ಪರದೇಶಿಗಳು

ಲುಂಕೆಮಲೆಯ ನಿರ್ಜನ ಕಣಿವೆಯ ಒಳಗೆ ಹೋದರೆ, ಅಲ್ಲಿನ ಮಠದ ಮುಂದೆ ‘‘ಅಖಿಲ ಭಾರತ ಅವಧೂತ ಭೇಖ್ ಬಾರಾಪಂಥ್, ಹರಿದ್ವಾರ’’ ಎಂಬ ಬೋರ್ಡು ಕಾಣುತ್ತದೆ. ಈ ಪರಿಸರದಲ್ಲಿ ಈ ಹಿಂದಿ ಬೋರ್ಡು ಹಾಗೂ ಮಠದೊಳಗೆ ಇರುವ ಕನ್ನಡ ಬಾರದ ಬಾವಾಜಿ ಎಲ್ಲಿಂದಲೊ ತಪ್ಪಿಸಿಕೊಂಡು ಬಂದು ಸೇರಿರುವಂತೆ ಭಾಸವಾಗುತ್ತದೆ. ನಾಥರಿಗೆ ಜನರು ಪರದೇಶಿಗಳು ಎಂದು ಕರೆಯುವುದು ಹೀಗಾಗಿ ಅನ್ವರ್ಥಕವಾಗಿದೆ. ‘ಕರ್ನಾಟಕಕ್ಕೆ ಉತ್ತರ ಭಾರತದ ಸಂಬಂಧ ಹೊಸತಲ್ಲ. ಕೆಲವು ಶರಣರು ಕಾಶ್ಮೀರದಿಂದ ಬಂದರು. ಕಾಶಿಯಲ್ಲಿ ಕನ್ನಡಿಗರ ಜಂಗಮವಾಡಿ ಮಠವಿದೆ. ಸೂಫಿಗಳೂ ಹಂಡಿಬಡಗನಾಥನೂ ಉತ್ತರದಿಂದ ಬಂದವರು. ಮಂಟೆಸ್ವಾಮಿ ‘ಉತ್ತುರು ದೇಶದಿಂದ’ ಬಂದವನು. ಇದರಂತೆ ನಾಥವೂ ಉತ್ತರದಿಂದ ಬಂದಿತು. ಈಗಲೂ ನಾಥರ ಕೇಂದ್ರಗಳಾದ ನೇಪಾಳ, ಹರಿದ್ವಾರ, ಗೋರಖಪುರ, ತ್ರ್ಯಂಬಕೇಶ್ವರ, ಕಾಶಿಗಳು ಉತ್ತರ ಭಾರತದಲ್ಲಿವೆ. ಕದ್ರಿಮಠಕ್ಕೆ ಝುಂಡಿಯು ಉತ್ತರದಿಂದ ಬರುತ್ತದೆ.  ಸದ್ಯಕ್ಕೆ ಕರ್ನಾಟಕದ ನಾಥಮಠಗಳಲ್ಲಿ ಎಂಟರ ಅಧಿಪತಿಗಳು ಉತ್ತರದವರು. ಈ ಮಠಗಳ ಆಡಳಿತ ಭಾಷೆ ಹಿಂದಿ. ಕರ್ನಾಟಕದ  ನಾಥರ ಕೆಲವು ಶಾಸನಗಳು ಹಿಂದಿಯಲ್ಲಿವೆ. ಎಂತಲೇ ಕನ್ನಡ ಜನಪದರು ನಾಥರನ್ನು ಪರದೇಶಿಗಳು ಎಂದು ಕರೆದರೆಂದು ಕಾಣುತ್ತದೆ. ‘‘ಬಡಗಲ ಸೀಮಿಂದ ಅರೆಘಂಟೆಗೆ ಬಂದ, ದೋರು ಗೆಂಪಿನ ಪರದೇಸಿ ಭೈರವ’’;  ಇಲ್ಲಿ ಭೈರವ ಎಂದರೆ ನಾಥಜೋಗಿ. ಅವನು ಬಂದ ದಿಕ್ಕು ಬಡಗಲು. ಅವನ ಬಣ್ಣವೂ ಸ್ಥಳೀಯರದಲ್ಲ. ದೋರುಗೆಂಪಿನದು.

ತುದಿಗಲ್ಲು ಪಾಪಾಕ್ಷ ತುರ್ಕಣ್ಯದ ಭೈರುವ, ತುರ್ಕಣ್ಯಕ್ಕೋಗಿ ಬರುವೊರೆ

ಈ ಹಾಡಿನಲ್ಲಿ ಇರುವ  ತುರ್ಕಣ್ಯ ಅಥವಾ ತುರುಕಾಣ್ಯವೆಂದರೆ ಹಿಂದಿ ಮಾತಿನ ಉತ್ತರ ಭಾರತ. ದೆಹಲಿಯಲ್ಲಿ ಮುಸ್ಲಿಂ ದೊರೆಗಳು ಆಳುತ್ತಿದ್ದರಿಂದ ಉತ್ತರ ಭಾರತವನ್ನು ತುರುಕಾಣ್ಯ ಎಂದು ಕನ್ನಡ ಪಠ್ಯಗಳು ಕರೆದವು. ಸ್ಥಳೀಯರಿಗೆ ನಾಥರ ಹಿಂದಿ ಭಾಷೆಯು ತಮ್ಮ ಪರಿಸರದ ಮುಸ್ಲಿಮರ ಉರ್ದುವಿನಂತೆ ಕೇಳಿಸುವುದರಿಂದ, ಅವರು ಹಿಂದಿ ಭಾಷಿಕ ಪ್ರದೇಶವನ್ನು ತುರ್ಕಣ್ಯ ಎಂದಿರಬಹುದು. ಮಂಟೆಸ್ವಾಮಿ ಕಾವ್ಯದಲ್ಲಿ ಆತ  ತುರುಕಾಣ್ಯದಿಂದ ಬಂದವನು ಎನ್ನುವ ಉಲ್ಲೇಖವಿದೆ. ಪರಕೀಯರಾದ ನಾಥರನ್ನು ಸ್ಥಳೀಯರು ಬೆರಗಿನಿಂದ  ನೋಡುತ್ತ ಹುಟ್ಟಿದ ಈ ಪದಗಳು ಕುತೂಹಲಕಾರಿಯಾಗಿವೆ:

ಜೋಗಿಜೋಗ್ಯಾರಿಗೆಲ್ಲಾ ಓದ್ಯಾವು ಕಲಿಸ್ಯಾರೆ, ಓದಿನಾ ಸೀಲಾ ಬಗೂಲಾಗೆ ಇಟ್ಟುಕೊಂಡು

ಜೋಗ್ಯಾರೆಂಬೋರು ಇವಾರೇನೆ |

ಸಿದ್ಧಾಸಿದ್ಧರಿಗೆಲ್ಲಾ ಇದ್ದೇವು ಕಲಿಸ್ಯಾರೆ, ಉದ್ದೀನಾ ಸೀಲಾ ಬಗೂಲಾಗೆ ಇಟ್ಟುಕೊಂಡು

ಸಿದ್ದರೆಂಬೋರು ಇವಾರೇನೆ |

ಇವಾರೇನೆ ಎಂಬಲ್ಲಿ ತಮ್ಮಲ್ಲೇ ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳುವ ಕ್ರಿಯೆ ಇದೆ. ಮಾತು, ಬಣ್ಣ, ಊಟ, ಜೀನವಕ್ರಮಗಳಲ್ಲಿ ಹೊಸತನವುಳ್ಳ ನಾಥರನ್ನು  ಸ್ಥಳೀಯರು ಪರದೇಶಿ ಎಂದು ಕರೆವ ಮೂಲಕ, ಅವರ ಪರಕೀಯತೆಯನ್ನು ಗುರುತಿಸಿದರು. ಆದರೆ ಇದು ಪರಕೀಯ ಆದುದನ್ನು ತಮ್ಮೊಳಗೆ ಬಿಟ್ಟುಕೊಳ್ಳುವ ಉಪಾಯ ಕೂಡ. ಇದಕ್ಕೆ ಸಾಕ್ಷಿ ಪರದೇಶಪ್ಪ ಎಂಬ ಹೆಸರನ್ನು ತಮ್ಮಮಕ್ಕಳಿಗೆ ಇಡತೊಡಗಿದ್ದು.  ಚುಂಚನಗಿರಿಯ ಶಾಸನಗಳಲ್ಲಿ (ಎಕ.೭) ‘ನಾಗಪರದೇಶಿ’ ಎಂಬ ಹೆಸರಿದೆ. ಭೈರುವ ಅಂದರೆ ನಾಥಯೋಗಿಯು ಪರದೇಸಿ ಆದ ಕಾರಣಕ್ಕಾಗಿಯೆ ಪ್ರೀತಿಗೂ ಸತ್ಕಾರಕ್ಕೂ ಒಳಗಾಗುತ್ತಾನೆ.  ‘‘ಖಂಡುಗ ಜಡೆ ತಲೆತುಂಬ ಭೈರುವ ಸನ್ಯಾಸಿ ನಮ್ಮ ಕುಲಸ್ವಾಮಿ’’ ಇದು ನಾಥಯೋಗಿಯ ಆಪ್ತಚಿತ್ರ. ಏಕಕಾಲಕ್ಕೆ ನಾಥಯೋಗಿಯನ್ನು ಪರದೇಶಿಯೆಂದು ಕರೆಯುವುದು ಮತ್ತು ತಮ್ಮ ಕುಲಸ್ವಾಮಿಯನ್ನಾಗಿ ಒಪ್ಪಿಕೊಳ್ಳುವುದು ಎರಡೂ ಇಲ್ಲಿವೆ. ಇದು ಏಕಕಾಲಕ್ಕೆ ಸ್ಥಳೀಯತೆಯನ್ನು ವಿಸ್ತರಿಸುವ  ಹಾಗೂ ಅಖಿಲ ಭಾರತೀಯತೆಯನ್ನು ಸ್ಥಳೀಕರಣ ಮಾಡುವ ಕ್ರಿಯೆ. ಇಲ್ಲಿ ಭೈರವ ದೈವ ಹಾಗೂ ಸನ್ಯಾಸಿಯಾಗಿರುವ ಇಬ್ಬರೂ ಭೈರವರು ಏಕೀಕರಣವಾಗುತ್ತಾರೆ.

ಕರ್ನಾಟಕದ ನಾಥಪಂಥವು ಕ್ಲಾಸಿಕಲ್ ರೂಪದಲ್ಲಿ ಸಿಗುವುದು ಕಡಿಮೆ. ಉತ್ತರದ ಭಾಷೆ, ಲಿಪಿ, ಜನ, ಆಹಾರ ಸಂಸ್ಕೃತಿ ಹಾಗೂ  ಪಂಥಗಳನ್ನು ನಮ್ಮ ಜನ ಮುಖಾಮುಖಿ ಮಾಡಿದ ಹಾಗೂ ರೂಪಾಂತರಗೈದ ಬಗೆ ವಿಶಿಷ್ಟವಾಗಿದೆ. ಹೀಗಾಗಿ ಕರ್ನಾಟಕದ ನಾಥಪಂಥವು ಏಕಕಾಲಕ್ಕೆ ಅಖಿಲ ಭಾರತೀಯವೂ ಸ್ಥಳೀಯವೂ ಆಗಿದೆ. ಅದು ಕಾಲಕಾಲಕ್ಕೆ ಪಡೆದುಕೊಂಡ ರೂಪಾಂತರಗಳು ಪದರರೂಪದಲ್ಲಿ ಕಾಣುತ್ತವೆ. ಜಾನಪದೀಕರಣ ಪಡೆದ ನಾಥಪಂಥದಲ್ಲಿ, ಅದರ ದರ್ಶನ ಹಾಗೂ ಯೋಗಾಚರಣೆಗಿಂತ ಎದ್ದು ಕಾಣುವುದು ಸ್ಥಳೀಯ ಆಚರಣೆಗಳು. ಲುಂಕೆಮಲೆ ಹಾಗೂ ಚುಂಚನಗಿರಿ ಜಾತ್ರೆಗಳು ತಿನ್ನುವ ಕುಡಿಯುವ ಸೇದುವ ಹಾಡುವ ಕುಣಿಯುವ ಸಂಭ್ರಮದ ಆಚರಣೆಗಳನ್ನು ಒಳಗೊಂಡಿವೆ. ನಾಥಪಂಥದ ಸ್ಥಳೀಕರಣವು ಭಾಷಿಕ ಸಂಕರದಲ್ಲಿ, ಧಾರ್ಮಿಕ ಆಚರಣೆಗಳಲ್ಲಿ, ಜನಪದ ಸಾಹಿತ್ಯದಲ್ಲಿ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಸೇರಿಹೋಗಿದೆ.

ಭಾಷಿಕ ಸಂಕರ

ಕರ್ನಾಟಕದ ನಾಥಮಠಗಳಿಗೆ ಸಾಮಾನ್ಯವಾಗಿ ಉತ್ತರ ಭಾರತೀಯ ನಾಥರೇ ನೇಮಕವಾಗುತ್ತಾರೆ. ವಿಟ್ಲದಂತಹ ಒಳನಾಡಿನ ಮಠಗಳಲ್ಲೂ ಉತ್ತರದ ಸಂಚಾರಿ ಯೋಗಿಗಳು ಬಂದುಹೋಗು ಮಾಡುತ್ತಾರೆ. ಕರ್ನಾಟಕದ ನಾಥಮಠಗಳ ಚರಿತ್ರೆಯಲ್ಲಿ ಕನ್ನಡದ ಮಠಾಧಿಪತಿಗಳು ನಾಲ್ವರೇ- ಹಿಂದೆ ವಿಟ್ಲಮಠಕ್ಕೆ ಲಕ್ಷ್ಮೀನಾಥ ಹಾಗೂ ಈಶ್ವರನಾಥ. ಚಂದ್ರಗುತ್ತಿ ಮಠಕ್ಕೆ ಸಂಪೂರ್ಣನಾಥ; ಈಚೆಗೆ ಹಂಡಿಬಡಂಗನಾಥ ಮಠಕ್ಕೆ  ಸಿಧನಾಥ. ಯಾವುದೇ ಮಠದ ಅಧಿಪತಿಯಲ್ಲದ ರಮತೆ ಸಾಧು ಚಿದಂಬರನಾಥರು ಕನ್ನಡಿಗನೆಂಬ ಗುರುತನ್ನು ಪ್ರದರ್ಶಿಸಲು ಇಚ್ಛಿಸುತ್ತಿರಲಿಲ್ಲ.

ಕರ್ನಾಟಕದ ನಾಥಮಠಗಳ ಭಾಷೆ ಬಹುಮಟ್ಟಿಗೆ ಹಿಂದಿ. ಲೆಕ್ಕಪತ್ರಗಳನ್ನು ಅವರು ಹಿಂದಿಯಲ್ಲೆ ಇಡುತ್ತಾರೆ. ಕೆಲವು ಕಡೆ ಮರಾಠಿ. ಚಿತ್ರದುರ್ಗ ಪರಿಸರದಲ್ಲಿ ನಾಥ ಶಾಸನದಲ್ಲಿ ‘ಒಗಿನತನಕೇಥೀ’ ಎಂಬ ಪದವಿದೆ. ಇದರಲ್ಲಿ ಒಗನತ ಎನ್ನುವುದು ಯೋಗಿನಾಥ ಎಂಬುದರ ರೂಪ. ಒಗಿನತಕ್ಕೆ  ಹತ್ತಿರುವ ನ ಎಂಬುದು ಕನ್ನಡದ ಪ್ರತ್ಯಯ. ಕೇಥೀ ಎಂಬುದು ಕ್ಷೇತ್ರದ (ಹೊಲ) ತದ್ಭವ. ಉತ್ತರದ  ಭಾಷೆಯ  ಎರಡು ಪದಗಳ ನಡುವೆ ಕನ್ನಡದ ಪ್ರತ್ಯಯ ಸೇರಿ ಹೊಸರೂಪ ಸಿದ್ಧವಾಗಿದೆ. ಒಂದು ನಾಥಸಮಾಧಿ ಮೇಲಿರುವ ಈ ಶಾಸನ ಸಾಂಕೇತಿಕವಾಗಿದ್ದು, ನಾಥಪಂಥದ ಕರ್ನಾಟಕೀಕರಣದ ಸ್ವರೂಪವನ್ನು ಹೇಳುತ್ತಿದೆ. ಚುಂಚನಗಿರಿ ಬೆಟ್ಟದ ಮೇಲಿರುವ ೪ನೇ ಗುರು ಮೇಹರನಾಥನ ಸಮಾಧಿ ಮಂಟಪದ ಮೇಲೆ, ದೇವನಾಗರಿ ಲಿಪಿಯಲ್ಲಿ ‘‘ಶ್ರೀಚುಂಚನಗಿರೀ ರಮಾನಾಥಸ್ವಾಮೀ ಆಂಗೀರ ಸಂವತಸ್ರ ಕುರಕ್ಷೇತ್ರನಾಥ ಕೀ ಸೇವಾ ಮೇಹರನಾಥ ಗುರುಬಾಈ’’ ಎಂದು ಬರೆದಿರುವ ಒಂದು ಶಾಸನ (ಕ್ರಿಶ.೧೭) ಇದೆ.  ಹಂಡಿಬಡಂಗನಾಥ ಮಠದ ಸಮಾಧಿ ಬರೆಹಗಳೆಲ್ಲ ನಾಗರಿ ಲಿಪಿಯಲ್ಲೇ ಇವೆ. ಕನ್ನಡ ಪತ್ರಗಳ ಮೇಲೆ ನಾಥರು ಹಿಂದಿಯಲ್ಲಿ ಟಿಪ್ಪಣಿ ಬರೆಯುತ್ತಾರೆ. ಕನ್ನಡ ಪುಸ್ತಕಕ್ಕೆ ಹಿಂದಿಯಲ್ಲಿ ಮುನ್ನುಡಿ ಬರೆಯುತ್ತಾರೆ. ಒಮ್ಮೆ ಕದ್ರಿಮಠಕ್ಕೆ ಹೋದಾಗ, ಮೋಹನನಾಥರು ಲೆಕ್ಕಪತ್ರಗಳನ್ನು ನೋಡುತ್ತಿದ್ದರು. ಅವೆಲ್ಲ ಹಿಂದಿಯಲ್ಲಿದ್ದವು. ಮಠದ ಜೀರ್ಣೋದ್ಧಾರ ಮಾಡಿಸಲು ಅಚ್ಚುಹಾಕಿಸಿರುವ ಕರಪತ್ರ ಕೂಡ ಹಿಂದಿಯಲ್ಲಿತ್ತು. ಹರಿದ್ವಾರದ ಕೇಂದ್ರದ ಜತೆ ವ್ಯವಹರಿಸಲು ಅಥವಾ ಝುಂಡಿ ಬಂದಾಗ ತೋರಿಸಲು ಹಿಂದಿ ಅವರಿಗೆ ಅನಿವಾರ್ಯವೆನಿಸುತ್ತದೆ.

ಆದರೆ ಕರ್ನಾಟಕದ ನಾಥಮಠಗಳ ಪರಿಸರದಲ್ಲಿ ಹಿಂದಿಯಿಲ್ಲ. ಕದ್ರಿ ವಿಟ್ಲಗಳಲ್ಲಿ ಕನ್ನಡ, ತುಳು, ಮಲೆಯಾಳ. ಹಂಡಿಬಡಗದಲ್ಲಿ ಕನ್ನಡ ಮತ್ತು ಮರಾಠಿ. ಲುಂಕೆಮಲೆಯಲ್ಲಿ ಕನ್ನಡ ಮತ್ತು ತೆಲುಗು. ಬಹುಶಃ ಕನ್ನಡ ಮಾತ್ರ ಇರುವುದು ಹಲವರಿಯಲ್ಲಿ ಎಂದು ಕಾಣುತ್ತದೆ. ಹೀಗಾಗಿ ನಾಥಮಠಗಳಲ್ಲಿ ಹಿಂದಿ ಮರಾಠಿಗಳು, ದ್ರಾವಿಡ ಭಾಷೆಗಳಾದ ತುಳು ಕನ್ನಡ ತೆಲುಗುಗಳ ಜತೆ ಬೆರೆಯುವ ಪ್ರಕ್ರಿಯೆ ನಡೆದಿದೆ.  ಕಿರವಳೆ, ಡೊಂಗರಗಾಂವದ ಮಠಗಳು ಇಡಿಯಾಗಿ ಮರಾಠಿ ವಾತಾವರಣದಲ್ಲಿವೆ. ಕನ್ನಡಿಗರೂ ಮರಾಠಿಗರೂ ಸಮಸಮವಾಗಿ ಇರುವ ಹಂಡಿಬಡಗದಲ್ಲಿ ಭಾಷಿಕ ಸಂಕರ ಏರ್ಪಡುತ್ತಿದೆ. ಇದು ಅಲ್ಲಿನ ಪದಸೃಷ್ಟಿ, ವಾಕ್ಯರಚನೆಗಳನ್ನು ಪ್ರಭಾವಿಸಿ, ಮಿಶ್ರ ಭಾಷೆಯನ್ನು ಸೃಷ್ಟಿಸುತ್ತಿದೆ. ಈ ಭಾಷೆಯನ್ನು  ವಿಟ್ಲದ ಲಾಲಾನಾಥರಲ್ಲಿ, ಹಂಡಿಬಡಗದ ಕಾರಭಾರಿ ಮಂಗಲನಾಥರಲ್ಲಿ, ಹಲವರಿಯ  ಸೋಮನಾಥರಲ್ಲಿ ಹಾಗೂ ಲುಂಕೆಮಲೆಯ ಮಂಗಲನಾಥರಲ್ಲಿ ಕಾಣಬಹುದು. ಈ ಮಿಶ್ರಭಾಷೆಯನ್ನು ಬಾರಾಪಂಥದವರು ಚುಂಚನಗಿರಿ ವಿವಾದದಲ್ಲಿ ಪ್ರಕಟಿಸಿದ ‘ಚುಂಚನಗಿರಿ ಮಠದ ಸಮಸ್ಯೆ’ ಎಂಬ ಪುಸ್ತಿಕೆಯಲ್ಲೂ ಕಾಣಬಹುದು.

ಅ. ನಾವುಗಳು ಈದಿನ ಬೆಳಿಗ್ಗೆ ೫ ಗಂಟೆ ಸಮಯ ದರ್ಶನಕ್ಕೆಂದು ಹೋಗಿರುವೆವು. ಕಿಂತು ದರ್ಶನ ಕೂಡಾ ಮಾಡಲು ಅವಕಾಶ ಕೊಡಲಿಲ್ಲ. ಸಾರ್ವಜನಿಕ ಸಾರ್ವಭೌಮ ದೇವಮಂದಿರದಲ್ಲಿ ಈ ಪ್ರಕಾರ ನಿಷೇಧ ಮಾಡುವುದು ಒಳಿತ್ತಲ್ಲ.

ಆ. ಬಾರಾಪಂಥಿನ ಪ್ರತಿನಿಧಿ ವಿಠಲ್ ಯೋಗಿ ಮಠದ ರಾವರಾಜ ಲಕ್ಷ್ಮೀನಾಥ್ ಯೋಗಿಯವರು ಗುರುರಾಮಪ್ಪ ಭಕ್ತನಾಥ್ ಕಾ ಚುನಾವಾ ಮಾಡಿರುವರು.. ಸಿದ್ಧಪೀಠದ ಧಾರ್ಮಿಕ ಆದಿ ಮರ್ಯಾದೆ ರಕ್ಷಣೆ ನಮ್ಮೆಲ್ಲರಿಂದ ನಮ್ಮ ಎಲ್ಲರಿಗೂ ಸಹಾಯಾರ್ಥ ವಿನಮ್ರ ಅನುರೋಧವಾಗಿರುತ್ತದೆ.

ಮೊದಲನೆಯದು ಬಾರಾಪಂಥದವರು  ಚುಂಚನಗಿರಿಗೆ ಹೋದಾಗ ಪ್ರವೇಶ ನಿರಾಕರಣೆಯಾದ ಸಂದರ್ಭ. ಎರಡನೆಯದು ಬಾರಾಪಂಥವು ಮೈಸೂರು ಸರಕಾರಕ್ಕೆ ಸಲ್ಲಿಸಿದ ಮನವಿ ಪತ್ರ. ೧೨ ವರುಷಕ್ಕೊಮ್ಮೆ ಬರುವ ನಾಥರು, ಹೆಚ್ಚಿನ ಸಮಯ ಸ್ಥಳೀಯ ಭಾಷೆ ಕಲಿಯುವ ಗೋಜಿಗೆ ಹೋಗುವುದಿಲ್ಲ. ಹಿಂದಿಯು ಅವರಿಗೆ ಅನಿವಾರ್ಯ ಇರಬಹುದು. ಜತೆಯಲ್ಲಿ  ನಾವು ನಿಮಗಿಂತ ಭಿನ್ನರು ಹಾಗೂ ನಿಮ್ಮ ಅಧಿಕಾರಿಗಳು ಎಂಬ ಯಜಮಾನಿಕೆ ಮನೋಭಾವವೂ ಇಲ್ಲಿ ಕೆಲಸ ಮಾಡುವಂತೆ ತೋರುತ್ತದೆ. ಆದರೂ ಬಹುಭಾಷಿಕತೆಯು ಕರ್ನಾಟಕ ನಾಥಮಠಗಳ ವಿಶಿಷ್ಟ ಲಕ್ಷಣವಾಗಿದೆ. ಮಹಾರಾಷ್ಟ್ರದ  ಗಡಿಭಾಗದಲ್ಲಿ ನಾಥಪಂಥವನ್ನು ಮರಾಠಿ ಕೊಂಕಣಿ ಹೊರತು ಪಡಿಸಿ ನೋಡಲು ಬರುವುದಿಲ್ಲ. ಕಾರಣ ೧. ಬೆಳಗಾವಿ ಜಿಲ್ಲೆಯ ಮೂರೂ ನಾಥಮಠಗಳಲ್ಲಿ ಮರಾಠಿ ಹಾಗೂ ಕೊಂಕಣಿಗಳು ಆವರಿಸಿರುವುದು. ಇಲ್ಲಿಗೆ ಮುಖ್ಯಸ್ಥರಾಗಿ ಬರುವವರೂ ಸಾಮಾನ್ಯವಾಗಿ ಮಹಾರಾಷ್ಟ್ರದವರು. ೨. ಕರ್ನಾಟಕದ ಅನೇಕ ಮಠಗಳಿಗೆ ನಾಥಪಂಥವು ಮಹಾರಾಷ್ಟದ ಮಹಾನುಭಾವ ವಾರಕರಿ ಪಂಥಗಳು ಮೂಲಕ ಬಂದಿರುವುದು. ಸಿಂದಗಿಯ ಭೀಮಾಶಂಕರ ಮಠದಲ್ಲಿರುವುದು ಜ್ಞಾನೇಶ್ವರನಲ್ಲಿ ರೂಪಾಂತರಗೊಂಡ ನಾಥಪಂಥ. ಕನ್ನಡಿಗರಾದರೂ ಜಕ್ಕಪ್ಪಯ್ಯ ಮುಂತಾದವರು ಮರಾಠಿಯಲ್ಲಿಯೆ ಸಾಹಿತ್ಯ ರಚಿಸಿದರು. ೩.  ಕರ್ನಾಟಕದಲ್ಲಿ ನಾಥವುಠಕ್ಕೆ ನಡೆದುಕೊಳ್ಳುವ  ಭಾವಸಾರ ಕ್ಷತ್ರಿಯರ, ಕಿನ್ನರಿಯವರ ಹಾಗೂ ಗೌಡಸಾರಸ್ವತರ ಮನೆಮಾತು ಮರಾಠಿ ಹಾಗೂ ಕೊಂಕಣಿ.  ಹೀಗಾಗಿಯೇ  ಕಿನ್ನರಿಜೋಗಿಗಳು ಲುಂಕೆಮಲೆ ಚಂದ್ರಗುತ್ತಿಯಂತಹ ಕನ್ನಡ ಪ್ರದೇಶದ ಮಠಗಳ ಭಕ್ತರಾದರೂ, ದೀಕ್ಷಾ ಮಂತ್ರಗಳನ್ನು ಮರಾಠಿಯಲ್ಲಿ ಉಳಿಸಿಕೊಂಡಿದ್ದಾರೆ. ಆದರೆ ಕನ್ನಡ ನುಸುಳುವುದನ್ನು ತಪ್ಪಿಸಲು ಅವರಿಗೆ ಆಗಿಲ್ಲ.  ‘‘ಹಾತ್ ಮೆ ದೇಂಗೆ ಕಂಬಲ್ ಕ ಕೋರಿ, ದಿಕಾಯೇಂಗೇ ಜಂಗಲ್ ಕಾ ದಾರಿ, ಹರ ಗೋರಖ್‌ನಾಥ್ ಬಾರಾಕಟ್ಲ ಬಂದೋಬಸ್ತ್’’ -ಇಲ್ಲಿರುವ ದಾರಿ ಕಟ್ಲ (ಕಟ್ಟಳೆ) ಮುಂತಾದವು; ಕನ್ನಡ ಶಬ್ದಗಳು. ವಿಚಿತ್ರ ಎಂದರೆ, ಚಂದ್ರಗುತ್ತಿಗೆ ಮರಾಠಿ ನಾಥರು ಅಧಿಪತಿಯಾಗಿ ಬಂದಾಗಲೂ ಅವರ ಜತೆ ಕಿನ್ನರಿ ಜೋಗಿಯವರ ಸಂಬಂಧ ಹಾರ್ದಿಕವಾಗಲಿಲ್ಲ. ಹೊಸೂರಿನ ಗುಡ್ಡಪ್ಪ ಜೋಗಿಯವರ ಪ್ರಕಾರ, ಚಂದ್ರಗುತ್ತಿ ಮಠದಲ್ಲಿ ಹಿಂದಿದ್ದ ಕನ್ನಡಿಗ  ಸಂಪೂರ್ಣನಾಥ ತಮ್ಮ ಊರುಗಳಿಗೆ ಬರುತ್ತಿದ್ದರು. ಜನರಲ್ಲಿ ಬೆರೆಯುತ್ತಿದ್ದರು.  ಆಮೇಲೆ ಬಂದವರು  ಹಾಗೆ ಬೆರೆಯಲಿಲ್ಲ. ‘‘ಈಗಿರೊ ಅನೇಕನಾಥ ಸರಿಯಾಗಿ ಮಾತೇ ಆಡಲ್ಲ. ಮಹಾರಾಷ್ಟ್ರದವರು ಬಂದರೆ ಒಂದು. ನಾವು ಹೋದರೆ ಇನ್ನೊಂದು ಮಾಡ್ತಾನೆ. ಹೋದರೆ ಪೂಜೆ ಮಾಡಿಸ್ಕೊಂಡು ಕಾಣಿಕೆ ಕೊಟ್ಟು ಸುಮ್ಮನೆ ಬಂದುಬಿಡ್ತೀವಿ’’ ಎಂದರು. ಈ ಸಮಸ್ಯೆ ಕನ್ನಡ ಮಾತಾಡುವ ಸಮುದಾಯಗಳಿಗೆ ಇನ್ನೂ ಹೆಚ್ಚಾಗಿ ಕಾಡಿದೆ. ಬನಹಟ್ಟಿಯ ರಾವುಳರಿಗೆ ಹಂಡಿಬಡಗಕ್ಕೆ ಯಾಕೆ ಹೋಗುವುದಿಲ್ಲ ಎಂದರೆ, ಅಲ್ಲಿನ ಸಾಧುಗಳು ಹಿಂದಿ ಮಾತಾಡುತ್ತಾರೆ. ನಮಗೆ ತಿಳಿಯುವುದಿಲ್ಲ ಎಂದುಬಿಟ್ಟರು.

ಕದ್ರಿ ವಿಟ್ಲಗಳಲ್ಲಿ ಸಾಕಷ್ಟು ತುಳವೀಕರಣ ಆಗಿದ್ದರೂ ಅಲ್ಲಿ ಹಿಂದಿಯಿದೆ. ಚುಂಚನಗಿರಿ ಮಠದಲ್ಲಿ ೧೯೨೬ರ ತನಕ ಹಿಂದಿಯಿತ್ತು. ಈಗದು ಉತ್ತರದ ಭಾಷೆ ಮತ್ತು ಪಂಥ ಎರಡಕ್ಕೂ ಸಂಬಂಧ ಕಡಿದುಕೊಂಡಿದೆ. ಕನ್ನಡ ತೆಲುಗು ದ್ವಿಭಾಷಿಕ ಪರಿಸರದಲ್ಲಿದ್ದರೂ ಲುಂಕೆಮಲೆ ಹೆಚ್ಚು ಕನ್ನಡೀಕರಣಗೊಂಡ ಮಠ. ಇದಕ್ಕೆ ಒಂದು ಕಾರಣ, ಇದು ತ್ಯಂಬಕ-ಕದ್ರಿ ಝುಂಡಿ ಪಥದಿಂದ ದೂರವಾಗಿರುವುದು. ಮಠವು ಒಳನಾಡಿನಲ್ಲಿ ಇರುವುದಕ್ಕೂ  ಔತ್ತರೇಯ ಸಂಬಂಧಗಳು ಕ್ಷೀಣವಾಗಿರುವುದಕ್ಕೂ ಸಂಬಂಧ ಇದ್ದೀತು. ಇಂತಹ ಕಡೆ ನಾಥವು ಹೆಚ್ಚು ಸ್ಥಳೀಯತೆ ಪಡೆದಿದೆ. ಲುಂಕೆಮಲೆ ಮಠಕ್ಕೆ ನಡೆದುಕೊಳ್ಳುವ ಕಿನ್ನರಿಗಳು  ಮರಾಠಿಯವರಾದರೂ, ಮಠದ ದಾಖಲೆಗಳು ಕನ್ನಡದಲ್ಲಿವೆ. ಕದ್ರಿಮಠದ ನಾಥರು ೧೨ ವರುಷ ಇದ್ದರೂ ಕನ್ನಡ ಅಥವಾ ತುಳು ಕಲಿಯಲು ಯತ್ನಿಸುವುದಿಲ್ಲ.  ಮೋಹನನಾಥರು ತುಳು ಕಲಿಯಲಿಲ್ಲ. ಆದರೆ ಕೆಲವರು ಸ್ಥಳೀಯ ಭಾಷೆ ಕಲಿಯುತ್ತಾರೆ.  ಎರಡು ಅವಧಿಗೆ ನೇಮಕವಾಗುವ ನಾಥರಿಗೆ ಇದು ಅನಿವಾರ್ಯ ಕೂಡ. ವಿಟ್ಲದ ಲಾಲಾನಾಥರು ತುಳುವನ್ನೂ ಹಲವರಿಯ ಸೋಮನಾಥರು ಕನ್ನಡವನ್ನೂ ಕಲಿತಿದ್ದಾರೆ.  ಸ್ಥಳೀಯ ಭಾಷೆ ಕಲಿಯುವುದು ಎಂದರೆ, ಅಲ್ಲಿನ ಪರಿಸರದ ಭಾಗವಾಗುವುದು. ಸ್ಥಳೀಕರಣ ಪ್ರಕ್ರಿಯೆ ಭಾಷಾ ಬಳಕೆಗೆ ನಿಲ್ಲುವುದಿಲ್ಲ. ಅದು ಔತ್ತರೇಯ ಆಚರಣೆಗಳನ್ನು ರೂಪಾಂತರ ಮಾಡುವುದಕ್ಕೆ ಮುನ್ನಡೆಯುತ್ತದೆ.

ಜನರ ಮಟ್ಟಿಗೆ ಭಾಷೆಗಳು ಒಂದು ದೊಡ್ಡ ತೊಡಕಾದಂತೆ ತೋರುವುದಿಲ್ಲ. ಆದರೆ ಭಾಷೆಗಳು ಕರ್ನಾಟಕದ ನಾಥಪಂಥದ ರೂಪಾಂತರದಲ್ಲಿ ತಮ್ಮದೇ ಆಟವನ್ನಾಡಿವೆ. ಹೀಗಾಗಿ ಕರ್ನಾಟಕದ ನಾಥಪಂಥದ ಅಧ್ಯಯನಕ್ಕೆ ಕನ್ನಡವೊಂದೇ ಸಾಲದು. ಸಂಸ್ಕೃತ, ತುಳು, ಮಲೆಯಾಳ, ಮರಾಠಿ, ಉರ್ದು ಹಾಗೂ ಫಾರಸಿ ಭಾಷೆಗಳಲ್ಲಿ ಇದಕ್ಕೆ ಸಂಬಂಧಿಸಿದ  ಸಾಹಿತ್ಯ ಹಾಗೂ ದಾಖಲೆಗಳಿವೆ. ಸೀಮಿತ ಭೌಗೋಳಿಕ ಪ್ರದೇಶದಲ್ಲಿರುವ ಪಂಥವೊಂದರ ಚರಿತ್ರೆ ಮತ್ತು ವರ್ತಮಾನಗಳನ್ನು  ಬಹುಭಾಷೆಗಳಲ್ಲಿ ಹುಡುಕಬೇಕಾದ ಸಾಂಸ್ಕೃತಿಕ ಅನಿವಾರ್ಯತೆಯನ್ನು ಭಾರತೀಯ ಧರ್ಮ ಮತ್ತು ಪಂಥಗಳು ಸೃಷ್ಟಿಮಾಡಿವೆ.

ಕೇಂದ್ರದ ಜತೆ ಸಂಬಂಧ ಶಿಥಿಲ

ಉತ್ತರದ ನಾಥರು ಆಸಕ್ತಿಯಿಂದ ಸ್ಥಳೀಯ ಭಾಷೆ ಕಲಿತು ಬೆರೆಯುವುದು ಒಂದು ಕ್ರಮವಾದರೆ, ಸ್ಥಳೀಯತೆಯೇ ಅವರನ್ನು ಒತ್ತಡ ಹಾಕಿ ಆವರಿಸಿಕೊಳ್ಳುವುದು ಇನ್ನೊಂದು ಕ್ರಮ. ಎರಡನೆಯದರಲ್ಲಿ ಆಯ್ಕೆಯ ಪ್ರಶ್ನೆಯೇ ಬರುವುದಿಲ್ಲ. ಇದು ಸಮುದಾಯಗಳಿಗೂ ಅನ್ವಯವಾಗುತ್ತದೆ. ಚುಂಚನಗಿರಿ ಕಾಪಾಲಿಕರು ಒಕ್ಕಲಿಗರ ಜತೆ ಇರುವ ಕಾರಣ, ಸಹಜವಾಗಿ ಅವರ ಪ್ರಭಾವದಲ್ಲಿದ್ದಾರೆ. ಚುಂಚನಹಳ್ಳಿ ಗಂಗನಾಥಯ್ಯನಿಗೆ ನಿಮಗೆ ಇಲ್ಲಿನ ಜನ ಏನೆಂದು ಕರೀತಾರೆ ಎಂದು ಕೇಳಲು, ‘ಗೌಡುಗುಳು’ ಎಂದನು. ಬಲಿಷ್ಠ ಸಮುದಾಯದ ಭಾಗವಾಗಿ ಗುರುತಿಸಿಕೊಳ್ಳಲು ಹಾಗೂ ಕಾಪಾಲಿಕ ಗುರುತು ಕಳೆದುಕೊಳ್ಳಲು ಜನರಿಗೆ  ಯಾವ ಆತಂಕವೂ ಇದ್ದಂತಿಲ್ಲ. ಕದ್ರಿಸೀಮೆಯ ಜೋಗಿಗಳು ಹೀಗೇ ಬ್ರಾಹ್ಮಣ ಸಂಸ್ಕೃತಿಯ  ಪ್ರಭಾವ ಪಡೆದಿದ್ದಾರೆ. ಹೀಗಾಗಿ ಅಲ್ಲಿ ಸಿದ್ಧಭುಕ್ತಿ ಆಚರಣೆ ಇಲ್ಲ. ಅತ್ಯಂತ ಹೆಚ್ಚು  ಬ್ರಾಹ್ಮಣೀಕರಣಗೊಂಡ ನಾಥರೂಪಗಳು ಕದ್ರಿಯಲ್ಲಿವೆ. ಆದರೆ ಮಾಂಸಾಹಾರಿಗಳಾದ ಮ್ಯಾಸಬೇಡರೂ ಒಕ್ಕಲಿಗರೂ ಇರುವ ಲುಂಕೆಮಲೆ ಮತ್ತು ಚುಂಚನಗಿರಿ ಪರಿಸರದಲ್ಲಿ  ಸಿದ್ಧಭುಕ್ತಿ ಇನ್ನೂ ಉಳಿದಿದೆ. ಹಂಡಿಬಡಗನಾಥ ಸೀಮೆಯ ರಾವುಳರಲ್ಲಿ ಕೆಲವರು ಲಿಂಗಾಯತರ ಪ್ರಭಾವಕ್ಕೆ ಸಿಕ್ಕು ಮಾಂಸಾಹಾರ ಬಿಟ್ಟಿದ್ದಾರೆ. ಚಂದ್ರಗುತ್ತಿಯಲ್ಲಿ ಸಿಕ್ಕ ಜೋಗಿ ನಿಂಗಪ್ಪನಿಗೆ ಹಾಡು ಎಂದರೆ, ‘ಶಿವ ಎಂಬ ಶಬ್ದ ಬಾಯಿಗೆ ಬಂದರೆ ಬಂದ ಕಷ್ಟ ದೂರಾಗುವುದು’ ಎಂದು ಭಜನೆ ಪದ ಹಾಡಿದ. ತಮ್ಮ ಸಮುದಾಯಕ್ಕೆ ಪ್ರತ್ಯೇಕವಾದ ಸಾಹಿತ್ಯವಿದೆ ಎಂಬುದು ಅವನ ಸ್ಮೃತಿಯಿಂದ ಹಾರಿಹೋಗಿದೆ. ಈ ಭಾಗದ ಕಿನ್ನರಿ ಕಲಾವಿದ ಗುಡ್ಡಪ್ಪನವರಿಗೆ ‘ನೀವು ಯಾವ್ಯಾವ ಹಾಡು ಹಾಡುವಿರಿ’   ಎಂದು ಕೇಳಿದಾಗ, ಅವರು ನಾಥ ಸಂಪ್ರದಾಯಕ್ಕೆ ಸೇರಿದ ಅರ್ಜುನ ಜೋಗಿಯ ಹಾಡಿಗಿಂತ,  ರಾಜಹಂಸ ಪರಮಹಂಸ, ಶೀಲಾವತಿ ಮುಂತಾದ ಕತೆಗಳ ಹೆಸರನ್ನು ಹೇಳಿದರು. ‘ನಮ್ಮಕಡೆ ಜನ ಇವನ್ನೇ ಹೆಚ್ಚು ಪರಮಾಯಿಶ್ ಮಾಡ್ತಾರೆ ’  ಎಂದು ಕಾರಣ ಕೊಟ್ಟರು. ಈ ಕತೆಗಳನ್ನು ಲಿಂಗಾಯತರು ಒಳಗೊಂಡಂತೆ ಸಾಗರ ಭಾಗದಲ್ಲಿ ಮನೆಯಲ್ಲಿ ಸಾವು ಸಂಭವಿಸಿದಾಗ ಅಥವಾ  ತಿಥಿಯಲ್ಲಿ ಜೋಗಿಗಳಿಂದ ಕಥೆ ಮಾಡಿಸುತ್ತಾರೆ. ಕನ್ನಡ ಮನೆಮಾತಿನ ಹವ್ಯಕರೂ ದೀವರೂ ಲಿಂಗಾಯತರೂ ಇರುವ  ಚಂದ್ರಗುತ್ತಿ ಪರಿಸರದ ಕಿನ್ನರಿಯವರು, ಊರಿಗೊಂದು ಎರಡು ಮನೆಯಿರುವ ಕಡೆ,  ಮರಾಠಿಯನ್ನು ಬಿಟ್ಟುಕೊಟ್ಟು ಕನ್ನಡಕ್ಕೆ ಶಿಫ್ಟಾಗಿದ್ದಾರೆ.ಹೀಗೆ ನಾಥಪಂಥಿ ಸಮುದಾಯಗಳು ತಮ್ಮ ಪರಿಸರದ ಪ್ರಬಲ ಸಮುದಾಯಗಳ ಪ್ರಭಾವದೊಳಗೇ ತಮ್ಮ ಪಂಥೀಯತೆ ಇಟ್ಟುಕೊಂಡು ಬದುಕಿವೆ.

ಹರಿದ್ವಾರದ ಕೇಂದ್ರದ ಜತೆ ಕರ್ನಾಟಕದ ನಾಥಮಠಗಳ ಆಡಳಿತಾತ್ಮಕ ಸಂಬಂಧ ಸಾಕಷ್ಟು ಬಿಗಿಯಾಗಿದೆ. ಆದರೆ ಸಾಂಸ್ಕೃತಿಕ ಸಂಬಂಧ ಸಡಿಲವಾಗಿದೆ. ಈ ಶಿಥಿಲ ಸಂಬಂಧ  ಕರ್ನಾಟಕದ ನಾಥಮಠ ಹಾಗೂ ನಾಥಪಂಥಿ ಸಮುದಾಯಗಳ ಮಧ್ಯೆಯೂ ಇದೆ.  ಅನೇಕ  ನಾಥರಿಗೆ ತಮ್ಮ ಪಂಥಕ್ಕೆ ಅಥವಾ ಮಠಕ್ಕೆ ಸೇರಿದ ಜನ ಎಲ್ಲೆಲ್ಲಿದ್ದಾರೆ ಹೇಗಿದ್ದಾರೆ ಎಂಬ ಸಾಮಾಜಿಕ ತಿಳಿವಳಿಕೆಯೆ ಇರುವುದಿಲ್ಲ. ಇವರಿಗೆ ಕಾರು ಬಂದಿವೆ. ಆದರೆ ಅವು ಗ್ರಾಮಗಳಿಗೆ ಹೋಗಿಲ್ಲ. ಇವರಿಗೆ ಹೋಲಿಸಿದರೆ, ಕುದುರೆ ಎತ್ತುಗಳ ಮೇಲೆ ಸವಾರಿ ಮಾಡಿಕೊಂಡು ಬರುತ್ತಿದ್ದ ನಾಥರೆ ಜನರ ಜತೆ ಹೆಚ್ಚು ಸಂಪರ್ಕ ಇರಿಸಿಕೊಂಡಿದ್ದರು ಎನ್ನಬಹುದು. ಜನ ಕೂಡ ಅಷ್ಟೆ. ತಮ್ಮ ಮಠದ ಹೆಸರು ಕೇಳಿದ್ದಾರೆ. ಅಲ್ಲಿಗೆ ಹೋಗಿರುವುದು ಕಡಿಮೆ. ಹಿರಿಯರಾದ  ಚುಂಚನಹಳ್ಳಿ ಕೆಂಚಪ್ಪ(೮೦) ಒಮ್ಮೆ ಕದ್ರಿಗೆ ಹೋಗಿದ್ದಾರೆ. ಅವರ ಮಗ ಗಂಗಾನಾಥಯ್ಯನಿಗೆ ಕದ್ರಿ ಬಗ್ಗೆ ಏನೂ ಗೊತ್ತಿಲ್ಲ. ದೇಶಸಂಚಾರ ಮಾಡುವ ಕಿನ್ನರಿ ಜೋಗಿಗಳೂ ಕದ್ರಿಗೆ ಹೋಗಿರುವುದು ಕಡಿಮೆ. ಹೊಸೂರಿನ ಗುಡ್ಡಪ್ಪ ಜೋಗಿ, ಕಲಾವಿದನಾಗಿ ಜರ್ಮನಿ ಸುತ್ತಾಡಿ ಬಂದಿದ್ದಾರೆ. ಕದ್ರಿಗೆ ಹೋಗಿಲ್ಲ. ಕೇಳಲು ‘ಬಾರಾಪಂಥದವರು ನಮ್ಮ ಗುರುಗಳು. ಝುಂಡಿ ಬಂದಾಗ ನಾವೆಲ್ಲ ಸೇವೆ ಮಾಡುತ್ತೇವೆ. ಆಮೇಲೆ ಇಲ್ಲ’ ಎಂದರು. ಚುಂಚನಗಿರಿಯ ಕಾಪಾಲಿಕರು ವರುಷಕ್ಕೊಮ್ಮೆ ಚುಂಚನಗಿರಿಗೆ ಹೋಗಿಬರುತ್ತಿದ್ದರು.  ಆದರೆ ಮಠವು ಒಕ್ಕಲಿಗರ ಸುಪರ್ದಿಗೆ ಹೋದ ಬಳಿಕ ಈ ಸಂಪರ್ಕ  ಕಡಿದುಹೋಗಿದೆ.  ಭೈರವನಿಗಾಗಿ ಅವರು ಚುಂಚನಗಿರಿಗೇ ಹೋಗಬೇಕಿಲ್ಲ. ತಂತಮ್ಮ ಊರುಗಳಲ್ಲಿ ತ್ರಿಶೂಲ ಪೂಜೆ ಮಾಡಿಕೊಂಡು ಇದ್ದುಬಿಡುತ್ತಾರೆ. ಲುಂಕೆಮಲೆಗೆ ಸೇರಿದ ಅನೇಕ ಕಾಪಾಲಿಕರಿಗೆ, ಕದ್ರಿಮಠಕ್ಕೆ ಝುಂಡಿ ಬಂದಿದ್ದಾಗಲಿ ಅಲ್ಲಿ ನಾಥನಿಗೆ ಹೊಸಪಟ್ಟ ಮಾಡಿದ್ದಾಗಲಿ ತಿಳಿಯದು. ತಾವು ನಡೆದುಕೊಳ್ಳುವ ಸಮೀಪದ  ಮಠಗಳನ್ನೂ ನೋಡದೆ, ೮೦ ವರ್ಷ ಗತಿಸಿರುವ ಕಾಪಾಲಿಕರು ಬೇಕಾದಷ್ಟು ಜನರಿದ್ದಾರೆ. ಹೇಮಾವತಿಯ ಈಶ್ವರಪ್ಪ (೫೦) ಅವರಿಗೆ ‘ಯಾಕೆ ಲುಂಕೆಮಲೆಗೆ ಹೋಗಿಲ್ಲ’ ಎಂದು ಕೇಳಿದರೆ, ‘ನಮ್ಮ ಗುರುಗಳಿಗೆ ಮ್ಯಾಸನಾಯಕರು ಮುದ್ರೆ ಹೊತ್ತಿದ್ದಾರಂತೆ. ಅದಕ್ಕೆ ನಮ್ಮ ಜನ ಹೋಗುತ್ತಿಲ್ಲ’ ಎಂದರು.  ಬನಟ್ಟಿಯ ಲಕ್ಷ್ಮಣ ರಾವುಳ ೧೯೯೧ರ ಝುಂಡಿ ನೋಡಲು ಹಂಡಿಬಡಗನಾಥಕ್ಕೆ ಹೋಗಿದ್ದರು. ಈಸಲ ಹೋಗಿಲ್ಲ. ಯಾಕೆಂದರೆ  ಕೇಳಿದರೆ  ‘ಓದಿದವರಿಗೆ ಓಣಿಸಿಗಲಿಲ್ಲ. ಹಾಡಿದವರಿಗೆ ಹಾದಿಸಿಗಲಿಲ್ಲ’ ಎಂದರು. ಓದುವ ಹಾಡುವ ಆದರೆ ನಿಜವಾದ ಸಾಧನೆ ಇಲ್ಲದ ಜನರನ್ನು ಟೀಕಿಸಲೆಂದೇ ಹುಟ್ಟಿರಬಹುದಾದ ಗಾದೆಯಿದು. ಮಹಾರಾಷ್ಟ್ರದಲ್ಲಿ ನಾಥಪಂಥವು ಗ್ರಾಮೀಣ ಮಟ್ಟದಲ್ಲೂ ತನ್ನ ಕ್ಲಾಸಿಕಲ್ ಗುಣವನ್ನು ಉಳಿಸಿಕೊಂಡಿದೆ. ತ್ರ್ಯಂಬಕದಲ್ಲಿ ಒಬ್ಬ ರೈತನು ಬಂದು ನಾಥಯೋಗಿಗೆ ನಾಥರಿಗೆ ವಿಶಿಷ್ಟವಾದ ರೀತಿಯಲ್ಲಿ ಆದೇಶ್ (ನಮಸ್ಕಾರ) ಮಾಡಿದನು.

ಬಾರಾಪಂಥಗಳು ಯಾವುವು ಅವನ್ನು ಯಾರು ಸ್ಥಾಪಿಸಿದರು ಎಂದು ಕೇಳಿದರೆ, ಆ ಚಾರಿತ್ರಿಕ ಅರಿವು ಜನರಲ್ಲಿಲ್ಲ. ಆ ಅರಿವು ದೈನಿಕ ಬದುಕಿನ ಕಷ್ಟಗಳಲ್ಲಿ ಮುಳುಗಿರುವ ಗ್ರಾಮೀಣ ಭಾಗದ ಜನಕ್ಕೆ ಇರುವುದು ಸಾಧ್ಯವೂ ಇಲ್ಲ. ಜನರ ಸಾಮಾಜಿಕ  ಆರ್ಥಿಕ ಹಿಂದುಳಿವಿಕೆಗೂ ನಾಥಪಂಥದ ಪರಂಪರೆಯ ಅರಿವಿಗೂ ಸಂಬಂಧವಿದೆ. ಇದು  ಕಾಳೇನಹಳ್ಳಿ, ಜೋಗೇರಹಳ್ಳಿ, ಹೇಮಾವತಿಗಳಲ್ಲಿ ಸ್ಪಷ್ಟವಾಗಿ ಕಾಣುತಿತ್ತು. ಸಣ್ಣಪುಟ್ಟ ಹಳ್ಳಿಗಳಲ್ಲಿ ಸಣ್ಣರೈತರಾಗಿರುವ ಅರಕಲಗೂಡು ತಾಲೂಕಿನ  ಕಾಪಾಲಿಕರಿಗೆ,  ನಾಥಪಂಥ ಎಂಬ ಹೆಸರೇ ಹೊಸತಾಗಿತ್ತು. ನಮಗೆ ನಾಥಪಂಥ ಅಂತ ಹೆಸರು ಬದಲಾವಣೆ ಮಾಡಿದಾರಂತೆ ಎಂದು ಅವರು ಮುಗ್ಧವಾಗಿ ನುಡಿದರು.

ಆದರೆ ಬಾರಾಪಂಥದಲ್ಲಿ ತಾವು  ಯಾವ ಶಾಖೆಗೆ ಸೇರಿದವರು ಎಂಬ ತಿಳಿವಳಿಕೆ ಅವರಲ್ಲಿದೆ. ಮಾತ್ರವಲ್ಲ, ಯಾವ್ಯಾವ ಊರಿನಲ್ಲಿ ಯಾವ್ಯಾವ ಒಳಪಂಥದವರು ಇದ್ದಾರೆ ಎಂಬ ಮಾಹಿತಿಯೂ ಇದೆ. ಈ ಪಂಥಗಳು ಗೋತ್ರ ಅಥವಾ ಬೆಡಗುಗಳಂತಿದ್ದು, ಇವುಗಳ ಒಳಗೆ ಕೊಡುಕೊಳೆ ನಿಷಿದ್ಧ. ಈ  ಸಾಮಾಜಿಕ ಕಾರಣದಿಂದ ಈ ಅರಿವು ಅವರಲ್ಲಿ ಉಳಿದುಕೊಂಡಿದೆ. ಉಪಯುಕ್ತವಾಗದ ಅರಿವನ್ನು ಜನ ಜತನದಿಂದ ಕಾಪಿಡುವುದಿಲ್ಲ. ಚುಂಚನಹಳ್ಳಿ ಕೆಂಚಪ್ಪನ ದೊಡ್ಡಮಗನಿಗೆ ಉಪನಾಯಕನಹಳ್ಳಿಯಿಂದಲೂ ಕಿರಿಯ ಮಗನಿಗೆ ಮೋಕಳಿಯಿಂದಲೂ ಹೆಣ್ಣು ತಂದಿದೆ. ಮಂಗಳೂರಿನ ಕೇಶವನಾಥರು ಉಪನಾಯಕನ ಹಳ್ಳಿಯಲ್ಲಿ ಮದುವೆಯಾಗಿದ್ದಾರೆ. ಹೀಗೆ ಕೊಡುಕೊಳೆಯ ಕಾರಣದಿಂದ ವಿಭಿನ್ನ ಊರುಗಳಲ್ಲಿರುವ ನಾಥಪಂಥಿ ಸಮುದಾಯಗಳ ಒಳಗೆ ಬಂಧುತ್ವ  ಏರ್ಪಟ್ಟಿದೆ. ಇವರ ಆಚರಣೆಗಳಲ್ಲಿ ೧೨ ರ ಸಂಖ್ಯೆಯು ಬಹಳ ಪವಿತ್ರ. ಅದು ಮತ್ತೆಮತ್ತೆ ಕಾಣಿಸುತ್ತದೆ. ಲುಂಕೆಮಲೆಯ ಕಾಪಾಲಿಕರ ಮದುವೆಗಳಲ್ಲಿ  ೧೨ ಶಾಖಾಮಠಗಳ ಹೆಸರನ್ನು ಹೇಳಿ, ಅವುಗಳ ಪ್ರತಿನಿಧಿಗೆ ವೀಳ್ಯ ಕೊಡುವ ಪದ್ಧತಿಯಿದೆ.

ನಾಥಸಂಪ್ರದಾಯ  ಪ್ರಚಾರ ಸಮಿತಿ, ನಾಥಪಂಥಿ ಸಮುದಾಯಗಳಲ್ಲಿ ಪರಂಪರೆಯ ಪ್ರಜ್ಞೆ ಹುಟ್ಟಿಸುವ ಕಾರ್ಯ ಮಾಡುತ್ತಿದೆ. ಅದು ಪ್ರಕಟಿಸಿ ಹಂಚಿರುವ ಗೋರಖನ ಚಿತ್ರಪಟ, ಜೋಗಿ ಸಮಾಜ ಸುಧಾರಕ ಸಂಘ ಹುಬ್ಬಳ್ಳಿಯಲ್ಲಿ ನಡೆಸಿದ ಸಮಾವೇಶದ ಕರಪತ್ರ ಹಾಗೂ ನಾಥಪಂಥ ಕುರಿತ ಪುಸ್ತಕಗಳು ಕೆಲವು ಗ್ರಾಮಗಳಿಗೆ ತಲುಪಿವೆ. ನಾಥಪಂಥ ನಮ್ಮದು, ಅದರ ಜತೆ ನಮ್ಮ ಸಂಬಂಧ ತಪ್ಪಿದೆ, ಅದನ್ನು ಮರಳಿ ಪಡೆಯಬೇಕು ಎಂಬ ಎಚ್ಚರವು  ರೈತಾಪಿಗಳಿಗಿಂತ, ಪಟ್ಟಣದ ಮಧ್ಯಮ ವರ್ಗದವರಲ್ಲಿ ಹೆಚ್ಚು ಮೂಡಿದೆ. ಅವರ  ಈ ಪಾಂಥಿಕ ಅರಿವಿಗೆ ರಾಜಕೀಯ ಆಶೋತ್ತರದ ಆಯಾಮವಿದೆ. ವದ್ದಿಕೆರೆಯ ಲೋಕನಾಥ್, ಕದ್ರಿಯ ಜೋಗಿ ಆನಂದನಾಥ, ಕೇಶವನಾಥ್ ಇವರೆಲ್ಲ ಆಧುನಿಕ ಶಿಕ್ಷಣ ಪಡೆದವರು. ದೇಶಸಂಚಾರ ಮಾಡಿ ಅನೇಕ ನಾಥಮಠಗಳನ್ನು ನೋಡಿದವರು. ಇವರಿಗೆ ನಾಥಪಂಥದಲ್ಲೂ ಲೋಕದಲ್ಲೂ ನಡೆಯುತ್ತಿರುವ ಆಗುಹೋಗುಗಳ ಮಾಹಿತಿಯಿದೆ. ಆದರೆ ಪರಂಪರೆಯ ಪ್ರಜ್ಞೆ ಮೂಡಿಸುವ ಇವರ ಯತ್ನಗಳು, ವಿಸ್ಮೃತಿಗೆ ಒಳಗಾಗಿರುವ ಸಮುದಾಯಗಳನ್ನು ಅಖಿಲ ಭಾರತೀಯ ಚೌಕಟ್ಟಿಗೆ ಸಿಲುಕಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಕರಣ ಹಾಗೂ ಪರ್ಯಾಯ ರಚನೆ

ಕೇಂದ್ರಗಳ ಜತೆ ಸಂಬಂಧವು ಸಡಿಲವಾದಂತೆಲ್ಲ ಸ್ಥಳೀಕರಣ ಪ್ರಕ್ರಿಯೆ ತೀವ್ರವಾಗುತ್ತದೆ. ಸ್ಥಳೀಕರಣದ ಗುಣವೆಂದರೆ, ಪರಿಸರದ ಭೌಗೋಳಿಕತೆ ಬಂದು ಸೇರಿಕೊಳ್ಳುವುದು. ಚುಂಚನಗಿರಿ ಸಾಹಿತ್ಯದಲ್ಲಿ ಜೋಗಿಯು ತಾನುಬಂದ ದಾರಿಯನ್ನು ‘‘ಕಟಕಟ ಕಲ್ಲೂರು ಬೆಡಗಿನ ಬೆಳ್ಳೂರು. ಹಿಂದೆ ತಾವರೆಕೆರೆ ಮುಂದೆ ಚುಂಚನಗಿರಿ’’ ಎಂದು ವಿವರಿಸುತ್ತಾನೆ. ಕರಾವಳಿಯಲ್ಲಿ ಸೋಣದ ಕುಣಿತ ಮಾಡುವ ಜೋಗಿಗೆ  ‘ಎಲ್ಲಿಂದ ಬಂದೆ’ ಎಂದು ಕೇಳಿದರೆ, ಅವನು ‘ಘಟ್ಟದ ಮೇಲೆ ಬೆಳಗಿದ ಜೋಗಿ, ಕಾಂತಾನ ಕದ್ರಾ ಪುದೋಡು ಪುರೋಲು ಪೆರ್ಮಲೆಗೆ ದಾಟಿಕೊಂಡು ಘಟ್ಟದ ಕೆಳಕ್ಕೆ ಬಂದೆ’ ಎನ್ನುತ್ತಾನೆ. ಕಾಸರಗೋಡು ಕಡೆ, ಪುರುಷ ಮಕ್ಕಳ ಕುಣಿತ ಮಾಡುವ ಸಿದ್ಧರ ವೇಷದವನು ‘ಎಲ್ಲಿಂದ ಬಂದೆ ’ ಎಂದರೆ, ‘ಕಾಶಿಯಲ್ಲಿ ಹುಟ್ಟಿ, ಕದ್ರೆಮೇಲೆ ಬೆಳಗಿ, ಕಾಂತಾನ ತದ್ರ, ಬೇಂತಾನ ಬೆದ್ರ, ಆಡೂರು ಮಧೂರು ಕಾವು ಕನಿಯಾಲ ಬುಳೇರಿ ಮರ್ಮಲೆ ಮಂಜಗಾವು ದಾಟಿಕೊಂಡು ಬಂದೆ’ ಎನ್ನುತ್ತಾನೆ. ಇಲ್ಲಿನ ಕದ್ರೆಯೆಂದರೆ ಕದ್ರಿ. ಕಾಶಿಯು ನಾಥರ ಕಾಲಭೈರವನಿರುವ  ಜಾಗ. ಮಾದೇಶ್ವರ ಕಾವ್ಯದಲ್ಲಿಯೂ ಅವನು ಬೆಟ್ಟಕ್ಕೆ ಹೋಗುವ ಹಾದಿಯನ್ನು ಹೇಳುವಾಗ, ಆಜುಬಾಜಿನ ಸಮಸ್ತ ಸೇತುವೆ, ಹಳ್ಳ, ಹೊಲ ಬೆಟ್ಟಗಳ ಭೂಗೋಳವೆಲ್ಲ ಬರುತ್ತದೆ.

ಸ್ಥಳೀಕರಣದ ಮುಂದಿನ ಘಟ್ಟವೆಂದರೆ, ಮೂಲಕ್ಕೆ ಹೊಸ ಪರ್ಯಾಯ ಹುಟ್ಟಿಸುವತ್ತ ಚಲಿಸುವುದು. ದುಡಿವ ಜನರ ಅದರಲ್ಲೂ ಕೃಷಿ ಸಂಸ್ಕೃತಿಯ ಭಾಗವಾಗುವ ಎಲ್ಲ ಪಂಥಗಳಿಗೆ,  ಸ್ಥಳೀಯ ಒತ್ತಡಗಳಿಗೆ ಅನುಸಾರವಾಗಿ ಕಂಬಳಿಹುಳು ಚಿಟ್ಟೆಯಾಗುವ  ರೂಪಾಂತರ ಅನಿವಾರ್ಯ. ಕರ್ನಾಟಕದ ನಾಥಪಂಥಕ್ಕೂ ಹೀಗೇ ಆಗಿದೆ.  ಪ್ರತಿಯೊಂದು ಮಠದ ಸೀಮೆಯೂ ತನ್ನದೇ ಆದ ರೂಪಾಂತರಕ್ಕೆ ಜನ್ಮಕೊಟ್ಟಿದೆ. ಲುಂಕೆಮಲೆ ಚುಂಚನಗಿರಿಗಳಲ್ಲಿರುವ ಕೆಲವು ರೂಪಾಂತರಗಳು ಕ್ಲಾಸಿಕಲ್ ನಾಥಪಂಥದಲ್ಲಿ ಕಾಣಸಿಗದವು. ನಾಥರ ದಾರ್ಶನಿಕ ಸಂಗತಿಗಳು ಇಲ್ಲಿ ಸಾಂಕೇತಿಕವಾಗಿ ಉಳಿದುಕೊಂಡಿವೆ. ಆದ್ದರಿಂದ ಭಾರತದ  ನಾಥಪಂಥವು ಏಕರೂಪಿಯಲ್ಲ. ಬಹುರೂಪಿ. ಇದನ್ನು ಕುಂಭಮೇಳದಲ್ಲಿ ನೆರೆಯುವ ಭಾರತದ ನಾಥಯೋಗಿಗಳು ಧರಿಸುವ ಕಟಿಬಂಧ, ಪೇಟ, ನಿಲುವಂಗಿಗಳ ವೈವಿಧ್ಯದಲ್ಲೂ ಕಾಣಬಹುದು. ಅವರ ಕಿವಿಯ ಕುಂಡಲಗಳು ಮಣ್ಣಿನವು, ಗಾಜಿನವು, ಪ್ರಾಣಿಗಳ ಕೊಂಬಿನವು, ಬಂಗಾರದವು – ಹೀಗೆ ಬಹುರೂಪಿ. ನಾಥರ ಬಗಲಲ್ಲಿ ಉಣ್ಣೆಯ ನೂಲಿನಿಂದ ಮಾಡಿದ ಸಣ್ಣಬಗಲ ಚೀಲ ಇರುತ್ತದೆ. ಅದು ಅವರ ಪಾಕೆಟ್ಟಿದ್ದಂತೆ.  ಅದನ್ನು ಅವರೇ ತಯಾರಿಸಿಕೊಳ್ಳುತ್ತಾರೆ. ಎಲ್ಲರಲ್ಲೂ ಉಣ್ಣೆ, ತಕಲಿ ಮತ್ತು ಸೂಜಿ ಇರುತ್ತದೆ.  ಕೆಲವರು ಬಗಲ ಚೀಲದ ಜತೆ ಸಣ್ಣಸೋರೆ ಬುರುಡೆ ತಗುಲಿ ಹಾಕಿಕೊಂಡಿದ್ದರು. ಕೆಲವರು ಫಕೀರರಂತೆ ದೊಡ್ಡ ತೆಂಗಿನಕರಟ ಬಳಸುತ್ತಿದ್ದರು. ಹೆಚ್ಚಿನವರು ಕಫನಿ ಧರಿಸುತ್ತಿದ್ದರು.ಈ ರೂಪಭೇದಕ್ಕೆ ೨ ಕಾರಣಗಳಿವೆ. ೧. ನಾಥರ ಒಳಪಂಥಗಳು. ಉದಾ. ಕಪ್ಪುನಿಲುವಂಗಿ ಧರಿಸಿದವರು ಶಾಕ್ತರು ಎನ್ನಲಾಗುತ್ತದೆ. ೨. ನಾಥರ ಪ್ರಾದೇಶಿಕತೆ. ಕುಂಭಮೇಳವು  ಭಾರತದ ಪಂಥಗಳ ಪ್ರಾದೇಶಿಕ ರೂಪಗಳ ಮಹಾಸಂಗಮ.

ಮರಾಠಿ ಹಾಗೂ ಮರಾಠಿ ರೂಪಾಂತರಗಳು

ಪಂಜಾಬು, ಬಂಗಾಳ, ಟಿಬೇಟು ನೇಪಾಳ, ರಾಜಸ್ಥಾನ ಮುಂತಾದ ಕಡೆ ನಾಥಪಂಥವು ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಬೆರೆತು ವಿಶಿಷ್ಟ ರೂಪಾಂತರಗಳನ್ನು ಪಡೆಯಿತು. ಸಿಂಧ್ ಭಾಗದ ಗರ್ಭಿಣಿಯರ ನೋವು ಕಡಿಮೆಯಾಗಲು ನಾಥರು ತೀರ್ಥ ಕೊಡುವ ಆಚರಣೆಗಳಿವೆ.  ಮಹಾರಾಷ್ಟ್ರ ಕರ್ನಾಟಕಗಳಲ್ಲೂ ರೂಪಾಂತರಗಳಾದವು. ಮರಾಠಿಗರ ಸೋಳಾ ಸೋಮವಾರ್ ವ್ರತ ಇದರಲ್ಲಿ ಒಂದು. ೧೬ ಸೋಮವಾರಗಳ ಕಾಲ, ಹಗಲು  ಉಪವಾಸ ಹಾಗೂ  ಸಂಜೆಗೆ ಶಿವಪೂಜೆ ಮಾಡಿ, ರೋಟ್ ಪ್ರಸಾದವನ್ನು ಹಸುವಿಗೂ ಮೀನಿಗೂ ಬ್ರಾಹ್ಮಣರಿಗೂ ದಾನ ಕೊಡುವುದು ಈ ವ್ರತದ ನಿಯಮ. ಮೀನು ಮಚೇಂದ್ರನ, ಹಸು ಗೋರಖನ ಪ್ರತೀಕ. ಉತ್ತರ ಕರ್ನಾಟಕದ ಬಹುತೇಕ ಕಡೆ ನಾಥವು ಜ್ಞಾನೇಶ್ವರನ ಪಂಥದ ರೂಪಾಂತರಗಳ ಮೂಲಕ ಪ್ರವೇಶಿಸಿದೆ. ಈ ಹಿಂದೆ ಸಿಂದಗಿ ಜಕ್ಕಪ್ಪಯ್ಯನ ಮಠದ ಮರಾಠೀಕರಣದ ಚರ್ಚೆ ಬಂತು. ಗಾಣಗಾಪುರದ ನರಸಿಂಹದತ್ತ ಮೂಲತಃ ಕನ್ನಡಿಗನಾದರೂ ಮರಾಠಿ ದತ್ತಪಂಥದ ಹಿನ್ನೆಲೆಯಲ್ಲಿ ರೂಪುಗೊಂಡವನು. ಕರ್ನಾಟಕದಲ್ಲಿ ಮರಾಠಿ ನಾಥಪಂಥದ ರೂಪಾಂತರಗಳಲ್ಲಿ ಒಂದಾದ ದತ್ತಪಂಥದ ಪ್ರಭಾವ ವ್ಯಾಪಕವಾಗಿದೆ. ಗೋರಖ ಮಚೇಂದ್ರರಿಗೆ ದತ್ತನು ಗುರುವಾಗುವ ಉಲ್ಲೇಖ ಹಿಂದೆ ಬಂದಿದೆ.  ‘ನವನಾಥ ಕಥಾಸಾರ’ದ ಪ್ರಕಾರ, ಗೋರಖ ಮಚೇಂದ್ರ ಮುಂತಾದ ನವನಾಥರು ಮಹಾರಾಷ್ಟ್ರದ ಬೇರೆಬೇರೆ ಊರುಗಳಲ್ಲಿ ಹುಟ್ಟಿ ಬೆಳೆದವರು. ಬಿಜಾಪುರ ಜಿಲ್ಲೆಯ ಇಂಚಗೇರಿ ಮಠಕ್ಕೆ ಸೇರಿದ ರಾನಡೆಯವರ ಅವಧೂತ ಪಂಥ ಕೂಡ ಮರಾಠಿ ಆಯಾಮದ್ದು. ಹೀಗಾಗಿ ಈ ಭಾಗಗಳಲ್ಲಿ ಕನ್ನಡಕ್ಕಿಂತ ಮರಾಠಿಯಲ್ಲೇ ನಾಥ ಸಾಹಿತ್ಯವು ನಿರ್ಮಾಣವಾಗಿದೆ. ಇಲ್ಲಿಗೆ ಈಗಲೂ ಮರಾಠಿ ಜನರ ಆಗುಹೋಗುಗಳಿವೆ.

ಕದ್ರಿ-ವಿಟ್ಲಗಳಲ್ಲಿರುವ ನಾಥಪಂಥವು ಮಲೆಯಾಳ, ತುಳು ಮತ್ತು ಕನ್ನಡದ ಬಹುಭಾಷಿಕ ಪ್ರದೇಶದಲ್ಲಿದ್ದು, ಕರಾವಳಿಯ ಸಾಂಸ್ಕೃತಿಕ ಪ್ರಭಾವಗಳನ್ನು ಸಹಜವಾಗಿ ಪಡೆದಿದೆ. ವಿಟ್ಲ, ಮಂಜೇಶ್ವರ, ಕದ್ರಿ ಭಾಗದ ನಾಥಪಂಥದಲ್ಲಿ ಕೇರಳದ ಸಂಸ್ಕೃತಿಯ ಪ್ರಭಾವವೂ ಇದೆ. ಗೋರಖ ಮಚ್ಚೇಂದ್ರರು ಮಂಗಳೂರಿಗೆ ಬಂದಿದ್ದು ಕೇರಳದಿಂದ ಎಂಬ ಐತಿಹ್ಯ ಇದೆಯಷ್ಟೆ. ಕಾಸರಗೋಡು ಭಾಗದ ಪುರುಷರು ಜೋಯಿಗಳು ಕದ್ರಿಯವರೆಗೂ ಬರುತ್ತಾರೆ. ಗೋರಖನು ನೇತ್ರಾವತಿ ನದಿ ದಾಟಿದ ಬಳಿಕ ಕೆಲಕಾಲ ತಂಗಿದ್ದನು ಎಂದು ನಂಬಲಾಗಿರುವ ಜಾಗದಲ್ಲಿ(ಮಂಗಳೂರು), ಗೋರಖದಂಡದ ಆರಾಧನೆಯಿದ್ದು, ಇದನ್ನು ಕೇರಳದ ಎಳವರು ಮಾಡುತ್ತಾರೆ. ಮೂಲದಲ್ಲಿ ಕಟ್ಟಿಗೆಯ ದಂಡವಿದ್ದಿರಬಹುದು. ಈಗ ಕಲ್ಲಿನ ದಂಡಶಿಲ್ಪವಿದೆ. ಅದರ ಪ್ರತಿಷ್ಠಾಪನೆಯನ್ನು ೧೯೫೭ರಲ್ಲಿ ಕದ್ರಿಮಠದ ಚಮೇಲಿನಾಥ ಮಾಡಿದ್ದಾರೆ. ಇದು ನಾಥಪಂಥದ ಕೇರಳೀಕೃತ ರೂಪಾಂತರವಾಗಿದೆ.

ಲುಂಕೆಮಲೆ ಕದ್ರಿ ಚುಂಚನಗಿರಿ ರೂಪಾಂತರಗಳು

ಲುಂಕೆಮಲೆಯ ಸಿದ್ಧಪ್ಪನ ಜಾತ್ರೆಯು ನಾಥಪಂಥದ ಸ್ಥಳೀಕರಣಕ್ಕೆ ಒಳ್ಳೆಯ ನಿದರ್ಶನ.  ಹಣ್ಣುಕಾಯಿ, ಪಲ್ಲಕ್ಕಿ ಉತ್ಸವ, ತೇರು, ಗಂಗಾಸ್ನಾನ, ‘ಲುಂಕೆಮಲೆ ಸಿದ್ಧೇಶ್ವರ ಮಹಾತ್ಮೆ’ ನಾಟಕ ಆಡಿಸುವುದು, ತುಪ್ಪದಮ್ಮನ ಸಿಡಿ, ಸಿದ್ಧಭುಕ್ತಿ -ಹೀಗೆ ಇಲ್ಲಿನ ಎಲ್ಲವೂ ಸ್ಥಳೀಯ ಜನ ರೂಪಿಸಿದ ಆಚರಣೆಗಳು. ಇವುಗಳಲ್ಲಿ ಬಹುತೇಕ ಆಚರಣೆಗಳಿಗೂ ನಾಥಪಂಥಕ್ಕೂ ಸಂಬಂಧವಿಲ್ಲ. ಇಡೀ ಜಾತ್ರೆ ಈ ಭಾಗದ ಯಾವುದೇ ಜಾತ್ರೆಯಂತಿದೆ. ಅದು ತಿನ್ನುವ ಕುಡಿಯುವ ಭಂಗಿಸೇದುವ ಸಂತೋಷದ ಆಚರಣೆಗಳಿಂದ ತುಂಬಿಹೋಗಿದೆ. ಈ ಆಚರಣೆಗಳಿಗೆ ‘ಅಖಿಲಭಾರತ ಬಾರಾಪಂಥ’ದ ಪ್ರತಿನಿಧಿಯಾದ ಬಾವಾಜಿ ಅಥವಾ ನಾಥನೂ ಒಳಗಾಗಿದ್ದಾನೆ. ಲುಂಕೆಮಲೆಯ ಜಾತ್ರೆಯ ಒಟ್ಟು ಆಚರಣೆಗಳಲ್ಲಿ ಬಾವಾಜಿಯ  ಪಾತ್ರ ತೀರ ಕಡಿಮೆ. ಸಾಂಸ್ಕೃತಿಕವಾಗಿ ಹೊಸಬನಾದ ಈತ ಆಚರಣೆ ವಿಷಯದಲ್ಲಿ ಸ್ಥಳೀಯ ಮುಖಂಡರು ಹೇಳಿದಂತೆ ಮಾಡುತ್ತಿದ್ದನು. ಬಾವಾಜಿ ನಿಜಕ್ಕೂ ಇಲ್ಲಿ ‘ಪರದೇಶಿ’.

ಲುಂಕೆಮಲೆ ಜಾತ್ರೆಯ ಸೇವೆಗಳನ್ನು ವಿಭಿನ್ನ ಜಾತಿ ಸಮುದಾಯಗಳು ಕ್ರಮವಾಗಿ ಹಂಚಿಕೊಂಡಿವೆ.  ಗೊರವರು ಅಥವಾ ಮಣಿಗಾರರು ಕೊಂಡದ ದುಡ್ಡು ತೆಗೆದುಕೊಳ್ಳುವರು. ಮ್ಯಾಸನಾಯಕರು ಸಿಡಿಯಾಡುವರು.  ಲಿಂಗಾಯತರು ಸಿದ್ಧಪ್ಪನ ಅರ್ಚನೆ ಹಾಗೂ ಹರಕೆ ಆಟ ಆಡುವರು. ತುಪ್ಪದಮ್ಮನಿಗೆ ಸಿಡಿ, ನುಂಕಪ್ಪನಿಗೆ ತೇರು, ಕಾಲಭೈರವನಿಗೆ ಸಿದ್ಧಭುಕ್ತಿ- ಹೀಗೆ ದೈವಗಳಿಗೂ ಸೇವೆಗಳ ಹಂಚಿಕೆಯಾಗಿದೆ. ಮೇಲುನೋಟಕ್ಕೆ ಎಲ್ಲ ಸಮುದಾಯಗಳೂ ಒಗ್ಗೂಡಿ ಜಾತ್ರೆ ಮಾಡುತ್ತವೆ. ಆದರೆ ಒಳಗೆ ಸೇವೆ ಹಾಗೂ ದೈವಗಳ ಹಂಚಿಕೆ ಜಾತಿಪದ್ಧತಿ ಪ್ರಕಾರ ನಡೆದಿದೆ. ಲಿಂಗಾಯತರು ಗುಡಿಯಲ್ಲಿರುವ ಮೂರ್ತಿರೂಪದ ಸಿದ್ಧೇಶ್ವರನನ್ನು ತಮ್ಮದೈವವಾಗಿಸಿಕೊಂಡರೆ, ದಲಿತರೂ ಕಿನ್ನರಿ ಜೋಗಿಗಳೂ ತ್ರಿಶೂಲ ರೂಪದ ಕಾಲ ಭೈರವನನ್ನು ಒಪ್ಪಿಕೊಂಡಿದ್ದಾರೆ. ಒಂದೇ ದೈವವನ್ನು ಮೂರ್ತಿ ಹಾಗೂ ತ್ರಿಶೂಲ ರೂಪದಲ್ಲಿ ವಿಂಗಡಿಸುವ ಮತ್ತು ಹಂಚಿಕೊಳ್ಳುವ ಸಾಮರಸ್ಯದ ಆಳದಲ್ಲಿ, ಜಾತಿ ತಾರತಮ್ಯ ಕ್ರಿಯಾಶೀಲವಾಗಿದೆ. ಜಾತ್ರೆಯಲ್ಲಿ (೨೦೦೦) ನಾಥಪಂಥಕ್ಕೆ ನೇರ ಶಿಷ್ಯರಾದ ಕಾಪಾಲಿಕರೂ ಕಿನ್ನರಿ ಜೋಗಿಗಳೂ  ಹೆಚ್ಚಾಗಿ ಕಾಣಲಿಲ್ಲ. ಬದಲಿಗೆ ಪರೋಕ್ಷ ಭಕ್ತರಾದ ಲಿಂಗಾಯತರೂ ಮ್ಯಾಸಬೇಡರೂ ಹೆಚ್ಚಾಗಿದ್ದರು. ಆಧುನಿಕ ಬದುಕಿಗೆ ಹೊರಳಿಕೊಳ್ಳುತ್ತಿರುವ ಕಿನ್ನರಿಜೋಗಿ ಸಮುದಾಯದ ತರುಣರು ಜೋಗಿವೇಷ ಹಾಕಿಕೊಂಡು ಜಾತ್ರೆಗೆ  ಬರುವುದು ಸಾಧ್ಯವಿಲ್ಲ. ಅವರಿಗೆ ಈ ಪಂಥ ಹಾಗೂ ಮಠಗಳು, ಘನತೆಯಿಲ್ಲದ ಬದುಕನ್ನು ಬೇರೊಂದು ಬಗೆಯಲ್ಲಿ ಮುಂದುವರೆಸುತ್ತವೆ ಎಂಬ ಹಿಂಜರಿಕೆ ಇದ್ದಂತಿದೆ.

ಮಹಾರಾಷ್ಟ್ರದಲ್ಲಿ ಸೋಳಾ ಸೋಮವಾರ ಮಾಡುವ ಮರಾಠಿಗರು ಮಚೇಂದ್ರನ ಹೆಸರಲ್ಲಿ ಮೀನುಗಳಿಗೆ ಆಹಾರ ಕೊಟ್ಟರೆ, ಕರಾವಳಿಯ ಮೊಗವೀರರು ಮಚೇಂದ್ರನ ಪೂಜೆಯು  ಮೀನು ಹಿಡಿಯಲು ಪಡೆವ ಅನುಮತಿಯಾಗಿದೆ.  ಒಂದೇ ಸಂತನ ಪುರಾಣಕತೆ, ಬೇರೆಬೇರೆ ಭಾಗದಲ್ಲಿ ಬೇರೆಬೇರೆ ರೂಪಾಂತರ ಪಡೆಯುತ್ತದೆ. ಇದರಲ್ಲಿ ಆಯಾ ಭಾಗದ ಜನರ ಆರ್ಥಿಕ ಚಟುವಟಿಕೆ, ಸಾಮಾಜಿಕ ನಂಬಿಕೆಗಳು ಪ್ರಭಾವ ಬೀರುತ್ತವೆ. ಯಾವುದೇ ಪಂಥ ನಿಜವಾಗಿ ಸ್ಥಳೀಕರಣಗೊಳ್ಳುವುದು, ತಾನು ನೆಲೆಸಿದ ಪ್ರದೇಶದ  ದುಡಿಮೆ ಜಗತ್ತಿನ ಭಾಗವಾದಾಗಲೇ. ಗುಡ್ಡಗಾಡಿನಿಂದ ಕೂಡಿದ ನೇಪಾಳದಲ್ಲಿ ಮಚೇಂದ್ರನು ಕೃಷಿಕರ ದೈವ. ಸಮುದ್ರ ಮತ್ತು ನದಿ ತೀರಗಳಲ್ಲಿ ಆತ ಮೀನುಗಾರರ ದೈವ.

ಕರಾವಳಿಯ ನಾಥಪಂಥದಲ್ಲಿ ಭೂತಾರಾಧನೆ ಮತ್ತು ಯಕ್ಷಗಾನಗಳು ಸೇರಿವೆ. ಕರಾವಳಿಯ ಪ್ರತಿ ನಾಥಮಠದಲ್ಲೂ ಒಂದೊಂದು ಭೂತದ ಆರಾಧನೆಯಿದೆ. ವಿಟ್ಲದಲ್ಲಿ ಚಾಮುಂಡಿ ದೈವವಾದರೆ, ಕದ್ರಿಯಲ್ಲಿ ಮರುಳು ಧೂಮಾವತಿ. ಈ ದೈವಗಳನ್ನು  ತೂಗುಮಂಚದಲ್ಲಿ ಪ್ರತಿಷ್ಠಾಪಿಸಿ, ಅವುಗಳ ಪಕ್ಕದಲ್ಲಿ ತೆಂಗಿನಕಾಯಿ ಮತ್ತು ಕತ್ತಿ ಇರಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಕದ್ರಿಮಠದಲ್ಲಿ ಜೋಗಿ ಸಮುದಾಯವು, ಮಠದ ನಾಥರು ಆಸಕ್ತಿ ವಹಿಸದಿದ್ದರೂ, ಮರುಳು ಧೂಮಾವತಿಯ ಕೋಲವನ್ನು ಮಾಡುತ್ತಿದೆ.  ಮಂಗಳೂರಿನಲ್ಲಿ ಗೋರಖದಂಡದ ಆಚರಣೆಗಳು ಕಲ್ಲುರ್ಟಿ ಕಲ್ಕುಡ ಭೂತಗಳ ಮಾದರಿಯಲ್ಲಿ ನಡೆಯುತ್ತವೆ. ಅತ್ತಾವರದಲ್ಲಿ ವೈದ್ಯನಾಥ ಎಂಬ ನಾಥಪಂಥೀಯ ದೈವವಿದೆ. ವಿದ್ವಾಂಸರ ಪ್ರಕಾರ, ಧರ್ಮಸ್ಥಳದ ಅಣ್ಣಪ್ಪದೈವವು ನಾಥಪಂಥಕ್ಕೆ ಸೇರಿದ್ದು. ಮುಡದೇರ್ ಕಾಲಭೈರವ ಎಂಬ ಪುರುಷ ಭೂತವು ನಾಥಪಂಥಕ್ಕೆ ಸಂಬಂಧಿಸಿದೆ. ಇದಕ್ಕೆ ಸಂಬಂಧಪಟ್ಟ ಪಾಡ್ದನದಲ್ಲಿ ೪ ನಾಥಜೋಗಿಗಳು ಬರುತ್ತಾರೆ. ಭೂತವು ಕಾಶಿಹೋಗಿ ಕಾಲಭೈರವನನ್ನು ಪೂಜಿಸಿ ಬರುತ್ತೇನೆ ಎಂದು ಹೇಳುತ್ತದೆ. ಅದು ತಿರುಗುತ್ತ ಮಂಗಳಾದೇವಿ ಗುಡಿಗೆ ಬರುತ್ತದೆ. ಸನ್ಯಾಸಿಗಳ ಹಾಗೆ ಭಂಗಿ ಸೇದುತ್ತದೆ. ಮಾಂಸ ಮದ್ಯ ಸೇವಿಸುವ  ಅದು ಹತ್ತಿರ ಬಂದಾಗ, ಸೋಮೇಶ್ವರ ದೇರೂ ಮಹಾಲಿಂಗದೇವರೂ ಅದನ್ನು ದೂರ ಕಳಿಸುತ್ತಾರೆ. ಕಡೆಗೆ ಮುಡದೇರ್ ಭೈರವನು ಒಂದು ದಿನ ಸಸ್ಯಾಹಾರ ಸ್ವೀಕರಿಸಬೇಕೆಂದು ಒಪ್ಪಂದವಾಗುತ್ತದೆ. ಆಹಾರ ಸಂಸ್ಕೃತಿಯೂ ಜಾತಿಪದ್ಧತಿಯೂ ದೈವಗಳೂ ಕರಾವಳಿಯಲ್ಲಿ ವಿಚಿತ್ರ ಸಂಘರ್ಷ ಮತ್ತು ರಾಜಿಗಳನ್ನು ಹುಟ್ಟುಹಾಕಿವೆ. ಕರಾವಳಿಯ ನಾಥಪಂಥದಲ್ಲಿ ಭೂತಗಳು ಸೇರಿರುವ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಯಬೇಕಿದೆ. ವಿಶೇಷ ಎಂದರೆ, ಭೂತ ಸಂಸ್ಕೃತಿಯಲ್ಲಿರುವ ಜೋಗ ಮತ್ತು ಮಾಯೆ ಪರಿಕಲ್ಪನೆಗಳು.   ‘ಜೋಗ’-ದೈವಿಕತೆ ಪಡೆವ ವ್ಯಕ್ತಿ ಮಾನವರೂಪದಲ್ಲಿ ಕಾಣಿಸಿಕೊಳ್ಳುವುದು;   ‘ಮಾಯ’- ದೈವವಾಗುವ ವ್ಯಕ್ತಿ ದೇಹ ಬಿಟ್ಟು ಅದೃಶ್ಯವಾಗುವುದು. ಈ ಜೋಗವು ನಾಥರ ಯೋಗದ ಜತೆಗೆ ಏನಾದರೂ ಸಂಬಂಧ ಹೊಂದಿದೆಯೇ ವಿಚಾರ ಮಾಡಬೇಕು.

ನಾನು ವಿಟ್ಲದ ಜೋಗಿಮಠಕ್ಕೆ ಹೋದಾಗ (೨೦೦೨), ಅಲ್ಲಿ ಮಠದ ದೇವರಾದ  ಮಂಜುನಾಥ ದೇವರಿಗೆ ಬ್ರಹ್ಮಕಲಶೋತ್ಸವವಿತ್ತು. ವೈದಿಕರು ಹೋಮ ಹವನಗಳನ್ನು  ಮಾಡುತ್ತಿದ್ದರು. ಅದರಲ್ಲಿ ಲಾಲಾನಾಥರ ಯಾವ ನಿರ್ದೇಶನವೂ ಇರಲಿಲ್ಲ. ಲಾಲಾನಾಥರು ತಂತ್ರಿಗಳು ಕರೆದಾಗೆಲ್ಲ ಹೋಗಿ ಅವರು ಸೂಚಿಸಿದಂತೆ ಮಾಡುತ್ತ ಪೂಜೆಯಲ್ಲಿ ಭಾಗವಹಿಸಿದರು. ಸಂಜೆಗೆ ‘ಅಧ್ವರತ್ರಯ’ ಎಂಬ ಯಕ್ಷಗಾನವಿದ್ದ ಕಾರಣ, ಮಧ್ಯಾಹ್ನ ಯಕ್ಷಗಾನ ಕಿರೀಟಗಳ ಪೂಜೆಯಿತ್ತು. ನಾಥಮಠದಲ್ಲಿ ಕಿರೀಟಪೂಜೆ ಆಚರಣೆಯು ವಿಟ್ಲದಲ್ಲಿ ಮಾತ್ರ ಸಿಗುತ್ತದೆ. ಲುಂಕೆಮಲೆಯಲ್ಲಿ ತುಪ್ಪದಮ್ಮನ ಸಿಡಿ ಇರುವಂತೆ ಇಲ್ಲಿ ಯಕ್ಷಗಾನವಿದೆ.

ಕರಾವಳಿಯಲ್ಲಿ ನಾಥಪಂಥವು ಜನಪದ ಆಚರಣೆಗಳಲ್ಲಿ ಸೇರಿಕೊಂಡಿದೆ.  ಅವುಗಳಲ್ಲಿ ಸೋಣದ ಜೋಗಿಕುಣಿತ ಹಾಗೂ ಪುರುಷ ಮಕ್ಕಳ ಕುಣಿತಗಳು ಸೇರಿವೆ. ಜೋಗಿ ಕುಣಿತವನ್ನು ಸುಳ್ಯ ಸೀಮೆಯಲ್ಲಿ ದಲಿತರಾದ ನಲಿಕೆ ಸಮುದಾಯದವರು ಹಾಕಿದರೆ, ಕಾಸರಗೋಡು ಭಾಗದಲ್ಲಿ ಮಲಯ ಸಮುದಾಯದ ಮಲೆಯಾಳಿಗಳು ಹಾಕುತ್ತಾರೆ. ಜೋಗಿಯ ತಂದೆ ಬೈಲಾನ ಪುರುಷೆ ಹಾಗೂ ತಾಯಿ ಬಲೇಂಗೇದಿ ಪುರುಷೇದಿ. ತಂದೆತಾಯಿ ತೀರಿದ ಮೇಲೆ ಅನಾಥನಾದ ಜೋಗಿ ದೇಶಾಂತರ ತಿರುಗುತ್ತಿದ್ದ. ಹೀಗೆ ತಿರುಗುತ್ತ ಆತ ಒಮ್ಮೆ ಶಿವನ ರಥಕ್ಕೆ ಅಡ್ಡಬರಲು ಶಿವ ಶಾಪಕೊಟ್ಟನಂತೆ. ಮತ್ತೆ ಬೇಡಿಕೊಂಡಾಗ ಸೋಣದಲ್ಲಿ ದೈವವಾಗಿ ಆರಾಧನೆಗೆ ಒಳಗಾಗುವೆ ಹೋಗು ಎಂದು ಪರಿಹಾರ ಕೊಟ್ಟನಂತೆ. ಈ ಕಥೆಯಲ್ಲಿ ಜೋಗಿಯಾಗುವಿಕೆಗೂ ಕುಟುಂಬದ ಸಂಬಂಧಗಳು ಛಿದ್ರವಾಗುವಿಕೆಗೂ ಆತ ದೇಶಾಂತರ ತಿರುಗಾಡುವುದಕ್ಕೂ ಇರುವ ಸಂಬಂಧ ಗಮನಾರ್ಹ.

ಸೋಣದ (ಶ್ರಾವಣದ) ಜೋಗಿ ಅಥವಾ ಜೋಗಿ ಪುರುಸೆಯು, ಸುರಿವ ಮಳೆಯಲ್ಲಿ ಮನೆಮನೆಗೆ  ಬಂದು ನೃತ್ಯ ಮಾಡುತ್ತ ಭಿಕ್ಷಾಟನೆ ಮಾಡುತ್ತಾನೆ. ಅವನು ಭೈರವ ಅಥವಾ ಶಿವ, ಬ್ರಹ್ಮಹತ್ಯಾ ದೋಷ ಕಳೆದುಕೊಳ್ಳಲು ಭಿಕ್ಷಾಟನೆ ಮಾಡಿದ ಕಥೆಯನ್ನು ಅಭಿನಯಿಸುತ್ತಾನೆ. ಪುರಾಣದ ಈ ಪ್ರಸಂಗವು ನಾಥಪಂಥದಲ್ಲಿ ಜೋಗಿಗಳು ಕಪಾಲ ಹಿಡಿದು ಸಂಚಾರ ಮಾಡುತ್ತ ಭಿಕ್ಷಾಟನೆ ಮಾಡುವ ಆಚರಣೆಯಾಯಿತಷ್ಟೆ. ಜೋಗಿ ಪುರುಸೆಯು  ನಾಥನ ಪಾತ್ರಧಾರಿಯಾಗಿ ಇದನ್ನು ಅಭಿನಯ ಮಾಡುತ್ತಾನೆ. ಮನೆಯವರು ಅಪ್ಪಣೆ ಕೊಟ್ಟರೆ, ಜೋಗಿಪುರುಸೆಯು ತೆಂಬರೆಯನ್ನು ಬಾರಿಸುವ ಜತೆಗಾರನ ಜತೆಗೂಡಿ ಪಾಡ್ದನ ಹಾಡುತ್ತಾನೆ. ಜೋಗಿಯ ಕೈಲಿ ತೆಂಗಿನ ತಿರಿಕಟ್ಟಿದ ಜ್ಯೋತಿಕೋಲು ಇರುತ್ತದೆ. ಆಟಿತಿಂಗಳಲ್ಲಿ ಬರುವ ರೋಗಗಳು ಜೋಗಿಕುಣಿತದಿಂದ ತೊಲಗುತ್ತವೆ ಎಂಬ ನಂಬಿಕೆಯಿದೆ. ಈ ಆಚರಣೆಯು ಕರಾವಳೀಕರಣಗೊಂಡ ಜನಪ್ರಿಯ ನಾಥಪಂಥದ ರೂಪವಾಗಿದೆ.

ನಾಥಪಂಥವುೊಸ್ಥಳಿಯತೆಯನ್ನು ಪಡೆದ ಇನ್ನೊಂದು ತಾಣ  ಚುಂಚನಗಿರಿ. ಅಮೂರ್ತವೂ ತಾತ್ವಿಕವೂ ಆದ ನಾಥಪಂಥವು ಇಲ್ಲಿ ಸ್ಥಳೀಯ ಜನರ ಮೂರ್ತವೂ ಪ್ರಾಯೋಗಿಕವೂ ಆದೊಆರ್ಥಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ಹೊಸ  ರೂಪಧಾರಣೆ ಮಾಡಿದೆ. ನಾಥಪಂಥದ ಕಂಕಾಲ ಅಖಿಲ ಭಾರತೀಯವಾದರೆ, ರಕ್ತಮಾಂಸಗಳೆಲ್ಲ ಸ್ಥಳೀಯ. ಚುಂಚನಗಿರಿ ಸಾಹಿತ್ಯದಲ್ಲಿ ಮಠಕ್ಕೆ ಒಯ್ಯುವ ಎಡೆಯನ್ನು ಗಮನಿಸಿ. ಅದರಲ್ಲಿ ಸ್ಥಳೀಯ ಆಹಾರ ಸಂಸ್ಕೃತಿ, ಸಸ್ಯ, ಪ್ರಾಣಿ ಹಾಗೂ ಸಾಮಾಜಿಕ ಸಂಬಂಧಗಳು ಮೈವೆತ್ತಿವೆ.

ಗಡಿಗೇಲಿ ಹಣ್ಣುತುಪ್ಪ ಕುಡಿಕೇಲಿ ಜೇನುತುಪ್ಪ, ಸ್ವಾಮಿ ಭೈರುವಗೆ ಅಭಿಷೇಕ ಮಾಡೇವು

ಎಳನೀರಲಿ ಮಯ್ಯ ತೊಳಿಸೇವು |

ಇನಿಯ ಮಾವಿನಹಣ್ಣು ಗೊನೆಯ ಬಾಳೆಯ ಹಣ್ಣು, ನಿನಗಾಗಿ ತಂದೆ ನೆಲಗಡಲೆ

ಭೈರುವ ಹಸುವಿನ ಹಾಲ ಕೊಳ್ಳಯ್ಯ |

ಹೆಸರು ನಿನ್ನ ಹೆಸರು ಮೊಸರು ನೈವೇದ್ಯಕ್ಕೆ, ಹೊಸಬತ್ತದಕ್ಕಿ ಘನಪರ

ಭೈರುವ ಹೆಸರು ನಮ್ಮನೆ ಶಿಶುವಿಗೆ |

ನಾಗಾಳಕ್ಕಿ ಬಂದೊ ಕೋಡಿನ ಟಗರು ಬಂದೊ, ರಸಬಾಳೆಯ ಗೊನೆಬಂದೊ

ಭೈರುವನ ಪೂಜೆ ಹೊತ್ತಿಗೆ ಮಗಬಂದ |  (ಶ್ರೀಆದಿಚುಂಚನಗಿರಿ ಜನಪದ ಗೀತೆಗಳು)

ಅಡಕೀಯ ವಂಬಾಳೆ ವಪ್ಪೀಕೊ ಬೋರಯ್ಯ, ಎತ್ತೀನಾ ಮುಂದೇ ಮಗಾ ಬಂದು ನಿಂತಾರೆ

ರಪ್ಪಾದ ನಿಧಿಯೂ ವೋಯಿಸೇನೆ | (ಬೋರೇದೇವರ ಕಾವ್ಯ)

ಇಲ್ಲಿರುವ ಯಾವ ಸಾಮಗ್ರಿಯೂ ಹೊರಗಿಂದ ತಂದವಲ್ಲ. ಜನ ತಮ್ಮ ಜಮೀನಲ್ಲಿ ಬೆಳೆದಂತಹವು. ನಾಥಮಠಗಳಲ್ಲಿ ಪೂಜೆಗೆ ತಯಾರಿಸುವ ನೈವೇದ್ಯ ರೋಟ್‌ಗೆ ತುಪ್ಪಬೇಕು. ಹಾಲು ತುಪ್ಪದಂತಹ ಹೈನು ವಸ್ತುಗಳನ್ನು ಅರ್ಪಿಸುವ ಮಾತು ಹೀಗಾಗಿ ಬರುತ್ತದೆ. ಭೈರವ ಅಥವಾ ಜೋಗಿ ಸಂಪ್ರದಾಯಗಳು ಹೆಚ್ಚಿನವು ಫಲವಂತಿಕೆಗೆ ಸಂಬಂಧಪಟ್ವವು. ಗರ್ಭಕಟ್ಟದ ಹಸುಗಳಿಗೆ ಕರುವಾದರೆ ಹೈನು ಅರ್ಪಿಸುವ ಹರಕೆಗಳು ಇಲ್ಲಿವೆ. ಹೊಸ ಭತ್ತದಲ್ಲಿ ಅಡುಗೆ ಮಾಡುವುದು ಭೈರವಾರಾಧನೆಯ ಮಹತ್ವದ ಆಚರಣೆಯಾಗಿದ್ದು, ಇದು ಸಹ ಕೃಷಿಸಂಸ್ಕೃತಿಗೆ ಸಂಬಂಧಪಟ್ಟಿದೆ. ಚುಂಚನಗಿರಿ ಸಾಹಿತ್ಯದಲ್ಲಿ ಒಬ್ಬಾಕೆ  ಭೈರವನಿಗೆ ‘‘ನನ್ನೂರಿಗ್ಯಾಕೆ ಬರಲಿಲ್ಲ?’’ ಎಂದು ಕೇಳಿದರೆ,  ಭೈರವನು ‘‘ನಿಮ್ಮೂರ್ಗೆ ಬರುವೋಕೆ ಎಲೆಯಿಲ್ಲ ಅಡಿಕೆಯಿಲ್ಲ, ಪಟ್ಟೆಜೋತುರ ಮೊದಲಿಲ್ಲ ಎಲೆಮಗಳೆ, ನಿಮ್ಮೂರ್ಗೆ ನಾನು ಬರಲಿಲ್ಲ’’ ಎನ್ನುತ್ತಾನೆ. ಹೀಗೆ ಕೃಷಿ ಮತ್ತು ಸಮೃದ್ದಿಯ ಜತೆಗೆ ನಾಥ ಆಚರಣೆಗಳು ಬೆಸೆದುಕೊಂಡಿವೆ. ಚುಂಚನಗಿರಿ ಜನಪದ ಸಾಹಿತ್ಯದಲ್ಲಿ ಎಳೆನೀರು ನೆಲಗಡಲೆ ಜೇನುತುಪ್ಪ ಕೊಡುವ ಉಲ್ಲೇಖವು ವಿಶೇಷವಾಗಿ ಬರುತ್ತದೆ. ಬೇಯಿಸುವ ಗೋಜಿಲ್ಲದ ಆಹಾರವನ್ನು ಯೋಗಿಗಳಿಗೆ ಬಹುಶಃ ಜನ ಕೊಡುತ್ತಿದ್ದರು; ಊರಹೊರಗಿನ ಗುಡ್ಡಬೆಟ್ಟ ಮಠಗಳಲ್ಲಿ ಇರುತ್ತಿದ್ದ ನಾಥರು, ಕೆಡದೆ ಬಹುಕಾಲ ಇರುವ ಆಹಾರವನ್ನು ಸಂಗ್ರಹಿಸುತ್ತಿದ್ದರು ಎಂದು ಕಾಣುತ್ತದೆ. ಚುಂಚನಗಿರಿ ಜನಪದರಲ್ಲಿ ಜೋಗಿಸಿದ್ಧರಿಗಾಗಿ  ಅಡುಗೆ ಮಾಡುವ ಮತ್ತು ಬಿನ್ನಹ ಅರ್ಪಿಸುವ ವರ್ಣನೆಗಳು ವಿಶೇಷವಾಗಿವೆ. ಅವು ಸಹ ರೈತಾಪಿ ಆಹಾರ ಸಂಸ್ಕೃತಿಯ ಭಾಗವಾಗಿವೆ. ಸಿದ್ಧರಿಗಾಗಿ ಮಾಡುವ ಅಡುಗೆಗಳಲ್ಲಿ ವಿಶೇಷವಾದುದು ಭಂಗಿಹಾಕಿ ಮಾಡಿದ ರೊಟ್ಟಿ. ಭಂಗಿಯನ್ನು ಸಿದ್ಧಭುಕ್ತಿಗಾಗಿ ಮಾಡುವ ಮಾಂಸದ ಅಡಿಗೆಯಲ್ಲೂ ಹಾಕಲಾಗುತ್ತದೆ. ಇದು ಮಾತ್ರ ನಾಥರಿಗಾಗಿ ತಯಾರಾಗುತ್ತಿದ್ದ ವಿಶೇಷ ಆಹಾರ.

ಸ್ಥಳೀಕರಣದ ಲಕ್ಷಣಗಳು

ಹೊರಗಿನಿಂದ ಬಂದ ಪಂಥವೊಂದು ಸ್ಥಳೀಕರಣವಾಗುವ ವಿಧಾನಗಳು ಹಲವು. ಅವುಗಳ ಪ್ರಮುಖ ಲಕ್ಷಣಗಳನ್ನು ಹೀಗೆ ವಿವರಿಸಬಹುದು.

೧. ಸಂಬಂಧೀಕರಣ. ಭೈರವನನ್ನೂ ನಾಥರನ್ನು ತಮ್ಮ ನಂಟರಂತೆ ಆಪ್ತವಾಗಿ ಮಾತಾಡಿಸುವ ಧಾಟಿ ಜನಪದ ಸಾಹಿತ್ಯದಲ್ಲಿ ಇದೆ. ಬಹುತೇಕ ಜನಪದ ಸಾಹಿತ್ಯವು ತ್ರಿಪದಿ ಪ್ರಕಾರದಲ್ಲಿದ್ದು, ಅದನ್ನು ಹಾಡಿದವರು ಮಹಿಳೆಯರು. ಮಹಿಳೆಯರ ಅಭಿವ್ಯಕ್ತಿಯಲ್ಲಿ ಈ ಬಂಧುತ್ವದ ಗುಣಗಳು ಹೆಚ್ಚು ಪ್ರಕಟವಾಗುತ್ತವೆ. ‘‘ಚುಂಚನಗಿರಿಯಲ್ಲಿ ನಮಗ್ಯಾರೆ ನಂಟಾರು?’’ ಎಂದು ಒಬ್ಬಾಕೆ ಕೇಳಿಕೊಳ್ಳುವಳು;  ‘‘ಭೈರುವಸ್ವಾಮಿ ಹಿರಿಯಣ್ಣ ಇದ್ದಾರೆ ನಾನು ಮತ್ತೊಂದು ಇರುಳು ಇಳುವೇನು’’ ಎಂದು ಅದಕ್ಕೆ ತಾನೇ ಉತ್ತರವನ್ನೂ ಕೊಟ್ಟುಕೊಳ್ಳುವಳು. ಈ ಪದದಲ್ಲಿರುವ ಭರವಸೆಯು ಗಮನಾರ್ಹ. ಭೈರವನಿಗೆ ಸಿದ್ಧುಭೈರವ, ಮುದ್ದುಭೈರುವ, ನಾಥುಭೈರುವ ಎಂದೆಲ್ಲ ಕರೆಯಲಾಗುತ್ತದೆ. ನೋಡಲು ಉಗ್ರರೂಪಿಯಾದ ಭೈರವ ಇಲ್ಲಿ ಮುದ್ದಿಗೆ ಪಾತ್ರನಾಗುತ್ತಾನೆ.

೨. ಪಾತ್ರಗಳು ಅದಲು ಬದಲಾಗುವುದು. ಶಿವನು ಮೂಲದೇವರು.  ಭೈರವನು ಅವನ ಅವತಾರ. ಮಠದ ಅಧಿಪತಿ ನಾಥಯೋಗಿ. ಮಠದ ಜನಪ್ರತಿನಿಧಿ ಜೋಗಪ್ಪ. ಆದರೆ ಜನಪದ ಸಾಹಿತ್ಯದಲ್ಲಿ ಈ ಮೂಲದೇವರು, ಅವತಾರಿ ದೈವ, ನಾಥ ಹಾಗೂ ಜೋಗಪ್ಪ ಎಲ್ಲರೂ ಅಭಿನ್ನರಾಗಿ ಬೆರೆತು ಹೋಗುತ್ತಾರೆ.

ಕಾವೀಯನುಟ್ಟವ್ರೆ, ಕಾಮಾಕ್ಷಿ ಧರಿಸ್ಯವ್ರೆ, ಕೊರಳಿಗೆ ರುದ್ರಾಕ್ಷಿ ಹಾಕ್ಯವ್ರೆ ಭೈರುವ

ಪಡಿಧಾನಕಂತ ಬರುತವ್ರೆ|

ದೊಡ್ಡದೊಡ್ಡ ಜೋಗಿ ದೊಡ್ಡ ಪಾತುರೆಜೋಗಿ, ದೊಡ್ಡ ಮೊರದಲ್ಲಿ ಅಕ್ಕಿಪಡಿ

ತಂದಿವಿನಿ, ಜಿದ್ದು ಮಾಡಬೇಡ ಹಿಡಿಜೋಗಿ |

ಇಲ್ಲಿ ಭಿಕ್ಷಕ್ಕೆ  ಬಂದಿರುವುದು ಭೈರವನೊ, ನಾಥನೊ ಅಥವಾ ಜೋಗಪ್ಪನೊ? ಯಾರೂ ಆಗಿರಬಹುದು ಎಂಬಂತೆ ಈ ರಚನೆಗಳಿವೆ. ಇಲ್ಲಿ ಭೈರುವ ಉರಿಗದ್ದುಗೆ ಮೇಲೆ ಕೂರುವವನು; ಪಟ್ಟ ಕಟ್ಟಿಸಿಕೊಳ್ಳುವವನು; ಮುದಿಯ ಎತ್ತನು ಏರಿ ಮೈಗೆ ಬೂದಿಯ ಬಳಿದು ಕೊಂಡು ಬರುವವನು; ಭಂಗಿ ಸೇದುವವನು. ತಲೆತುಂಬ ಖಂಡುಗ ಜಡೆ ಕಿರುಜಡೆ ಬಿಟ್ಟು ಸನ್ಯಾಸಿಯಾದವನು. ಭಕ್ತರ ದರುಶನಕ್ಕೆ ಪಡಿಯ ಸಂಗ್ರಹಕ್ಕೆ ಊರೂರು ತಿರುಗುವವನು; ಉಕ್ಕಡದ ಕುದುರೆಯ ಮೇಲೆ ಬರುವವನು. ದೂರದ ಪರುಸೆ ಬರಬೇಕೆಂದು ಸಾರಿ ಡಂಗೂರ ಹೊಡೆಸುವವನು. ವಾಸ್ತವದಲ್ಲಿ ಇವನ್ನೆಲ್ಲ ಮಾಡುವವರು ನಾಥಯೋಗಿ ಹಾಗೂ ಅವನ ಶಿಷ್ಯ ಜೋಗಪ್ಪ. ಆದರೆ ಇಲ್ಲಿ ಈ ಕೆಲಸಗಳನ್ನೆಲ್ಲ  ಭೈರವನೇ ಮಾಡುವಂತೆ ಬಣ್ಣನೆಗಳಿವೆ. ಶಿವನೂ ಭೈರವನೂ ನಾಥನೂ ಜೋಗಪ್ಪನೂ ಪರಸ್ಪರ ಕಲಸಿಕೊಳ್ಳುವ ಈ  ಪ್ರಕ್ರಿಯೆಯಲ್ಲಿರುವ ಪಲ್ಲಟದ ಅಂತಿಮ ಘಟ್ಟವೆಂದರೆ, ದೈವ ಮಾನವನಾಗುವುದು. ಮಾನವರು ದೈವವಾಗುವುದು.

೩. ಪಂಥ ಹಾಗೂ ದೈವಗಳ ಸಂಕರ. ಶೈವಪಂಥವಾದ ನಾಥವು ವೈಷ್ಣವ ಪಂಥದ ಜತೆ ಯಾವ ಶರತ್ತು ಇಲ್ಲದೆ ಜನರ ಬದುಕಿನಲ್ಲಿ ಬೆರೆತ ಬಗೆ ಅಪೂರ್ವವಾಗಿದೆ. ಹಾಸನ ಸಕಲೇಶಪುರ ಮೂಡಿಗೆರೆ ಭಾಗದ ಶೈವ ಒಕ್ಕಲಿಗರಲ್ಲಿ ಸಾವು ಸಂಭವಿಸಿದಾಗ,  ಐನೋರು, ದಾಸಪ್ಪ ಹಾಗೂ ಜೋಗಪ್ಪ ಮೂವರನ್ನೂ ಕರೆಸಲಾಗುತ್ತದೆ. ಇವರು ಕ್ರಮವಾಗಿ ಲಿಂಗಾಯತ, ನಾಥ ಹಾಗೂ ವೈಷ್ಣವ ಪ್ರತಿನಿಧಿಗಳು. ಇಲ್ಲಿನ ಒಕ್ಕಲಿಗರು ಮಾಡುವ ಹರಿಸೇವೆಯಲ್ಲೂ ಇದೇ ಮಿಶ್ರಣ. ತುಳಸಿ ಪೂಜೆ ಹಾಗೂ ಹರಿಕತೆ ಮಾಡಿಸುವ ಹರಿ ಸೇವೆಯು ಪಕ್ಕಾ ವೈಷ್ಣವ ಆಚರಣೆ. ಆದರೆ ಹರಿಸೇವೆಯ ಕೊನೇ ದಿನ ಕೆಂಚರಾಯನ ಸೇವೆ ಎಂಬ ಭೈರವಾರಾಧನೆ ಇದ್ದು, ಅಲ್ಲಿ ಜೋಗಪ್ಪ ಮುಖ್ಯನಾಗುತ್ತಾನೆ. ದಾಸಪ್ಪ ಜೋಗಪ್ಪ ಇಬ್ಬರೂ ಒಟ್ಟಿಗೆ ಇರುವುದು ಮಾತ್ರವಲ್ಲ ಒಬ್ಬನ ಗೈರುಹಾಜರಿಯಲ್ಲಿ ಮತ್ತೊಬ್ಬ ಅವನ ಕೆಲಸ ಮಾಡುತ್ತಾನೆ. ಈ ಪಂಥೀಯ ಸಂಕರದ ತುತ್ತತುದಿ ಎಂದರೆ, ಚುಂಚನಗಿರಿ ಭೈರವನು ಸ್ವತಃ ಹರಿಸೇವೆ ಮಾಡುವುದನ್ನು ಬಣ್ಣಿಸುವ ಹಾಡುಗಳಿರುವುದು. ಗಾಯಕರು ಮೇಲುಕೋಟೆ ನರಸಿಂಹನನ್ನೂ ಚುಂಚನಗಿರಿ ಭೈರವನ್ನೂ ಕೂಡಿಸಿ ಹಾಡುತ್ತಾರೆ; ‘‘ಸಣ್ಣಸಣ್ಣನಾಮ ಸಣ್ಣನೀಲಿಯ ನಾಮ, ಎಷ್ಟೊಂದು ನಾಮ ಒಡೆಯ ಭೈರುವಗೆ ಅವರು ವ್ಯಾಸ ಕಟ್ಟಾರೆ ಹರಿನಾಮ’’ ಎಂದು ಭೈರವನ ವೈಷ್ಣವೀಕರಣ ಮಾಡುತ್ತಾರೆ. ಭೈರವಾರಾಧಕರನ್ನು ಟೀಕಿಸುವ  ರಾಮಾನುಜರು ಊಹಿಸಲಾಗದ ಪಂಥಾಂತರ ವಿದು. ಭೈರವ ಪಂಥಿಗಳಾದ ಪುತ್ತೂರು ಸೀಮೆಯ ಭೈರರು ವೆಂಕಟರಮಣನ ಸೇವೆಯನ್ನೂ ಮಾಡುತ್ತಾರೆ. ಕುಂದಾಪುರ ಸೀಮೆಯಲ್ಲಿ ಮಾಡುವ ತುಳಸಿಪೂಜೆಯಲ್ಲಿ ‘‘ಹಾಸ್ಕಲ್ ಹಾಸ್ಕೊಂಡು ಬೀಸ್ಕಲ್ ಬೀಸ್ಕೊಂಡು, ಗೋರ್ಕಲ್ಲ ಮೇಲೆ ತಪಸ್ಸು ಮಾಡುವ ಕಾಶಿಕಾಳಭೈರವನ ಪಾದಕ್ಕೆ ಗೋವಿಂದೋ ಗೋವಿಂದ’’ ಎಂದು ಕೂಗುವ ಪದ್ಧತಿಯಿದೆ. ಇದೂ ಕೂಡ ಭೈರವನ ವೈಷ್ಣವೀಕರಣದ ನಿದರ್ಶನ.

ಸಾಮಾನ್ಯವಾಗಿ ಎರಡು ವಿಭಿನ್ನ ದೈವದ ಅನುಯಾಯಿಗಳಿರುವ ಕಡೆ, ಚಾರಿತ್ರಿಕ ಸಂಘರ್ಷಗಳನ್ನು ಮೀರಿ ಸಮುದಾಯಗಳು ಅವುಗಳ ಮಿಲನ ಮಾಡಿಸುತ್ತವೆ. ಚಿಗಟೇರಿಯ (ಹರಪನಹಳ್ಳಿ) ನಾರಪ್ಪನು  ಭೈರವ ರೂಪಿ ದೈವ. ಆದರೆ ಅವನ ಒಕ್ಕಲುಗಳು ದಾಸರು. ಅವನ ಪೂಜೆಗೆ ಶಂಖ ಜಾಗಟೆ ಬಳಸುತ್ತಾರೆ. ಈ ವೈಷ್ಣವ ಆಚರಣೆಗಳಲ್ಲಿ ವಿಜಯನಗರವನ್ನು ಆಳಿದ ವೈಷ್ಣವ ರಾಜರ ಕಾಲದ ಒತ್ತಡದಿಂದ ಬಂದವೆಷ್ಟು,  ಜನರೇ ಸ್ವಯಿಚ್ಛೆಯಿಂದ ಸೇರಿಸಿದ್ದೆಷ್ಟು ವಿಂಗಡಿಸುವುದು ಕಷ್ಟ.  ಖುದಾಪುರದ (ಚಳ್ಳಕೆರೆ)ಭೈರವನ ಗುಡಿಯಿಂದ ಹೊರಡುವ ೧೨ ಪೆಟ್ಟಿಗೆ ದೇವರುಗಳಲ್ಲಿ ಒಂದು ಅಹೋಬಳ ನರಸಿಂಹನದು. ಎಲ್ಲಿಯ ನರಸಿಂಹ ಎಲ್ಲಿಯ ಭೈರವ? ಪುರಾಣಗಳ ಪ್ರಕಾರ ಒಬ್ಬ ಶಿವವಿರೋಧಿ. ಇನ್ನೊಬ್ಬ ವಿಷ್ಣುದ್ವೇಷಿ. ಆದರೆ ಮ್ಯಾಸಬೇಡರು ಇಬ್ಬರನ್ನೂ ದ್ವಂದ್ವವಿಲ್ಲದೆ ಒಪ್ಪಿಕೊಂಡಿದ್ದಾರೆ.  ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಬರುವ ಶಾಮಯ್ಯಗೌಡರ ಪೂಜಾಪೆಟ್ಟಿಗೆಯ ವರ್ಣನೆಯು, ಈ ದೈವಿಕ  ಸಮನ್ವಯವನ್ನು ಚೆನ್ನಾಗಿ ಪ್ರತಿನಿಧಿಸುತ್ತದೆ. ‘ಅದರ ಕತ್ತಲುಗವಿಯಲ್ಲಿ ಅನೇಕ ವಸ್ತುಗಳು ಬಹಳ ಕಾಲದಿಂದಲೂ ತಪಸ್ಸು ಮಾಡುತ್ತಿದ್ದುವು. ಕೆಂಪು ನಾಮದ ಕರಡಿಗೆ; ಬಿಳಿನಾಮದ ಉಂಡೆಗಳು; ತುಲಸಿಯ ಎಲೆಗಳು; ಎರಡು ಅಂಗುಲ ಚದರವುಳ್ಳ ಒಡಕಲು ಕನ್ನಡಿ; ಕೆಂಪು ಮತ್ತು ಬಿಳಿಯ ನಾಮದ ಕಡ್ಡಿಗಳು; ವಿಭೂತಿಯ ಹುಡಿ; ನಾಲ್ಕೈದು ಜರಠವಾದ ಮೂರುಕಾಸು, ಆರುಕಾಸುಗಳು; ಒಂದು ಬೆಳ್ಳಿಯ ಸಣ್ಣತ್ರಿಶೂಲ, ಇತ್ಯಾದಿ’’; ಇಲ್ಲಿರುವ ನಾಮದ ಉಂಡೆ ಹಾಗೂ ತುಲಸಿಗಳು ಶ್ರೀವೈಷ್ಣವದ ಗುರುತುಗಳಾದರೆ, ವಿಭೂತಿ ತ್ರಿಶೂಲ  ನಾಥ ಶೈವರ ಗುರುತುಗಳು.

ಅಭಿಜಾತ ನೆಲೆಯಲ್ಲಿ ಬೆರೆಯಲು ಹಿಂಜರಿಯುವ ಸಂಗತಿಗಳು ಜನರ ದೈನಿಕ ಬದುಕಿನ ಲಯದಲ್ಲಿ ವೈರುಧ್ಯವಿಲ್ಲದೆ ಕೂಡಿಕೊಳ್ಳುತ್ತವೆ.. ಪ್ರತಿಷ್ಠಿತ ಧರ್ಮ ಹಾಗೂ ಪಂಥಗಳ ವಿಧಿಯನ್ನು ಜನ ಯಾವತ್ತೂ  ಬದಲಿಸುತ್ತ ಬಂದಿದ್ದಾರೆ.  ಹಾಗೆಂದು ಪಂಥಗಳ ನಡುವೆ ನಡೆದಿರಬಹುದಾದ ಚಾರಿತ್ರಿಕ ಸಂಘರ್ಷದ ನೆನಪುಗಳು ಹಾಗೆ ಪೂರ್ಣವಾಗಿ ಮರೆವಿಗೆ ಸಲ್ಲುವುದಿಲ್ಲ. ಅವು ರೂಪಕ ಕತೆಗಳಲ್ಲಿ ಅಡಗಿರುತ್ತವೆ. ಉದಾ. ಭೈರವನು ರಾಮನಿಗೆ ಚುಂಚನಕಟ್ಟೆ ಬಿಟ್ಟು ಬರಬೇಕಾದ ಕತೆ. ತಿಮ್ಮಪ್ಪನಿಗೂ ಭೈರವನಿಗೂ ನಡೆಯುವ ಪಗಡೆಯಾಟದಲ್ಲಿ ತಿಮ್ಮಪ್ಪನು ಭೈರವನ ಅಕ್ಷಯಪಾತ್ರೆಯನ್ನು ಗೆದ್ದು ಅವನಿಗೆ ಭಿಕ್ಷಾಟನೆಗೆ ಇಳಿಸುವ ಕತೆ. ಭೈರವನು ತಿಮ್ಮಪ್ಪನ ಚಿನ್ನದ ರಥವನ್ನು ಕದ್ದುತರುವ ಕಥೆ.

೪. ಪುರಾಣಗಳ ಸಮಕಾಲೀಕರಣ. ಅಖಿಲ ಭಾರತೀಯ ಆಗಿರುವುದನ್ನು ನಿತ್ಯ ಬದುಕಿನ ಅನುಭವ ಲೋಕದಿಂದ ಪುನಾರಚಿಸಿ ಹೊಸ ಪುರಾಣ ಸೃಷ್ಟಿಸುವ ಕೆಲಸವಿದು. ಇಲ್ಲಿ ದೈವಗಳ ಮಾನವಿಕರಣವೂ ಮಾನವರ ದೈವೀಕರಣವೂ ಆಗುತ್ತದೆ. ನಾಥಪಂಥದ ಕ್ಲಾಸಿಕಲ್  ಕಟ್ಟುನಿಟ್ಟುಗಳು ಇಲ್ಲಿ ಬದಲಾಗುತ್ತವೆ. ಚುಂಚನಗಿರಿಯ ಭೈರವನ್ನು ಗಮನಿಸಿ. ಆತ ಬೀದಿ ತಿರುಗುತ್ತಾನೆ. ಚೆಲುವಾದ ತರುಣಿಯರು ಕಂಡರೆ   ಪ್ರೇಮಿಸುತ್ತಾನೆ. ಅವರಿಗೆ ಪ್ರೇಮಪತ್ರ ಬರೆಯುತ್ತಾನೆ. ಮತ್ತೊಬ್ಬರ ಹೆಂಡತಿಗೆ ಕದ್ದು ಒಲಿಯುತ್ತಾನೆ. ಮೊದಲ ಹೆಂಡತಿಯ ವಿರೋಧ ಲೆಕ್ಕಿಸದೆ ಇನ್ನೊಬ್ಬಳನ್ನು ಮದುವೆ ಆಗುತ್ತಾನೆ. ಅವಳನ್ನು ಮೆಚ್ಚಿಸಲು ಕುರಿಕಾಯುತ್ತಾನೆ. ಭೈರವನ ಈ ಮಾನವೀಕರಣವು ಲುಂಕೆಮಲೆ ಸಾಹಿತ್ಯದಲ್ಲೂ ನೋಡಸಿಗುತ್ತದೆ. ಅರ್ಜುನ ಜೋಗಿ ಹಾಡುಗಳಲ್ಲಿ ಮಹಾಭಾರತದಂತಹ ಮಹಾಕಾವ್ಯದ ಕಥೆಯು  ಊರಕತೆಯಾಗುತ್ತದೆ.  ಅರ್ಜುನನು ಸ್ವತಃ ಚುಂಚನಗಿರಿಗೆ ಬಂದು ಭೈರವನ ಭಕ್ತನಾಗುತ್ತಾನೆ. ಭೈರವನು ಅರ್ಜುಜನಿಗೆ ಜೋಗಿದೀಕ್ಷೆ ಕೊಟ್ಟು, ಕಾವಿ ಕಮಂಡಲು ವಿಭೂತಿ ಸಿಂಗನಾದ ಹುಲ್ಲೆಚರ್ಮಗಳನ್ನು ಕೊಡುತ್ತಾನೆ. ಒಮ್ಮೆಯಂತೂ ಅರ್ಜುನ ಕಿನ್ನರಿ ಮಾಡಿಕೊಂಡು ಜೋಗಿಯಾಗಿ ಸುತ್ತುತ್ತ, ೩೩ ರಾಗಗಳನ್ನು ೬೮ ಭಾಷೆಗಳಲ್ಲಿ ಹಾಡುತ್ತ ಚುಂಚನಗಿರಿಗೆ ಬರುತ್ತಾನೆ. ಆಗ ಚುಂಚನಗಿರಿಯ ಮುದ್ದೇಗೌಡನ ಸೊಸೆ ದೇವಾಜಮ್ಮ ಮಗುವನ್ನು ಮಡಿಲಲ್ಲಿ ಇರಿಸಿಕೊಂಡು ಸೋರೆಕಾಯಿ ಹೆಚ್ಚುತ್ತಿದ್ದವಳು, ಜೋಗಪ್ಪನ ನಾಟ್ಯ ನೋಡುತ್ತಾ ಮಗುವನ್ನೂ ಹೆಚ್ಚಿಬಿಡುತ್ತಾಳೆ. ನಂತರ ಮಗುವಿನ ಶವವನ್ನು ಹೊತ್ತುಕೊಂಡು ಜೋಗಿಯನ್ನು ಹಿಂಬಾಲಿಸಿ ಹೋಗಿ ಜೀವಬರಿಸು ಎಂದು ಕಾಡುತ್ತಾಳೆ. ಜೋಗಿ ಜೀವಬಂದರೆ ಮಗುವನ್ನು ತನಗೆ ಶಿಷ್ಯನನ್ನಾಗಿ ಕೊಡಬೇಕೆಂದು ಶರತ್ತು ಹಾಕಿ ಜೀವ ಬರಿಸುತ್ತಾನೆ. ಬಳಿಕ ಮಗುವಿಗೆ ಜೋಗಿದೀಕ್ಷೆ ಕೊಡುತ್ತಾನೆ. ಈ ಮರುಜನ್ಮವು ದೀಕ್ಷೆಯ ನಂತರ ಸಿಗುವ ಮರುಜೀವನವೂ ಹೌದು.

ಕುವೆಂಪು ಕುಮಾರವ್ಯಾಸನು ಹಾಡಿದರೆ ಕಲಿಯುಗ ದ್ವಾಪರವಾಗುವುದು ಎಂದಿದ್ದರು. ಆದರೆ ಜೋಗಿಗಳು ತಮ್ಮ ಹಾಡುಗಳಲ್ಲಿ ದ್ವಾಪರವನ್ನೇ ಕಲಿಯುಗವನ್ನಾಗಿ ಬದಲಿಸಿ ಬಿಡುತ್ತಾರೆ.

* * *

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)