೆಯಾಗಿ ಆವರಿಸಿದೆ. ನಾನು ಕಂಡ ಬಹುತೇಕ ರಾವುಳರು ತೀರಾ ಬಡವರು. ಬನಹಟ್ಟಿಯಲ್ಲಿ ಇರುವ ಸಿರಿವಂತ ರಾವುಳರೆಂದರೆ ತವನಪ್ಪನವರು. ಅವರು ಫೈನಾನ್ಸ್ ಇಟ್ಟುಕೊಂಡಿದ್ದಾರೆ.

ನಾಥರ ಬಾರಾಪಂಥಗಳಲ್ಲಿ ರಾವಲ್ ಎನ್ನುವುದು ಒಂದು ಪಂಥ. ರಾವೂಳರು ಹಂಡಿಬಡಗನಾಥ ಮಠದ ಒಕ್ಕಲಾದರೂ, ಅಲ್ಲಿಗೆ ಹೋಗುವುದು ಕಡಿಮೆ. ಕೆಲವು ಮುಖಂಡರಷ್ಟೆ  ಹೋಗಿಬಂದಿದ್ದಾರೆ. ಕೇಳಿದರೆ ‘ನಮಗೆ ಭಕ್ತಿಯಿದೆ. ಆದರೆ ಶಕ್ತಿಯಿಲ್ಲ’ ಎನ್ನುತ್ತಾರೆ. ‘ಶಕ್ತಿ’ ಎಂದರೆ ನಾಥಗುರುಗಳ ಉಪಚಾರಕ್ಕೆ ಮಾಡಬೇಕಾದ ಖರ್ಚು. ಅವರಿಗೆ ಕರೆದುಕೊಂಡು ಬಂದರೆ ಪಟ್ಟಿ ಎತ್ತಿ ಹಣ ಸಂಗ್ರಹ ಮಾಡಬೇಕಾಗುತ್ತದೆ. ಪವರ್‌ಲೂಂ ಬಂದ ಬಳಿಕ ಹಣಿಗೆ ಕಟ್ಟುವ ಕೆಲಸ ನಿಂತುಹೋಗಿದೆ. ಒಟ್ಟು ಜಾಗತೀಕರಣದ ಹೊಸ ಆರ್ಥಿಕ ನೀತಿಯಿಂದ ಜವಳಿ ಉದ್ದಿಮೆಯೇ ಬಿಕ್ಕಟ್ಟಿನಲ್ಲಿದೆ. ರಾವೂಳರು ಹೊಸ ಕೆಲಸಗಳ ಹುಡುಕಾಟದಲ್ಲಿದ್ದಾರೆ. ಈ ಸಂಕ್ರಮಣಾವಸ್ಥೆಯಲ್ಲಿ ಅವರಿಗೆ ಸಹಜವಾಗಿ ನಾಥಪಂಥೀಯ ಆಚರಣೆಗಳನ್ನು ಮಾಡುವುದು ಕಷ್ಟವಾಗಿದೆ.

ರಾವುಳರು ಇಲ್ಲಿನ  ಗ್ರಾಮಗಳಲ್ಲಿ ಚದುರಿಹೋಗಿದ್ದಾರೆ. ಕೆಲವು ಕಡೆ  ಊರಿಗೆ ಒಂದೊ ಎರಡೊ ಮನೆ. ಹೀಗಾಗಿ ನಾಥರ ಬರುಹೋಗುವಿಕೆ ಸಾಧ್ಯವೇ ಇಲ್ಲ. ಇದು ಅವರಿಗೆ ಕೊರಗಿನ ವಿಷಯವೂ ಆಗಿಲ್ಲ. ಅವರು ತಾವಿರುವ ಊರಿನ ಬಲಿಷ್ಠ ಸಮುದಾಯದ ಸಾಂಸ್ಕೃತಿಕ ಪ್ರಭಾವದಲ್ಲಿ ಜೀವಿಸಿದ್ದಾರೆ. ಬನಹಟ್ಟಿ ಭಾಗದಲ್ಲಿ ಅವರ ಹೆಸರುಗಳು ಲಿಂಗಾಯತರ ಹಾಗೆ ಕಲ್ಲಪ್ಪ, ಮಲ್ಲಪ್ಪ, ದುಂಡಪ್ಪ, ಬಸಪ್ಪ, ಕಾಡಪ್ಪ ಸಿದ್ಧಪ್ಪ ಇತ್ಯಾದಿ ಯಾಗಿವೆ. ಕೊನೆಯ ಹೆಸರು ಬನಹಟ್ಟಿಯ ಕಾಡಸಿದ್ಧೇಶ್ವರನ ಕಾರಣದಿಂದ ಬಂದಿದೆ. ಈಗೀಗ ಗೋರಖನಾಥ ಮಚೇಂದ್ರನಾಥ ಹೆಸರುಗಳನ್ನು ಇರಿಸಿಕೊಳ್ಳುತ್ತಿದ್ದಾರೆ. ಬನಹಟ್ಟಿಯಲ್ಲಿ ಮಕ್ಕಳು ಆಡುವಲ್ಲಿ ವಿಚಾರಿಸಿ ಕೇಳಿದಾಗ, ಒಬ್ಬನೇ ಒಬ್ಬ ಗೋರಖ ನಾಥ(೧೦)ಸಿಕ್ಕನು.

ಈಚೆಗೆ ಬನಹಟ್ಟಿಯಲ್ಲಿ ‘ಶ್ರೀ ಗೋರಖನಾಥ ನಾಥಪಂಥಿ(ರಾವೂಳ) ಸಮಾಜಸೇವಾ ಸಂಘ’ ಸ್ಥಾಪನೆಯಾಗಿದೆ. ತವನಪ್ಪ ರಾವೂಳ ಅಧ್ಯಕ್ಷರು. ಲಕ್ಷ್ಮಣ ರಾವೂಳ ಕಾರ್ಯದರ್ಶಿ. ರಾವುಳ ಸಮಾಜ ಸುಧಾರಣೆಯ ಕೆಲಸ ಮಾಡುವ ಹೆಚ್ಚಿನ ಮುಖಂಡರು ಹುಬ್ಬಳ್ಳಿಯಲ್ಲಿದ್ದು ಸರಕಾರಿ ನೌಕರರಾಗಿದ್ದಾರೆ. ಇವರು ನಾಥಪಂಥಿ ರಾವುಳ ಸಂಘಟನೆಯನ್ನು ಕಟ್ಟಿದ್ದಾರೆ. ನಾಥಪಂಥವನ್ನು ತಮ್ಮ ಜನರೊಳಗೆ ಮತ್ತೆ ನೆಲೆಯೂರಿಸಬೇಕು ಎಂದು ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ೧೯೩೨ರಲ್ಲಿ ಬಾಬಾಜಿ ರಾವೂಳ ಷಟ್‌ದರ್ಶಿನಿ ಎಂಬುವರು ಬರೆದಿದ್ದ  ‘ರಾವುಳ ಮತಪ್ರಕಾಶಿಕೆ’ ಪುಸ್ತಕವನ್ನು  ಮರುಮುದ್ರಣ ಮಾಡಿಸಿದ್ದಾರೆ. ವಿಶೇಷವೆಂದರೆ,  ೨೦ನೇ ಶತಮಾನದ ಮೊದಲ ಘಟ್ಟದಲ್ಲಿ ರಚನೆಯಾದ ಈ ಕೃತಿಯಲ್ಲೂ ರಾವುಳರು ನಾಥಪಂಥದ ಗುರುತುಗಳನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿರುವುದು. ರಾವುಳರು  ತಮ್ಮ ಮಕ್ಕಳಿಗೆ  ಕಲ್ಲಪ್ಪ ಮಲ್ಲಪ್ಪಾ ಬಸಪ್ಪಾ ಎಂದು ಇಡಬಾರದು. ಹೆಸರ ತುದಿಗೆ ನಾಥ ಎಂದು ಬರುವಂತೆ ಹೆಸರು ಇಡಬೇಕು. ರಾವುಳರು ಆಚರಿಸಬೇಕಾದ ಆಚರಣೆಗಳಿವು ಎಂದು ಅದರಲ್ಲಿ ಸಲಹೆಗಳಿವೆ. ರಾವುಳರು ತಮ್ಮನ್ನು ಬ್ರಾಹ್ಮಣರಂತೆ ಗುರುಸ್ಥಾನದಲ್ಲಿರುವವರು ಎಂದು ಭಾವಿಸಿದ್ದಾರೆ. ಎಲ್ಲ ಬಗೆಯ  ಜೋಗಿಗಳ ಜತೆ ಸೇರಿಕೊಂಡು ಮಾಡುತ್ತಿರುವ  ಸಾಮಾಜಿಕ ರಾಜಕೀಯ ಸಂಘಟನೆಗಳು, ಎಲ್ಲಿ ತಮ್ಮ ಮಹತ್ವ ಮತ್ತು ವಿಶಿಷ್ಟತೆಗಳನ್ನು ಕಳೆದುಹಾಕುತ್ತವೆಯೊ ಎಂಬ ಅಳುಕನ್ನು ಇರಿಸಿಕೊಂಡಿದ್ದಾರೆ. ಹೀಗಾಗಿ ಜೋಗಿ ಸಮಾಜ ಸುಧಾರಕ ಸಂಘಟನೆಯಲ್ಲಿ ಹುಬ್ಬಳ್ಳಿಯ ಮಧೂರಕರರ ಜತೆ, ರಾವುಳ ಸಂಘಟನೆಯವರು ಒಂದು ಬಗೆಯ ಅಸಹಕಾರ  ಮನೋಭಾವದಲ್ಲಿ ವರ್ತಿಸುವುದು ಕಾಣಬರುತ್ತಿತ್ತು. ಕದ್ರಿಮಠದ ನಾಥನ ಪಟ್ಟಾಭಿಷೇಕದ ನಂತರ ಸೇರಿದ ಜೋಗಿ ಸಮಾಜ ಸುಧಾರಕ ಸಭೆಯಲ್ಲಿ ಅವರು ಹಾಜರಾಗಲಿಲ್ಲ.

ಕದ್ರಿ ಹಾಗೂ ವಿಟ್ಲ ಸೀಮೆಯ ತುಳುವ ಜೋಗಿಗಳು

ಕರಾವಳಿಯಲ್ಲಿ ಮಂಗಳೂರು ಪುತ್ತೂರು ಸುಳ್ಯ ಕಡೆ ತುಳು ಜೋಗಿಗಳಿದ್ದಾರೆ. ಜೋಗಿ ಅಥವಾ ಪುರುಷ ಎನ್ನುವುದು ಹಿರಿಯ ತಲೆಮಾರಿನವರ ಹೆಸರಲ್ಲಿ  ಕಾಣುವಂತೆ,  ಹೊಸ ತಲೆಮಾರಿನಲ್ಲಿ ಕಾಣುವುದಿಲ್ಲ. ಈ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದು ಫಿಶರೀಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಕೇಶವನಾಥರ ಹೆಸರಲ್ಲಿ, ಸ್ಯಾಕ್ಸೊಫೋನ್ ವಾದನದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದರಾದ ಕದ್ರಿ ಗೋಪಾಲನಾಥರ ಹೆಸರಲ್ಲಿ, ‘ನಾಥ’ ಶಬ್ದವಿದೆ. ಈಚೆಗೆ ಕೆಲವರು ತಮ್ಮ ಹೆಸರಿಗೆ ಜೋಗಿ ಮತ್ತು ನಾಥ ಎಂದು ಸೇರಿಸಿಕೊಳ್ಳುತ್ತಿರುವುದು ಉಂಟು. ಕದ್ರಿಯ ಜೋಗಿ ಸಮುದಾಯದಲ್ಲಿ ನಾಥಪಂಥದ ಬಗ್ಗೆ ಅಪಾರ ಜ್ಞಾನವುಳ್ಳ ಜೋಗಿ ಆನಂದನಾಥರ ಅಧಿಕೃತ ಹೆಸರು ಎಂ. ಆನಂದ ಎಂದಿತ್ತು. ಈ ಹೆಸರು ಬದಲಾವಣೆಯು ಪಂಥದ ಬಗ್ಗೆ ತಿಳಿವಳಿಕೆ ಹಾಗೂ ಜಾಗೃತಿಯ ಭಾಗವಾಗಿದೆ.

ತುಳುವ ಜೋಗಿಗಳಿಗೆ ಹಿಂದಿನಿಂದ ಬಂದ ಸಾಂಪ್ರದಾಯಕ ವೃತ್ತಿ ಎಂಬುದು ಇರಲಿಲ್ಲ. ಕೆಲವರು ದೇವಾಲಯಗಳಲ್ಲಿ ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದರು. ಈಗಲೂ ಮಂಗಳಾದೇವಿ ಗುಡಿಯ ವಾದ್ಯನುಡಿಸುವವರ ಹೆಸರು ಮತ್ಸ್ಯೇಂದ್ರನಾಥ. ಮಂಜೇಶ್ವರದ ಅನಂತೇಶ್ವರ ದೇವರಿಗೆ ವಾದ್ಯ ನುಡಿಸುವವರು ಕೂಡ ಜೋಗಿಗಳು. ಕದ್ರಿಯ ಗೋಪಾಲನಾಥ ಮನೆತನವು ವಾದ್ಯಕಾರರದಲ್ಲ. ಆದರೆ ಅವರು ವಾದ್ಯಕಲಾವಿದರಾಗಿ ದೊಡ್ಡ ಸಾಧನೆ ಮಾಡಿದರು.  ಆಧುನಿಕ ಕಾಲದಲ್ಲಿ ಜೋಗಿಗಳು ಅನೇಕ ವೃತ್ತಿಗಳಲ್ಲಿ ಹರಡಿ ಹೋಗಿದ್ದಾರೆ. ಜೋಗಿ ಆನಂದನಾಥರ ಪ್ರಕಾರ, ಕದ್ರಿ ಹಾಗೂ ವಿಟ್ಲದ ತುಳುವ ಜೋಗಿಗಳು ಬಹುಶಃ ಸನ್ಯಾಸ ಬಿಟ್ಟು ಸಂಸಾರಸ್ಥರಾಗುತ್ತಿದ್ದ ನಾಥಯೋಗಿಗಳ ಮಕ್ಕಳು. ಮುಂದೆ ಅವರೇ ಒಂದು ಜನಾಂಗವಾಗಿ ಬೆಳೆದವರು. ಆದರೆ ಹಿಂದೆ ಕದ್ರಿಯಲ್ಲಿದ್ದ ವಜ್ರಯಾನ ಪಂಥದ ಅನುಯಾಯಿಗಳು ಈಗಿನ ಜೋಗಿಗಳ ಪೂರ್ವಜರು ಆಗಿರುವ ಸಾಧ್ಯತೆಯೂ ಇದೆ.  ಸಮುದಾಯಗಳ ಮೂಲ ಶೋಧನೆ ಯಾವಾಗಲೂ ಕಷ್ಟಕರ.

ಕದ್ರಿಯ ಜೋಗಿಮಠದ ನಾಥನಿಗೆ ಒಂದುಕಾಲಕ್ಕೆ ಜೋಗಿ ಸಮುದಾಯದ ಬದುಕಿನಲ್ಲಿ ವ್ಯಾಪಕವಾದ ಪಾತ್ರವಿತ್ತು. ಆತ ತಂಟೆ ತಕರಾರುಗಳನ್ನು ಬಗೆಹರಿಸುವ ನ್ಯಾಯಾಧೀಶನಾಗಿಯೂ ಕೆಲಸ ಮಾಡುತ್ತಿದ್ದನು. ಆಯಾ ಪ್ರದೇಶದ ಜೋಗಿ ಸಮುದಾಯದ ಗುರಿಕಾರರನ್ನು ಅರಸನು ಆರಿಸುತ್ತಿದ್ದನು. ಅರಸನು ಸರ್ಕೀಟು ಹೊರಟಾಗ ಗುರಿಕಾರರು, ಮಠದ ಲಾಂಛನವಿರುವ ಹಿತ್ತಾಳೆ ಬಿಲ್ಲೆಯ ಕೆಂಪು ಅಡ್ಡಪಟ್ಟಿ ಧರಿಸಿ, ಮಠದ ಬಿರುದುಬಾವಲಿ ಛತ್ರಿಚಾಮರ ಸಮೇತ  ಹೋಗಬೇಕಾಗಿತ್ತು. ಗುರಿಕಾರರಿಗೆ ಮಠದ ವತಿಯಿಂದ ಉಂಬಳಿಗಳಿದ್ದವು.  ಜೋಗಿಯರ ಮನೆಯ ಕಾರ್ಯಗಳಿದ್ದಾಗ, ಗುರಿಕಾರರಿಗೆ ವಿಶೇಷ ಬುಲಾವು ಹಾಗೂ ಉಪಚಾರ ಇರುತ್ತಿತ್ತು. ಈಗ ಆ ಪದ್ಧತಿಗಳೆಲ್ಲ ನಿಂತುಹೋಗಿವೆ ಎಂದು ಹಿರಿಯ ಜೋಗಿಗಳು ಹೇಳುತ್ತಾರೆ.

ಕದ್ರಿ ಸೀಮೆಯ ಜೋಗಿಗಳು ಜೋಗಿಸಮಾಜ ಸುಧಾರಕ ಸಂಘವನ್ನೂ  ನಾಥ ಸಂಪ್ರದಾಯ  ಪ್ರಚಾರ ಸಮಿತಿಯನ್ನೂ ರಚಿಸಿಕೊಂಡಿದ್ದಾರೆ. ಬಹಳ ಹಿಂದೆಯೆ ಆಧುನಿಕ ಶಿಕ್ಷಣಕ್ಕೂ ಮಂಗಳೂರು ನಗರದ ವಾಣಿಜ್ಯ ಸಂಸ್ಕೃತಿಗೂ ತೆರೆದುಕೊಂಡ ಕಾರಣ, ಈ ಸಮುದಾಯವು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಕಷ್ಟು ಮುಂದುವರೆದಿದೆ. ಹಿಂದೆ ಮಂಗಳೂರಿನ ಕಾರ್ಪೊರೇಶನ್ ಉಪಮೇಯರಾಗಿ ಹರಿನಾಥರು ಕೆಲಸ ಮಾಡಿದರು. ಈಚೆಗೆ ಒಬ್ಬರು ಮೇಯರಾದರು. ಆದರೂ ಅಲ್ಪಸಂಖ್ಯಾತವಾಗಿರುವ ತಮ್ಮ ಸಮುದಾಯಕ್ಕೆ ರಾಜಕೀಯ ಪಕ್ಷಗಳಲ್ಲಿ ಸೂಕ್ತವಾದ ಪ್ರಾತಿನಿಧ್ಯವಿಲ್ಲವೆಂಬ ಕೊರಗು ಜೋಗಿಗಳಲ್ಲಿದೆ.

ಹಲವರಿ ಸೀಮೆಯ ಬಳೆಗಾರ ಜೋಗಿಗಳು

ಹಲವೇರಿ ಮಠಕ್ಕೆ ನಡೆದುಕೊಳ್ಳುವ ಬಳೆಗಾರ ಜೋಗಿಗಳು ಉಡುಪಿ ಜಿಲ್ಲೆಯ, ಕುಂದಾಪುರ ಮೆಕ್ಕೆಕಟ್ಟೆ ಕೋಟ ಬಸರೂರು ಬಾರಕೂರು ಕೋಟೇಶ್ವರ ಕಾಪು ಉದ್ಯಾವರ ಮಿಜಾರು ಮುಂತಾದ ಕಡೆ ನೆಲೆಸಿದ್ದಾರೆ. ತುಳುವ ಜೋಗಿಗಳಿಗೆ ಹೋಲಿಸಿದರೆ ಇವರು ಆರ್ಥಿಕವಾಗಿ ಅಷ್ಟು ಮುಂದುವರೆದಿಲ್ಲ. ಈಗಲೂ ತಮ್ಮ ಪಾರಂಪರಿಕ ಕಸುಬಾದ ಬಳೆ ಮಾರಾಟ ಮಾಡುತ್ತಾರೆ. ಇವರಿಗೆ ಈ ಕಸುಬು ಹೇಗೆ ಬಂದಿತೊ ತಿಳಿಯಬೇಕಿದೆ. ಬಳೆಗಾರ ಸಮುದಾಯವೊಂದು ಇಡಿಯಾಗಿ ನಾಥಕ್ಕೆ ಪಂಥಾಂತರ ಮಾಡಿರುವ ಸಾಧ್ಯತೆಯಿದೆ. ಕೋಟ ಮುಂತಾದ ಕಡೆ ಇರುವ ಶಕ್ತಿದೇವತೆಗಳ ಕ್ಷೇತ್ರಗಳಲ್ಲಿ ಜೋಗಿಗಳೂ  ಅರ್ಚನೆ ಕೆಲಸ ಮಾಡುತ್ತಾರೆ. ಝುಂಡಿಯು ತ್ರ್ಯಂಬಕದಿಂದ ಘಟ್ಟವಿಳಿದು ಕರಾವಳಿಗೆ ಬರುವಾಗ  ಮೊದಲ ಸ್ವಾಗತ ಬಳೆಗಾರ ಜೋಗಿಗಳದ್ದು. ಆದರೆ ೧೪೯೦ರ ಶಾಸನದಲ್ಲಿ, ಅನುಪಮನಾಥನ ಶಿಷ್ಯ ಸುಬೋಧಿನಾಥನನ್ನು ಪಟ್ಟಾಭಿಷೇಕಕ್ಕೆ ಕದ್ರಿಗೆ ಕರೆದುಕೊಂಡು ಹೋಗುವಾಗ, ಚೌಳಿಕೇರಿಯ ಪಂಚರು ಅವನನ್ನು ತಡೆದು ಅಡ್ಡಿಮಾಡುವ ಪ್ರಕರಣವೊಂದು ದಾಖಲಾಗಿದೆ. ಸುಬೋಧಿನಾಥನನ್ನು ಯಾಕೆ ತಡೆಯಲಾಯಿತು ಎನ್ನುವುದು ಸ್ಪಷ್ಟವಾಗಿ ತಿಳಿಯುವುದಿಲ್ಲ.[6]  ಹಲವರಿಯದಲ್ಲದೆ ಬಾರಕೂರಿನ ಸದಾನಂದ ಮಠ  ಬಳೆಗಾರರದು ಎನ್ನಲಾಗುತ್ತದೆ.  ಅವರ ಅನೇಕ ಮಠಗಳು ಪಾಳುಬಿದ್ದಿವೆ. ಪಾಳುಬಿದ್ದಿದ್ದ ಹಲವೇರಿ ಮಠವನ್ನು ಈಗ ಜೀರ್ಣೋದ್ಧಾರ ಮಾಡಿದ್ದಾರೆ.  ಸಮುದಾಯಗಳ ಆರ್ಥಿಕ ಸ್ಥಿತಿಯನ್ನು ಅವುಗಳ ಧಾರ್ಮಿಕ ಕೇಂದ್ರಗಳ ಸ್ಥಿತಿಯ ಮೂಲಕವೂ ಅಳೆಯಬಹುದು. ವಿಶೇಷವೆಂದರೆ, ಹಿಂದುಳಿದಿರುವ ಈ ಸಮುದಾಯವು, ಕದ್ರಿಯ ಜೋಗಿ ಸಮಾಜ ಸುಧಾರಕ ಚಟುವಟಿಕೆಯಲ್ಲಿ ಯಾಕೊ ಹೆಚ್ಚು  ಭಾಗವಹಿಸಿದಂತೆ ಕಾಣಲಿಲ್ಲ.

ಚಂದ್ರಗುತ್ತಿ ಲುಂಕೆಮಲೆಯ ಕಿನ್ನರಿಜೋಗಿಗಳು

ಕಿನ್ನರಿ ಜೋಗಿಗಳು ಚಂದ್ರಗುತ್ತಿ ಹಾಗೂ ಲುಂಕೆಮಲೆಯ ನಾಥಮಠಗಳ ಶಿಷ್ಯರು. ಲುಂಕೆಮಲೆಗೆ ಸೇರಿದವರು, ಮತ್ತೀಹಳ್ಳಿ (ಹರಪನಹಳ್ಳಿ) ಜಗಳೂರು (ಜಗಳೂರು) ಬಿಷ್ಣುಹಳ್ಳಿ ಚಿಕ್ಕಜೋಗಿಹಳ್ಳಿ (ಕೂಡ್ಲಿಗಿ)  ಮೊಳಕಾಲ್ಮೂರುಗಳಲ್ಲಿದ್ದಾರೆ; ಚಂದ್ರಗುತ್ತಿಗೆ ಸೇರಿದವರು ಕಂಬದಾಳು ಹೊಸೂರು(ಭದ್ರಾವತಿ) ಘಿಣ;್ಞಝ್ಜಣಿಉ್ಜ್ಛ್ಳ ಕವಲೆದುರ್ಗ (ಘಿಣ;್ಞಝ್ಜಣಿಉ್ಜ್ಛ್ಳ) ಗಾಜನೂರು (ಶಿವಮೊಗ್ಗ) ಚಂದ್ರಗುತ್ತಿ ಸೊರಬ ಹುರಳಿ (ಸೊರಬ) ಸಾಗರ ಭೈರಾಪುರ ಕಡಗಳಲೆ ಹೊಸೂರು (ಸಾಗರ) ಚೆನ್ನಗಿರಿಗಳಲ್ಲಿದ್ದಾರೆ. ಈ ಎರಡೂ ಭಾಗದ ಜೋಗಿಗಳಲ್ಲಿ ಪರಸ್ಪರ ಕೊಡುಕೊಳುವ ಸಂಪರ್ಕ ಇಲ್ಲ. ಕಿನ್ನರಿಯವರ ಮನೆಮಾತು ಮರಾಠಿ. ಸಾಮಾನ್ಯವಾಗಿ ಈ ಎರಡೂ ಮಠಗಳಲ್ಲಿ ಮರಾಠಿ ಹಾಗೂ ಹಿಂದಿ ಮಾತಾಡುವ ಬಾವಾಜಿಗಳು ಇರುವ ಕಾರಣ, ಕಿನ್ನರಿಯವರಿಗೆ ಭಾಷೆಯ ತೊಡಕಿಲ್ಲ. ಇವರು ಕದ್ರಿಯ ಹೆಸರು ಕೇಳಿದ್ದಾರೆ. ಆದರೆ ಅಲ್ಲಿಗೆ ಹೋಗಿಲ್ಲ. ಲುಂಕೆಮಲೆ ಜಾತ್ರೆಯಲ್ಲಿ ಕೂಡ ಕಿನ್ನರಿ ಜೋಗಿಗಳು ಕಾಣಸಿಗಲಿಲ್ಲ. ಚಂದ್ರಗುತ್ತಿ ಮಠದ ವಿಷಯದಲ್ಲೂ ಜೋಗಿಗಳ ಸಂಪರ್ಕ  ಕಡಿತಗೊಂಡಿದೆ.  ತಮ್ಮ ಜೀವನ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸದ ಮಠಗಳ ಹಂಗಾದರೂ ಯಾಕೆ ಎಂದು ಅವರಿಗೆ ಅನಿಸಿರಬಹುದು. ಅವರು  ಭಿಕ್ಷಾಟನೆಯಿಂದ ಜೀವನ ಮಾಡುವಾಗ, ಜೋಗಿದೀಕ್ಷೆ ಕೊಡಲು ಹಾಗೂ ಭಿಕ್ಷಾಟನೆಯ ಅಧಿಕಾರ ಪತ್ರ ನೀಡಲು ಮಠದ ಸಂಬಂಧ ಅನಿವಾರ್ಯವಾಗಿತ್ತು. ಈಗಿಲ್ಲ. ಜೋಗಿಗಳಿಗೆ ಮಠದ ಬಾವಾಜಿ ಕೊಡುತ್ತಿದ್ದ ಅಧಿಕಾರ ಪತ್ರದ ಒಂದು ಮಾದರಿಯನ್ನು ಕುತೂಹಲಕ್ಕಾಗಿ ಗಮನಿಸಬಹುದು:

ಮೊಳಕಾಲ್ಮೂರು ತಾಲೂಕು ಹಾನಗಲ್ ಮುಜರೆ ಶ್ರೀ ಆದಿಲುಂಕೆಮಲೆ ಕಾಲುಭೈರವ ಸಿದ್ಧೇಶ್ವರ ಮಠದ ಸಿದ್ಧಸಿಂಹಾಸನದ…ಇವರ ಸನ್ನಿಧಾನದಿಂದ, ಸಮಸ್ತ ಜನಗಳಿಗೆ ಸೂಚನ ಪತ್ರಿಕಾ ಯೇನೆಂದರೆ, ಸದರಿ ಮಠವು ಶ್ರೀ ಸುವರ್ಣ ಕದಳಿಯೋಗೇಶ್ವರ ಮಠ, ಮಂಗಳೂರು ಮಠಕ್ಕೆ ಒಳಪಟ್ಟಿರುತ್ತೆ. ಸದರಿ ನುಂಕೇಮಲೆ ಸಿದ್ಧೇಶ್ವರ ಮಠಕ್ಕೆ ಸೇರಿದ ಕಿನ್ನಿರಿ ಜೋಗಿಗಳು ಯಾವತ್ತೂ ಭಿಕ್ಷಾಟನೆಗಾಗಿ ಹಳ್ಳಿಗಳ ಮೇಲೆ ಮತ್ತು ಪಟ್ಟಣಗಳ ಮೇಲೆ ಬರುವರು. ಈ ಕಿನ್ನಿರಿ ಜೋಗಿಯವರು ಯಾವತ್ತೂ ಪ್ರತಿ ವರ್ಷವು ನಮ್ಮ ಲುಂಕೇಮಠ ಗುರುಕಾಣಿಕೆಯನ್ನು ಒಪ್ಪಿಸುವರು ಮತ್ತು ಇವರುಗಳು ಯಾವ ಮಠದವರುಗಳು ಆಗಲಿ, ಹಳ್ಳಿಗಳಲ್ಲಿ ಯಾರು ತಂಟೆ ತಕರಾರು ಮಾಡದಂತೆ ಶಕ್ತಾನುಸಾರ ಬಿಕ್ಷಾ ವಗೈರೆ ಕೊಟ್ಟು ಕಳುಹಿಸಿತಕ್ಕದ್ದು -ಇಂತಿ ಆರ್ಶೀವಾದ.

ಕೆಳಗೆ ಮಠದ ನಾಥನ ಸಹಿ ಹಾಗೂ ಜೋಗಿಯ ಹೆಸರು ಇರುತ್ತಿತ್ತು. ಈಗ ಹೊಸ ತಲೆಮಾರಿನಲ್ಲಿ ಜೋಗಿದೀಕ್ಷೆ ಪಡೆಯುವವರು ತೀರ ಕಡಿಮೆ. ಕಿನ್ನರಿಯವರು ನಾಥಪಂಥಿಗಳಾದರೂ  ಕಾಪಾಲಿಕರು ಮತ್ತು ರಾವುಳರು ಇವರನ್ನು ಸರಿಸಮವಾಗಿ ಪರಿಗಣಿಸುವುದಿಲ್ಲ. ಕಾಪಾಲಿಕ ಹಾಗೂೊರಾವುಳರಿಗೆ ಜೋಗಿಗಳೆಂದು ಕರೆಯುವ ರೂಢಿಯಿದ್ದರೂ, ಅವರು ಕಿನ್ನರಿಯವರಂತೆ ವಾದ್ಯ ಹಿಡಿದು ಭಿಕ್ಷಕ್ಕೆ ಹೋಗುವುದಿಲ್ಲ. ಭಿಕ್ಷಾಟನೆಯು ಕಿನ್ನರಿಯವರನ್ನು ಸಾಮಾಜಿಕವಾಗಿ ಕೆಳಗಿನ ಸ್ಥಾನದಲ್ಲಿ ಇರಿಸಿದೆ. ಕಾಪಾಲಿಕರಿಗೆ ಹೋಲಿಸಿದರೆ ಕಿನ್ನರಿ ಸಮುದಾಯ ತೀರಾ ಹಿಂದುಳಿದಿದೆ. ಕಿನ್ನರಿಯವರು ತಮ್ಮನ್ನು ಹಂಡಿಜೋಗಿ ಎಂದು ಕರೆದುಕೊಳ್ಳಲು ಬಯಸುತ್ತಾರೆ. ಇದು ಅವರ ಸಾಂಪ್ರದಾಯಕ ಹೆಸರಲ್ಲ. ಆದರೆ ಈ ಹೆಸರಲ್ಲಿ  ಪ್ರಮಾಣಪತ್ರ ಸಿಕ್ಕರೆ ಅವರಿಗೆ ಮೀಸಲಾತಿ ಸಿಗುತ್ತದೆ.  ಬಿಷ್ಣುಹಳ್ಳಿಯ ಕಿನ್ನರಿ ಜೋಗಿಗಳು ನಾಗಮಂಗಲ ಅರಕಲಗೂಡು ಮಾಗಡಿ ಭಾಗದ ಕಾಪಾಲಿಕರಿಗಿಂತ ಹಾಗೂ ಬನಹಟ್ಟಿಯ ರಾವೂಳರಿಗಿಂತ ಹೆಚ್ಚು ಶಿಕ್ಷಣ ಮತ್ತು ನೌಕರಿ ಪಡೆದಿದ್ದಾರೆ. ಬಿಷ್ಣುಹಳ್ಳಿಯ ಗುರು ಗೋರಕ್ಷನಾಥ ಜೋಗಿ ಯುವಕಸಂಘದ ತರುಣರು  ಫುಟ್‌ಬಾಲ್ ಆಟದಲ್ಲಿ ತಾಲೂಕು ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಪೋಲಿಸು ಹಾಗೂ ಶಿಕ್ಷಕರಾಗಿ ಕೆಲಸ ಮಾಡುವವರು ಬಹಳ ಜನರಿದ್ದಾರೆ. ಒಬ್ಬರು ಕಾಲೇಜು  ಅಧ್ಯಾಪಕರಾಗಿ ಶಿವಮೊಗ್ಗದಲ್ಲಿದ್ದಾರೆ.

ಇವರಲ್ಲೆಲ್ಲಾ ಹೆಚ್ಚು ಪ್ರಸಿದ್ಧರಾದವರು, ಡಬ್ಬಾಜೋಗಿ ಗುಂಪಿಗೆ ಸೇರುವ ವೈ.ಡಿ. ಮಧೂರಕರ್ ಅವರು. ಹಿರೇಕೆರೂರು ತಾಲೂಕಿನವರಾದ ಇವರ ಹಿರೀಕರು ಸಂತೆಗಳಲ್ಲಿ ಪಾತ್ರೆಗಳನ್ನು ಮಾರುತ್ತಿದ್ದರು. ಈ ಹಿನ್ನೆಲೆಯನ್ನೇ ಇಟ್ಟುಕೊಂಡು ಮಧೂರಕರ್ ಸ್ಟೀಲ್ ಅಲ್ಯುಮಿನಿಯಂ ಪಾತ್ರೆ ತಯಾರಿಸುವ ಒಂದು ಸಣ್ಣ ಉದ್ಯಮವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರು. ಬಹಳ ಕಷ್ಟಪಟ್ಟು ಮೇಲೆ ಬಂದಿರುವ ಮಧೂರಕರ್ ಅವರಲ್ಲಿ, ಜೋಗಿಗಳ ಪ್ರಗತಿಯ ಬಗ್ಗೆ ಒಂದು ವಿಶನ್ ಇದೆ. ವಾರಕರಿ ದೀಕ್ಷೆಯನ್ನೂ ತೆಗೆದುಕೊಂಡಿರುವ ಮಧೂರಕರ್, ಹುಬ್ಬಳ್ಳಿಯಲ್ಲಿ ಗೋರಖನಾಥನ ಹೆಸರಲ್ಲಿ ವಸತಿಶಾಲೆ ತೆಗೆದು ಜೋಗಿ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ. ಶಾಲೆಯಲ್ಲಿ ೮೦೦ ಮಕ್ಕಳಿದ್ದಾರೆ. ಇವರಲ್ಲಿ ೨೦೦ಕ್ಕೂ ಹೆಚ್ಚು ಕಿನ್ನರಿಜೋಗಿಯವರು.

ಕಿನ್ನರಿ ಜೋಗಿಗಳು ವಾದ್ಯ ಹಿಡಿದು ಹಾಡುವ ಕಾರಣ, ಅವರಲ್ಲಿ  ಸಹಜವಾದ ಸಂಗೀತ  ನಾಟಕ ಕಲೆಯಿದೆ. ಕೆಲವರು ಪ್ರಸಿದ್ಧ ಕಲಾವಿದರೂ ಆಗಿದ್ದಾರೆ. ಅವರಲ್ಲಿ ಹೊಸೂರಿನ ಗುಡ್ಡಪ್ಪ ಜೋಗಿ ಒಬ್ಬರು. ಬಿಷ್ಣುಹಳ್ಳಿಯ ಮನೆಗಳು ಅಭಿಜಾತ ಕಲಾವಿದರಿಂದ ತುಂಬಿಕೊಂಡಂತೆ ಭಾಸವಾಗುತ್ತದೆ. ಅವರ ಮನೆಯ ಜಂತಿಯಲ್ಲಿ ಬೀಜಕ್ಕೆ ಬಿಟ್ಟ ಕಾಯಿಗಳನ್ನು ತೂಗು ಹಾಕುವಂತೆ, ವಾದ್ಯಗಳನ್ನು ತೂಗುಹಾಕಲಾಗಿದೆ.  ಆದರೆ ಅವರು ಸ್ವಾಭಿಮಾನಕ್ಕೆ ಧಕ್ಕೆ ತರುಂತಿರುವ ಭಿಕ್ಷೆ ಮತ್ತು ಹಾಡುಗಾರಿಕೆ ಕೈ ಬಿಟ್ಟು ಬೇಸಾಯ ಮಾಡುತ್ತಿದ್ದಾರೆ.

ಭಾಗ

ಒಕ್ಕಲಿಗರು

ಜೋಗಿ ಮತ್ತು ಕಾಪಾಲಿಕರ ಹಾಗೆ ನೇರವಾಗಿ ಅಲ್ಲದಿದ್ದರೂ ಬೇರೆಬೇರೆ ಕಾರಣಗಳಿಂದ  ನಾಥಪಂಥಕ್ಕೆ ಸಂಬಂಧ ಕಲ್ಪಿಸಿಕೊಂಡಿರುವ ಸುಮಾರು ೧೫ರಷ್ಟು ಸಮುದಾಯಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಸಂಖ್ಯೆ ಹಾಗೂ ಪ್ರಾಚೀನತೆ ದೃಷ್ಟಿಯಿಂದ ಮುಖ್ಯರಾದವರು ಒಕ್ಕಲಿಗರು. ಒಕ್ಕಲಿಗರು ಹಾಗೂ ಅವರು ಶಿಷ್ಯರಾಗಿರುವ ಚುಂಚನಗಿರಿ ಮಠವು ನಾಥಪಂಥಕ್ಕೆ ಬಹಳ ಮುಖ್ಯವಾಗಿತ್ತು. ಮಠವು ತನ್ನ ಹಿಡಿತದಿಂದ ಹೊರಬಿದ್ದಾಗ  ನಾಥಪಂಥವು ಒಕ್ಕಲಿಗರನ್ನು ತನ್ನ ತೆಕ್ಕೆಗೆ ತಂದುಕೊಳ್ಳಲು ದೊಡ್ಡ ಕಾರ್ಯಾಚರಣೆ ಆರಂಭಿಸಿತು.  ಹರಿದ್ವಾರದಲ್ಲಿರುವ ಬಾರಾಪಂಥವು ಭೂತೇಶ್ವರನಾಥ ಎಂಬ ಯೋಗಿಗೆ ಕರ್ನಾಟಕಕ್ಕೆ ಹೋಗಿ, ಅಲ್ಲಿನ ವಿಭಿನ್ನ ಸಮುದಾಯಗಳಲ್ಲಿ ನಾಥಸಂಪ್ರದಾಯವನ್ನು ಹರಡುವ ಹೊಣೆಯನ್ನು ವಹಿಸಿ, ೧೯೫೪ರಲ್ಲಿ ಕಳಿಸಿಕೊಟ್ಟಿತು. ನಾಥಪಂಥಕ್ಕೆ ಸೇರಿರುವ ಅನೇಕ ಸಮುದಾಯಗಳಿಗೆ ಪಂಥದ ಅರಿವು ಇಲ್ಲವಾಗಿದೆಯೆಂದೂ, ಅವರಿಗೆ ಸೂಕ್ತ ಧಾರ್ಮಿಕ ತಿಳಿವಳಿಕೆ ನೀಡಬೇಕೆಂದೂ, ಏನಾದರೂ ಮಾಡಿ ಬಾರಾಪಂಥದ ಪ್ರಭಾವವನ್ನು ದಕ್ಷಿಣ ಭಾರತದಲ್ಲಿ ಕಾಯಬೇಕೆಂದೂ ಅದು ಕೊಟ್ಟ ಅಪ್ಪಣೆ ಪತ್ರದಲ್ಲಿ ತಿಳಿಸಲಾಗಿತ್ತು. ‘‘ಗೌಡಾ ಸಮಾಜ-ಚುಂಚಣಗಿರಿಮಠ ಶಿಷ್ಯ- ತಥಾಯ ನಾಥಸಂಪ್ರದಾಯ ಶಿಷ್ಯೋಂಕೋ ಉಪದೇಶ ದ್ವಾರಾ ಸನಾತನಧರ್ಮ ಕೇ ಪೂರ್ಣ ಪರಿಚಯ ದೇಂ’’ ಎಂಬ ಅದರ ಒಕ್ಕಣೆಯಲ್ಲಿ, ವಿಶೇಷವಾಗಿ ಒಕ್ಕಲಿಗರನ್ನು ನಮೂದಿಸಲಾಗಿತ್ತು. ಈ ವಿಶೇಷ ಉಲ್ಲೇಖಕ್ಕೆ ಕಾರಣ ತನಗೆ ತಾನೇ ಸ್ಪಷ್ಟವಾಗಿದೆ. ಒಳ್ಳೆಯ ಸಂಘಟಕರಾಗಿದ್ದ ಭೂತೇಶ್ವರನಾಥರಿಗೆ  ಕೆಲಮಟ್ಟಿಗೆ ಭಾವಸಾರ ಕ್ಷತ್ರಿಯರನ್ನು ಸಂಘಟಿಸಲು ಸಾಧ್ಯವಾಯಿತು. ಆದರೆ ಒಕ್ಕಲಿಗರ ವಿಷಯದಲ್ಲಿ ದೊಡ್ಡ ಯಶಸ್ಸು ಸಿಕ್ಕಿದ ಹಾಗೆ ತೋರುವುದಿಲ್ಲ. ಕಾರಣ, ಆ ಹೊತ್ತಿಗೆ ಒಕ್ಕಲಿಗರು ನಾಥಪಂಥದ ನೇರ ಸಂಪರ್ಕ ಕಳೆದುಕೊಂಡು ೩ ದಶಕಗಳಾಗಿದ್ದವು. ಆದರೂ ಒಕ್ಕಲಿಗರ ಬದುಕಿನಲ್ಲಿ ನಾಥಪಂಥೀಯ ಸ್ಮೃತಿಗಳು ಉಳಿದಿವೆ. ಅದಕ್ಕೆ ಕಾರಣ ಅವರನ್ನು ಮರಳಿ ನಾಥಪಂಥಕ್ಕೆ ತರುವ ಭೂತೇಶ್ವರನಾಥರ ಮಿಶನರಿ ಕೆಲಸವಲ್ಲ. ಬದಲಿಗೆ ಜನರ ಬದುಕಿನ ಹಲವಾರು ಆಚರಣೆಗಳಲ್ಲಿ ಅಳವಾಗಿ ಇಂಗಿಹೋಗಿದ್ದ ನಾಥಪಂಥ.

ಈಗಲೂ ಹಾಸನ, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು, ಕೋಲಾರ ಜಿಲ್ಲೆಗಳ ಒಕ್ಕಲಿಗರಲ್ಲಿ ನಾಥಪಂಥದ ಕುರುಹುಗಳು ಉಳಿದಿವೆ. ಕೋಲಾರ ಭಾಗದಲ್ಲಿ ಬೆರಳುಕೊಡುವ ಮೊರಸು ಒಕ್ಕಲಿಗರಿದ್ದು, ಅವರಲ್ಲಿ ಹಿರಿಯ ಮಕ್ಕಳು ಬೆರಳು ಕತ್ತರಿಸಿ ಭೈರವನಿಗೆ ಅರ್ಪಿಸುವ ಪದ್ಧತಿಯಿತ್ತು.[7] ಇದು ಸೀತಿಬೆಟ್ಟದಲ್ಲಿದ್ದ ಕಾಪಾಲಿಕ ಪಂಥದಿಂದ ಬಂದುದು. ಆದರೆ ಉಳಿದ ಭಾಗಗಳಲ್ಲಿ ಇರುವ ಕುರುಹುಗಳು ಚುಂಚನಗಿರಿಯ ನಾಥಪಂಥದಿಂದ ಬಂದವು.  ಚುಂಚನಗಿರಿ ಒಕ್ಕಲಿಗರಲ್ಲಿ ಪರದೇಶಿಗೌಡ ಜೋಗಿಗೌಡ ಎಂಬ ಹೆಸರುಗಳಿವೆ.  ಚುಂಚನಗಿರಿಯ ಒಂದು ಗುಡಿಯಲ್ಲೇ  ‘‘ಜೀರಹಳ್ಳಿ ಅಪ್ಪೇಗೌಡರ ಮಕ್ಕಳು ಪರದೇಶೀಗೌಡರು ಮಾಡಿದ ಸೇವೆ’’ ಮಾಡಿದ  (೧೮೯೬) ಲೇಖವಿದೆ.  ಪರದೇಶಿ ಎನ್ನುವುದು ನಾಥಯೋಗಿ ಗಳಿಗೆ ಜನರಿಟ್ಟಿದ್ದ ಪ್ರೀತಿಯ ಹೆಸರು. ಸಕಲೇಶಪುರ ಮೂಡಿಗೆರೆ ಕಡೆಯ ಶೈವ ಒಕ್ಕಲಿಗರ ಮದುವೆಗಳಲ್ಲಿ ೧೨ ಕಂಬದ ಚಪ್ಪರ ಹಾಕಿಸಿ, ಅದರ ನಡುವೆ ೧೨ ಐರಣೆ ಕುಡಿಕೆಗಳನ್ನಿಟ್ಟು, ಪೂಜಿಸುವ ಪದ್ಧತಿ ಇರುವ ಬಗ್ಗೆ ಮಾಕೋನಹಳ್ಳಿ ದೊಡ್ಡಪ್ಪ ಗೌಡರು ದಾಖಲಿಸುತ್ತಾರೆ. ಅವರ ಪ್ರಕಾರ ಇದು ಬಾರಾಪಂಥಕ್ಕೆ ಸಾಂಕೇತಿಕವಾಗಿ ಸಲ್ಲಿಸುವ ಗೌರವ.[8] ಈ ಭಾಗದ ಒಕ್ಕಲಿಗರಲ್ಲಿ  ಸತ್ತ ವ್ಯಕ್ತಿಯ ತಿಥಿಯದಿನ ಕಿನ್ನರಿ ಜೋಗಿಗಳನ್ನು ಕರೆಸಿ ಕಥೆ ಮಾಡಿಸುವ ಪದ್ಧತಿಯೂ ಇದೆ.  ಶವ ಸಂಸ್ಕಾರದಲ್ಲೂ ನಾಥರ ಆಚರಣೆಗಳಿವೆ. ಶವವನ್ನು  ಯೋಗ ಭಂಗಿಯಲ್ಲಿ ಕುಳಿಯಲ್ಲಿ ಕೂರಿಸಿ, ವಿಭೂತಿ ಉಂಡೆಯಿಟ್ಟು, ಸಮಾಧಿ ಮಾಡಲಾಗುತ್ತದೆ.  ಇದು ನಾಥ ಹಾಗೂ ನಂತರದ ವೀರಶೈವ ಪ್ರಭಾವದ ಪರಿಣಾಮ. ಶೈವ ಒಕ್ಕಲಿಗರ ಮನೆದೈವ ಭೈರವ. ಚುಂಚನಗಿರಿಗಿಂತ ಕೆಲವರಿಗೆ ದೇವರಮನೆ (ಮೂಡಿಗೆರೆ) ಭೈರವ ಪವಿತ್ರ. ಹೀಗಾಗಿ ಶಿವರಾತ್ರಿಯ ಆಚರಣೆಯಲ್ಲೂ ಮಾಂಸಾಹಾರವಿದ್ದು, ಇದು ಬಹುಶಃ ಸಿದ್ಧಭುಕ್ತಿಯ ಬಲವಾದ ಉಳಿಕೆಯಾಗಿದೆ.

ಮೂಡಿಗೆರೆ ಸಕಲೇಶಪುರ ಬೇಲೂರು ಕೊಪ್ಪ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ   ೨೦ಕ್ಕಿಂತ ಹೆಚ್ಚು ಸಿದ್ಧಾಪುರ, ಭೈರಾಪುರ, ಯೋಗಿಹಳ್ಳಿ, ಜೋಗಿಹಳ್ಳಿ, ಜೋಗಿಪುರಗಳಿವೆ. ಇವು ಇಲ್ಲಿದ್ದ ಭೈರವಾರಾಧನೆಯ ಅಸ್ತಿತ್ವವನ್ನು ದೃಢಪಡಿಸುತ್ತವೆ. ಇವು ಚುಂಚನಗಿರಿ ಇಲ್ಲವೆ ವಿಟ್ಲದ ಜೋಗಿಮಠಗಳ ಪಂಥೀಯ ಉಸ್ತುವಾರಿಯ ವ್ಯಾಪ್ತಿಯ ಊರುಗಳು.  ಈ ಭಾಗದ ಒಕ್ಕಲಿಗರು ನಡೆದುಕೊಳ್ಳುವ ನಿರ್ವಾಣಸ್ವಾಮಿ ಮಠ, ಗವಿಕಲ್‌ಮಠ, ಹುಲಿಕೆರೆಮಠ ಇವೆಲ್ಲ  ಭೈರವನಿಗೆ ಅಥವಾ ಸಿದ್ಧರಿಗೆ ಸಂಬಂಧಪಟ್ಟವು. ಇಲ್ಲಿ ಆಸಕ್ತಿಯ ೨ ಸಂಗತಿಗಳಿವೆ. ೧. ಶ್ರೀವೈಷ್ಣವ ಪಂಥದ ಪ್ರಭಾವ ಕೇಂದ್ರಕ್ಕೆ ಹತ್ತಿರವಿದ್ದ ಈ ಒಕ್ಕಲಿಗರು  ನಾಥಪಂಥೀಯ ಶೈವರಾಗಿಯೇ ಉಳಿದಿದ್ದು. ಬಹುಶಃ ಚುಂಚನಗಿರಿ ಹಾಗೂ ವಿಟ್ಲ ಮಠಗಳ ಮೂಲಕ ನಾಥಪಂಥವು ಕೃಷಿಕ ಸಂಸ್ಕೃತಿಯ ಒಕ್ಕಲಿಗರಲ್ಲಿ ಆಳವಾಗಿ ಬೇರು ಬಿಟ್ಟಿದ್ದರಿಂದ ಹೀಗಾಯಿತು ಅನಿಸುತ್ತದೆ.   ಹೊಯ್ಸಳರ ಕಾಲದಲ್ಲಿ ಬೀಸಿದ ಶ್ರೀವೈಷ್ಣವ ಮತದ ಪ್ರಭಾವವನ್ನು  ಈ ಮಠಗಳು ತಡೆದಿರಬಹುದು. ೨. ವೈಷ್ಣವ ಪ್ರಭಾವ ಕೇಂದ್ರ ದಿಂದ ದೂರದಲ್ಲಿದ್ದ ತೀರ್ಥಹಳ್ಳಿ ಕೊಪ್ಪ ಸೀಮೆಯ ಒಕ್ಕಲಿಗರು ಹೆಚ್ಚು ವೈಷ್ಣವರಾಗಿದ್ದು. ಇದಕ್ಕೆ ಶೃಂಗೇರಿ ಮಠದ ಪ್ರಭಾವವೂ ಕಾರಣ ಇರಬಹುದು.  ಆದರೆ ಮಲೆನಾಡಿನ ಒಕ್ಕಲಿಗರಲ್ಲಿ ನಾಥ ಸಂಪ್ರದಾಯದ ಸಂಕೇತಗಳು ಶ್ರೀವೈಷ್ಣವದ ಜತೆ ಸಮನ್ವಯ ಸಾಧಿಸಿ ಕೊಂಡು ಉಳಿದವು. ಈ ಸಮನ್ವಯವು ಚುಂಚನಗಿರಿ ಸೀಮೆಯಲ್ಲಿಯೂ ಸಾಧ್ಯವಾಯಿತು. ಇದಕ್ಕೆ ಇಲ್ಲಿನ ದಾಸಪ್ಪ ಜೋಗಪ್ಪ ಸಂಪ್ರದಾಯವೇ ಸಾಕ್ಷಿ.

ಕುರುಬರು

ಕರ್ನಾಟಕದ ಕುರುಬರು ಪ್ರಧಾನವಾಗಿ ಶೈವರು. ಹಾಲುಮತ ಪುರಾಣದಲ್ಲಿ ಕುರಿಕಾಯುವ ಕೆಲಸಕ್ಕಾಗಿ ಶಿವಪಾರ್ವತಿಯರು ಹೊಸ ಮಾನವರನ್ನು ಸೃಷ್ಟಿಸುತ್ತಾರೆ. ಕುರುಬರಿಗೆ ಬೀರೇಶ್ವರನು ಕೈಲಾಸಕ್ಕೆ ತೆರಳಿದ ಭಾನುವಾರ ಪವಿತ್ರ. ಭೈರವಾರಾಧಕ ನಾಥರಿಗೂ ಈದಿನ ಪವಿತ್ರ. ಕುರುಬರಿಗೂ ಸಿದ್ಧಪಂಥಕ್ಕೂ ಬಿಡಿಸಲಾಗದ ತಂತುಗಳಿವೆ. ಸಿದ್ಧರಾಮ, ರೇವಣಸಿದ್ಧ, ಅಮೋಘಸಿದ್ಧ, ಬೀರಪ್ಪ, ಮಾಳಿಂಗರಾಯ ನಿರ್ವಾಣಸ್ವಾಮಿ ಇವರು ಕುರುಬರ ಸಾಂಸ್ಕೃತಿಕ ನಾಯಕರು. ಮಲ್ಲಣ್ಣಕವಿಯ ಪ್ರಕಾರ, ‘ಮೇಲುಪವನದಲಿ’ ಅಂದರೆ ಯೋಗಸಿದ್ದಿಯಲ್ಲಿ ಕುಳಿತಿರುತ್ತಿದ್ದ ರೇವಣನು ಒಬ್ಬೊದೊಡ್ಡಯೋಗಿ. ಶಾಸನಗಳಲ್ಲಿ ‘ಸಿದ್ಧಕುಲಾನ್ವಯಾರ್ಣವ ಸುಧಾಕರ’ ಎಂದು ಕೀರ್ತಿತನಾಗಿರುವ ಅಮೋಘಸಿದ್ಧನ ಆರಾಧನೆ, ಬಿಜಾಪುರ ಸೊಲ್ಲಾಪುರ ಸೀಮೆಯಲ್ಲಿದೆ.[9] ಬೀರಪ್ಪ ಹಾಗೂ ಮಾಳಿಗಂರಾಯರಿಗೆ ರೇವಣನು ಗುರುಬೋಧ ಕೊಡುತ್ತಾನೆ.  ಅಮೋಘಸಿದ್ಧನು ತಪಗೈದು ಶಿವನಿಂದ ವರವಾಗಿ ಹೋಮಗಂಬಳಿ ಹಾಗೂ ನೇಮಬೆತ್ತ ಪಡೆಯುತ್ತಾನೆ. ನೇಪಾಳದಲ್ಲಿ ಮಚೇಂದ್ರನು ಬರಗಾಲದಲ್ಲಿ ಮಳೆ ತರಿಸಿದ ಕಾರಣದಿಂದ ಫಲವಂತಿಕೆಯ ದೈವವಾದರೆ, ಇಲ್ಲಿ ಅಮೋಘಸಿದ್ಧನು ಬರಗಾಲ ಬಂದಾಗ ತನ್ನ ಕಂಬಳಿ ಬೀಸಿ ಮಳೆತರಿಸುವ ಪವಾಡ ಮಾಡುವ ದೈವವಾಗಿದ್ದಾನೆ. ಅಮೋಘಸಿದ್ಧನ ಮಕ್ಕಳು- ಅವಧೂತಸಿದ್ಧ, ಬಿಳಿಯಾನಿ ಸಿದ್ಧ, ಸೋಮಸಿದ್ಧ. ಅವನೊವರಪುತ್ರರು-ಮಾಸಿದ್ಧ, ಮಲಕಾರಿ ಸಿದ್ಧ. ಮಾಳಿಂಗರಾಯನು ಕಲ್ಯಾಣಕ್ಕೆ ಬಂದಾಗ, ತನ್ನನ್ನು ಅಪಮಾನಿಸಿದವರನ್ನು ಟಗರು ಜೋಗಿಗಳಾಗಲು ಶಾಪ ಕೊಟ್ಟು, ಅವರು ಕುರಿಕಾಯುತ್ತ ಹಾಲುಮತದ ಬಿರುದಾವಳಿ ಮೆರೆಸಿಕೊಂಡಿರುವಂತೆ ಮಾಡುತ್ತಾನೆ. ಜಡೆಸಿದ್ಧನನ್ನು ಕೊಣನೂರಿನ (ಜಮಖಂಡಿ) ಕರಿಸಿದ್ಧೇಶ್ವರ ಜಾತ್ರೆಯಲ್ಲಿ  ಬೆಂಕಿಪವಾಡ ಮಾಡಿ ಸೋಲಿಸುತ್ತಾನೆ. ಕುರುಬರಲ್ಲಿ ಸಿದ್ಧಕುಲ ಎಂಬ ಪಂಗಡವಿದೆ. ರೇವಣನು ಕೊಲ್ಲಾಪುರದಲ್ಲಿ ಸಿದ್ಧರನ್ನು ಸೋಲಿಸಿ ಅವರನ್ನು ನರಗುರಿ ಮಾಡಿ, ಅವರ ಕೂದಲಿನಿಂದ ಕಂಬಳಿಯನ್ನೂ ಅವರ ಚರ್ಮದಿಂದ ಚಪ್ಪಲಿಯನ್ನೂ ಮಾಡುತ್ತಾನೆ. ಸಿದ್ಧರು ಪರಸ್ಪರ ಸಂಘರ್ಷ ಮಾಡುವ ಈ ಕಥನಗಳನ್ನು ಚಾರಿತ್ರಿಕವಾಗಿ ಅರ್ಥೈಸುವ ಸಮಸ್ಯೆಯಿನ್ನೂ ಉಳಿದಿದೆ. ಜೋಗಿಗಳನ್ನು ಬಿಟ್ಟರೆ ವಿಶಾಲ ಸಿದ್ಧಪಂಥಕ್ಕೆ ನಿಕಟವಾದ ಸಂಗವುಳ್ಳವರೆಂದರೆ ಕುರುಬರೇ.

ಆದರೆ  ಕುರುಬರಲ್ಲಿ ಇರುವ ಸಿದ್ಧಸಂಪ್ರದಾಯವು ನಾಥವಲ್ಲ. ಲುಂಕೆಮಲೆಗೆ ತೀರ ಹತ್ತಿರವಿರುವ ಕಾಡುಸಿದ್ಧಾಪುರದ (ಮೊಳಕಾಲ್ಮೂರು) ಕಾಡುಕುರುಬರ ಸಿದ್ಧ ಸಂಪ್ರದಾಯವನ್ನು ಕಂಡರೂ ಇದು ತಿಳಿಯುವುದು. ಇಲ್ಲಿ ಸಿದ್ಧೇಶ್ವರನ ಗದ್ದುಗೆಯಿದೆ. ಊರತುಂಬ ಸಿದ್ಧಪ್ಪ ಸಿದ್ಧಮ್ಮ ಹೆಸರಿನವರು ಇದ್ದಾರೆ. ಈ  ಗದ್ದುಗೆಯು ಒಂದು ಗುಹೆಯಲ್ಲಿದೆ. ಅದರೊಳಗೆ ತ್ರಿಶೂಲವಿದೆ. ಡೊಳ್ಳಿದೆ. ಆದರೆ ತ್ರಿಶೂಲ ಬಿಟ್ಟರೆ ನಾಥರ ಯಾವ ಚಿಹ್ನೆಗಳೂ ಇಲ್ಲಿಲ್ಲ.ಇವರು ಲುಂಕೆಮಲೆಗೆ ನಡೆದುಕೊಳ್ಳುವುದಿಲ್ಲ.  ಕಾಡು ಕುರುಬರು ಸುಡುಗಾಡ ಸಿದ್ಧರನ್ನು ತಮ್ಮ ದಾಯಾದಿಗಳು ಎಂದು ಕರೆಯುತ್ತಾರೆ. ಕುರುಬರ ಒಳಪಂಗಡಗಳಲ್ಲಿ  ಸುಡುಗಾಡಸಿದ್ಧವೂ ಒಂದು.  ರೇವಣಸಿದ್ಧನು ಕೊಲ್ಲಾಪುರದಲ್ಲಿ ಗೋರಖನ ಜತೆ ಸಂಘರ್ಷ ಮಾಡುವ ಕಥನಗಳನ್ನು ಇಲ್ಲಿ ನೆನೆಯಬಹುದು.

ನಾಥರಿಗೂ ರೇವಣಸಿದ್ಧನಿಗೂ ನಿಜವಾಗಿ ಸಂಘರ್ಷವಿತ್ತೇ ಅಥವಾ ಈ ಸಂಘರ್ಷದ ಕಥನಗಳು ನಂತರದ ಕಾಲಘಟ್ಟದಲ್ಲಿ ಮೂಡಿದವೇ ಎಂಬುದನ್ನು ಕೂಡ ಶೋಧಿಸಬೇಕಿದೆ.  ಇಷ್ಟರ ಮೇಲೂ ಕುರುಬರಿಗದ್ದ  ನಾಥರ ಸಂಬಂಧದ ಮೂರು ಕೊಂಡಿಗಳೆಂದರೆ ೧. ರೇವಣಸಿದ್ಧನು ನಾಥರ ಚೌರಾಸಿ ಸಿದ್ಧರಲ್ಲಿ ಒಬ್ಬನಾಗಿ ಬರುವುದು. ೨. ‘ಹಾಲುಮತ ಮಹಾಕಾವ್ಯ’ದಲ್ಲಿ ಕುರುಬರ ಸಾಂಸ್ಕೃತಿಕ ನಾಯಕರಲ್ಲಿ ಒಬ್ಬನಾದ ಬಿಲ್ಲಾಳ ಶಾಮರಾಯನು, ಗೋರಖನಾಥನಿಂದ ಬಾವನ್ನ ವಿದ್ಯೆಗಳನ್ನು ಕಲಿಯುವ ಪ್ರಸಂಗ. ೩. ಭೈರವ ಹಾಗೂ ಬೀರಪ್ಪರ ನಡುವಣ ಸಾಮ್ಯಗಳು. ಕುರುಬರ ಕ್ಷೇತ್ರಗಳಾದ ಮೈಲಾರ ಹಾಗೂ ದೇವರಗುಡ್ಡಗಳಲ್ಲಿ ಬೀರಪ್ಪನೂ ಭೈರವನೂ ಏಕೀಭವಿಸಿರುವುದನ್ನು ಈಗಲೂ ಕಾಣಬಹುದು. ಶಂಬಾ ಈ ಬಗ್ಗೆ ಹೀಗೆ ವಿಶ್ಲೇಷಿಸುತ್ತಾರೆ:

ಕಂನಾಡಿನಲ್ಲಿ ಅನೇಕ ಊರುಗಳು ಮೇಲ್ಕಾಣಿಸಿದ ಸಿದ್ಧಪುರುಷರ ಪ್ರಭಾವದ ಸೂಚಕವಾಗಿವೆ. ಕುರುವರಿಂದ ಭಾರತ ಸಂಸ್ಕೃತಿಗೆ ಇನ್ನೊಂದು ದೇವತೆಯ ಕಾಣಿಕೆ ದೊರೆತಿದೆಯೆಂದು ನನ್ನ ಗ್ರಹಿಕೆ. ಕುರುವರು ವೀರಶಿವನ ಭಕ್ತರು. ಇವರು ವೀರ ‘ನಾಯಕರು’. ಆದ ಕಾರಣ ಬೀರನಲ್ಲಿ ಭಕ್ತಿ. ಈ ಬೀರನೆ ಮತ್ತೆ ಸಂಸ್ಕೃತ ರೂಪತಾಳಿ ಭೈರವೇಶ್ವರನಾಗಿರಬೇಕೆಂದು ನನ್ನ ಊಹೆ. ಭೈರವನು ಕ್ಷೇತ್ರಪಾಲಕ ದೇವತೆಯಂತೆ; ಸರಿ. ಇವನು ಊರ ಕಾವಲುಗಾರ. ಆದುದರಿಂದಲೆ, ಊರ ಹಳಬ-ಕುರುಬ.[10]

ಈ ಚಾರಿತ್ರಿಕ ಸ್ಮೃತಿಗಳು ವಾಸ್ತವಕ್ಕೆ ಬಂದಂತೆ,  ಈ ಬಾರಿ ಕದ್ರಿಯ ಜೋಗಿಮಠಕ್ಕೆ ಅರಸನಾಗಿ ಕುರುಬ ಸಮುದಾಯದಿಂದ ಒಬ್ಬ ನಾಥ ಬಂದಿರುವರು. ಸಂಧ್ಯಾನಾಥರು ರಾಜಸ್ಥಾನದ ರೇಬಾರಿ ಎಂಬ ಪಶುಪಾಲಕ ಸಮುದಾಯದವರು. ಪಟ್ಟಾಭಿಷೇಕ ಮಾಡುವಾಗ ಅವರಿಗೆ  ಕುರಿದಾರದಿಂದ ಕೂಡಿದ ತಲೆಯುಡಿಯನ್ನು ತೊಡಿಸಲಾಗಿತ್ತು. ನಾಥರು ಪೂಜಿಸುವ ಪಾತ್ರದೇವತೆಯ ಕಂಠಕ್ಕೂ ಕುರಿದಾರ ಸುತ್ತಲಾಗಿತ್ತು. ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿಯು  ‘ಕುರುಬದಾರ’ ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲ ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಈಗಲೂ ಕಾಶಿಯಲ್ಲಿ ಕಪಾಲಮೋಚನ ತೀರ್ಥದಲ್ಲಿ ಮೈದೊಳೆದು ಕಪ್ಪನೆಯ ಕಾಶೀದಾರ ತರುವ ಸಂಪ್ರದಾಯವಿದೆ. ಇದು ನಾಥರ ಶೈಲಿಯ ಅವಶೇಷ ರೂಪ. ಉಣ್ಣೆದಾರವು ಪಶುಪಾಲಕರ ಜತೆ ನಾಥರನ್ನು ಬಗೆಬಗೆಯಾಗಿ ಕಟ್ಟಿಹಾಕಿದೆ. ನಾಥರು ತಮ್ಮ ಬಿಡುವಿನ ವೇಳೆಯಲ್ಲಿ ತಕಲಿ ಉಣ್ಣೆ ಹಿಡಿದು ದಾರವನ್ನು ನೂಲುತ್ತಿರುತ್ತಾರೆ. ಉಣ್ಣೆಯು ಚಳಿ ತಡೆಯಲು ಒಗೆಯಲು ಅನುಕೂಲವಾದ ವಸ್ತು ವಾಗಿರಬೇಕು. ಕಾಲಾಕಂಬಲಿವಾಲಾ ಎಂಬ ಹೆಸರಿನ ನಾಥರು ಇದ್ದಾರೆ; ಸೂಫಿಗಳಲ್ಲಿ ಕೂಡ ಉಣ್ಣೆಯ ಗುದಡಿ ಧಾರಣೆ ಮುಖ್ಯವಾದುದು. ಸೂಫ್ ಎಂದು ಉಣ್ಣೆ ಎಂದರ್ಥ.  ನಗ್ನತೆ ಅವಧೂತರ ಒಂದು ಲಕ್ಷಣ. ಕೇಶಾಂಬರ ಎಂಬುದಕ್ಕೆ ನಗ್ನವಾಗಿರುವುದು ಎಂದರ್ಥವೂ ಇದೆ. ಅಕ್ಕಮಹಾದೇವಿ ಕದಳಿಗೆ ಕೇಶಾಂಬರೆಯಾಗಿ ಹೋಗುವ ಮಿತ್ ಅನ್ನು ಇಲ್ಲಿ ನೆನೆಯಬೇಕು.

ಗೋರಖನು ಹಾಗೂ ರೇವಣನು ಕೊಲ್ಲಾಪುರದಲ್ಲಿ ಸಂಘರ್ಷ ಮಾಡಿದ ಕಥನಕ್ಕೆ ತಿದ್ದುಪಡಿ ಮಾಡುವಂತೆ, ಭಿನ್ನವಾದ ಕಥನವು ಚುಂಚನಗಿರಿ ಸೀಮೆಯಲ್ಲಿ ಹುಟ್ಟಿಕೊಂಡಿತು. ಇಲ್ಲಿ ಭೈರವನು ಕುರುಬರ ಮಾಳವ್ವನನ್ನು ಪ್ರೇಮಿಸಿ ಹೊಸ ನಂಟುತನವನ್ನು ಉದ್ಘಾಟಿಸು ತ್ತಾನೆ. ಭೈರವನಿಗೂ ಮೊದಲ ಮಡದಿ ಮಾಳವ್ವೆಗೂ ನಡೆಯುವ ವಾಗ್ವಾದವಿದು.

ಕುರಿಯ ಕಾಯಬೇಡಿ ಮರಿಗ್ಹುಲ್ಲ ತರಬೇಡಿ; ಕರಿಯ ಕಂಬಳಿ ನೇಯಬೇಡಿ ಭೈರುವ

ನೀವು ಕುರುಬರ ಮಾಳಿಯ ತರಬೇಡಿ|

ಕುರಿಯ ಕಾಯ್ದೇನು ಮರಿಗ್ಹುಲ್ಲ ತಂದೇನು; ಕರಿಯ ಕಂಬಳಿ ನೇಯ್ದೇನು ಪಾರ್ವತಿ

ನಾನು ಕುರುಬರ ಮಾಳಿಯ ಬಿಡಲಾರೆ |

ಕುರುಬತಿ ತರುವುದಕೆ ಕುರಿಯ ತಿಂಗಳ ಕಾದ; ಹಂಪೇಲಿ ಹಾಲು ಕರೆದುಂಡ ಭೈರುವ

ಮೆಚ್ಚಿ ತಂದಾನೆ ಮಾಳವ್ನ| (ಶ್ರೀಆದಿಚುಂಚನಗಿರಿ)

ಈ ಪ್ರೇಮ ಸಂಬಂಧಗಳು ಒಕ್ಕಲಿಗ ಹಾಗೂ ಕುರುಬ ಸಮುದಾಯಗಳ ಸಾಮಾಜಿಕ ಸಹಬಾಳುವೆಯಲ್ಲಿ ಹುಟ್ಟಿದಂತಿವೆ ಅಥವಾ ಏಕಕಾಲಕ್ಕೆ ರೈತಾಪಿ ಹಾಗೂ ಪಶುಪಾಲಕ ಸಮುದಾಯಗಳ ಜತೆ ನಾಥಪಂಥವು ಪಡೆದ ಸಂಪರ್ಕದಿಂದ ಹುಟ್ಟಿದಂತಿವೆ. ಸಿದ್ಧರು ಮತ್ತು ಯತಿಗಳು ತಾತ್ವಿಕ ಕಾರಣಕ್ಕಾಗಿ ಸಂಘರ್ಷ ಮಾಡಿದರೆ, ಸಮುದಾಯಗಳು ಪ್ರೀತಿಪ್ರೇಮದ ಜಾತ್ಯತೀತ ಕಥನಗಳನ್ನು ಕಟ್ಟುತ್ತವೆ ಎನ್ನುವುದು ಮಾರ್ಮಿಕವಾಗಿದೆ.

ಲಿಂಗಾಯತರು

೧೨ನೇ ಶತಮಾನದ ಶರಣರು ಕಾಪಾಲಿಕರನ್ನೂ ನಾಥಪಂಥವನ್ನೂ ಭೈರವಾರಾಧನೆಯನ್ನೂ ಶಾಕ್ತಾಚರಣೆಗಳನ್ನೂ ಕಟುವಾಗಿ ಟೀಕಿಸುತ್ತಾರಷ್ಟೆ. ಈ ಟೀಕೆಗಳು  ಒಂದು ಬಗೆಯಲ್ಲಿ ನಾಥ ಕಾಪಾಲಿಕರ ಮೇಲೆ ವಿಧಿಸಲಾದ ಸಾಮಾಜಿಕ ಬಹಿಷ್ಕಾರಗಳ ಹಾಗೆ ಕಾಣುತ್ತವೆ. ‘ಭೈರವನಾರಾಧಿಸಿ ಬಾಹಿರರಾದಿರಿ’ ಎಂಬಲ್ಲಿ ಬಾಹಿರರಾಗುವ ಕ್ರಿಯೆಯು ಮಾರ್ಮಿಕವಾಗಿದೆ. ಹೀಗಾಗಿ  ಕಾಪಾಲಿಕರು ಹಾಗೂ ನಾಥರು ಶರಣತತ್ವವನ್ನು ಮನಸಾ ಒಪ್ಪಿಯೊ ಅಥವಾ ಸಂಘರ್ಷ ಎದುರಿಸಲಾರದೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲೆಂದೊ ಲಿಂಗದೀಕ್ಷೆ ಪಡೆದಂತೆ ತೋರುತ್ತದೆ. ಒಟ್ಟಿನಲ್ಲಿ ಕರ್ನಾಟಕದ ಮಟ್ಟಿಗೆ ನಾಥರ ಪ್ರಭಾವ ಕಡಿಮೆಯಾಗಿರಲು ಶರಣರು ಒಂದು ಕಾರಣ. ಆದರೂ ಲಿಂಗಾಯತರಲ್ಲಿ ನಾಲ್ಕು ಕಾರಣಗಳಿಂದ ನಾಥಸಂಬಂಧವು ಮುಂದುವರೆಯಿತು.

೧. ೧೨ನೇ ಶತಮಾನದ ನಂತರ ಕೆಲವರು ವ್ಯೆಯಕ್ತಿಕವಾಗಿ ನಾಥಪಂಥದ ಪ್ರಭಾವಕ್ಕೆ ಬಂದರು. ವಡಬಾಳದ ನಾಗನಾಥ ಅಥವಾ ನಾಗೇಶಿಯು ಮರಾಠಿ ನಾಥಪಂಥಕ್ಕೆ ಸೇರಿದವನು. ಅವನ ಸಮಾಧಿಯನ್ನು ಈಗಲೂ ಲಿಂಗಾಯತರೇ ನೋಡಿಕೊಳ್ಳುತ್ತಾರೆ. ಕಪಟರಾಳ ಕೃಷ್ಣರಾಯರು  ನಾಗನಾಥನನ್ನು ‘ನಾಥ-ಲಿಂಗಾಯತ’  ಎಂದೇ ಕರೆಯುತ್ತಾರೆ.[11] ಕಿತ್ತೂರು ಹಂಡಿಬಡಗನಾಥ ಬೆಳಗಾವಿ ಖಾನಾಪುರಗಳಲ್ಲಿ ನಾಥಮಠಗಳಿದ್ದ ಕಾರಣ, ಕಾಲಕಾಲಕ್ಕೆ ಅನೇಕ ಲಿಂಗಾಯತರು ೨೦ನೇ ಶತಮಾನದಲ್ಲಿ ನಾಥದೀಕ್ಷೆ ಪಡೆದರು. ವಿಟ್ಲಮಠಕ್ಕೆ ಅಧಿಪತಿಯಾಗಿದ್ದ ಈಶ್ವರನಾಥರು ಧಾರವಾಡ ಭಾಗದ ಲಿಂಗಾಯತರು.

೨. ಸ್ಥಳೀಯವಾಗಿ ಆಯಾ ಭಾಗದ ದೈವಗಳ ಆರಾಧಕರಾಗಿ ಲಿಂಗಾಯತರು ನಾಥಪಂಥೀಯ ಆಚರಣೆಗಳನ್ನು ರೂಢಿಸಿಕೊಂಡರು. ಹಂಡಿಬಡಗ ಮಠಕ್ಕೆ ಧಾರವಾಡ ಬೆಳಗಾವಿ ಭಾಗದ ಲಿಂಗಾಯತರು ಬಹುಸಂಖ್ಯೆಯಲ್ಲಿ ಹೋಗುತ್ತಾರೆ. ಮಣಕತ್ತೂರಿನ (ಅರಸೀಕೆರೆ) ಲಿಂಗಾಯತರು ಭೈರವಾರಾಧಕರು.  ಇಲ್ಲಿನ ಭೈರವನಿಗೆ ರುಂಡಮಾಲೆ ಬದಲು ಲಿಂಗಮಾಲೆಯಿದೆ. ಸೊಂಡೇಕೊಳದಲ್ಲಿ ಭೈರವನಿಗೆ ದೊಡ್ಡ ಕರಡಿಗೆಯನ್ನು ಹಾಕಲಾಗಿದೆ. ಇದು ಭೈರವಾರಾಧನೆಯ ಲಿಂಗಾಯತೀಕರಣ. ಸೊಂಡೇಕೊಳ ಗೊಡಬನಾಳ ನಂದಿಪುರಗಳಲ್ಲಿ (ಚಿತ್ರದುರ್ಗ) ಲಿಂಗಾಯತರು ಕಾಪಾಲಿಕರಿಂದ ಜೋಗಿದೀಕ್ಷೆ ಪಡೆದಿರುವ ನಿದರ್ಶನಗಳಿವೆ.  ಅವರಿಗೆ ಜನ ಜೋಗಪ್ಪನ ಮನೆಯವರು ಎಂದು ಗುರುತಿಸುತ್ತಾರೆ. ಲುಂಕೆಮಲೆಯಲ್ಲಿ ಭೈರವನ ಪೂಜೆಯ ಹಕ್ಕು ಪೂಜಾರಹಟ್ಟಿಯ ಲಿಂಗಾಯತರ ವಶದಲ್ಲಿದೆ.  ಮ್ಯಾಸಬೇಡರ ದಟ್ಟ ಪರಿಸರದಲ್ಲಿ ದ್ವೀಪದಂತೆ ಉಳಿದಿರುವ ಪೂಜಾರಹಟ್ಟಿಯು ಲುಂಕೆಮಲೆಯ ತಪ್ಪಲಿನಲ್ಲಿದೆ. ಭೈರವನಿಗೆ ಪೂಜಿಸುವ ಕುಟುಂಬಗಳೇ ನೆಲೆಸಿ ಈ ಹಟ್ಟಿ ರೂಪುಗೊಂಡಂತಿದೆ. ಲುಂಕೆಮಲೆ ಸಿದ್ಧಪ್ಪನ ಜಾತ್ರೆಯನ್ನು ಅವರಿಲ್ಲದೆ ಕಲ್ಪಿಸಿಕೊಳ್ಳುವಂತಿಲ್ಲ. ತಮ್ಮ ಶುಭಕಾರ್ಯಗಳಿಗೆ ಅವರು ನಾಥರನ್ನು ಕರೆಸುತ್ತಾರೆ. ನಾನು ಭೇಟಿಮಾಡಿದ ಒಂದು ಮನೆಯಲ್ಲಿ ಝುಂಡಿಗೆ ಬಂದಿದ್ದ ನಾಥರನ್ನು ಮದುವೆಗೆ ಕರೆಸಿ ಗೌರವಿಸುತ್ತಿರುವ  ಫೋಟೊಗಳು ಇದ್ದವು.

೩. ಕೆಲವೊಮ್ಮೆ ನಿರ್ದಿಷ್ಟ ಸಮುದಾಯವೇ ನಾಥಪ್ರಭಾವಕ್ಕೆ ಬಂದಿರುವ ಸಾಧ್ಯತೆಯಿದೆ. ಗುಲಬರ್ಗ ಹಾಗೂ ಆಳಂದ ತಾಲೂಕುಗಳಲ್ಲಿ ಮುಲ್ಲಾಮಾರಿ ನದಿಯ ಆಸುಪಾಸಿನ ಹಳ್ಳಿಗಳಲ್ಲಿರುವೊಆದಿಬಣಜಿಗ ಸಮುದಾಯ ಇಂತಹುದು. ಹೆಸರಲ್ಲಿ ಬಣಜಿಗ ಎಂದಿದ್ದರೂ ಹೆಚ್ಚಾಗಿ ಕೃಷಿಮಾಡುವ ಇವರು ಬಸವಣ್ಣನನ್ನು ಒಪ್ಪುವುದಿಲ್ಲ. ಬಸವಣ್ಣನನ್ನು ಒಪ್ಪುವ  ಲಿಂಗಾಯತರನ್ನು ಇವರು ದೀಕ್ಷಿ ಲಿಂಗಾಯತರು ಎನ್ನುತ್ತಾರೆ. ದೀಕ್ಷಿ ಲಿಂಗಾಯತರಿಗೆ ಹೋಲಿಸಿದರೆ, ಸಾಮಾಜಿಕವಾಗಿ ಇವರ ಅಂತಸ್ತು ಕಡಿಮೆ. ಬಡತನವೂ ಹೆಚ್ಚು.  ಇವರಲ್ಲಿ ಇಷ್ಟಲಿಂಗ ಧರಿಸುವುದು ಮುಖ್ಯವಲ್ಲ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಶಿಂಗಣಾಪುರದ (ಸಿಂಗನಾದಪುರ?) ಬೆಟ್ಟದಲ್ಲಿರುವ ಮಹದೇವ ಗುಡಿಗೆ ನಡೆದುಕೊಳ್ಳುವುದು ಮುಖ್ಯ. ಶಿಂಗಣಾಪುರವು ಶ್ರೀಶೈಲ ಪರಂಪರೆಯ ಗುಡಿ. ಇವರಲ್ಲಿ ಮಚೇಂದ್ರನಾಥ, ನವನಾಥ, ಗೋರಖನಾಥ ಎಂಬ ಹೆಸರುಗಳಿವೆ. ಆದಿಬಣಜಿಗರ ಶುಭ ಕಾರ್ಯಗಳಲ್ಲಿ ತ್ರಿಶೂಲ ಮೆರವಣಿಗೆ ಮಾಡುವ ಪದ್ಧತಿಯಿದೆ. ಇವರು ಮೂಲದಲ್ಲಿ ಕಾಪಾಲಿಕರೊ ನಾಥರೊ ಆಗಿದ್ದಿರಬಹುದು. ಈ ಬಗ್ಗೆ ಇನ್ನಷ್ಟು ಶೋಧ ಮಾಡುವ ಅಗತ್ಯವಿದೆ.

೪. ಕಾಪಾಲಿಕ ಭೈರವಾರಾಧಕರು ಲಿಂಗದೀಕ್ಷೆ ಪಡೆದು ಸಾಂಕೇತಿಕವಾಗಿ ಇಲ್ಲವೇ ಗುಪ್ತವಾಗಿ ಭೈರವಾರಾಧನೆ ಉಳಿಸಿಕೊಂಡಿರುವ ಸಾಧ್ಯತೆಗಳಿವೆ. ಮಲೆನಾಡಿನ ನಾಥಪಂಥೀಯ ಶೈವರು, ತಮ್ಮ ಲಗ್ನ ಸಾವು ಗೃಹಪ್ರವೇಶ ಇತ್ಯಾದಿ ಸನ್ನಿವೇಶಗಳಲ್ಲಿ  ಜಂಗಮರನ್ನು ಕರೆಯಿಸುವ ಸಂಪ್ರದಾಯವಿದೆ.  ಈ ಸಂಪ್ರದಾಯವು  ಶೈವ ಒಕ್ಕಲಿಗರಿಗೆ ವೀರಶೈವ ಧರ್ಮದ ಸಂಸರ್ಗ ಒದಗಿದ ಮೇಲೆ ಬಂದಿರಬೇಕು ಎಂಬ  ಊಹೆಯಿದೆ.[12] ಆದರೆ ಇದು ನಾಥಪಂಥೀಯ ಕಾಪಾಲಿಕರ ಜಾಗವನ್ನು ಜಂಗಮರು ಆಕ್ರಮಿಸಿದ ಪರಿಣಾಮವೂ ಇರಬಹುದು. ಕೊಡಗಿನಲ್ಲಿ ಬಹುಕಾಲ ಲಿಂಗಾಯತ ಮೂಲದ ದೊರೆಗಳು ಆಳುವಾಗ, ಜಂಗಮರು ಆ ಭಾಗದಲ್ಲಿ ಹೋಗಿ ನೆಲೆಸಿದ್ದರು. ಶಿವರಾತ್ರಿಯಲ್ಲಿ ನಡೆಯುವ ನಾಥ ಪಂಥೀಯ ಆಚರಣೆಗಳು ಲಿಂಗಾಯತರನ್ನು ಒಳಗೊಳ್ಳುತ್ತವೆ. ವೀರಭದ್ರನ ಆರಾಧನೆಯು ಭೈರವಾರಾಧನೆಯೊಂದಿಗೆ ಸೇರಿಹೋಗುತ್ತದೆ. ಪ್ರತಿಮಾ ದೃಷ್ಟಿಯಿಂದ ಎರಡೂ ಮೂರ್ತಿಗಳಲ್ಲಿ  ಸಾಮ್ಯವೂ ಇದೆ. ಶರಣರು ನಾಥರನ್ನು ಎಷ್ಟೇ ಟೀಕೆ ಮಾಡಿದರೂ ಶೈವದ ಈ ಎರಡೂ ವಾಹಿನಿಗಳು ಕೂಡಿ ಹರಿವಂತೆ ಜನ ಸಮುದಾಯಗಳು ಬದುಕುತ್ತಾ ಹೋದವು.

ಮೀನುಗಾರರು

ಭಾರತದ ತುಂಬ ಬೆಸ್ತರಿಗೂ ನಾಥಪಂಥಕ್ಕೂ ಸಂಬಂಧಗಳಿವೆ. ಇದಕ್ಕೆ  ಕಾರಣ ಮಚೇಂದ್ರ. ಮಚೇಂದ್ರನು ಮೀನಿನ ಹೊಟ್ಟೆಯಲ್ಲಿ ಹುಟ್ಟಿದ ಪುರಾಣಕಥೆಯ ಸಾಮಾಜಿಕ ಅರ್ಥದ ಪ್ರಕಾರ, ಅವನೊಬ್ಬ ಬೆಸ್ತರ ಮನೆಯವನು.  ಶಿವನ ಮಡದಿ ಗಂಗೆಯ ಮಕ್ಕಳಾದ ಬೆಸ್ತರು, ಶಿವನಿಗೂ ಮಕ್ಕಳು. ಹೀಗಾಗಿ ಅವರಿಗೆ ಶಿವನ ಶಿಷ್ಯನಾದ ಮಚೇಂದ್ರ ಸಾಂಸ್ಕೃತಿಕ ನಾಯಕನಾಗುವುದು ಸಮಸ್ಯೆಯಲ್ಲ. ನಾಥರಲ್ಲಿ  ಮಚೇಂದ್ರನಲ್ಲದೆ, ಮೀನನಾಥ ಎಂಬ ಯೋಗಿಯೂ ಇದ್ದಾನೆ. ಅನಿಮಿಷನಾಥನೂ ಮೀನಿನ ಸಂಕೇತದವನೇ. ಕರ್ನಾಟಕದ ಬೆಸ್ತರಾದ ತೊರೇರು ಗಂಗಾಮತಸ್ಥರು ಹಾಗೂ ಕಬ್ಬಲಿಗರಿಗೆ  ನಾಥಪಂಥದ ಸಂಬಂಧ ಏರ್ಪಟ್ಟಿಲ್ಲ. ಆದರೆ  ಗುಲಬರ್ಗ, ಹಂಪಿ ಹಾಗೂ ಕರಾವಳಿಯ ಮೀನುಗಾರರಿಗೆ ನಾಥಪಂಥದ ಸಂಬಂಧವಾಗಿದೆ.

ದಕ್ಷಿಣ ಕನ್ನಡದ ಮೊಗವೀರರು, ಶ್ರಾವಣ ಹುಣ್ಣಿಮೆ ದಿನ, ಮಂಗಳೂರಿನ ಬೋಳೂರು ಕಡಲ ಕಿನಾರೆಯಲ್ಲಿ ಕದ್ರಿಮಠದ ನಾಥನಿಂದ ಸಮುದ್ರಪೂಜೆ ಮಾಡಿಸುತ್ತಾರೆ.  ತೆಂಗಿನಕಾಯನ್ನೂ  ಹಾಲನ್ನೂ ಕಡಲಿಗೆ ಅರ್ಪಿಸುವ ಆಚರಣೆಯಿದು. ಮಚೇಂದ್ರನ ಮೂರ್ತಿಗಳು ಕದ್ರಿಯ ಮಂಜುನಾಥ ಗುಡಿಯಲ್ಲಿ, ಜೋಗಿಮಠದಲ್ಲಿ ಹಾಗೂ ಮಂಗಳೂರಿನ ಸರ್ಕಾರಿ ಮ್ಯೂಸಿಯಮ್ಮಿನಲ್ಲಿ ಇವೆ.  ಕದ್ರಿ ಜಾತ್ರೆಯಲ್ಲಿ ಮೊಗವೀರರು ಧ್ವಜಕಂಬ ನಿಲ್ಲಿಸುವ ಸೇವೆ ಮಾಡುತ್ತಾರೆ. ಹಿಂದೆ ಕದ್ರಿಮಠದಲ್ಲಿ ರೋಟ್ ಪ್ರಸಾದವನ್ನು ಮಚೇಂದ್ರನ ಸ್ಮರಣೆಗಾಗಿ ನವನಾಥರ ಕೆರೆಗಳಲ್ಲಿರುವ ಮೀನುಗಳಿಗೆ ಹಾಕುವ ಆಚರಣೆ ಯಿತ್ತೆಂದು ತಿಳಿಯುತ್ತದೆ. ಇವೆಲ್ಲ ಆಚರಣೆಗಳು ನಾಥಮಠದ ಜತೆಗೆ ಬೆಸ್ತರನ್ನು  ಬೆಸೆದಿವೆ.

ಹಂಪಿಯ ಬೆಸ್ತರಲ್ಲೂ ಮಚೇಂದ್ರನ ಆರಾಧನೆ ಇದ್ದಂತೆ ಕಾಣುತ್ತದೆ. ಹಂಪಿಯಲ್ಲಿ  ಜನ ಹಾಗೂ ಸೈನಿಕರನ್ನು ನದಿ ದಾಟಿಸಲು ದೋಣಿಕಾರರಾಗಿಯೂ ಮೀನುಗಾರರಾಗಿಯೂ ಕೆಲಸ ಮಾಡಿರುವ  ಬೆಸ್ತರು ವಿಜಯನಗರ ಕಾಲದಿಂದ ಇದ್ದಾರೆ. ತುಂಗಭದ್ರಾ ನದಿಯ ಆನೆಗುಂದಿ ದಡದಲ್ಲಿ ಹುಟ್ಟನ್ನು ಹೆಗಲಮೇಲಿಟ್ಟು ನಿಂತ ಬೆಸ್ತರ ವೀರಗಲ್ಲುಗಳಿವೆ. ಹಂಪಿಗೆ ನಾಥರೂ ಬಂದು ಹೋಗುತ್ತಿದ್ದರು. ಚಿಂತಕರಾದ ನೀಲಗಂಗಯ್ಯ ಪೂಜಾರರ ಜತೆ ಚರ್ಚೆ ಮಾಡುವಾಗ, ವಿಜಯನಗರದಲ್ಲಿದ್ದ ಮಾಧವಾಚಾರ್ಯನ ತಮ್ಮ ಭೋಗನಾಥನು ನಾಥಪಂಥದವನಾಗಿದ್ದನು ಎಂದು ತಿಳಿಸಿದರು. ಹಂಪಿಯ ವಿರೂಪಾಕ್ಷ ಗುಡಿಯ ಗೋಡೆಯಲ್ಲಿ ಮೀನಾರೂಢ ಯೋಗಿಯ ಶಿಲ್ಪವಿದೆ.  ಹಂಪಿ ಪರಿಸರದ ಮಂಟಪ ಹಾಗೂ ಗುಡಿಯ ಕಂಬಗಳಲ್ಲಿ, ಹೆಚ್ಚಾಗಿ ಸಾಸಿವೆಕಾಳು ಗಣಪತಿ ಗುಡಿಯ ಕಂಬಗಳಲ್ಲಿ, ಯೋಗ ಭಂಗಿಯಲ್ಲಿ ಮೀನಿನ ಮೇಲೆ ಕುಳಿತ ಯತಿಶಿಲ್ಪಗಳಿವೆ. ಇವು ವಿಷ್ಣುವಿನ ಮೀನಾವತಾರಗಳಲ್ಲ. ಮಚೇಂದ್ರನವು. ಇಲ್ಲಿನ ಬೆಸ್ತರು ನಾಥಪಂಥಿ ಆಗಿದ್ದರು ಎನ್ನುವುದಕ್ಕಿಂತ ಮಚೇಂದ್ರನ ಆರಾಧಕರಾಗಿದ್ದರು ಎನ್ನುವುದು ಸರಿಯಾದೀತು. ಗುಲಬರ್ಗ ಸೀಮೆಯಲ್ಲಿ ಮಚೇಂದ್ರ ಬೋವಿ ಎಂಬ ಸಮುದಾಯವಿದೆ. ಬೋಯಿಗಳು ನಿಜಾಮ್ ಪ್ರಾಂತ್ಯದ ಜಾತಿಪಟ್ಟಿಯ ಪ್ರಕಾರ, ಮೀನುಗಾರ ಹಾಗೂ ದೋಣಿಕಾರ ಸಮುದಾಯ. ಇವರಲ್ಲಿ ಮಚೇಂದ್ರನಾಥನ ಹೆಸರಿಟ್ಟುಕೊಳ್ಳುವಿಕೆ ಇದೆ. ಮುಡದೇರ್ ಕಾಳಭೈರವ ಭೂತದ ಹಾಗೂ ಜೋಗಿಪುರುಸೆರ್ ಕಥೆಗಳ ಪ್ರಕಾರ, ನಾಥಪಂಥಕ್ಕೆ ಸಂಬಂಧ ಪಡೆದಿರುವ ಕರಾವಳಿಯ ಬಿಲ್ಲವರೂ ಮಚೇಂದ್ರನ ಹೆಸರನ್ನು ಇರಿಸಿಕೊಳ್ಳುವರು. ಮಂಗಳೂರಿನ ರಂಗಕರ್ಮಿ ಮಚೇಂದ್ರನಾಥರು ಬಿಲ್ಲವರು. ಮಚೇಂದ್ರನ ಹೆಸರು ಮಂಗಳೂರು ಬಿಟ್ಟರೆ ಹೆಚ್ಚು ಕಂಡುಬರುವುದು ಹೈದರಾಬಾದು ಕರ್ನಾಟಕದ ಭಾಗದಲ್ಲೆ. ಈ ಭಾಗದಲ್ಲಿ  ‘ಗೋರಖ ಮಚೇಂದ್ರ’ ಡಪ್ಪಿನಾಟವಿತ್ತು ಎಂದು ತಿಳಿದು ಬರುತ್ತದೆ. ಕರ್ನಾಟಕದ ಈ ಭಾಗವು ಮಹಾರಾಷ್ಟ್ರಕ್ಕೆ ಸಮೀಪ ಇರುವುದರಿಂದ,  ಮರಾಠಿ ಮೂಲದಿಂದ ಇಲ್ಲಿಗೆ ನಾಥಪಂಥವು ಬಂದಂತೆ ಕಾಣುತ್ತದೆ.

ದಲಿತರು

ಕರ್ನಾಟಕದಲ್ಲಿ ದಲಿತರು ಶೈವರು. ಮಾರಮ್ಮ  ಊರಮ್ಮ ಮುಂತಾದ ಶಕ್ತಿ ದೇವತೆಗಳಿಗೆ ನಡೆದುಕೊಳ್ಳುವವರು. ಇದು ದಲಿತರ  ಶಾಕ್ತಪಂಥದ ಮೂಲವನ್ನು ಹೇಳುವ  ಬಲವಾದ ಸಾಕ್ಷ್ಯ. ಬಲಿದೈವಗಳ ಆರಾಧನೆಗೂ ಜನರ ಆಹಾರ ಸಂಸ್ಕೃತಿಗೂ ದುಡಿಮೆಯ ಲೋಕಕ್ಕೂ ನೇರ ಸಂಬಂಧವಿದೆ. ಶಾಕ್ತದೇವತೆಗಳ ಜತೆಯಲ್ಲಿ ಭೈರವನೂ ಇರುವ ಕಾರಣ, ದಲಿತರಲ್ಲಿ ಭೈರವಾರಾಧನೆಯು ಕ್ವಚಿತ್ತಾಗಿ ಇದೆ. ಮಂಡ್ಯ ಜಿಲ್ಲೆಯ ಶಿವಳ್ಳಿಯಲ್ಲಿ ಬೋರೇದೇವರ ಹಬ್ಬವನ್ನು ದಲಿತರೇ ಮಾಡುತ್ತಾರೆ. ಹೆಚ್ಚಾಗಿ ಕೃಷಿಕಾರ್ಮಿಕರಾಗಿ ಇರುವ ದಲಿತರು ತಮ್ಮ ಪರಿಸರದ ಬಲಿಷ್ಠಜಾತಿಯ ಭೂಮಾಲೀಕ  ಸಮುದಾಯ ದೈವವನ್ನು ಅನುಸರಿಸಿರುವ ಸಾಧ್ಯತೆಯಿದೆ. ದೀಕ್ಷಾಪದ್ಧತಿ ಇರುವ ಕಡೆ, ಸಾಮಾಜಿಕ ವಾಗಿ ಜಾತಿಪದ್ಧತಿ ಸಡಿಲವಾಗಿ, ಒಂದು ಬಗೆಯ ಸಮಾನ ಸ್ಥಾನಮಾನ ಸಿಗುವ ಕಾರಣ, ಕಾಪಾಲಿಕ ನಾಥ ಶಾಕ್ತ ಮುಂತಾದ ಪಂಥಗಳಲ್ಲಿ ದಲಿತರು ದೊಡ್ಡಪ್ರಮಾಣದಲ್ಲಿ ಪ್ರವೇಶ ಪಡೆದಿರಬಹುದು. ಕರ್ನಾಟಕದ ತಂತ್ರಪಂಥಗಳ ಬಗ್ಗೆ ಚಿಂತನೆ ಮಾಡಿರುವ ವಿದ್ವಾಂಸರ ಪ್ರಕಾರ, ದಲಿತರೇ ತಾಂತ್ರಿಕ ಪಂಥಗಳ ಮುಖ್ಯ ಆಧಾರವಾಗಿದ್ದರು. ಚುಂಚನಗಿರಿಯ ಭಕ್ತರು ಕೇವಲ ಒಕ್ಕಲಿಗರಲ್ಲ ಎಂದು ಸಾಧಿಸಲು ಕಾಪಾಲಿಕರು ಸಿದ್ಧಪಡಿಸಿ ಕೋರ್ಟಿಗೆ ಸಲ್ಲಿಸಿದ್ದ ಕೋಮುವಾರು ಪಟ್ಟಿಯಲ್ಲಿ, ಮೈಸೂರು ಸೀಮೆಯ ಮಾದಿಗರು(ಎಡಗೈ) ಹಾಗೂ ಆದಿಕರ್ಣಾಟಕರು (ಪಂಚಮರು) ಇರುವುದು ಗಮನಾರ್ಹ.

ದಲಿತರು ಭೈರವನ ಅರ್ಚಕರೂ ಆಗಿರುವ ಏಕೈಕ ನಿದರ್ಶನವು ಸೊಂಡೇಕೊಳದಲ್ಲಿದೆ.   ನಾಥಮಠವಿದ್ದ ಹುಲಿಗೊಂದಿ ಹಾಗೂ ಕಾಪಾಲಿಕರು ಇರುವ ಉಪನಾಯಕನ ಹಳ್ಳಿಯ ಪರಿಸರದಲ್ಲಿ ಈ ಸೊಂಡೇಕೊಳವಿದೆ. ಮಾದಿಗ ಸಮುದಾಯಕ್ಕೆ ಸೇರಿದ ಭೈರವನ ಅರ್ಚಕರು ಕಾಪಾಲಿಕರಿಂದ ಜೋಗಿದೀಕ್ಷೆ ಪಡೆದವರು. ಜೋಗೇರ ಜಯಣ್ಣ ಹೇಳಿದ ಪ್ರಕಾರ, ‘‘ನಮಿಗೆ ಎಲ್ಲಕಡೆ ಹೋಗಕಾಗಲ್ಲ. ಹಿಂಗಾಗಿ ನಮ್ಮ ಪರವಾಗಿ ಭೈರವನ ಪೂಜೆ ಮಾಡೋಕೆ ದಲಿತರಿಗೆ ಬೋವಿಗಳಿಗೆ ಅಗಸರಿಗೆ ದೀಕ್ಷೆಕೊಟ್ಟು ಶಿಷ್ಯರನ್ನಾಗಿ ಮಾಡಿದ್ದೇವೆ’’. ಈ ಶಿಷ್ಯರು ತೀರಿಕೊಂಡರೆ ದೀಕ್ಷೆಕೊಟ್ಟ ಗುರುವೇ ಸಮಾಧಿ ಮಾಡಲು ಹೋಗಬೇಕು. ಚುಂಚನಗಿರಿ ಪರಿಸರದಲ್ಲಿ ದಲಿತ ಜೋಗಪ್ಪಗಳು ಸಾಕಷ್ಟು ಇದ್ದಾರೆ. ಆದರೂ ಕರ್ನಾಟಕದ ನಾಥಯೋಗಿಗಳಲ್ಲಿ ದಲಿತರಿಲ್ಲ. ಭೈರವ ಗುಡಿಗಳಲ್ಲಿ ದಲಿತರಿಗೆ ಅಘೋಷಿತ ನಿಷೇಧವಿದೆ. ಲುಂಕೆಮಲೆ, ಹೇಮಾವತಿ, ವದ್ದಿಕೆರೆಗಳಲ್ಲಿ ಇರುವ ನಾಥರ ಸಿದ್ಧೇಶ್ವರ ಗುಡಿಗಳಲ್ಲೂ ಈ ನಿಷೇಧವಿದೆ. ಕೆಲವೆಡೆ ದಲಿತರಿಗೆ ಪರ್ಯಾಯ ವ್ಯವಸ್ಥೆ ಮಾಡಿದೆ. ಲುಂಕೆಮಲೆಯಲ್ಲಿ ಹರಳಯ್ಯನ ಗುಡಿಗಳಿದ್ದು ಅವಕ್ಕೆ ದಲಿತರು ಪೂಜಾರಿಗಳು. ಹರಳಯ್ಯನ ಗುಡಿಯೆಂದರೆ, ಬಲಿಯಾದ ರುಂಡದ ಪೂಜೆ. ಇದಕ್ಕೆ ದಲಿತರು ಪೂಜಾರಿಯಾದ ಬಗ್ಗೆ ಒಂದು ಕತೆಯಿದೆ. ರಸಸಿದ್ಧರ ಮೇಲೆ ಭೈರವನು ಯುದ್ಧಕ್ಕೆ ಹೊರಟಾಗ, ಕುದುರೆ ಲಗಾಮು ಹರಿಯಿತಂತೆ. ಆಗ ದಲಿತ ಹರಳಯ್ಯ ತನ್ನ ಹೆಬ್ಬೆರಳ ನರಕಿತ್ತು ಲಗಾಮು ಮಾಡಿ ಕೊಟ್ಟನಂತೆ. ಆಗ ಭೈರವನು ಮೊದಲ ಪೂಜೆ ನಿನಗೆ ಎಂದು ಹರಸಿದನಂತೆ. ಈಗಲೂ ಲುಂಕೆಮಲೆಯ ಪ್ರವೇಶಕ್ಕೆ ಮೊದಲು ಹರಳಯ್ಯನ ಗುಡಿ ಬರುತ್ತದೆ. ತನ್ನ ಅಂಗಚ್ಛೇದ ಮಾಡುವ ಈ ಕ್ರಿಯೆಯು ಬಲಿಯ ಸಂಕೇತ ಇರಬಹುದು. ಬಹುಶಃ ಈ ಹರಳಯ್ಯ ಭೈರವನಿಗೆ ನರಬಲಿ ಹೋದ ದಲಿತನು. ಅವನ ವಂಶಜರು ಹರಳಯ್ಯನ ಪೂಜೆ ಹಕ್ಕನ್ನು ಪಡೆದಿರಬಹುದು. ವದ್ದಿಕೆರೆ ಸಿದ್ದಪ್ಪನ ತೇರಿನಲ್ಲಿ ಊರಿನ ವಿಭಿನ್ನ ಜನಾಂಗಗಳು ಕೆಲಸ ಹಂಚಿಕೊಳ್ಳುವಾಗ ದಲಿತರಿಗೂ ಅವರ ಪಾಲಿನ ಕೆಲಸ ಕೊಡುತ್ತಾರೆ. ಆದರೆ ಅದರಲ್ಲಿ ಸಮಾನತೆಯಿಲ್ಲ. ಕರಾವಳಿಯಲ್ಲಿ ಸೋಣದ ಜೋಗಿ ಎಂಬ ಧಾರ್ಮಿಕ ಭಿಕ್ಷಾಟನೆ ಮಾಡುವ ನರ್ತನ ಕಲೆಯೊಂದಿದೆ.  ಅದನ್ನು ದಲಿತರು ಹಾಕುತ್ತಾರೆ. ಜೋಗಿ ವೇಷಧಾರಿಯ ಪಾತ್ರವನ್ನು ದಲಿತರೇ ಯಾಕೆ ಮಾಡುತ್ತಾರೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ನೃತ್ಯ ಹಿಂದೆ ದಲಿತರು ಜೋಗಿದೀಕ್ಷೆ ಪಡೆಯುವ ಅವಕಾಶ ಇದ್ದುದರ  ಉಳಿಕೆಯೊ ಅಥವಾ ದೀಕ್ಷೆ ಪಡೆಯಲು ಸಾಧ್ಯವಿಲ್ಲದ ಕಾರಣ, ಪರ್ಯಾಯವಾಗಿ ವೇಷದ ಜೋಗಿ ಆಗಬೇಕಾಯಿತೊ ತಿಳಿಯದು.

ತಾತ್ವಿಕವಾಗಿ ನಾಥಪಂಥವು ವರ್ಣ ಮತ್ತು ಜಾತಿಯನ್ನು ಒಪ್ಪುವುದಿಲ್ಲ. ಆದರೆ ಸಾಮಾಜಿಕ ಆಚರಣೆಯ ಮಟ್ಟಿಗೆ ಅಲ್ಲಿ ದಲಿತ ವಿರೋಧದ ನೆಲೆಯಿದೆ. ಬ್ರಿಗ್ಸನು ಗುಜರಾತಿನ ಕಛ್ ಭಾಗದಲ್ಲಿ ತಾನು ಕಂಡ ಏಕೈಕ ದಲಿತ ನಾಥ ಯೋಗಿಯಾದ ಮೇಘನಾಥನ ಉಲ್ಲೇಖ ಮಾಡುತ್ತಾನೆ. ಹರಿಯಾಣದಲ್ಲಿ ನಾಥದೀಕ್ಷೆ ಪಡೆದ ದಲಿತರ ಒಂದು ಪಂಗಡವಿದ್ದು, ಅವರಿಗೆ ಚೌಥೆಪೌಡೆಯವರು ಎನ್ನುತ್ತಾರೆ. ಕರ್ನಾಟಕದಲ್ಲಿ ದಲಿತರು ನಾಥರಾದ ನಿದರ್ಶನಗಳಿಲ್ಲ. ಆದರೆ ಉಜ್ಜಿನಿಯ (ಕೂಡ್ಲಿಗಿ) ಮರುಳಸಿದ್ಧ ಪರಂಪರೆಯಲ್ಲಿ ಒಬ್ಬ ಸಿದ್ಧನಾಥನಿದ್ದಾನೆ. ಉಜ್ಜಿನಿಯ ಮರುಳಸಿದ್ಧ ಪರಂಪರೆಯು ಮಾದಿಗರ ಮೂಲದ್ದೇ ಅಲ್ಲವೆ ಎಂಬ ಬಗ್ಗೆ ದೊಡ್ಡ ವಾಗ್ವಾದವು, ಲಿಂಗಾಯತ ವಿದ್ವಾಂಸರಲ್ಲಿ ಬಹಳ ಕಾಲದಿಂದಲೂ ಇದ್ದು, ಅದಿನ್ನೂ ಬಗೆಹರಿದಿಲ್ಲ. ಆದರೆ ಸಿಂಧೋಗಿಯಲ್ಲಿ(ಕೊಪ್ಪಳ) ಉಜ್ಜಿನಿ ಮರುಳಸಿದ್ಧ ಪೀಠದ ಮಾದಿಗರ ಮಠವಿದೆ. ಅಲ್ಲಿ ಸಿದ್ಧನಾಥ ಎಂಬುವನು ಬರುತ್ತಾನೆ. ಈತನು ಸಿದ್ಧಮಲ್ಲ ಯೋಗಿ ಎಂಬ ಉಜ್ಜಿನಿ ಪೀಠದ ಗುರುವಿನ ಹರಕೆಯಿಂದ ಹುಟ್ಟಿದವನು ಎಂಬ ಐತಿಹ್ಯವಿದೆ. ಗುರು ಸಿದ್ಧಮಲ್ಲ ಯೋಗಿಯು ತನ್ನ ಶಿಷ್ಯನಾದ ಸಿದ್ಧನಾಥನಿಗೆ ಉತ್ತರಾಧಿಕಾರ ಕೊಟ್ಟು, ಸಿಂಧೋಗಿ ಮಠದಲ್ಲಿ ಕೂರಿಸಿ ದೇಹತ್ಯಾಗ ಮಾಡುತ್ತಾನೆ.[13] ಉಜ್ಜಿನಿಯು ಭೈರವಾರಾಧನೆ ಜಾಗವಾಗಿತ್ತು ಎಂಬ ಹಿನ್ನೆಲೆಯಲ್ಲಿ ಈ ಸಿದ್ಧನಾಥನು ನಾಥನೆ ಎಂಬ ಊಹೆಗೆ ಪುಷ್ಟಿ ಬರುತ್ತದೆ. ಈ ಊಹೆ ನಿಜವಾದರೆ, ಈತ ಕರ್ನಾಟಕದ ದಲಿತ ಮೂಲದ ಏಕೈಕ ನಾಥನು.

ಕರ್ನಾಟಕದೊದಲಿತರು ಆರೂಢ ಸಂಪ್ರದಾಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದರು. ಅವಧೂತ ಮಠಗಳು ನಾಥರ ಮಠಗಳಂತೆ ಒಂದು ಸಂಘಟಿತ  ವ್ಯವಸ್ಥೆಯಲ್ಲ. ಅವು ಸತ್ಸಂಗ ಮಾಡುವ ಭಜನಾ ಮಂಡಳಿಗಳು; ಸ್ಥಳೀಯ ಸಂತರ ಸಮಾಧಿಯ ಜತೆಗೆ ಬೆಳೆದು ರೂಪುಗೊಂಡ ಸಣ್ಣಮಠಗಳು.  ಮೈಸೂರಿನ ದಲಿತಕೇರಿಯಾದ ಕುಕ್ಕರಹಳ್ಳಿಯಲ್ಲಿ ದತ್ತಮಠವೊಂದಿದೆ. ನಾನು ಹೋದಾಗ ಕುಕ್ಕರಹಳ್ಳಿ ಮಂಚಯ್ಯ (೮೦) ಎಂಬುವರು ಇದ್ದರು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಜವಾನರಾಗಿದ್ದು ನಿವೃತ್ತರಾಗಿದ್ದರು. ಮಠದ ಮೂಲೆಯಲ್ಲಿ ತಂಬೂರಿ ಇತ್ತು. ಗೋಡೆ ಮೇಲೆ ಸಂತರ ಪೋಟೋಗಳಿದ್ದವು.  ಅವರೆಲ್ಲ ಕರೀನಳ್ಳಿಯ ಚನ್ನಾರೂಢ ಹಾಗೂ ಹೊಂಬಾಳಾರ್ಯ ಅವರಿಂದ ಗುರುದೀಕ್ಷೆ ತೆಗೆದುಕೊಂಡವರು. ದೀಕ್ಷೆ ಯಾರಿಗೆ ಕೊಡುತ್ತೀರಿ ಎಂದು ಕೇಳಲು ‘ಎಲ್ಲ ಭೂಮಿಗೂ ಬೀಜಹಾಕಿದ್ರೆ ಬೆಳೆ ಬರುತ್ತಾ? ಪ್ರೀತಿ ಇದ್ದವರಿಗೆ ಮಾತ್ರ ದೀಕ್ಷೆ ಕೊಡ್ತೀವಿ’ ಎಂಬ ಜವಾಬು ಬಂತು.

ಮ್ಯಾಸಬೇಡರು

ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರು ನಡೆದುಕೊಳ್ಳುವ ಎರಡು ಭೈರವಸ್ಥಾನಗಳಿವೆ. ಅವೆಂದರೆ  ಖುದಾಪುರ ಹಾಗೂ ಬೋರೇದೇವರ ಹಟ್ಟಿಯ (ಚಳ್ಳಕೆರೆ)  ಭೈರವರು. ಬೇಡರಿಗೆ ಪ್ರಿಯವಾದ ಶಸ್ತ್ರ ಹಾಗೂ ನಾಯಿಗಳು ಭೈರವಮೂರ್ತಿಯಲ್ಲಿವೆಯಷ್ಟೆ. ಆದರೆ ಅವರು ಭೈರವಾರಾಧಕರಾಗಲು ಬೇರೆ ಚಾರಿತ್ರಿಕ ಕಾರಣಗಳಿದ್ದಂತೆ ಕಾಣುತ್ತದೆ. ಖುದಾಪುರದ ಓಬಳಾನಾಯಕರು ಹೇಳುವಂತೆ ಮ್ಯಾಸನಾಯಕರು ಆದಿಯಲ್ಲಿ ಶ್ರೀಶೈಲದವರು. ಆವರಿಗೆ ಕೊಂಡಯ್ಯಗಳು ಅಡವಿಚೆಂಚರು ಎಂದು ಕರೆಯಲಾಗುತ್ತದೆ. ಈಗ್ಗೂ ಅವರು ಅಲ್ಲಿ ದನಕಾಯುವ ಕೆಲಸ ಮಾಡುತ್ತಾರೆ. ಅವರಲ್ಲಿ ಕೆಲವರು ದನಮೇಯಿಸುತ್ತಾ ಚಿತ್ರದುರ್ಗ ಸೀಮೆಗೆ ಬಂದವರು, ಇಲ್ಲೇ ನೆಲೆಸಿದರು. ಮ್ಯಾಸನಾಯಕರ ಮನೆಮಾತು ತೆಲುಗು. ಇಲ್ಲಿಗೆ ಬಂದ ಬಳಿಕ  ಇಲ್ಲಿದ್ದ ಲುಂಕೆಮಲೆ ಹಾಗೂ ಖುದಾಪುರಗಳ ಭೈರವರನ್ನು ಅವರು ತಮ್ಮ ದೈವವಾಗಿಸಿಕೊಂಡರು.  ಶ್ರೀಶೈಲದಲ್ಲಿ ಭೈರವಾರಾಧನೆ ದಟ್ಟವಾಗಿದೆ. ಮ್ಯಾಸಬೇಡರು  ಅಲ್ಲಿಂದಲೇ ಭೈರವಾರಾಧನೆಯನ್ನು ತಂದಿರುವ ಸಾಧ್ಯತೆಯೂ ಇದೆ. ಪಶುಪಾಲಕರಿಗೆ ಯಾವಾಗಲೂ ಪೆಟ್ಟಿಗೆ ದೈವಗಳ ಪದ್ಧತಿ. ತ್ರಿಶೂಲರೂಪಿ ಭೈರವನನ್ನು ಪೆಟ್ಟಿಗೆಯಲ್ಲಿ ಸಾಗಿಸುವುದು ಕಷ್ಟವಲ್ಲ. ಇದನ್ನು ಕಂಡರೆ, ಮ್ಯಾಸನಾಯಕರಿಗೆ ನಾಥಪಂಥಕ್ಕಿಂತ ಭೈರವನ ಜತೆಗೆ ಹೆಚ್ಚು ಸಂಬಂಧ ಇದೆಯೆನ್ನಬಹುದು.

ಖುದಾಪುರದ ಭೈರವನು ಕೆತ್ತಿದ ಮೂರ್ತಿಯಲ್ಲ. ಹುಟ್ಟುಬಂಡೆ. ಭೈರವನು ಮ್ಯಾಸನಾಯಕರಿಗೆ ತೋರಿದ ಪವಾಡಗಳ ಚಿತ್ರಪಟಗಳನ್ನು ಗುಡಿಯಲ್ಲಿ ಹಾಕಿದ್ದಾರೆ. ಅದರಲ್ಲಿ ಭೈರವನ  ಸಿದ್ಧಭುಕ್ತಿಗಾಗಿ  ಮಗುವನ್ನು ಬಲಿಕೊಡುತ್ತಿರುವ ಚಿತ್ರಪಟವೂ ಇದೆ. ಒಬ್ಬರು ಹೇಳಿದ  ಪ್ರಕಾರ, ಹಿಂದೆ ಬಾವಾಜಿಗಳು ಖುದಾಪುರಕ್ಕೆ ಬರುತ್ತಿದ್ದರಂತೆ. ಅವರು ಒಮ್ಮೆ ಗುಡಿಯನ್ನು  ಮಠವನ್ನಾಗಿ ಮಾಡಿಕೊಳ್ಳಲು ಯತ್ನಿಸಿದಾಗ, ಅವರನ್ನು ಓಡಿಸಲಾಯಿತಂತೆ. ಮ್ಯಾಸನಾಯಕರಿಗೆ ಲುಂಕೆಮಲೆಯ ಜತೆ ಅಷ್ಟು ಒಡನಾಟವಿಲ್ಲ. ಈ ಗ್ರಾಮೀಣ ಭಾಗದಲ್ಲಿ ಭೈರವ ಜನಸಂಸ್ಕೃತಿಯಲ್ಲಿ ಬೆರೆತುಹೋಗಿದ್ದಾನೆ. ಅವನಿಗೆ ಹೋಲಿಸಿದರೆ, ಮನುಷ್ಯರಾದ ನಾಥಯೋಗಿಗಳು ‘ಪರದೇಶಿ’ಗಳಾಗಿಯೇ ಇದ್ದಾರೆ.

ಗೌಡಸಾರಸ್ವತರು

ಕರ್ನಾಟಕದ ನಾಥಪಂಥಕ್ಕೆ ಕೃಷಿಕ ಹಾಗೂ ಕಸುಬುದಾರ ಜನಾಂಗಗಳು ಭಕ್ತರಾಗಿರುವಂತೆ, ವ್ಯಾಪಾರಿ ಸಮುದಾಯಗಳು ಹೆಚ್ಚು ಶಿಷ್ಯರಾದಂತೆ ತೋರುವುದಿಲ್ಲ. ಪಟ್ಟಣ ವಾಸಿಯಾದ ಜೈನ ಲಿಂಗಾಯತ ಬೌದ್ಧಗಳು ವ್ಯಾಪಾರ ವರ್ಗದ ಜತೆ ಆಪ್ತ ಸಂಪರ್ಕ ಸ್ಥಾಪಿಸಿದ್ದವು. ಆದರೆ ಕಾಡು ಗುಹೆ ಬೆಟ್ಟಗಳಲ್ಲಿ ವಾಸಿಸುವ ನಾಥರು,  ಸಹಜವಾಗಿಯೆ  ಪಟ್ಟಣದಲ್ಲಿ ಕೇಂದ್ರೀಕೃತವಾದ ವ್ಯಾಪಾರಿ ವರ್ಗದ ಜತೆ ಸಾಧಿಸಿದ ಸಂಪರ್ಕ ಕಡಿಮೆ. ಈ ಸಂಗತಿ ಪಟ್ಟಣ ಪ್ರದೇಶದ ನಾಥಮಠಗಳಿಗೆ ಅನ್ವಯವಾಗುವುದಿಲ್ಲ. ಪಟ್ಟಣದ ಮಠಗಳು ವ್ಯಾಪಾರಿ ವರ್ಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡವು. ರಾಜಸ್ಥಾನದ  ವ್ಯಾಪಾರಿಗಳು ಹಾಗೂ ಕೊಂಕಣದ ಗೌಡಸಾರಸ್ವತರು ಹೀಗೆ ಬಂದ ವರ್ಗಗಳು. ಮೂಲತ: ಮಹಾರಾಷ್ಟ್ರ ಕೊಂಕಣಗಳಲ್ಲಿ ನೆಲೆಸಿರುವ ಸಾರಸ್ವತರಿಗೆ, ಮರಾಠಿ ಪರಂಪರೆಯಲ್ಲಿ ವ್ಯಾಪಕವಾಗಿರುವ ನಾಥಸಂಪ್ರದಾಯವು ಅಪರಿಚಿತವಲ್ಲ. ಕೊಂಕಣ ಪ್ರದೇಶದಲ್ಲಿ ಹಲವಾರು ನಾಥಮಠಗಳಿವೆ.

ಮಂಗಳೂರಿನಲ್ಲಿ ಇಡೀ ಸಾರಸ್ವತ ಬ್ರಾಹ್ಮಣರಲ್ಲಿ ಕೆಲವರು ವೈಯಕ್ತಿಕವಾಗಿ  ಕದ್ರಿಮಠದ ಭಕ್ತರಾಗಿದ್ದರು. ಅವರಲ್ಲಿ ಮಂಗಳೂರಿನ ಬೀಡಿ ಉದ್ಯಮಿ ಪುತ್ತು ವೈಕುಂಠ ಶೇಠರು ಒಬ್ಬರು. ಕದ್ರಿಮಠದಲ್ಲಿ ಇರುವ ಒಂದು ಫೋಟೊದಲ್ಲಿ, ಚಮೇಲಿನಾಥರ ಹಾಗೂ  ಜಯಚಾಮರಾಜೇಂದ್ರ ಒಡೆಯರ ಜತೆ ಶೇಠರು ಇದ್ದಾರೆ. ಶೇಠರು ಬೀಡಿ ಉದ್ಯಮ ಶುರುಮಾಡಲು ಕದ್ರಿಮಠದ ಸುಂದರನಾಥರು (೧೯೦೮-೧೯೨೧) ಪ್ರೇರಣೆ ನೀಡಿದರೆಂಬ ಒಂದು ಕತೆಯಿದೆ. ಒಮ್ಮೆ ಸುಂದರನಾಥರು ಒಂದು ಎಲೆಯನ್ನು ಕೊಟ್ಟು ಇದರಿಂದ ಬೀಡಿ ಮಾಡು ಆದೇಶಿಸಿದರಂತೆ. ಶೇಠರು ಅಂದಿನಿಂದ ಬೀಡಿ ಉದ್ಯಮದಲ್ಲಿ ತೊಡಗಿದರಂತೆ. ನಾಥರು ತಂಬಾಕು ಸೇದುವ ಹವ್ಯಾಸದವರಾದ ಕಾರಣ, ಪುತ್ತುಶೇಠರ ಸಂಪರ್ಕ ಕದ್ರಿಮಠದ ಜತೆ ಆಗಿರಬಹುದು. ಈಗಲೂ ನಾಥಮಠಕ್ಕೆ ಭಕ್ತರು ಬರುವಾಗ ತಂಬಾಕು ಹಾಗೂ ಗಾಂಜಾ ತಂದು ಭಕ್ತಿಯಿಂದ ಅರ್ಪಿಸುತ್ತಾರೆ. ಮುಂದೆ ಶೇಠರು ಕದ್ರಿಮಠಕ್ಕೆ ಅನೇಕ ಬಗೆಯ ಸೇವೆ ಮಾಡಿದರು. ಮುಖ್ಯರಾಗಿ ಕದ್ರಿ ಬೆಟ್ಟದಲ್ಲಿರುವ ನವನಾಥ ಕೆರೆಗಳ ಮೇಲೆ ಸಂಚಾರಿ ನಾಥರ ವಸತಿಗಾಗಿ ಛತ್ರ ಕಟ್ಟಿಸಿದರು. ಅರಸರ ಕಟ್ಟೆ ಕಟ್ಟಿಸಿದರು. ತಮ್ಮ ಬಂಗಲೆಯ ಅಂಗಳದಲ್ಲಿ ಸುಂದರನಾಥ ಪ್ರತಿಮೆ ಸ್ಥಾಪಿಸಿದರು.  ಈಗಲೂ  ಝುಂಡಿ ಬಂದಾಗ ಅಶ್ವತ್ಥಕಟ್ಟೆಯಲ್ಲಿ ಸ್ವಾಗತಿಸಿ ಪಾನಕ ನೀಡುವ ಪದ್ಧತಿಯನ್ನು ಸಾರಸ್ವತರು ಉಳಿಸಿಕೊಂಡಿದ್ದಾರೆ.

ಮುಸ್ಲಿಮರು

ಮುಸ್ಲಿಮರಿಗೂ ನಾಥಪಂಥಕ್ಕೂ ಸೂಫಿಗಳ ಮೂಲಕ ಸಂಗ ಏರ್ಪಟ್ಟಿತು.  ಆಫಘಾನಿಸ್ಥಾನ ಪಾಕಿಸ್ತಾನಗಳಲ್ಲಿ ನಾಥಪಂಥದ ಅನೇಕ ಮುಖ್ಯ ಕ್ಷೇತ್ರಗಳಿವೆ.  ಪಾಕಿಸ್ತಾನದ ರಾವಲ್ಪಿಂಡಿ, ಟಿಲ್ಲಾ, ಹಿಂಗ್ಲಜಗಳಲ್ಲಿ ನಾಥಮಠಗಳಿವೆ. ರಾವಲ್ಪಿಂಡಿ ಎಂಬ ಹೆಸರೇ ನಾಥರನ್ನು ಸೂಚಿಸುವ ರಾವಳ್ ಎಂಬ ಶಬ್ದದಿಂದ ಬಂದುದು. ಪಂಜಾಬು ಭಾಗದಲ್ಲಿ ರಾವುಳರೆಂದರೆ ಮುಸ್ಲಿಂ ಜೋಗಿಗಳೆ. ಇವರನ್ನು  ರಾವಲ್‌ಗಲ್ಲೂ ಎಂದೂ ಕರೆಯುವರು. ಆಫಘಾನಿಸ್ಥಾನದ ರಾವುಳರನ್ನು ಪಾಗಲ್ ಪಂಥಿಯವರು ಎನ್ನುತ್ತಾರೆ.[14] ಅಲ್ಲಿ ಮಹಮದ್ ರಾವೂಳ್ ಎಂಬ ಸಮುದಾಯವು ಸಾವಿರಾರು ಸಂಖ್ಯೆಯಲ್ಲಿತ್ತು. ಹಂಡಿಬಡಗನಾಥ ಮಠದ ಹಂಡಿಬಡಂಗನು ಆಫಘಾನಿಸ್ಥಾನದಿಂದ ಬಂದ ಮುಸ್ಲಿಂ ದೊರೆ ಎಂಬ ಮಿತ್ತನ್ನು  ಈ  ಹಿನ್ನೆಲೆಯಲ್ಲಿಟ್ಟು ನೋಡಬೇಕು. ಹಂಡಿಬಡಗನಾಥ ಮಠದ ಗದ್ದಿಗೆ ಏರುವವರು ಯಾವಾಗಲೂ ಸತ್ಯನಾಥ ಪಂಥದವರು.  ವದ್ದಿಕೆರೆ ಲೋಕನಾಥ್  ಹೇಳಿದ ಪ್ರಕಾರ ಭಾರತದ ಸತ್ಯನಾಥಿ ಪಂಥದವರು ಮೂಲತಃ ಮುಸ್ಲಿಮರು. ವದ್ದಿಕೆರೆ, ಹೇಮಾವತಿ ಸೀಮೆಯ ಕಾಪಾಲಿಕರು ಮುಖ್ಯವಾಗಿ ಸತ್ಯನಾಥಿಗಳು. ಆದರೆ ಅವರಲ್ಲಿ ಯಾವುದೇ ಬಗೆಯ ಮುಸ್ಲಿಮರ ಲಕ್ಷಣಗಳಿಲ್ಲ.

ಬ್ರಿಗ್ಸನು ಫಕೀರ್ ಹಿಂದು ಹಾಗೂ  ಜೋಗಿ ಮಹಮ್ಮದ್ ಎಂಬ ಸಮುದಾಯಗಳಿದ್ದ ಜನಗಣತಿ ದಾಖಲೆ ಕೊಡುತ್ತಾನೆ.ಅನೇಕ ಚಾರಿತ್ರಿಕ ಕಾರಣಗಳಿಂದ ಮುಸ್ಲಿಮರಿಗೆ ನಾಥ ಪಂಥದ ಜತೆಯಿದ್ದ ಸಂಬಂಧಗಳು ಅಳಿದುಹೋದವು. ಸೂಫಿ ಹಾಗೂ ನಾಥರ ಅನುಸಂಧಾನವು  ನಿಂತುಹೋಯಿತು. ಭಾರತದಲ್ಲಿ  ಬಹುಧಾರ್ಮಿಕ, ಬಹುಪಾಂಥಿಕ ಸಮುದಾಯ ಹಾಗೂ ಸಂಸ್ಕೃತಿಗಳು ತೀವ್ರವಾಗಿ ಕ್ಷೀಣಿಸುತ್ತಿವೆ. ಬ್ರಿಟಿಶರ ಕಾಲದಲ್ಲಿ ಶುರುವಾದ ಕೋಮುಗಲಭೆಗಳಲ್ಲಿ; ೧೯೪೭ರಲ್ಲಿ ಧರ್ಮದ ಆಧಾರದಲ್ಲಿ ದೇಶವಿಭಜನೆ ನಡೆದ ಬಳಿಕ; ಪಾಕಿಸ್ತಾನ ಮತ್ತು ಭಾರತಗಳ ನಡುವೆ ನಡೆದ ಸೈನಿಕ ಸಂಘರ್ಷಗಳಿಂದ; ೧೯೯೨ರ ಅಯೋಧ್ಯೆಯ ಪ್ರಕರಣದ ಬಳಿಕ- ಹೀಗೆ ೪ ಮುಖ್ಯ ಘಟ್ಟಗಳಲ್ಲಿ ಈ ಹಿನ್ನಡೆ ಸಂಭವಿಸಿತು. ಈಗ ಮುಸ್ಲಿಮರಲ್ಲಿ ನಾಥದೀಕ್ಷೆ ಪಡೆವವರು ಬಹಳ ಕಡಿಮೆ. ಮುಂಬೈನ ಬೋರಿವಲಿ ನಾಥಮಠದ ಗುಲಾಬನಾಥನು ಮುಸ್ಲಿಂ ಎಂದು ಕೆಲವು ನಾಥರು ತಿಳಿಸಿದರು. ಪಂಥಗಳಲ್ಲಿ ಪ್ರವೇಶ ನಿಂತರೂ, ನಾಥರ ಆಚರಣೆಗಳಲ್ಲಿ ಪರೋಕ್ಷವಾಗಿ ಮುಸ್ಲಿಮರ ಪ್ರವೇಶವು ನಿಂತಿಲ್ಲ. ಹೇಮಾವತಿಯಲ್ಲಿ ಸಿದ್ಧೇಶ್ವರ ಟೂರಿಂಗ್ ಟಾಕೀಸು ಮುಸ್ಲಿಮರದು. ಅವರು ಪ್ರತಿ ಭಾನುವಾರ ಕಾಪಾಲಿಕರ ದೈವವಾದ ಸಿದ್ಧೇಶ್ವರಸ್ವಾಮಿಯ ಉತ್ಸವ ಹೊರಡಿಸುತ್ತಾರೆ.

ಪಂಜಾಬು ಪೇಶಾವರ ಕಾಶ್ಮೀರ ಸಿಂಧ್ ರಾವಲ್ಪಿಂಡಿ ಹಾಗೂ ಕಾಬೂಲುಗಳಿಗೆ  ಹೋಲಿಸಿ ದರೆ, ದಕ್ಷಿಣ ಭಾರತದಲ್ಲಿ ನಾಥಪಂಥಿ  ಮುಸ್ಲಿಮರ ಸಂಖ್ಯೆ ತೀರ ಕಡಿಮೆ. ಮಹಾರಾಷ್ಟ್ರ ದಲ್ಲಿ ಏಕನಾಥನ ಪರಂಪರೆಯಲ್ಲಿ ಶೇಕ್‌ಸುಲ್ತಾನ ಎಂಬ ನಾಥನಿದ್ದಾನೆ. ಉತ್ತರ ಭಾರತದಲ್ಲಿ ಜುಗಿ(=ಜೋಗಿ)ಮುಸ್ಲಿಮರು ನಾಥಪಂಥೀಯರು. ಇವರು ನಮ್ಮ ಬನಹಟ್ಟಿಯ ರಾವುಳರಂತೆ ನೇಕಾರರು. ಜುಗಿಜಾತಿಯಿಂದ ಬಂದ ಕಬೀರನು ಗೋರಖನ ಜತೆ ಸಂವಾದ ಮಾಡಿದ ಕತೆಯಿದೆ. ನಟೇಶ್ವರಿ ಸಂಪ್ರದಾಯದಲ್ಲಿ ಜಾಫರ್ ಪೀರರೆಂಬ ಮುಸ್ಲಿಂ ಯೋಗಿಗಳು ಇದ್ದರು. ರಾಜಸ್ಥಾನದ ಗೋರಖಟಿಲ್ಲಾದಲ್ಲಿ ಈಗಲೂ ಜಾಫರ್ ಪೀರ್ ಯೋಗಿಗಳಿದ್ದಾರೆ. ಅವರು ಹೀರಾರಾಂಜನ ಅನುಯಾಯಿಗಳು. ನಾಥಪಂಥೀಯರಿಗೆ ಪವಿತ್ರ ಶಾಕ್ತಪೀಠವಾದ ಹಿಂಗ್ಲಾಜ್‌ನಲ್ಲಿ ಇರುವ ಹಿಂಗ್ಲಜಾದೇವಿಯನ್ನು ಮುಸ್ಲಿಮರು  ಬೀಬೀನಾನಿ ಎಂದು ಆರಾಧಿಸುತ್ತಾರೆ. ಇದೆಲ್ಲ ವಿಚಿತ್ರವಾಗಿ ಯಾವುದೊ ಲೋಕದ ಕತೆಗಳಂತೆ ಕೇಳಿಸುವ ಸಾಂಸ್ಕೃತಿಕ ಸನ್ನಿವೇಶದಲ್ಲಿ ನಾವಿದ್ದೇವೆ. ಆದರೆ ಇದೆಲ್ಲ ವಾಸ್ತವವಾಗಿ ಇತ್ತು. ಇನ್ನೂ ಕೆಲಮಟ್ಟಿಗೆ ಇದೆ ಕೂಡ. ಮತೀಯವಾದಿ ಚರಿತ್ರೆ ಸೃಷ್ಟಿಸಿರುವ ಮುಸ್ಲಿಮರ ಆಕ್ರಮಣದ ಸಂಕಥನವು, ನಮ್ಮ ಧಾರ್ಮಿಕ, ಪಾಂಥಿಕ, ದಾರ್ಶನಿಕ ಹಾಗೂ ಸಾಮುದಾಯಕ ಲೋಕಗಳ  ನಡುವೆ ಸಂಭವಿಸಿರುವ ಸಾಂಸ್ಕೃತಿಕ ಅನುಸಂಧಾನಗಳನ್ನು ಅರಿಯಲು ಕಷ್ಟಕರವಾದ ಘೋರ ತಮಂಧವನ್ನು ನಿರ್ಮಿಸಿಬಿಟ್ಟಿದೆ.

ನಾಡವರು

ಉತ್ತರ ಕನ್ನಡಕ್ಕೆ ಸಮೀಪವಿರುವ ಗೋವೆಯಲ್ಲಿ ನಾಥಪಂಥವಿದೆ. ಗೋವೆಯ ಮಂಗೇಶನಾಥನು ನಾಥರ ದೈವ. ಕೊಂಕಣಿಗರ ಜತೆ ಬದುಕಿದ  ನಾಡವರಿಗೂ ನಾಥರ ಸಹವಾಸ ಲಭಿಸಿರಬಹುದು. ಈಗಲೂ ಉತ್ತರ ಕನ್ನಡದ ನಾಡವರಲ್ಲಿ ಜೋಗಾನಾಯಕ, ಜೋಗಿನಾಯಕ ಎಂಬ ಹೆಸರುಗಳಿವೆ. ಅಂತಹ ಕೆಲವರನ್ನು ಕಂಡು ‘ನಿಮಗೀ ಹೆಸರು ಹೇಗೆ ಬಂತು?’ ಎಂದು ಕೇಳಿದೆ. ಅವರಿಗೆ ಕಾರಣ ಹೇಳಲಾಗಲಿಲ್ಲ. ಜೋಗಿ ಹೆಸರಿನ ನಾಡವರು ಹಿರಿಯ ತಲೆಮಾರಿನವರಾಗಿದ್ದು, ಅವರ ಸಂಖ್ಯೆ ಕಡಿಮೆಯಾಗುತ್ತಿದೆ.  ಶಂಬಾ ಹೇಳುವಂತೆ, ಒಂದು ಕಾಲಕ್ಕೆ ಈ ಭಾಗದ ಬೆಳಂಬರ, ಮಾಜಾಳಿಗಳಲ್ಲಿ ನಾಥರ ಕೇಂದ್ರಗಳಿದ್ದವು. ಭೈರವ ಕ್ಷೇತ್ರವಾಗಿರುವ ಯಾಣವು ನಾಥರ ಮಠವಾಗಿದ್ದ ಸಾಧ್ಯತೆಗಳಿವೆ. ಈ ಜಿಲ್ಲೆಯಲ್ಲಿ ೫ ಸಿದ್ಧಾಪುರಗಳು (ಕಾರವಾರ, ಹಳಿಯಾಳ, ಮುಂಡಗೋಡ ಸಿದ್ಧಾಪುರ) ಇವೆ. ಜೋಗದಮನೆ, ಗಡಿಜೋಗದಮನೆ ಜೋಗದಪಾಳ್ಯ (ಯಲ್ಲಾಪುರ), ಕಾಳೇನಹಳ್ಳಿ ಜೋಗನಕೊಪ್ಪ (ಹಳಿಯಾಳ), ಸಿದ್ಧರ (ಕಾರವಾರ), ಭೈರುಂಬೆ (ಸಿರ್ಸಿ), ಜೋಗದ ಪಾಳ್ಯ, ಜೂಗ (ಅಂಕೋಲಾ), ಜೋಗ ಹಳಗೆಜೋಗ ಹಣಕೋಣಜೋಗ (ಕಾರವಾರ), ಜೋಗನಕೊಪ್ಪ (ಹಳಿಯಾಳ) ಇವೆ. ಸಿದ್ಧ ಜೋಗಿ ಭೈರವ ಹೆಸರಿನ ಈ ಊರುಗಳು ಏನು ಹೇಳುತ್ತಿವೆ? ಕದ್ರಿ  ಝುಂಡಿಯು ಉತ್ತರ ಕನ್ನಡದ ಶಿರಸಿ ಸಿದ್ಧಾಪುರ ಚಂದ್ರಗುತ್ತಿಗಳು ಸೇರಿದಂತೆ ಹತ್ತಾರು ಊರುಗಳ ಮೂಲಕ ಹಾದು ಹೋಗುತ್ತದೆ. ಸಿದ್ಧಾಪುರ ಹೆಸರೇ ಹೇಳುವಂತೆ ಸಿದ್ಧರ ಜಾಗ. ಒಂದು ಕಾಲಕ್ಕೆ ಈ ಭಾಗದಲ್ಲಿ ನಾಥಪಂಥ ಇದ್ದುದಕ್ಕೆ ಅಪಾರ ಕುರುಹುಗಳು ಸಿಗುತ್ತವೆ. ದಟ್ಟವಾದ ಕಾಡುಗಳಲ್ಲಿ ಪಾಳುಬಿದ್ದಿರುವ ಭೈರವ ಗುಡಿ ಹಾಗೂ ಧ್ಯಾನಸ್ಥ ಭಂಗಿಯಲ್ಲಿರುವ ಯೋಗಿಶಿಲ್ಪಗಳ ಬಗ್ಗೆ ಹತ್ತಾರು ಪತ್ರಿಕಾ ವರದಿಗಳು ಉತ್ತರ ಕನ್ನಡದಿಂದ ಬಂದಿವೆ. ೧೮ನೇ ಶತಮಾನದಲ್ಲಿ ಪೂರ್ಣಪ್ರಕಾಶಾನಂದನಾಥ ಅಥವಾ ನಾಯಕಸ್ವಾಮಿ ಎಂಬ ನಾಥಯೋಗಿ ಕುಮಟೆಯ ತ್ರವಳ್ಳಿಯಲ್ಲಿದ್ದನು. ಈತ ಗೋವೆಯ ಮಂಗೇಶನಾಥನ ಭಕ್ತ. ಇದನ್ನು ತಮ್ಮ ನಾಥಪಂಥ ಕುರಿತ ಗ್ರಂಥದಲ್ಲಿ ಢೇರೆಯವರು ಪ್ರಸ್ತಾಪ ಮಾಡುತ್ತಾರೆ.[15] ಈತನ ಹೆಸರಲ್ಲಿರುವ ನಾಯಕ ಶಬ್ದದಿಂದ ಇವನು ನಾಡವರನು ಎಂದು ಖಚಿತವಾಗಿ ಹೇಳಬಹುದು. ಈ  ನಾಯಕಸ್ವಾಮಿ ನಾಡವರನ್ನು ನಾಥಪಂಥಕ್ಕೆ ಜೋಡಿಸಿರಬಹುದು. ಹೀಗಾಗಿ ನಾಡವರ ಹೆಸರಲ್ಲಿ ಜೋಗಿ ಎನ್ನುವ ಶಬ್ದವು ಸಾಂಕೇತಿಕ ವಾಗಿ ಉಳಿದಿರಬಹುದು.

ಭಾವಸಾರ ಕ್ಷತ್ರಿಯರು

೧೯೫೦ರ ದಶಕದಲ್ಲಿ ಬಾರಾಪಂಥಿನವರು ಭೂತೇಶ್ವರನಾಥರನ್ನು ದಕ್ಷಿಣ ಭಾರತದ ಜನರಿಗೆ  ಪಂಥದ ಅರಿವನ್ನು ಸೂಕ್ತವಾಗಿ ಕೊಡಬೇಕು ಎಂದು ಕಳಿಸಿಕೊಡುವಾಗ,  ಅವರು ಸೂಚಿಸಿದ ೨ ಸಮುದಾಯಗಳಲ್ಲಿ ೧. ಒಕ್ಕಲಿಗರದು ೨. ಭಾವಸಾರ ಕ್ಷತ್ರಿಯರದು. ಭೂತೇಶ್ವರನಾಥರು  ನಾಡನ್ನೆಲ್ಲ ಸುತ್ತಿ ೨೦ ಕಡೆ ಭಾವಸಾರರನ್ನು ಸಂಘಟಿಸಿದರು. ಅವರಿಗಾಗಿ  ಕರ್ಜಗಿಯಲ್ಲಿ (ಹಾವೇರಿ) ಒಂದು ಮಠವನ್ನು ಮಾಡಿದರು. ಮರಾಠಿ ಮಾತಿನ ಭಾವಸಾರರು ಮರಾಠಿ ಹಾಗೂ ಹಿಂದಿಭಾಷಿಕ ನಾಥರ ಜತೆ ಬೆರೆಯುವುದು ಸುಲಭ. ಇದಕ್ಕೆ ಪೂರಕವಾಗಿ ಕರ್ನಾಟಕದ ನಾಥಮಠಗಳಲ್ಲಿ ಮಹಾರಾಷ್ಟ್ರದಿಂದ ಬಂದ ನಾಥರೂ  ಇರುತ್ತಾರೆ. ಹಲಸಬಾಳು ಶಾಸನದಲ್ಲಿ (೧೭೧೭) ಫಲಾಹಾರ ಮಠದ ಶಿಷ್ಯರಲ್ಲಿ ‘ಆರರ‌್ರಿಯರು’ ಇದ್ದಾರೆ. ಈಗಲೂ ಬಿಸಗ್ನಿಮಠ ಹಾಗೂ ಫಲಾಹಾರ ಮಠಗಳಿಗೆ ಭಾವಸಾರ ಕ್ಷತ್ರಿಯರು ನಡೆದುಕೊಳ್ಳುತ್ತಾರೆ. ಬಹುಶಃ ಇವು ಆರಂಭದಲ್ಲಿ ನಾಥಮಠಗಳೇ ಆಗಿದ್ದಿರಬಹುದು. ಸದ್ಯಕ್ಕೆ ಇಲ್ಲಿ ಭೈರವರಾಧನೆಯೂ ಶಕ್ತಿದೇವತೆಗಳ ಪೂಜೆ ಹಾಗೂ ಬಲಿಪದ್ಧತಿಯೂ ಉಳಿದಿದೆ.

ರಾಜಸ್ಥಾನಿಗಳು

ಕರ್ನಾಟಕದ ಮಾರ್ವಾಡಿಗಳು ಶ್ವೇತಾಂಬರ ಜೈನರು. ಅವರು ಭೈರವನ ಆರಾಧಕರು ಸಹ. ರಾಜಸ್ಥಾನದ ನಾಕೋಡ್‌ನಲ್ಲಿ ಇರುವ  ಭೈರೂನಾಥನು ಇವರ ಮನೆದೈವ. ರಾಜಸ್ಥಾನವು ಭಾರತದಲ್ಲೇ ಹೆಚ್ಚು ನಾಥ ಕೇಂದ್ರಗಳಿರುವ ಪ್ರದೇಶವಾಗಿದೆ.  ಇಲ್ಲಿ ಭೈರವನಿಗೆ ನಾಥ ಎಂದಿರುವುದು ಗಮನಾರ್ಹ. ಶಸ್ತ್ರಧಾರಿಯಾಗಿ  ರುಂಡಮಾಲೆ ಧರಿಸಿದ ಒಂದು ಉಗ್ರದೈವವನ್ನು, ಅಹಿಂಸೆಯನ್ನು ಮೌಲ್ಯವಾಗಿ ನಂಬುವ ಜೈನರು ಆರಾಧಿಸುವುದು ವಿಶೇಷವಾಗಿ ತೋರುತ್ತದೆ.  ನಾಕೋಡದಲ್ಲಿ ಪಾರ್ಶ್ವನಾಥ ಬಸದಿಯಿದೆ.  ಭೈರವ ಅಲ್ಲಿನ ಜನಪ್ರಿಯ ದೇವತೆ. ಬಹುಶಃ ಭೈರವಾರಾಧಕರು ಜೈನರಾಗಿ ಮತಾಂತರಗೊಂಡ ಬಳಿಕವೂ  ಭೈರವ ಉಪಾಸನೆ ಮುಂದುವರೆಸಿರಬೇಕು ಅಥವಾ  ಜನಪ್ರಿಯ ದೈವವಾಗಿದ್ದ ಭೈರವನಿಗೆ ಜೈನರು ಭಕ್ತರಾಗಿರಬೇಕು. ನಾಕೋಡದ ಭೈರುನಾಥನಿಗೆ ರುಂಡಮಾಲೆ, ನಾಯಿ, ನಗ್ನರೂಪಗಳನ್ನು ತೆಗೆದು ಶಿಷ್ಟಗೊಳಿಸಲಾಗಿದೆ. ಆದರೆ ಕಪಾಲಪಾತ್ರೆ, ಕತ್ತಿ, ತ್ರಿಶೂಲಗಳನ್ನು ನಿವಾರಿಸಲು ಆಗಿಲ್ಲ.

ಹಿಂದೆ ಮಂಗಳೂರಿನ ಜವಳಿ ವ್ಯಾಪಾರಿಯಾಗಿದ್ದ ಸಿಂಧ್ ಪ್ರಾಂತ್ಯದ  ಗೋಕುಲದಾಸ್ ಅವರು ಕದ್ರಿಯ ಜೋಗಿಮಠದ ಶಿಷ್ಯರಾಗಿದ್ದರು. ಅವರು ‘ಕದಲಿ ಮಂಜುನಾಥ ಮಹಾತ್ಮ್ಯೆ’ಯನ್ನು ಆ ಕಾಲಕ್ಕೆ ೩೦ ಸಾವಿರ ಖರ್ಚು ಮಾಡಿ ಅಚ್ಚುಮಾಡಿಸಿದರು.  ಮಾಕೋನಹಳ್ಳಿ ದೊಡ್ಡಪ್ಪಗೌಡರ ಪ್ರಕಾರ, ತಮ್ಮಅಂಗಡಿಯಲ್ಲಿ ವ್ಯಾಪಾರ ಮಾಡಿದವರಿಗೆಲ್ಲ ಅವರು ಇದರ ಪ್ರತಿಯನ್ನು ಹಂಚುತ್ತಿದ್ದರು. ಕರ್ನಾಟಕದ ಮಠಗಳಿಗೆ ರಾಜಸ್ಥಾನದ ನಾಥರು ಹೆಚ್ಚು ನೇಮಕವಾಗುತ್ತಾರೆ. ಹಿಂದೆ ಕದ್ರಿಮಠಕ್ಕೆ ಅಧಿಪತಿಯಾಗಿದ್ದ ಮೋಹನನಾಥ ರಾಜಾಸ್ಥಾನದವರು.  ಈಗ ಬಂದಿರುವ ಸಂಧ್ಯಾನಾಥರೂ ಅಲ್ಲಿಯವರೇ.  ಸಂಧ್ಯಾನಾಥರ ಪಟ್ಟಾಭಿಷೇಕದಲ್ಲಿ ಕದ್ರಿಮಠವು ರಾಜಸ್ಥಾನಿಗಳಿಂದ ತುಂಬಿ ಹೋಗಿತ್ತು. ಲುಂಕೆಮಲೆಯ ಮಂಗಲನಾಥರು ಸಹ ಒಬ್ಬ ರಾಜಸ್ಥಾನಿ. ಬಳ್ಳಾರಿ ಹೊಸದುರ್ಗ ಚಿತ್ರದುರ್ಗ ಭಾಗದ ರಾಜಸ್ಥಾನಿಗಳು, ಈ ಕಾರಣದಿಂದ ಲುಂಕೆಮಲೆಗೆ ನಡೆದುಕೊಳ್ಳುತ್ತಿದ್ದಾರೆ. ಈ ಸಲದ ಮಂಗಲನಾಥರ ಪಟ್ಟಾಭಿಷೇಕವನ್ನು ಇವರು ಮುಂದೆ ನಿಂತು ಮಾಡಿದರು. ನಾಥನಿಗೆ   ಕಾರು ಕೊಡಿಸಿದರು.  ಲುಂಕೆಮಲೆಯು ಭೈರವಕ್ಷೇತ್ರವಾದ ಕಾರಣ, ನಾಕೋಡ್ ಭೈರವನ ಭಕ್ತಿಯಿಂದಲೂ ಅವರು ನಡೆದುಕೊಳ್ಳುತ್ತ ಇರಬಹುದು. ಜತೆಗೆ ರಾಜಸ್ಥಾನಿಗಳಿಗೆ ಸಾಮಾನ್ಯವಾಗಿ ಭಂಗಿ ಸೇವನೆಯ ಅಭ್ಯಾಸವಿದ್ದು, ಅದಕ್ಕಾಗಿಯೂ ಸಂಪರ್ಕ ಇರಿಸಿಕೊಂಡಿರ ಬಹುದು. ನಾನು ೨೦೦೪ರಲ್ಲಿ ಲುಂಕೆಮಲೆಗೆ ಹೋದಾಗ ಮಂಗಲನಾಥರು ರಾಜಸ್ಥಾನಿಗಳ ಜತೆ ಸೇರಿ ಸಾಮೂಹಿಕ ಭಂಗಿ ಸೇವನೆ ಮಾಡುತ್ತಿದ್ದರು. ಕರ್ನಾಟಕದ ನಾಥಮಠಗಳಿಗೆ  ರಾಜಸ್ಥಾ ಮೂಲದ ನಾಥರು ನೇಮಕವಾಗಲು ಇಲ್ಲಿರುವ ರಾಜಸ್ಥಾನಿಗಳ  ಜನಸಂಖ್ಯೆಯೂ  ಆರ್ಥಿಕ ಬಲವೂ ಒಂದು ಕಾರಣವಾಗಿದ್ದರೆ ಆಶ್ಚರ್ಯವಿಲ್ಲ.

* * *

 [1]      Gorakhnath and the Kanphata Yogis, Pp.4

[2]      ಪುರುಷೋತ್ತಮ ಬಿಳಿಮಲೆ, ಕರಾವಳಿ ಜಾನಪದ, ಪು.೧೯

[3]      ಶ್ರೀ ಆದಿಚುಂಚನಗಿರಿ ಕ್ಷೇತ್ರಮಹಿಮೆ, ಪು.೧೪೭

[4]      ಗಣಪತಿರಾವ್ ಐಗಳ್ ಎಂ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಪು.೫೪

[5]      ಚಿದಾನಂದಮೂರ್ತಿ ಎಂ., ಸಂಶೋಧನ ತರಂಗ.೨, ಪು.೨೬೪

[6]      Vasanta Madhava, Religions in Costal Karnataka, Pp.55

[7]      ಪಾಶುಪತ ಶೈವರು ಮತ್ತು ಗೌಡಸಮಾಜ, ಪು.೧೪

[8]      ಅದೇ, ಪು. ೪೭

[9]      ಹನುಮಂತಯ್ಯ ವಿ.ಆರ್., ಕುರುಬರ ಚರಿತ್ರೆ, ಪು.೧೨೧

[10]     ಎಡೆಗಳು ಹೇಳುವ ಕಂನಾಡ ಕತೆ, ಶಂಬಾ ಕೃತಿ ಸಂಪುಟ.೨, ಪು.೨೨೨

[11]     ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಪು.೧೮೭

[12]     ಮಾಕೋನಹಳ್ಳಿ ದೊಡ್ಡಪ್ಪಗೌಡ, ಪಾಶುಪತ ಶೈವರು ಮತ್ತು ಗೌಡಸಮಾಜ, ಪು.೫೧-೫೩

[13]     ಪಂಡಿತಕವಲಿ ಚನ್ನಬಸವಪ್ಪ (ಸಂ), ಶ್ರೀಮರುಳ ಸಿದ್ಧಾಂಕ, ಪು.೪೨

[14]     ‘The Interaction between Medieval Hindu Mystic Traditions And Sufism’, A History in India, Vol.I. Pp 322-396

[15]     ನಾಥಪಂಥದ ಇತಿಹಾಸ, ಪು.೧೪೫